ಪಂಡಿತಪ್ಪಸ್ವಾಮಿಗೆ ಕಾಯುತ್ತಾ ಬೋಟಿ ಬಜಾರಿನಲ್ಲಿ…

pandithswamy.jpg

ಯಾಕೋ ಸಣ್ಣಗೆ ಚಳಿಯಾಗುತ್ತಿತ್ತು. ಹಲ್ಲುಪುಡಿ ಮಾರುವ ಪಂಡಿತಪ್ಪ ಸ್ವಾಮಿಯನ್ನು ಹುಡುಕುತ್ತಾ ಹೊರಟವನು ಬೋಟೀ ಬಜಾರಿನಲ್ಲಿ ಕುರಿ, ಕೋಳಿ, ಮೀನು, ಸಾರಾಯಿ, ಮೂಸಂಬಿ, ರಸಬಾಳೆ, ಮರಗೆಣಸು, ಮಲ್ಲಿಗೆ, ಸೇವಂತಿಗೆ ಮಾರುವ ಈ ಗಲೀಜು ರಸ್ತೆಯಲ್ಲಿ ಬೈಕು ನಿಲ್ಲಿಸಿ ಆಕಾಶ ನೋಡುತ್ತ ಕುಳಿತಿದ್ದೆ. ನೋಡಲು ಬಲು ಖುಷಿಯಾಗುತ್ತಿದ್ದ ಬೊಜ್ಜು ಬಾಯಿಯ ಶ್ಯಾಮವರ್ಣದ ಮುದುಕಿ ಎಂದಿನಂತೆ ತನ್ನ ಆಕರ್ಷಕ ನಗು ನಗುತ್ತಾ ನಡುನಡುವಿನಲ್ಲಿ ದೀನಳಾಗಿ ನೋಡುತ್ತಾ ಭಿಕ್ಷೆ ಎತ್ತುತ್ತಿದ್ದಳು.

ಕಳೆದ ವಾರ ಇಂತಹದೇ ಒಂದು ಸಂಜೆ ಸೊಗಸುಗಾರನಂತೆ ಕಾಣುತ್ತಿದ್ದ ಸಾಮಾಜಿಕ ಕಾಳಜಿ ಯನ್ನೂ ಹೊಂದಿದ್ದ ಯುವಕನೊಬ್ಬ ಹಸಿದಿದ್ದ ಈ ಮುದುಕಿಗೆ ಭಿಕ್ಷೆಯ ಬದಲು ದೊಡ್ಡದಾದ ಕೇಕ್‌ ತುಂಡೊಂದನ್ನು ತಿನ್ನಲು ಕೊಟ್ಟು `ಭಿಕ್ಷೆ ಬೇಡ ಬಾರದು ಅಜ್ಜೀ ಎಲ್ಲಾದರೂ ಅನಾಥಾಶ್ರಮ ಸೇರು’ ಅಂತ ಬುದ್ಧಿ ಹೇಳುತ್ತಿದ್ದ. `ಅಯ್ಯೋ ಅದೊಂದನ್ನು ಮಾತ್ರ ಹೇಳಬೇಡ ಕಂದಾ’ ಎಂದು ಅಜ್ಜೀ ಅವನಿಗೆ ಬುದ್ಧಿ ಹೇಳುತ್ತಿದ್ದಳು. ಅವಳ ಪ್ರಕಾರ ಅನಾಥಾಶ್ರಮದಲ್ಲಿ ಸತ್ತು ಹೋದರೆ ಮೃತ ದೇಹವನ್ನು ಆಸ್ಪತ್ರೆಗೆ ಎಸೆದು ಹೋಗುತ್ತಾರಂತೆ. ಆದರೆ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಾ ಸತ್ತು ಹೋದರೆ ನಾಲ್ಕು ಮಂದಿ ಒಳ್ಳೆಯವರು ಚಂದಾ ಎತ್ತಿ ಚಟ್ಟಿ ಕಟ್ಟಿ ಸ್ಮಶಾನಕ್ಕೆ ಒಯ್ದು ಸದ್ಗತಿ ಒದಗಿಸುತ್ತಾರಂತೆ. ಅವಳ ವಾದ ಸರಣಿ ಅರ್ಥವಾಗದ ಆ ಯುವಕ ಸುಮ್ಮನಾಗಿ ಸಿಗರೇಟು ಹಚ್ಚಿಕೊಳ್ಳಲು ಹೋಗಿದ್ದ.

