ಅಂತ್ಯಸಂಸ್ಕಾರ ಮತ್ತು ಭೂಮಿ ವ್ಯವಹಾರ

ನ್ನ ಪ್ರೀತಿಯ ಆಮಿತಾತ ಎಂಬ ಅಜ್ಜಿ ತೀರಿಹೋದರು ಎಂದು ನಿರ್ವಿಕಾರವಾಗಿ ಆಕೆಗೆ ಹೇಳಿ ಆಕೆಂದ ಅನುಕಂಪಭರಿತ ಸಾಂತ್ವನದ ಮಾತುಗಳನ್ನು ನಿರೀಕ್ಷಿಸುತ್ತಿದ್ದೆ. ಆದರೆ ಆಕೆಯೂ ಅಷ್ಟೇ ನಿರ್ವಿಕಾರವಾಗಿ ‘you lost your character’ ಅಂದಳು. ನನ್ನನ್ನು ಬಹಳ ಬಲ್ಲವಳಾಗಿದ್ದರಿಂದ ಸುಮ್ಮಗಾದೆ. ನಿನ್ನ ಪಾತ್ರಗಳು ನಿನಗೆ ಆನೆ ಇದ್ದಂತೆ. ಬದುಕಿರುವಾಗಲೂ ತೀರಿಹೋದಮೇಲೂ ನಿನಗೆ ಅವುಗಳು ಅಷ್ಟೇ ಬೆಲೆ ಬಾಳುತ್ತದೆ ಎನ್ನುವುದು ಅವಳ ಮಾತಿನ ಮರ್ಮವಾಗಿತ್ತು.

ಅವಳ ಮಾತುಗಳು ಯಾವಾಗಲೂ ಹೀಗೆಯೇ.ಮರ್ಮಕ್ಕೆ ತಾಗುವ ಹಾಗೇ ಮಾತನಾಡುತ್ತಾಳೆ.ಅವಳ ಮಾತು ನೂರಕ್ಕೆ ನೂರು ಸತ್ಯದ ಹಾಗೆ ಇರುತ್ತದೆ.ನಾನು ಬರೆದದ್ದನ್ನ ಕೆಲವೊಮ್ಮೆ ಓದಿ bull shit ಅನ್ನುತ್ತಾಳೆ. ಅಂದರೆ ಸಗಣಿ ಅಂತ ಅರ್ಥ.

ಇಟ್ಟರೆ ಸಗಣಿ ಯಾದೆ ತಟ್ಟಿದರೆ ಬೆರಣಿಯಾದೆ ನೀನಾರಿಗಾದೆಯೋ ಎಲೆಮಾನವಾ ಎಂದು ಯಾರಿಗೂ ಕ್ಯಾರೇ ಅನ್ನದೆ ನಾನು ಬರೆಯುತ್ತಲೇ ಇರುತ್ತೇನೆ.

ಈಗಲೂ ಅಷ್ಟೇ. ಆಮಿತಾತ ತೀರಿಹೋದರು ಅಂತ ಸುದ್ದಿ ಗೊತ್ತಾದಾಗ ನಾನು ಎಲ್ಲೋ ಬೀದಿ ಸುತ್ತುತ್ತಿದ್ದೆ. ಆಮೇಲೆ ಸುಮ್ಮನೆ ಮನೆಗೆ ಬಂದು ನಿದ್ದೆ ಹೋದೆ.ಇನ್ನೂ ಮಳೆ ಸುರಿಯುತ್ತಲೇ ಇತ್ತು. ಹಗಲು ಸುಸ್ತು ಹೊಡೆದಂತೆ ಮಂಕಾಗಿ ಹೋಗಿತ್ತು.

