ವೈ. ಜಯಮ್ಮ ಮತ್ತು ಕಡಲ ಚಿಪ್ಪುಗಳು

ವೈ ಜಯಮ್ಮ

ಮೈಸೂರಿನ ಕೃಷ್ಣರಾಜ ಆಸ್ಪತ್ರೆಯಿಂದ ಇರ್ವಿನ್‌ ರಸ್ತೆ ನೆಹರೂ ವೃತ್ತ ವನ್ನು ಸೇರುವ ಮೊದಲು ಎಡಬದಿಯಲ್ಲಿ ರಸ್ತೆಗೆ ತಾಗಿಕೊಂಡಂತಿರುವ ಹಳೆಯ ಶೈಲಿಯ ಈ ಕಟ್ಟಡ ಎಂತಹ ದಾರಿಹೋಕನನ್ನು ಒಮ್ಮೆ ತಿರುಗಿ ನೋಡುವಂತೆ ಮಾಡುತ್ತದೆ. ನೂರಾರು ವರ್ಷಗಳ ಹಿಂದೆ ಕಟ್ಟಿದಾಗ ಹೇಗೆ ಇತ್ತೋ ಇನ್ನೂ ಹಾಗೇ ಇರುವ ಈ ಕಟ್ಟಡದ ಮೇಲುಪ್ಪರಿಗೆಯಲ್ಲಿ ವಿಜಯ ಶಂಖಶುಕ್ತಿ ಕಲಾಕೇಂದ್ರ ಎನ್ನುವ ಹಳೆಯ ನಾಮಫಲಕವೊಂದು ಬಹಳ ವರ್ಷಗಳಿಂದ ತೂಗಾಡುತ್ತಿದೆ.ಕೊಂಚ ಅಸಹಜವಾಗಿ ಇದೆಯಲ್ಲ ಎಂದುಕೊಂಡು ಯಾವಾಗಲೂ ವಾರೆಯಾಗಿ ತೆರೆದುಕೊಂಡಿರುವ ಈ ಕಟ್ಟಡದ ಕೆಳ ಅಂತಸ್ತಿನ ಮರದ ಬಾಗಿಲನ್ನು ದೂಡಿಕೊಂಡು ಒಳಹೊಕ್ಕರೆ ಮೊದಲಿಗೆ ಒಳಗೆಲ್ಲ ಬಲು ಕತ್ತಲೆ ಅನಿಸುತ್ತದೆ. ಕಣ್ಣುಗಳನ್ನು ಆ ಕತ್ತಲೆಗೆ ಒಗ್ಗಿಸಿಕೊಂಡು ಕೊಂಚ ಹೊತ್ತು ನಿಂತುಕೊಂಡರೆ ನಿಧಾನವಾಗಿ ಬೆಳಕು ತುಂಬಿಕೊಳ್ಳಲು ತೊಡಗುತ್ತದೆ. ಆ ಬೆಳಕಿನಲ್ಲಿ ಹಾಗೇ ನಿಂತುಕೊಂಡರೆ ರಸ್ತೆಯ ಧೂಳು, ವಾಹನಗಳ ಸದ್ದು, ನಿಧಾನಕ್ಕೆ ಅಡಗಿಕೊಂಡು ವಿಜಯ ಶಂಖಶುಕ್ತಿ ಕಲಾಕೇಂದ್ರದ ಒಡತಿ ವೈ. ಜಯಮ್ಮ (ಎಂ.ಎ., ಬಿ.ಎಡ್‌.) ಅವರು ಕಡಲಚಿಪ್ಪುಗಳಿಂದ ರೂಪಿಸಿರುವ ನೂರಾರು ಕಲಾಕೃತಿಗಳು ನಿಮ್ಮನ್ನು ಕಣ್ಣುಬಿಟ್ಟುಕೊಂಡು ನೋಡಲು ಶುರು ಮಾಡುತ್ತವೆ. ನಾನಾ ಪುರಾಣ ಪ್ರಸಂಗಗಳನ್ನು ಅಭಿನಯಿಸಿ ತೋರುವ ಈ ಕಲಾಕೃತಿಗಳು ಗಾಜು ಜೋಡಿಸಿದ ಬೀಟೆಮರಗಳ ನುಣ್ಣನೆಯ ಪೆಟ್ಟಿಗೆ ಯೊಳಗೆ ಕೂಡುಹಾಕಲ್ಪಟ್ಟಿವೆ.

