The Mysore Post

Wednesday August 1, 2007

ಉಮಿಯಾಮ್ ಎಂಬ ನಿಂತ ನದಿ

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:48 pm

ನಿಮ್ಮ ಪತ್ರವಂತೂ ಬರಲೇ ಇಲ್ಲ. ಆದರೂ ನಿಮಗೆ ಬರೆಯುತ್ತಿರುವೆ ಯಾಕೆ ಗೊತ್ತಿಲ್ಲ. ಹೇಗಿತ್ತು ನಿಮ್ಮ ಹುಟ್ಟು ಹಬ್ಬ? ಇಲ್ಲಿ ಈಗ ಹೂ ಅರಳುವ ಕಾಲ ಶುರವಾಗಿದೆ. ಬೋಳುಮರಗಳ ತುಂಬ ಹೂ. ಬೇಲಿಯಲ್ಲಿ ಹೂ, ಹುಲ್ಲಿನ ದಳಗಳಲ್ಲಿ ಹೂ. ಇನ್ನು ಮುಂದೆ ಸೆಪ್ಟೆಂಬರ್‌ವರೆಗೆ ಒಂದಿಲ್ಲೊಂದು ಹೂಗಳು ಅರಳುತ್ತಲೇ ಇರುತ್ತದೆ. ಈವತ್ತು ಸಂಜೆ ಇಡೀ ದಿನ ಮೋಡಕವಿದು ಕೊಂಚ ಹೊತ್ತು ಸೂರ್ಯನ ಬೆಳಕಿತ್ತು. ನಸು ಬೆಳಕಲ್ಲಿ ಬೀಸುವ ಗಾಳಿಗೆ ಪ್ಲಂ ಮರಗಳ ತುದಿಯಲ್ಲಿ ಚೆರ್ರಿಗಿಡಗಳ ತುದಿಯಲ್ಲಿ ಬೆಳ್ಳಗೆ ಕೆಂಪಗೆ ಚಿಟ್ಟೆಗಳಂತೆ ಹಾರುವ ಹೂವಿನ ದಳಗಳು. ಹೂವೋ ಚಿಟ್ಟೆಗಳೋ ಗೊತ್ತಾಗದೆ ನೋಡುತ್ತಲೇ ಇದ್ದೆ. ಕಳೆದವಾರ ನಾವೂ ಇಲ್ಲಿ ಒಂದು ಹುಟ್ಟು ಹಬ್ಬ ಆಚರಿಸಿದೆವು. ಯಾರದ್ದು ಎಂದು ಹೇಳುವುದಿಲ್ಲ.umiam.jpg

