The Mysore Post

Thursday December 20, 2007

ಈವತ್ತು ಊರಲ್ಲಿ ದೊಡ್ಡ ಪೆರುನಾಳ್

Filed under: ಹಾಡು-ಪಾಡು — Rasheed @ 10:17 pm

ಈವತ್ತು ಊರಲ್ಲಿ ದೊಡ್ಡ ಪೆರುನಾಳ್ ಅಂದರೆ ಬಕ್ರೀದ್. ಅಮ್ಮ ಕರೆದಿದ್ದಾರೆ. ಎಂದಿನಂತೆ ಹೋಗಲಾಗದೆ ಕೂತಿದ್ದೇನೆ.ನನಗೆ ಯಾವಾಗಲೂ ಹೀಗೆಯೇ .ಅಲ್ಲಿ ಹೋಗಲಾರೆ.ಇಲ್ಲಿ ಇರಲಾರೆ. ಕವಿತೆ ಬೇಕಾದರೆ ಬರೆಯಬಲ್ಲೆ! ಸುಮಾರು ೨೨ ವರ್ಷಗಳ ಹಿಂದೆ  ಹಬ್ಬಕ್ಕೆ ಹೋಗದೆ ಕಳ್ಳ ಕೆಲಸಗಳ ನಡುವೆ ಬರೆದ ಕವಿತೆಯನ್ನು ಇಲ್ಲಿ ಪೋಸ್ಟ್ ಮಾಡುತ್ತಿರುವೆ.

ಹಜ್‌ಹಬ್ಬದ ನೆನಪು…. 

ಸಣ್ಣಗೊಮ್ಮೆ ಹಿಡಿದ ಜಡಿ ಜರ್ರೋಮಳೆ
ಬಾಳೆಯೆಲೆ ಮೇಲೆ ಹಜ್ಜಿಯಬ್ಬದ ಹನಿ
ಬತ್ತಲು ಬಚ್ಚಲ ಮಾಡಿನಿಂದಿಳಿದ ಮೋಡ ಬಿಸಿಲುಕೋಲು

ಹಬೆದುಂಬಿ ಮೈಮಿರುಗಿ ಹಜ್ಜಿಯಬ್ಬದ
ನೀರು ಸೋಕುವಲ್ಲೆಲ್ಲ ಉಮ್ಮಗುನುಗುನಿಸಿ
ಪೆರುನಾಳಿನ ಹಾಡು.

 ಬೆನ್ನೊರಸಿ ಉಡಿದಾರಕ್ಕೆ
ಮುಂಡುಡಿಸಿ, ಕಿವಿ ಎಳೆದು ಬೈತಲೆಯಲ್ಲಿ
ಬೆರಳಿರಿಸಿ ಪಾವಲಿ ಉಡಿತುಂಬಿ,
ಅತ್ತರು ಪೂಸಿ ಕಿವಿಯಲ್ಲಿ ಊದಿ, ದಾರಂದದ
ಮುಂದೆ ತಂಗಿ ‘ಅಲೀಮಾ’ ಚಾಚಿ ಕೈಚಾಚಿ
ಕೈಯೆಲ್ಲ ಮದರಂಗಿ ಕೆಂಪು ಹಕ್ಕಿ, ಕಿವಿಯೆಲ್ಲ ಬೆಳ್ಳಿ
ಎಸಳೆಲ್ಲ ಝಮಕಿ,ಅಂಗಳದ ಹಸಿಮಣ್ಣ ಮೇಲೆ ಧುಮುಕಿ.
ಬಿಳಿ ಮಲ್ಲಿಗೆಯ ಮಾಲೆ ಮುಡಿಯ ಮೇಲೆ.
ಹುಡುಗ ಕಾಡೊಳಗೆ ಅಲ್ಲಾಕರೆದಂತೆ ಪಳ್ಳಿಗೆ
ಬಾಪಾನ ಹಿಂದೆ, ‘ಅಲ್ಲಾಹು ಅಕ್‌ಬರ್’abraham_isaac.jpg

ಕಾಡೊಳಗೆ ಕರೆದಂತೆ, ಹನಿಯೊಳಗೆ ಕರೆದಂತೆ
ಕಾಡಿನೊಳಗಡೆ ಕರೆದಂತೆ ಮಗನ ಅಲ್ಲಾನ ಕಡೆಗೆ
ಅಲ್ಲಿ ಮರಳು ಗಾಡಿನ ‘ಕಹಬಾ’ದ
ಅತ್ತಕಡೆ ಇಬ್ರಾಹಿಂ ನೆಬಿ ಮಗ ಇಸ್‌ಮಾಯೀಲನ
ಕೊರಳ ಅಲ್ಲಾಹನಿಗೆ ಕೋಯ್ದು ಕೊಡುವಂತೆ,
ದಿಕರಿಡುತ್ತವೆ ಕಿವಿಯ ಒಳಗೆ ಕಾಡನಡುವೆ.

ಉಮ್ಮನ ಪಾವಲಿ ಮುಂಡುಡಿಯಲ್ಲಿ ಕಣ್ಣ ತಬ್ಬುತ್ತದೆ.
ಕರಿದ ನೇಂದ್ರ ಕಾಯಿ ನಾಲಗೆಯಪ್ಪುತ್ತದೆ
ಸುಯ್ಯೋಹನಿಯಲ್ಲಿ ಕಿವಿದುಂಬುತ್ತದೆ, ಮರದ ಹನಿಕಣ್ಣು
ತಂಗಿಯ ಕಿವಿಯ ಬೆಳ್ಳಿ ತೊಟ್ಟಿಕ್ಕುತ್ತದೆ. ಬಾಪಾನ ಹಿಂದೆ
ಅಲ್ಲಾನ ಕಡೆಗೆ.

