ಅಷ್ಟು ದೊಡ್ಡದೂ ಅಲ್ಲದ ಅಷ್ಟು ಸಣ್ಣದೂ ಅಲ್ಲದ ಈ ಲೋಕದಲ್ಲಿ

ಅರಬಿ ಚಹರೆಯ ಆ ನಡುವಯಸ್ಸಿನ ಗಗನಸಖಿ ನನ್ನ ತಳಹರಿದ ಬೂಟನ್ನು ನೋಡಿ ಮನಸ್ಸಿನಲ್ಲೇ ನಗುತ್ತಿದ್ದಳು. ಅವಳು ಇನ್ನಷ್ಟು ನಗಲಿ ಎನ್ನುವ ಹುನ್ನಾರದಿಂದ ನಾನು ಹರಿದ ಬೂಟನ್ನು ಇನ್ನಷ್ಟು ಮುಂದಕ್ಕೆ ಕಾಣುವಂತೆ ಕಾಲು ಉದ್ದ ಮಾಡಿ ಕೂತೆ. ಎರಡನೇ ಮಹಾಯುದ್ಧದಲ್ಲಿ ಸೈನಿಕರನ್ನು ಒಯ್ಯುತ್ತಿದ್ದ ಹಡಗಿನ ಮಾದರಿಯ ಆ ವಿಮಾನ ಸಿರಿಯಾ ದೇಶದ ರಾಜಧಾನಿ ದಮಾಸ್ಕಸ್ನಿಂದ ಆಕಾಶಕ್ಕೆ ಏರಿ ಅರೇಬಿಯಾದ ಮರುಭೂಮಿಯ ಮೇಲೆ ಕತ್ತಲಲ್ಲಿ ನಕ್ಷತ್ರದಂತೆ ಭಾರತದ ಕಡೆ ಹಾರುತ್ತಿತ್ತು. ನಾವು ಭಾರತದ ನಾಲ್ಕು ಮಂದಿ ಬರಹಗಾರರು ಕಳೆದ ವರ್ಷ ರಂಜಾನ್ ತಿಂಗಳ ನಡುವಿನ ಹತ್ತು ದಿನಗಳ ಕಾಲ ಸಿರಿಯಾ ಎಂಬ ಅರಬ್ ಗಣರಾಜ್ಯದಲ್ಲಿ ಓಡಾಡಿ ವಾಪಸಾಗುತ್ತಿದ್ದೆವು.

ನನಗೆ ಮನಸ್ಸಿನಲ್ಲೇ ನಗುಬರುತ್ತಿತ್ತು. ಒಂದು ಕಾಲದಲ್ಲಿ ಪರಮ ಸುಂದರಿಯಾಗಿರಬಹುದಾಗಿದ್ದ ಆ ಅಗಲ ಹೆಗಲಿನ, ದೊಡ್ಡ ಕಣ್ಣುಗಳ, ಉದ್ದಾನುದ್ದ ಅರೇಬಿಯನ್ ಗಗನಸುಖಿ. ಬಹುಶಃ ಯೌವನವಿಡೀ ಕಣ್ಣು ಮಿಟುಕಿಸಿ, ಮಿಟುಕಿಸಿ ಈಗ ಬೇಡವೆಂದು ಕೊಂಡರೂ ಅವಳ ಕಣ್ಣುಗಳು ಮಿಟುಕಿಸುವಂತೆ ನಾಟಕವಾಡಿ ಸುಮ್ಮನಾಗುತ್ತಿದ್ದವು. ಬಹುಶಃ ತಳಹರಿದ ನನ್ನ ಶೂಗಳನ್ನು ಕಂಡ ಆಕೆ ಈತ ಯಾವನೋ ವಿಸಾ ಇಲ್ಲದೆ ತನ್ನ ದೇಶದಿಂದ ಹೊರದಬ್ಬಲ್ಪಟ್ಟಿರುವ ಭಾರತೀಯ ನಿರಾಶ್ರಿತನಿರಬಹುದು ಎಂದು ಗದರಿಸಿ ಮಜಾ ಪಡೆದುಕೊಳ್ಳುವ ಹುನ್ನಾರದಲ್ಲಿರುವಂತೆ ಕಂಡಿತು.