ನಾನು, ನನ್ನ ಹೆಂಡತಿ  ಮೋಳಿ, ಮತ್ತೊಬ್ಬಳು ಜಾಣೆಯಾದ ಬೆಂಗಾಲಿ ಹುಡುಗಿ ಮತ್ತು ನಡು ವಯಸ್ಸಿನ ರಸಿಕನಾದ ಕಾವ್ಯ ಮತ್ತು ಸಂಗೀತವನ್ನು ಪ್ರೇಮಿಸುವ ಸರ್ದಾರ್ಜಿ. ನಾವು ನಾಲ್ಕೂ ಜನ ಸರ್ದಾರ್ಜಿಯ ಪುಟ್ಟಕಾರಿನಲ್ಲಿ ಬೆಟ್ಟ ಸಾಲುಗಳನ್ನು ಇಳಿಯುತ್ತಾ ನಡುಮಧ್ಯಾಹ್ನದ ಹೊತ್ತು ಉಮಿಯಾಮ್ ಎಂಬ ನದಿಯ ತೀರದಲ್ಲಿ ಅಲೆಗಳನ್ನು ನೋಡುತ್ತಾ ಕುಳಿತಿದ್ದೆವು. ಸರ್ದಾರ್ಜಿ ಜಸ್‌ಬೀರ್ mouth organ ನಲ್ಲಿ ಸಂಜೆಯ ರಾಗವೊಂದನ್ನು ನುಡಿಸುತ್ತಿದ್ದ. ಬೆಂಗಾಲಿ ಹುಡುಗಿ ನದಿಯೊಳಗೆ ಬಿದ್ದು ಹೋಗುವೆ ಎಂದು ನಮ್ಮನ್ನು ಹೆದರಿಸುತ್ತಿದ್ದಳು. ಮೋಳಿ ನದಿಯ ತೀರಕ್ಕೆ ಬರುವ ಹಕ್ಕಿಗಳನ್ನೂ ಕಾಗೆಗಳನ್ನೂ ಮಾತನಾಡಿಸುತ್ತಾ ಕುಳಿತಿದ್ದಳು. ನದಿಯ ನೀರಿಗೆ ಅಣೆಕಟ್ಟು ಕಟ್ಟಿ ನದಿ ದೊಡ್ಡ ದೊಡ್ಡ ಗುಡ್ಡಗಳನ್ನು ಮುಳುಗಿಸಿ ಸರೋವರದಂತೆ ನಿಂತಿತ್ತು.  ಹಳೆಯ ರಸ್ತೆಗಳು, ಹಳ್ಳಿಗಳು, ಕಾಡು ಎಲ್ಲವೂ ನೀರಲ್ಲಿ ಮುಳುಗಿತ್ತು. ನನಗಂತೂ ಸಿಕ್ಕಾಪಟ್ಟೆ ಹಸಿವಾಗುತ್ತಿತ್ತು. ಈ ಷಿಲ್ಲಾಂಗ್ ಒಂದು ಕಾಲದಲ್ಲಿ ರಸಿಕರ, ಸಂಗೀತ ಪ್ರೇಮಿಗಳ ಊರಾಗಿತ್ತು. ರವೀಂದ್ರನಾಥ ಠಾಗೂರ್ ಎರಡು ಕಾದಂಬರಿಗಳನ್ನು ಈ ಊರಲ್ಲಿ ಕುಳಿತು ಬರೆದಿದ್ದರು. ಈಗ ಎಲ್ಲವೂ ಮುಳುಗಿ ಹೋದ ಹಡಗಿನಂತೆ ಆಗಿದೆ ಎಂದು ವಾಪಸ್ಸು ಬರುವಾಗ ಜಸ್‌ಬೀರ್ ಅನ್ನುತ್ತಿದ್ದರು. ಈ ಜಸ್‌ಬೀರ್ ತುಂಬ ತಮಾಷೆಯ ಪ್ರೀತಿಯ ಮನುಷ್ಯ ಒಮ್ಮೆ ಶಿಲ್ಲಾಂಗ್‌ನಿಂದ ತನ್ನ ಊರಾದ ಪಂಜಾಬಿಗೆ ಒಂದು ಮದುವೆಗೆ ಹೋಗಿದ್ದರಂತೆ. ಮದುವೆಯಲ್ಲಾ ಮುಗಿದ ಮೇಲೆ ಶಿಲ್ಲಾಂಗ್ ನ ಶೈಲಿಯಂತೆ ಮುದ್ದಾದ ಪಂಜಾಬಿ ಹೆಂಗಸೊಬ್ಬಳನ್ನು ನೃತ್ಯ ಮಾಡಲು ಕರೆದರಂತೆ. ಆ ಹೆಂಗಸು ರೇಗಿ ‘ನಿನ್ನ ಅಮ್ಮನ ಕೈ ಹಿಡಿದು dance ಮಾಡು’ ಎಂದು ಬೈದಳಂತೆ. ಆ ಅವಮಾನ ಜಸ್‌ಬೀರ್‌ಗೆ ಇನ್ನೂ ಹೋಗಿಲ್ಲ. ಅದಕ್ಕೇ ಆತನಿಗೆ ಬಯಲು ಭೂಮಿಯ plain ಹೆಂಗಸು ಇಷ್ಟವಾಗುವುದೇ ಇಲ್ಲ. ಗುಡ್ಡಗಾಡಿನ, ನಿಸ್ಸಂಕೋಚದ, ಕಪಟವಿಲ್ಲದ ಮನುಷ್ಯರೇ ಚಂದ ಅಂತ ಅನ್ನುತ್ತಲೇ ಇರುತ್ತಾರೆ. ಈಗ ಇಲ್ಲಿ ಕಿಟಕಿಯಿಂದ ಅರ್ಧಚಂದ್ರ ಮತ್ತು ಅಸಂಖ್ಯಾತ ನಕ್ಷತ್ರಗಳು ಕಾಣಿಸುತ್ತಿವೆ.ಈಗ ನನ್ನ ಬಳಿ ಭೂತಾನದಿಂದ ಬಂದ ಕೇಸರ್ ಕಸ್ತೂರಿ ಎಂಬ ಪೇಯವಿದೆ. cheers! ಇನ್ನೂ ಗಟ್ಟಿ ಮುಟ್ಟಾಗಿ ಇರಿ.

