ಮಗ ಬಾಪೂ ಸತ್ಯನಾರಾಯಣ ಮತ್ತು ತೀರ್ಥರೂಪ ಅಠಾಣ ರಾಮಣ್ಣ

ಹಾ.ರಾ. ಬಾಪು ಸತ್ಯನಾರಾಯಣರಿಗೆ ಈಗ ಹತ್ತಿರ ಹತ್ತಿರ ಎಪ್ಪತ್ತೈದು ವರ್ಷ. ಅವರು ಭಾರತದ ಹೆದ್ದಾರಿಗಳಅಠಾಣಾ ರಾಮಣ್ಣ ಮತ್ತು ಬಾಪೂ ಸತ್ಯನಾರಾಯಣ ಬಲುದೊಡ್ಡ ಇಂಜಿನಿಯರ್‌ ಆಗಿ ನಿವೃತ್ತಿ ಹೊಂದಿ ಈಗ ಮೈಸೂರಿನಲ್ಲಿ ಜೀವಿಸುತ್ತಿದ್ದಾರೆ. ಗುಜರಾತು, ನವದೆಹಲಿ, ಷಿಲ್ಲಾಂಗು, ಕೊಹಿಮಾ, ಲಕ್ನೋ, ತಾಂಜಾನಿಯಾ, ವಿಶ್ವಸಂಸ್ಥೆ ಹೀಗೆ ಬಹಳ ಕಡೆಗಳಲ್ಲಿ ಹೆದ್ದಾರಿ ಇಂಜಿನಿಯರ್‌ ಆಗಿ ಶ್ರದ್ಧೆ ಪ್ರಾಮಾಣಿಕತೆಗಳಿಂದ ಕೆಲಸ ಮಾಡಿ ಈ ಇಳಿವಯಸ್ಸಿನಲ್ಲೂ ಮೈಸೂರಿನಲ್ಲಿ ಪಾದರಸದಂತೆ ಓಡಾಡುತ್ತಾ, ಯೋಚನೆ ಮಾಡುತ್ತಾ, ಪತ್ರಿಕೆಗಳಿಗೆ ಬರೆಯುತ್ತಾ ಬಲು ಚಟುವಟಿಕೆಯಿಂದ ಇರುತ್ತಾರೆ. ಇದ್ದದ್ದನ್ನು ನೇರವಾಗಿ ಹೇಳುತ್ತಾರೆ. ಅವರು ಯಾವ ಮುಲಾಜಿಗೂ ಒಳಗಾಗುವುದಿಲ್ಲ ಎಂಬುದನ್ನು ಅವರ ತೀಕ್ಷ್ಣ ಕಣ್ಣುಗಳು ಸಾರಿ ಹೇಳುತ್ತವೆ.

ಇವರು ಹೇಳಿದ ಸಮಯಕ್ಕೆ ಒಂದು ನಿಮಿಷವೂ ತಡವಾಗಬಾರದು ಒಂದು ಕ್ಷಣವೂ ಮೊದಲಾಗಬಾರದು ಎಂದು ನನಗೆ ನಾನೇ ಹೇಳಿಕೊಂಡು ನಿನ್ನೆ ಸಮಯಕ್ಕೆ ಸರಿಯಾಗಿ ಹೋಗಿ ಅವರ ಮನೆಯ ಕದವ ತಟ್ಟಲು ಹೋದರೆ ಬಾಗಿಲು ತೆರೆದುಕೊಂಡೇ ಇತ್ತು. ಅವರು ನನ್ನ ಕಾಯುತ್ತಿದ್ದಂತೆ ಇತ್ತು. ನಾನು ತಡ ಮಾಡಿಲ್ಲದಿರುವುದರಿಂದ ತಡ ಮಾಡಿದ್ದಕ್ಕೆ ಕ್ಷಮೆ ಕೋರುವ ಹಾಗೂ ಇರಲಿಲ್ಲ. ಕುಳಿತುಕೊಳ್ಳಲು ಹೇಳಿದರು. ಕುಳಿತುಕೊಳ್ಳಲು ಜಾಗವನ್ನು ಹುಡುಕುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಸೋಫಾದಲ್ಲಿ ಕುಳಿತಿರುವ ಬಾಪು ಸತ್ಯನಾರಾಯಣ ಅವರ ನೂರ ಐದು ವರ್ಷ ವಯಸ್ಸಿನ ತೀರ್ಥರೂಪರಾದ ಅಠಾಣಾ ರಾಮಣ್ಣನವರು ಕಾಣಿಸಿದರು.