ಇರುವುದೊಂದೇ ಬಾಪಾ, ಹಿಂಬಾಲಿಸಲಿಕ್ಕಿರುವುದೊಂದೇ ಬಾಪಾ
ಈ ಇಷ್ಟು ಮಳೆಯ ಕಾಡಿನಲ್ಲಿ ಹನಿವ ಹನಿಯೆಲ್ಲ
ಬಾಪಾ ಕರೆದಂತೆ, ನೆಲವೆಲ್ಲ ಪಸೆಯಿಡಿದು ಜಾರುಜಾರಿಗೆ
ದೂರ ಸರಿದಂತೆ ಬಾಪಾ ಕಾಲುರೋಡಿನೊಳಗೆ
ಅಲ್ಲಾನ ಕಡೆಗೆ.

ಹರಿದ ತೊರೆ ಅಡಿಕೆ ಪಾಲದ ಮೇಲೆ ಬಾಪಾ
ನಡೆದಂತೆ ನಡುಗುತ್ತಾ ಹುಡುಗ,
ನಡುಗುತ್ತ ಅಡಿಗಡಿಗೆ ಅಲ್ಲಾನ ಕರೆಯುತ್ತ ಹುಡುಗ.

ಕಣ್ಣ ಅಗಲಕ್ಕೆಲ್ಲ ಅಲ್ಲಾ, ನದಿ ಹರಿದಂತೆ ಕೆಳಗೆ
ಅಲ್ಲಾ, ಆಕಾಶವೆಲ್ಲ ಕರಿದುಂಬಿ ಹರಿದಂತೆ
ಅಲ್ಲಾ, ಮರದಮರದ ತೊಗಟಿ ಕರಿಗಟ್ಟಿ ಬೇರು
ಪೊದೆಯೆಲ್ಲ ನೀರು ಮುಂಡು ತೊಯ್ಸಿಸಿಕೊಂಡು
ನಡೆವ ಹುಡುಗನೆದೆಯಲ್ಲೆಲ್ಲ ಅಲ್ಲಾನ ಕಡೆಗೆ ನಡೆವ ಬಾಪಾ.

ಹರಿವ ತೊರೆದಾಟಿ ಮುಳಿ ಹುಲ್ಲ ನೆಲದಲ್ಲಿ
ಕಾಲೊಸರುವಲ್ಲೆಲ್ಲಾ ಅಕ್ಕಿ ಹಿಟ್ಟಿನ ಮೇಲೆ
ನಾದಿದಂತೆ ಅಲ್ಲಾನ ಹೆಜ್ಜೆ.

 ಪಳ್ಳಿಯ ಪಡಿಯೇರಿದ
ಮೇಲೆ ಬಾಪಾ ಅಲ್ಲಾನ ಮುಂದೆ ‘ಅಲ್ಲಾಹು ಅಕ್‌ಬರ್’
ಹುಡುಗ ನುಡಿ ತುಂಬಿ ಹರಿವ ಪಾವಲಿಯಲ್ಲೆಲ್ಲ
ಉಮ್ಮ ಅಳುವಂತೆ ಪಳಿಯಿಂದೆಲ್ಲಿಂದಲೋ ಅಲ್ಲಾ
ಕರೆದಂತೆ ‘ಕಹಬಾ’ದ ಕಡೆಗೆ, ಕಾಡಿನಲ್ಲೆಲ್ಲೋ
ಬಾಪಾ ಪುಟ್ಟ ಹುಡುಗನ ಬಿಟ್ಟು ನಡೆದಂತೆ ಎಲ್ಲೋ
‘ಅಲ್ಲಾಹು ಅಕ್‌ಬರ್’.

Sunday December 9, 2007

ರೂಮಿ ಕವಿಯ ಹನ್ನೆರಡು ಪುಟ್ಟ ಕವಿತೆಗಳು

 

 

rumi6.jpg

-೧-

ನೀರೊಳಗೆ ತಿರುಗುತ್ತಿದೆ ನೀರ ಗಾಲಿ,

ತಾರೆ ತಿರುಗುತ್ತಿದೆ ಚಂದ್ರನೊಡನೆ.

ಚಕಿತ ನಾವು ಈ ಇರುಳಲ್ಲಿ,ಅದು ಹೇಗೆ

 ಇಷ್ಟೊಂದು ಬೆಳಕು ಇಲ್ಲಿ !

(more…)

Monday October 15, 2007

ಇನ್ನೊಂದು ಬಹಳ ಹಳೆಯ ಕವಿತೆ

Filed under: ಹಾಡು-ಪಾಡು — Rasheed @ 10:28 pm

ಅವಳು

avalu.jpg

ಚಂದವಿದ್ದಳು ಗೆಳೆಯ ಅವಳು

ಒಳ್ಳೆ ಮಜಬೂತು ಕುದುರೆ.

ಹಾರಂಗಿ ಅಣೆಕಟ್ಟು ಕಟ್ಟಿಟ್ಟ ನೀರು

ಬಿಟ್ಟಾಗ ನಗುವ ನಕ್ಷತ್ರ ಮೀನು.

ಅವಳು ಕೂದಲು ಬಿಚ್ಚಿಟ್ಟು ತುಟಿಯಲ್ಲಿ

ಕಚ್ಚಿ ಹೇರುಪಿನ್ನು, ನಗುವ ಹಾಗೆ

ಗಲ್ಲದಲ್ಲೊಂದು ಗುಳಿಯಿತ್ತು ಗೆಳೆಯ,

ತುಂಬು ಕೊರಳಿನ ತುಂಬ ಕಾಡು ಹಾಡು.

ಅವಳ ತಟ್ಟನೆಯ ತಿರುವು ತಿರುವುತ್ತ

ಹರಿವ ಕಪ್ಪು ಟಾರಿನ ದಾರಿ ತಗ್ಗು ಕೆಳಗೆ

ಅಲ್ಲಿ ಏಲಕ್ಕಿ ಮಲೆ ಕೆಂಪು ಕಾಫಿಯ ತೋಟ

ಹಸಿರು ಗಾಳಿಗೆ ಉಲಿವ ಬೇಲಿಯೊಳಗೆ

ಚೀಲ ಬುತ್ತಿಯ ತೋಳೆ ಬರಿ ಕಿತ್ತಳೆ.

