ಮೈಸೂರು ಸುಬ್ರಹ್ಮಣ್ಯ ಚಂದ್ರಶೇಖರ್ ಅಯ್ಯರ್ ಮತ್ತು ಹೋರಾಶಾಸ್ತ್ರ

ಚಂದ್ರಶೇಖರ ಅಯ್ಯರ್‘ಗಡಿಯಾರಗಳು ಮುರಿದು ಹೋದಷ್ಟು ಮನುಷ್ಯದೊಡ್ಡ ಕಾಲಜ್ಞಾನಿಯಾಗುತ್ತಾನೆ, ಆಸ್ಟತ್ರೆಗಳಲ್ಲಿ ಮನುಷ್ಯ ಹೆಚ್ಚು ತೀರಿಹೋದಷ್ಟೂ ಮಾನವ ಶರೀರ ಶಾಸ್ತ್ರ ಬೆಳೆಯುತ್ತಾ ಹೋಗುತ್ತದಲ್ಲಾ ಹಾಗೆ’ ಎಂದು ನನಗೆ ನನ್ನ ಅಜ್ಜ ಕುಳಿತಲೈ ಸುಬ್ರಹ್ಮಣ್ಯ ಅಯ್ಯರ್ ಲಕ್ಷಣ ಅಯ್ಯರ್ ಬುದ್ದಿವಾದ ಹೇಳಿ ಗಡಿಯಾರ ರಿಪೇರಿ ಮಾಡು ಕೂರಿಸುತ್ತಿದ್ದರು ಎಂದು ಮೈಸೂರಿನ ಪೌಂಟೈನ್ ಸರ್ಕಲ್ ಹತ್ತಿರವಿರುವ ಶಿವಾಜಿ ರಸ್ತೆಯ ಹೊರಾಲಜಿಸ್ಟ್ ಎಂ. ಎಸ್. ಚಂದ್ರಶೇಖರ್ ಅಯ್ಯರ್ ಆ ಕತ್ತಲಲ್ಲಿ ಕ್ಯಾಂಡರ್ ಹಚ್ಚಿ ನನಗೆ ವಿವರಿಸಿ ಹೇಳುತ್ತಿದ್ದರು.

ಅವರಿಗೆ ಈಗ ಹತ್ತಿರ ಹತ್ತಿರ ಎಂಬತ್ತು ವರ್ಷ. ಅವರಿಗಿಂತ ಹತ್ತುವರ್ಷ ಕಡಿಮೆ ವಯಸ್ಸಿನ ಮಡದಿ ವಿದ್ಯಾ ಆ ಕತ್ತಲಲ್ಲಿ ನನಗೆ ಟೀ ಮಾಡಿಕೊಡುವುದು ಹೇಗೆ ಎಂದು ಚಿಂತಿಸುತ್ತಾ, ‘ಅಯ್ಯೋ ಯಾವತ್ತೂ ಹೋಗಿಲ್ಲದ ಕರೆಂಟು ಈವತ್ತೇ ಹೋಗಬೇಕೇ’ ಎಂದು ಬೇಸರ ಮಾಡಿಕೊಳ್ಳುತ್ತಾ ಕೂತಿದ್ದರು. ಹಾಗೆ ನೋಡಿದರೆ ಆ ಮನೆಯೊಳಗೆ ಕರೆಂಟ್ ಇಲ್ಲದಿದ್ದರೂ ಆ ಮನೆಯ ಹೊರಗೆ ಇನ್ನೂ ಉಳಿದಿದ್ದ ನಸುಬೆಳಕು ಆ ಮನೆಯನ್ನು, ಮನೆಯ ಹೊರಗಿನ ತುಂಬಾ ಅಸಹಜವಾಗಿ ಬಾಗಿ ಹೋಗಿದ್ದ ಜೋಡಿ ತೆಂಗಿನ ಮರಗಳನ್ನೂ, ಅದರ ಕೆಳಗಿದ್ದ ಕಲ್ಲು ಚಪ್ಪಡಿಯ ಲತಾಮಂಟಪವನ್ನೂ ಅಪೂರ್ವವಾಗಿ ಬೆಳಗುತ್ತಿತ್ತು. ಮನೆಯ ಒಳಗಡೆ ಗೋಡೆಗಳ ತುಂಬಾ ಮೇಜಿನ ಮೇಲೆ, ಕಪಾಟುಗಳ ಒಳಗೆ, ರಿಪೇರಿಯಾದ, ರಿಪೇರಿಗೆ ಬಂದಿದ್ದ, ರಿಪೇರಿಯಾಗಿದ್ದ ಪುರಾತನ ಗೋಡೆಗಡಿಯಾರಗಳೂ, ರೈಲುಗಡಿಯಾರಗಳೂ, ಅಲರಾಂ ಗಡಿಯಾರಗಳೂ, ಕೈಗಡಿಯಾರಗಳೂ, ಜೇಬುಗಡಿಯಾರಗಳೂ ಕಿಕ್ಕಿರಿದು ತುಂಬಿ ಒಬ್ಬರಜೊತೆಗೊಬ್ಬರು ಮಾತನಾಡುತ್ತಿರುವಂತೆ ಸದ್ದು ಮಾಡುತ್ತಿದ್ದವು. ಇನ್ನು ಕೆಲವು ತೀರಿಹೋದವರ ಹಾಗೆ ಮೌನವಾಗಿದ್ದವು.

