ಅಂಬೇವಾಡ ಎಂಬುವುದು ಈ ಊರಿನ ಹೆಸರಾ……

ಈಗ ಯಾಕೋ ಈ ಊರಿನ ಕುರಿತು ಬರೆಯಬೇಕೆನಿಸುತ್ತಿದೆ. ಈ ಊರಿನ ಹೆಸರು ಅಂಬೇವಾಡ. ಗುಲ್ಬರ್ಗಾ ಜಿಲ್ಲೆಯ ಆಳಂದಾ ತಾಲ್ಲೂಕಿನ ಸರಸಂಬಾ ಎಂಬ ಊರಿಂದ ಎಡಕ್ಕೆ ತಿರುಗಿದರೆ ಈ ಊರು ಬರುತ್ತದೆ.ನಾನು ಒಬ್ಬನೇ ನಡುಹಗಲು ಬೈಕು ಹತ್ತಿಕೊಂಡು ಕಂಡವರ ಬಳಿಯೆಲ್ಲ ದಾರಿ ಕೇಳುವ ನೆಪದಲ್ಲಿ ಮಾತನಾಡಿಸುತ್ತಾ, ಕತ್ತಲಲ್ಲಿ ಬೆಳಕಿಗೆ ಹುಡುಕುವವನಂತೆ ಸಿಗರೇಟು ಹತ್ತಿಸಲು ಬೆಂಕಿ ಕಡ್ಡಿ ಬೇಡುತ್ತಾ ಇನ್ನೂ ಅಂಬೇವಾಡ ತಲುಪಿರಲಿಲ್ಲ.

ದಾರಿಯಲ್ಲಿ ಗಾಣಗಾಪುರದ ಧತ್ತ ಕ್ಷೇತ್ರಕ್ಕೆ ಚಕ್ಕಡಿ ಹತ್ತಿ ಹೊರಟವರೊಂದಿಗೆ ಹರಟೆ ಹೊಡೆದಿದ್ದೆ.ಇನ್ನೊಂದು ಕಡೆ ರಸ್ತೆ ಬಿಟ್ಟು ಮೆಲಿ ದೂರ ಮಣ್ಣದಾರಿಯಲ್ಲಿ ಹೋಗಿ ಪಾಳು ಬಿದ್ದ ಸೂಫಿ ಸಂತನೊಬ್ಬನ ಗೋರಿಯೊಂದರ ಮುಂದೆ ಹುಚ್ಚುವಾಸಿಯಾಗಲು ಕಾಯುತ್ತಿದ್ದವರ ನಡುವಲ್ಲಿ ಹುಚ್ಚನಂತೆ ಕುಳಿತಿದ್ದೆ.ಅವರೆಲ್ಲರೂ ಯಾವಾಗಲೋ ಬರಬಹುದಾದ ಹುಚ್ಚು ಬಿಡಿಸುವ ಸಂತನೊಬ್ಬನ ಇಪ್ಪತ್ತನೇಯ ಪೀಳಿಗೆಯ ವಂಶಸ್ತ ಪೀರ್ಜಾದೆಯೊಬ್ಬನಿಗಾಗಿ ಕಾಯುತ್ತಾ ಕುಳಿತಿದ್ದರು.ಆತ ಆಗಮಿಸುವುದೂ ಇವರ ಹುಚ್ಚು ಬಿಡುವುದೂ ಎರಡೂ ಒಂದೇ ಅನಿಸಿ ಅಲ್ಲಿಂದ ಜಾಗ ಖಾಲಿ ಮಾಡಲು ಹೋದರೆ ಅವರಲ್ಲೇ ಪರವಾಗಿಲ್ಲ ಅನ್ನ ಬಹುದಾದ ಹುಚ್ಚನೊಬ್ಬ ಎಂಟು ನೂರಕ್ಕೂ ವರುಷಗಳಷ್ಟು ಹಳೆಯದಾದ ಈ ಹುಚ್ಚುಬಿಡಿಸುವ ಸೂಫಿ ಸಂತನ ಕತೆ ಹೇಳಲು ಶುರುಮಾಡಿ ಆಮೇಲೆ ಹೇಗೆ ಮುಗಿಸುವುದು ಎಂದು ಗೊತ್ತಾಗದೆ ತಾನೇ ಕಕ್ಕಾವಿಕ್ಕಿಯಾಗಿ ನನಗೆ ನಗುಬರುವಂತೆ ಮಾಡಿದ್ದ.

