ಶ್ರೀನಿವಾಸರಾಜು ಮೇಷ್ಟರಿಗೆ ನಮಸ್ಕಾರ

raju.jpg

ಬಹುಶಃ ಈಗಿನ ಹುಡುಗರಿಗೆ ಶ್ರೀನಿವಾಸರಾಜು ಮೇಷ್ಟರು ಸಿಗಲಿಕ್ಕಿಲ್ಲ
ಮೇಷ್ಟರಿಗೆ ಹುಡುಗರೂ ಇರಲಿಕ್ಕಿಲ್ಲ
ಇದು ಹಳಹಳಿಕೆಯೆಂದೇನೂ ಅನಿಸಬೇಕಾಗಿಲ್ಲ
ಏಕೆಂದರೆ ಕವಿತೆ ಹುಚ್ಚು ಹಾದರಗಿತ್ತಿಯಂತಹ ಹೆಂಗಸು,
ವಿಟನಂತಹ ಬೇಜವಾಬ್ಧಾರಿಯ ಗಂಡಸು, ಹಾಗೆಲ್ಲಾ
ಮೇಷ್ಟರ ಪಾಲಾಗುವುದಿಲ್ಲ ಅಂತ ನಾವೆಲ್ಲ ಸಜ್ಜನರ ಕಾಲೆಳೆಯಬೇಕಾಗಿಲ್ಲ.
ಏಕೆಂದರೆ ಸಜ್ಜನರು ಈಗಲೂ ಕಾಲವಾಗಿಲ್ಲ.
ಬಹುಶಃ ಇದನ್ನು ಸಮೀಕರಣದ ಮೂಲಕ ಹೀಗೂ ಹೇಳಬಹುದು
ಅಂತೆಲ್ಲ ಬಗೆಹರಿಸುತ್ತಿರಬೇಕಾದರೆ ನನಗೆ ನನ್ನನ್ನೇ ಒದೆಯಬೇಕೆನ್ನಿಸುತ್ತದೆ.

‘ಸುಮ್ಮನೇ ಮೇಷ್ಟರ ಕಾಲಬಳಿ ಕುಳಿತು ಅಥವಾ ಅವರ ಕೈ ತುತ್ತಿನಂತಹ
ವಾತ್ಸಲ್ಯ ಉಂಡು ಯಾಕೆ ಬೆನ್ನು ತಡವಿಸಿಕೊಂಡು ಬರಲಾಗುತ್ತಿಲ್ಲ’
ಮೇಷ್ಟರು ನಮ್ಮನ್ನು ಬೈಯ್ಯಬಹುದಿತ್ತು,ಕಿಚಾಯಿಸಬಹುದಿತ್ತು,
ವಿಮರ್ಶಿಸಬಹುದಿತ್ತು – ಹಾಗೇನೂ ಮಾಡಲಿಲ್ಲ
ಸುಮ್ಮನೇ ಸದ್ದು ಮಾಡದೇ ಸಪಾಟು ದಾರಿಯಲ್ಲಿ ನಡೆವಂತೆ ನಡೆದು
ಟೀ ಲೋಟ ಕೈಯಲ್ಲಿರುವಂತೆೆ ನಡೆದು
ಕವಿತೆ ಎದೆಯೊಳಗಿರುವಂತೆ ನಡೆದು
ಎಲ್ಲಿ ಹೆಜ್ಜೆ ಊರುವುದೋ ಎಂಬಂತೆ ನಡೆದು
ಪುಸ್ತಕಗಳ ಪ್ರಕಾಶಿಸಿದರು
ನನ್ನಂತಹ ಅರಿವುಗೆಟ್ಟವನ ಕವಿಯನ್ನಾಗಿಸಿದರು

ಒಮ್ಮೆ ಮೇಷ್ಟರಿಗೆ ನಮಸ್ಕಾರ ಮಾಡಲು ಮರೆತು ನನಗೆ ನನ್ನನ್ನೇ ಒದೆಯಬೇಕೆನ್ನಿಸಿತ್ತು
ಆಮೇಲೆ ಎಲ್ಲೋ ಹೊಳೆಯ ಬದಿಯಲ್ಲಿ ನನಗೆ ಅವಳು ಸಿಲುಕಿ ನನ್ನ ನಾಲಗೆಯಲ್ಲಿ ನೆತ್ತರು ಜಿನುಗಿ ಅವಳ ಎದೆ ಹೊಟ್ಟೆ ಬೆನ್ನು ಕುಂಡೆಯಲ್ಲೆಲ್ಲಾ ಉಣ್ಣೆಹುಳಗಳು ಕಚ್ಚಿ ರಂಪಾಟವಾಡಿ ಆಮೇಲೆ ಅದೇ ಸಖತ್ತಾಗಿ ಕವಿತೆಯಾಗಿ ಅದಕ್ಕೆ ಮೇಷ್ಟರು ಬಹುಮಾನವೂ ಕೊಟ್ಟು ಅದು ಹಾಗಲ್ಲ ಹಾಗಲ್ಲ ಎಂದು ಹಲ್ಲು ಕಚ್ಚಿಕೊಂಡಿದ್ದೆ
ಆಗಲೂ ಶ್ರೀನಿವಾಸರಾಜು ಮೇಷ್ಟರು ಮಗುವಿನ ಹಾಗೆ ನಗುತ್ತಿದ್ದರು
ಈಗಲೂ ನಗುತ್ತಿರುತ್ತಾರೆ.
ಅವರ ಮನೆಯೆದುರಿನ ಮಲ್ಲಿಗೆ ಬಳ್ಳಿ
ಕಾಮದೇನುವಿನ ಪರಿಮಳ!
ಅವಳ ಕೆಚ್ಚಲಿನಿಂದ ಮುಖವ ಬಿಡಿಸಿಕೊಂಡು ಬೆಂಗಳೂರಿನ ಬಸ್ಸು ಹತ್ತಿ
ಕ್ರೈಸ್ಟ್ ಕಾಲೇಜಿನಿಂದ ಕವಿತೆಗೆ ಬಹುಮಾನ ಇಸಕೊಂಡು ಬರುವುದಿದೆಯಲ್ಲ
ಮೇಷ್ಟ್ರೆ ನೀವಿದ್ದರೆ ಹುಡುಗರಿಗೆ ಹೀಗೆಲ್ಲ ಕಾವ್ಯದ ಹಾಗೆ
ಗಿರಕಿ ಹೊಡೆಯಲು ಆಗುತ್ತದೆ.
ನಿಮಗೆ ನಮಸ್ಕಾರ.

Advertisements