ಅಠಾಣಾ ರಾಮಣ್ಣನವರು ಸೋಫಾದಲ್ಲಿ ಕುಳಿತು ಕಣ್ಣು ಮಿಟಿಕಿಸುತ್ತಾ ನೋಡುತ್ತಿದ್ದರು. ನೂರಾ ಐದು ವರ್ಷಗಳ ಎಲ್ಲ ಪರಿಮಳ, ರಾಗ, ರಂಗು, ಬೇಸರ, ರೋಮಾಂಚನಗಳನ್ನು ಅನುಭವಿಸಿ ಮಾಗಿ ಇಳಿ ಬಿದ್ದಿದ್ದ ಅವರ ಮೂಗು ಏನು? ಎಂದು ನನ್ನನ್ನು ಪ್ರಶ್ನಿಸುತ್ತಿದ್ದಂತೆ ಸಣ್ಣದಾಗಿ ಅಲುಗುತ್ತಿತ್ತು. ಕಣ್ಣಲ್ಲೇ ನನ್ನನ್ನು ಹತ್ತಿರಕ್ಕೆ ಕರೆದು ನೂರಾ ಐದು ವರ್ಷಗಳನ್ನು ಸವರಿ ನೋಡಿದಂತಿದ್ದ ಅವರ ಪುರಾತನ ಹಸ್ತದೊಳಗೆ ನನ್ನ ಕೈಗಳನ್ನು ತೆಗೆದುಕೊಂಡು God bless you ಎಂದು ವಿನಾ ಕಾರಣ ಆಶೀರ್ವದಿಸಿದರು. ಮತ್ತೆ ಮೆಲ್ಲನೆ ಏನು ಕೋಮಲ ಕಾಯ, ಹೊಳಪು ಹೊಸ ಪ್ರಾಯ, ಎಲವೋ ಕಾಮುಕ-ಎಲ್ಲಿ ಬೆಚ್ಚಗೆ ಮಲಗಿ ಸಲ್ಲಾಪ ಮಾಡುತಿಹೆ ಇವಳೊಡನೆ ಮುಳುಗು ಬಾ ಪಾಪಿ ಎಂಬ ಬಿ.ಎಂ. ಶ್ರೀಯವರ ಅನಾಥೆ ಕವಿತೆಯನ್ನು ಗುಣಗುಣಿಸತೊಡಗಿದರು.

ನಾನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ. ಹೆದ್ದಾರಿಗಳ ಕುರಿತು ನಿವೃತ್ತ ಚೀಫ್‌ ಇಂಜಿನಿಯರ್‌ ಬಾಪು ಸತ್ಯನಾರಾಯಣ ಅವರೊಡನೆ ಮಾತನಾಡಲು ಹೋಗಿದ್ದ ನಾನು ನಿನ್ನೆ ಎರಡು ಮೂರು ಗಂಟೆಗಳ ಕಾಲ ಅಠಾಣಾ ರಾಮಣ್ಣನವರ ಕಂಠದಿಂದ ಹೊರ ಹೊಮ್ಮುತ್ತಿದ್ದ ಕನ್ನಡ ಕವಿತೆಗಳನ್ನೂ, ಮಿಲ್ಟನ್ನನ್ನ ಪಾರಡೈಸ್‌ ಲಾಸ್ಟ್‌ನ ಸಾಲುಗಳನ್ನು ಬೈಬಲ್‌ನ ಶ್ಲೋಕಗಳನ್ನೂ ಕೇಳಿಸಿಕೊಂಡು ಬಂದವನು ಇರುಳೆಲ್ಲಾ ಏನೇನೋ ಕನಸುಗಳನ್ನೊ, ಕನವರಿಕೆಗಳನ್ನೊ ಅನುಭವಿಸಿ ಈಗ ಅಕ್ಷರಗಳ ನಡುವೆ ಕುಳಿತುಕೊಂಡು ಕಂಗಾಲಾಗಿರುವೆ. ಮನುಷ್ಯನು ಇಷ್ಟೊಂದು ವರ್ಷಗಳು ಬದುಕಿದ ಮೇಲೆ ಆತನಿಗೆ ಎಲ್ಲವೂ ಮರೆತು ಹೋಗುತ್ತವೆ. ಆದರೆ ಕಾವ್ಯ, ಧರ್ಮ ಗ್ರಂಥಗಳ ಸಾಲುಗಳು ಮಾತ್ರ ಮೊಳೆ ಹೊಡೆದ ಹಾಗೆ ಆತನ ಎದೆಯಲ್ಲಿ ಉಳಿದುಕೊಂಡಿರುತ್ತವೆ ಎಂಬ ಕಠೋರ ಸತ್ಯ ಬಿಸಿಲಿನಷ್ಟೇ ನಿಚ್ಚಳ ವಾಗಿ ಮುಖಕ್ಕೆ ಹೊಡೆದು ಹೇಳುತ್ತಿದೆ.

ಗ್ರೂಪ್ ಫೋಟೋ

ಮೈಸೂರಿನ ಮಹಾರಾಜ ಕಾಲೇಜಿನ ಕನ್ನಡ ಸಂಘದ ಗ್ರೂಪ್‌ ಫೋಟೋ ಒಂದರಲ್ಲಿ ಎರಡನೆಯ ಸಾಲಿನಲ್ಲಿ ನಿಂತಿರುವವರಲ್ಲಿ ಎಡದಿಂದ ಮೂರನೆ ಯವರು ಅಠಾಣಾ ರಾಮಣ್ಣನವರು. ಮೊದಲನೆಯ ಸಾಲಿನಲ್ಲಿ ಕೆ.ವಿ. ಪುಟ್ಟಪ್ಪ, ಡಿ.ಎಲ್‌. ನರಸಿಂಹಾಚಾರ್‌, ತೀ.ನಂ. ಶ್ರೀಕಂಠಯ್ಯ ಮೊದಲಾದವರು ನಿಂತಿದ್ದಾರೆ. ಮೂರನೆಯ ಸಾಲಿನಲ್ಲಿ ಎಸ್‌.ವಿ. ರಂಗಣ್ಣ, ಎ.ಎನ್‌. ಮೂರ್ತಿರಾವ್‌, ವಿ. ಸೀತಾರಾಮಯ್ಯ ಮೊದಲಾದವರಿದ್ದಾರೆ. ಕುಳಿತಿರುವವರಲ್ಲಿ ಬಿ.ಎಂ. ಶ್ರೀಕಂಠಯ್ಯ, ಡಿ.ವಿ. ಗುಂಡಪ್ಪ, ಎ.ಆರ್‌. ಕೃಷ್ಣಶಾಸ್ತ್ರಿ, ಡಿ.ಎಸ್‌. ವೆಂಕಯ್ಯ ನವರಿದ್ದಾರೆ. ಅಠಾಣಾ ರಾಮಣ್ಣನವರು ಕುವೆಂಪು ಅವರಿಗಿಂತ ಹಿರಿಯರು. ಎ.ಎನ್‌. ಮೂರ್ತಿರಾಯರ ವಯಸ್ಸಿನವರು. ಕುವೆಂಪು ಅವರು ಈ ಗ್ರೂಪ್‌ ಫೋಟೋದಲ್ಲಿ ಬುದ್ಧಿವಂತರ ನಡುವೆ ಮನಸ್ಸಿನೊಳಗೆ ತುಂಬ ತುಂಟತನಗಳನ್ನು ಇಟ್ಟುಕೊಂಡು ಗಂಭೀರವಾಗಿರಲು ಯತ್ನಿಸುತ್ತಿರುವ ಪೋರನಂತೆ ಕಾಣಿಸುತ್ತಿ ದ್ದಾರೆ. ರಾಮಣ್ಣನವರು ಎಲ್ಲವನ್ನೂ ಅರ್ಥ ಮಾಡಿಕೊಂಡು ಸುಮ್ಮನಿರುವ ಅಣ್ಣನಂತೆ ಪೋಸು ಕೊಟ್ಟಿದ್ದಾರೆ.