ಅಲ್ಲಿಂದ ಮಣ್ಣದಾರಿಯಲ್ಲೇ ತಿರುಗಿಬಂದು ಆಳಂದ ಎಂಬ ಊರು ಹೊಕ್ಕುವಮೊದಲೇ ಅಲ್ಲಿ ಲಾಡ್ಲೆ ಮಷಾ ಎಂಬ ಇನ್ನೊಬ್ಬರು ಸೂಫಿ ಸಂತರ ದರ್ಗಾದೊಳಕ್ಕೆ ಹೊಕ್ಕಿ ಬಿಟ್ಟಿದ್ದೆ.ಅಲ್ಲಿಯಾದರೋ ತಲೆ ತಿರುಗುವಂತೆ ಧೂಪ ಕರ್ಪೂರ ಸಾಂಬ್ರಾಣಿ ಹೊಗೆಯ ಜೊತೆಯಲ್ಲೇ ಹರಕೆಗೆ ಕಡಿದ ಆಡುಗಳ ಬಿರಿಯಾನಿಯ ಪರಿಮಳ. ಕಡಿದ ಕುರಿಗಳ ತಲೆಯನ್ನು ತಟ್ಟೆಯಲ್ಲಿಟ್ಟುಕೊಂಡು ಉಘೇ ಎನ್ನುತ್ತ ಮೆರವಣಿಗೆ ಹೊರಟ ಮಂದಿ, ಸಂತನನ್ನು ನೆನೆಯುತ್ತ ನೆಲದಲ್ಲಿ ಉರುಳು ಸೇವೆ ಹೊಡೆಯುತ್ತಿರುವ ಹಣೆ ತುಂಬ ಡಾಳಾಗಿ ಕುಂಕುಮ ಹಚ್ಚಿಕೊಂಡು ಒದ್ದೆಬಟ್ಟೆಯಲ್ಲಿರುವ ಹೆಂಗಸರು ಮುದುಕಿಯರು.
ಒಬ್ಬಾತನಂತೂ ಕಡಿದ ಹರಕೆಯ ಕುರಿಯೊಂದರ ನೆತ್ತರು ತೊಟ್ಟಿಕ್ಕುವ ದೇಹವನ್ನು ಗೋಣಿಯೊಂದರಲ್ಲಿ ಸುತ್ತಿಕೊಂಡು ಆ ಗೋಣಿಯನ್ನು ಸೆಕಲ್ಲಿನ ಬಾರಿಗೆ ನೇತು ಹಾಕಿಕೊಂಡು ಸೆಕಲ್ಲಿಗೆ ಧ್ವನಿವರ್ಧಕವೊಂದನ್ನು ಆಳವಡಿಸಿ ಹಾಡು ಹಾಕಿಕೊಂಡು ಊರಿಗೆ ಹೊರಟಿದ್ದ.ಇದು ಆತನ ಸೇವೆಯಂತೆ.ದಾರಿಯುದ್ದಕ್ಕು ಆತನ ಕಾಲ ಬಳಿ ಕುರಿಯ ನೆತ್ತರು ಮತ್ತು ನೊಣಗಳು. ನಾನಾದರೋ ಹದಿಮೂರನೆಯ ಶತಮಾನದಲ್ಲಿ ಕನ್ನಡ ನಾಡನ್ನು ಕಾಣಲು ಬಂದ ಅಮಾಯಕ ಪರಂಗಿ ಪ್ರವಾಸಿಯಂತೆ ಕೊಂಚ ದೂರ ಆ ಸೈಕಲ್ಲನ್ನು ಹಿಂಬಾಲಿಸಿ ಆ ನಂತರ ನಾನು ಹೊರಟಿರುವ ಉದ್ದೇಶ ನೆನಪಾಗಿ ಕತ್ತಲಾಗುವ ಹೊತ್ತಿಗೆ ಅಂಬೇವಾಡ ತಲುಪಿದ್ದೆ.