“ನಾನು ಹುಟ್ಟಿದಾಗ ನನ್ನತಾತ ಕುಳಿತಲೈ ಲಕ್ಷ್ಮಣ ಅಯ್ಯರ್ ಇನ್ನೂ ತೀರಿಹೋಗಿರಲಿಲ್ಲ. ಇಲ್ಲದಿದ್ದರೆ ನನಗೆ ಅವರ ಹೆಸರನ್ನೇ ಇಡುತ್ತಿದ್ದರು. ಹಾಗಾಗಿ ನನ್ನ ತಮ್ಮನಿಗೆ ಅವರ ಹೆಸರು ಬಂತು” ಎಂದು ಚಂದ್ರಶೇಖರ ಅಯ್ಯರ್ ಆಕತ್ತಲಲ್ಲಿ ಹೇಳುತ್ತಾ ಹೋರಾಶಾಸ್ತ್ರದ ಕುರಿತಾದ ಸಂಸ್ಕೃತ ಗ್ರಂಥವನ್ನು ಹುಡುಕುತ್ತಾ ತಡಕಾಡುತ್ತಿದ್ದರು. ನಾನು ‘ಪರವಾಗಿಲ್ಲ, ಈ ಕತ್ತಲಲ್ಲಿ ಗ್ರಂಥಗಳಿಗಾಗಿ ಹುಡುಕಾಡುವುದು ಬೇಡ ಈಗ ನಿಮ್ಮ ಮನಸ್ಸಿಗೆ ಏನು ಅನ್ನಿಸುತ್ತದೆಯೋ ಅದನ್ನು ಹೇಳಿ’ ಎಂದು ಸೂಚಿಸಿದೆ.

‘ಇಲ್ಲ ಇವರ ಮನಸ್ಸಿಗೆ ಏನು ಅನ್ನಿಸುತ್ತದೆಯೋ ಅದನ್ನು ಇವರು ಮಾಡಿಯೇ ಮಾಡುತ್ತಾರೆ. ಮೊನ್ನೆ ಏನು ಮಾಡಿದರು ಗೊತ್ತಾ, ನಮ್ಮ ದೇಶದ ಎಲ್ಲ ವಿಶ್ವವಿದ್ಯಾನಿಲಯಗಳ್ಲಿ ಹೋರಾಶಾಸ್ತ್ರವನ್ನು ಕಲಿಸಲು ಏಪರ್ಾಡು ಮಾಡಬೇಕು ಎಂದು ವಿನಂತಿಸಿ ಇವರು ನಮ್ಮ ರಾಷ್ಟ್ರಪತಿ ಅಬ್ದುಲ್ ಕಲಾಂ ಸಾಹೇಬರಿಗೆ ಪತ್ರ ಬರೆದರು. ನೋಡಿ ಎಂಟೇದಿನಗಳಲ್ಲಿ ಅವರಿಂದ ಉತ್ತರವೂ ಬಂದಿದೆ. ಇವರದು ಹಠ ಅಂದರೆ ಹಠ. ಟೈಂ ಅಂದರೆ ಟೈಂ. ಅದರ ಮುಂದೆ ಬೇರೆ ಯಾವ ಮಾತೂ ನಡೆಯುವುದಿಲ್ಲ ಎಂದು’ ವಿದ್ಯಾ ಅವರು ಟಾರ್ಚ್ ಒಂದನ್ನು ತಂದು ಆ ಗ್ರಂಥವನ್ನು ಹುಡುಕಲು ತಾವೂ ಆ ಕತ್ತಲಲ್ಲಿ ಪ್ರಯತ್ನಿಸಲು ತೊಡಗಿದರು.