ಎಲ್ಲರೂ ಅವರವರ ಹಾವ ಭಾವದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅವರ ಸ್ಥಾನ ಮಾನಗಳೇನು ಎಂಬ ಅರಿವಿಲ್ಲದೆ ಫೋಟೋ ಹಿಡಿಯಲು ಬಂದ ಮೈಸೂರಿನ ವಿ.ವಿ. ವರದಾಚಾರ್ಲು ಅಂಡ್‌ ಸನ್‌ ಕಂಪೆನಿಯ ಛಾಯಾಗ್ರಾಹಕನತ್ತ ನಕ್ಕಿದ್ದಾರೆ. ಆ ಫೋಟೋದಲ್ಲಿ ಅವರೆಲ್ಲರ ನಗು ಸ್ತಬ್ಧವಾಗಿದೆ. ಅಠಾಣಾ ರಾಮಣ್ಣ ಎಂಬ ಇವರೊಬ್ಬರನ್ನು ಬಿಟ್ಟು ಇನ್ನಾರಿಗೂ ಈಗ ಬೇರೊಂದು ತರಹದ ನಗುವನ್ನು ಕೊಡಲು ಸಾಧ್ಯವಿಲ್ಲ. ಇನ್ನೂ ಮಗು ವಿನಂತೆ ನಗುತ್ತಿರುವ ಅಠಾಣಾ ರಾಮಣ್ಣನವರ ನಗುವಿನ ಮುಂದೆ ನಿನ್ನೆ ನಾನು ಸ್ತಬ್ಧವಾಗಿ ಹೋಗಿದ್ದೇನೆ. ಈಗಲೂ ಹಾಗೇ ಸ್ತಬ್ಧನಾಗಿ ಬರೆಯಲು ಕೂತಿದ್ದೇನೆ.

