ಒಂಟಿ ಸಲಗ ಮತ್ತು ಒಬ್ಬರು ಸ್ತ್ರೀ

ಆ ಒಂಟಿ ಸಲಗ ನನ್ನನ್ನು ಹೂವಿನಂತೆ ಆಕಾಶದಲ್ಲಿ ಹತ್ತು ಅಡಿ ಎತ್ತರಕ್ಕೆ ಎಸೆಯಿತು. ಚೆಂಡಿನಂತೆ ಕಾಡಿನೊಳಕ್ಕೆ ಅಷ್ಟು ದೂರ ಕಾಲಿನಿಂದ ದೂಡಿತು, ಸೊಂಡಿಲಿನಿಂದ ಎತ್ತಿ ದಂತಗಳ ಮೇಲೆ ಕೂರಿಸಿತು, ನೆಲದಲ್ಲಿ ಮಲಗಿಸಿ ದೂರದಿಂದ ನೋಡಿತು… ಒಟ್ಟಿನಲ್ಲಿ ಈಗ ಯೋಚಿಸಿದರೆ ಆ ಒಂಟಿಸಲಗ ನನ್ನನ್ನು ಓರ್ವ ಪ್ರೇಮಿಯಂತೆ ಒಂದೂವರೆ ತಾಸುಗಳ ಹೊತ್ತು ಕಾಡಿಸಿತ್ತು’.

ನಡುವಯಸ್ಸಿನ ಆ ಮಹಿಳೆ ಸುಮಾರು ಹದಿನೈದು ವರ್ಷಗಳ ಆನಂತರ ಆ ಘಟನೆಯನ್ನು ನೆನಪಿಸಿಕೊಂಡು ನಿರ್ವಿಕಾರವಾಗಿ ವಿವರಿಸುತ್ತಿದ್ದರು. ನಾನು ಬಾಯಿಬಾರದವನಂತೆ ಹೂಂಗುಟ್ಟುತ್ತಿದ್ದೆ. ಅವರು ನಡೆದ ಕಥೆಯೆಲ್ಲವನ್ನೂ ಒಂದೇ ಉಸಿರಿನಲ್ಲಿ ಹೇಳಿ ಮುಗಿಸುವ ಉತ್ಸಾಹದಲ್ಲಿದ್ದಂತೆ ಕಂಡಿತು. ಅವರ ಉತ್ಸಾಹಕ್ಕೆ ಒಂದಿಷ್ಟು ಕಡಿವಾಣ ಹಾಕುವುದು ಬಾನುಲಿ ತಂತ್ರದ ದೃಷ್ಟಿ ಯಿಂದ ಉತ್ತಮ ಎಂದು ಅನಿಸಿ `ನಾಗರಹೊಳೆ ಕಾಡಿ ನಲ್ಲಿ ಹೀಗೆ ನಿಮ್ಮ ಮೇಲೆ ಒಂಟಿ ಗಂಡಾನೆಯ ಅಂಗ ಚೇಷ್ಟೆ ನಡೆಯುತ್ತಿರುವಾಗ ನಿಮ್ಮ ಪತಿ ಏನು ಮಾಡುತ್ತಿ ದ್ದರು?’ ಎಂದು ಕೇಳಿದೆ.

`ಅವರು ಅದಾಗಲೇ ಇದೆಲ್ಲವ ಕಣ್ಣಿಂದ ಕಾಣಲಾ ಗದೇ ಪ್ರಜ್ಞೆ ತಪ್ಪಿ ಕಾಡಿ ನೊಳಗಿದ್ದ ಕಾಲೇಜು ಹುಡುಗಿಯರು ಪ್ರವಾಸ ಬಂದಿದ್ದ ಬಸ್ಸೊಂದರಲ್ಲಿ ಕುಸಿದು ಬಿದ್ದಿದ್ದರು. ಅವರೇನಾದರೂ ಅಕಸ್ಮಾತ್‌ ಪ್ರಜ್ಞೆ ತಪ್ಪಿರದಿದ್ದರೆ ಹೃದಯಾಘಾತದಿಂದ ತೀರಿ ಹೋಗಿ ಬಿಡುತ್ತಿದ್ದರು’. ಆಕೆ ಎಲ್ಲವೂ ಸುಖಾಂತ್ಯಗೊಂಡ ಮೇಲೆ ಬರುವ ಸಹಜ ತುಂಟತನದ ನಗುವಿನಲ್ಲಿ ಉಲಿಯುತ್ತಿದ್ದರು.