ಅಂಬೇವಾಡದ ದೇಶಪಾಂಡೆ ಮನೆತನಕ್ಕೆ ಸೇರಿದವನು ಎಂದು ಹೇಳಿಕೊಂಡಿದ್ದ ಯುವಕನೊಬ್ಬ ರೇಡಿಯೋ ಕೇಳುವ ಹುಚ್ಚಿದ್ದವನು ಗುಲ್ಬರ್ಗಾ ಶಹರಿನಲ್ಲಿ ಸಿಕ್ಕಿದವನು ಹಾಗೇ ಮಾತನಾಡುತ್ತಾ ನನ್ನನ್ನು ಊರಿಗೆ ಕರೆದಿದ್ದ. ತಾನು ಕನ್ನಡದಲ್ಲಿ ಬರೆದ ಹನಿಕವಿತೆಗಳನ್ನು ನನಗೆ ತೋರಿಸಿದ್ದ. ಆತ ಕರೆದಿದ್ದನ್ನೇ ನೆವ ಮಾಡಿಕೊಂಡು ನಾನು ಹೇಳದೆ ಕೇಳದೆ ಆ ಕತ್ತಲಲ್ಲಿ ಆ ಊರಲ್ಲಿ ಇಳಿದರೆ ಎಲ್ಲರೂ ನನ್ನನ್ನು ಭಯಪೂರಿತ ನಿರ್ಲಕ್ಷ್ಯದಿಂದ ನೋಡುತ್ತಿದ್ದರು.

ಕೊಂಚ ಮಳೆ ಬಂದು ನಿಂತು ಊರಲ್ಲಿ ಮನುಷ್ಯ ಗೋವು ಕೋಳಿ ಕುರಿಗಳ ಗಂಜಲದ ಪರಿಮಳ ಮಿಶ್ರವಾಗಿ ಜೊತೆಯಲ್ಲಿ ಬೇಸಗೆಯ ಬೆವರೂ ಬೆರೆತು ಅದರ ಜೊತೆ ಹೀಗೆ ಅಚಾನಕ್ಕಾಗಿ ನಾನೂ ಸೇರಿಕೊಂಡು ಒಂದು ತರಹದ ಅಸಹನೀಯ ನಿರ್ವಾತ ನಿರ್ಮಾಣಗೊಂಡು ನಾನು ತಬ್ಬಿಬ್ಬಾಗಿ ನೋಡುತ್ತಿದ್ದೆ. ದೇಸಾಯರ ಮನೆತನದ ಹುಡುಗ ಊರು ಬಿಟ್ಟು ಎಷ್ಟೋ ಕಾಲವಾಯಿತು ಎಂಬಂತೆ ಬೇರೆ ಅವರು ಮಾತನಾಡುತ್ತಿದ್ದರು.

