ಅರಮನೆ, ಅಕ್ಕಸಾಲಿ ಮತ್ತು ಗುಡಿಸಲುಗಳು

ಶಾಮಾಚಾರಿರವತ್ತು ವರ್ಷಗಳಿಗೂ ಹೆಚ್ಚುಕಾಲ ಅರಮನೆಯಲ್ಲಿ ಅಕ್ಕಸಾಲಿಗಳಾಗಿದ್ದ ಶಿರ್ವ ಮಂಚಕಲ್ಲಿನ ಶಾಮಾಚಾರಿಗಳು ನನ್ನ ಕನ್ನಡಕವನ್ನು ಕೇಳಿ ಪಡೆದು ತಮ್ಮ ನಿತ್ರಾಣವಾಗಿದ್ದ ಕಣ್ಣುಗಳಿಗೆ ಏರಿಸಿಕೊಂಡು ತಮ್ಮ ಬಲಗೈಯ ಹಸ್ತರೇಖೆ ಗಳನ್ನು ನೋಡಿ ಹಸ್ತರೇಖೆಗಳು ಕಾಣಿಸದೆ ಕಂಗಾಲಾಗಿ ನನ್ನ ಕನ್ನಡಕವನ್ನು ಮರಳಿ ನನಗೇ ಹಿಂದಿರುಗಿಸಿ ನಿಟ್ಟುಸಿರುಬಿಟ್ಟರು.
ನನ್ನ ಕನ್ನಡಕ ಬಿಸಿಲಿನ ಝಳಕ್ಕೆ ಹಾಕುವ ಕಪ್ಪು ಕನ್ನಡಕವೆಂದೂ ಅದರಲ್ಲಿ ಕಾಣದ ಏನೂ ಕಾಣುವುದಿಲ್ಲವೆಂದೂ ಅವರಿಗೆ ಹಸ್ತರೇಖೆಗಳನ್ನು ನೋಡಲು ಒಂದು ಭೂತ ಕನ್ನಡಕವನ್ನು ತಂದುಕೊಡುವೆನೆಂದೂ ಆದರೆ ಅದಕ್ಕೂ ಮೊದಲು ಅವರು ತಮ್ಮ ಅರವತ್ತು ವರ್ಷಗಳ ಕಾಲದ ಅರಮನೆಯ ಅಕ್ಕಸಾಲಿಗನ ಬದುಕನ್ನು ಕತೆ ಹೇಳುವಂತೆ ನನಗೆ ಹೇಳಬೇಕೆಂದೂ ನಾನು ಅವರಲ್ಲಿ ತುಳು ಭಾಷೆಯಲ್ಲಿ ಕೇಳಿಕೊಂಡೆ.

ಅದಕ್ಕೆ ಅವರು ನಗಾಡಿದರು. ಆಮೇಲೆ ಕನ್ನಡ ಭಾಷೆಯಲ್ಲಿ `ಸತ್ತವನ ತಿಕ ಅತ್ತ ತಿರುಗಿದ್ದರೇನು ಇತ್ತ ತಿರುಗಿದರೇನು? ಅದು ಎತ್ತ ಕಡೆ ತಿರುಗಿದರೂ ಸತ್ತವನಿಗೆ ಆಗಬೇಕಾದದ್ದೇನು? ಅಕ್ಕಸಾಲಿಗನೂ ಇಲ್ಲ. ಅರಮನೆಯೂ ಇಲ್ಲ. ಬದುಕಿನ ಕಥೆಯೂ ಇಲ್ಲ. ಮಹಾಭಾರತ ರಾಮಾಯಣವೂ ಇಲ್ಲ. ನೀನು ಅರಮನೆಗೆ ಬಂದ ಕೆಲಸವನ್ನು ಮುಗಿಸಿ ನಿನ್ನ ಪಾಡಿಗೆ ಸುಮ್ಮನೆ ಹೋಗು. ನನ್ನ ಜೊತೆ ಮಾತನಾಡಬೇಡ. ನನ್ನ ವಿಷಯ ಯಾರಿಗೂ ಹೇಳುವುದೂ ಬೇಡ. ಮಾನವ ಜನ್ಮವನ್ನು ಎತ್ತಿರುವ ಮೂಕಪ್ರಾಣಿಯಾದ ನನ್ನ ಪ್ರಾಚೀನ ಕರ್ಮವನ್ನು ನಾಗ ಕುಂಡಲನೇ ಪರಿಹರಿಸಬೇಕಲ್ಲದೆ ಇನ್ನು ಯಾರಿಗೂ ಏನೂ ಆಗುವುದಿಲ್ಲ. ನೀನು ಹೋಗಬಹುದು ಎಂದು ಕೈ ಮುಗಿದು ನನ್ನನ್ನು ಒತ್ತಾಯಪೂರ್ವಕವಾಗಿ ಹೊರಟು ಹೋಗುವಂತೆ ಕೇಳಿಕೊಂಡರು.