ಕುರಿಗಳ ಕತ್ತರಿಸಿದ ತಲೆ ಕಾಲು, ಆಡಿನ ಕರುಳು, ಕೋಳಿಗಳ ಗಂಟಲು, ಕಾಲು, ಹೃದಯ ಚರಂಡಿಯ ಗಲೀಜು ನೀರು, ಸಾರಾಯಿಯ ಪರಿಮಳ… ಯಾರೋ ಒಬ್ಬಳು ಬೀದಿ ವೇಶ್ಯೆಯ ಪ್ರಿಯಕರ ಯಾರೋ ಮಾಡಿದ ಖೂನಿಯೊಂದನ್ನು ತಾನೇ ಮಾಡಿದೆ ಎಂದು ಒಪ್ಪಿಕೊಂಡು ಬಳ್ಳಾರಿಯ ಜೈಲು ಸೇರಿದ್ದ. ಆಕೆ ಸಾರಾಯಿ ಅಂಗಡಿಯಿಂದ ಹೊರಬಂದು ಮೈಸೂರಿನಿಂದ ಬಳ್ಳಾರಿಗೆ ಹೋಗುವ ದಾರಿ ಯಾವುದು ಎಂದು ಆವೇಶ ಭರಿತಳಾಗಿ ಕೂಗು ತ್ತಿದ್ದಳು. ಕಾವಿಯನ್ನು ಮೈತುಂಬಾ ಹೊದ್ದುಕೊಂಡು ಏಕತಾರಿಯ ತುದಿಗೆ ಮಲ್ಲಿಗೆ ಸೇವಂತಿಗೆ ಕುಂಕುಮ ಪೂಸಿಕೊಂಡು ಹಾಡಿಕೊಂಡು ಅಲ್ಲಾಡಿ ಕೊಂಡು ನಡೆಯುತ್ತಿದ್ದ ಮುದುಕನೊಬ್ಬ ಈ ಬೋಟೀ ಬಜಾರಿನ ಸುತ್ತಮುತ್ತಲಿನ ಈ ಎಲ್ಲ ಪ್ರದೇಶಗಳೂ ಮೊದಲು ತನ್ನ ಪೂರ್ವಜರದ್ದಾಗಿತ್ತೆಂದೂ ಮಹಾರಾಜರು ಇಲ್ಲಿ ಮಾರುಕಟ್ಟೆ ಮಾಡಿದ ಮೇಲೆ ತಾವು ಬೀದಿಪಾಲಾದೆವೆಂದೂ ನನ್ನ ಹಾಗೇ ಆಕಾಶ ನೋಡುತ್ತ್ತಾ ಗೊಣಗುತ್ತಿದ್ದ.