‘ನಾನೊಬ್ಬ ಭಾರತೀಯ ಬರಹಗಾರ, ನನ್ನ ಹೊಸ ಶೂಗಳನ್ನು ನಿಮ್ಮ ದೇಶದ ಪುರಾತನ ಮಸೀದಿಯೊಂದರ ಮುಂದಿನಿಂದ ಪಾಲಿಶ್ ಮಾಡುವ ಹುಡುಗರು ಕದ್ದುಕೊಂಡು ಹೋದರು. ಹಾಗಾಗಿ ಯಾರೋ ಬಳಸಿದ್ದ ಈ ಹಳೆಯ ಶೂಗಳನ್ನು ನಾನು ಬಳಸಬೇಕಾಯಿತು’ ಎಂದು ನಾನೂ ಅವಳಂತೆ ಕಣ್ಣು ಮಿಟುಕಿಸಿ ಹೇಳಿದೆ. `ಯಾವ ಮಸೀದಿಗೆ ಹೋಗಿದ್ದೆ?’ ಎಂದು ಕೇಳಿದಳು.

`ನಿಮ್ಮ ದೇಶದ ಹಮ್ಸ್ ಎಂಬ ನಗರದಲ್ಲಿರುವ ಖಾಲಿದ್ ಬಿನ್ ಅಲ್ ವಾಲಿದ್ ಎಂಬ ಪುರಾತನ ಮಸೀದಿಯ ಅಂಗಳದಲ್ಲಿ ಶೂ ಬಿಚ್ಚಿಟ್ಟು ಮಸೀದಿಯ ಒಳಹೊಕ್ಕಿದ್ದೆ. ಹೊರ ಬಂದಾಗ ಯಾರೋಹುಡುಗರು ಕದ್ದೊಯ್ದಿದ್ದರು. ಅದನ್ನು ನೋಡಿ ನನ್ನನ್ನು ಅಲ್ಲಿಗೆ ಕರೆದೊಯ್ಯಿದ್ದ ನಿಮ್ಮ ದೇಶದ ಹಿರಿಯರಾದ ಲೇಖಕರಿಗೆ ನಾಚಿಕೆಯಾಗಿ ತುಂಬಾ ಬೇಜಾರುಪಟ್ಟುಕೊಂಡು ಕ್ಷಮಿಸಬೇಕೆಂದು ತಮ್ಮ ದೇಶದ ಪರವಾಗಿ ಕ್ಷಮೆ ಕೇಳಿ ಈ ಹರಿದ ಶೂ ಕೊಟ್ಟರು’ ಎಂದು ಹೇಳಿದೆ.ಆಕೆಯೂ ಸ್ವಲ್ಪ ಬೇಜಾರುಪಟ್ಟುಕೊಂಡಂತೆ ಮುಖ ಮಾಡಿಕೊಂಡು ಕಥೆ ಕೇಳಿ ಬೋರು ಹೊಡೆಸಿಕೊಂಡಂತೆ ನನ್ನ ಎದುರಿಂದ ಎದ್ದು ಹೋದಳು. ಅವಳು ಎದ್ದು ಹೋದ ಅತ್ತರಿನ ಪರಿಮಳ ವಿಮಾನದಲ್ಲೆಲ್ಲ ಹರಡಿಕೊಂಡು ಓಡಾಡಲು ತೊಡಗಿತು.
ಹಮ್ಸ್ ಎನ್ನುವುದು ಸಿರಿಯಾ ದೇಶದ ಮೂರನೇ ದೊಡ್ಡ ನಗರ ಕ್ರಿಸ್ತ ಹುಟ್ಟುವುದಕ್ಕಿಂತಲೂ 2300 ವರ್ಷಗಳಷ್ಟು ಇತಿಹಾಸ ಹೊಂದಿರುವ ಈ ಪಟ್ಟಣದ ಸೆರಗಿನಲ್ಲಿ ಆಸಿ ಎಂಬ ನದಿ ಉತ್ತರಕ್ಕೆ ಹರಿದು ಮೆಡಿಟರೇನಿಯನ್ ಕಡಲನ್ನು ಸೇರುತ್ತದೆ. ಆಸಿ ಎಂದರೆ ಬಂಡುಕೋರ ಎಂದು ಅರ್ಥ. ಬಂಡುಕೋರ ಯಾಕೆಂದರೆ ಈ ಪ್ರಾಂತದಲ್ಲಿ ಇದೊಂದೆ ನದಿ ಉತ್ತರಕ್ಕೆ ಹರಿಯುವುದು ಉಳಿದ ನದಿಗಳೆಲ್ಲ ಬೇರೆ ದಿಕ್ಕುಗಳಿಗೆ ಹರಿಯುತ್ತವೆ !