ನಾನು ಜೀವನದಲ್ಲೇ ಮೊದಲ ಬಾರಿಗೆ ತಿರಸ್ಕೃತಗೊಂಡವನಂತೆ ಅವರನ್ನೇ ನೋಡುತ್ತಿದ್ದೆ. ಆಮೇಲೆ `ಬನ್ನಿ ಚಾ ಕುಡಿಯುವಾ’ ಎಂದು ಅವರಿಗೆ ಪೂಸಿ ಹೊಡೆದೆ. ಆಮೇಲೆ `ಹೋಗಲಿ ಬಿಡಿ ನೀವು ಹೇಳಿದ ಹಾಗೆ ಮಾನವನ ಸರ್ವಕಷ್ಟ ಸರ್ವವ್ಯಾಧಿ ಸರ್ವನಷ್ಟ -ಸರ್ವ ಬಂಧನ- ಇವುಗಳಿಗೆ ಪರಿಹಾರ ಏನು? ಮಾನವನಿಗೆ ಮುಕ್ತಿ ಸಿಗುವ ದಾರಿ ಯಾವುದು ಅದನ್ನಾದರೂ ಹೇಳಿ ಎಂದು ಇನ್ನಷ್ಟು ಪೂಸಿ ಹೊಡೆದೆ. ಅದಕ್ಕೆ ಅವರು ಅಷ್ಟೆಲ್ಲ ನೋವಿನ ನಡುವೆಯೂ ಮಗುವಿನಂತೆ ನಗುತ್ತಾ `ಮುಕ್ತಿಯೂ ಇಲ್ಲ. ಮುಲ್ಕಿಯೂ ಇಲ್ಲ ಮೂಡಬಿದ್ರೆಯೂ ಇಲ್ಲ ನೀನು ದಯವಿಟ್ಟು ಹೋಗು’ ಎಂದು ಕೈಮುಗಿದರು.