ನಮ್ಮಿಬ್ಬರ ದೂರವಾಣಿ ಮಾತುಕತೆ ಎಫ್‌.ಎಂ. ರೇಡಿಯೋದಲ್ಲಿ ನೇರವಾಗಿ ಪ್ರಸಾರವಾಗುತ್ತಿತ್ತು.
ಹಾಗೆ ನೋಡಿದರೆ ಹದಿನೈದು ವರ್ಷಗಳ ಹಿಂದೆ ಅಕ್ಟೋಬರ್‌ ತಿಂಗಳ ಒಂದು ಸಂಜೆ ಹೊಸತಾಗಿ ಕೊಂಡಿದ್ದ ಹೀರೋ ಬೈಕಲ್ಲಿ ಐದುವರ್ಷಗಳಿಂದ ಮದುವೆ ಯಾಗಿರುವ ಗಂಡನ ಸೊಂಟ ತಬ್ಬಿಕೊಂಡು ನಾಗರಹೊಳೆ ಕಾಡಿನ ನಡುವಿನ ಟಾರು ದಾರಿಯಲ್ಲಿ ಮೈಸೂರಿಗೆ ಮುಸ್ಸಂಜೆಯ ಕತ್ತಲಲ್ಲಿ ವಾಪಾಸಾಗುತ್ತಿದ್ದವ ಳಿಗೆ ಯಾಕೋ ಈ ಕಾಡಿನೊಳಗಡೆಯೇ ಐಕ್ಯವಾಗಿ ಬಿಡಬೇಕೆನ್ನಿಸುತ್ತಿತ್ತು.

ಇಬ್ಬರಿಗೂ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಸಾಧಿಸಬೇಕು ಅಂತ ಇತ್ತೀಚಿನ ದಿನಗಳಲ್ಲಿ ತುಂಬ ಅನಿಸುತ್ತಿತ್ತು. ಮದುವೆಯಾಗಿ ಐದು ವರ್ಷಗಳಾ ದರೂ ಮಗುವಾಗಿಲ್ಲ ಅಂತ ನೆರೆಕರೆಯವರು ಗಂಡನಕಡೆಯವರು ತವರಿನ ಕಡೆಯವರು ಒಂದು ತರಹ ಹೀಗಳೆಯುವಂತೆ ನೋಡುತ್ತಿದ್ದಾರೆ ಮಗು ವಾಗುವುದೇ ಒಂದು ಸಾಧನೆ ಎಂಬಂತೆ ತಿಳಕೊಂಡಿದ್ದಾರೆ ಎಂದು ಇಬ್ಬರಿಗೂ ಕಸಿವಿಸಿಯಾಗಿ ಏನನ್ನಾದರೂ ಸಾಧಿಸಬೇಕು ಅಂದುಕೊಂಡು ಒಂದು ಬೈಕು ಕೊಂಡಿದ್ದರು. ಬೈಕು ಕೊಂಡು ಮೈಸೂರಿನ ತುಂಬ ಓಡಾಡಿದ್ದರು. ಆದರೂ ಏನೂ ಸಾಧಿಸಲಾಗಲಿಲ್ಲ ಅನಿಸಿ ಯಾರಿಗೂ ಹೇಳದೆ ನಾಗರಹೊಳೆಯ ಕಡೆ ಬೈಕು ಓಡಿಸಿದ್ದರು.ಕಾಡಿನಲ್ಲಿ ಕಂಡ ಜಿಂಕೆ, ಕಡವೆ, ಮೊಲ, ಕಾಡುಹಂದಿಗಳಿ ಗೆಲ್ಲ ಟಾಟಾ ಹೇಳಿ ಕತ್ತಲು ಕವಿಯುವುದಕ್ಕಿಂತ ಮೊದಲೇ ಯಾರಿಗೂ ಅರಿವಾಗದಂತೆ ಮನೆ ಸೇರಬೇಕೆಂದು ಹಸುಗೂಸಿನಂತ ಗಂಡ ಜೋರಾಗಿಯೇ ಬೈಕು ಓಡಿಸುತ್ತಿದ್ದ. ಏನೇನೋ ಹೇಳಿಕೊಳ್ಳಬೇಕೆಂದಿದ್ದವಳು ಗಂಡನ ಏಕಾಗ್ರತೆಗೆ ಭಂಗವಾದೀತೆಂದು ಸುಮ್ಮನೆ ಆತನ ಬೆನ್ನಿಗೆ ಮುಖ ಉಜ್ಜುತ್ತಾ ಸುಮ್ಮನಿದ್ದಳು.

