
ಕತೆಯ ಆಶೆಯನ್ನು ಬಿಟ್ಟು ಮತ್ತೆ ಸುಮ್ಮನೇ ತಿರುಗಾಟ ಶುರು ಮಾಡಿದ್ದೆ. ಏನು ಬರೆಯಲು ಹೊರಟರೂ ಮತ್ತೆ ಅದೇ ಬಾಲ್ಯಾಕಾಲದ ಹಾವಳಿ ಜಾಸ್ತಿಯಾಗಿ. ಹಳೆಯದ್ದನ್ನೆಲ್ಲ ಮೂಟೆಕಟ್ಟಿ ಅಟ್ಟದಲ್ಲಿಟ್ಟು ಇಲ್ಲಿಗೆ ಬಂದರೂ ಬಾಲ್ಯದ ಕಾಟ ಕಡಿಮೆಯಾಗಲಿಲ್ಲವಲ್ಲಾ ಎಂದು ನಿಟ್ಟುಸಿರು ಬಿಡುತ್ತಿದ್ದೆ. ಊರಲ್ಲಿರುವ ಮಡದಿ ಕಾಗದ ಬರೆದು `ನೀನು ಗೊತ್ತೇ ಇಲ್ಲದ ಅಪರಿಚಿತ ಅಂತ ಅನ್ನಿಸುತ್ತಿದೆ. ನೀನು ಬೇರೆ ಯಾರೋ ಗಂಡಸು ಅಂತ ಅನ್ನಿಸಿ ಹೆದರಿಕೆಯಾಗುತ್ತಿದೆ. ನಿಜಕ್ಕೂ ನೀನು ಯಾರೂ ? ನನಗೆ ಯಾಕೋ ನೀನು ಎಲ್ಲೋ ಇರುವ ಬೇರೆ ಯಾರೋ ಮನುಷ್ಯ ಅಂತ ಅಳುಬರುತ್ತಿದೆ’ ಅಂತೆಲ್ಲಾ ಬರೆದಿದ್ದಳು. ಅವಳಿಗೆ ಸಮಾಧಾನ ಮಾಡಲು ಹೋಗದೆ ನಾನೂ ದುಷ್ಟನಂತೆ ಉತ್ತರ ಬರೆದಿದ್ದೆ. ಆಮೇಲೆ ನನ್ನೊಳಗೇ ಸಂಕಟಪಟ್ಟಿದ್ದೆ. ಹೆಂಡತಿಯೊಬ್ಬಳ ಹೆದರಿಕೆಗಳು, ಗಂಡನಾದವನ ದಿಕ್ಕು ದೆಸೆಯಿಲ್ಲದ ತಿರುಗಾಟ… ಇದರ ನಡುವೆಯೇ ಕಳೆದು ಹೋಗುತ್ತಿರುವ ಕಾಲ. ನಾವು ಇದನ್ನೆಲ್ಲ ಮರೆತು ಮಕ್ಕಳ ಹಾಗೆ ಮತ್ತೆ ಕೂಡಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದೆ.
ಷಿಲ್ಲಾಂಗಿನಲ್ಲಿ ಈಗ ಚಳಿಯ, ಬೆಳದಿಂಗಳಿನ ಸಮಯ. ಎಲ್ಲರೂ ಬೆಚ್ಚಿನ ಬಟ್ಟೆಗಳನ್ನು ಹಾಕಿಕೊಂಡು ಬೇರೆಯದೇ ತರಹ ಕಾಣಿಸುತ್ತಿದ್ದಾರೆ. ಚಿರಾಪುಂಜಿಯ ಕಿತ್ತಳೆಯ ಹಣ್ಣು ಮಾರುಕಟ್ಟೆಗೆ ಬಂದಿದೆ. ಎಲ್ಲರೂ ಮನೆಗಳನ್ನು ತೊಳೆದು ಸಿಂಗರಿಸಲು ತೊಡಗಿದ್ದಾರೆ. ಎಲ್ಲರೂ ಕ್ರಿಸ್‌ಮಸ್ ಹಬ್ಬಕ್ಕಾಗಿ ಕಾಯುತ್ತಿದ್ದಾರೆ