ಅಷ್ಟರಲ್ಲಿ ಮೀನಿನ ಅಂಗಡಿಯಲ್ಲಿ ಮೀನು ಕತ್ತರಿಸುವ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಕೈಯಲ್ಲಿ ಕತ್ತಿ ಹಿಡಿದುಕೊಂಡೇ ಹೊರ ಬಂದು ಈ ಮುದುಕನಿಗೆ ಕೈ ಮುಗಿದ. ಮುದುಕ ಆ ಹುಡುಗನ ತಲೆಯ ಮೇಲೆ ಮಲ್ಲಿಗೆಯ ಎಸಳೊಂದನ್ನು ಇಟ್ಟು `ನಿನಗೆ ರಾಜಯೋಗವಿದೆಯಪ್ಪಾ, ಸ್ವಲ್ಪಕಾಲ ಹೀಗೆ ಇರು. ಮುಂದೆ ದೊಡ್ಡ ರಾಜನಾಗುತ್ತೀಯಾ’ ಎಂದು ಆಶೀರ್ವದಿಸಿದ. ಹುಡುಗ ಮುದುಕನ ಕಾಲಿಗೆ ಬಿದ್ದು ಪುನಃ ಮೀನಿನಂಗಡಿಯೊಳಕ್ಕೆ ಅಂತರ್ದಾನನಾದ.

ಆ ಸಂಜೆಯ ಕತ್ತಲಲ್ಲಿ ಮೀನು ಕೊಳ್ಳಲು ಬಂದ ಮಲಯಾಳೀ ಕನ್ಯಾಸ್ತ್ರೀ ಯರಿಬ್ಬರು ಮೂಗು ಮುಚ್ಚಿಕೊಂಡು ತಮ್ಮ ಕನ್ಯಾವಸ್ತ್ರವನ್ನು ಕೊಂಚ ಮೇಲೆತ್ತಿ ಕೊಂಡು ಅದು ಯಾವುದೋ ಸಮುದ್ರ ಮೀನಿನ ಹೆಸರನ್ನು ಮಲಯಾಳೀ ಭಾಷೆ ಯಲ್ಲಿ ಕೇಳಿಕೊಂಡು ಹುಡುಕಾಡುತ್ತಿದ್ದರು. ಅವರ ಮುಖ ನೋಡಿದರೆ ಈ ಜನ್ಮದಲ್ಲಿ ಆ ಮೀನು ಅವರಿಗೆ ಸಿಗುವುದಿಲ್ಲ ಎಂಬ ನಿರಾಶೆ ಅವರಲ್ಲಿ ಮಡುಗಟ್ಟಿದಂತೆ ಇತ್ತು.

ಅವರ ನಿರಾಶೆಯನ್ನೂ ಮೀರಿಸುವಂತೆ ಒಳ್ಳೆಯ ರೇಷ್ಮೆ ಸೀರೆಯೊಂದನ್ನು ಉಟ್ಟುಕೊಂಡು ತಲೆಯ ಗಾಯಕ್ಕೆ ಬ್ಯಾಂಡೇಜು ಹಾಕಿಕೊಂಡು ಗೃಹಿಣಿಯಂತೆ ತೋರುತ್ತಿದ್ದ ಮಹಿಳೆಯೊಬ್ಬಳು `ನಾನು ಭಿಕ್ಷುಕಳಲ್ಲ, ಆರು ವಾರದ ಬಾಣಂತಿ ಯಾರಾದರೂ ಒಂದು ಪ್ಯಾಕೆಟ್‌ ಹಾಲು ತಗೊಳ್ಳಲು ಭಿಕ್ಷೆ ನೀಡಿ’ ಎಂದು ಬೇಡುತ್ತಿದ್ದಳು. ಆಕೆ ಚನ್ನರಾಯ ಪಟ್ಟಣದ ಕಡೆಯ ಹಳ್ಳಿಯೊಂದರ ಹೆಂಗಸು. ಗಂಡ ಸತ್ತ ಆರು ದಿನಕ್ಕೇ ಆಕೆಯನ್ನು ಹೊಡೆದು ಬಡಿದು ಹೊರ ಹಾಕಿದ್ದರು. ಆಕೆ ಆರು ತಿಂಗಳ ಮಗು, ಎರಡು ವರ್ಷದ ಮಗಳು ಮತ್ತು ಒಂದನೇ ಕ್ಲಾಸಿನಲ್ಲಿ ಓದುತ್ತಿದ್ದ ಮಗನನ್ನು ಎತ್ತಿಕೊಂಡು ಲಾರಿ ಹತ್ತಿ ಬಂದು ಇಲ್ಲೇ ಮಾರುಕಟ್ಟೆಯ ಮೆಟ್ಟಿಲ ಕೆಳಗೆ ಸಂಸಾರ ಹೂಡಿದ್ದಳು. ಎರಡುವರ್ಷದ ಮಗಳು ಹಸಿವು ಎಂದು ಅಳಲು ತೊಡಗಿ ಹಾಲಿಗಾಗಿ ಆಕೆ ಭಿಕ್ಷೆ ಎತ್ತುತ್ತಿದ್ದಳು. ಆಕೆಯ ತಲೆಯ ಗಾಯದ ಬ್ಯಾಂಡೇಜಿನಲ್ಲಿ ನೆತ್ತರು ಹೆಪ್ಪುಗಟ್ಟಿತ್ತು.