ಇನ್ನು ಏನು ಮಾಡುವುದು ಎಂದು ಗೊತ್ತಾಗದೆ ನಾನು ಅವರ ಜೊತೆ ನಗುತ್ತ ಮಾತನಾಡಲು ತೊಡಗಿದೆ. ನನ್ನ ಹೆಸರು ಹೇಳಿಕೊಂಡೆ. ನಿಮ್ಮ ಊರು ನೂರಾರು ವರ್ಷಗಳ ಇತಿಹಾಸ ಇರುವ ಊರು ಅದಕ್ಕೇ ನೋಡಲು ಬಂದೆ ಎಂದು ಹೇಳಿದೆ. ನಿಮ್ಮ ಊರಿನ ಕತೆ ಹೇಳಿ ಅಂತ ಹೇಳಿದೆ.ಹಾಡುಗಳನ್ನು ಹೇಳಿ ಎಂದು ಬೇಡಿಕೊಂಡೆ. ಅವರ ಊರಿನ ಎಲ್ಲ ಇತಿಹಾಸ ಗೊತ್ತಿರುವುದು ಅವರು ಮುತ್ಯಾ ಎಂದು ಕರೆಯುವ ವಯಸ್ಸಾದ ಮುಲ್ಲಾ ಒಬ್ಬನಿಗೆ ಮಾತ್ರ ಆದರೆ ಆತನೂ ಮಗಳ ಮಗನ ಮುಂಜಿಗೆ ಅಂತ ಎಲ್ಲೋ ಹೋಗಿರುವನು. ಹಾಗಾಗಿ ಅದೂ ಸಾಧ್ಯವಿಲ್ಲ. ನೀನು ಹೋಗಿ ಇನ್ನೊಮ್ಮೆ ಬರುವುದು ಯಾವಾಗ ಎಂದು ಹೇಳು. ಆಗ ಎಲ್ಲ ಹೇಳುತ್ತೇವೆ.ಹಾಡೂ ಹಾಡುತ್ತೇವೆ. ಈಗ ನೀನು ಎಷ್ಟು ಹೊತ್ತಿಗೆ ಹೋಗುವುದು ಎಂದು ಕೇಳಿದರು. ನನಗೇ ಅಳುವೇ ತುಟಿಗಿಳಿದು ಬಂದಂತೆ ಅನ್ನಿಸಲು ತೊಡಗಿ ನಿಮಗೆಲ್ಲ ಪರವಾಗಿಲ್ಲ ಎಂದಾದರೆ ಈ ಇರುಳು ಇಲ್ಲೇ ಇರುತ್ತೇನೆ ಎಂದು ತೊದಲಿದೆ. ಅವರು ಯಾರೂ ಮಾತನಾಡಲಿಲ್ಲ.

ಇನ್ನು ಹೇಳದೆ ಇರಲಾಗುವುದಿಲ್ಲ ಎಂದು ಅನ್ನಿಸಿ ಅವರೆದುರಿಗೇ ನನ್ನ ಬೆನ್ನು ಚೀಲ ತೆರೆದು ಅದರೊಳಗಿಂದ ಭಾರವಾದ ಆಕಾಶವಾಣಿಯ ಟೇಪ್ ರೆಕಾರ್ಡರ್ ತೆಗೆದು ನಾನು ಸರಕಾರದ ರೇಡಿಯೋ ಕೇಂದ್ರದಿಂದ ಬಂದವನು ಕತೆ-ಗಿತೆ ಏನೂ ಬೇಡ. ನಿಮ್ಮ ಕಷ್ಟ ಸುಖ ಹೇಳಿಕೊಳ್ಳಿ. ಸರಕಾರದ ಸಹಾಯ ಸಿಗುತ್ತದೆ . ನಿಮ್ಮ ಕಷ್ಟ ಕಡಿಮೆಯಾಗುತ್ತದೆ. ಮಾತನಾಡಿ ಎಂದು ಬಾಯಿ ಬಿಟ್ಟು ಕೇಳಿಕೊಂಡೆ.

