ಗುಮ್ ನಾಮ್ ಬಾದಶಾನ ಗುಡ್ಡದಲ್ಲಿ

ನಿಮ್ಮ ಸೂಫಿ ಸಂತನ ಹೆಸರೇಕೆ ಗುಮ್‌ನಾಮ್‌ ಬಾದಶಾ ಎಂದಿದೆ ಎಂಬ ಸರಳ ಪ್ರಶ್ನೆಗೆ ಅಷ್ಟೇ ಸರಳವಾಗಿ ನಿನ್ನ ಹೆಸರೇನು?- ಎಂದು ಸೂಫಿ ಮಹಮ್ಮದ್‌ ರೂಹುಲ್ಲಾ ಶಾ ಖಾದ್ರಿ ನನ್ನನ್ನು ಕೇಳಿದರು.

ನಾನು ನನ್ನ ಹೆಸರು ಹೇಳಿದೆ.

ನಿನ್ನ ವಯಸ್ಸು ಎಷ್ಟು?

ಅದನ್ನೂ ಹೇಳಿದೆ.

ಅದಕ್ಕೂ ಮೊದಲು ನಿನ್ನ ಹೆಸರೇನಾಗಿತ್ತು?

ನಾನು ಸುಮ್ಮನೆ ಅವರ ಮುಖ ನೋಡಿದೆ.

ನೀನು ಇನ್ನು ಎಷ್ಟು ವರ್ಷ ಬದುಕಬಹುದು?

ಹೆಚ್ಚು ಕಡಿಮೆ ಅದನ್ನೂ ಹೇಳಿದೆ.

ಆನಂತರ ನಿನ್ನ ಹೆಸರೇನಿರಬಹುದು?

ಏನೂ ಹೇಳಲಾಗದೆ ಸುಮ್ಮನೇ ನಕ್ಕೆ. ಆಮೇಲೆ ಅವರೇ ಮುಂದುವರಿಸಿ ದರು. ನಾನು ಕೇಳುತ್ತಲೇ ಇದ್ದೆ. ಕೇಳುತ್ತಾ ಕೇಳುತ್ತಾ ನನ್ನ ಜೊತೆ ಇನ್ನಾರಾದರೂ ಜೀವದ ಗೆಳೆಯನನ್ನು ಇಲ್ಲಿ ಕರಕೊಂಡು ಬರಬೇಕಿತ್ತು ಅನಿಸಿತು. ಈ ಹಸಿರು, ಖಾವಿ, ಕಾಷಾಯದಾರಿ ಸೂಫಿಗಳ ಸವಾಲುಗಳಿಗೆ ಅಸಹಾಯಕನಾಗಿ ನಸು ನಗುತ್ತಿರುವ ನನ್ನನ್ನು ಅವನಾದರೂ ಅರ್ಥ ಮಾಡಿಕೊಳ್ಳುತ್ತಿದ್ದ, ಆಮೇಲೆ ನಾವಿಬ್ಬರೂ ಈ ರಾತ್ರಿಯಲ್ಲಿ ಈ ಗುಡ್ಡ ಇಳಿದು ಕತ್ತಲೆಯಲ್ಲಿ ನಡೆದು ಎಲ್ಲಾದರೂ ನಮ್ಮ ಸುಸ್ತು ಸಾವರಿಸಿಕೊಂಡು ಆಮೇಲೆ ಹೆಂಡತಿ ಮಕ್ಕಳನ್ನು ಸೇರಿಕೊಳ್ಳಬಹುದಿತ್ತು ಅನಿಸುತ್ತಿತ್ತು. ಆದರೆ ಆ ಸೂಫಿ ರೂಹುಲ್ಲಾ ಶಾ ಖಾದ್ರಿಯವರು ಮಾತನಾಡುತ್ತಲೇ ಇದ್ದರು.