`ರಾಮಣ್ಣನವರೇ ನಿಮಗೆ ರಾಷ್ಟ್ರಕವಿ ಕುವೆಂಪು ಅವರ ನೆನಪಾಗುತ್ತಿದೆಯಾ…? ಎಂದು ಅವರ ಭುಜವನ್ನು ಅಲುಗಿಸಿ ಅವರ ಮಗ ಬಾಪು ಸತ್ಯನಾರಾಯಣ ಕೂಗಿ ಕೇಳುತ್ತಿದ್ದರು. ರಾಮಣ್ಣನವರಿಗೆ ಮೊದಲು ಕೇಳಿಸಲಿಲ್ಲ. ಆ ಮೇಲೆ ನೆನಪು ಕೈಕೊಟ್ಟ ಹಾಗೆ ಅನಿಸಿ ತುಂಬಾ ಮೆಮೊರಿಗಳು ಎಲ್ಲಾ Clash ಆಗುತ್ತಿವೆ ಎಂದು ಸುಸ್ತಾಗಿ ಕೈ ಚೆಲ್ಲಿದರು. ಆ ಮೇಲೆ ನಿಧಾನವಾಗಿ ನೆನಪಿಸಿಕೊಂಡು ಸಣ್ಣಿಲಿ, ಸುಂಡಿಲಿ ಎಂದು ಬೊಮ್ಮನಹಳ್ಳಿಯ ಕಿಂದರಿಜೋಗಿ ಎಂಬ ಕವಿತೆಯ ಸಾಲುಗಳನ್ನು ನೆನಪಿಸಿಕೊಂಡರು. `ಬಹಳ ದೊಡ್ಡ ಕವಿ, ದೊಡ್ಡ ಮನುಷ್ಯ’ ಎಂದು ಗೊಣಗಿದರು. ಆನಂತರ ಕರುಣಾಳು ಬಾ ಬೆಳಕೆ ಎಂದು ಹಾಡಲು ತೊಡಗಿದರು. ಆ ಮೇಲೆ ಎಲ್ಲೋ ಹುಡುಕಿದೆ ಇಲ್ಲದ ದೇವರ ಎಂದು ಗುಣಗುಣಿಸಿದರು. ಆನಂತರ ಮಿಲ್ಟನ್‌ ಕವಿಯ ಪ್ಯಾರಡೈಸ್‌ ಲಾಸ್ಟ್‌ ಕವಿತೆಯ It is far better to reign in hell than serve in heaven ಎಂಬ ಸಾಲನ್ನು ಉದ್ಗರಿಸಿದರು. ನನ್ನ ಮೈ ತಡವಿ `ನೀನು ತುಂಬಾ ಸಂಭಾವಿತ ಸುಸಂಸ್ಕೃತ ಹುಡುಗನಂತೆ ಕಾಣಿಸು ತ್ತಿದ್ದೀಯಾ God bless you’ ಎಂದು ಆಶೀರ್ವದಿಸಿದರು. ಏಕೆಂದು ನನಗೆ ಆ ಮೇಲೆ ಗೊತ್ತಾಯಿತು.

ಅಠಾಣಾ ರಾಮಣ್ಣ ವಿವಾಹದ ಸಂದರ್ರಾಮಣ್ಣನವರಿಗೆ ಬಾಲ್ಯ ಕಾಲದಲ್ಲಿ ಮಜೀದ್‌ ಎಂಬ ಗೆಳೆಯ ನೊಬ್ಬನಿದ್ದನಂತೆ. ಆತ ಇವರಿಗೆ ತುಂಬಾ ಪ್ರೀತಿಯನ್ನು ಕೀಟಲೆಗಳನ್ನೂ ಕೊಡುತ್ತಿದ್ದನಂತೆ. ಮರದಲ್ಲಿರುವ ಮಾವಿನ ಹಣ್ಣು ಕುಯ್ಯಲು ಹೋದಾಗ ತುಂಬ ಗೋಳು ಹೊಯ್ದುಕೊಳ್ಳುತ್ತಿದ್ದನಂತೆ. ಮಜೀದನೊಡನೆ ರಶೀದನಾದ ನನ್ನನ್ನು ಹೋಲಿಸಿ ಅವನಿಗಿಂತ ನಾನು ಕೊಂಚ ಉತ್ತಮನು ಎಂದು ಅವರು ಭಾವಿಸಿದಂತೆ ಅನಿಸಿತು.

