ಪ್ರಿಯ ಲಂಕೇಶರ ಹುಟ್ಟು ಹಬ್ಬಕ್ಕೆ ಒಂದು ಕವಿತೆ

lankesh1.jpg

ನಾವು ಎಲ್ಲರೂ
ನೀವು ಇದ್ದಿದ್ದರೆ
ಈ ಎಲ್ಲದರ ಕುರಿತು
ಏನು ತೀರ್ಮಾನ ತೆಗೆದುಕೊಳ್ಳುತ್ತಿದ್ದಿರಿ ಎಂದು
ಯೋಚಿಸುತ್ತಾ ಕುಳಿತಿರುವೆವು.
ಹೀಗೆ ನೀವು ಸಾರ್ವಜನಿಕ ತೀರ್ಮಾನಗಳನ್ನು
ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ಬಹುಶಃ
ನಮಗೆ ಗೊತ್ತಿಲ್ಲ ಎನ್ನುವುದೂ ಒಂದು
ಚರ್ಚೆಯ ವಿಷಯವಾಗಿರುವುದು.

ನಿಮ್ಮ ಬಕ್ಕತಲೆಯ ಒಳಗೆ ಸುಳಿದಾಡುತ್ತಿದ್ದ
ಮಿಂಚುಗಳು,ಅಳ್ಳೆದೆಯವರ ಮೇಲೆ ಸದಾ ಮಸೆಯುತ್ತಿದ್ದ ಸೃಜನಶೀಲ
ಮಚ್ಚು ಮತ್ತು ಎಲ್ಲ ಸುಂದರಿಯರ ಬೆವರಸೆಲೆ
ಹುಡುಕಿಕೊಂಡು ಅಂಡಲೆಯುತ್ತಿದ್ದ
ಮಹಾನಾಚುಗೆಬುರುಕ ವಿಧ್ವತ್ತು.
ನಡೆಯುತ್ತಿರುವುದು ಸದಾ ತಂತಿಯ ಮೇಲೆಂಬ
ದೊಂಬರ ಹುಡುಗಿಯ
ವಿನಾಕಾರಣ ಆಪತ್ತಿನ ಭಯ,ಅದಕ್ಕೂ ಮಿಗಿಲಾಗಿದ್ದ
ಅವ್ವನಂತಹ ಮೊಸರು ಮಾರುವ ನಿಯತ್ತು.

ನಾಚುಗೆಯ,ಲೆಕ್ಕಾಚಾರದ,ಪತರಗುಟ್ಟುವ,
ಕವಿತೆಯ,ಗದ್ಯದ,ಬೈಗುಳಗಳ
ಈ ಎಲ್ಲದರ ತಳದಲ್ಲಿ ಉಳಿಯುವ
ಅಲ್ಲೋಲಕಲ್ಲೋಲದಂತಹ ಏಕಾಂತದ ನಡುವೆಯೂ
ನೀವು ನೀಡುತ್ತಿದ್ದ ಕಠಿಣ ಏಟು.
ಅವುಗಳನು ಉಂಡೂ ಸುಖಿಸುತ್ತಿದ್ದ
ಮಹಾ ಪೋಕರಿ ಸಾಮಾಜಿಕ ಮನಸ್ಸು.
ಹಾದರದವಳ ಮಹಾ ಲೆಕ್ಕಾಚಾರ
ಮತ್ತು ಗರತಿಯ ಹುಚ್ಚುಕೋಡಿ ಮನಸ್ಸು
ಲಂಕೇಶ್ ನೀವು ಇದ್ದಿದ್ದರೆ ಕೌದಿಯೊಳಗೆ ಸದಾ
ತಾಪದಿಂದ ಕಾತರಿಸುತ್ತಿದ್ದ ನಿಮಗೆ ಬಹಳಷ್ಟು ಕಥೆಕಟ್ಟಿ
ಹೇಳ ಬಹುದಿತ್ತು.ಮತ್ತು ಬಹಳಷ್ಟು ಕೇಳಬಹುದಿತ್ತು
ಈ ಎಲ್ಲ ಬಿಕ್ಕಟ್ಟು ಯಾಕೆ ಬೇಕಿತ್ತು!

Advertisements