ಈ ಹಮ್ಸ್ ನಗರದ ನಡುಭಾಗದಲ್ಲಿರುವುದೇ ಖಾಲಿದ್ ಇಬ್ನ್ ಅಲ್ ವಾಲಿದ್ನ ಮಸೀದಿ. ಈ ಮಸೀದಿ ಸುಮಾರು 1600 ವರ್ಷಗಳಷ್ಟು ಹಳೆಯದು. ಈ ಖಾಲಿದ್ ಇಬ್ನ್ ವಾಲಿದ್ ಎಂಬಾತ ‘ಪಡೆದವನ ಖಡ್ಗ’ ಎಂದೇ ಹೆಸರಾದವ. ಒಂದು ಕಾಲದಲ್ಲಿ ಪ್ರವಾದಿ ಮಹಮ್ಮದರನ್ನೇ ಯುದ್ಧದಲ್ಲಿ ಸೋಲಿಸಿದವ. ಅನಂತರ ಪ್ರವಾದಿಯವರಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಅವರ ನಂಬುಗೆಯ ಸೇನಾನಿಯಾಗಿ ಇಸ್ಲಾಂ ಧರ್ಮವನ್ನು ಇರಾನ್ ಇರಾಕ್ಗಳಿಗೆಲ್ಲ ಖಡ್ಗದ ಮೊನೆಯಿಂದ ಹರಡಿದ ಬಹುಪೂಜ್ಯನಾದ ಸೇನಾನಿ. ಬೈಜಾಂಟಿನ್ ಸೇನೆಯನ್ನು ಹುರಿದು ಹುಡಿ ಮಾಡಿ ಮಧ್ಯ ಪ್ರಾಚ್ಯದ ಬಹುತೇಕ ಕಡೆ ಇಸ್ಲಾಮನ್ನು ನುಗ್ಗಿಸಿದ ಧರ್ಮಬೀರು ಈತ. ಒಂದು ಕಾಲದಲ್ಲಿ ಸೂರ್ಯ ದೇವತೆಯ ದೇವಾಲಯವಿದ್ದ ಹಮ್ಸ್ ಈಗ ಖ್ಯಾತವಾಗಿರುವುದು ಈತನ ಹೆಸರಿನ ಮಸೀದಿಯಿಂದಾಗಿ.

ಹಮ್ಸ್ ಎಂಬ ಈ ಪುರಾತನ ನಗರದ ಹಿರಿಯರಾದ ಅರೇಬಿಯನ್ ಲೇಖಕರೊಬ್ಬರು ಬೆಳ್ಳಂಬೆಳಗ್ಗೆಯೇ ಒಂದು ಹಳೆಯದಾದ ಟ್ಯಾಕ್ಸಿಯೊಂದರಲ್ಲಿ ಕೂರಿಸಿಕೊಂಡು ಈ ಪುರಾತನ ಮಸೀದಿ ತೋರಿಸಲು ನನ್ನನ್ನು ಬಲವಂತವಾಗಿ ಕರೆದೊಯ್ದಿದ್ದರು. ಅದಾಗಲೇ ಈ ಪುರಾತನ ದೇಶದ ಸಾವಿರಾರು ವರ್ಷಗಳ ಇತಿಹಾಸದ ಭಾರದಿಂದ ಜರ್ಜರಿತನಾಗಿದ್ದ ನಾನು ಸಾಕಷ್ಟು ಅನಾಸಕ್ತಿಯಿಂದಲೇ ನನ್ನ ಹೊಚ್ಚ ಹೊಸ ಶೂ ಅನ್ನು ಮಸೀದಿಯ ಹೊರಗೆ ಬಿಚ್ಚಿಟ್ಟು ಒಳ ಹೊಕ್ಕಿದ್ದೆ. ಹೊರ ಬಂದಾಗ ನನ್ನ ಸುಂದರವಾದ ಶೂಗಳು ಕಾಣದಾಗಿ ಇತಿಹಾಸದ ಕ್ರೌರ್ಯಕ್ಕೆ ಸಿಲುಕಿ ನಲುಗಿದಂತಾಗಿದ್ದೆ.. ಈಗ ನೋಡಿದರೆ ಣಡಿಠರಿಚಿಟಿ ಕುದರೆಯ ಹಾಗಿರುವ ಈ ಭಾರಿ ವಿಮಾನದೊಳಗೆ ಮರಳುಗಾಡಿನ ಮೇಲೆ ಆಕಾಶದಲ್ಲಿ ನನ್ನ ಕಥೆ ಕೇಳಲು ಇದ್ದ ಈ ಹಳೆಯ ಸುಂದರಿಗಗನ ಸಖಿಯೂ ಮಾಯವಾಗಿ ನಾನು ಒಬ್ಬಂಟಿ ಜೇನು ಹುಳುವಿನ ಹಾಗೆ ವಿಮಾನದ ಕಿಟಕಿಯ ಗಾಜಿಗೆ ಮುಖ ಉಜ್ಜುತ್ತಾ ಕತ್ತಲಲ್ಲಿ ಕೆಳಗಿನ ಮರಳುಗಾಡನ್ನು ಊಹಿಸುತ್ತಾ ಕುಳಿತಿದ್ದೆ.