ಬಾಗಿಲು ಬಡಿಯುವ ಕರ್ಕಶ ಸದ್ದಿಗೆ ಹೆದರಿ ಎದ್ದು ಬಂದರೆ ಯಾವನೋ ಒಬ್ಬ ಜಮೀನು ದಲ್ಲಾಳಿ ಕಮಿಷನ್ ವಿಷಯಕ್ಕೆ ಜಗಳ ಕಾಯಲು ಬಂದು ಕೂತಿದ್ದ. ಹಳ್ಳಿಯ ದಲ್ಲಾಳಿ. ಆತನಿಗೆ ಜಮೀನು ವ್ಯವಹಾರದ ಆದುನಿಕೋತ್ತರ ನಯ ನಾಜೂಕು ಒಂದೂ ಗೊತ್ತಿದ್ದಂತಿರಲಿಲ್ಲ.ಕುರಿ ಮರಿ ವ್ಯಾಪಾರದವನಂತೆ ಜಗಳಕ್ಕೇ ನಿಂತು ಕೊಂಡಿದ್ದ.ನಾನೂ ಅಷ್ಟೆ. ಅಷ್ಟೇ ಮೊಂಡನಂತೆ ಇದಕ್ಕಿಂತ ಹೆಚ್ಚು ಒಂದು ಕಾಸು ಕೊಡುವುದಿಲ್ಲ.ಅದೇನು ಕಿಸೀತೀಯಾ ಕಿಸಿ ಅಂತ ನಿದ್ದೆಗಣ್ಣಲ್ಲಿ ಜಗಳಕ್ಕೆ ನಿಂತಿದ್ದೆ.

ಆತನೂ ಹೆಗಲಲ್ಲಿದ್ದ ಕೊಳಕು ಟವಲ್ಲು ಕೊಡವಿ `ಅದೆಂಗಾದಾತೂ.. ದೇಸದಲ್ಲಿ ನಡೀತಿರೋ ವ್ಯವಹಾರ ಬುಟ್ಟು ನಾನು ಬೇರೇನಾದ್ರೂ ಕೇಳಿವ್ನಾ? ನನ್ ಕೂಲಿ ಕೊಡಿ. ಇಲ್ಲಾ ನ್ಯಾಯ ತೀರ್ಮಾನ ಆಗ್ಲಿ” ಅಂತ ದಲ್ಲಾಳಿ ಕೆಲಸವನ್ನು ಕೂಲಿ ಕೆಲಸದ ಜೊತೆ ಸಮೀಕರಿಸಿಕೊಂಡು ಜಾಗತೀಕರಣ ಮುಕ್ತ ಮಾರುಕಟ್ಟೆ ಇತ್ಯಾದಿಗಳ ವಕ್ತಾರನಂತೆ ಸಡ್ಡು ಹೊಡೆಯುತ್ತಿದ್ದ.

ಸಿಕ್ಕಾಪಟ್ಟೆ ಕೋಪದ ನಡುವೆಯೂ ನಗು ಬರುತ್ತಿತ್ತು. ನಾನೇನೂ ದೊಡ್ಡ ಜಮೀನ್ದಾರನಾಗಲು ಹೊರಟಿರಲಿಲ್ಲ. ಎಷ್ಟು ಅಂತ ಈ ಊಳಿಗಮಾನ್ಯ ಜಮೀನ್ದಾರಿ ವ್ಯವಸ್ಥೆಯ ಕುರಿತು ಯೋಚಿಸುವುದು. ಅದಕ್ಕಿಂತ ಜಮೀನು ಹೊಂದುವುದೇ ಮಿಗಿಲು ಎಂದುಕೊಂಡು ಹೊರಟರೆ ಈ ವ್ಯವಹಾರ ಜ್ಞಾನವಿಲ್ಲದ ಹಳ್ಳಿಯ ದಲ್ಲಾಳಿ ವ್ಯವಹಾರಕ್ಕೂ ಮೊದಲೇ ವ್ಯವಹಾರ ಜ್ಞಾನವಿಲ್ಲದ ನನ್ನಿಂದ ಸಾಕಷ್ಟು ಇಸಕೊಂಡು ಈಗ ನ್ಯಾಯ ತೀರ್ಮಾನವಾಗಲಿ ಎಂದು ಜಗಳಕ್ಕೆ ನಿಂತಿದ್ದ.