ಆ ಟಾರ್ಚಿನ ಬೆಳಕಿನಲ್ಲಿ ಅವರಿಬ್ಬರ ಮದುವೆಯ ಪೊಟೋ ಗೋಡೆಯಿಂದ ಎದ್ದು ಬರಲು ಹವಣಿಸುತ್ತಿರುವಂತೆ ಕಾಣುತ್ತಿತ್ತು. ಇಬ್ಬರ ಎಳೆಯ ಮುಖಗಳಲ್ಲೂ ಅದೇನೋ ಸಾಧಿಸಬೇಕೆಂಬ ಹಠ ಎದ್ದು ಕಾಣುತಿತ್ತು. ಅದರ ಮೇಲಕ್ಕೆ ಚಂದ್ರಶೇಖರ್ ಅವರ ತಂದೆ ಸುಬ್ರಹ್ಮಣ್ಯ ಅಯ್ಯರ್, ತಾಯಿ ಸರೋಜಮ್ಮ ಅವರ ಪೋಟೋ- ನೋಡಿದರೆ ನಿತ್ಯಪೂಜೆಗೊಳ್ಳುತ್ತಿರುವಂತೆ ಕಾಣಿಸುತ್ತಿತ್ತು. ಇನ್ನೂ ಮೇಲಕ್ಕೆ ಮಸುಕು ಮಸುಕಾಗಿ ಅಜ್ಜ ಲಕ್ಷ್ಮಣ ಅಯ್ಯರ್ ಅಜ್ಜಿ-ನಾಗಮ್ಮ ಅವರ ಚಿತ್ರ ಕಾಣಿಸುತ್ತಿತ್ತು. ಇನ್ನೂ ಮಸುಕು ಮಸುಕಾಗಿ ಹತ್ತಾರು ಪುರಾತನ ಗಡಿಯಾರಗಳು ಅವುಗಳ ಸುತ್ತ ಮೌನವಾಗಿ ಗೋಡೆಗೆ ಹೊಡೆಸಿಕೊಂಡು ಅಲ್ಲಾಡದೆ ನಿಂತಿದ್ದವು.

‘ಹೋರಾ ಅಂದರೆ ಲ್ಯಾಟಿನ್ ಪದ ಅಲ್ಲ. ಹೋರಾಶಾಸ್ತ್ರದ ದೊರೆ ಅತ್ರಿ ಮಹರ್ಷಿ. ಆಹೋರಾತ್ರಿ ಎಂಬ ಸಂಸ್ಕೃತ ಪದದ ನಡುವಿನ ಎರಡು ಅಕ್ಷರಗಳಿಂದ ಹೋರಾ ಎಂಬ ಪದ ಬಂದಿದೆ. ನಾಲಕ್ಕು ಯುಗಗಳ ಹಿಂದಿನಿಂದಲೂ ಈ ಹೋರಾಶಾಸ್ತ್ರ ಹರಿದುಬಂದಿದೆ. ಆರ್ಯಭಟ ವರಾಹಮೀರ, ಬ್ರಹ್ಮಗುಪ್ತ, ಭಾಸ್ಕರಾ ಚಾರ್ಯ ಇವರೆಲ್ಲರೂ ಕಣ, ಮುಹೂರ್ತ, ಘಟಿ, ಕಾಲ, ನಿಮಿಷ್, ಕಾಷ್ಠ, ತೃಟಿ, ತತ್ಪರ ಎಂದು ಕಾಲವನ್ನು ಅಳೆಯುತ್ತಾ ಬಂದಿದ್ದಾರೆ. ‘ಕಾಲದ ಅತಿಸೂಕ್ಷ್ಮ ಕ್ಷಣ ಅಂದರೆ ಏನು ಗೊತ್ತಾ’ ಎಂದು ಚಂದ್ರಶೇಖರ್ ಅಯ್ಯರ್ ಕೇಳಿದರು. ನಾನು ‘ಇಲ್ಲ’ ಅಂದೆ. ‘ಒಂದು ತಾವರೆಯ ಎಲೆಗೆ ಒಂದು ಮುಳ್ಳು ಚುಚ್ಚಲು ಎಷ್ಟು ಹೊತ್ತು ಹಿಡಿಯುತ್ತದೆ. ಅದುವೇ ಆಕ್ಷಣ’ ಎಂದು ಹೇಳಿದರು. ಅದು ಎಷ್ಟು ಹೊತ್ತು ಹಿಡಿದುಬಹುದು ಎಂದು ಕೇಳಿದೆ ‘ಒಂದು ಓವರ್ ಮೂವತ್ತೆರಡು ಪಾಯಿಂಟ್ ಏಳು ಐದು ಸೊನ್ನೆ ಸೆಕೆಂಡುಗಳು’ ಎಂದು ಅವರು ಉತ್ತರಿಸಿದರು.