* * *

ಸಿರಿಯಾದಲ್ಲಿ ರಂಜಾನ್ ತಿಂಗಳು ಭಯಂಕರ ಉಪವಾಸದಿಂದಲೂ ಅಪಾರ ಶೀಲ ಮತ್ತು ಬ್ರಹ್ಮಚರ್ಯದಿಂದಲೂ ತುಂಬಿರುತ್ತದೆ ಎಂದು ಹೆದರಿಕೊಂಡಿದ್ದ ನಾನು ಒಂದು ಇರುಳು ಎಲ್ಲ ಭಾರತೀಯ ಲೇಖಕರೂ ಮಲಗಿ ಗೊರಕೆ ಹೊಡೆಯಲು ಶುರು ಮಾಡಿದಮೇಲೆ ದಮಾಸ್ಕಸ್ ನಗರದ ಬೀದಿಗಳಲ್ಲಿ ಬೀದಿ ದೀಪಗಳ ಬೆಳಕಿನಲ್ಲಿ ನಡೆದಾಡುತ್ತಿದ್ದೆ. ದಮಾಸ್ಕಸ್ ಈ ಭೂಗೋಳದ ಅತಿ ಪುರಾತನವಾದ ಜೀವಂತ ನಗರ. ಆರು ಸಹಸ್ರಮಾನಕ್ಕಿಂತ ಹಳೆಯದು. ಇಸ್ಲಾಂ ಈ ನಗರಿಯನ್ನು ಪ್ರವೇಶಿಸಿದ ಅತಿ ಕಿರಿಯ ನಾಗರಿಕತೆ ಅದಕ್ಕಿಂತ ಹಿಂದೆ ಕ್ರೈಸ್ತ ಧರ್ಮ ಅದಕ್ಕೂ ಹಿಂದೆ ಬೈಜಾಂಟಿಯನ್ನರು, ಅದಕ್ಕೂ ಹಿಂದೆ ರೋಮನ್ನರು, ಗ್ರೀಕರು, ಅಸೀರಿಯನ್ನರು, ಅದಕ್ಕೂ ಹಿಂದೆ ಅರೇಮಿಯನ್ನರು, ಅದಕ್ಕೂ ಹಿಂದಿನ ಫಿನೀಷಿಯನ್ನರು ಎಲ್ಲರೂ ಈ ನಗರವನ್ನು ಹಿಡಿದು ಮುದ್ದಾಡಿ ಹಿಪ್ಪೆ ಮಾಡಿ ಬಿಸಾಕಿ ಎಲ್ಲಕ್ಕೂ ಸಾಕ್ಷಿ ಎಂಬಂತೆ ನಮ್ಮ ಮೈಸೂರಿಗೆ ಚಾಮುಂಡಿಬೆಟ್ಟ ಇರುವಂತೆ ಈ ನಗರದ ಮೇಲೊಂದು ಕಾಸಿಯೋ ಎಂಬ ಬೋಳುಗುಡ್ಡ. ಅದರ ಕೆಳಗೆ ಈ ನಗರ ನಾಗರಿಕತೆ.ಆ ನಗರದೊಳಗೆ ನಡುರಾತ್ರಿ ಅಲೆದಾಡುತ್ತಿರುವ ನಾನು. ಈ ದೇಶದ ಸರ್ವಾಧಿಕಾರಿ ಅಧ್ಯಕ್ಷನ ಅರಮನೆ ಎದುರು ಕೈಯಲ್ಲಿ ಚಿನ್ನಿದಾಂಡು ಹಿಡಿದ ಹುಡುಗರಂತೆ ಸೈನ್ಗನ್ಗಳನ್ನು ಹಿಡಿದು ಕಾಯುತ್ತಿರುವ ಸೈನಿಕರು. ಹೆದರಿಕೆಯಾಗುತ್ತಿತ್ತು. ಆದರೂ ಹೆದರದೆ ಮೆಲ್ಲಗೆ ನಡೆದು ಒಂದು ಗುಹಾ ಮಾಳಿಗೆಯೊಳಗೆ ನಡೆಯುತ್ತಿರುವ ಬೆಲ್ಲಿ ನೃತ್ಯ ಶಾಲೆಯೊಳಕ್ಕೆ ಹೊಕ್ಕೆ.

