ನೋಡು ಬಾ ಚಂದಿರ…

ಆ ಸಂಜೆ ನನಗೆ ಇನ್ನೂ ನೆನಪಿದೆ. ಪರದೆ ಇಳಿಬಿಟ್ಟ ಸಣ್ಣಗಿನ ಬೆಳಕಿನ ಇಂತಹದೇ ಆ ಸಂಜೆ ಆ ನಾಲ್ವರು ಸಹೋದರಿಯರು ಒಂದೇ ದನಿಯಲ್ಲಿ ಒಂದೇ ಮನಸ್ಸಿನಲ್ಲಿ ಒಂದೇ ಆತ್ಮ ಹಾಡುತ್ತಿದೆ ಎನ್ನುವ ಹಾಗೆ ಕನ್ನಡದ ಒಂದೊಂದೇ ಹಾಡುಗಳನ್ನು ಮಗುವನ್ನು ಎತ್ತಿಕೊಳ್ಳುವಂತೆ, ಮಗುವನ್ನು ತೋಳಿನಿಂದ ತೋಳಿಗೆ ಬದಲಿಸುತ್ತಿರುವಂತೆ, ಮಗುವಿನ ಕಣ್ಣುಗಳನ್ನು ಒಬ್ಬೊಬ್ಬರಾಗಿ ದಿಟ್ಟಿಸಿ ನೋಡುತ್ತಿರುವಂತೆ ಹಾಡಿದ್ದರು. ನಾನು ಕಣ್ಣು ತುಂಬಿಕೊಂಡು ಅವರನ್ನು ನೋಡುತ್ತಿದ್ದೆ. ಈ ಹಾಡುಗಳು ಯಾವುದೂ ಅರ್ಥವಾಗದೇ ಹೋಗಿದ್ದಿದ್ದರೆ, ಕಣ್ಣುಗಳು ಮಸುಕಾಗಿರುವ ನನಗೆ ಅವರ ಹಾಡಿನ ಕಣ್ಣುಗಳು ಬಂದಿದ್ದರೆ, ಇವರ ಹಾಗೆ ನಾನೂ ಒಂದು ಕೊಳೆಯಿಲ್ಲದ ಆತ್ಮವಾಗಿ ಎಲ್ಲ ಕಡೆ ಸುಳಿದಾಡುವಂತಿದ್ದರೆ ಎಂದು ಹಂಬಲಿಸಿಕೊಂಡು ಕೂತಿದ್ದೆ. ಅಲಿಮಹಮ್ಮದ್‌ ಖಾನ್‌ ದುರಾನಿಯವರ ಕಣ್ಣು ಕಾಣಿಸದ ನಾಲಕ್ಕು ಪುತ್ರಿಯರಾದ ಖನೀಜ್‌ ಫಾತಿಮಾ, ಫಿರ್ದೌಸ್‌, ಆಯಿಶಾ ಸಿದ್ದಿಕಾ ಹಾಗೂ ಮಾರಿಯಾ ಕುಲ್ಸುಂ ಆವತ್ತು ಅಷ್ಟೊಂದು ಹಾಡಿ ನಗುತ್ತಾ ನನ್ನನ್ನು ಬೀಳು ಕೊಂಡಿದ್ದರು. ಆವತ್ತು ಕತ್ತಲಲ್ಲಿ ವಾಪಸು ಬರುವಾಗ ನನಗೆ ಯಾವು ಯಾವುದೋ ನಕ್ಷತ್ರಗಳು ವಿನಾಕಾರಣ ಗೋಚರಿಸುತ್ತಿದ್ದವು.