Thursday July 26, 2007

ಒಂದು ರೇಡಿಯೋ ಕವಿತೆ

Filed under: ಹಾಡು-ಪಾಡು — Rasheed @ 11:34 pm

ಆಗ ರೇಡಿಯೋ ಇರಲಿಲ್ಲ . ಅದರ ದೊಡ್ಡ ಬೀಟೆಯ ಮರದ ಪೆಟ್ಟಿಗೆ ಮಾತ್ರ ಉಳಿದಿತ್ತು.

ಒಳಗೆ ಅಪ್ಪನ ಬೀಡಿ ಪೊಟ್ಟಣ, ಅರಬಿ ಪುಸ್ತಕ, ಕೆಮ್ಮಿನ ಔಷದಿ,

ಮೊಲದ ಬೇಟೆಗೆ ತಂದು ಇಟ್ಟಿದ್ದ ನಾಡಕೋವಿಯ ತೋಟೆ,

ಅವರ ಕನ್ನಡಕ,ಅಂಗಡಿಯ ಸಾಲದ ಪುಸ್ತಕ, ನಮಗೆ ಕದ್ದು ಮುಚ್ಚಿ

ಮುದ್ದು ಮಾಡಲು ತಂದಿಟ್ಟಿದ್ದ ಮಿಠಾಯಿ  ಮತ್ತು ಅವರ ಮೂಗು ಒರೆಸಿಟ್ಟ ಕರ್ಚೀಪು.

ನಮ್ಮಷ್ಟಕ್ಕೆ ನಮಗೆ ಯಾವುದೂ ಎಟುಕುತ್ತಿರಲಿಲ್ಲ. . . . .

ಮತ್ತು ರೇಡಿಯೋ ಅಂದರೆ ಏನು ಅಂತ ಗೊತ್ತಿರಲಿಲ್ಲ.

ಈಗ ರೇಡಿಯೋ ಕೈಗೆಟುಕುತ್ತಿದೆ. ಅಪ್ಪ ನೋಡಲು ಸಿಗುತ್ತಿಲ್ಲ (more…)

Thursday June 28, 2007

ಕಲಬುರ್ಗಿಯ ಬಂದೇ ನವಾಝ್ ದರ್ಗಾದಲ್ಲಿ ಮಂಡಿಯೂರಿ ಕುಳಿತು ಒಂದು ಕವಿತೆ

Filed under: ಹಾಡು-ಪಾಡು — Rasheed @ 10:44 pm

ಹೇ ಬಂದೇ ನವಾಜ್

sufi_dancing1.jpg

ಈ ವಿಷವನ್ನು ಪೇಯದಂತೆ ಕುಡಿಯಲು ಬಿಡು,

ಒಂದು ತೊಟ್ಟೂ ನೆಲದಲ್ಲಿ ಹಿಂಗದಂತೆ.