ಈ ನಡುವೆ ಓವನ್ ಓ’ ಸಲ್ಲಿವನ್ ಎಂಬ ಅಯರ್ಲೆಂಡ್‌ನ ಗೆಳೆಯ ಕಾಗದ ಬರೆದಿದ್ದಾನೆ. ಸೈಕಲ್ಲು ಹತ್ತಿ ವಿಶ್ವವನ್ನೆಲ್ಲ ಸುತ್ತುತ್ತಿರುವ ಈತ ಈಗ ಯೂರೋಪಿನ ಗಡಿಯಲ್ಲಿರುವ ಟರ್ಕಿ ಗೆ ತಲುಪಿ ಅಲ್ಲಿಂದ ಕಾಗದ ಕಳಿಸಿದ್ದಾನೆ. ಕ್ರಿಸ್‌ಮಸ್ ಹಬ್ಬಕ್ಕೆ ಸರಿಯಾಗಿ ಆತ ಅಟ್ಲಾಂಟಿಕ್ ಕಡಲ ತೀರದಲ್ಲಿರುವ ತನ್ನ ಹಳ್ಳಿಯಲ್ಲಿ ತಂದೆ ತಾಯಿಯ ಜೊತೆ ಕಾಲ ಕಳೆಯುತ್ತಾನೆ. ಈಗ ನಾನು ಯೂರೋಪಿನ ಹೊಸ್ತಿಲಲ್ಲಿ ನಿಂತಿದ್ದೇನೆ ಎಂದು ಆತ ಬರೆದಿದ್ದಾನೆ. ಇಂಗ್ಲಿಷಿನಲ್ಲಿ ಈತನ ಹೆಸರು ಓವೆನ್ ಆಂತ. ಐರಿಷ್ ಭಾಷೆಯಲ್ಲಿ ಅದನ್ನು ಓಐನ್ ಅಂತ ಬರೆಯುತ್ತಾರಂತೆ.
ಈತನನ್ನು ನಾನು ನೋಡಿದ್ದು ಒಂದು ತಮಾಷೆಯ ಸಂದರ್ಭ. ಒಂದು ವರ್ಷದ ಹಿಂದೆ ಶಿಲ್ಲಾಂಗಿನ ಅಸ್ಸಾಮಿ ಹೆಂಗಸೊಬ್ಬಳ ಮುರುಕು ಹೋಟೆಲಲ್ಲಿ ಕುಳಿತುಕೊಂಡು ಈತ ಹಾಲಿಲ್ಲದ ಟೀ ಕುಡಿದುಕೊಂಡು ಸಿಗರೇಟು ಸೇದಿಕೊಂಡು ಹೊರಗೆ ನೋಡುತ್ತಿದ್ದ. ಆಗ ಬೆಳ್ಳಗಿನ ಹೂ ಬಿಡುವ ಪ್ಲಂ ಮರಗಳು ಎಲ್ಲ ಕಡೆ ಅರಳಿಕೊಂಡು ನಿಂತಿದ್ದವು. ನಾನೂ ಟೀ ಕುಡಿದುಕೊಂಡು ಈತನನ್ನೇ ಗಮನಿಸುತ್ತಿದ್ದೆ. ಬೆಳ್ಳಗ್ಗೆ ಎತ್ತರಕ್ಕೆ ಲಕ್ಷಣವಾಗಿ ಇದ್ದ. ಜೊತೆಗೆ ವಿಲಕ್ಷಣವಾಗಿ ಮೂಗಿಗೊಂದು ನತ್ತು ಸಿಕ್ಕಿಸಿಕೊಂಡಿದ್ದ. ನನಗೆ ಅದನ್ನು ನೋಡಿ ನಗುಬರುತ್ತಿತ್ತು. ಅಸ್ಸಾಮಿ ಹೆಂಗಸು ಹೋಟೆಲ್ಲಿನ ಗೋಡೆಯಲ್ಲಿ ಜಡೆಸ್ವಾಮಿಯೊಬ್ಬನ ಫೋಟೋ ತೂಗುಹಾಕಿ ಅದಕ್ಕೆ ಊದು ಬತ್ತಿ ಹಚ್ಚಿ ಇಟ್ಟಿದ್ದಳು. ಈತ ಎದ್ದು ನನ್ನ ಬಳಿ ಬಂದು ಆ ಫೋಟೋ ತೋರಿಸಿ ಇದು ಯಾವ ದೇವರು ಅಂತ ಕೇಳಿದ. ನನಗೂ ಗೊತ್ತಿರಲಿಲ್ಲ. `ಕ್ಷಮಿಸುಗೊತ್ತಿಲ್ಲ’ ಅಂತ ಹೇಳಿದೆ. ಆಮೇಲೆ ನಾವು ಗೆಳೆಯರಾದೆವು. ನಮ್ಮ ಮನೆಗೆ ಬಂದು ಊಟ ಮಾಡಿ ಕುಡಿದು ಊರಿನಿಂದ ಬಂದ ನೆಂಟನಂತೆ ಕ್ಷೇಮ ಸಮಾಚಾರ ಮಾತಾಡಿಕೊಂಡು ಹತ್ತಿರವಾದೆವು. ಹೋಗಲಿ ಬಿಡು ಮೂಗಿಗೆ ನತ್ತು ಯಾಕೆ ಹಾಕಿಕೊಂಡಿದ್ದೀಯಾ ಅಂತ ಕೇಳಿದೆ. ಎಲ್ಲರೂ ಕುತೂಹಲ ಪಡಲಿ, ಮಕ್ಕಳು ನಗಾಡಲಿ ಅಂತ ಹಾಕಿರುವೆ’ ಅಂತ ಹೇಳಿದ.