ಬಿಡುಗಡೆಗೆ ಕಾದಿರುವಂತೆ, ಪೆಟ್ಟಿಗೆ ತೆರೆದರೆ ಎಲ್ಲಿ ಮತ್ತೆ ಕದನಕ್ಕೆ ಶುರು ಮಾಡುವವೋ ಎಂಬಂತೆ ನಿಮ್ಮನ್ನು ನೋಡುವ ಈ ಕಲಾಕೃತಿಗಳನ್ನು ರೂಪಿಸಿರುವ ಕಲಾವಿದೆ ವೈ. ಜಯಮ್ಮನವರು ನಿಮಗೆ ಅಲ್ಲೆಲ್ಲೂ ಕಾಣಿಸುವುದಿಲ್ಲ. ಎಲ್ಲಿ ಅವರು ಎಂದು ವಿಚಾರಿಸಲು ನೋಡಿದರೆ ವಿಚಾರಿಸಲು ಅಲ್ಲಿ ಯಾರೂ ಇರುವುದಿಲ್ಲ. ಒಳಗಿನಿಂದ ರೋಷತಪ್ತ ನಾಯಿ ಯೊಂದು ಬೊಗಳುವುದು ಕೇಳಿಸುತ್ತದೆ. ಕೊಂಚ ಆತಂಕಗೊಂಡ ನೀವು ನಿಮ್ಮ ಇರವನ್ನು ಸೂಚಿಸಲು ಏನಾದರೂ ಸದ್ದು ಮಾಡಿದರೆ ಒಳಗಿನ ಕತ್ತಲೆ ಯಿಂದ ಸ್ತ್ರೀಯೊಬ್ಬರು ಮುಗುಳುನಗುತ್ತಾ ಬರುತ್ತಾರೆ.

ಆದರೆ ಅವರು ವೈ. ಜಯಮ್ಮ ಅಲ್ಲ. ಅವರು ವೈ. ಜಯಮ್ಮನವರ ಹಿರಿಯ ಸಹೋದರಿ ಸರೋಜಾ ಮೇಡಂ. ಸರೋಜಾ ಮೇಡಂ ಅವರು ಪೀಪಲ್ಸ್‌ ಪಾರ್ಕ್‌ ಜ್ಯೂನಿಯರ್‌ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕಿಯಾಗಿ ಹತ್ತು ವರ್ಷಗಳ ಹಿಂದೆ ನಿವೃತ್ತರಾಗಿದ್ದಾರೆ. ಖಾಸಗೀ ಜೀವನದಲ್ಲಿ ಕೊಂಚ ನೋವುಂಡಂತೆ ಕಾಣುವ ಸರೋಜಾ ಮೇಡಂ ಆದರೂ ಸಂತೋಷದಲ್ಲಿರುವಂತೆ ನಗುತ್ತಾರೆ. ನೀವು ಅವರ ಬಳಿ ವೈ. ಜಯಮ್ಮ ಅವರನ್ನು ವಿಚಾರಿಸಿದರೆ ಅವರು ಸಂಭ್ರಮದಲ್ಲಿ ನಿಮ್ಮನ್ನ್ನು ಆ ಕತ್ತಲೆಯ ಕಟ್ಟಡದ ಸಂದುಗೊಂದುಗಳಲ್ಲಿ ಕರೆದೊಯ್ದು, ಮರದ ಮೆಟ್ಟಿಲುಗಳನ್ನು ಹತ್ತಿಸಿ, ಮೂಲೆಯಲ್ಲಿ ಹಾಸುಗೆಯ ಮೇಲೆ ಒರಗಿ ಕೊಂಡು ಭಾರತದ ಮಾನ್ಯ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಭಾವಚಿತ್ರ ವನ್ನು ಏಕಾಗ್ರಚಿತ್ತರಾಗಿ ದಿಟ್ಟಿಸುತ್ತಾ ಅವರ ಕೈಕಾಲು ಮುಖ ತಲೆಕೂದಲ ಶೈಲಿ ಯನ್ನು ಮನಸ್ಸಿನಲ್ಲೇ ಅಳೆಯುತ್ತಾ ಕೂತಿರುವ ತಮ್ಮ ತಂಗಿಯನ್ನು ತೋರಿಸಿ ಅದೇ ನಗುವಿನಲ್ಲಿ ಮೌನವಾಗಿ ನಿಂತುಕೊಳ್ಳುತ್ತಾರೆ.