ಈಗಿಂದೀಗಲೇ ಬಿಕ್ಷೆಯ ಬಟ್ಟಲನ್ನು ಹಿಡಿದು ನಡೆವ ಧೈರ್ಯ ಕೊಡು.ಈ ಗಿಡುಗನ ಉಡುಪನ್ನು ಕಳಚಿ ಬಿಡುವೆನು

ಪಾರಿವಾಳದ ದಿರಿಸನ್ನು ತೊಡಿಸು ನನಗೆ ಹೇ ಬಂದೇನವಾಜ್.

ನಿನ್ನ ಪಹಾಡಿನ ಹರಳು, ನಿನ್ನ ವನದ ಸಂಪಿಗೆಯ ಕರಿಯ ಬೀಜ,

ನಿನ್ನ ಫಕೀರರ ಹಾಡು,ಚಿಲುಮೆಯ ಹೊಗೆ,ಕೈಯ ಕೋಳ, ಕಾಲ ಕಡಗ,

ನಿನ್ನ ಹತ್ತೂ ಬೆರಳಿನ ಮಾಯದುಂಗುರ –

ನನ್ನ ಇಲ್ಲದಂತಾಗಿಸು ಹೇ ಬಂದೇ ನವಾಜ್.

pabad001sm.jpg

 ನಿನ್ನ ಗೋರಿಗಳ ನಡುವೆ ಹಾಲು ಊಡುತ್ತ,ಕಾಲು ಆಡಿಸುತ್ತ ಮಲಗಿರುವ ಮಗುವಿನ ನಗು.

ಹಾಲ ಊಡಿಸುತ್ತಿರುವ ಮುಸುಕಿನೊಳಗಿನ ಕಣ್ಣುಗಳ ಕಳ್ಳ ಆಟ.

ನಿನ್ನ ಗೋಡೆಗಳಿಗೆ ತಲೆ ಘಟ್ಟಿಸಿಕೊಳ್ಳುತ್ತಿರುವ ತಲೆಕೆಟ್ಟ ಹೆಣ್ಣುಮಗಳ ಚೀತ್ಕಾರ.

ಈ ಸ್ಮಶಾನದ ಆನಂದವನ್ನು ಅನುಭವಿಸಲು ಬಿಡು, ಹೇ ಬಂದೇ ನವಾಜ್.

ಈಗಿಂದೀಗಲೇ ಬಿಕ್ಷಾಪಾತ್ರವನ್ನು ಹಿಡಿದು ನಡೆವ ಧೈರ್ಯ ಕೊಡು. 

ಕನಸಲ್ಲಿ ನಿನ್ನ ಖರಪುಟಗಳ ಸದ್ದು,ಆಕಾಶದಲ್ಲಿ ಹಾಹಾಕಾರ,

ಒಡೆದಕಾಲುಗಳ ಸವರುತಿರುವ ಎಳ್ಳು ಹೂವುಗಳ ಪರಾಗ,ನಸುನಗು,ಕದ್ದು ಕೂಡಿರುವ ಜವ್ವನಿಗರ

ಪಿಸುಮಾತು,ಎಲ್ಲಿಂದಲೋ ಎದ್ದು ನಿಂತಿರುವ ಅರೆ ಕಳಾಹೀನ ಚಂದ್ರ,

ಈಗ ತಾನೇ ಮೈಕೊಟ್ಟು ಬಂದಿರುವ ವಕ್ರಮೂಗಿನ ಬಿಕ್ಷುಕಿಯಮಿಂಚುತಿರುವ ಮೂಗ ನತ್ತು-

 ನಾ ಪರಾದೀನ.ನಿನ್ನ ಪಾದಗಳಲಿ ಹಣೆಯಿಟ್ಟು ಚುಂಬಿಸುತಿರುವೆ ನನ್ನನೇ ನಾನು.