Advertisements

durani-sisters-2.jpg

ಇಂತಹದೇ ಒಂದುಸಂಜೆ ಸರಿಸುಮಾರು ನಾಲ್ಕು ವರ್ಷಗಳ ಹಿಂದೆ ಇವರನ್ನು ಕಾಣಲೆಂದು ನಾನು ಹೋಗಿದ್ದಾಗ ಹುಟ್ಟಿನಿಂದಲೇ ಅಂಧರಾಗಿರುವ ಈ ನಾಲಕ್ಕು ಮಂದಿ ಪಠಾಣ್‌ ಸಹೋದರಿಯರು ಇನ್ನು ಮುಂದೆ ಹಾಡು ಹೇಳುವು ದಿಲ್ಲ ಎಂದು ತೀರ್ಮಾನಿಸಿಕೊಂಡು ವ್ಯಗ್ರರಾಗಿ ಕೂತಿದ್ದರು. ಎಲ್ಲವನ್ನೂ ಕಾಣುವವರೂ ಅರಿಯುವವರೂ ಆದ ಬೆಳ್ಳಗಿನ ನಾಲ್ಕು ಆತ್ಮಗಳಂತೆ ಆ ಮನೆಯೊಳಗಿನ ನಸುಗತ್ತಲಲ್ಲಿ ಸುಳಿದಾಡುತ್ತಿದ್ದ ಆ ಅಕ್ಕತಂಗಿಯರು ತಮ್ಮ ಏಕೈಕ ತಮ್ಮನ ಎರಡನೆಯ ಮಗುವನ್ನು ತೋಳಿನಿಂದ ತೋಳಿಗೆ ಬದಲಾಯಿ ಸುತ್ತಾ ಲಾಲಿಸುತ್ತಾ ಇನ್ನು ಮುಂದೆ ಯಾರು ಏನು ಹೇಳಿದರೂ ತಾವು ಮಾತ್ರ ಹಾಡುವುದಿಲ್ಲ, ಕನ್ನಡದ ಭಾವಗೀತೆಗಳನ್ನೂ ಹಾಡುವುದಿಲ್ಲ, ಉರ್ದುವಿನ ಗಜಲ್‌ಗಳನ್ನೂ ಹಾಡುವುದಿಲ್ಲ ಅದರ ಬದಲಾಗಿ ಧರ್ಮಬೀರುವೂ ಹಠಮಾರಿಯೂ ಆಗಿರುವ ತಮ್ಮ ತಮ್ಮನ ಮಾತಿನಂತೆ ಕುರಾನು ಓದುತ್ತಾ, ನಮಾಜು ಮಾಡುತ್ತಾ ಮನೆಯಲ್ಲಿ ಸುಮ್ಮನೆ ಇನ್ನು ಮುಂದೆ ಬದುಕು ಸಾಗಿಸುವುದಾಗಿ ನಗುತ್ತಾ ಹೇಳಿದ್ದರು.

ನಾಲಕ್ಕು ವರ್ಷಗಳ ಹಿಂದೆ ಆ ಸಂಜೆ ನಾನೂ ಕೊಂಚ ಹಠಮಾರಿಯಂತೆ ಅವರ ಮುಂದೆ ಕುಳಿತು ಅವರು ಹಾಡಲೇ ಬೇಕೆಂದೂ ಬೇರೆ ಏನು ಹಾಡದಿದ್ದರೂ ಪರವಾಗಿಲ್ಲ, ಬೇಂದ್ರೆಯವರ `ನೋಡಿ ಹೇಳು ಚಂದಿರ’ ಎಂಬ ಹಾಡನ್ನಾದರೂ ಹಾಡಿ, ಇಲ್ಲವಾದರೆ ಕುವೆಂಪು ಅವರ `ಸುಂದರ ದಿನ ಸುಂದರ ವನ’ ಹಾಡನ್ನಾದರೂ ಹಾಡಿ. ನಾಲ್ವರೂ ಸೇರಿ ಒಂದು ಸಲವಾದರೂ ಹಾಡಿ, ಆಮೇಲೆ ಹಾಡುವುದಿಲ್ಲ ಎಂದು ತೀರ್ಮಾನಿಸಿ ಎಂದು ಗೋಗರೆಯುತ್ತಿದ್ದೆ. ಅವರ ತಂದೆ ಅಲಿಮಹಮದ್‌ ಖಾನ್‌ ದುರಾನಿ ಅವರು ಆಗತಾನೇ ಶ್ರೀರಂಗಪಟ್ಟಣದ ಬಳಿ ಇರುವ ತಮ್ಮ ಜಮೀನಿನ ಉಸ್ತುವಾರಿ ನೋಡಿಕೊಂಡು ಮನೆಗೆ ಮರಳಿದ್ದರು. ನಾನು ಗೋಗರೆಯುತ್ತಿರುವುದನ್ನು ಕಂಡು ಅಲಿಮಹಮದ್‌ ಖಾನ್‌ ಅವರ ತಂದೆ ಹೃದಯ ಮರುಕಗೊಂಡು ಅವರು ತಮ್ಮ ದೃಷ್ಟಿಹೀನ ರಾದ ನಾಲ್ವರು ಪುತ್ರಿಯರಿಗೆ ಹಾಡಲು ಹೇಳಿದ್ದರು.