‘ಇವರು ಹೀಗೇ ರೀ. ಟೈಮು ಅಂದ್ರೆ ಟೈಮು ಒಂದು ಕ್ಷಣ ತಡಾ ಇಲ. ಹೇಳಿದ ಟೈಮಿಗೆ ಕೆಲಸ ಆಗದಿದ್ರೆ ಸಿಟ್ಟು ಮಾಡಿಕೊಳ್ಳೋರು. ಆದರೆ ಆ ಸಿಟ್ಟು ಒಂದು ಕ್ಷಣ ಮಾತ್ರ ಮರುಕ್ಷಣದಲ್ಲೇ ಅದು ಇಳಿದು ಹೋಗೋದು’ ವಿದ್ಯಾ ಅವರು ಗಂಡನ ಕುರಿತು ಮೆಚ್ಚುಗೆ ಸೂಚಿಸುತ್ತಾ ಹೇಳಿದರು.

ಚಂದ್ರಶೇಖರ್ ಐಯ್ಯರ್ ಅವರ ಪೂರ್ವಜರಾದ ಕುಳಿತಲೈ ಸುಬ್ರಹ್ಮಣ್ಯ ಅಯ್ಯರ್ ಅವರು ಶತಮಾನದಲ್ಲಿ ತಮಿಳು ದೇಶದ ತಿರುಚಿರಾಪಳ್ಳಿಯಿಂದ ಆಗಮಿಸಿ ಮೈಸೂರಿನ ಆಗಿನ ಮಹಾರಾಜರ ಕೃಪೆ ಪಡೆದು ಗಡಿಯಾರದ ಅಂಗಡಿ ಆರಂಭಿಸಿದರಂತೆ ಆ ಅಂಗಡಿ ಸುಮಾರು ನೂರ ಇಪ್ಪತ್ತು ವರ್ಷ ನಡೆದು ಆಮೇಲೆ 1996ರಲ್ಲಿ ಒಂದು ದಿನ ಶಿಥಿಲವಾದ ಅಂಗಡಿಯ ಮಾಳಿಗೆಯ ಕಲ್ಲೊಂದು ಗಿರಾಕಿಯಾಗಿ ಬಂದಿದ್ದ ರೈತನೊಬ್ಬನ ತಲೆಯ ಮೇಲೆ ಬೀಳುವುದು ಸ್ವಲ್ಪದರಲ್ಲೇ ತಪ್ಪಿಹೋಯಿತಂತೆ. ಆಗ ಚಂದ್ರಶೇಖರ ಅಯ್ಯರ್ರಿಗೆ ಎಪ್ಪತ್ತು ವರ್ಷವಾಗಿತ್ತಂತೆ. ಇನ್ನು ಗಡಿಯಾರದ ಅಂಗಡಿಯೇ ತಲೆಯ ಮೇಲೆ ಬೀಳುವುದು ಬೇಡ ಎಂದು ಅದೇ ವರ್ಷ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ಮಾರನೇಯದಿನವೇ ಅಂಗಡಿಯನ್ನು ಮುಚ್ಚಿ ಮನೆಗೆ ಬಂದರಂತೆ. ಅವರಜೊತೆಗೇ ಅಂಗಡಿಯಲ್ಲಿದ್ದ ನೂರಾರು ವೆಸ್ಟ್ ಎಂಡ್, ಜೆನಿತ್, ಸೇಂಟ್ಥಾಮಸ್, ಮಹಾರಾಜಾ ಎಂಬ ಗಡಿಯಾರಗಳನ್ನು ಅವರನ್ನು ಹಿಂಬಾಲಿಸಿಕೊಂಡು ಮನೆಯನ್ನು ಸೇರಿ ಬಾಗಿಲು ಹಾಕಿಕೊಂಡವಂತೆ.iyer1.GIF