ಈಗ ಹಲವು ತಿಂಗಳುಗಳಿಂದ ವೈ. ಜಯಮ್ಮನವರು ಮಾನ್ಯ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಆ ಕೃತಿಯನ್ನು ಕಡಲಚಿಪ್ಪುಗಳಿಂದ ರೂಪಿಸುತ್ತಿದ್ದಾರೆ. ಎಲ್ಲ ಮಾಡಿ ಮುಗಿದಿದೆ. ಆದರೆ ಕಲಾಂ ಅವರ ಮುಖದಲ್ಲಿ ಅವರ ಏಕಾಗ್ರತೆ ಯನ್ನು, ಅವರ ವೈಜ್ಞಾನಿಕ ಮನೋಭಾವವನ್ನು, ಅವರ ರಾಷ್ಟ್ರಭಕ್ತಿಯನ್ನು ಹೇಗೆ ಕಡಲ ಚಿಪ್ಪುಗಳಿಂದ ಹಿಡಿದಿಡುವುದು ಎಂದು ಅವರು ಬಹಳ ದಿನಗಳಿಂದ ಯೋಚಿಸುತ್ತಿದ್ದಾರೆ.

ಹಿಂದೆಯೂ ಒಮ್ಮೆ ಹೀಗೆಯೇ ಆಗಿತ್ತು. ರಾಷ್ಟ್ರಕವಿ ಕುವೆಂಪು ಅವರ ಬೆರಳ್‌ಗೆ ಕೊರಳ್‌ ನಾಟಕದಿಂದ ಪ್ರೇರಿತ ರಾಗಿ ಜಯಮ್ಮ ಅವರು ಅರಣ್ಯದ ಪ್ರತಿಕೃತಿಯೊಂದನ್ನು ಕಡಲಚಿಪ್ಪುಗಳಿಂದ ರೂಪಿಸಲು ಹೊರಟಿದ್ದರು. ಎಲ್ಲ ಮಾಡಿ ಮುಗಿಸಿದ ಮೇಲೆ ಕಾಡಿನ ನಡುವಿನ ಕೊಳವೊಂದನ್ನು ಚಿಪ್ಪುಗಳಿಂದ ಜೋಡಿಸುವುದು ಅವರಿಗೆ ಅಸಾಧ್ಯವಾಯಿತು. ಯಾಕೋ ಏನೋ ಎಲ್ಲೋ ತಡೆಯುಂಟಾಗುತ್ತಿತ್ತು. ರಾತ್ರಿಯಿಡೀ ನಿದ್ದೆ ಬರದೆ ಒದ್ದಾಡುತ್ತಿದ್ದರು. ಆಗ ಬೆಳ್ಳಗಿನ ಹಸ್ತವೊಂದು ರಾತ್ರಿ ಎರಡೂವರೆ ಗಂಟೆಯ ಸಮಯದಲ್ಲಿ ಅವರ ಕನಸಿನಲ್ಲಿ ಕಾಣಿಸಿಕೊಂಡು ಕಡಲ ಚಿಪ್ಪು ಗಳಿಂದ ಕೊಳವನ್ನಾಗಿ ಜೋಡಿಸುವುದು ಹೇಗೆ ಎಂದು ತೋರಿಸಿಕೊಟ್ಟಿತು. ಆಮೇಲೆ ಆ ಕಲಾಕೃತಿಯನ್ನು ಕುವೆಂಪು ಅವರು ಮೆಚ್ಚಿಕೊಂಡು ತಮ್ಮ ಮನೆ ಯಲ್ಲಿ ಮಕ್ಕಳಿಗೆ ಆಡಲು ತಂದಿದ್ದ ಚಿಪ್ಪುಗಳ ಚೀಲವನ್ನೇ ವೈ. ಜಯಮ್ಮನವರಿಗೆ ಬಹುಮಾನವಾಗಿ ಕೊಟ್ಟು ಹರಸಿದರಂತೆ. ಈಗಲೂ ಹಾಗೆಯೇ ಕೈಯ್ಯೊಂದು ಕನಸಿನಲ್ಲಿ ಬಂದು ಮಾನ್ಯ ರಾಷ್ಟ್ರಪತಿ ಕಲಾಂ ಅವರ ಮುಖಭಾವವನ್ನು ಜೋಡಿಸಲು ಮಾರ್ಗದರ್ಶನ ಮಾಡುತ್ತದೆ ಎಂದು ಜಯಮ್ಮನವರು ಹಗಲೂ ಇರುಳೂ ಕಾಯುತ್ತಿದ್ದಾರೆ.