ಈತ ಹುಟ್ಟಿದ್ದು ಐರ್ಲೆಂಡಿನಲ್ಲಿ ನಲ್ಲಿ. ಕೆಲಸ ಮಾಡುವುದು ಆಸ್ಟ್ರೇಲಿಯಾದಲ್ಲಿ. ಒಂದು ವರ್ಷ ಕೆಲಸ ಮಾಡಿ ಖರ್ಚು ಮಾಡದೆ ಹಣ ಉಳಿಸಿ ಇನ್ನೊಂದು ವರ್ಷ ರಜೆ ಹಾಕಿ ಲೋಕ ಸುತ್ತುತ್ತಾನೆ. ಆಸ್ಟ್ರೇಲಿಯಾದಿಂದ ಹಾಂಕಾಂಗ್‌ಗೆ ಹೋಗಿ, ಅಲ್ಲಿಂದ ಬಿಹಾರ ಸುತ್ತಿ, ಕಲಕತ್ತಾಗೆ ಬಂದು ಅಲ್ಲಿಂದ ಬಾಂಗ್ಲಾದೇಶದೊಳಕ್ಕೆ ನುಸುಳಿ ತ್ರಿಪುರಾದ ಗಡಿಯಲ್ಲಿ ಪುನಃ ಭಾರತದೊಳಕ್ಕೆ ಬಂದು ಬಸ್ಸು ಹತ್ತಿ ಶಿಲ್ಲಾಂಗಿಗೆ ಬಂದಿದ್ದ. ಈ ಊರಲ್ಲಿ ಐರಿಷ್ ಪಾದ್ರಿಗಳ ತುಂಬಾ ಗೋರಿಗಳಿವೆ ನೋಡಿಕೊಂಡು ಹೋಗೋಣ ಅಂತ ಬಂದೆ ಅಂತ ಹೇಳಿದ್ದ. ನಮ್ಮ ಜೊತೆ ಎರಡು ದಿನ ಪ್ರೀತಿಯಿಂದ ಇದ್ದು ಆಮೇಲೆ ಪುನಃ ನೇಪಾಳಕ್ಕೆ ಹೊರಟು ಹೋದ. ನೇಪಾಳದಿಂದ ಕಾಗದ ಬರೆದಿದ್ದ. ಅಲ್ಲಿ ಒಂದು ಹಳೆಯ ಸೈಕಲ್ಲು ಕೊಂಡು ಅದನ್ನು ಹತ್ತಿ ಭಾರತ ದಾಟಿ ಪಾಕಿಸ್ತಾನ, ಕಾಬೂಲ್, ಇರಾನ್‌ಗಳನ್ನು ಹಾದು ಈಗ ಟರ್ಕಿಯ ಬಳಿಯಿಂದ ಇನ್ನೊಂದು ಕಾಗದ ಬರೆದಿದ್ದಾನೆ.