ನಾನಾದರೋ ಮೊನ್ನೆ ಜನವರಿ 16ಕ್ಕೆ ಸೂಫಿ ಸಂತರು ಕುಂತ ಈ ಗುಡ್ಡಕ್ಕೆ ಬಂದಿದ್ದೆ. ಈ ಗುಡ್ಡದಲ್ಲಿ ಸುಮಾರು ನೂರು ವರ್ಷಗಳ ಹಿಂದೆ ವಾಸವಾ ಗಿದ್ದ ಗುಮ್‌ನಾಮ್‌ ಬಾದಶಾ ಎಂಬ ಸೂಫಿ ಸಂತನ ಗೋರಿಯಿತ್ತು. ಇತ್ತೀಚೆಗೆ 25 ವರ್ಷಗಳ ಹಿಂದೆಯ ವರೆಗೆ ಮೈಸೂರಿನಿಂದ ಬೆಂಗಳೂರಿೆ ಹೊರಡುತ್ತಿದ್ದ ಎಲ್ಲ ರೈಲು ಬಂಡಿ ಗಳೂ ಈ ಸೂಫಿ ಸಂತನ ಗುಡ್ಡದ ಬಳಿ ನಿಲ್ಲುತ್ತಿದ್ದವಂತೆ. ನಿಂತು ಅದರಿಂದ ರೈಲಿನ ಚಾಲಕ ಇಳಿದು ಗುಡ್ಡ ಹತ್ತಿ ಈ ಸಂತನ ಸಮಾಧಿಯ ಬಳಿ ಚಿರಾಗ್‌ ಎಂಬ ದೀಪ ಹೊತ್ತಿಸಿ ಆಮೇಲೆ ರೈಲುಬಂಡಿ ಹೊರಡುತ್ತಿತ್ತಂತೆ. ಎಲ್ಲೋ ಬಾಗ್ದಾದಿನ ಬಳಿಯಿಂದ ಬಂದು ಇಲ್ಲಿ ನೆಲೆಸಿ ಅನೇಕ ಚಮತ್ಕಾರಗಳನು್ನ ತೋರಿಸಿದ್ದ ಈ ಸಂತನ ಗೋರಿ ಇಲ್ಲಿ ಇರುವುದು ಬಹಳ ವರ್ಷ ಯಾರ ಅರಿವಲ್ಲೂ ಇರಲಿಲ್ಲವಂತೆ. ಈ ಗೋರಿ ಇಲ್ಲಿರುವ ವಿಷಯವನ್ನು ಎಲ್ಲರಿಗೂ ತಿಳಿಸಿದ ಮೈಸೂರಿನ ಮಹಾನುಭಾವರೊಬ್ಬರು ಐವತ್ತು ವರ್ಷಗಳ ಹಿಂದೆ ತೀರಿಕೊಂಡರಂತೆ.

ಕನಕಪುರದ ಕಡೆಯಿಂದ ಬಂದು ಈ ಗೋರಿಯ ಸುತ್ತಮುತ್ತ ಭಿಕ್ಷೆ ಬೇಡು ತ್ತಿದ್ದ ಮುದುಕನೊಬ್ಬ ಈ ಕತೆ ಹೇಳಿದ್ದ. ಈ ಮುದುಕನೂ ನೋಡಲು ಒಬ್ಬ ಸಂತ ನಂತೆಯೇ ಇದ್ದ. ಹೆಗಲಿಗೆ ಹಸಿರು ಜರತಾರಿಯ ಶಾಲು ಹಾಕಿಕೊಂಡು ತಲೆೆ ಖಾವಿ ರುಮಾಲು ಸುತ್ತಿಕೊಂಡು ಮುಖದಲ್ಲಿ ಸಿಡುಬಿನ ಕಲೆ ಮೆತ್ತಿಕೊಂಡು ಕಣ್ಣಿಗೆ ಗಾಂಧಿಯ ಹಾಗಿನ ಕನ್ನಡಕ ಹಾಕಿಕೊಂಡು, ಕಾಲಿಗೆ ಚಡಾವು ತೊಟ್ಟು ಕೊಂಡು ನಡುವಲ್ಲಿ ಹರಿದು ಚಿಂದಿಯಾದ ನೀಲಿ ಚೌಕುಳಿಯ ಲುಂಗಿ ಸುತ್ತಿ ಕೊಂಡು ಗೋರಿಯ ಸುತ್ತಮುತ್ತ ಚುರುಕಾಗಿ ಓಡಾಡುತ್ತಿದ್ದ ಈ ಮುದುಕ ಅದ್ಭುತ ವಾಗಿ ಹಳ್ಳಿ ಕನ್ನಡದಲ್ಲಿ ಮಾತನಾಡುತ್ತಿದ್ದ. ನನಗೆ ಆತನ ತಲೆಯಲ್ಲಿದ್ದ ಖಾವಿ, ಹೆಗಲಲ್ಲಿದ್ದ ಹಸಿರು ಇದೆಲ್ಲ ಚೋದ್ಯವಾಗಿ `ಇದೇನಿದು ಖಾವಿ ಇದೇನಿದು ಹಸಿರು ಎಂದು ಕೇಳಿಬಿಟ್ಟಿದ್ದೆ.