‘ಬುದ್ದೀ ಒಂದು ಮಾತು ಕೇಳಿ. ಈಗ ದೇಶವೆಲ್ಲಾ ವ್ಯವಹಾರ ಮಾಡ್ತಾ ಅದೆ. ಕೂಲಿ ಮಾಡ್ದೋರಿಗೆ ಕೂಲಿ ಕೊಡಿ ಇಲ್ಲಾಂದ್ರೆ ದೇಶ ನಡಿಯಾಕಿಲ್ಲ ‘ ಎಂದು ಬೆದರಿಕೆ ಹಾಕುತ್ತಿದ್ದ. ಅವನು ಮಗನ ಮದುವೆಗೆ ಅಂತ ಇಸಕೊಂಡಿದ್ದು. ಮಗಳ ಸೀಮಂತಕ್ಕೆ ಮಟನ್ ತಗೊಳ್ಳಕ್ಕೆ ಅಂತ ಕಿತ್ತುಕೊಂಡದು, ಸಿದ್ಧರಾಮಯ್ಯನವರನ್ನ ನೋಡ್ಲಿಕ್ಕೆ ಅಂತ ಖಾದಿ ಅಂಗಿ ಶಾಲು ತಗಳ್ಳಕ್ಕೆ ಅಂತ ಇಸಕೊಂಡಿದ್ದು. ಹೆಂಡತಿ ಬೆಂಡೋಲೆ ಅಡ ಇಟ್ಟಲ್ಲಿಂದ ಬಿಡಿಸಿಕೊಳ್ಳಕ್ಕೆ ಅಂತ ತಗೊಂಡಿದ್ದು ಎಲ್ಲವನ್ನೂ ನೆನಪು ಮಾಡುತ್ತಾ ಹೋದರೆ ಛೆ ಅದೆಲ್ಲಾ ಲೆಕ್ಕಕ್ಕೆ ತಗೋತಾರಾ ಬುದ್ದೀ ಅಂತ ನನ್ನನ್ನ ಯಾಮಾರಿಸಲು ನೋಡುತ್ತಿದ್ದ.

ನಾನೂ ಒಬ್ಬ ಬ್ಯಾರಿಯಂತೆ ಎಲ್ಲವನ್ನೂ ಲೆಕ್ಕ ಹಾಕುತ್ತಾ ಕವಿಯಂತೆ ಮರೆತು ಹೋಗುತ್ತಾ ಜಗಳದ ಸುಖದಲ್ಲಿ ಮೈಮರೆತು ಆಮಿತಾತ ಎಂಬ ನನ್ನ ಪ್ರೀತಿಯ ಅಜ್ಜಿ ತೀರಿ ಹೋಗಿದ್ದನ್ನ ಮರೆತು ಬಿಟ್ಟಿದ್ದೆ. ಆಮೇಲೆ ನೆನಸಿಕೊಂಡು ಗೌಡ್ರೇ ನಮ್ಮ ವ್ಯವಹಾರ ನಾಳೆ ಮಾತಾಡೋಣ. ಈಗ ನನಗೆ ಕಥೆ ಬರೆಯಲು ಇದೆ ಎಂದು ತಪ್ಪಿಸಿಕೊಂಡಿದ್ದೆ.

`ಆಯ್ತು ಬುದ್ದಿ ನಾಳೆ ಬೆಳಕು ಹರಿಯುವ ಹೊತ್ಗೆ ಬರ್ತೀನಿ ವ್ಯವಹಾರ ಮುಗಿಸಿಬಿಡೋಣ’ ಅಂತ ಬಸ್ ಚಾರ್ಜಿಗೆ ಕಾಸು ಇಸಕೊಂಡು ಆತ ಹೊರಟು ಹೋಗಿದ್ದ.

ಈ ದಲ್ಲಾಳಿ ಹಳ್ಳಿಯವ ಯಾವಾಗಲೋ ಒಮ್ಮೆ ಟೀವಿಯಲ್ಲಿ ನನ್ನನ್ನು ನೋಡಿದ್ದ. ಅದ್ಯಾಕೆ ಬುದ್ದಿ ನಮ್ಮನೆ ಟೀವಿಯಲ್ಲಿ ನೀವು ಬಂದಿದ್ರಿ ಅಂತ ಅಚ್ಚರಿ ಪಟ್ಟು ಕೇಳಿದ್ದ. ಅವನಿಗೆ ನಾನು ಕತೆ ಬರೆವ ವಿಷಯ ಪೇಪರಲ್ಲಿ ಬರುವ ವಿಷಯ ಎಲ್ಲ ವಿವರಿಸಿ ಹೇಳಿದ್ದೆ. ಓ ನೀವೂ ನಮ್ಮ ಹಾ ಮಾ ನಾಯಕರಿದ್ದಂಗೆ ದೇಜಗೌ ಇದ್ದಂಗೆ. ನಿಮ್ಮನ್ನ ನೋಡಿದ್ರೆ ಸಾಬರ ಥರ ಇಲ್ವೇ ಇಲ್ಲ ಬುದ್ದಿ. ನಮ್ಮಂಗೇ ಎಂದು ಆಗಾಗ ನನಗೆ ಗೌರವವನ್ನೂ ಕೊಡುತ್ತಿದ್ ದ.ನಾನೂ ಯಾಕೆ ಈ ಗೌರವವನ್ನ ಸುಮ್ಮನೇ ಬಿಡುವುದು ಎಂದು ಆಗಾಗ ಅದನ್ನೂ ತಗೊಳ್ಳುತ್ತಿದ್ದೆ.