ಶಾಮಾಚಾರಿಗಳು ಹನ್ನೆರಡು ವರ್ಷಗಳ ಬಾಲಕನಾಗಿರುವಾಗ ಹಸಿವು ತಾಳಲಾಗದೆ ಮಂಗಳೂರಿನಿಂದ ಮಾಡರ್ನ್‌ ಬಸ್ಸು ಹತ್ತಿ ಅರಸರ ಮೈಸೂರಿಗೆ ಬಂದವರು ಈಗ ಅರಸೊತ್ತಿಗೆಯಿಲ್ಲದ ಅರಮನೆಯ ಒಂದು ಮೂಲೆಯ ಮೆಟ್ಟಿಲೊಂದರ ಕೆಳಗಿನ ಸಂದಿನಂತಿರುವ ಕೋಣೆಯೊಂದರಲ್ಲಿ ಸಂದಿವಾತ ಪೀಡಿತರಾಗಿ ತಮ್ಮ ಕೊನೆಯ ದಿನಗಳನ್ನು ಕಳೆಯುತ್ತಿದ್ದಾರೆ. ಅರಮನೆಯ ಆಭರಣಗಳಿಗೆ ಹೊಳಪು ಬರಿಸಿ ಬರಿಸಿ ಅವರ ಕಣ್ಣುಗಳು ಈಗಲೂ ಹೊಳೆಯುತ್ತಿರುವಂತೆ ಕಾಣಿಸುತ್ತಿವೆ. ತಮ್ಮ ಯೌವನದಲ್ಲಿ ಅವರು ಬಲು ಸುಂದರವಾಗಿ ದ್ದರು ಅನ್ನುವುದು ಅವರನ್ನು ಈಗ ನೋಡಿದರೂ ಯಾರಿಗಾದರೂ ಗೋಚರಿಸುತ್ತವೆ. ಆ ಕೋಣೆಯಲ್ಲಿ ಆಭರಣಗಳಿಗೆ ಹೊಳಪು ಕೊಡುವ, ಚಿನ್ನಕ್ಕೆ ಹೊಡೆ ಕೊಡುವ, ಒಪ್ಪ ಓರಣಗೊಳಿಸುವ ಉಪಕರಣ, ಹತ್ಯಾರುಗಳು ಎಷ್ಟೋವರ್ಷ ಗಳಿಂದ ವಿರಾಮ ಪಡೆಯುತ್ತಿರುವಂತೆ ಬಿದ್ದಿವೆ. ಗೋಡೆಯಲ್ಲಿ ಶಾಮಾಚಾರಿ ಗಳು ಬಂದ ಹೊಸತರಲ್ಲಿ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಚಿತ್ರವಿದೆ. ಜೊತೆಯಲ್ಲಿ ಶಂಕರಾಚಾರ್ಯರು ತಮ್ಮ ಶಿಷ್ಯರೊಂದಿಗೆ ಕುಳಿತಿರುವ ಚಿತ್ರ, ಸಿದ್ಧಾರೂಡರ ಚಿತ್ರ, ಚಾಮುಂಡೇಶ್ವರಿ, ಕಾಳಿಕಾಂಬಾ ಭದ್ರಕಾಳಿ ನಾಗಲಿಂಗೇಶ್ವರರ ಪಟಗಳಿವೆ. ಮೂಲೆಯಲ್ಲಿ ವೃತ್ತಪತ್ರಿಕೆಯಿಂದ ಕತ್ತರಿಸಿ ತೆಗೆದು ಫ್ರೇಂ ಹಾಕಿ ಇಟ್ಟಿರುವ ಬಾಲ ಯೇಸುವಿನ ಚಿತ್ರ. ಇನ್ನೂ ಮೂಲೆಯಲ್ಲಿ ಮಸುಕು ಮಸುಕಾಗಿ ಅವರ ತೀರಿಹೋದ ಹೆಂಡತಿ ರಾಜೀವಿಯವರ ಕಪ್ಪುಬಿಳುಪು ಚಿತ್ರ ಮೋರೆಯ ತುಂಬ ಕುಂಕುಮ ಬಳಿದುಕೊಂಡು ಗೋಡೆಯಲ್ಲಿ ನೇತಾಡುತ್ತಿತ್ತು.

ಶಾಮಾಚಾರಿಗಳು ಬೇಕು ಬೇಕೆಂದೇ ಎಲ್ಲ ನೆನಪುಗಳನ್ನು ಮರೆತವರ ಹಾಗೆ ಮುಖವನ್ನು ಹಠ ಮಾಡಿಕೊಂಡು ಈ ಕೋಣೆಯಲ್ಲಿ ಸುಮ್ಮನೆ ಕೂತಿರುತ್ತಾರೆ. ಈ ಇಳಿವಯಸ್ಸಿನಲ್ಲಿ ಅರಮನೆಯೇ ಅವರನ್ನು ಅಕ್ಕರೆ ಯಿಂದ ನೋಡಿಕೊಳ್ಳುತ್ತಿದೆ. ಎಲ್ಲರೂ ಅವರನ್ನು ಹಿರಿಯರೆಂದು ಗೌರವಿಸು ತ್ತಾರೆ. ಆದರೆ ಶಾಮಾಚಾರಿಗಳು ಮಾತ್ರ ಏನೋ ಮಹಾ `ರಾಜರಹಸ್ಯ’ವನ್ನು ತಮ್ಮೊಳಗೆ ಹುದುಗಿಸಿಟ್ಟುಕೊಂಡವರಂತೆ ಏನೂ ಹೇಳದೆ ಸುಮ್ಮನೆ ಕುಳಿತಿರುತ್ತಾರೆ.