ಜಯಮ್ಮನವರ ಹೆಸರಿನ ಮುಂದೆ ಇರುವ ವೈ. ಅನ್ನುವುದರ ಪೂರ್ಣರೂ ಯಾಲಕ್ಕಾಚಾರ್‌ ಎನ್ನುವುದು. ಅದು ಅವರ ತಂದೆಯ ಹೆಸರೂ ಹೌದು ಅಜ್ಜನ ಹೆಸರೂ ಹೌದು. ಅವರ ತಂದೆ ಎಂ.ವೈ. ಸ್ವಾಮಿ ಎನ್ನುವವರು ಹೆಸರಾಂತ ಚಲನಚಿತ್ರ ವಿತರಕರಾಗಿದ್ದರು. ಅಜ್ಜ ಯಾಲಕ್ಕಾಚಾರ್‌ ಮೈಸೂರಿನ ಅರಮನೆಯ ನಿರ್ಮಾಣದಲ್ಲಿ ಭಾಗವಹಿಸಿದ್ದರಂತೆ. ಯಾಲಕ್ಕಾಚಾರ್‌ ಅವರ ತಂದೆ ತಿಮ್ಮಯ್ಯಾಚಾರ್‌ ಅರಮನೆಯಲ್ಲಿ ಬಡಗಿ ಯಾಗಿದ್ದರಂತೆ. ತಿಮ್ಮಯ್ಯಾಚಾರ್‌ ಅವರ ಹೆಸರಿನ ಛತ್ರವೊಂದು ಈಗಲೂ ಮೈಸೂರಿನಲ್ಲಿದೆ. ಜಯಮ್ಮನವರ ಸೋದರಮಾವ (ಅಂದರೆ ಸೋದರತ್ತೆಯ ಗಂಡ) ಎಸ್‌.ಎನ್‌. ಸ್ವಾಮಿಯವರು ಭಾರತದ ಕೊನೆಯ ವೈಸ್‌ರಾಯ್‌ ಲಾರ್ಡ್‌ ಮೌಂಟ್‌ಬ್ಯಾಟನ್‌ ಅವರ ಜೀವಂತ ಪ್ರತಿಕೃತಿಯನ್ನು ರಚಿಸಿದ ವರು. ಎಸ್‌.ಎನ್‌. ಸ್ವಾಮಿಯವರ ತಂದೆ ಸಿದ್ದಣ್ಣಾಚಾರ್‌ ಅವರು ಮೈಸೂರಿನ ವಿಶ್ವಪ್ರಸಿದ್ಧ ರತ್ನ ಸಿಂಹಾಸನದ ನವೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಣ್ಣ ಕಾಯದ ಮಹಾರಾಜರು ಅಸ್ತಂಗತರಾದ ಮೇಲೆ ಸಿಂಹಾಸನ ವನ್ನೇರಿದ ಕೊಂಚ ಸ್ಥೂಲಕಾಯರಾಗಿದ್ದ ಮಹಾರಾಜರಿಗೆ ಕೂರಲು ಸಿಂಹಾಸನ ಕೊಂಚ ಇಕ್ಕಟ್ಟಾಯಿತಂತೆ. ಆಗ ಸಿದ್ದಣ್ಣಾಚಾರ್‌ ಅವರೇ ಸಿಂಹಾಸನದ ಮೂಲರೂಪಕ್ಕೆ ಭಂಗ ಬಾರದ ಹಾಗೆ ಅದನ್ನು ಕೊಂಚ ಹಿಗ್ಗಿಸಿದರಂತೆ.

