ಹೆಂಡದಂಗಡಿಯಿಂದ

rumi1.jpg

ಹಗಲೆಲ್ಲ ಯೋಚಿಸುವೆ.ಇರುಳು ಅದನೇ ಹೇಳುವೆ.
ಎಲ್ಲಿಂದ ಬಂದೆ ನಾನೇನು ಮಾಡುತಿರುವೆ ಒಂದೂ ಅರಿಯೆ.
ನನ್ನ ರೂಹು ಬೇರೆ ಎಲ್ಲಿನದೋ, ಅದು ಗೊತ್ತು ನಿಜ
ಮತ್ತೆ ಅಲ್ಲಿಗೇ ಹೋಗಿ ಸೇರುವೆನು.
ಈ ಕುಡುಕುತನ ಬೇರೊಂದು ಹೆಂಡದಂಗಡಿಯಿಂದ ತೊಡಗಿದ್ದು
ಹಿಂತಿರುಗಿ ತಲುಪಿದಾಗ ಅಲ್ಲಿ
ಸುಮ್ಮಗಾಗುವೆನು ಪೂರಾ..
ಅದುವರೆಗೆ ಈ ಗೆಲ್ಲ ಮೇಲೆ ಹಕ್ಕಿ ನಾನು ಬೇರೊಂದು ಭೂಖಂಡದಿಂದ.

ದಿನ ಬಂದಿದೆ ಹಾರಿ ಹೋಗಲು
ಆದರೆ ಯಾರಿದು ಈಗ ನನ್ನ ಕಿವಿಯಿಂದಲೇ ನನ್ನ ಸದ್ದು ಕೇಳುವುದು
ಯಾರಿದು ನನ್ನ ಬಾಯಿಯಿಂದಲೇ ನನ್ನ ಮಾತ ಆಡುವುದು
ನನ್ನ ಕಣ್ಣಿಂದಲೇ ಕಾಣುವುದು. ಯಾವುದಿದು ರೂಹು?
ಕೇಳದಿರಲಾರೆ ಈಗ
ಒಂದು ಗುಟುಕು ಗೊತ್ತಾದರೂ
ಹಾರಿ ಬಿಡಬಹುದು ಈಕುಡುಕುತನದ ಸೆರೆ ಪಂಜರ.
ಬರಲಿಲ್ಲ ಇಲ್ಲಿ ನಾನು ನಾನಾಗಿಯೇ ಹೋಗಲಾರೆನು ನಾನಾಗಿಯೇ…
ತಂದವರು ನನ್ನನಿಲ್ಲಿ ಕೊಂಡು ಹೋಗಬೇಕಾಗಬಹುದು ತಿರುಗಿ…

ಈಕವಿತೆ ಗೊತ್ತಿಲ್ಲ ಏನು ಹೇಳಹೊರಟಿರುವೆನೆಂದು
ಯೋಚಿಸಿರಲಿಲ್ಲ ಇದನು
ಈ ಮಾತ ಹೊರ ನಿಂತಾಗ
ಸುಮ್ಮಗಾಗುವೆನು-ಮಾತಿಲ್ಲದಾಗುವೆನು.

Advertisements