ಈ ಆನಂದವನು ನನ್ನೊಳಗೂ ಹರಿದು,ಹೊರಗೂ ಇಳಿದು,315949_t.jpg

ಈ ಅರೆ ಚಂದ್ರ ಇರುಳು ಈ ನಕ್ಷತ್ರ ರಾತ್ರಿ,ಈ ಮಿಂಚಿಲ್ಲದ ಸದ್ದಿಲ್ಲದ ಆಗಸದಲ್ಲಿ ತೋರಿಸು ನಿನ್ನ ಇರವು 

ನಿನ್ನ ಗಾಳಿ ನಿನ್ನ ಬೆಳಕು,ನಿನ್ನ ಊರಿದ ಪಾದದ ಕೆಳಗೆ ಅಗಾಧಮುಳ್ಳಿನ ಪಾದುಕೆ ಈ ಭೂಮಿ.

ನಿನ್ನ ಶಹರಿನ ಬೀದಿಗಳಲ್ಲಿ ಅನವರತ ಅಲೆಯುವ ಪ್ರೇತಾತ್ಮರು ನಿನ್ನ ಸಖಿಯರು

ಬೊಗಸೆಯಲ್ಲಿ ಹರಿವ ಬೆಂಕಿ, ಚೆಲುವ ಚೆಲ್ಲುತ್ತ ಹಸಿಯ ಮಾಂಸ ನೆತ್ತರು ಹೊತ್ತು ನಡೆಯುತ್ತಿರುವಈ ಚೆಲುವೆಯರು.ಆಹಾ ಇವರ ಕಣ್ಣುಗಳು.ಇವರ ಗಾಢ ಬೆವರು.

ನಿನ್ನ ಮಣ್ಣ ಹಿಡಿ ದೂಳ ಕದಲಿಸದೆಚಲಿಸುತ್ತಿರುವ ಇವರ ಪಾದ ಪಕ್ಷಿಗಳು.

ಕಣ್ಣಿಂದ ಕಾಣಿಸುತ್ತಿರುವ ಎಲ್ಲವ ಇಲ್ಲದಂತಾಗಿಸು ಹೇ ಗೇಸುದರಾಜ್ 

ನಾ  ಇಲ್ಲಿಂದ ಹೋಗುತಿರುವೆನು,

ಇಲ್ಲದ ಆ ಇನ್ನೊಂದು ಶಹರಿನ ದಾರಿ ತೋರಿಸು,

ಹೇ ಬಂದೇ ನವಾಜ್.

 

Wednesday June 20, 2007

ರಾಮದಾಸ್ ಬಗ್ಗೆ ಅನಂತ ಮೂರ್ತಿ ಇನ್ನಷ್ಟು—–

Filed under: Uncategorized — Rasheed @ 11:44 pm

Tuesday June 12, 2007

ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಕೆಲವು ಕವಿತೆಗಳು

Filed under: Uncategorized — Rasheed @ 11:40 pm

 

pande2.jpg

 ಬಹುಜನರ ಕೋರಿಕೆಯ ಮೇರೆಗೆ ಶ್ರೀ ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಕೈಬರಹದ ಕವಿತೆಗಳ ಪುಸ್ತಕದಿಂದ ಕೆಲವು ಕವಿತೆಗಳನ್ನು ಇಲ್ಲಿ ನೀಡುತ್ತಿರುವೆ. ನಿಮಗೆ ಇಷ್ಟವಾದರೆ ಅವರ ಸುಂದರ ಕೈಬರಹದಲ್ಲಿರುವ ಇನ್ನೂ ಕೆಲವು ಕವಿತೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬಲ್ಲೆ[ಪಾಂಡೆಯವರು ಇದಕ್ಕೆ ಅನುಮತಿ ನೀಡಿದ್ದಾರೆ] 

 ೧.

ನನ್ನನ್ನು ಪೂರ್ತಿಯಾಗಿ ಎಚ್ಚರಿಸಲಾಗದ

ಬೆಳಕಿನ ಚಂಚಲ ಕ್ಷಣಗಳಂತೂು

ಕಳೆದು ಹೋದವು.