Saturday September 29, 2007

ಪುಟ್ಟ ಮೂರು ರೂಮಿ ಕವಿತೆಗಳು

Filed under: ಅನುವಾದಗಳು, ಹಾಡು-ಪಾಡು — Rasheed @ 11:54 pm

 

[ಮೌಲಾನಾ ಜಲಾಲುದ್ದೀನ್ ರೂಮಿ ಬದುಕಿದ್ದರೆ ಅವರಿಗೆ ನಾಳೆ ಭಾನುವಾರಕ್ಕೆ ಎಂಟುನೂರು ವರ್ಷಗಳಾಗುತ್ತಿತ್ತು.ರೂಮಿಯ ಕುರಿತು, ಅವರ ಹುಟ್ಟೂರಿನ ಕುರಿತು, ಈಗ ಆ ಊರು ಹೇಗಿದೆ ಎಂಬುದರ ಕುರಿತು ನೀವು ಬಿ.ಬಿ.ಸಿ ಯ ಈ ತಾಣವನ್ನು ನೋಡಬಹುದು .]

(more…)

Monday September 17, 2007

ಬಾಲ್ಯ ಕಾಲದ ಒಂದು ಕವಿತೆ

Filed under: ಹಾಡು-ಪಾಡು — Rasheed @ 9:47 pm

ಮತ್ತೇ ಬರುವೆನು ಹೆಣ್ಣೇ..

ಮತ್ತೆ ಬರುವೆನು ಹೆಣ್ಣೆ ಮರಳಿ ನಿನ್ನಲ್ಲಿಗೆನಿನ್ನ ಬೆಳ್ಳಿ ಉಡಿಪಟ್ಟ ಎದೆ ತುಂಬಿತುಳುಕುವ ಕುಪ್ಪಾಯ, ಮುಂಡು ತುಣಿಯೊಳಗುಕ್ಕುವ ಕಾವ್ಯಕ್ಕೆ ರೇಕು ತುಂಬಿಸಲಿಕ್ಕೆ. (more…)

Saturday September 1, 2007

ಪುಷ್ಕಿನ್ ನ ಇನ್ನೊಂದು ಕವಿತೆ

Filed under: ಹಾಡು-ಪಾಡು — Rasheed @ 11:52 pm

ನನ್ನ ತೋಳುಗಳಲ್ಲಿ

hatbeaut02.jpg

 

ನನ್ನ ತೆರೆದ ತೋಳುಗಳಲ್ಲಿ ನಿನ್ನ ಎಳೆ ಚೆಲುವು

ಸೆರೆಯಾಗಿದೆ ಓ ದೇವತೆಯೇ…

 

ನನ್ನ ತುಟಿಯ ನಡುವಿಂದ ಮುತ್ತುಗಳ ನಡುನಡುವೆ

ಪ್ರೀತಿಮಾತುಗಳು ಸೆಲೆಯೊಡೆಯುತ್ತಿವೆ.

ನನ್ನ ಬಿಗಿ ಅಪ್ಪುಗೆಯಿಂದ  ಮಾತಿಲ್ಲದೆಯೆ

ನಿನ್ನ ತೆಳ್ಳಗಿನ ದೇಹ ಸರಿಯುತ್ತಿದೆ ದೂರ

ಸಂಶಯದೊಂದು ಸಣ್ಣ ನಡುವಿನ ಹುಡುಗೀ..

ನೀ ಕೊಂಕು ಮಾತಾಡುತಿರುವೆ.

ಮೋಸದ ನೋವಿನ ಸಾಲುಮಾತುಗಳು ನೆನಪಾಗುತಿದೆ

ನಿನಗೆ. ಸುಮ್ಮನೆ ಕೇಳಿಸಿಕೊಳ್ಳುತಿರುವೆ

ಏನೂ ಕೇಳಿಸದೆಯೇ..

ಶಪಿಸುತ್ತಿರುವೆ ನನ್ನ ಹುಮ್ಮಸ್ಸಿಗೆ ನಾನೇ

ನನ್ನ ನಯದ ಲಲ್ಲೆಯಾಟಗಳಿಗೆ,

ಯೌವನಕ್ಕೆ, ನಿತ್ಯ ಬೇಟಗಳಿಗೆ,

ಹೂತೋಟದ ಸದ್ದಿಲ್ಲದ ಆಟಗಳಿಗೆ

ಪ್ರೇಮದ ಹೆಸರಿಲ್ಲದ ಪಿಸುಮಾತಿನ ಹೇಳಿಕೆಗಳಿಗೆ.pushkin.jpg

ಶಪಿಸುತ್ತಿರುವೆ ಕವಿತೆಗಳ ಮಾಂತ್ರಿಕ ಮೋಡಿಗಳಿಗೆ,

ಅರಿಯದ ಸಣ್ಣ ಹುಡುಗಿಯರ ಸ್ಪರ್ಶಗಳಿಗೆ,

ಅವರ ಕಣ್ಣೀರಿಗೆ, ಕಾಲ ಮೀರಿದ  ವಿಷಾದಗಳಿಗೆ.

Thursday July 26, 2007

ಒಂದು ರೇಡಿಯೋ ಕವಿತೆ

Filed under: ಹಾಡು-ಪಾಡು — Rasheed @ 11:34 pm

ಆಗ ರೇಡಿಯೋ ಇರಲಿಲ್ಲ . ಅದರ ದೊಡ್ಡ ಬೀಟೆಯ ಮರದ ಪೆಟ್ಟಿಗೆ ಮಾತ್ರ ಉಳಿದಿತ್ತು.

ಒಳಗೆ ಅಪ್ಪನ ಬೀಡಿ ಪೊಟ್ಟಣ, ಅರಬಿ ಪುಸ್ತಕ, ಕೆಮ್ಮಿನ ಔಷದಿ,

ಮೊಲದ ಬೇಟೆಗೆ ತಂದು ಇಟ್ಟಿದ್ದ ನಾಡಕೋವಿಯ ತೋಟೆ,

ಅವರ ಕನ್ನಡಕ,ಅಂಗಡಿಯ ಸಾಲದ ಪುಸ್ತಕ, ನಮಗೆ ಕದ್ದು ಮುಚ್ಚಿ

ಮುದ್ದು ಮಾಡಲು ತಂದಿಟ್ಟಿದ್ದ ಮಿಠಾಯಿ  ಮತ್ತು ಅವರ ಮೂಗು ಒರೆಸಿಟ್ಟ ಕರ್ಚೀಪು.