ಬೈಕು ಕಾಡಿನೊಳಗಿನ ಹಳ್ಳ ತುಂಬಿದ ಹಾದಿಯಲ್ಲಿ ಕುಲುಕುತ್ತಾ ಓಡುತ್ತಿತ್ತು. ಒಂದು ವರ್ಷದ ಹಿಂದೆ ಗಂಡನಿಗೊಂದು ಬೈಕು ತೆಗೆಸಿಕೊಡ ಬೇಕೆಂದು ಕಾಗದ ತಯಾರಿಸುವ ಕಾರ್ಖಾನೆಯೊಂದರಲ್ಲಿ ಕಾರಕೂನೆಯ ಕೆಲಸಕ್ಕೆ ಸೇರಿಕೊಂಡಿದ್ದಳು. ಆ ಕಾರ್ಖಾನೆಯ ಮುಖ್ಯಸ್ಥ ನೋಡಲು ಸುಂದರಿಯಾಗಿದ್ದ ಈಕೆಯನ್ನು ವಿನಾಕಾರಣ ದೃಷ್ಟಿಸಿ ನೋಡುತ್ತಿದ್ದ. ವಿನಾಕಾರಣ ಹೊಗಳುತ್ತಿದ್ದ. ಲೈಂಗಿಕ ವಿಷಯಗಳ ಕುರಿತು ಮಾತಾಡುತ್ತಿದ್ದ. ತನ್ನ ಹೆಂಡತಿ ತೀರಾ ಮಡಿ ಹೆಂಗಸು ಎಂದು ಹೀಗಳೆಯುತ್ತಿದ್ದ. ಆಗಾಗ ಕ್ಯಾಂಟೀನಿಗೆ ಕಾಫಿ ಕುಡಿಯಲು ಆಹ್ವಾನಿಸುತ್ತಿದ್ದ. ಕಾರಿನಲ್ಲಿ ಮನೆಗೆ ಬಿಡಲಾ ಎಂದು ಒತ್ತಾಯಿಸುತ್ತಿದ್ದ. ಇವನದು ಅತಿಯಾಗುತ್ತಿದೆ ಅನಿಸಿ ಗಂಡನಿಗೆ ನಾಗರಹೊಳೆ ಕಾಡಿನಲ್ಲಿ ಇದನ್ನೆಲ್ಲ ವಿವರಿಸಿ ಹೇಳಿಬಿಡಬೇಕು ಅಂದುಕೊಂಡರೂ ಹಸುಗೂಸಿನಂತಹ ಆತ ನೊಂದುಕೊಳ್ಳಬಹುದು ಅಂತ ಸುಮ್ಮನಾಗಿದ್ದಳು. ಈಗ ನೋಡಿದರೆ ಕಾಡಿನಲ್ಲಿ ಕತ್ತಲಾಗುತ್ತಿತ್ತು. ಮರಗಳು, ಮೃಗಗಳು ಮಂಜಿ ನಲ್ಲಿ ಮುಳುಗುತ್ತಿರುವ ಸೂರ್ಯ ಎಲ್ಲವೂ ಯಾಕೋ ಬೇಸರ ಹುಟ್ಟಿಸುತ್ತಿತ್ತು.

ಹೊತ್ತಿನಲ್ಲೇ ಆ ಕಾಡಿನ ನೀರವತೆಯ ಹುಟ್ಟಡಗಿಸುವಂತೆ ಮೈಸೂರಿನ ಮಹಾರಾಣಿ ಕಾಲೇಜಿನ ಹುಡುಗಿಯರು ಪ್ರವಾಸ ಹೊರಟಿದ್ದ ಬಸ್ಸು ಇವರನ್ನು ಹಿಂದಕ್ಕೆ ಹಾಕಿ ಮುಂದೆ ಹೋಗಿದ್ದು.