ಅಲ್ಲಿ ಎಲ್ಲ ದೇಶಗಳ ಸುಂದರಿಯರೂ ಸರದಿಯಲ್ಲಿ ಬಂದು ಬೆಲ್ಲಿ ನೃತ್ಯ ಮಾಡುತ್ತಿದ್ದರು. ರಷ್ಯನ್ ಸುಂದರಿಯರು, ಹಂಗೇರಿಯನ್ ಸುಂದರಿಯರು, ಹಾಲೆಂಡಿನ ದಡೂತಿ ನರ್ತಕಿಯರು ಕೊರಿಯಾದ ನಗ್ನ ನೃತ್ಯ ಕಲಾವಿದೆಯರು, ಬಾಗ್ದಾದಿನ ಸುರಸುಂದರಿಯರು! ಎಲ್ಲರೂ ಆ ಪವಿತ್ರ ತಿಂಗಳಿನ ಇರುಳಿನಲ್ಲಿ ನೃತ್ಯ ಸೇವೆಯಲ್ಲಿ ತೊಡಗಿದ್ದರು. ಕೊನೆಗೆ ಭಾರತದ ಸುಂದರಿಯೊಬ್ಬಳು ‘ಚೋಲಿ ಕೆ ಪೀಚೆ ಕ್ಯಾ ಹೈ’ ಎಂದು ಅದ್ಭುತವಾಗಿ ನರ್ತಿಸಿದಳು. ಅವಳ ನೃತ್ಯಕ್ಕೆ ಮಾರು ಹೋದ ಅಲ್ಲಿನ ಕಲಾರಸಿಕರು ಅದೇ ಅಭಿಮಾನದಿಂದ ನನ್ನತ್ತಲೂ ನೋಡಿ ನನಗೂ ದ್ರಾಕ್ಷಾರಸವನ್ನೂ, ಹುಕ್ಕಾ ಎಂಬ ಗುಡಗುಡಿಯನ್ನೂ ಬೇಕಾದಕ್ಕಿಂತ ಹೆಚ್ಚೆ ಒದಗಿಸಿ ಹಿಂದ್ ಎಂಬ ದೇಶದಿಂದ ಬಂದಿರುವ ನೃತ್ಯಗಾತಿಯಾದ ಅವಳನ್ನು ಲೇಖಕನಾದ ನನ್ನನ್ನೂ ಅಪ್ಪಿಕೊಂಡರು. ಆ ಮುಂಬಯಿಯ ನೃತ್ಯಗಾತಿಯಾದರೋ ನನ್ನನ್ನು ಸವತಿ ಮಾತ್ಸರ್ಯದಿಂದ ತಿನ್ನುವಂತೆ ನೋಡುತ್ತಿದ್ದಳು.