ನಮ್ಮಷ್ಟಕ್ಕೆ ನಮಗೆ ಯಾವುದೂ ಎಟುಕುತ್ತಿರಲಿಲ್ಲ. . . . .

ಮತ್ತು ರೇಡಿಯೋ ಅಂದರೆ ಏನು ಅಂತ ಗೊತ್ತಿರಲಿಲ್ಲ.

ಈಗ ರೇಡಿಯೋ ಕೈಗೆಟುಕುತ್ತಿದೆ. ಅಪ್ಪ ನೋಡಲು ಸಿಗುತ್ತಿಲ್ಲ (more…)

Friday July 20, 2007

[ಒಂದು ಹಳೆಯ ಕವಿತೆ]

Filed under: ಹಾಡು-ಪಾಡು — Rasheed @ 3:01 pm

ಹುದುಗಿಸಿಡು ಇದನು ಇಲ್ಲೆ ಎಲ್ಲಾದರೂ....

 

hudugisidu.jpg

ಹುದುಗಿಸಿಡು ಇದನು ಇಲ್ಲೆ ಎಲ್ಲಾದರೂ ಎಲೆಯ ಮರೆಯಲ್ಲಿಡು
ಅದನು ನನಗೇ ತಿರುಗಿಸಿಕೊಡು.
 
 ನಿದ್ದೆಯಿಂದೆದ್ದು ಆಕಳಿಸುತ ನಿಂತ ಕಾಮದೇವತೆ
 ಮಗು ನೀನು. ಎಚ್ಚರಿಸಿ ಮೆಲ್ಲಗೇ ಕಾಲು ಕೆದರಿ
 ಕಾಮಿಸಲು ಕರೆದೊಯ್ಯಬಂದೆ ನಾನು
 ಯಾಕಳುವುದು ಸಂಜೆ ನೀನು? (more...)

Friday July 6, 2007

ಬಂದೇನವಾಜರ ಧರ್ಗಾದಿಂದ ಎರಡನೇ ಕವಿತೆ

Filed under: ಹಾಡು-ಪಾಡು — Rasheed @ 11:01 am

 ಹೆಂಗಸರ ಹುಚ್ಚು , ಭಗವಂತ ಮತ್ತು ನಾನು

dance.jpg

 

ಈ ಹೆಂಗಸರ ಮಧ ಇಂದು ಅತಿರೇಕಕ್ಕೆ ಹೋಗಿದೆ,

ಇವರ ಆರ್ತ ಕೂಗು ಭಕ್ತಿಯಂತೆ ಕೇಳಿಸುತ್ತಿದೆ.

ಮಲಗಿರುವ ಮಕ್ಕಳು ಕನಸಿಂದ ದಿಗ್ಗನೆ ಎದ್ದು ,ಬೆಳಕಲ್ಲಿ ಕಣ್ಣು ಕಾಣಿಸದೆ

ಕಕ್ಕಾವಿಕ್ಕಿಯಾಗಿ, ಹಾಗೇ ನೆಲದ ತಂಪಿಗೆ ಕೆನ್ನೆ ಒತ್ತಿ, ಭೂಮಿಯೊಳಗಣ ಸದ್ದ ಆಲಿಸುವ

ಆಟ ಆಡುತ್ತಿದ್ದಾರೆ. ಈ ಹೆಂಗಸರ  ಸಂಕಟ ಆಧ್ಯಾತ್ಮವಾಗಿಹೋಗಿದೆ.

ಈ ಹಾಸ್ಯಾಸ್ಪದ ಭಗವಂತ ಏನೂ ಕಾಣಿಸದ ಕುರುಡ.ಸಂಗೀತವೂ ಗೊತ್ತಿಲ್ಲದ

 ಚಪ್ಪಟೆಕಿವಿಯ ಸರ್ವಾ ಂತರ್ಯಾಮಿ.ಪೆದ್ದುಪೆದ್ದಾಗಿ ಆಕಾಶದ ಅಗಲಕ್ಕೆ ಕುಂಡೆಯಾನಿಸಿ ಕೂತ

ಭಗವಂತ.ಮುಳ್ಳು ಕಂಟಿಯ ತುದಿಗೆ ಬೆಳಕ ತುರಿಸುತ್ತ ಕುಳಿತ ಮಿಂಚುಹುಳ ಈ ಭಗವಂತ.

ಎಲ್ಲವನು ಅರಿತ ಅಲ್ಲಾಡುವ ಶಿಖೆಯ ಆನಂದ ಕಂದ ತುಂದಿಲ ಕಂದ.ಆಕಾಶದಲ್ಲೂ ತುಂಬಿ

ಆತ್ಮದೊಳಗೂ ಹರಿದು ಹೇಗೆ ಹರಸುವುದು ಎಂದು ಹಲುಬುತ್ತಿದ್ದಾನೆ.

ಈ ಹೆಂಗಸರು ಈಗ ಭಂಗಿ ಬದಲಿಸುತ್ತಿದ್ದಾರೆ. ಹುಚ್ಚು ಕೆದರಿದ್ದವರು, ಭಕ್ತಿ ತುಂಬಿದ್ದವರು

ಒಂದರೆಗಳಿಗೆ ತಡೆದು ನೀರು ಕುಡಿದು ,ಹಾಲೂಡಿಸಿ,ಕೈಕಾಲುಬೆರಳುಗಳ ನೆಟಿಗೆ ಮುರಿದು,

 ಕೆದರಿದ್ದ ಮುಡಿಯ ಮತ್ತೆ ವೈಯಾರದಲಿ ಬಿಗಿದು,ಮತ್ತೆ ಕದಡಿ

 ಇನ್ನೊಂದು ಆರ್ತ ಆಲಾಪಕ್ಕೆ ಸಿದ್ದರಾಗುತ್ತಿದ್ದಾರೆ.