ನನಗೇ ಅಚ್ಚರಿಯಾಗುವಂತೆ ಅವರೆಲ್ಲರ ಚಹರೆಯೇ ಬದಲಾಯಿತು.ಅದಕ್ಕೆ ಸರಿಯಾಗಿ ಆ ಊರಿನಲ್ಲೂ ಇದ್ದ ಆರು ನೂರು ವರ್ಷಗಳಷ್ಟು ಹಳೆಯ ದರ್ಗದಿಂದ ರಾತ್ರಿಯ ನಮಾಜಿನ ಕರೆಯೂ ಮೊಳಗಿತು. ಅವರೆಲ್ಲರೂ ಮಾತನಾಡಲು ಹಾಡಲು ತೊಡಗಿದರು. ಮೊಮ್ಮಗನ ಮುಂಜಿಗೆ ಹೋಗಿದ್ದ ಮುತ್ಯಾ ಎಂಬ ಮುಲ್ಲಾ ಅದೆಲ್ಲಿಂದಲೋ ಪ್ರತ್ಯಕ್ಷರಾದರು. ದೇಸಾಯರ ವಂಶದ ಯುವಕವಿ ನಾಚುತ್ತಾ ಗುಂಪಲ್ಲಿ ಸೇರಿಕೊಂಡ. ದಲಿತರ ಮನೆಯೊಂದರಲ್ಲಿ ಹನ್ನೆರಡು ವರ್ಷದ ಬಾಲಕಿಯೊಬ್ಬಳು ಮೈನೆರೆದಿದ್ದಕ್ಕೆ ಹಾಕಿದ್ದ ಮೈಕು ಸೆಟ್ಟನ್ನು ಬಂದು ಮಾಡಿಸಿ ನಮಗೆ ಮಾತನಾಡಲು ಬಿಡಿ ಎಂದು ಸಣ್ಣ ಗಲಾಟೆಯೂ ಆಯಿತು.

ಇಲ್ಲ ಮೈಕು ಸೆಟ್ಟು ಹಾಕಿರುವ ಮನೆಗೇ ಹೋಗುವ ಅಲ್ಲಿಂದಲೇ ಶುರುಮಾಡುವ ಎಂದು ನಾನು ಹೊರಟರೆ ಸಾಬರೇ ಹೆಚ್ಚಾಗಿದ್ದ ಆ ಊರಿನ ಉತ್ಸಾಹೀ ಯುವಕರ ದಂಡೇ ದಲಿತರ ಕೇರಿಗೆ ಬಂದು ಕುಳಿತು ಸೋಬಾನದ ಹಾಡು ಕೇಳಿಸಿಕೊಂಡು ಕುಳಿತಿತು. ಆ ಕೇರಿಯಲ್ಲಿದ್ದ ಒಡಲಾಳದ ಸಾಕವ್ವನಂತಿದ್ದ ಮುದುಕಿಯೊಬ್ಬಳು ಸೋಬಾನದ ಹಾಡನ್ನು ನಿಲ್ಲಿಸಿ ಇದ್ದಕ್ಕಿದ್ದಂತೆ ಭೂಕಂಪದ ಹಾಡು ಹಾಡಲು ಶುರುಮಾಡಿತು. ಬಿಟ್ಟಕಿವಿ ಬಿಟ್ಟುಕೊಂಡು ನಾನು ಆ ಮುದುಕಿ ಹಾಡುತ್ತಿದ್ದ ಭೂಕಂಪದ ಹಾಡು ಕೇಳಿಸಿಕೊಳ್ಳ ತೊಡಗಿದೆ.ಆಗಲೇ ನನಗೆ ಅರಿವಾಗಿದ್ದು ಆ ಊರಲ್ಲೂ ಭೂಕಂಪವಾಗಿತ್ತು ಅಂತ. ಮಹಾರಾಷ್ಟ್ರದ ಲಾತೂರು ಮತ್ತು ಕೀಲಾರಗಳಲ್ಲಿ ಭೂ ಕಂಪವಾದಾಗ ಅಂಬೇವಾಡವೂ ನಡುಗಿತ್ತು.ಮುದುಕಿ ಹಾಡುತ್ತಿದ್ದಳು.