`ಯಾಕೆ ಮಾರಾಯ ಇಷ್ಟೊಂದು ಸುತ್ತುತ್ತೀಯಾ?’ ಅಂತ ಕೇಳಿದ್ದೆ. ಸುಮ್ಮನೇ ಕಣ್ಣು ಮಿಟುಕಿಸಿದ್ದ. ನೋಡಿದರೆ ಆತನಿಗೆ ನನಗಿಂತ ಸಣ್ಣ ವಯಸ್ಸು. ಮದುವೆಯಾದ ಮೇಲೆ ಸುತ್ತುವುದನ್ನ ನಿಲ್ಲಿಸುತ್ತೇನೆ ಅಂತ ನನ್ನ ಮಡದಿಯನ್ನು ನೋಡಿ ಚೇಷ್ಟೆ ಮಾಡಿದ್ದ. ನಿಮ್ಮ ದೇಶದ ಕವಿ ಏಟ್ಸ್ ಗೊತ್ತಾ ಅಂತ ಕೇಳಿದ್ದೆ. ಗೊತ್ತು ಓದಿಲ್ಲ ಅಂತ ಹೇಳಿದ್ದ. ನನಗೆ ಕವನ ಬರೆಯುವುದು ಹೇಗೆ ಅಂತ ಹೇಳಿಕೊಡು ಅಂತ ಕೇಳಿದ್ದೆ. ತಮಾಷೆ ಮಾಡಬೇಡ ಅಂತ ಹೇಳಿದ್ದೆ. ನಾನು ನನ್ನ ಹೆಂಡತಿ ಇಬ್ಬರೂ ಸೇರಿ ನಾವು ಪ್ರೇಮಿಸಿದ್ದು ಮದುವೆಯಾಗಿದ್ದು ಎಲ್ಲವನ್ನೂ ಆತನಿಗೆ ಕತೆ ಹೇಳುವ ಹಾಗೆ ಹೇಳಿದ್ದೆವು. `ನನಗೆ ಆತ ತುಂಬಾ ಇಷ್ಟ ಆದ. ಸ್ಮಾರ್ಟ್ ಇದ್ದಾನೆ’ಅಂತ ಆಕೆ ನನ್ನ ಕಿವಿಯಲ್ಲಿ ಹೇಳಿದ್ದರು. ಅದನ್ನು ನಾನು ಅವನಿಗೆ ಹೇಳಿ ಅವನು ಕೆಂಪಗಾಗಿ ಬಿಟ್ಟಿದ್ದ.
ನಾವೆಲ್ಲಾ ಹೀಗೆಲ್ಲಾ ಸುತ್ತುವುದು ಯಾವಾಗ ? ನನ್ನ ಗೆಳೆಯನೊಬ್ಬ ಮೊನ್ನೆ ಬಾಬಾ ಬುಡನ್‌ಗಿರಿಗೆ ಹೋಗಬೇಕಿದ್ದವನು ಅಯ್ಯೋ ಅಲ್ಲಿ ಚಳಿ ಅಂತ ಹೋಗದೆ ಮಂಗಳೂರಿನಲ್ಲಿ ಮನೆಯಲ್ಲೇ ಉಳಿದುಬಿಟ್ಟಿದ್ದ.
ಯಾಕೋ ಈ ಸಲ ತುಂಬಾ ಜಾಸ್ತಿಯೇ ಬರೆದೆ. ನಿಲ್ಲಿಸುವೆ.
ಕತೆಯೊಂದನ್ನು ಬರೆಯಲು ಹೋರಾಡುತ್ತಾ ಇದೀಗ ಅದರಿಂದ ತಪ್ಪಿಸಿಕೊಳ್ಳಲು ಈ ಕಾಗದವನ್ನು ಬರೆಯುತ್ತಿರುವೆ. ಕತೆಯನ್ನು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ ಆನಂದಿಸುತ್ತಾ ಮನಸ್ಸಿನಲ್ಲಿಯೇ ಮುಗಿಸಿ ಕೂರುವುದು ಎಂತಹ ಸುಲಭದ ವಿಷಯ. ಆದರೆ ಅದನ್ನೇ ಕಾಗದದಲ್ಲಿ ತರುವುದು,ಪಾತ್ರಗಳನ್ನು ಜೋಡಿಸುವುದು, ಅವುಗಳ ಬಾಯಿಂದ ಮಾತುಗಳನ್ನು ಹೇಳಿಸುವುದು ಎಂತಹ ರೇಜಿಗೆಯ ಕೆಲಸ. ಈ ಮಹಾ ಮಹಾ ಕತೆಗಾರರೆಲ್ಲಾ ಎಂತಹ ಹಠಮಾರಿ ಮಹಾತ್ವಾಕಾಂಕ್ಷೀ ಮನುಷ್ಯರು ಅಂತ ಯೋಚಿಸಿ ಆಶ್ಚರ್ಯವಾಗುತ್ತಿದೆ.