ಎಲ್ಲವೂ ನಿಜ,ಹಸಿ.ಎಲ್ಲವೂ ದೂರ ಭಗವಂತನಂತೆ ಮತ್ತು ಅವನ ಸೈನಿಕ ಸಂತರಂತೆ

ಇರುವ ಭಕ್ತಿಯ ಮಾರ್ಗ-ಹುಚ್ಚು ಹಳವಂಡ-ಇದು ಮಾತ್ರ ಈ ಅಮವಾಸೆಯ ಕತ್ತಲಲ್ಲಿ ನಿಜ

ಉಳಿದದ್ದು ಸುಳ್ಳು,ವ್ಯಭಿಚಾರ ಮತ್ತು ಕೈಗೆ ಎಟುಕುವಂತದ್ದು.

ನಾನು ದಣಿದು ನೋಡುತ್ತಿದ್ದೇನೆ……

ಈ ಹೆಂಗಸರೂ ಇಲ್ಲದ,ಭಗವಂತನೂ ಅಲ್ಲದ5837_derv.jpg

ಮಕ್ಕಳೂ ಕೈಗೆ ಸಿಗದ ಈ ಟೊಳ್ಳು ಬಿಸಿಲಿನಲ್ಲಿ

ಮಿದುಳೊಳಗೆ ಬೆಳದಿಂಗಳು ಮತ್ತು ಹುಚ್ಚು ನಗು

ಸುಮ್ಮನೇ ನೋಡುತ್ತಿದ್ದೇನೆ

ಚೀತ್ಕರಿಸುತ್ತಿರುವ ಹೆಂಗಸರ ಹಾಹಾಕಾರದ ನಡುವೆ ಹೊಮ್ಮುತ್ತಿರುವ

 ಹಭೆಯ ನಡುವೆ ಎದ್ದು ನಿಂತಿರುವ ಭಗವಂತ.

ನಾನು ನೋಡುತ್ತಿದ್ದೇನೆ. ಆತ ಎಲ್ಲವ ಕಾಣುತ್ತಿದ್ದಾನೆ.

———

Wednesday July 4, 2007

ಎಚ್.ಗೋವಿಂದಯ್ಯನವರ ಎರಡು ಕವಿತೆಗಳು ಅವರಿಂದಲೇ

Filed under: ಹಾಡು-ಪಾಡು — Rasheed @ 1:55 am

dsc00054.jpg 

ಕನ್ನಡದ ಅಪರೂಪದ ಸಂಕೋಚದ ಕವಿ ಎಚ್. ಗೋವಿಂದಯ್ಯನವರಿಗೆ ಪೂಸಿ ಹೊಡೆದು ಎರಡು  ಕವಿತೆಗಳನ್ನು ಓದಿಸಿದೆ.

ಮೊದಲಿಗೆ ‘ಅ, ಆ.. ಮತ್ತು….’ (more…)

Sunday July 1, 2007

ಒಂದು ಸ್ವಂತ ಪದ್ಯ

Filed under: ಹಾಡು-ಪಾಡು — Rasheed @ 12:57 am

drg-1.jpg

 

ನಿನ್ನ ಬೆವರಿಕೊಂಡಿರಬಹುದಾದ ಎದೆ

ಮತ್ತು  ನಿನ್ನ ಕಾಲ ಬೆರಳ ಉಗುರಲ್ಲಿ ಕಡಲಿನ ಮರಳು

ಮತ್ತು ನಿನ್ನ ಮುಂಗುರುಳಲ್ಲಿ ಸಿಕ್ಕಿಕೊಂಡಿರುವ ಹಕ್ಕಿಯ ಗರಿ

ನೀನೇ ನಿದ್ದೆಯಲ್ಲಿ ಪರಚಿಕೊಂಡಿರುವ ನಿನ್ನ ಬೆನ್ನ ಗೀರು

ಮತ್ತು ಇದು ಯಾವುದಕ್ಕೂ ಕಾರಣನಲ್ಲನೆಂಬ ನನ್ನ ಕೊರಗು.

 

ನಿನ್ನ ಎಚ್ಚ್ರರದ ಉದಾಸೀನ, ಮೈಮುರಿದುಕೊಳ್ಳುವ ನಿನ್ನ ಬೆನ್ನ ಬೆರಳ  ಲಾಸ್ಯ,

ಮತ್ತು ಇಷ್ಟಿಷ್ಟೇ ಬಿಟ್ಟು  ಹಿಂದಿಡಿದಿಟ್ಟುಕೊಳ್ಳುವ ನಿನ್ನ ಔಧಾರ್ಯ ಮತ್ತು   

ನನ್ನ ಮುಡಿಯಲ್ಲಿ ಬೆರಳಿಟ್ಟು ನಿದ್ದೆ ಮಾಡಿಸಬಹುದೆನ್ನುವ

ನಿನ್ನ ಮರುಳು ಧೈರ್ಯ!                       

ನಾನು ಏನೋ ತೊದಲುವೆನು, ಮತ್ತೆ ನಿದ್ದೆ ಹೋಗುವೆನು

ಎಲ್ಲವನು ಕಂಡು ಇಲ್ಲವಾಗುವೆನು

ಇರುವುದೇ ಎಲ್ಲವು ಎಂದು ಮುಟ್ಟಿ ನೋಡುವೆನು

ನಿನ್ನ ದೂರ ಕಳಿಸಿ ಬಿಟ್ಟು ಬಂದು….

[ಚಿತ್ರ:ಚರಿತಾ]

Thursday June 28, 2007

ಕಲಬುರ್ಗಿಯ ಬಂದೇ ನವಾಝ್ ದರ್ಗಾದಲ್ಲಿ ಮಂಡಿಯೂರಿ ಕುಳಿತು ಒಂದು ಕವಿತೆ

Filed under: ಹಾಡು-ಪಾಡು — Rasheed @ 10:44 pm

ಹೇ ಬಂದೇ ನವಾಜ್

sufi_dancing1.jpg

ಈ ವಿಷವನ್ನು ಪೇಯದಂತೆ ಕುಡಿಯಲು ಬಿಡು,

ಒಂದು ತೊಟ್ಟೂ ನೆಲದಲ್ಲಿ ಹಿಂಗದಂತೆ.