ಮಾರನೆಯ ದಿನ ಭಾರತೀಯ ಲೇಖಕರು ನನ್ನನ್ನು ಕೊಂಚ ಪ್ರೀತಿಯಿಂದಲೇ ಗದರಿ ಸಾಂಸ್ಕೃತಿಕ ರಾಯಭಾರಿಗಳಾಗಿ ಬಂದ ನಾವು ಹೀಗೆ ಈ ನಗರದ ಇರುಳ ಬದುಕನ್ನು ಸವಿಯುವುದು ರಾಜಕೀಯವಾಗಿ ತಪ್ಪು ಎಂದು ಹೇಳಿದ್ದರು. ಹದಿಮೂರನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಇಬ್ನ್ ಬತೂತಾ ಎಂಬ ಅರಬೀ ಪ್ರವಾಸಿ ಭಾರತದಲ್ಲಿ ಕಾಣಬಾರದ ಏನನ್ನೆಲ್ಲಾ ಕಂಡು ಮಾಡಬಾರದ ಏನನ್ನೆಲ್ಲಾ ಉಂಡಿದ್ದ ಎಂದು ನಾನು ಅವರಿಗೆ ವಿವರಿಸಿ ಹೌದಲ್ಲಾ ಅಂತ ಅವರಿಗೆ ಅನಿಸುವ ಹಾಗೆ ಮಾಡಬೇಕಾಯಿತು.

****

ಈಗ ಮೈಸೂರಿನಲ್ಲಿ ಕುಳಿತು ಸಿರಿಯಾದ ಕನಸು ಕಾಣುತ್ತಿದ್ದೇನೆ. ಕಳೆದ ತಿಂಗಳು ರಂಜಾನ್. ಮೈಸೂರು ಚೌಟ್ರೂಮಿನಲ್ಲಿ ಹುಡುಗನೊಬ್ಬ ಪರಿಚಯವಾಗಿದ್ದ. ಆತ ನನ್ನನ್ನು ಹೆಂಗಸೆಂದು ತಿಳಿದಿದ್ದ. ಆಮೇಲೆ ಗಂಡಸೆಂದು ಆತನಿಗೆ ಗೊತ್ತಾಯಿತು. ಆದರೂ ಬಿಡಲಿಲ್ಲ. ಬಹುಶಃ ಆತನ ಹೆಸರು ಫಹಾದ್. ಇಲ್ಲಿನ ಪ್ರತಿಷ್ಠಿತ ಕಾಲೇಜಿನಲ್ಲಿ ಫಾರ್ಮಸಿ ವಿದ್ಯಾಥರ್ಿ. ಆತನಿಗೆ ಅವಶ್ಯವಾಗಿ ಹಣ ಬೇಕಾಗಿತ್ತು. `ನೀನು ಗಂಡಸಾದರೂ ಪರವಾಗಿಲ್ಲ. ಹಣ ಬೇಕು’ ಎಂದ. `ಇಲ್ಲ ಮಾರಾಯ ನಾನು ಮದುವೆ ಆಗಿರುವ ವಯಸ್ಸಾದ ಗಂಡಸು’ ಎಂದೆ. ಆತ ಬಿಡಲಿಲ್ಲ. `ಆದರೂ ಪರವಾಗಿಲ್ಲ. ಅಗತ್ಯವಾಗಿ ಹಣ ಬೇಕು’ ಅಂದ. `ಗಂಡಸು ಗಂಡಸಿಗೆ ಏನೆಲ್ಲಾ ಸೇವೆ ಮಾಡಬಹುದೋ ಅದನ್ನೆಲ್ಲಾ ಮಾಡುತ್ತೇನೆ. ನನಗೆ ಹಣ ಬೇಕು’ ಎಂದು ಕಂಪ್ಯೂಟರ್ನಲ್ಲೇ ಗಳಗಳ ಅತ್ತ. `ಬೇರೆ ದೇಶದಿಂದ ಓದಲು ಬಂದಿದ್ದೇನೆ. ಹಣ ಮುಗಿದಿದೆ’ ಎಂದು ತೋಡಿಕೊಂಡ. ಯಾವ ದೇಶ ಎಂದು ಕೇಳಿದೆ. ಇರಾನೋ ಇರಾಕೋ ಎಂದೆಲ್ಲ ಹೇಳಿಕೊಂಡ. ಅವನಿಂದ ತಪ್ಪಿಸಿಕೊಳ್ಳಬೇಕಾದರೆ ನನಗೆ ಸಾಕು ಸಾಕಾಯಿತು.