ಆ ಸಂಜೆ ನನಗೆ ಇನ್ನೂ ನೆನಪಿದೆ. ಪರದೆ ಇಳಿಬಿಟ್ಟ ಸಣ್ಣಗಿನ ಬೆಳಕಿನ ಇಂತಹದೇ ಆ ಸಂಜೆ ಆ ನಾಲ್ವರು ಸಹೋದರಿಯರು ಒಂದೇ ದನಿಯಲ್ಲಿ ಒಂದೇ ಮನಸ್ಸಿನಲ್ಲಿ ಒಂದೇ ಆತ್ಮ ಹಾಡುತ್ತಿದೆ ಎನ್ನುವ ಹಾಗೆ ಕನ್ನಡದ ಒಂದೊಂದೇ ಹಾಡುಗಳನ್ನು ಮಗುವನ್ನು ಎತ್ತಿಕೊಳ್ಳುವಂತೆ, ಮಗುವನ್ನು ತೋಳಿನಿಂದ ತೋಳಿಗೆ ಬದಲಿಸುತ್ತಿರುವಂತೆ, ಮಗುವಿನ ಕಣ್ಣುಗಳನ್ನು ಒಬ್ಬೊಬ್ಬರಾಗಿ ದಿಟ್ಟಿಸಿ ನೋಡುತ್ತಿರುವಂತೆ ಹಾಡಿದ್ದರು. ನಾನು ಕಣ್ಣು ತುಂಬಿಕೊಂಡು ಅವರನ್ನು ನೋಡುತ್ತಿದ್ದೆ. ಈ ಹಾಡುಗಳು ಯಾವುದೂ ಅರ್ಥವಾಗದೇ ಹೋಗಿದ್ದಿದ್ದರೆ, ಕಣ್ಣುಗಳು ಮಸುಕಾಗಿರುವ ನನಗೆ ಅವರ ಹಾಡಿನ ಕಣ್ಣುಗಳು ಬಂದಿದ್ದರೆ, ಇವರ ಹಾಗೆ ನಾನೂ ಒಂದು ಕೊಳೆಯಿಲ್ಲದ ಆತ್ಮವಾಗಿ ಎಲ್ಲ ಕಡೆ ಸುಳಿದಾಡುವಂತಿದ್ದರೆ ಎಂದು ಹಂಬಲಿಸಿಕೊಂಡು ಕೂತಿದ್ದೆ. ಅಲಿಮಹಮ್ಮದ್‌ ಖಾನ್‌ ದುರಾನಿಯವರ ಕಣ್ಣು ಕಾಣಿಸದ ನಾಲಕ್ಕು ಪುತ್ರಿಯರಾದ ಖನೀಜ್‌ ಫಾತಿಮಾ, ಫಿರ್ದೌಸ್‌, ಆಯಿಶಾ ಸಿದ್ದಿಕಾ ಹಾಗೂ ಮಾರಿಯಾ ಕುಲ್ಸುಂ ಆವತ್ತು ಅಷ್ಟೊಂದು ಹಾಡಿ ನಗುತ್ತಾ ನನ್ನನ್ನು ಬೀಳು ಕೊಂಡಿದ್ದರು. ಆವತ್ತು ಕತ್ತಲಲ್ಲಿ ವಾಪಸು ಬರುವಾಗ ನನಗೆ ಯಾವು ಯಾವುದೋ ನಕ್ಷತ್ರಗಳು ವಿನಾಕಾರಣ ಗೋಚರಿಸುತ್ತಿದ್ದವು.