ಈಗಿಂದೀಗಲೇ ಬಿಕ್ಷೆಯ ಬಟ್ಟಲನ್ನು ಹಿಡಿದು ನಡೆವ ಧೈರ್ಯ ಕೊಡು.ಈ ಗಿಡುಗನ ಉಡುಪನ್ನು ಕಳಚಿ ಬಿಡುವೆನು

ಪಾರಿವಾಳದ ದಿರಿಸನ್ನು ತೊಡಿಸು ನನಗೆ ಹೇ ಬಂದೇನವಾಜ್.

ನಿನ್ನ ಪಹಾಡಿನ ಹರಳು, ನಿನ್ನ ವನದ ಸಂಪಿಗೆಯ ಕರಿಯ ಬೀಜ,

ನಿನ್ನ ಫಕೀರರ ಹಾಡು,ಚಿಲುಮೆಯ ಹೊಗೆ,ಕೈಯ ಕೋಳ, ಕಾಲ ಕಡಗ,

ನಿನ್ನ ಹತ್ತೂ ಬೆರಳಿನ ಮಾಯದುಂಗುರ –

ನನ್ನ ಇಲ್ಲದಂತಾಗಿಸು ಹೇ ಬಂದೇ ನವಾಜ್.

pabad001sm.jpg

 ನಿನ್ನ ಗೋರಿಗಳ ನಡುವೆ ಹಾಲು ಊಡುತ್ತ,ಕಾಲು ಆಡಿಸುತ್ತ ಮಲಗಿರುವ ಮಗುವಿನ ನಗು.

ಹಾಲ ಊಡಿಸುತ್ತಿರುವ ಮುಸುಕಿನೊಳಗಿನ ಕಣ್ಣುಗಳ ಕಳ್ಳ ಆಟ.

ನಿನ್ನ ಗೋಡೆಗಳಿಗೆ ತಲೆ ಘಟ್ಟಿಸಿಕೊಳ್ಳುತ್ತಿರುವ ತಲೆಕೆಟ್ಟ ಹೆಣ್ಣುಮಗಳ ಚೀತ್ಕಾರ.

ಈ ಸ್ಮಶಾನದ ಆನಂದವನ್ನು ಅನುಭವಿಸಲು ಬಿಡು, ಹೇ ಬಂದೇ ನವಾಜ್.

ಈಗಿಂದೀಗಲೇ ಬಿಕ್ಷಾಪಾತ್ರವನ್ನು ಹಿಡಿದು ನಡೆವ ಧೈರ್ಯ ಕೊಡು. 

ಕನಸಲ್ಲಿ ನಿನ್ನ ಖರಪುಟಗಳ ಸದ್ದು,ಆಕಾಶದಲ್ಲಿ ಹಾಹಾಕಾರ,

ಒಡೆದಕಾಲುಗಳ ಸವರುತಿರುವ ಎಳ್ಳು ಹೂವುಗಳ ಪರಾಗ,ನಸುನಗು,ಕದ್ದು ಕೂಡಿರುವ ಜವ್ವನಿಗರ

ಪಿಸುಮಾತು,ಎಲ್ಲಿಂದಲೋ ಎದ್ದು ನಿಂತಿರುವ ಅರೆ ಕಳಾಹೀನ ಚಂದ್ರ,

ಈಗ ತಾನೇ ಮೈಕೊಟ್ಟು ಬಂದಿರುವ ವಕ್ರಮೂಗಿನ ಬಿಕ್ಷುಕಿಯಮಿಂಚುತಿರುವ ಮೂಗ ನತ್ತು-

 ನಾ ಪರಾದೀನ.ನಿನ್ನ ಪಾದಗಳಲಿ ಹಣೆಯಿಟ್ಟು ಚುಂಬಿಸುತಿರುವೆ ನನ್ನನೇ ನಾನು.

ಈ ಆನಂದವನು ನನ್ನೊಳಗೂ ಹರಿದು,ಹೊರಗೂ ಇಳಿದು,315949_t.jpg

ಈ ಅರೆ ಚಂದ್ರ ಇರುಳು ಈ ನಕ್ಷತ್ರ ರಾತ್ರಿ,ಈ ಮಿಂಚಿಲ್ಲದ ಸದ್ದಿಲ್ಲದ ಆಗಸದಲ್ಲಿ ತೋರಿಸು ನಿನ್ನ ಇರವು 

ನಿನ್ನ ಗಾಳಿ ನಿನ್ನ ಬೆಳಕು,ನಿನ್ನ ಊರಿದ ಪಾದದ ಕೆಳಗೆ ಅಗಾಧಮುಳ್ಳಿನ ಪಾದುಕೆ ಈ ಭೂಮಿ.

ನಿನ್ನ ಶಹರಿನ ಬೀದಿಗಳಲ್ಲಿ ಅನವರತ ಅಲೆಯುವ ಪ್ರೇತಾತ್ಮರು ನಿನ್ನ ಸಖಿಯರು

ಬೊಗಸೆಯಲ್ಲಿ ಹರಿವ ಬೆಂಕಿ, ಚೆಲುವ ಚೆಲ್ಲುತ್ತ ಹಸಿಯ ಮಾಂಸ ನೆತ್ತರು ಹೊತ್ತು ನಡೆಯುತ್ತಿರುವಈ ಚೆಲುವೆಯರು.ಆಹಾ ಇವರ ಕಣ್ಣುಗಳು.ಇವರ ಗಾಢ ಬೆವರು.

ನಿನ್ನ ಮಣ್ಣ ಹಿಡಿ ದೂಳ ಕದಲಿಸದೆಚಲಿಸುತ್ತಿರುವ ಇವರ ಪಾದ ಪಕ್ಷಿಗಳು.