. ಮೈದಾನದ ಕೊನೆಯಲ್ಲಿ ರಾಜಸ್ತಾನದ ದೊಂಬರಾಟದ ಕುಟುಂಬವೊಂದು ಡೇರೆ ಬಿಚ್ಚಿ ನೆಲದಲ್ಲಿ ಹರವಿಕೊಂಡು ಆಕಾಶವನ್ನು ನೋಡುತ್ತಾ ಕೂತಿತ್ತು. ಹೆಂಗಸೊಬ್ಬಳು ಬಾಯಿ ಬಡಿಯುತ್ತಾ ಅಳುತ್ತಿದ್ದಳು .ಏಕೆಂದರೆ ಆಕೆಯ ಆರು ವರ್ಷದ ಮಗಳು ಕಾಣೆಯಾಗಿದ್ದಳು. ಕಾಣೆಯಾದ ಆ ಬಾಲಕಿಯ ಹೆಸರು ಶನ್ಯಾಶಿ. ಇದ್ದಕ್ಕಿದ್ದಂತೆಯೇ ಆಕೆ ಜನಜಂಗುಳಿಯಲ್ಲಿ ಕಾಣೆಯಾಗಿದ್ದಳು. ಆಕೆಯಿಲ್ಲದೆಯೇ ತಿರುಗಿ ಹೋಗುವುದು ಹೇಗೆಂದು ಆ ದೊಂಬರಾಟದ ಕುಟುಂಬಗವೇ ಅಲವತ್ತುಕೊಂಡು ಕೂತಿತ್ತು.


ಬಾಕಿಯೆಲ್ಲಾ ಹೆಸರೇ ಗೊತ್ತಿಲ್ಲದ ಹಣ್ಣುಗಳು ನನ್ನ ಬಾಯಿಯಲ್ಲಿ. ನಗುಬಂತು. ಮತ್ತು ನೀವು ಬರೆದ ಪತ್ರಗಳ ಸಾಲುಗಳು ನೆನಪಾಯಿತು. “ನೀನು ಬರೆಯುವಾಗ ಹುಷಾರಿಗಿರಬೇಕು, ತುಂಬಾ ಜನ ನಿನ್ನ ಪತ್ರಗಳನ್ನು ಓದುತ್ತಾರೆ” ಅಂತ ಬರೆದಿದ್ದೀರಿ.
ಇಲ್ಲಿನ ಜನ ಹೀಗೆಯೇ. ಎಂತಹ ಅತಂತ್ರ ಸ್ಥಿತಿಯಲ್ಲೂ, ಎಂತಹ ಮುಖ್ಯ ಮಂತ್ರಿಯಾದರೂ ನಗು ಮತ್ತು ಚೇಷ್ಟೆ ಬಿಡುವುದಿಲ್ಲ. ಇವರೆಲ್ಲರ ಹಿಂದೆ ತಿರುಗಾಡಿ ನನಗಂತೂ ತಲೆಕೆಟ್ಟು ಹೋಗಿತ್ತು. ಬಾಯಿತೆಗೆದರೆ ಮಂತ್ರಿಗಳ ಹೆಸರು. ತಲೆಯೊಳಗೆ ಎಂ.ಎಲ್.ಎಗಳು ಯಾವ ಸಹವಾಸವೂ ಬೇಡ ಅಂತ ಈವತ್ತು ಮಧ್ಯಾಹ್ನ ಬಾಗಿಲು ಹಾಕಿಕೊಂಡು ಕಿಟಕಿ ತೆಗೆದು ಬಿಸಿಲನ್ನು ಒಳಗೆ ಬಿಟ್ಟುಕೊಂಡು ಸುಮ್ಮನೆ ಕುಳಿತಿದ್ದೆ. ಎಂತಹ ಒಳ್ಳೆಯ ಬಿಸಿಲು! ಮಟಮಟಮಧ್ಯಾಹ್ನದಲ್ಲೂ ಮೈಮೇಲೆ ಹರಡಿಕೊಂಡು ಕೂರಬಹುದು. ಹಾಗೇ ತುಂಬಾ ಹೊತ್ತು ಕೂತಿದ್ದೆ. ಆಮೇಲೆ ಮಳೆ ಬರಲು ತೊಡಗಿತು.