ಯಾಕೋ ಗೊತ್ತಿಲ್ಲ. ನಿನ್ನೆ ಸಂಜೆಯಿಂದ ಕಣ್ಣು ತುಂಬಿಕೊಂಡು ಒಬ್ಬನೇ ಹಠಮಾರಿಯಂತೆ ಕುಳಿತಿರುವೆ. ಏನೂ ಬರೆಯುವುದೂ ಬೇಡ ಅನ್ನಿಸುತ್ತಿದೆ. ಈ ನಾಲಕ್ಕು ವರ್ಷಗಳಲ್ಲಿ ಏನೂ ಆಗಿಯೇ ಇಲ್ಲ ಎಂಬಂತೆ ಇದ್ದವನು ನಿನ್ನೆ ಸಂಜೆ ಬರೆಯಬೇಕು ಎಂದು ಸ್ವಾರ್ಥಿಯಂತೆ ಮತ್ತೆ ಅವರ ಬಳಿ ಹೋದವನು ಈ ನಾಲಕ್ಕು ವರ್ಷಗಳಲ್ಲಿ ಏನೇನೆಲ್ಲಾ ನಡೆದಿರುವುದನ್ನು ಕಂಡು ಮೌನವಾಗಿ ಕೂತಿರುವೆ.

ನಿನ್ನೆ ಹೋದಾಗ ಅಲಿಮಹಮದ್‌ ಖಾನ್‌ ದುರಾನಿ ಅವರು ಇರಲಿಲ್ಲ. ಅವರು ಮೂರು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅವರ ಹೆಂಡತಿ ತಮ್ಮ ಕೊನೆಯ ಇಬ್ಬರು ಅಂಧರಾದ ಪುತ್ರಿಯರೊಡನೆ ಪಾಕಿಸ್ಥಾನದ ಕರಾಚಿಗೆ ಹೋಗಿದ್ದರು. ಕರಾಚಿಯ ರೇಡಿಯೋ ಒಂದರಲ್ಲಿ ಕಿಶೋರ್‌ ಕುಮಾರ್‌ ತರಹವೇ ಹಾಡುವ ಬಿಲಾಲ್‌ ಪಟೇಲ್‌ ಎಂಬ ಅಂಧನಾದ, ಸುಂದರನಾದ ಗಾಯಕ ನೊಬ್ಬ ಆಯಿಶಾ ಸಿದ್ದಿಕಾಳ ಧ್ವನಿಗೆ ಮಾರುಹೋಗಿ ಅವಳನ್ನು ವಿವಾಹವಾಗುವೆ ನೆಂದು ಹಠ ಹಿಡಿದಿದ್ದ.

ಅಲಿಮಹಮದ್‌ ಖಾನ್‌ ಅವರ ಹೆಂಡತಿಯ ಐವರು ತಮ್ಮಂದಿರೂ ಭಾರತ ವಿಭಜನೆಯಾದಾಗ ಪಾಕಿಸ್ಥಾನದ ಪಾಲಾಗಿದ್ದರು. ಅವರು ಹಲವು ವರ್ಷಗಳಿಗೊಮ್ಮೆ ತಮ್ಮಂದಿರನ್ನು ಕಾಣುವ ಆಸೆಯಾದಾಗ ಕರಾಚಿಗೆ ಹೋಗಿ ಬರುತ್ತಿದ್ದರು. ಮೂರು ವರ್ಷಗಳ ಹಿಂದೆ ಹೀಗೆ ಈ ತಾಯಿಯೂ ಅವರ ನಾಲ್ವರು ಅಂಧರಾದ ಪುತ್ರಿಯರೂ ಅಲ್ಲಿಗೆ ಹೋದಾಗ ಅಲ್ಲಿ ರೇಡಿಯೋದಲ್ಲಿ ಕಿಶೋರ್‌ ಕುಮಾರ್‌ನ ಹಾಗೆ ಹಾಡುತ್ತಿದ್ದ ಬಿಲಾಲ್‌ ಪಟೇಲ್‌ನ ಎಫ್‌.ಎಂ. ಫೋನ್‌-ಇನ್‌ ಕಾರ್ಯಕ್ರಮವೊಂದರಲ್ಲಿ ಆಯಿಶಾ ಹಾಡು ಹೇಳಿದ್ದಳು. ಆ ಹಾಡಿಗೆ ಮೋಹಗೊಂಡ ಆತ ಆಯಿಶಾಳಿಗೂ ತನ್ನ ಹಾಗೆ ಕಣ್ಣು ಕಾಣಿಸುವುದಿಲ್ಲವೆಂದು ಅರಿವಾದಾಗ ಮದುವೆಯ ಪ್ರಸ್ತಾಪ ಮಾಡಿದ್ದ. ಆ ಪ್ರಸ್ತಾಪದ ಜಾಡು ಹಿಡಿದು ಈಗ ಈ ತಾಯಿ ಆಯಿಶಾಳನ್ನೂ ಅವಳ ತಂಗಿ ಮಾರಿಯಾಳನ್ನೂ ಜೊತೆ ಮಾಡಿಕೊಂಡು ಕರಾಚಿಗೆ ಹೋಗಿದ್ದಾರೆ. ಮದುವೆಯ ಮಾತು ಮುಗಿಸಿ ಇನ್ನು ಕೆಲವು ಸಮಯದಲ್ಲಿ ಮೈಸೂರಿಗೆ ಮರಳುತ್ತಾರೆ.