ಹೊರಾಶಾಸ್ತ್ರ ಪ್ರವೀಣ ಚಂದ್ರಶೇಖರ ಅಯ್ಯರ್ ಹೀಗೆ ತಮ್ಮ ಗಡಿಯಾರದ ಅಂಗಡಿಯ 120 ವರ್ಷಗಳ ಇತಿಹಾಸವನ್ನು ನಟಿಕೆ ಮುರಿದಂತೆ ಹೇಳಿ ಮುಗಿಸಿ ಕಾಲಮಾನ ಶಾಸ್ತ್ರದ ಕುರಿತು ತಾವು ಬರೆದ ಲೇಖನಗಳನ್ನೂ ಮಾಡಿದ ಭಾಷಣಗಳನ್ನೂ, ದೊರಕಿದ ಸನ್ಮಾನಗಳನ್ನೂ ನನಗೆ ವಿವಿರಿಸಿ ಹೇಳುತ್ತಾ ನಡುನಡುವಲ್ಲಿ ಅವರ ಮಡದಿ ವಿದ್ಯಾ ಟಾಚರ್ು ಹಾಕಿಕೊಂಡು ಅವುಗಳನ್ನು ಆ ಕತ್ತಲೆಯಲ್ಲಿ ತೋರಿಸುತ್ತಾ ನನಗೆ ಅವರಿಬ್ಬರ ಈ ಅಪೂರ್ವ ದಾಂಪತ್ಯ ಯಾವ ಕಾಲಮಾನದಲ್ಲೂ ಸಲ್ಲುವಂತಹದು ಅನಿಸುತ್ತಿತ್ತು.

ಹಾಗೆ ನೋಡಿದರೆ ಈ ವಿದ್ಯಾ ಅವರು ಪಾಲಕಾಡಿನ ಐಯ್ಯರ್ ಹುಡುಗಿ. ಇವರ ತಾಯಿಯ ಊರು ಕನ್ನಡನಾಡಿನ ಶಿವಮೊಗ್ಗ. ಇವರ ಸೋದರಮಾವ ರಾಮನಾರಾಯಣ ಅವಧಾನಿಗಳು ಆಕಾಲದಲ್ಲಿ ಆ ಪ್ರಾಂತ್ಯದ ಎರಡನೇ ಅತೀ ದೊಡ್ಡ ಶ್ರೀಮಂತರು. ದೊಡ್ಡ ವಿದ್ವಾಂಸರು.

‘ಮನಸ್ಸು ಮಾಡಿದರೆ ನಾನೂ ದೊಡ್ಡ ಸ್ಕಾಲರ್ ಆಗಬಹುದಾಗಿತ್ತು. ಆದರೆ ನೋಡಿ ಈ ಗಡಿಯಾರ ವ್ಯಾಪಾರದ ಕುಟುಂಬಕ್ಕೆ ಸೇರಿಕೊಂಡು ಎಲ್ಲಾ ಇಲ್ಲೇ ಕಳೆದುಹೋಯಿತು’ ಎಂದು ವಿದ್ಯಾ ಅವರು ಖುಷಿಯಲ್ಲೇ ಅಂದರು.