ಅಠಾಣಾ ರಾಮಣ್ಣನವರಿಗೆ ಇನ್ನೂ ಅವರ ಅಜ್ಜ ಹಾಲುಬಾಗಿಲು ರಾಮಣ್ಣ ಅವರ ನೆನಪಿದೆ. ಅವರಿಗೆ ಇಬ್ಬರು ಹೆಂಡತಿಯರಂತೆ. ಅವರು ಅಜಾನುಬಾಹು ಆಳಂತೆ. ಹಾಸನ ಪಟ್ಟಣದಲ್ಲಿ ಸುಮ್ಮನೆ ಓಡಾಡುತ್ತಿದ್ದರಂತೆ ಆ ಮೇಲೆ ತಿಪಟೂರಿ ನಲ್ಲಿ ಪ್ಲೇಗು ಬಂದಾಗ ತೀರಿ ಹೋದರಂತೆ. ಇನ್ನೊಬ್ಬರು ಹಿರಿಯರು ಕೊಂಡ ಕೊಳದ ಕೆರೆಯಲ್ಲಿ ಈಜಲು ಹೋಗಿ ತೀರಿ ಹೋದರಂತೆ. ಅವರ ಹೆಸರು ನೆನಪಿಲ್ಲ. ರಾಮಣ್ಣನವರ ತಾಯಿಯ ಹೆಸರು ನೆನಪಿದೆ. ಆದರೆ ಬೇರೇನೂ ನೆನಪಿಲ್ಲ. ರಾಮಣ್ಣನವರು ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲಿ ಹನ್ನೆರಡು ವರ್ಷದ ಹುಡುಗಿ ಜಯಮ್ಮ ಎಂಬವರನ್ನು ಮದುವೆಯಾದರು. ಅವರು ಇಪ್ಪತ್ತು ವರ್ಷಗಳ ಹಿಂದೆ ತೀರಿ ಹೋದರು. ರಾಮಣ್ಣನವರಿಗೆ ಮಡದಿಯ ಕುರಿತು ಈಗ ಏನೂ ನೆನಪಾಗುವುದಿಲ್ಲ. ಅವರು ಹಾರ್ಮೋನಿಯಂ ನುಡಿಸುತ್ತಿದ್ದರು ಎಂಬುದು ಮಾತ್ರ ನೆನಪಿದೆ. ಕೊಟ್ಟೂರಪ್ಪ ಎನ್ನುವವರು ಹಾರ್ಮೋನಿಯಂ ಕಲಿಸಿದರಂತೆ. ಅದನ್ನು ನೆನಪು ಮಾಡಿಕೊಂಡು ಶ್ರೀ ವನಿತೆಯರಸನೇ ಎಂದು ಹಾಡಿದರು.

ತೀರಿ ಹೋಗುವವರೆಗೂ ರಾಮಣ್ಣನವರು ಊಟ ಮಾಡಿದ ತಟ್ಟೆಯಲ್ಲೇ ಊಟ ಹಾಕಿಕೊಂಡು ತಾಯಿ ಊಟ ಮಾಡುತ್ತಿದ್ದರು. ಅವರಿಗೆ ಪತಿ ಎಂದರೆ ಅಷ್ಟು ಭಕ್ತಿ ಎಂದು ಬಾಪು ಸತ್ಯನಾರಾಯಣ ನೆನಪು ಮಾಡಿಕೊಂಡರು. ಅವರು ಮಾಡುತ್ತಿದ್ದ ಮೆಂತೆಯ ದೋಸೆ ಮತ್ತು ಕಾಫಿಯನ್ನು ರಾಮಣ್ಣನವರು ತುಂಬಾ ಇಷ್ಟ ಪಡುತ್ತಿದ್ದರಂತೆ.
ಅಠಾಣಾ ರಾಮಣ್ಣನವರು ತುಂಬಾ ಒಳ್ಳೆಯವರು. ಮೈಸೂರಿನ ಸಿಲ್ಕ್‌ ಫಿಲೇಚರ್‌ನಲ್ಲಿ ಮ್ಯಾನೇಜರಾಗಿ ನಿವೃತ್ತಿ ಹೊಂದಿದರು. ನಿವೃತ್ತಿಯ ಹೊತ್ತಿನಲ್ಲಿ ಅವರಿಗೆ ಆಗದವರು ಕಾಟ ಕೊಟ್ಟು ಏನೋ ಅನ್ಯಾಯ ಮಾಡಿದರು. ಆ ಅನ್ಯಾಯವನ್ನು ಇನ್ನೂ ಅವರ ಮರೆತಿಲ್ಲ. ಮೈಸೂರಿನಲ್ಲಿ ರಿಟ್‌ ಅಯ್ಯಂಗಾರ್‌ ಎಂಬ ಒಬ್ಬರು ವಕೀಲರು ಇದ್ದರಂತೆ, ಅವರು ತೀರಿ ಹೋಗಿ ಎಷ್ಟೋ ವರ್ಷ ಗಳಾಗಿವೆ. ರಾಮಣ್ಣನವರು ಅವರನ್ನು ನೆನಪು ಮಾಡಿಕೊಂಡು ಅವರ ಬಳಿ ಹೋಗಬೇಕು. ಸರಕಾರದ ಮೇಲೆ ರಿಟ್‌ ಅರ್ಜಿ ಹಾಕಿಸಿ ಅನ್ಯಾಯದ ವಿರುದ್ಧ ಹೋರಾಡಬೇಕು ಎಂದು ಈಗಲೂ ಆಗಾಗ ಹೇಳುತ್ತಿರುತ್ತಾರಂತೆ.