ನಾನು ನಿನ್ನೆ ಸಂಜೆ ಹೋದಾಗ ಮನೆಯಲ್ಲಿ ಮೌನವನ್ನೇ ಹೊದ್ದಂತೆ ದುಪ್ಪಟ್ಟಾ ಹೊದ್ದು ಕುಳಿತಿದ್ದ ಖನೀಜ್‌ ಫಾತಿಮಾ ಎಂಬ ಹಿರಿಯ ಸಹೋದರಿ ಈ ಕತೆಗಳನ್ನೆಲ್ಲಾ ಹೇಳಿ ಮುಗಿಸಿ `ಅದು ಸರಿ ಈ ನಾಲಕ್ಕು ವರ್ಷಗಳಲ್ಲಿ ನೀನು ಎಲ್ಲಿದ್ದೆ, ಏನು ಮಾಡುತ್ತಿದ್ದೆ?’ ಎಂದು ನನ್ನನ್ನೇ ಗದರಿದ್ದಳು. ನಾನು ನನ್ನ ಅಲೆದಾಟದ, ಏಕಾಂತದ ವರ್ಷಗಳನ್ನು ಅವರಿಗೆ ಹೇಗೆ ಹೇಳುವುದು ಎಂದು ಗೊತ್ತಾಗದೆ `ಅಂದ ಹಾಗೆ ನಿಮ್ಮ ಹೆಸರಿನ ಅರ್ಥ ಏನು?’ ಎಂದು ಕೇಳಿದ್ದೆ. `ಖನೀಜ್‌ ಅಂದರೆ ಗುಲಾಮ ಹೆಂಗಸು ಎಂದು ಅರ್ಥ. ಫಾತಿಮಾ ಎಂಬುವುದು ಪ್ರವಾದಿ ಮಹಮ್ಮದರ ಮಗಳ ಹೆಸರು’ ಎಂದು ಖನೀಜ್‌ ನಕ್ಕರು. ನಾನು ನನ್ನ ಹೆಸರಿನಲ್ಲಿರುವ ಅಬ್ದುಲ್‌ ಎಂದರೆ ಗುಲಾಮ ಎಂದು ಅರ್ಥ, ರಶೀದ್‌ ಎಂದರೆ ಸನ್ಮಾರ್ಗದಲ್ಲಿ ನಡೆಯುವವನು ಎಂದರ್ಥ ಎಂದೆ. ನಮ್ಮಿಬ್ಬರ ಹೆಸರು ಗುಲಾಮ ಗುಲಾಮಿ ಎಂದಿರುವುದು ಕಂಡು ನಾವಿಬ್ಬರೂ ನಕ್ಕೆವು. ಅಷ್ಟು ಹೊತ್ತಿಗೆ ಇಂಗ್ಲಿಷ್‌ ಸಾಹಿತ್ಯದಲ್ಲಿ ಎಂ.ಎ. ಮಾಡಿರುವ ಎರಡನೆಯ ತಂಗಿ ಫಿರ್ದೌಸ್‌ ಬಂದು ಸಲಾಂ ಹೇಳಿ ಕುಳಿತರು. ಫಿರ್ದೌಸ್‌ ಎಂದರೆ ಸ್ವರ್ಗ ಎಂಬ ಸುಂದರವಾದ ಉದ್ಯಾನವನ ಎಂದು ಅರ್ಥ ಎಂದರು. ಅದನ್ನು ಕೇಳಿ ನಾವು ಇನ್ನೂ ನಕ್ಕೆವು.