ಸುಂದರ್‌ ಬ್ರಾಂಡ್‌ ಹಲ್ಲುಪುಡಿ ಮಾರುವ ಪಂಡಿತಪ್ಪ ಸ್ವಾಮಿ ನನಗೆ ಇಲ್ಲಿ ಕಾಯಲು ಹೇಳಿದ್ದರು. ಈ ಪಂಡಿತಪ್ಪ ಸ್ವಾಮಿ ಮೈಸೂರಿನವರು ಎಂದು ನನಗೆ ಗೊತ್ತಿರಲಿಲ್ಲ. ಹಾಗೆ ನೋಡಿದರೆ ಇವರ ನೆನಪೂ ನನಗಿರಲಿಲ್ಲ. ಆವತ್ತು ರಾತ್ರಿ ಒಂಬತ್ತು ಗಂಟೆಯ ಹೊತ್ತಿಗೆ ಮೈಸೂರಿನ ರೈಲು ನಿಲ್ದಾಣದ ಬಳಿಯ ಟ್ರಾಫಿಕ್‌ ಸಿಗ್ನಲ್‌ ಲೈಟು ಯಾಕೋ ಇದ್ದಕ್ಕಿದಂತೆ ಕೆಟ್ಟು ಹೋಗಿರದಿದ್ದರೆ ಇವರನ್ನು ಬಹುಶಃ ಈ ಜೀವಮಾನದಲ್ಲಿ ನಾನು ನೋಡುತ್ತಲೂ ಇರಲಿಲ್ಲ.