ಹಿರಿಯರಾದ ಬಾಪು ಸತ್ಯನಾರಾಯಣ ಅವರು ತಮ್ಮ ತಂದೆ ಅಠಾಣಾ ರಾಮಣ್ಣನವರ ನೆತ್ತಿಯನ್ನು ಮಗುವಿನಂತೆ ಸವರುತ್ತಾ ಒಣಗಿದ ಅವರ ಬಾಯೊಳಕ್ಕೆ ಆಗಾಗ ಚಾಕೊಲೇಟು ಇಡುತ್ತಾ ತಮ್ಮ ಮಡದಿಯನ್ನು ಅಕ್ಕರೆ ಯಿಂದ ನೋಡುತ್ತಾ ವಿವರಿಸುತ್ತಿದ್ದರು.

ಹಾಲುಬಾಗಿಲು ರಾಮಣ್ಣನವರಿಗೆ ಅಠಾಣಾ ರಾಮಣ್ಣ ಎಂಬ ಹೆಸರು ಹೇಗೆ ಬಂತು ಎಂದು ಅವರಿಂದ ಬೀಳ್ಕೊಂಡು ಬರುವಾಗ ಕೇಳಿದೆ. ರಾಮಣ್ಣ ನವರು ಅಠಾಣಾ ರಾಗದಲ್ಲಿ ಚೆನ್ನಾಗಿ ಹಾಡುತ್ತಿದ್ದರಂತೆ. ಬಿ.ಎಂ. ಶ್ರೀಕಂಠಯ್ಯ ನವರ ಅಶ್ವತ್ಥಾಮ ನಾಟಕದ ಮೇಳನಾಯಕನ ಪಾತ್ರದಲ್ಲಿ ಅವರ ಅಠಾಣಾ ರಾಗದ ಹಾಡು ಅಷ್ಟೊಂದು ಚೆನ್ನಾಗಿ ಕೇಳಿಸಿ ಬಿ.ಎಂ. ಶ್ರೀಯವರು ಅವರನ್ನು ಅಠಾಣಾ ರಾಮಣ್ಣ ಎಂದೇ ಕರೆದರಂತೆ.

ಬಾಗಿಲವರೆಗೆ ಬಂದು ಬೀಳುಕೊಂಡ ಬಾಪು ಸತ್ಯನಾರಾಯಣ ವಿವರಿಸುತ್ತಿದ್ದರು. ನಿಮ್ಮ ಜೊತೆ ಹೆದ್ದಾರಿಗಳ ಬಗ್ಗೆ ಮಾತನಾಡಲು ಬಂದವನು ನಿಮ್ಮ ತಂದೆಯವರನ್ನು ಕಂಡು ಬೆರಗಾಗಿ ಅದರ ಕತೆಯನ್ನೇ ಕೇಳಿದೆ. ಸರ್‌, ಇನ್ನೊಮ್ಮೆ ಬರುತ್ತೇನೆ. ನಿಮ್ಮ ಜೊತೆ ಮಾತನಾಡಬೇಕು ಎಂದು ಅಲ್ಲಿಂದ ಹೊರಟು ಬಂದೆ.

Advertisements