`ತಂದೆಯವರು ಬದುಕಿರುವವರೆಗೆ ನಮಗೆ ಕಣ್ಣುಗಳು ಕಾಣುವುದಿಲ್ಲ ಎಂದು ಗೊತ್ತೇ ಆಗಿರಲಿಲ್ಲ. ಈ ಎರಡು ಮೂರು ವರ್ಷಗಳಿಂದ ಅದು ಗೊತ್ತಾಗುತ್ತಿದೆ. ಈಗ ನಾನು ಇಂಗ್ಲಿಷ್‌ ಬಾರದವರಿಗೆ ಇಂಗ್ಲಿಷ್‌ ಕಲಿಸುತ್ತಿದ್ದೇನೆ. ಈಗ ನಾವು ಹಾಡಲೂ ರೆಡಿ. ಅಡಿಗೆ ಕೆಲಸ ಮಾಡಲೂ ರೆಡಿ. ಪ್ರತಿಕ್ಷಣವೂ ಹಂಗಿನ ಕ್ಷಣಗಳಂತೆ ಅನ್ನಿಸುತ್ತಿದೆ, ಕಂಪ್ಯೂಟರ್‌ನಲ್ಲಿ ಬ್ರೈಲ್‌ ಕಲಿಯಬೇಕು. ನಮ್ಮ ಹೊಟ್ಟೆಪಾಡು ನಾವು ನೋಡಿಕೊಳ್ಳಬೇಕು. ತಮ್ಮನ ಸಂಸಾರವೂ ದೊಡ್ಡ ದಾಗಿದೆ. ಅವನು ಹೆಚ್ಚು ಹೆಚ್ಚು ಧಾರ್ಮಿಕನಾಗುತ್ತಿದ್ದಾನೆ ಎಂದು ನಿಟ್ಟುಸಿರು ಬಿಟ್ಟರು. ಎಲ್ಲ ಕಿರಿಕಿರಿ ಕೇಳಿ ಕೇಳಿ ಪ್ರಪಂಚವನ್ನು ನೋಡುವುದೇ ಬೇಡ ಅನ್ನಿಸುತ್ತಿದೆ. ತಂದೆ ಇರುವಾಗ ಪ್ರಪಂಚ ಸುಂದರವಾಗಿ ಕಾಣಿಸುತ್ತಿತ್ತು ಎಂದು ಖನೀಜ್‌ ಫಾತಿಮಾ ತಮ್ಮ ಶೂನ್ಯ ಕಣ್ಣುಗಳನ್ನು ತುಂಬಿಕೊಂಡು ಹೇಳಿದರು.

ಈ ಅಂಧ ಸಹೋದರಿಯರ ಹಿರಿಯ ಮುತ್ತಜ್ಜ ಉಮರ್‌ ಖಾನ್‌ ದುರಾನಿ 160 ವರ್ಷಗಳ ಹಿಂದೆ ಮನೆಯಲ್ಲಿ ಜಗಳವಾಡಿಕೊಂಡು ಅಫಘಾನಿಸ್ಥಾನದ ಕಂದಹಾರ್‌ನಿಂದ ಓಡಿಬಂದವರು ಮೈಸೂರಿನ ಹವೆ ಚೆನ್ನಾಗಿದೆಯೆಂದು ಇಲ್ಲೇ ನೆಲೆಸಿ ಬೆಂಕಿನವಾಬ್‌ ರಸ್ತೆಯಲ್ಲಿ ದೊಡ್ಡದಾಗಿ ಮನೆಯೊಂದನ್ನು ಕಟ್ಟಿ ಪಕ್ಕದಲ್ಲೇ ಮಸೀದಿಯೊಂದನ್ನೂ ಕಟ್ಟಿದ್ದರು. ಅವರು ಅರಮನೆಗೆ ವಸ್ತ್ರಗಳನ್ನು ಪೂರೈಸುವ ವ್ಯವಹಾರ ಮಾಡಿಕೊಂಡಿದ್ದರು. ಅವರಿಗೆ ನಾಲಕ್ಕು ಜನ ಗಂಡುಮಕ್ಕಳು. ಅವರಲ್ಲಿ ಎರಡನೆಯವರಾದ ಫತೇಖಾನ್‌ ಅವರ ಏಕೈಕ ಮಗ ಸತ್ತಾರ್‌ ಖಾನ್‌ ದುರಾನಿ ಈ ಅಂಧ ಸಹೋದರಿಯರ ಅಜ್ಜ. ಮೈಸೂರಿನ ಅಠಾರಾ ಕಚೇರಿಯ ನಿರ್ಮಾಣದ ಗುತ್ತಿಗೆ, ಲಲಿತಮಹಲ್‌ ಅರಮನೆಯ ಎದುರಿನ ಉದ್ಯಾನವನದ ಕೆಲಸ , ದೊಡ್ಡಕೆರೆಯ ನೀರು ಖಾಲಿ ಮಾಡಿ ಮೈದಾನವನ್ನಾಗಿ ಮಾಡಿದ ಕೆಲಸ ಎಲ್ಲವನ್ನೂ ಫತೇಖಾನ್‌ ಮತ್ತು ಮಕ್ಕಳು ಕೈಗೊಂಡಿದ್ದರಂತೆ.