“ನನ್ನ ತಾತ ಲಕ್ಷ್ಮಣ ಅಯ್ಯರ್ ದೊಡ್ಡ ರಾಜಭಕ್ತರಾಗಿದ್ದರು. ಅದಕ್ಕೆ ಅವರು ತಮ್ಮ ಮೊಮ್ಮಕ್ಕಳ ಹೆಸರಿನ ಮುಂದೆ ಇದ್ದ ‘ಕೆ’ ಎಂದರೆ ಕುಳಿತಲೈ ಎಂಬ ಇನಿಷಿಯಲ್ಲನ್ನು ತೆಗೆದು ‘ಎಂ’ ಎಂದರೆ ಮೈಸೂರು ಎಂಬ ಇನಿಷಿಯಲ್ಲನ್ನು ಅಲ್ಲಿ ಹಾಕಿದರು. ನಾವು ತಿನ್ನುವ ಊಟ ಮೈಸೂರಿನ ಊಟ. ಅದಕ್ಕೆ ಕುಳಿತಲೈ ಎಂಬ ಊರಿನ ಹಂಗು ಯಾಕೆ ಎಂದು ಆಕಾಲದಲ್ಲೇ ಅವರು ಯೋಚನೆ ಮಾಡಿದ್ದರು. ನಮ್ಮ ಅಂಗಡಿಗೆ ಮಹಾರಾಜರು ಯುವರಾಜರು ಮಹಾರಾಣಿಯರು ಎಲ್ಲರೂ ಬರುತ್ತಿದ್ದರು. ಮಹಾರಾಜರೊಬ್ಬರ ಪರಿತ್ಯಕ್ತ ಹೆಂಡತಿಯೊಬ್ಬರು ಇಲ್ಲೇ ಹಳೆಯ ಅರಮನೆಯೊಂದರಲ್ಲಿ ಸನ್ಯಾಸಿನಿಯಂತೆ ಜೀವಿಸುತ್ತಿದ್ದರು. ಅವರು ಮಹಾರಾಣಿ ಆಗಿದ್ದಾಗ ಕೈಗಡಿಯಾರವೊಂದನ್ನು ರಿಪೇರಿಗಾಗಿ ಕೊಟ್ಟಿದ್ದರು ಸನ್ಯಾಸಿನಿಯಾಗಿ ಬಹಳ ವರ್ಷಗಳ ನಂತರ ಅವರು ಒಂದುದಿನ ಅದನ್ನು ತೆಗೆದುಕೊಂಡು ಹೋದರು. ಅದಾದ ಕೆಲವೇ ದಿನಗಳಲ್ಲಿ ಅವರು ತೀರಿಹೋದರು. ತೀರಿ ಹೋದಾಗ ಅವರ ಡೈರಿಯಲ್ಲಿ ರಿಪೇರಿಯ ಹಣ ಅರವತ್ತು ರೂಪಾಯಿ ಕೊಡಲು ಬಾಕಿ ಇರುವುದನ್ನು ಬರೆದಿದ್ದರು. ಅದನ್ನು ಯಾರೋ ಕೊಟ್ಟು ಹೋದರು’ ಚಂದ್ರಶೇಖರ ಅಯ್ಯರ್ ಮುಂದುವರಿಸಿದರು.

ಅವರು ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ಕೇಳುತ್ತಾ ‘ನಾಳೆ ಪುನಃ ಬೆಳಕಿರುವಾಗ ಬರುತ್ತೇನೆ. ಈಗ ಒಂದು ಕುತೂಹಲ. ನೀವು ಅದೃಷ್ಟವಂತರಂತೆ ಕಾಣುತ್ತಿಲ್ಲ. ನಿಜವಾಗಿ ಹೇಳಿ ನೀವು ಜೀವನದಲ್ಲಿ ನಿಜವಾಗಲೂ ಅದೃಷ್ಟವಂತರಾ?’ ಎಂದು ಕೇಳಿದೆ.

ವಿದ್ಯಾ ಅವರಿಗೆ ಯಾಕೋ ಈ ಪ್ರಶ್ನೆ ಸಿಟ್ಟುತರಿಸಿದಂತೆ ಅನಿಸಿತು. ಇವರ ಮನೆಯದೇವರು ನಂಜನಗೂಡಿನ ಶ್ರೀಕಂಠೇಶ್ವರ. ‘ಶಂಕರಾ’ ಅಂದರೆ ಎಲ್ಲವೂ ಪರಿಹಾರವಾಗುತ್ತದೆ ಅಂದರು.