`ನಾವು ಐದು ಬಣ್ಣದಲ್ಲೂ ಇರುತ್ತೀವಿ’ ಎಂದು ಮುದುಕ ಅಂದಿದ್ದ. ನಾವು ಹಸಿರಲ್ಲೂ ಇರುತ್ತೀವಿ. ಕಾಷಾಯದಲ್ಲೂ ಇರುತ್ತೀವಿ. ಕಪ್ಪುಬಿಳಿ ಹಸಿರು, ಖಾವಿ ಹಳದಿ-ಪಂಚರಂಗಿಗಳು ನಾವು. ನಮ್ಮ ಖಲ್ಮಾ ಇದೆಯಲ್ಲಾ ಅದು ಐದು ಬಣ್ಣ ಗಳಿಂದ ಕೂಡಿದೆ. ಖಾಲಾ, ಲಾಲ್‌, ಉಜಾಲಾ, ಹರಾಲ್‌, ಪೀಲಾ ನಾವೆಲ್ಲ ಒಂದೇ ಅಲ್ಲಾ ಕೇ ಬಂದೇ ಆದರೆ ನೀನಿಲ್ಯಾಕೆ ಬಂದೇ? ಎಂದು ಗಹಗಹಿಸಿ ನಕ್ಕಿದ್ದ.

ನಾನು ಯಾಕೆ ಹುಚ್ಚುಹಿಡಿದವನಂತೆ ಹೀಗೆಲ್ಲ ಓಡಾಡುತ್ತೇನೆಂದೂ ಯಾಕೆ ಕೆಲವೊಮ್ಮೆ ನನಗೆ ಜೀವನವೇ ಬೇಡ ಎನಿಸುವುದೆಂದೂ, ನನಗೆ ಕೆಲವೊಮ್ಮೆ ಆಗುವುದು ಮತಿ ಭ್ರಮಣೆಯೋ ಅಥವಾ ವೃದ್ಧಾಪ್ಯ ಸಮೀಪಿಸುತ್ತಿರುವ ಲಕ್ಷಣ ಗಳೋ ಎಂದು ಗೊತ್ತಾಗುತ್ತಿಲ್ಲವೆಂದೂ ಆಗಾಗಿ ಹೀಗೆ ಒಮ್ಮೊಮ್ಮೆ ಬೆಟ್ಟಗುಡ್ಡ, ಗಲ್ಲಿ ಬೀದಿಗಳಲ್ಲಿ ಸುತ್ತಾಡುತ್ತಿರುವೆನೆಂದೂ ಆ ಮುದುಕನಿಗೆ ನಾನು ಹೇಳುವ ಹಾಗಿರಲಿಲ್ಲ. ಏಕೆಂದರೆ ಅವನು ಅವನದೇ ಸಂಕಷ್ಟಗಳ ಲೋಕದಲ್ಲಿ ಮುಳುಗಿರುವಂತೆ ತೋರುತ್ತಿತ್ತು. ಹಾಗಾಗಿ ನಾನು ಅವನಿಗೇ ನೀವು ಯಾಕೆ ಈ ಗುಡ್ಡದಲ್ಲಿ ಬಂದಿರುವಿರಿ ಎಂದು ಕೇಳಿದ್ದೆ.