ತಮ್ಮ ಟಿವಿಎಸ್‌ ಸ್ಕೂಟರನ್ನು ಒಂದು ದೊಡ್ಡ ಮಾರುಕಟ್ಟೆಯಂತೆ ಮಾರ್ಪಡಿಸಿ ಕೊಂಡು ಹಲ್ಲುಪುಡಿ, ಗಂಧದಕಡ್ಡಿ, ನೀಲಗಿರಿ ತೈಲ, ಬೇಧಿ ಔಷಧಿಗಳ ಚೀಲಗಳನು್ನ ಅದರ ಮೈತುಂಬಾ ಹೊದಿಸಿ ಆ ಸ್ಕೂಟರ್‌ ಒಂದು ಸಣ್ಣ ಆನೆಯಂತೆ ಕಾಣಿಸುತ್ತಿತ್ತು. ಅದರ ಮೈಮೇಲೆ ಸೂಟುಬೂಟು ಹಾಕಿಕೊಂಡು ಕುಳಿತ ಪಂಡಿತಪ್ಪಸ್ವಾಮಿ ಹೆಲ್ಮೆಟಿನ ಬದಲು ತಮ್ಮ ಎಂದಿನ ಹಾಗಿನ ಬ್ರಿಟಿಷ್‌ ಶೈಲಿಯ ಹ್ಯಾಟ್‌ ಧರಿಸಿಕೊಂಡು ಕೆಟ್ಟು ಹೋದ ಟ್ರಾಫಿಕ್‌ ಸಿಗ್ನಲ್‌ನ ಗಲಾಟೆಯ ನಡುವೆ ತಮ್ಮ ಸ್ಕೂಟರಿನ ಹೊಟ್ಟೆ ಯೊಳಗಿನ ಸೌಂಡ್‌ ಸಿಸ್ಟಂ ಅನ್ನು ಆನ್‌ ಮಾಡಿ ಮೈಕ್‌ ಎತ್ತಿಕೊಂಡು ಕೆಮ್ಮಿ ಟ್ರಾಫಿಕ್‌ ಪೋಲಿಸ್‌ ಪೇದೆಗೆ `ಏನಣ್ಣಾ ಚೆನ್ನಾಗಿದಿಯೇನಣ್ಣಾ’ ಎಂದು ನಮಸ್ಕಾರ ಹೇಳಿದರು. ಆ ಗೊಂದಲ ಗದ್ದಲ ಅವಸರದ ನಡುವೆ ಹೀಗೆ ರಸ್ತೆಯ ನಡುವಿಂದ ಮೈಕ್‌ನಲ್ಲಿ ಆಚಾನಕ್ಕಾಗಿ ಮೂಡಿಬಂದ ನಮಸ್ಕಾರದ ಸದ್ದು ಆ ಪೇದೆಯ ನ್ನೇನೂ ಚಕಿತಗೊಳಿಸದೆ ಆತ ಅಲ್ಲಿಂದಲೇ ಕೈ ಎತ್ತಿ ನಕ್ಕು ಪ್ರತಿನಮಸ್ಕಾರ ಹೇಳಿದ.

ಪಂಡಿತಪ್ಪಸ್ವಾಮಿಯ ಹಿಂದೆ ಬೈಕು ನಿಲ್ಲಿಸಿಕೊಂಡು ಕಾಯುತ್ತಿದ್ದ ನನಗೆ ಆ ನಮಸ್ಕಾರದ ಸದ್ದು ಎಲ್ಲೋ ಕೇಳಿದಂತೆ ಅನಿಸಿತು. ಆ ಹಲ್ಲುಪುಡಿ, ಗಂಧದ ಕಡ್ಡಿ, ನೀಲಗಿರಿ ತೈಲ, ಬೇಧಿ ಔಷಧಿಗಳ ಮೂಟೆಯನ್ನು ಹೊತ್ತುಕೊಂಡು ನಿಂತಿದ್ದ ಆ ಆನೆಯಂತಿದ್ದ ಸ್ಕೂಟರಿನ ಮೇಲೆ ಅಮಾತ್ಯರಂತೆ ಮೈಕು ಹಿಡಿದುಕೊಂಡು ಕುಳಿತಿದ್ದ ಅವರನ್ನು ನೋಡಿದ ಮೇಲೆ ಇವರು ನಮ್ಮ ಸುಂಟಿಕೊಪ್ಪದ ಸಂತೆಗೆ ಮೂವತ್ತು ವರ್ಷಗಳ ಹಿಂದೆ ಬಾಡಿಗೆ ಸೈಕಲನ್ನು ಹೀಗೇ ಆನೆಮರಿಯ ಹಾಗೆ ಮಾಡಿಕೊಂಡು ಹಲ್ಲು ಪುಡಿ ಮಾರಲು ಬರುತ್ತಿದ್ದ ಆಸಾಮಿಯೇ ಎಂದು ಖಾತ್ರಿ ಯಾಯಿತು.