ಆ ಫಹಾದ್ ಎಂಬಾತ ನಿಜವೋ ಸುಳ್ಳೋ ಇರಾನೋ ಇರಾಕೋ ಕೊನೆಗೂ ಗೊತ್ತಾಗಲಿಲ್ಲ. ಆದರೆ ಅದೇ ಹೆಸರಿನ ಪಾಕ್ ಉಗ್ರಗಾಮಿಯೊಬ್ಬ ಮೊನ್ನೆ ಮೈಸೂರಿನಲ್ಲಿ ಸಿಕ್ಕಿಬಿದ್ದ. ಪೊಲೀಸರ ಪ್ರಕಾರ ಕೇರಳೀಯನಾದ ಆತನ ಅಪ್ಪನಿಗೆ ಮೂರು ಜನ ಹೆಂಡತಿಯರು. ಈ ಫಹಾದ್ ಮೂರನೇ ಹೆಂಡತಿಯ ಮಗ. 1971 ರಲ್ಲಿ ಫಹಾದ್ನ ಅಪ್ಪ ಪಾಕಿಸ್ತಾನಕ್ಕೆ ಓಡಿ ಹೋಗಿ ಮೂರನೇ ಮದುವೆಯಾಗಿದ್ದ. ಅದರಲ್ಲಿ ಉಂಟಾದ ಮಗನೇ ಈ ಫಹಾದ್. ಅಲ್ಲಿ ಆತ ಉಗ್ರಗಾಮಿಯಾದ. ಈಗ ಸಿಕ್ಕಿಬಿದ್ದಿದ್ದಾನೆ. ಇನ್ನು ಆತನಿಗೆ ನರಕ ಕಾದಿದೆ. ಮೊದಲ ಹೆಂಡತಿಯ ಮಗನೂ ಸಿಕ್ಕಿ ಬೀಳಲಿದ್ದಾನೆ. ಬಹುಶಃ ಆತನಿಗೂ ನರಕ ಕಾದಿದೆ.

ಅಷ್ಟು ದೊಡ್ಡದೂ ಅಲ್ಲದ ಅಷ್ಟು ಸಣ್ಣದೂ ಅಲ್ಲದ ಈ ಲೋಕದ ಇತಿಹಾಸ, ವರ್ತಮಾನ, ನಾಗರಿಕತೆ, ಹುಚ್ಚು ಹುಡುಗಾಟ, ಕಾಮ, ಯುದ್ಧ, ಭಯೋತ್ಪಾದನೆ, ತಮಾಷೆ ಈ ಎಲ್ಲದರಿಂದ ಜರ್ಜರಿತನಾಗಿ ಓಡಾಡುತ್ತಿದ್ದೇನೆ.

3 thoughts on “ಅಷ್ಟು ದೊಡ್ಡದೂ ಅಲ್ಲದ ಅಷ್ಟು ಸಣ್ಣದೂ ಅಲ್ಲದ ಈ ಲೋಕದಲ್ಲಿ

 1. ಪ್ರಿಯ ಸಂಜಯ,
  ನನ್ನ ಬ್ಲಾಗು-
  ನಿಮ್ಮ ಪ್ರತಿಕ್ರಿಯೆ
  ನಿಮ್ಮ ಬ್ಲಾಗು-
  ನನ್ನ ಪ್ರತಿಕ್ರಿಯೆ
  ಇದೆಲ್ಲ ಇಷ್ಟು ಚಂದ ಎಂದು ಮೊದಲು ಗೊತ್ತಿರಲಿಲ್ಲ
  ನೀವೂ ತುಂಬ ವಸ್ತುನಿಷ್ಟವಾಗಿ ಬರೆಯುತ್ತೀರಿ
  `ವಸ್ತುನಿಷ್ಠ’ನಾ? `ವಸ್ತುನಿಷ್ಟ’ನಾ? ಹೇಗೆ ಬರೆಯಬೇಕು ಗೊತ್ತಾಗ್ತಾ ಇಲ್ಲ
  ಇದೇ ನೋಡಿ ನನ್ನ ಸಮಸ್ಯೆ!
  ಅಂದ ಹಾಗೆ ನಿಮ್ಮ ನಿಜ ನಾಮದೇಯ ನನಗೆ ಗೊತ್ತಿಲ್ಲ
  ನೀವೂ ನನ್ನ ಹಾಗೆ ಕೊಡಗಿನವರಾ?
  ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s