ಇನ್ನೆರಡು ಮೂರು ದಿನಗಳಲ್ಲಿ ಈ ಗುಮ್‌ ನಾಮ್‌ ಬಾದಶಾ ಎಂಬ ಸಂತನ ಉರುಸ್‌ ಮಹೋತ್ಸವ ಜರಗುವುದೆಂದೂ ಸೂಫಿಗಳೂ, ಚಿಸ್ತಿಗಳು, ಖಾದ್ರಿ ಗಳು, ರಫಾಯಿಗಳು, ಫಕೀರರು, ಹಠಯೋಗಿಗಳು, ರೋಗಿಗಳು, ಮಾನಸಿಕ ಅಸ್ವಸ್ಥರು ಇಲ್ಲಿ ಬಂದು ಸೇರುವರೆಂದೂ ಅವರು ಸಂತನ ಗೋರಿಯ ಬಳಿ ಹೋಗು ವಾಗ ಬಿಟ್ಟುಹೋಗುವ ಚಪ್ಪಲಿ ಶೂಗಳನ್ನು ನೋಡಿಕೊಳ್ಳಲು ತಾನು ಸ್ವಕುಟುಂಬ ಸಮೇತನಾಗಿ ಬಂದಿರುವೆನೆಂದೂ ಇದೇ ತಾನು ಆದಾಯದ ಮೂಲವೆಂದೂ, ಸಂತನಿಗೆ ತನ್ನ ಸೇವೆಯೆಂದೂ ಹೇಳಿದ್ದ. ಉರೂಸಿನ ರಾತ್ರಿ ಬರಲೇ ಬೇಕೆಂದೂ, ಬಂದರೆ ಚಪ್ಪಲಿಯನ್ನು ತನ್ನ ಬಳಿಯೇ ಬಿಡಬೇಕೆಂದೂ ಕೋರಿದ್ದ.

ಅವನು ಹೇಳಿದ ಹಾಗೆ ಬಂದಿದ್ದೆ. ಚಪ್ಪಲಿಯನ್ನೂ ಅವನ ಬಳಿಯೇ ಬಿಟ್ಟಿದ್ದೆ. ಬಿಟ್ಟು ಮೇಲಕ್ಕೆ ಹೋದರೆ ಆ ಜನಜಂಗುಳಿಯಲ್ಲಿ ಗುಮ್‌ ನಾಮ್‌ ಎಂಬ ಸಂತನ ಗೋರಿ ಶೋಭಾಯಮಾನವಾಗಿ ಹೊಳೆಯುತ್ತಿತ್ತು.