ದಲ್ಲಾಳಿ ಹೊರಟು ಹೋದ ಮೇಲೆ ಮಕ್ಕಳ ಹತ್ತಿರ ತೀರಿ ಹೋದ ಆಮಿತಾತನ ಕತೆ ಹೇಳುತ್ತಾ ಕುಳಿತಿದ್ದೆ. ನಾವು ಸಣ್ಣವರಾಗಿರುವಾಗ ಈ ಆಮಿತಾತ ಎಂಬ ಅಜ್ಜಿಗೆ ಕಾಡಿನಿಂದ ಗಿಳಿಗಳನ್ನು ಹಿಡಿದು ತಂದು ಕೊಡುತ್ತಿದ್ದುದು, ಬೆಕ್ಕುಗಳು ಅವುಗಳನ್ನು ಹಿಡಿದು ತಿನ್ನುತ್ತಿದ್ದುದು. ಆಮೇಲೆ ನಾವು ಪುನಃ ಹೊಸ ಗಿಳಿಗಳನ್ನು ತಂದು ಕೊಡುತ್ತಿದ್ದುದು, ಅವುಗಳನ್ನ ಪುನಃ ಬೆಕ್ಕುಗಳು ತಿನ್ನುತ್ತಿದ್ದುದು, ನಾವು ಪುನಃ ತಂದು ಕೊಡುತ್ತಿದ್ದುದು.. ಮಕ್ಕಳು ಈ ಗಿಳಿ ಮತ್ತು ಬೆಕ್ಕುಗಳ ಪುನಃ ಪುನಃ ಪುನರಾವರ್ತನೆ ಕತೆ ಕೇಳಿ ಬೇಜಾರಾಗಿ ಎದ್ದು ಹೋಗಿದ್ದರು. ಈ ಅಜ್ಜಿಯ ಇನ್ನೂ ರೋಚಕ ಕತೆಗಳನ್ನು ಮಕ್ಕಳಿಗೆ ಹೇಳಲಾಗದೆ ನಾನೂ ಒಂದು ತರಹದ ಅಸಹಾಯಕತೆಂದ ಒದ್ದಾಡುತ್ತಿರುವಾಗ ಊರಿನಿಂದ ನನ್ನ ತಾಯಿ ಫೋನ್ ಮಾಡಿ ‘ಯಾಕೆ ಆಮಿತಾತಳ ಮೃತ ದೇಹವನ್ನು ನೋಡಲು ಬರಲಿಲ್ಲ’ ಎಂದು ಬೇಜಾರು ಮಾಡಿಕೊಂಡರು. ಆಮೇಲೆ ‘ಬರದಿದ್ದುದು ಒಳ್ಳೆಯದೇ ಆಯಿತು ಬಿಡು ನಿನಗೆ ಬೇಜಾರಾಗುತ್ತಿತ್ತು’ ಅಂದರು.

ಯಾಕೆ ಎಂದು ಕೇಳಿದೆ ‘ಅಂತ್ಯಸಂಸ್ಕಾರ ಅಷ್ಟೇನೂ ಚೆನ್ನಾಗಿರಲಿಲ್ಲ. ಮೆರವಣಿಗೆ ಇರಲಿಲ್ಲ. ತರಾರಿಯಲ್ಲಿ ಮಣ್ಣಲ್ಲಿ ಮರೆಮಾಡಿದರು’ ಅಂದರು.