ಕಣ್ಣಿಂದ ಕಾಣಿಸುತ್ತಿರುವ ಎಲ್ಲವ ಇಲ್ಲದಂತಾಗಿಸು ಹೇ ಗೇಸುದರಾಜ್ 

ನಾ  ಇಲ್ಲಿಂದ ಹೋಗುತಿರುವೆನು,

ಇಲ್ಲದ ಆ ಇನ್ನೊಂದು ಶಹರಿನ ದಾರಿ ತೋರಿಸು,

ಹೇ ಬಂದೇ ನವಾಜ್.

 

Wednesday June 27, 2007

ಮೋಹಿತನ ಒಂದು ಸಂಕೋಚದ ಕವಿತೆ

Filed under: ಹಾಡು-ಪಾಡು — Rasheed @ 12:17 pm

ಕ್ಷಮಿಸು,1105070152796_240_29728.jpg

 ಕ್ಷಮಿಸು, ನಿನ್ನನ್ನು ಹಾಗೆ ಬಗ್ಗಿಸಬೇಕಾಗಿರಲಿಲ್ಲ

ಮತ್ತು ಹಾಗೆ ಮಖಾಡೆ ಮಲಗಿಸಿದ್ದೂ ತಪ್ಪಾಯ್ತು.

ನಿನ್ನ ಎದೆ,ಹೊಕ್ಕಳು,ನಿನ್ನ ಕಿಬ್ಬೊಟ್ಟೆ, ತೊಡೆ…

ನಿನ್ನ ಎಲ್ಲವನ್ನೂ ತಿಂದು ತೇಗಿದ್ದಾಯ್ತು. ಪರಮಾತ್ಮ!

ಇನ್ನು ಏನಂತಲೂ ಪರದಾಡಿ ಮುಗಿಯಿತು.

ಈಗಲಾದರೂ ಕಣ್ಣು ತೆರೆ, ಹೇಳು,

ಉಡುಪು ತೊಟ್ಟುಕೋ.

ಮಡಿಲಲ್ಲಿ ಕೂರು.ತುಟಿ ಒರೆಸಿ ಮಾತನಾಡು.

ಮುಗಿಯಿತೇ ಅಂತಾದರೂ ಕೇಳು.

ಸುಮ್ಮಗೆ ನಗದಿರು.

Saturday June 9, 2007

ಎರಡು ಪುಟಾಣಿ ಕವಿತೆಗಳು

Filed under: ಹಾಡು-ಪಾಡು — Rasheed @ 11:49 pm

 -೧-

ಇನ್ನು ಯಾವತ್ತು….. ..

                                       [ಚಿತ್ರಗಳು:ಚರಿತಾ]                

ಇನ್ನು ಯಾವತ್ತು ಆ ಕಾರುಣ್ಯ ಮತ್ತೆ

ಎತ್ತಿಕೊಳ್ಳುವುದು?

ಯಾವತ್ತು ಇನ್ನು ಆ ಬರವು

ಒನಪಿಲ್ಲದೆಯೇ ಯಾವ ವಾಸನೆಯೂ ಇಲ್ಲದೆ

ಮಂತ್ರ ಮುಗ್ಧ ಗೊಳಿಸುವುದು ಬರಿಯ ಕೇವಲ

ಒಂದು ಅಂಗುಲ ನಗೆಯಿಂದಲೆಯೇ ಯಾವತ್ತು

ನಾನು ನನ್ನ ನಖಗಳ ಮರೆತು ಮುಳುಗುವ ಜಗವ

ನೋಡುವುದು ಇನ್ನು ಯಾವತ್ತು

ಆ ಕಾರುಣ್ಯ ಮರಳಿ ಬರುವುದು?

-೨-

ಬೇಕಿರಲಿಲ್ಲ

ಬೇಕಿರಲಿಲ್ಲ

ನಮ್ಮ ನಡುವೆ ಪದಗಳು ಮಾತನಾಡುವುದು

ಮತ್ತು ಮಾತುಗಳು ಅಡಗಲು ಹವಣಿಸುವುದು.

ಕಳೆದದ್ದು ಇರುವುದು ಮತ್ತು ನಡೆಯಲಿರುವುದು

ಸನ್ನೆಗಳಲಿ ಅರಿವಾಗುವುದು.

ಬೇಕಿರಲಿಲ್ಲಇದು ಯಾವುದೂ.

ಇದ್ದಿದ್ದರೆ ಒಂದು ಒದ್ದೆಯ ಹಿಮದ ಮಣಿಯ

ಗಾಳಿ ಆಡಲುನಾಚುವ, ಘನ ಗಂಬೀರ ಕಡಲೂ ನಗುವ

ನಾವು ಒಮ್ಮೆ ಕುಳಿತಿದ್ದಂತಹ ಜಾರುವ ಜಾಗ,

ಬೇಕಿರಲಿಲ್ಲಇದು ಯಾವುದೂ…..

 

Saturday May 12, 2007

ಒಂದು ಸಣ್ಣ ಕವಿತೆ

Filed under: ಹಾಡು-ಪಾಡು — Rasheed @ 12:37 am
  • ನಿನ್ನ ವಾಸನೆ ಸೂಸಲಿ ಈ ಚಾದರದಲ್ಲಿ……

hebbar.jpg

 ನಿನ್ನ ಮೈವಾಸನೆ ಸೂಸಲಿ ಈ ಚಾದರದಲ್ಲಿ
ನೆನಪೆಂಬುದು ಬೇಡ ಇರುವಾಗಲೇ…

ಹಾಗೆ ನೋಡಿದರೆ ನಾವು ಕೂಡಿದ್ದೇ ಇಲ್ಲ
ಕಂಡೇ ಇಲ್ಲ.ಎಣಿಸಿದ್ದು ಮಾತ್ರ
ಏನೆಲ್ಲಾ ನಡೆಸಿರುವೆವೆಂದು.

 ನೀನು ಬೆಳಕ ಪುತ್ಥಳಿ,ಒಂದು ಅನನ್ಯ ಪರಿಮಳ,
ಬೆಳಗೇ ತಲೆಕೆಳಗೆ ಬಿದ್ದ ಪಾರಿಜಾತ.
ನೀನು ನಕ್ಷತ್ರಮುಖಿ ಕೋಲು ಬೆಳಕು
 ಮೈಯ್ಯ ಕತ್ತಲೊಳಕ್ಕೆ ಬಾಚಿ ಎಳೆದು ನನ್ನ ಕಣ್ಣ ಮುಚ್ಚಿದವಳು.