`ಮೊಲೆ ಉಂಬ ಕೂಸಾ ಉಳಿದಿಲ್ಲ
ಭೂಮಿತಾಯವ್ವ ನಡುಗಿದಳಾ.. ..’

ಅದಕ್ಕೇ ದೇಸಾಯರ ಮನೆತನದ ಹುಡುಗನೂ ನನ್ನಿಂದ ತಲೆತಪ್ಪಿಸಿಕೊಂಡು ಓಡಾಡಿದ್ದ. ಏಕೆಂದರೆ ಕೋಟೆಯಂತಿದ್ದ ಆತನ ವಾಡೆಯೂ ಭೂಕಂಪವಾದಾಗ ಕಳಚಿಬಿದ್ದು ಆತನಿಗೂ ಹುಚ್ಚು ಹಿಡಿದಂತಾಗಿ ಕವಿತೆ ಬರೆಯಲು ಶುರು ಮಾಡಿದ್ದ.
ಆ ರಾತ್ರಿ ಅಂಬೇವಾಡದಲ್ಲಿ ನಾನು ಹುಚ್ಚು ಹಿಡಿಯುವಷ್ಟು ಕತೆಗಳನ್ನೂ ಹಾಡುಗಳನ್ನೂ ಕೇಳಿಸಿಕೊಂಡೆ. ಬೆಳಗಿನ ಜಾವದಲ್ಲಿ ಯಾರದೋ ದನದ ಕೊಟ್ಟಿಗೆಯಪಕ್ಕ ಅವರು ಕೊಟ್ಟಿದ್ದನ್ನು ಹಾಸಿಕೊಂಡು ಮಲಗಿಕೊಂಡೆ.ಪಕ್ಕದಲ್ಲಿ ಗೋವುಗಳು ಮೆಲುಕು ಹಾಕುವ ಸದ್ದು ಕೇಳಿಸುತ್ತಿತ್ತು.ನೂರಾರು ವರ್ಷ ವಯಸ್ಸಾಗಿರುವ ಗೋವುಗಳು ಮೆಲುಕು ಹಾಕುವ ಸದ್ದು ಅನ್ನಿಸಿ ಕಿವಿಗೊಟ್ಟು ಕೇಳುತ್ತ ನಿದ್ದೆಮಾಡಲು ನೋಡುತ್ತಿದ್ದೆ.

ಅಂಬೇವಾಡದ ಮಂದಿ ಹಾಡುತ್ತಾ ಹೇಳಿದ ಆ ಊರಿನ ಆರು ನೂರು ವರ್ಷಗಳ ಹಿಂದಿನ ಸಂತನೊಬ್ಬನ ಕತೆಯನ್ನು ಈಗಲೂ ಮತ್ತೆ ಮತ್ತೆ ಕೇಳುತ್ತಿರುತ್ತೇನೆ. ಜೊತೆಗೆ ಅಂಬೇವಾಡದ ಮುದುಕಿ ಹಾಡಿದ ಭೂಕಂಪದ ಹಾಡು. ಆ ಸಂತ ಗಂಡು ಆಡೊಂದರ ರೂಪದಲ್ಲಿ ಆ ಊರಿಗೆ ಮೇಯಲು ಬಂದದ್ದು.ಯುವತಿಯೊಬ್ಬಳು ಅದನ್ನು ಕಟ್ಟಿ ಹಾಕಲು ನೋಡಿದ್ದು. ಬೇಟೆಗಾರನೊಬ್ಬನ ಬಾಣದಿಂದ ಆ ಸಂತ ಚಿಗರೆಯೊಂದನ್ನ ಕಾಪಾಡಿದ್ದು. ಯಾಕೋ ಎಲ್ಲವೂ ಅತಿಯಾಗುತ್ತಿದೆ.ನಿಲ್ಲಿಸುತ್ತೇನೆ.

Advertisements