ಆ ಬಸ್ಸಿನ ಹುಡುಗಿಯರು ಮದಗಜಗಳೂ ನಾಚುವಂತೆ ಕೇಕೇ ಹಾಕುತ್ತಿದ್ದ ರಂತೆ. ಪೀಪಿ ಊದುತ್ತಿದ್ದರಂತೆ. ಆ ಮದ ತುಂಬಿದ ಹುಡುಗಿಯರ ಕೇಕೇಯ ಸದ್ದಿನಿಂದ ರೇಗಿ ಹೋದ ಒಂಟಿಸಲಗವೊಂದು ಬಸ್ಸನ್ನು ಅಡ್ಡಹಾಕಿ ಹೋಗಲು ಬಿಡದೆ, ನಂತರ ಹಿಂದೆ ಬರುತ್ತಿದ್ದ ಇವರ ಬೈಕನ್ನು ಬೀಳಿಸಿ ಗಂಡ ಬಿದ್ದು ಎದ್ದು ಓಡಿಹೋಗಿ ಬಸ್ಸಿ ನೊಳಗೆ ಪ್ರಜ್ಞೆ ತಪ್ಪಿ ಬಿದ್ದು ಆಕೆಯ ಹೊಸ ಚೂಡಿದಾರದ ವೇಲ್‌ ಬೈಕಿಗೆ ಸಿಕ್ಕಿ ಹಾಕಿಕೊಂಡು ಆ ಒಂಟಿ ಸಲಗ ಆಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಆಕೆಯನ್ನು ಆ ಅರಣ್ಯ ದೊಳಗೆ ಕನಿಷ್ಟ ಒಂದೂವರೆ ಗಂಟೆಗಳ ಕಾಲ ಹೂವಿನಂತೆ ಚೆಂಡಿನಂತೆ ಕಾಡಿಸಿದ್ದು, ಪ್ರಜ್ಞೆ ತಪ್ಪಿ ಎಚ್ಚರಾದಾಗಲೆಲ್ಲ ಅದರ ಸೊಂಡಿಲಿನಲ್ಲಿ, ಕಾಲನಡುವೆ, ಆಕಾಶದಲ್ಲಿ ಶವದಂತೆ ಬಿದ್ದಿದ್ದ ತಾನು…

ಆಕೆ ತನ್ಮಯಳಾಗಿ ದೂರವಾಣಿಯಲ್ಲಿ ಆ ಘಟನೆ ನಡೆದು ಸರಿಯಾಗಿ ಹದಿನೈದು ವರ್ಷಗಳ ಆನಂತರ ವಿವರಿಸುತ್ತಿದ್ದರೆ ನಾನು `ಈಗ ಹೇಗಿದ್ದೀರಿ? ಗಂಡ ಮಕ್ಕಳು ಎಲ್ಲಾ ಹೇಗಿದ್ದಾರೆ?’ ಎಂದು ಕೊನೆಯ ಪ್ರಶ್ನೆ ಕೇಳಿದೆ.
`ಇಲ್ಲೇ ಇದ್ದಾರೆ. ರೇಡಿಯೋದಲ್ಲಿ ನನ್ನ ಮಾತುಗಳನ್ನು ಕೇಳಿ ನಗುತ್ತಿದ್ದಾರೆ. ಮಕ್ಕಳು ಶಾಲೆಗೆ ಹೋಗಲು ರೆಡಿಯಾಗುತ್ತಿದ್ದಾರೆ’ ಎಂದು ಉತ್ತರಿಸಿದರು.

`ನಿಮ್ಮ ಬಾಯ್‌ ಫ್ರೆಂಡ್‌ ಒಂಟಿಸಲಗ ನಾಗರಹೊಳೆಯಲ್ಲಿ ಬಹುಶಃ ನೀರಾಟವಾಡುತ್ತಿರಬಹುದು’ ಎಂದು ಕೀಟಲೆ ದನಿಯಲ್ಲಿ ಅಂದೆ.

`ಇಲ್ಲ. ಬಹುಶಃ ಅದಕ್ಕೂ ವಯಸ್ಸಾಗಿರಬಹುದು. ಆದರೂ ಅದಕ್ಕೆ ನನ್ನ ನೆನಪಿರಬಹುದು’ ಎಂದು ಮಾತು ಮುಗಿಸಿದರು.

ರೇಡಿಯೋ ಕೇಳುತ್ತಿರುವವರಲ್ಲಿ ಯಾರಾದರೂ ಹದಿನೈದು ವರ್ಷಗಳ ಹಿಂದೆ ಮಹಾರಾಣಿ ಕಾಲೇಜಿನ ಆ ಬಸ್ಸಿನಲ್ಲಿ ನಾಗರಹೊಳೆ ಕಾಡಿನಲ್ಲಿ ಕೇಕೆ ಹಾಕಿದ್ದರೆ, ಒಂಟಿಸಲಗವೊಂದು ಸ್ತ್ರೀಯೊಬ್ಬರನ್ನು ಒಂದೂವರೆ ಗಂಟೆಗಳ ಕಾಲ ವಿನಾಕಾರಣ ಕಾಡಿಸಿದ್ದನ್ನು ಕಂಡಿದ್ದರೆ, ಅದರ ಫೋಟೋ ತೆಗೆದಿದ್ದರೆ ದಯವಿಟ್ಟು ಎಸ್ಸೆಮ್ಮೆಸ್‌ ಮಾಡಿ ಎಂದು ನಾನೂ ಮಾತು ನಿಲ್ಲಿಸಿದೆ.

ಈಗ ಈ ಅಂಕಣ ಓದುತ್ತಿರುವ ಓದುಗರಲ್ಲೂ ಅದೇ ವಿನಂತಿ.

Advertisements