ಹಠಯೋಗಿಗಳಾದ ರಫಾಯಿ ಸೂಫಿಗಳು ತಮಟೆಯ ಸದ್ದಿಗೆ ಕಬ್ಬಿಣದ ಚೂಪು ಬಾಣಗಳನ್ನು ತಮ್ಮ ತೋಳಿಗೆ, ತಲೆ ಬುರುಡೆಗೆ, ತುಟಿಗಳಿಗೆ ಹೊಲಿಯುತಾ್ತ ರಕ್ತ ಸುರಿಸಿಕೊಂಡು ಕುಣಿಯುತ್ತಿದ್ದರು. ಬುರುಖಾ ಹಾಕಿದ ಹೆಂಗಸರು, ಟೋಪಿ ಹಾಕಿರುವ ಗಂಡಸರು, ಸುರುಮ ಕಣ್ಣಿಗೆ ಹಚ್ಚಿದ ಮಕ್ಕಳು ಮಂತ್ರಮುಗ್ಧರಾಗಿ ಈ ರಕ್ತಸಿಕ್ತ ನೋಟವನ್ನು ನೋಡುತ್ತಿದ್ದರು.
ನನಗೆ ತಲೆತಿರುಗಿದಂತಾಗಿ ಈ ಕಡೆ ತಿರುಗಿದರೆ ಅಲ್ಲೇ ಮರಗಳ ಅಡಿಯಲ್ಲಿ ಜಮಖಾನಾ ಹಾಸಿಕೊಂಡು ಈ ನಾಲ್ವರು ಸೂಫಿಸಂತರು ಕೂತಿದ್ದರು. ಒಬ್ಬರು ಸೂಫಿ ಮಹಮ್ಮದ್‌ ರೂಹುಲ್ಲಾ ಶಾ ಖಾದ್ರಿ ಬಾಗ್ದಾದಿನಿಂದ ಬಂದ ಸಂತನೊಬ್ಬರ ಸಂತತಿಯವರು. ಇವರು ಲೌಕಿಕವಾಗಿ ಚಾಮುಂಡೇಶ್ವರಿ ವಿದ್ಯುತ್‌ ವಿತರಣ ನಿಗಮದಲ್ಲಿ ಕೆಲಸ ಮಾಡುತ್ತಿದ್ದರು. ಅದರೆ ಪಾರಮಾರ್ಥಿಕವಾಗಿ ಬಲುದೊಡ್ಡ ಜ್ಞಾನಿ. ಜಲಾಲುದ್ದೀನ್‌ ರೂಮಿಯನ್ನೂ, ಅಲ್ಲಮನನ್ನೂ, ಏಕಪ್ರಕಾರವಾಗಿ ಉಲ್ಲೇಖಿಸಬಲ್ಲವರಾಗಿದ್ದರು. ಇನ್ನೊಬ್ಬರು ಖಾಜಾ ಸೈಯ್ಯದ್‌ ಅಜೀಂ ಅಲಿ ಶಾ ಚಿಸ್ತಿ. ಹಿತ್ತಾಳೆಯ ಕೆತ್ತನೆಯ ಕಲೆಯಲ್ಲಿ ಪರಿಣಿತರು ಹಾಗೂ ಅಜ್ಮೀರಿನ ಸಂತನ ಕಡೆಯವರು. ಇನ್ನಿಬ್ಬರು ಅನ್ವರ್‌ ಶಾ ಹಾಗೂ ಅಲ್ಲಾ ಬಕ್ಷ್‌ ಮೌನಿಗಳು, ಹೆಚ್ಚು ಮಾತನಾಡುವವರಲ್ಲ.

ನಾನು ಹಠ ಹಿಡಿದು ಅನ್ವರ್‌ ಶಾ ಖಾದ್ರಿ ಎಂಬ ಈ ಮೌನಿಯನ್ನು ಮಾತನಾಡಿ ಸಲೇಬೇಕೆಂದು ಪಣತೊಟ್ಟು, ಎಲ್ಲ ಸರಿ, ಆದರೆ ಈ ಸೂಫಿ ತತ್ವ ಎಂದರೆ ಏನು ಎಂದು ಕೇಳಿದ್ದೆ. ಅದಕ್ಕೆ ಅವರು ಸೂಫಿ ತತ್ವ ಎಂದರೆ ಲೌಕಿಕ ಮೋಹಗಳನ್ನು ಒದ್ದು ಓಡಿಸಿ ಪಡೆದವನ ಮೋಹ ವನ್ನು ಮನುಷ್ಯನ ಎದೆಯಲ್ಲಿ ಕೂಡಿಸು ವುದು ಅಂದರು. ಆಮೇಲೆ ಒಂದು ಕಥೆ ಹೇಳಿದರು. ಆ ರಾತ್ರಿಯಲ್ಲಿ ಆ ನಕ್ಷತ್ರಗಳ ಅಡಿಯಲ್ಲಿ ಮನುಷ್ಯರ ಗದ್ದಲದ ನಡುವೆ ಆ ಕಥೆ ಹಕ್ಕಿ ಯೊಂದು ಕೂಗಿದಂತೆ ಕೇಳಿಸುತ್ತಿತ್ತು. ಅದನ್ನು ಹಾಗೇ ಇಲ್ಲಿ ಹೇಳಲಾಗುವು ದಿಲ್ಲ, ಚುಟುಕಾಗಿ ಹೀಗೆ ಹೇಳುತ್ತೇನೆ.