ಇತ್ತೀಚೆಗೆ ಅವರು ಕೊನೆಯ ಸಲ ಎಂಬಂತೆ ಸಂಬಂಧಿಕರ ಕಾರು ಹತ್ತಿ ಊರಿಗೆ ಹೋಗಿ ಊರಲ್ಲಿದ್ದ ಮನೆಯನ್ನು ಮಡದಿ ರಾಜೀವಿ ಅವರ ತಮ್ಮನದೋ ಅಣ್ಣನದೋ ಮಗನ ಹೆಸರಿಗೆ ನೋಂದಾಯಿಸಿ ಬಂದು ಉಸ್ಸೆಂದು ಕುಳಿತು ಕೊಂಡಿದ್ದಾರೆ. ಹಾಗೆ ನೋಡಿದರೆ ನಾನು ಕೇಳುವುದಕ್ಕಿಂತ ಬಹಳ ಕಾಲದ ಹಿಂದೆಯೇ ಅವರು ತಮ್ಮ ಜನನ ಬಾಲ್ಯ ಯೌವನ ಸಂಸಾರ ಕರ್ಮ ಎಲ್ಲವನ್ನೂ ಕಥೆಯ ಹಾಗೆ ಎಲ್ಲೋ ಒಂದು ಕಡೆ ಬರೆದಿಟ್ಟಿದ್ದಾರೆ. ಆದರೆ ಚೂರು ಚಿಂದಿ ಯಾಗಿ ಹೋಗಿ ಎಲ್ಲೋ ಹಾಳಾಗಿದೆ. ಶಾಮಾಚಾರಿಗಳ ಮುಖಭಾವವನ್ನು ನೋಡಿದರೆ ಅವರೇ ಅದನ್ನು ಹರಿದು ಹಾಳುಮಾಡಿ ಗುಡಿಸಿ ಬಿಸಾಕಿದ ಹಾಗಿದೆ.

`ಪೂರ್ವಜನ್ಮದ ಕರ್ಮ ವ್ಯಾಧಿರೂಪೇನ’ ಎಂದು ಶಾಮಾಚಾರಿಗಳು ಆಗಾಗ ಗುಣಗುಣಿಸುತ್ತಿರುತ್ತಾರೆ. ಅಂದರೆ ಪ್ರಾಚೀನ ಕರ್ಮ ಕಾಯಿಲೆಗಳ ರೂಪದಲ್ಲಿ ಬರುತ್ತದೆ ಎಂದು ಅರ್ಥವಂತೆ. ಅರಮನೆಯ ಊಳಿಗದ ಹುಡುಗನೊಬ್ಬ ನನಗೆ ಅದನ್ನು ವಿವರಿಸಿ ಹೇಳುವುದರಲ್ಲಿದ್ದ. ನಾನು ಅವನಿಂದ ಬಚಾವಾಗಿ ಹೊರಗೆ ಬಂದೆ. ಹೊರಗೆ ನೂರಾರು ಪ್ರವಾಸಿಗರು ಉರುಳುಸೇವೆಗೈಯುತ್ತಿರುವಂತೆ ಅರಮನೆಯನ್ನು ಸುತ್ತು ಹಾಕುತ್ತಿದ್ದರು. ಅರಮನೆಯ ಎರಡು ಪ್ರಾಚೀನ ಒಂಟೆಗಳು ಶತಮಾನಗಳಿಂದ ಮೆಲುಕು ಹಾಕುತ್ತಿರುವಂತೆ ಅರಮನೆಯ ಹುಲ್ಲುಹಾಸಿನ ಮೇಲೆ ಮೆಲಕು ಹಾಕುತ್ತಿದ್ದವು. ನಾನು `ಸತ್ತವನ ತಿಕ ಅತ್ತ ಆದರೆ ಏನು ಇತ್ತ ಆದರೆ ಏನು’ ಎಂಬ ಶಾಮಾಚಾರಿಗಳ ಸಾಲನ್ನು ಉರುಹೊಡೆಯುತ್ತಾ ಬೈಕು ಓಡಿಸುತ್ತಾ ಏಕಲವ್ಯ ನಗರದ ಕಡೆ ಹೊರಟೆ.