ಹೋಗಲಿ ಬಿಡಿ ಪ್ರತಿವಾರ ಮೋಡ ಬಿಸಿಲು ಮಳೆ ಹೂವು ಅಂತ ಬರೆದು ನಾನೂ ನಿಮ್ಮ ತಲೆ ಹಾಳು ಮಾಡುತ್ತಿದ್ದೇನೆ. ಶಿವಮೊಗ್ಗದ ನಿಮ್ಮ ಊರಿನ ಹತ್ತಿರ ಹನುಮಂತಪ್ಪ ಅಂತ ನನ್ನ ಸಖನೊಬ್ಬನಿದ್ದಾನೆ. ಈ ಸಲ ಭತ್ತ ಮಾರಿ ಆ ಹಣದಲ್ಲಿ ವಿಮಾನ ಹತ್ತಿ ನಿನ್ನ ಹತ್ತಿರ ಬರುತ್ತೇನೆ ಅಂದವನು ಪತ್ತೆಯೇ ಇಲ್ಲ. ನನಗೆ ಯಾಕೋ ಅವನ ಭತ್ತ ಏನಾಯಿತು ಅಂತ ಚಿಂತೆ ಶುರುವಾಗಿದೆ.ಆಮೇಲೆ ಇನ್ನೊಂದು ವಿಷಯ. ನೀವು ನನ್ನನ್ನು ಕಳೆದವಾರ ‘ಸಾಬಿ’ ಅಂತ ಬರೆದಿದ್ದೀರಂತೆ.
ಯಾಕೋ ಸಣ್ಣಗೆ ನಗುಬರುತ್ತಿದೆ. ನಾನು ಪ್ರತಿವಾರವೂ ಕುಡುಮಿಯ ಹಾಗೆ ಹಠ ಹಿಡಿದು ನಿಮಗೆ ಪತ್ರಬರೆಯುವುದು. ಕೆಲವರು ಗೆಳೆಯರು ಇನ್ನು ಈತ ಕತೆಯೂ ಬರೆಯಲಾರ ಕವಿತೆಯೂ ಬರೆಯಲಾರ ಬರೀ ಪತ್ರ ಬರೆದು ಹಾಳಾಗಿ ಹೋಗುತ್ತಿರುವ, ಎಂದು ವಿನಾಕಾರಣ ಹಲುಬುವುದು,- ಎಲ್ಲವನ್ನೂ ಯೋಚಿಸಿ ಯೋಚಿಸಿ ಈವತ್ತು ಚಪಾತಿ ಲಟ್ಟಿಸಿತ್ತಾ ಕೂತಿದ್ದೆ. ಆಗಲೂ ನಗುಬರುತ್ತಿತ್ತು. ಚಪಾತಿ ನಾನು ಮಾಡಿದರೂ ಗುಂಡಗೆ ಆಗುತ್ತದೆ. ನಾನು ಮಾಡಿದ ದೋಸೆಯಲ್ಲೂ ತೂತುಗಳಿರುತ್ತದೆ ಎಂದೆಲ್ಲಾ ಗುನುಗುತ್ತಿದ್ದೆ.ಊರಿಗೆ ಹೋಗಿದ್ದಾಗ ನನ್ನ ಉಮ್ಮನಿಗೆ ಇಲ್ಲಿ ಷಿಲ್ಲಾಂಗಿನಲ್ಲಿ ಒಳ್ಳೆ ಒಳ್ಳೆಯ ಬಾತುಕೋಳಿಗಳಿವೆ ಅಂತ ಹೇಳಿಬಿಟ್ಟಿದ್ದೆ. ಆಕೆ ಬೇರೆ ಏನೂ ಕೇಳದವಳು `ಅಯ್ಯೋ ನೀನು ಬರುವಾಗ ಬಾತುಕೋಳಿಯ ಮೊಟ್ಟೆಗಳನ್ನು ತರಬೇಕಾಗಿತ್ತು. ಇಲ್ಲಿ ಕಾವು ಕೊಟ್ಟು ಮರಿ ಮಾಡುತ್ತಿದ್ದೆ’ ಅಂತ ಹಂಬಲಿಸಿದ್ದಳು.