ಅಲಿಮಹಮದ್‌ ಖಾನ್‌ ನಾಲಕ್ಕು ವರ್ಷಗಳ ಹಿಂದೆ ಇಂತಹದೇ ಒಂದು ಸಂಜೆ ಈ ಕತೆಗಳನ್ನು ನನಗೆ ಹೇಳಿದ್ದರು. ಆಗ ಅವರ ಮಡದಿಯೂ ಹೊರಬಂದು ಅವರ ವಂಶಸ್ಥರೂ ನಿಜವಾದ ಪಠಾಣರೆಂದೂ ಅಫಘಾನಿ ಸ್ಥಾನದಿಂದ ವಲಸೆ ಬಂದವರೆಂದೂ ಅವರ ಅಜ್ಜ ಸರ್ಫರಾಜ್‌ ಖಾನ್‌ ಎನ್ನುವವರು ಮೈಸೂರಿನಿಂದ ಪಳಗಿಸಿದ ಕಾಡಾನೆಗಳನ್ನು ಹೊರರಾಜ್ಯದ ರಾಜರುಗಳಿಗೆ ರಫ್ತು ಮಾಡುತ್ತಿದ್ದರೆಂದೂ ಒಂದು ಬಾರಿ ವ್ಯಾಪಾರಕ್ಕೆ ಕಳುಹಿಸಿದ ಆನೆಗಳು ಮಾವುತರ ಸಮೇತ ದಾರಿಯಲ್ಲಿ ಎಲ್ಲೋ ದಾರಿತಪ್ಪಿ ಎಲ್ಲಿ ತಲುಪಿದೆವು ಎಂದು ಗೊತ್ತಾಗದೆ ಕಂಗಾಲಾಗಿ ಕುಳಿತಿದ್ದಾಗ ಅವರ ಹೆಂಡತಿ – ತುಂಬಿದ ಗರ್ಭಿಣಿಯಾಗಿದ್ದವರು- ಪ್ರಸವಿಸಿದರೆಂದೂ, ಆ ಮಗಳು ಹುಟ್ಟುವುದೂ ಆನೆಗಳ ಜಾಡು ಪತ್ತೆಯಾಗುವುದೂ ಒಂದೇ ಸಮಯದಲ್ಲಿ ಸಂಭವಿಸಿ ಆ ಸಂಭ್ರಮದಲ್ಲಿ ಹುಟ್ಟಿದ ಮಗುವಿಗೆ ದೌಲತ್‌ ಬೇಗಂ ಅಂತ ಹೆಸರಿಟ್ಟಿದ್ದರೆಂದೂ ಆ ದೌಲತ್‌ ಬೇಗಂಳ ಮಗಳೇ ತಾನೆಂದೂ ಹೆಮ್ಮೆ ಪಟ್ಟುಕೊಂಡಿದ್ದರು. ದೌಲತ್‌ ಬೇಗಂ ಅಂದರೆ ಕನ್ನಡದಲ್ಲಿ ಧನಲಕ್ಷ್ಮೀ ಎಂದು ಅರ್ಥವೆಂದು ಹೇಳಿ ಅಲಿ ಅಹಮದ್‌ ಖಾನ್‌ ಪತ್ನಿಯ ಕಡೆ ನೋಡಿ ತುಂಟತನದಲ್ಲಿ ನಕ್ಕಿದ್ದರು.