ವರಗರಾಜು ಮತ್ತು ಶಶಿಕಲಾಏಕಲವ್ಯ ನಗರ ಅನ್ನುವುದು ಎಲ್ಲರೂ ತಿಳಿದಿರುವ ಹಾಗೆ ಮೈಸೂರು ನಗರದ ಒಂದು ವಿಶಿಷ್ಟ ಕೊಳೆಗೇರಿ. ಇಲ್ಲಿರುವ ಬಹುತೇಕ ಮಂದಿ ಅಭಿಜಾತ ಅಲೆಮಾರಿ ಕಲಾವಿದರಾಗಿರುವುದರಿಂದ ಇದನ್ನು ಪ್ರಗತಿಪರರಾದ ನಾವು ಕಲಾವಿದರ ಕೊಳೆಗೇರಿ ನಗರಿ ಎಂದು ಕರೆಯುತ್ತೇವೆ. ನಿನ್ನೆ ಸಂಜೆ ಈ ಕೊಳೆಗೇರಿಯಲ್ಲಿ ಒಂದು ಸರಳ ವಿವಾಹವಿತ್ತು. ಆ ವಿವಾಹದ ಛಾಯಾಚಿತ್ರಗಳನ್ನು ತೆಗೆಯ ಬೇಕೆಂದೂ ನೂತನ ವಧೂವರರಿಗೆ ವಿವಾಹ ಸಂಹಿತೆಯನ್ನು ಭೋದಿಸ ಬೇಕೆಂದೂ ಕರೆದಿದ್ದರು. ವಿವಾಹ ಸಂಹಿತೆಯನ್ನು ಭೋದಿಸುವ ಕೆಲಸ ಬಹಳ ಗಹನವಾಗಿರುವುದರಿಂದ ಅದನ್ನು ಹಿರಿಯರು ನೆರವೇರಿಸಲಿ, ನಾನು ಬೇಕಾದರೆ ಮದುವೆಯ ಛಾಯಾಚಿತ್ರಗಳನ್ನು ತೆಗೆಯುತ್ತೇನೆಂದು ಹೊರಟಿದ್ದೆ.

ಏಕಲವ್ಯನಗರದ ದೊಂಬಿದಾಸ ಜನಾಂಗಕ್ಕೆ ಸೇರಿದ ಗಾರೆ ಕೆಲಸ ಮಾಡುತ್ತಿ ರುವ ವರದರಾಜ ಎಂಬ ಸುಂದರನಾಗಿರುವ ಯುವಕನೂ ಎನ್‌. ಶಶಿಕಲಾ ಎಂಬ ಮೇಲ್ವರ್ಗ ಜಾತಿಗೆ ಸೇರಿದ ಆದರೆ ಜೀತ ಮಾಡುತ್ತಿದ್ದ ಸುಕೋಮಲೆ ಯಾದ ಹುಡುಗಿಯೂ ಕಣ್ಣು ಪಿಳಿ ಪಿಳಿ ಬಿಟ್ಟುಕೊಂಡು ಸರಳವಾಗಿ ಮದುವೆ ಮಾಡಿಸಿಕೊಳ್ಳುತ್ತಾ ಚಡಪಡಿಸುತ್ತಾ ಕುಳಿತಿದ್ದರು.