ಭಾನುವಾರದ ಸಂತೆಗಾಗಿ ಶನಿವಾರ ನಡುರಾತ್ರಿಯೇ ಬಂದು ಸಂತೆಮಾಳದಲ್ಲಿ ಮಲಗಿ ಬೆಳಗ್ಗೆ ಎದ್ದು ಬ್ಲೂಸ್ಟಾರ್‌ ಹೊಟೇಲಿನಲ್ಲಿ ಪರೋಟ ಚಾಪೀಸ್‌ ತಿಂದು ಮೈಕು ಹಿಡಿದುಕೊಂಡು ಪಂಡಿತನಂತೆ, ಪ್ರಾಧ್ಯಾಪಕನಂತೆ ಗಾಯಕನಂತೆ, ವಿದೂಷಕನಂತೆ ಸೈಕಲನ್ನು ಲೈಟು ಕಂಬಕ್ಕೆ ಆನಿಸಿ ನಿಲ್ಲಿಸಿ ಹಲ್ಲುಪುಡಿ ಮಾರುತ್ತಿದ್ದ ಈ ಮನುಷ್ಯನನ್ನು ನಾವು ಹುಡುಗರು ಸುಂಟಿಕೊಪ್ಪ ಸಂತೆಯಲ್ಲಿ ಪರಿಭಾವಿಸಿಕೊಳ್ಳುತ್ತಿದ್ದುದು ನೆನಪಾಗಿ ನಗು ಬಂದಿತ್ತು. ಈಗ ಕತೆಗಳನು್ನ ಕವಿತೆಗಳನ್ನು ಬರೆದು ಸಹೃದಯರಾದ ಓದುಗರನ್ನೂ ಕಠಿನ ಹೃದಯಿಗಳಾದ ವಿಮರ್ಶಕ ರನ್ನೂ ಎದುರಿಸುತ್ತಿರುವ ನನಗೂ ಮೂವತ್ತು ವರ್ಷಗಳ ಹಿಂದೆ ಸುಂಟಿಕೊಪ್ಪ ಸಂತೆಯಲ್ಲಿ ಹಲ್ಲುಪುಡಿ ಮಾರುತ್ತಾ ಹುಡುಗರಾದ ನಮ್ಮ ಕೀಟಲೆಗಳನ್ನು ಎದುರಿಸು ತ್ತಿದ್ದ ಪಂಡಿತಸ್ವಾಮಿಯವರಿಗೂ ಅಂತಹ ದೊಡ್ಡ ವ್ಯತ್ಯಾಸ ಇಲ್ಲ ಎನಿಸಿತು.

ಟ್ರಾಫಿಕ್‌ ದೀಪ ಸರಿಯಾಗುತ್ತಿದ್ದಂತೆ ಪಂಡಿತಪ್ಪಸ್ವಾಮಿಯವರು ಮೈಕನ್ನು ಸ್ಕೂಟರಿನ ಹೊಟ್ಟೆಯೊಳಗೆ ಸಿಲುಕಿಸಿ ಹಳೆಯ ತಮಿಳು ಹಾಡೊಂದರ ಕ್ಯಾಸೆಟನ್ನು ಟೇಪಿಗೆ ತುರುಕಿಸಿ ಹಾಡು ಜೋರಾಗಿ ಹಾಡಿಸಿಕೊಂಡು ಸ್ಕೂಟರು ಸ್ಟಾರ್ಟ್‌ ಮಾಡಿದರು. ನಾನು ಅವರನ್ನು ಹಿಂಬಾಲಿಸಿದೆ.