ಈಗ ನನ್ನ ಪಾಲಿಗೆ ಬಂದಿರುವ

ಕತ್ತಲೆಯೂ ಸಹ ನ್ಯಾಯವಾಗಿಲ್ಲ.

ಇಲ್ಲಿಯೂ ಕೆಲವು

ಉಪಯೋಗಕ್ಕೆ ಬಾರದ

ನಕ್ಷತ್ರಗಳು

ನನ್ನ ನಿದ್ರೆಗೆಡಿಸುತ್ತಿದೆ.

೨.

ಹದಿ ಹರೆಯದವರು

ಬೆದೆಗೆ ಪ್ರೇಮವೆಂದು

ಪರಿಗಣಿಸುವ

ಆತಂಕವಿರುವುದರಿಂದ

ಮುದುಕರು; ಹಾದರವನ್ನು

ಕರಾರುವಕ್ಕಾಗಿ

ಮಾಡಿ ತೋರಿಸುತ್ತಾರೆ.

೩. (more…)

Thursday May 24, 2007

ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!

Filed under: ಅಲೆಮಾರಿಯ ದಿನಚರಿ — Rasheed @ 10:46 pm

 mallikarjun2.jpg

 ‘ಎನ್ನ ಕರದೊಳಗಿದ್ದು ಎನ್ನೊಳೇತಕೆ ಮುನಿವೆ?’ 

 ಮಲ್ಲಿಕಾರ್ಜುನ ಮನ್ಸೂರ್ ಹಾಡುತ್ತಿದ್ದಾರೆ.

‘ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ ನೋಡವ್ವಾ..ಕೇಳುತ್ತ ಕೇಳುತ್ತ ಮೈಮರೆತೊರಗಿದೆ ನೋಡವ್ವಾ.. ಹಾಸಿದ್ದ ಹಾಸಿಗೆಯಾ ಹಂಗಿಲ್ಲದೇ ಹೋಯಿತ್ತೂ..’ ಇನ್ನೊಂದು ಹಾಡು.

 ಸುಮ್ಮನೆ ಮುಚ್ಚಿಕೊಂಡು ಐದು ನೂರು ಪದಗಳನ್ನು ಬರೆಯಲು ಯಾಕಿಷ್ಟು ಸರ್ಕಸ್ಸು ಅನ್ನಿಸುತ್ತದೆ.ಬರೆಯುವುದು ಒಂದು ತರಹದ ದಿನನಿತ್ಯದ ವ್ಯಾಯಾಮದಂತಿರಬೇಕು.ದಿನಾ ಬೆಳಗಿನ ವಾಕಿಂಗಿನ ಹಾಗೆ.ಮಾಡುತ್ತಾ ಹೋಗಬೇಕು ಎಂದೆಲ್ಲಾ ಹೇಳಿದ್ದು ಎಲ್ಲ ಬರಹಗಾರರ ಗುರು ಸಮಾನನಾದ ಹೆಮಿಂಗ್ವೇ ಇರಬೇಕು.ಅಥವಾ ಇನ್ನೊಬ್ಬ ತೀರ್ಥರೂಪ ಸಮಾನರಾದ ಲಂಕೇಶ್!