ಕೊಳಗೇರಿಯ ನೂರಾರು ಹೆಂಗಸರು, ಮಕ್ಕಳು, ಗಂಡಸರು ಮೈಯೆಲ್ಲಾ ಧೂಳು ಮೆತ್ತಿಕೊಂಡು ಆ ಗೋಧೂಳಿ ಮುಹೂರ್ತದಲ್ಲಿ ಸೂರ್ಯನ ಕಂತುವ ಕಿರಣಗಳಿಗೆ ಸಿಕ್ಕಿ ಹೊಳೆಯುತ್ತಾ ಎಲ್ಲದಕ್ಕೂ ಸಾಕ್ಷಿಯಾಗಿದ್ದರು. ಪ್ರಗತಿಪರರಾದ   maduveyalli natalia ನಾವೂ, ಇಂಗ್ಲೆಂಡಿನಿಂದ ಬಂದಿದ್ದ ಶೇನ್‌ ಎಂಬ ಯುವಕ, ನತಾಲಿಯಾ ಎಂಬ ಜಡೆಕಟ್ಟಿಕೊಂಡ ಜಡೆಗಳ ಆತನ ಸುಂದರಿಯಾದ ಗೆಳತಿ ಎಲ್ಲರೂ ಈ ಸರಳ ಮದುವೆಯಲ್ಲಿ ಲವಲವಿಕೆಯಲ್ಲಿ ಓಡಾಡುತ್ತ ಕತ್ತಲಾಗಿ ಬಿಟ್ಟಿತ್ತು.
ಆ ಕತ್ತಲಲ್ಲಿ ವರದರಾಜನ ತಾಯಿ ಶಾಂತಮ್ಮ, ಸೊಸೆ ಶಶಿಕಲಾಳನ್ನು ಮನೆ ತುಂಬಿಸಿಕೊಳ್ಳಲು ತನ್ನ ಗುಡಿಸಲಿನಲ್ಲಿ ಸೇರಿಗೆ ಅಕ್ಕಿ ತುಂಬಿಕೊಂಡು ಕಾಯುತ್ತಿ ದ್ದಳು. ಆ ಕತ್ತಲಲ್ಲಿ ಅಕ್ಕಿ ತುಂಬಿದ ಆ ಸೇರನ್ನು ತನ್ನ ಬಲಗಾಲಿನಿಂದ ಒದ್ದು ಬೀಳಿಸಿ ಶಶಿಕಲಾ ಆ ಗುಡಿಸಲನ್ನು ಪ್ರವೇಶಿಸಬೇಕಿತ್ತು. ಆಕೆ ಪತಿಯ ಮನೆಯನ್ನು ಪ್ರವೇಶಿಸುವ ಆ ಅಮೂಲ್ಯ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ನಾನು ಆ ಕತ್ತಲಲ್ಲಿ ಗುಡಿಸಲುಗಳ ನಡುವೆ ದಾರಿ ಮಾಡಿಕೊಂಡು ತಡಕಾಡುತ್ತಾ ಹೆಜ್ಜೆ ಹಾಕುತ್ತಿದ್ದೆ. ಯಾವಾಗಲೂ ಇಂತಹ ಅಮೂಲ್ಯ ಕ್ಷಣಗಳಲ್ಲಿ ಆಗುವ ಹಾಗೆ ಅಸಾಧ್ಯ ತಲೆಶೂಲೆ ನನ್ನ ಮಿದುಳನ್ನು ಪ್ರವೇಶಿಸಿ ದಿಕ್ಕೇ ತೋಚದಂತೆ ನಡೆಯುತ್ತಿದ್ದೆ.

ಶಾಂತಮ್ಮನ ಗುಡಿಸಲಿನ ಮುಂದೆ ಮುದುಕನೊಬ್ಬ ನನ್ನ ತಲೆಶೂಲೆಯ ತಲೆಯೇ ಕಿವಿ ಮುಚ್ಚಿಕೊಳ್ಳುವ ಹಾಗೆ ಅವಾಚ್ಯ ಶಬ್ದಗಳಿಂದ ಈ ನವ ವಧೂವರರಿಗೂ ಅವರನ್ನು ಮದುವೆ ಮಾಡಿಸಿದ ಪ್ರಗತಿಪರರಾದ ನಮಗೂ ತಾರಾಮಾರಾ ಬಯ್ಯುತ್ತಾ ಆಗಾಗ ಮುನ್ನುಗ್ಗುತ್ತಾ ಕೊಂಚ ಹಿಂದೆ ಸರಿಯುತ್ತಾ ಗಂಡುಹೆಣ್ಣು ಗಳ ಗುಪ್ತಾಂಗಗಳ ಹೆಸರು ಹೇಳುತ್ತ ನಮಗೆ ಶಾಪ ಹಾಕುತ್ತಾ ಅಳುತ್ತಿದ್ದ.