ಆಮೇಲೆ ನಡೆದದ್ದು ದೊಡ್ಡಕತೆ. ಪಂಡಿತಪ್ಪಸ್ವಾಮಿ ಮತ್ತು ನಾನು ಈಗ ಗಳಸ್ಯ ಕಂಠಸ್ಯ ಸ್ನೇಹಿತರು. ನಮ್ಮಿಬ್ಬರ ನಡುವೆ ಸುಮಾರು 30 ವರ್ಷಗಳಷ್ಟು ಅಂತರವಿದ್ದರೂ ನಾವು ಸ್ನೇಹಿತರಾಗಿದ್ದೇವೆ. ಪಂಡಿತಸ್ವಾಮಿ ಹಳೆಗಡಿಯಾರದ ಬಳಿಯಲ್ಲಿ, ಗಾಂಧಿ ಚೌಕದ ಎದುರು, ಟೌನ್‌ ಹಾಲ್‌ನ ಮುಂಭಾಗದಲ್ಲಿ, ಒಲಂಪಿಯಾದ ಎದುರು ಹಲ್ಲುಪುಡಿ ಮಾರಿ ಕತ್ತಲಾಗುವಾಗ ಮನೆಗೆ ಹಿಂದಿರು ಗುವ ದಾರಿಯಲ್ಲಿ ನಾವಿಬ್ಬರು ಭೇಟಿ ಆಗುತ್ತೇವೆ. ಅವರು ಹಳೆಯ ಕಥೆಗಳನ್ನು ಹೇಳು ತ್ತಾರೆ.

ತನ್ನ 14ನೆಯ ವಯಸ್ಸಿನಿಂದ ಆರಂಭವಾದ ಈ ಹಲ್ಲು ಪುಡಿಯ ವ್ಯಾಪಾರ, ನಡುವೆ ತೀರಿ ಹೋದ ಮೊದಲ ಹೆಂಡತಿ, ಒಂದೊಂದು ಊರಿನ ಒಂದೊಂದು ಅಜ್ಞಾತ ಹೋಟೇಲುಗಳಲ್ಲಿ ತುಕ್ಕು ಹಿಡಿಯುತ್ತಿರುವ ತಮ್ಮ ಸೈಕಲ್ಲುಗಳು, ಹಲ್ಲು ಪುಡಿ ಗೋದಾಮುಗಳು, ತನ್ನ ಸುವೇಗ ಎಂಬ ಪ್ರೀತಿಯ ಸ್ಕೂಟ್ರು, `ಮಾರಿಸ್‌8′ ಎಂಬ ಕಾರು, ಎರಡನೆಯ ಹೆಂಡತಿ, ಅದರಿಂದ ಉಂಟಾದ ಮಕ್ಕಳು ಅವ ತುಂಟಾಟಗಳು ಎಲ್ಲವನೂ್ನ ಹೇಳುತ್ತಾರೆ. ನಡುನಡುವೆ ಹಲ್ಲುಪುಡಿಯ ಕುರಿತಾದ ಕವಿತೆಗಳನ್ನೂ, ಲಾವಣಿ ಗಳನ್ನೂ ಹಾಡುತ್ತಾರೆ. ನಾನು ನನ್ನ ಕತೆಯೂ ಇವರ ಕತೆ ಗಳಿಗಿಂತ ಭಿನ್ನವಾಗಿ ಏನೂ ಇಲ್ಲ ಎಂದುಕೊಂಡು ಅವರ ಮಾತುಗಳನ್ನು ಸುಮ್ಮನೆ ಕೇಳಿಸಿಕೊಳ್ಳುತ್ತಿರುತ್ತೇನೆ.

ಇನ್ನು ಯಾವತ್ತಾ ದರೂ ಪಂಡಿತಪ್ಪ ಸ್ವಾಮಿಯ ಪೂರ್ತಿಕತೆಯನ್ನು ಹೇಳುತ್ತೇನೆ. ಈಗ ಮೈಸೂರಿನ ಹೃದಯ ಭಾಗದಲ್ಲಿರುವ ಈ ಬೋಟೀ ಬಜಾರಿನ ದಿವ್ಯ ಪರಿಮಳ, ದಿವ್ಯಸದ್ದು ಗಳ ನಡುವೆ ಟಿವಿಎಸ್‌ ದೂಡುತ್ತಾ ಓಲಾಡಿಕೊಂಡು ಬರಲಿರುವ ಪಂಡಿತಪ್ಪಸ್ವಾಮಿಗಾಗಿ ಕಾಯುತ್ತಿದ್ದೇನೆ.

Advertisements