ಒಮ್ಮೆ ಹೀಗಾಯಿತಂತೆ. ಚಂದ್ರಶೇಖರ ಅಯ್ಯರ್ ಅನೇಕಲ್ನ ಬಳಿ ಇರುವ ಜಿಗಣಿ ಎಂಬ ಗ್ರಾಮದಲ್ಲಿರುವ ತಮ್ಮನನ್ನು ಕಾಣಲು ಬೆಂಗಳೂರಿನ ಕಲಾಸಿಪಾಳ್ಯಂ ಬಲ್ಸ್ಟಾಂಡ್ನಲ್ಲಿ ಬಸ್ಸು ಹತ್ತಿ ಟಿಕೆಟ್ ಮಾಡಿ ಕೂತಿದ್ದರಂತೆ. ಆ ಬಸ್ಸಿನಲ್ಲಿ ಯಾಕೋ ಅವರಿಗೆ ವಿಪರೀತ ಸುಸ್ತಾಗಲು ತೊಡಗಿತಂತೆ. ಅಷ್ಟು ರಷ್ ಇತ್ತಂತೆ. ಆಗ ಅದೆಲ್ಲಿಂದಲೋ ಬಂದ ಟಾಕ್ಸಿ ಡ್ರೈವರನ ರೂಪದಲ್ಲಿದ್ದ ಶಂಕರ ಇವರನ್ನು ಬಸ್ಸಿಂದ ಇಳಿಸಿ ಟ್ಯಾಕ್ಸಿ ಹತ್ತಿಸಿ ಬೆಂಗಳೂರೆಲ್ಲ ಸುತ್ತಿಸಿ ಆನೇಕಲ್ ದಾರಿಯಲ್ಲಿ ಕರೆದೊಯ್ಯುತ್ತಿದ್ದನಂತೆ ಹಾಗೆ ಹೋಗುತ್ತಿರುವಾಗ ನೋಡಿದರೆ ಅವರು ಹೋಗಬೇಕಿದ್ದ ಬಸ್ಸು ಹೆಸರಘಟ್ಟ ಕೆರೆಗೆ ಬಿದ್ದು ತಲೆ ಕೆಳಗಾಗಿ ತೇಲುತ್ತಿತ್ತಂತೆ.
‘ಆ ಶಂಕರನೇ ನನ್ನನ್ನು ಬದುಕಿಸಿದ’ ಎಂದು ಅಯ್ಯರ್ ಉದ್ಧರಿಸುವುದೂ ಕರೆಂಟ್ ಬರುವುದೂ ಒಂದೇ ನಿಮಿಷದಲ್ಲಿ ಸಂಭವಿಸಿತು. ಇದು ಎಷ್ಟು ಸತ್ಯ ಎನ್ನುವಂತೆ ವಿದ್ಯಾ ಅವರು ತಮ್ಮ ಹಸ್ತವನ್ನು ಕಣ್ಣಿಗೊತ್ತಿಕೊಂಡರು.

ಕರೆಂಟು ಬಂದ ಮೇಲೆ ಆ ಮನೆ, ಆ ಗಡಿಯಾರಗಳು ಮತ್ತು ಅವರೆಲ್ಲರೂ ಬೇರೆಯೇ ರೀತಿ ಕಾಣಿಸುತ್ತಿದ್ದರು.`ತಡವಾಯಿತು. ಮಗನ ಸೈಕಲ್ಲಿಗೆ ಪಂಕ್ಚರ್ ಹಾಕಿಸಬೇಕು ಇನ್ನೊಮ್ಮೆ ಬರುತ್ತೇನೆ’ ಎಂದು ಅವರಿಂದ ಹೊರಟು ಬಂದೆ. ಆದರೆ ನಾಡಿದ್ದು ಬುಧವಾರ ಇನ್ನೊಮ್ಮೆ ಹೋಗಿ ಕರೆಂಟು ಬೆಳಕಿನಲ್ಲಿ ಇದನ್ನೆಲ್ಲ ಇನ್ನೊಮ್ಮೆ ನೋಡಿ ಬರುತ್ತೇನೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s