ವಿವಾಹವೆಂಬ ಇಂತಹ ಅಮೂಲ್ಯ ಕ್ಷಣಗಳಲ್ಲಿ ತನ್ನ ಅವಾಚ್ಯ ಶಬ್ದಗಳಿಂದ ವಾತಾವರಣವನ್ನು ಮಾಲಿನ್ಯಗೊಳಿಸುತ್ತಿರುವ ಆ ಮುದುಕ ಮದುವೆ ಹುಡುಗನ ಅಪ್ಪ ಎಂದು ಗೊತ್ತಿಲ್ಲದೆ ನಾನು ಅವನಿಗೆ ಗದರಿ ಬಿಟ್ಟೆ. ಗೊತ್ತಾದ ಮೇಲೆ ಗದರಬಾರದಿತ್ತು ಎಂದು ಅನಿಸಿ ಪೆಚ್ಚಾದೆ.

ಶಾಂತಮ್ಮ ಎನ್ನುವ ಆ ತಾಯಿ ಜೀತದ ಹುಡುಗಿ ಶಶಿಕಲಾಳನ್ನು ಸೊಸೆಯನ್ನಾಗಿ ತನ್ನ ಗುಡಿಸಲೊಳಗೆ ಬರಮಾಡಿಕೊಳ್ಳುತ್ತಿದ್ದಳು. ಮೇಲು ಜಾತಿಗೆ ಸೇರಿದ ಆ ಹುಡುಗಿಯ ತಂದೆ ಆ ಹುಡುಗಿಯನ್ನು ಆಡನ್ನು ಮಾರುವ ಹಾಗೆ, ಆಭರಣವನ್ನು ಅಡವಿಡುವ ಹಾಗೆ ಅಲ್ಲಲಿ್ಲ ಮಾರಿ, ಅಲ್ಲಲ್ಲಿ ಅಡವಿಟ್ಟು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಬೀದಿಯಲ್ಲಿ ಅಳುತ್ತಾ ಕುಂತಿದ್ದ ಆ ಜೀತದ ಹುಡುಗಿಯನ್ನು ಶಾಂತಮ್ಮ ತಾನಾಗಿಯೇ ರಕ್ಷಿಸಿ ಸೊಸೆಯನ್ನಾಗಿ ಮಾಡಿಕೊಳ್ಳುತ್ತಿದ್ದಳು. ಆ ಗುಡಿಸಲು ಆ ಹೊತ್ತಿನಲ್ಲಿ ಯಾವ ಅರಮನೆಗೂ ಕಡಿಮೆ ಇಲ್ಲವೆನ್ನುವಂತೆ ಅಪೂರ್ವ ವಾಗಿ ಬೆಳಗುತ್ತಿತ್ತು. ಹೊರಗಡೆ ಹೆತ್ತ ತಂದೆ ಸಂಕಟದಲ್ಲಿ ಬೈಯುತ್ತಲೇ ಇದ್ದ. ಮಗ ವರದರಾಜು ತನ್ನ ಪಕ್ಕದಲ್ಲಿರುವ ವಧುವನ್ನೂ ಎದುರಿಗಿರುವ ಅನಂತ ಜೀವನವನ್ನೂ ನೆನೆದುಕೊಂಡು ಸುಮ್ಮನೆ ಕೂತಿದ್ದ.

ನಾನು ಅಲ್ಲಿಂದ ಹೊರಟು ಪಕ್ಕದಲ್ಲಿರುವ ಬುಟ್ಟಿಕೊರಚರ ಗುಡಿಸಲು ಗಳತ್ತ ಬಂದೆ. ಅಲ್ಲೂ ಸದ್ಯದಲ್ಲಿ ಒಂದು ವಿವಾಹ ನಡೆಯುವುದಿತ್ತು. ಅದರ ಏರ್ಪಾಡುಗಳು ಹೇಗೆ ನಡೆಯುತ್ತಿವೆ ಎಂದು ತಿಳಿಯಬೇಕಿತ್ತು. ಅದಕ್ಕಾಗಿ ಅತ್ತಕಡೆ ಹೆಜ್ಜೆ ಹಾಕತೊಡಗಿದೆ. ಆ ಮುದುಕ ಹಿಂದಿನಿಂದ ಬೈಯುತ್ತಲೇ ಇದ್ದ.

Advertisements