 ’ಎನಗೆ ನಿಮ್ಮ ನೆನಹಾದಗಲೇ ಉದಯ, ಎನಗೆ  ಮರೆವಾದಾಗಲೇ ಅಸ್ತಮಾನ’ ಮನ್ಸೂರ್ ಈಗ ಬಸವಣ್ಣನವರನ್ನು ಎತ್ತಿಕೊಳ್ಳುತ್ತಿದ್ದಾರೆ.ನಾನಾದರೋ ಎಷ್ಟು ಇದ್ದರೂ ನೆಮ್ಮದಿಯೆಂಬುದು ಇಲ್ಲದ ಪ್ರಾಣಿಯಂತೆ ಚಡಪಡಿಸುತ್ತಿದ್ದೇನೆ.ನಮ್ಮಂತಹವರಿಗೆ ಯಾಕೆ ಚನ್ನಮಲ್ಲಿಕಾರ್ಜುನನೂ ಇಲ್ಲ ಕೂಡಲಸಂಗಮನೂ ಇಲ್ಲ ಎಂದೆನಿಸಿ ಪೆಚ್ಚಾಗುತ್ತದೆ.ಅಂತರಂಗ ಶುದ್ಧಿಯೂ ಇಲ್ಲದ ಬಹಿರಂಗ ಶುದ್ಧಿಯೂ ಇಲ್ಲದ ಈ ತಂತಿಯಮೇಲೆ ನಡೆಯುವ ದೊಂಬರಾಟದ ಬಾಲೆಯ ಹಾಗಿನ ದೈನಂದಿನ ಪಾಡು,ಅಲೆದಾಟ,ಕೀಟಲೆ ಮತ್ತೆ ನಡುರಾತ್ರಿ ಕಣ್ಣುಬಿಟ್ಟುಕೊಂಡು ಕೂರುವ ಈ ನಿಶಾಚರ ಬರಹ ನಗು ಬರುತ್ತದೆ.

mansur1.jpg (more…)

Wednesday April 11, 2007

ಡಾ.ಯು.ಆರ್.ಎ. ಮತ್ತು ಮೈಸೂರಿನ ಬಾಲಕ

Filed under: Uncategorized — Rasheed @ 9:45 am

ura.jpg

ನಮ್ಮ ಪ್ರೀತಿಯ ಬರಹಗಾರನ ಜೊತೆ ಮೈಸೂರಿನ ಈ ಬಾಲಕ ಏನು ಹೇಳುತ್ತಿರಬಹುದು?ಏನು ಕೇಳುತ್ತಿರಬಹುದು.

ನಿಮಗೇನನಿಸುತ್ತದೆ?

ಪ್ರತಿಕ್ರಿಯಿಸಿ!

Thursday April 5, 2007

ಪೂರ್ಣ ಚಂದ್ರ ತೇಜಸ್ವಿ ತೀರಿಕೊಂಡರು

Filed under: Uncategorized — Rasheed @ 9:34 am

purnachandratejaswi1.jpg

 

 

 

ಮೊನ್ನೆ ತಾನೇ ತೇಜಸ್ವಿಯವರ ಪತ್ನಿ ಆರ್. ರಾಜೇಶ್ವರಿ ಮೈಸೂರು ಆಕಾಶವಾಣಿಯಲ್ಲಿ ಮಾತನಾಡಿದ್ದರು. ತೇಜಸ್ವಿ ಎಷ್ಟು ಸುಂದರವಾಗಿ ಮಟನ್ ಪಲಾವ್ ಮಾಡುತ್ತಾರೆ ಎಂದು ಗಂಡನ ಎದುರೇ ಕೊಂಡಾಡಿದ್ದರು. ತೇಜಸ್ವಿ ಹಿನ್ನೆಲೆಯಲ್ಲಿ ನಾಚಿಕೊಂಡು ಕೇಳಿಸಿಕೊಳ್ಳುತ್ತಿದ್ದರು. ಈವತ್ತು ಅವರು ಇಲ್ಲ. ಕಾಲ ನಿಜಕ್ಕೂ ತುಂಬಾ ಕೆಟ್ಟ ಕಟುಕ.

ನಮ್ಮ ಪ್ರೀತಿಯ ಲೇಖಕನನ್ನು ಕಿತ್ತುಕೊಂಡ ಆತನಿಗೆ ಧಿಕ್ಕಾರ.

[ಚಿತ್ರ ಕೃಪೆ: ಕರ್ನಾಟಕ ಫೋಟೋ ನ್ಯೂಸ್]

 

 

 

Blog at WordPress.com.