ಹಿಂದೆ ಇಬ್ರಾಹಿಂ ಬಿನ್‌ ಆದಂ ಎಂಬ ಬಾದಶಾ ಇದ್ದ. ಆತನು ಒಮ್ಮೆ ವಾಯು ವಿಹಾರಕ್ಕೆ ಹೊರಡುವ ಮೊದಲು ಖಾದಿಮಾ ಎಂಬ ಸೇವಕಿಯೊಬ್ಬಳನ್ನು ಕರೆದು ತನ್ನ ಶಯ್ಯಾಗೃಹವನ್ನು ಸ್ವಚ್ಛಗೊಳಿಸಲು ಹೇಳಿ ಹೋದನಂತೆ. ಸೇವಕಿ ಶಯ್ಯಾಗೃಹವನ್ನು ಶುಚಿಗೊಳಿಸುವಾಗ ಅಕಸ್ಮಾತ್ತಾಗಿ ಅವಳ ಕೈ ರಾಜನ ಪಲ್ಲಂಗದ ಮಕಮಲ್ಲಿಗೆ ತಾಕಿ ಅವಳು ಪುಳಕಿತಳಾಗಿ ಈ ಮಕಮಲ್ಲಿನ ಹೊದಿಕೆಯೇ ಇಷ್ಟು ನುಣಪಾಗಿರುವಾಗ ಪಲ್ಲಂಗ ಎಷ್ಟು ಸುಖ ಕೊಡಬಹುದು ಅಂದುಕೊಂಡು ಆಸೆ ತಾಳಲಾರದೆ ಪಲ್ಲಂಗದಲ್ಲಿ ಮಲಗಿಬಿಟ್ಟಳಂತೆ. ಮಲಗಿದವಳಿಗೆ ಅಲ್ಲೇ ನಿದ್ದೆ ಬಂತಂತೆ.

ಇಬ್ರಾಹಿಂ ಎಂಬ ಬಾದಶಾ ವಾಯುವಿಹಾರದಿಂದ ವಾಪಸ್ಸು ಬಂದವನು ಖಾದಿಮಾ ಎಂಬ ಈ ಸೇವಕಿ ತನ್ನ ಪಲ್ಲಂಗದಲ್ಲಿ ಪವಡಿಸಿರುವುದನ್ನು ಕಂಡು ಆಕೆಯನ್ನು ತಿವಿದು ಎಬ್ಬಿಸಿ ಕಪಾಳಕ್ಕೆ ಹೊಡೆದು ಬಿಟ್ಟನಂತೆ. ಕಪಾಳಕ್ಕೆ ಏಟುತಿಂದ ಆಕೆ ಮೊದಲು ಅತ್ತರೂ ಆಮೇಲೆ ಸಾವರಿಸಿ ಗಹಗಹಿಸಿ ನಗಲು ತೊಡಗಿದಳಂತೆ. ಅವಾಕ್ಕಾದ ಬಾದಶಾ ಯಾಕೆ ನಗುವೆ ಎಂದು ಕೇಳಲು ಆಕೆ ನಗು ನಿಲ್ಲಿಸಲೇ ಇಲ್ಲ ವಂತೆ. ಬಾದಶಾ ಇನ್ನಷ್ಟು ಗಲಿಬಿಲಿಗೊಂಡು ಕೇಳಲಾಗಿ ಅಯ್ಯೋ ಬಾದಶಾ ನಾನು ಒಂದು ನಿಮಿಷ ನಿನ್ನ ಪಲ್ಲಂಗದಲ್ಲಿ ಮಲಗಿದರೆ ನನ್ನ ಒಡೆಯನಾದ ನೀನು ಇಷ್ಟು ಸಿಟ್ಟು ಗೊಂಡೆ, ಶಿಕ್ಷೆ ಕೊಟ್ಟೆ. ನೀನು ಜೀವನವಿಡೀ ಈ ಪಲ್ಲಂಗದಲ್ಲಿ ಮಲಗುತ್ತಿರುವೆ. ನಿನ್ನ ಒಡೆಯನಾದ ಮೇಲಿರುವ ಆ ಭಗವಂತ ಇನ್ನೆಷ್ಟು ಸಿಟ್ಟುಗೊಳ್ಳಬಹುದು. ನಿನಗೆ ಇನ್ನೆಷ್ಟು ಶಿಕ್ಷೆ ಸಿಗಬಹುದು ಎಂದು ಯೋಚಿಸಿ ನಗುತ್ತಿರುವೆ ಅಂದಳಂತೆ.