ವೈ. ಜಯಮ್ಮನವರ ತಾಯಿಯೂ ಈಗ ಬದುಕಿಲ್ಲ. ತನ್ನ ಕನಸಿನಲ್ಲಿ ಬಂದು ಮಾರ್ಗದರ್ಶನ ನೀಡುವ ಕಾಣದ ಕೈ ಅವರದೇ ಎಂಬುದು ಜಯಮ್ಮ ನವರ ನಂಬಿಕೆ. ಅವರ ತಾಯಿ ಕಮಲಮ್ಮನವರಿಗೆ ಅಕ್ಷರ ಬರುತ್ತಿರಲಿಲ್ಲ. ಒಮ್ಮೆ ಅವರು ಮನೆಯಲ್ಲಿದ್ದ ಹಳೆಯ ಪುಸ್ತಕಗಳನ್ನು ಜೋಡಿಸುತ್ತಿರುವಾಗ ಅವರಿಗೆ ಹಳೆಯದಾದ ಪುಟ್ಟದಾದ ಸುಂದರ ಭಗವದ್ಗೀತೆಯೊಂದು ಸಿಕ್ಕಿತಂತೆ. ಆ ಭಗವದ್ಗೀತೆ ಅವರನ್ನು ದಿಟ್ಟಿಸಿ ನೋಡಿತಂತೆ. ಅವರೂ ಅದನ್ನು ದಿಟ್ಟಿಸಿನೋಡಿ ಒಮ್ಮೆಲೇ ಓದಲು ತೊಡಗಿದಂತೆ. ಹಾಗೆ ಓದಲು ತೊಡಗಿದವರು ತೀರಿ ಹೋಗುವವರೆಗೂ ಓದುತ್ತಲೇ ಇದ್ದರಂತೆ. ಕಡತಂದು, ಕಾಡಿಬೇಡಿ ರಾಮಾಯಣ, ಮಹಾಭಾರತ, ರಾಮಕೃಷ್ಣ ಪರಮಹಂಸ, ಕುವೆಂಪು, ಶರತ್‌ಚಂದ್ರ, ಟಾಗೋರ್‌, ಪು.ತಿ.ನ. ಎಲ್ಲರನ್ನೂ ಹಸಿದವರಂತೆ ಓದುತ್ತಾ ಅವರು ಕಣ್ಣು ಮುಚ್ಚುವಾಗಲೂ ಅವರ ಕೈಯಲ್ಲೊಂದು ಕನ್ನಡ ಪುಸ್ತಕವಿತ್ತಂತೆ.