 ಮಲೆಯ ಒರತೆಯಂತವಳು.

ನಿನ್ನ ಮೈ ವಾಸನೆ ಸೂಸಲಿ ಈ ಚಾದರದಲ್ಲಿ.
ನೆನಪೆಂಬುದು ಯಾಕೆ ಇರುವಾಗಲೇ.

 ಜಿನುಗು ಜಿನುಗುತ್ತಲೇ ಸುಖ ಸಂಕಟ
ಇನ್ನು ಇನ್ನೇನೋ ಗೊತ್ತಿಲ್ಲದ ಸದ್ದ ಅದುಮಿ ಹಿಡಿದವಳು.
 ನೀನು ಕಳ್ಳಗುಟ್ಟಿನ ಹೆಣ್ಣು, ಹೆತ್ತ ಎದೆಯವಳು
ಚೂಟಾಟದ ಹುಡುಗಿ, ನಡುವೆ ಎದ್ದು ಮೈ ಕೊಡವಿ
 ಮತ್ತೆ ಅಣಿಯಾದವಳು.

ಏನೂ ಗೊತ್ತಿಲ್ಲ ಎಂದವಳು,
ಎಷ್ಟೆಲ್ಲ ಕಲಿಸಿ.

 ನಿನ್ನ ಮೈ ವಾಸನೆ ಸೂಸಲಿ ಈ ಚಾದರದಲ್ಲಿ
ನೆನಪೆಂಬುದು ಯಾಕೆ ನಾವು ಇರುವಾಗಲೇ.

 

 

Tuesday May 1, 2007

ಒಂದು ಹಳೆಯ ಕವಿತೆ

Filed under: ಹಾಡು-ಪಾಡು — Rasheed @ 7:30 pm

 ಹಸುವಿನಂತಹ…

hasuvinanthaha.jpg

ಹಾಲು ಕರೆಯುವ ಹಸುವಿನಂತಹ ಹಾದರಗಿತ್ತಿ
ಮುದುಕಿ,ಹೆಂಗಸು,ಹತ್ತಿರಕ್ಕೆ ಇನ್ನೂ ಹುಡುಗಿ
ಅರೆ ಸೀರೆ ಮೊಣಕಾಲಿಗೆ ಎತ್ತಿ
ಆಕಳ ಅವುಡಿಗೆ ತಾಡನ ನಡೆಸಿದ್ದಾಳೆ ಹುಚ್ಚಿ
ಹುಚ್ಚೇ ಹಿಡಿಸುವ ಹಳೆಯ ಹಾದರಗಿತ್ತಿ (more…)

Friday March 9, 2007

ಪ್ರಿಯ ಲಂಕೇಶರ ಹುಟ್ಟು ಹಬ್ಬಕ್ಕೆ ಒಂದು ಕವಿತೆ

Filed under: ಹಾಡು-ಪಾಡು — Rasheed @ 3:02 pm

lankesh1.jpg

ನಾವು ಎಲ್ಲರೂ
ನೀವು ಇದ್ದಿದ್ದರೆ
ಈ ಎಲ್ಲದರ ಕುರಿತು
ಏನು ತೀರ್ಮಾನ ತೆಗೆದುಕೊಳ್ಳುತ್ತಿದ್ದಿರಿ ಎಂದು
ಯೋಚಿಸುತ್ತಾ ಕುಳಿತಿರುವೆವು.
ಹೀಗೆ ನೀವು ಸಾರ್ವಜನಿಕ ತೀರ್ಮಾನಗಳನ್ನು
ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ಬಹುಶಃ
ನಮಗೆ ಗೊತ್ತಿಲ್ಲ ಎನ್ನುವುದೂ ಒಂದು
ಚರ್ಚೆಯ ವಿಷಯವಾಗಿರುವುದು. (more…)

Saturday February 17, 2007

ಶ್ರೀನಿವಾಸರಾಜು ಮೇಷ್ಟರಿಗೆ ನಮಸ್ಕಾರ

Filed under: ಹಾಡು-ಪಾಡು — Rasheed @ 10:28 am

raju.jpg

ಬಹುಶಃ ಈಗಿನ ಹುಡುಗರಿಗೆ ಶ್ರೀನಿವಾಸರಾಜು ಮೇಷ್ಟರು ಸಿಗಲಿಕ್ಕಿಲ್ಲ
ಮೇಷ್ಟರಿಗೆ ಹುಡುಗರೂ ಇರಲಿಕ್ಕಿಲ್ಲ
ಇದು ಹಳಹಳಿಕೆಯೆಂದೇನೂ ಅನಿಸಬೇಕಾಗಿಲ್ಲ
ಏಕೆಂದರೆ ಕವಿತೆ ಹುಚ್ಚು ಹಾದರಗಿತ್ತಿಯಂತಹ ಹೆಂಗಸು,
ವಿಟನಂತಹ ಬೇಜವಾಬ್ಧಾರಿಯ ಗಂಡಸು, ಹಾಗೆಲ್ಲಾ
ಮೇಷ್ಟರ ಪಾಲಾಗುವುದಿಲ್ಲ ಅಂತ ನಾವೆಲ್ಲ ಸಜ್ಜನರ ಕಾಲೆಳೆಯಬೇಕಾಗಿಲ್ಲ.
ಏಕೆಂದರೆ ಸಜ್ಜನರು ಈಗಲೂ ಕಾಲವಾಗಿಲ್ಲ.
ಬಹುಶಃ ಇದನ್ನು ಸಮೀಕರಣದ ಮೂಲಕ ಹೀಗೂ ಹೇಳಬಹುದು
ಅಂತೆಲ್ಲ ಬಗೆಹರಿಸುತ್ತಿರಬೇಕಾದರೆ ನನಗೆ ನನ್ನನ್ನೇ ಒದೆಯಬೇಕೆನ್ನಿಸುತ್ತದೆ. (more…)

Blog at WordPress.com.