ಇಬ್ರಾಹಿಂ ಬಾದಶಾ ಆ ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡುತ್ತಿದ್ದನಂತೆ. ರಾತ್ರಿ ಅರಮನೆಯ ಛಾವಣಿಯ ಮೇಲೆ ಏನೋ ನಡೆದಾಡುತ್ತಿರುವ ಸದ್ದು ಕೇಳಿಸಿತಂತೆ. `ಯಾರದು’ ಎಂದು ಕೂಗಿದನಂತೆ `ನಾನು ಸ್ವಾಮಿ ಒಬ್ಬ ರೈತ’ ಎಂಬ ಉತ್ತರ ಬಂತಂತೆ. ಛಾವಣಿ ಯಲ್ಲಿ ಏನು ಹುಡುಕುತ್ತಿರುವೆ ಎಂದು ಬಾದಶಾ ಸಿಟ್ಟಿನಲ್ಲಿ ಕೇಳಿದನಂತೆ. `ನನ್ನ ಒಂಟೆ ಕಾಣಿಸುತ್ತಿಲ್ಲ’ ಎಂಬ ಉತ್ತರ ಬಂತಂತೆ. ಒಂಟೆಯನ್ನು ಅರಮನೆಯ ಛಾವಣಿ ಯಲ್ಲಿ ಏಕೆ ಹುಡುಕುತ್ತಿರುವೆ ಹೊರಗೆ ಹುಡುಕು ಮೂರ್ಖ ಎಂದು ಗುಡುಗಿದ ನಂತೆ. ಆಗ ಮೇಲಿದ್ದ ರೈತ `ಅಯ್ಯೋ ಬಾದಶಾ ನನ್ನ ಒಂಟೆ ನಿನ್ನ ಅರಮನೆಯ ಛಾವಣಿಯಲ್ಲಿ ಹೇಗೆ ಸಿಗುವುದಿಲ್ಲವೋ ಅದೇ ರೀತಿ ನಿನಗೆ ಅರಮನೆಯೊಳಗೆ ಭಗವಂತನೂ ಸಿಗುವುದಿಲ್ಲ’ ಎಂದು ಮುಖಕ್ಕೆ ರಾಚುವಂತೆ ಉತ್ತರಿಸಿದನಂತೆ.

ಇಬ್ರಾಹಿಂ ಬಿನ್‌ ಆದಂ ಎಂಬ ಆ ಬಾದಶಾನೇ ಜಗತ್ತಿನ ಮೊದಲ ಸೂಫಿ ಯಂತೆ. ಆತ ಇಸ್ಲಾಂ ಧರ್ಮ ಹುಟ್ಟುವ ಮೊದಲೇ ಬದುಕಿದ್ದನಂತೆ…. ಭಿಕ್ಷುಕನಂತೆ ಲೋಕ ಸುತ್ತಿದನಂತೆ.

ಅನ್ವರ್‌ ಶಾ ಖಾದ್ರಿ ಆ ರಾತ್ರಿ ಕತೆ ಹೇಳಿದ್ದರು. ಆ ಕತೆ ಕೇಳಿದ ಮೇಲೆ ನನ್ನ ತಲೆಗೆ ಹತ್ತಿರುವ ಶೂಲೆ ಇನ್ನೂ ಹೊರಟುಹೋಗಿಲ್ಲ. ಇದನ್ನೆಲ್ಲ ನಿಮ್ಮೊಡನೆ ಹೇಳಿದ ಮೇಲೆ ಆ ಶೂಲೆ ತೊಲಗಿ ನಾನು ಎಂದಿನಂತೆ ಬೀದಿ ಬೆಟ್ಟ ಸುತ್ತಲೂ ಆಗಬಹುದು ಎಂಬ ಆಸೆಯಿಂದ ಇದನ್ನೆಲ್ಲ ಹೇಳುತ್ತಿರುವೆ.

Advertisements