ಐದು ವರ್ಷಗಳ ಹಿಂದೆ ಒಮ್ಮೆ ಜಯಮ್ಮನವರು ನನಗೆ ಕರೆ ಕಳುಹಿಸಿ ದ್ದರು. ರಾಮಾಯಣ, ಮಹಾಭಾರತ, ಬುದ್ಧ, ಮಹಾವೀರ, ಏಸುಕ್ರಿಸ್ತ ಈ ಎಲ್ಲರ ಕುರಿತು ಕಡಲಚಿಪ್ಪುಗಳಿಂದ ಕಲಾಕೃತಿಗಳನ್ನು ರಚಿಸಿದ್ದ ಅವರು ನನಗೆ ಕರೆಕಳುಹಿಸಿದ ಉದ್ದೇಶ ಕಂಡು ನಕ್ಕುಬಿಟ್ಟಿದ್ದೆ. ರಾಮ, ಕೃಷ್ಣ, ಏಸು, ಬುದ್ಧ, ಮಹಾವೀರ ಇವರೆಲ್ಲರ ರೂಪಗಳನ್ನು ಮಾಡಿದ ಅವರಿಗೆ ಇಸ್ಲಾಂ ಧರ್ಮದ ಕುರಿತು ಕಲಾಕೃತಿಗಳನ್ನು ಮಾಡಬೇಕೆಂಬ ಆಸೆಯಾಗಿತ್ತು. ಹಾಗಾಗಿ ಅದಕ್ಕೆ ಸಂಬಂಧಿಸಿದ ದೇವರದ್ದಾಗಲೀ, ಪುರಾಣ ಪುರುಷರದಾಗಲೀ, ಮಾದರಿ ಯೊಂದು ಅವರಿಗೆ ಬೇಕಾಗಿತ್ತು. ಅವರ ಮುಗ್ಧವಾದ ಬೇಡಿಕೆಗೆ ಮಂತ್ರಮುಗ್ಧ ನಾದ ನಾನು ಇಸ್ಲಾಂ ಧರ್ಮದ ದೇವರು ನಿರಾಕಾರನೆಂದೂ ಆದರೆ ಆತ ಸರ್ವವ್ಯಾಪ್ತನೆಂದೂ, ಇನ್ನು ಆಕೃತಿಗಳನ್ನು ನಿರ್ಮಿಸುವುದು ನಿಷಿದ್ಧವೆಂದು ಸುಮ್ಮನೆ ಅದರಿಂದ ಸಮಾಜದ ಶಾಂತಿಗೆ ಭಂಗವಾಗಬಹುದೆಂದೂ ಹೇಳಿದ್ದೆ. ಅದರ ಬದಲು ಸ್ವರ್ಗ ಅಥವಾ ನರಕದ ಪ್ರತಿಕೃತಿಯನ್ನು ಮಾಡಬಹುದೆಂದೂ ಅದರ ವಿವರಗಳನ್ನು ಬೇಕಾದರೆ ಹೇಳುತ್ತೇನೆಂದೂ ಆದರೆ ಈಗ ಮರೆತು ಹೋಗಿದೆಯೆಂದೂ ಅವರಿಂದ ತಪ್ಪಿಸಿಕೊಂಡು ಬಂದಿದ್ದೆ. ಅವರಿಗೆ ಏನೂ ಸಹಾಯ ಮಾಡಲಾಗಿಲ್ಲವೆಂದು ತುಂಬ ನೊಂದುಕೊಂಡಿದ್ದೆ.

ಏಕೆಂದರೆ ಜಯಮ್ಮ ನಿಜವಾಗಿಯೂ ಹೇಳುವುದಾದರೆ ಒಬ್ಬರು ಕಲಾಯೋಗಿನಿ. ಇದು ಗೊತ್ತಾಗಬೇಕಾದರೆ ನೀವು ನಾನು ಈ ಮೊದಲು ತಿಳಿಸಿದ ವಿಳಾಸದಲ್ಲಿರುವ ಅವರ ವಿಜಯ ಶಂಖಶುಕ್ತಿ ಕಲಾಕೇಂದ್ರವನ್ನು ನೋಡಬೇಕು. ನನ್ನಂತಹವರು ಒಳಗಿದ್ದ ಮಾಂಸವನ್ನು ತಿಂದು ಎಸೆದು ಬಿಡುವ ಕಡಲ ಚಿಪ್ಪುಮೀನುಗಳ ಹೊಳೆಯುವ ಹೊರ ಕವಚವನ್ನು ತೊಳೆದು ಶುಚಿಗೊಳಿಸಿ ಹೊಳಪುಗೊಳಿಸಿ ಒಂದೊಂದೇ ಚಿಪ್ಪುಗಳನ್ನು ಎತ್ತಿಕೊಂಡು ಮಹಾಕಲಾಕೃತಿಗಳನ್ನಾಗಿ ಮಾಡಿರುವ ಜಯಮ್ಮನವರು ನೋಡಲು ತಪಸ್ವಿನಿಯಂತೆಯೇ ಇದ್ದಾರೆ. ಬ್ರಹ್ಮಚಾರಿಣಿಯಾಗಿ ಉಳಿದಿರುವ ಅವರು ರೂಪಿಸಿರುವ ಆಂಜನೇಯ ಲಂಕಿಣಿಯರ ಯುದ್ಧದ ಪ್ರತಿಕೃತಿ-ಕಬಂಧ ಬಾಹುವಿನ ಸಂಹಾರದ ಕೃತಿ-ಭಾಗವತದ ಪೂತನೀ ಸಂಹಾರದ ಪ್ರಸಂಗ ಈ ಎಲ್ಲದರ ಹಿಂದೆ ಆಧ್ಯಾತ್ಮವಿದೆ. ಈ ಆಧ್ಯಾತ್ಮ ಜಯಮ್ಮನವರ ಮುಖದಲ್ಲೂ ಇದೆ. ಕತ್ತಲೆಯ ಆ ಕೋಣೆಯಲ್ಲಿ ಆ ಕಲಾಕೃತಿಗಳ ನಡುವೆ ನಿಂತುಕೊಂಡ ಜಯಮ್ಮನವರ ತಲೆಯ ಮೇಲಿರುವ ಪ್ರಭಾವಳಿ ನನಗಂತೂ ಕಾಣಿಸಿದೆ.