‘ಹಾಗೆ ಯಾಕಂತೆ’ ಎಂದು ಕೇಳಿದೆ.

ಈ ಆಮಿತಾತನ ಸಾಕು ಮಗನೊಬ್ಬ ಸೌದಿ ಅರೇಬಿಯಾದಲ್ಲಿದ್ದಾನೆ. ಆತ ಇಸ್ಲಾಮಿನ ಇನ್ನೊಂದು ಪಂಥದ ಅನುಯಾಯಾಗಿದ್ದಾನೆ. ಆ ಪಂಥವನ್ನು ಶುರುಮಾಡಿದವರು ಅರೆಬಿಯಾದ ರಾಜ ಮನೆತನದವರು. ಆ ಪಂಥದ ಪ್ರಕಾರ ಸಾವಿನಲ್ಲಿ ಬಡವರೂ ಅರಸರೂ ಒಂದಾಗತ್ತಾರೆ. ಅಲ್ಲಿ ಅರಸರು ತೀರಿಹೋದರೂ ಬಡವರು ತೀರಿಹೋದರೂ ಅಂತ್ಯಸಂಸ್ಕಾರ ಸರಳವಾಗಿರುತ್ತದೆ. ಶೋಕಾಚರಣೆ ಇರುವುದಿಲ್ಲ. ಮೊನ್ನೆ ಅರೇಬಿಯಾದ ಮಹಾರಾಜ ತೀರಿ ಹೋದಾಗಲೂ ಅಂತ್ಯ ಸಂಸ್ಕಾರ ಸರಳವಾಗಿತ್ತಂತೆ. ಆಮಿತಾತಾಳ ಸಾಕು ಮಗ ಅರೇಬಿಯಾದಿಂದ ಫೋನ್ ಮಾಡಿ ಹೇಳಿದನಂತೆ. ಅದಕ್ಕೇ ಹೀಗೆ ಮಾಡಿದರು. ಪಾಪ ನಮ್ಮ ಆಮಿತಾತ ಎಂಬ ಅಜ್ಜಿಗೆ ಸಾವಿನಲ್ಲೂ ಸುಖ ಇರಲಿಲ್ಲ ಎಂದು ಬೇಜಾರು ಮಾಡಿಕೊಂಡಳು.

ಈ ಆಮಿತಾತ ತೀರಿಹೋಗುವ ದಿನದವರೆಗೂ ತನಗೆ ಕಾಫಿತೋಟವೊ೦ದರ ಅರ್ಧಪಾಲು ಸಿಗುವುದು ಎಂದು ನಂಬಿಕೊಂಡು ಬದುಕಿದ್ದಳು.ನೂರಾರು ವರ್ಷಗಳ ಹಿಂದೆ ಬ್ರಿಟಿಶ್ ದೊರೆಯೊಬ್ಬ ಆಕೆಗೆ ಈ ಆಸೆ ಕೊಟ್ಟು ಕೊಡಗಿಗೆ ಕರೆದು ಕೊಂಡು ಬಂದನಂತೆ. ಆ ತೋಟ ಹಲವು ಸಾಹುಕಾರರ ಕೈದಾಟಿದ್ದರೂ ಆ ಪಾಲು ತನಗೆ ಸಿಗುವುದು ಎಂದು ಆಕೆ ನಂಬಿದ್ದಳು.ಅದರಲ್ಲಿ ಒಂದು ಪಾಲು ನನಗೂ ನೀಡುವುದಾಗಿ ಆಕೆ ಆಸೆ ಕೊಟ್ಟಿದ್ದಳು. ಇಂದು ಆಮಿತಾತ ತೀರಿಹೋಗುವವರೆಗೆ ನನಗೂ ಆ ನಂಬಿಕೆ ಇತ್ತು. ಇನ್ನು ಇಲ್ಲ.

ನಾಳೆ ಬೆಳಕು ಹರಿಯುವ ಹೊತ್ತು ಹಳ್ಳಿಂದ ಜಮೀನು ದಲ್ಲಾಳಿ ಬರುತ್ತಾನೆ.ಇನ್ನು ಆತನೇ ಗತಿ.

ಶುಭಂ.ಮ೦ಗಳಂ

Advertisements