ನಿನ್ನೆ ಸಂಜೆ ಶುಕ್ರವಾರ ನಾನು ಅಂಧರಾದ ಆ ಹಿರಿಯ ಅಕ್ಕತಂಗಿಯರ ಜೊತೆ ಬಲು ಹೊತ್ತು ಮಾತಾಡಿ ಅವರು ತಯಾರಿಸಿ ತಂದ ಚಾ ಕುಡಿದು ಪಿಂಗಾಣಿಯ ಆ ಲೋಟವನ್ನು ಬಹಳ ಹೊತ್ತು ನೋಡುತ್ತಾ ಕುಳಿತು, ಅವರು ಪುನಃ ಕನ್ನಡದ ಭಾವಗೀತೆಯನ್ನು ಹಾಡುವುದಾದರೆ ಕನ್ನಡಕ್ಕೆ ಕನ್ನಡನಾಡೇ ಕಿವಿಯಾಗಿ ಕೇಳುವುದೆಂದೂ ಕರಾಚಿಯಿಂದ ಅವರ ತಾಯಿ ಮರಳಿದ ಮೇಲೆ ಪುನಃ ಬರುವೆನೆಂದೂ ಅಲ್ಲಿಯ ವಿಶೇಷಗಳನ್ನು ಕೇಳುವ ಆಸೆ ಇದೆಯೆಂದೂ ಅವಸರ ಅವಸರದಲ್ಲಿ ಹೇಳಿ ಬೆಂಕಿ ನವಾಬ್‌ ರಸ್ತೆಯಲ್ಲಿ ರುವ ನೂರಾ ಅರವತ್ತು ವರ್ಷಗಳಷ್ಟು ಹಳೆಯ ಮನೆಯ ಮೆಟ್ಟಿಲುಗಳನ್ನು ಇಳಿದು ಬಂದಿದ್ದೆ.

ಈಗ ನೋಡಿದರೆ ಯಾರು ಹಾಡುವುದನ್ನು ಯಾರು ಕೇಳುವುದು ಎಂದು ದಿಕ್ಕೆಟ್ಟು ಕುಳಿತಿರುವೆ. ಹೋಳಿ ಹುಣ್ಣಿಮೆಯ ಚಂದಿರ ಅಷ್ಟು ಎತ್ತರ ಬಂದಿದ್ದಾನೆ.

4 thoughts on “ನೋಡು ಬಾ ಚಂದಿರ…”

  1. ರಶೀದ್ ಅವರೆ,

    ಈ ಬೆಂಕಿ ನವಾಬ ಯಾರು? ಅವರಿಗೆ ಈ ಹೆಸರು ಹೇಗೆ ಬಂತು? ನಿಮಗೆ ತಿಳಿದಿದೆಯೆ?

    ನಮ್ಮ ಮನೆಯಲ್ಲಿ ಸ್ವಲ್ಪ ಕೋಪ ಹೆಚ್ಚಿರುವವರನ್ನು ಬೆಂಕಿ ನವಾಬ ಎಂದು ಕರೆಯುತ್ತಾರೆ. ಆದರೆ ಇದುವರೆಗೆ ನನಗೆ ಈ ನವಾಬನ ಇತಿಹಾಸ ತಿಳಿದಿಲ್ಲ.

  2. http://churumuri.wordpress.com/2006/06/16/benki-nawab-one-mans-hero-is-anothers-zero/

    ಬೆಂಕಿ ನವಾಬನ ಕಥೆ ಚುರುಮುರಿಯಲ್ಲೇ ಇದೆ. ಅವನ ಹೆಸರನ್ನು ಗೂಗಲಿಸಿದಾಗ ಸಿಕ್ಕಿತು. ಗಂಡನೇ ಬೆಂಕಿಯೆಂದು ತೋರುತ್ತದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s