ಐತಿಹಾಸಿಕ ವಿಶ್ವಕರ್ಮ ಕುಟುಂಬಕ್ಕೆ ಸೇರಿದ ಜಯಮ್ಮನವರು ಯಾಕೆ ಹೀಗೆ ಬ್ರಹ್ಮಚಾರಿಣಿಯಾಗಿ, ಕಲಾತಪಸ್ವಿಯಾಗಿ, ಕಡಲಚಿಪ್ಪುಗಳ ಸಹವಾಸ ದಲ್ಲಿ ಧಾನ್ಯ ಮಗ್ನರಾಗಿರುತ್ತಾರೆ ಎಂಬ ಕುತೂಹಲ ನನಗೆ ಬಹಳ ಸಮಯದಿಂದ ಇತ್ತು. ನಿನ್ನೆ ಅವರನ್ನು ಕಾಣಲು ಹೋದಾಗ ಈ ಪ್ರಶ್ನೆಯನ್ನು ನಾನು ಅವರಿಗೆ ಕೇಳಿದ್ದೆ. ಅವರು ಏನೋ ಹೇಳಲು ಹೊರಟವರು ಆಮೇಲೆ ನಿಮಗೆ ದೆಹಲಿ ಯಲ್ಲಿ ಯಾರಾದರೂ ಗೊತ್ತಾ? ರಾಷ್ಟ್ರಪತಿ ಕಲಾಂ ಅವರಿಗೆ ಅವರ ಈ ಆಕೃತಿ ಯನ್ನು ಕೊಡುಗೆಯಾಗಿ ಕೊಡಬೇಕು. ಒಂದು ವೇಳೆ ಅದನ್ನು ಸ್ವೀಕರಿಸಲು ಅವರೇ ಬಂದರೆ ಈ ಧೂಳು ತುಂಬಿದ ಕಲಾ ಕೇಂದ್ರವನ್ನು ಹೇಗೆ ಸಜ್ಜುಗೊಳಿಸುವುದು ಎಂದೆಲ್ಲಾ ಸ್ವಗತದಲ್ಲಿ ಮಾತನಾಡತೊಡಗಿದ್ದರು. ಅವರಿಗೆ ಐದು ವರ್ಷ ಗಳ ಹಿಂದೆ ನನ್ನ ನೋಡಿದ್ದ ನೆನಪೂ ಇರಲಿಲ್ಲ. ನಾನೂ ಅವರಿಗೆ ಇದನ್ನು ಹೇಳಲಿಲ್ಲ.

ಆಮೇಲೆ ಹೊರಗೆ ಬರುವಾಗ ಜಯಮ್ಮ ಅವರ ಅಕ್ಕ ಸರೋಜಾ ಮೇಡಂ ತಮ್ಮ ಸಂಸಾರದ ನೋವಿನ ಕತೆಯನ್ನು ನನಗೆ ಹೇಳಿದರು. ತನ್ನ ವೈವಾಹಿಕ ಗೋಳು ತನ್ನ ಪ್ರೀತಿಯ ತಂಗಿ ಜಯಮ್ಮಳನ್ನು ಹೇಗೆ ಆಧ್ಯಾತ್ಮ ಮತ್ತು ಕಲೆಯ ಕಡೆಗೆ ಕೊಂಡೊಯ್ದಿತು ಎಂದು ವಿವರಿಸಿದರು. ಅದೊಂದು ಬೇರೆಯದೇ ಕತೆ. ಅದನ್ನು ಅಂಕಣದಲ್ಲಿ ಬರೆಯಲಾಗುವುದಿಲ್ಲ.

2 thoughts on “ವೈ. ಜಯಮ್ಮ ಮತ್ತು ಕಡಲ ಚಿಪ್ಪುಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s