ತುಂಬಾ ವರ್ಷಗಳ ಹಿಂದೆ ನನ್ನ ಬಾಪಾ ಎಲ್ಲಿಂದಲೋ ಟರ್ಕಿ ಕೋಳಿಯ ಮೊಟ್ಟೆಗಳನ್ನು ಹೀಗೇ ತಂದುಕೊಟ್ಟಿದ್ದರು. ಉಮ್ಮ ಅವುಗಳನ್ನು ಕಾವಿಗೆ ಬಂದ ಊರು ಕೋಳಿಯ ಹೊಟ್ಟೆಯ ಕೆಳಗೆ ಇಟ್ಟು ಕೊನೆಗೆ ಒಂದೇ ಒಂದು ಮರಿ ಹೊರಗೆ ಬಂದಿತ್ತು. ನೋಡಿದರೆ ಅದೊಂದು ಗಂಡು ಟರ್ಕಿ ಕೋಳಿಮರಿ. ಬಹುಶಃ ನೀವು ಟರ್ಕಿಕೋಳಿ ನೋಡಿರಲಿಕ್ಕಿಲ್ಲ.ತುಂಬಾ ಎತ್ತರಕ್ಕೆ ಬೆಳೆಯುತ್ತದೆ. ಆ ಗಂಡು ಟರ್ಕಿಕೋಳಿಯಂತೂ ತುಂಬಾ ಬೆಳೆದು ಅದರ ಕೊರಳೆಲ್ಲಾ ಕೆಂಪುಕೆಂಪಗೆ ಮಾಂಸದ ಗಂಟುಗಳಿಂದ ತುಂಬಿಕೊಂಡು ಅದಕ್ಕೆ ಸಿಟ್ಟು ಬಂದಾಗ ಇನ್ನಷ್ಟು ಕೆಂಪಾಗಿ, ಹೋಗುವವರನ್ನು ಬರುವವರನ್ನು ಅಟ್ಟಿಸಿಕೊಂಡು ಓಡಾಡುತ್ತಿತ್ತು. ಹೆಣ್ಣು ಮಕ್ಕಳನ್ನಂತೂ ಅದಕ್ಕೆ ಕಂಡರಾಗುತ್ತಿರಲಿಲ್ಲ. ನನ್ನ ಸಣ್ಣ ಸಣ್ಣ ತಂಗಿಯಂದಿರನ್ನು ಅಟ್ಟಿಸಿ ಅವರು ಬಿದ್ದು ಗಾಯ ಮಾಡಿಕೊಂಡು, ನನ್ನ ಉಮ್ಮನಿಗೆ ತಲೆಕೆಟ್ಟು ಹೋಗಿ ಆಮೇಲೆ ಬಾಪಾ ಎಲ್ಲಿಂದಲೋ ಒಂದು ಹೆಣ್ಣು ಟರ್ಕಿಕೋಳಿಯನ್ನು ತಂದು ಬಿಟ್ಟಿದ್ದರು. ಆಮೇಲೆ ಅವುಗಳು ತುಂಬಾ ಕಾಲ ಅನ್ಯೋನ್ಯವಾಗಿದ್ದವು.ಆಮೇಲೆ ಏನಾಯಿತು ಎಂಬುದು ನೆನಪಾಗುತ್ತಿಲ್ಲ. 

ಕನ್ನಡದ ಒಂದೊಂದೇ ಅಕ್ಷರಗಳನ್ನು ಪ್ರೀತಿಯಿಂದ ಮೈಸವರುತ್ತಾ, ಜೋಡಿಸುತ್ತಾ, ಚಂದ ನೋಡುತ್ತಾ ಬಹಳ ದಿನಗಳ ಬಳಿಕ ನಿಮಗೆ ಬರೆಯುತ್ತಿರುವೆ. ಯಾಕೋ ಅಹ್ಲಾದವೆನಿಸುತ್ತದೆ. ಹದುಳದಲ್ಲಿ ಹುಣ್ಣಿಮೆ ಮೂಡಿದಂತೆ. ಬೇಂದ್ರೆಯವರಿಗೆ ಮಲ್ಲಿಕಾರ್ಜುನ ಮನ್ಸೂರರ ಹಾಡು ಕೇಳಿ `ಬಿಸಿಲ ಹಣ್ಣನುಂಡು ಚಂದ್ರನ ಜೇನು ಮದ್ದಂತೆ ‘ಅನಿಸಿತ್ತಂತೆ. ನಾನು ಈ ದಿನ ಸಂಜೆ ನಾಲ್ಕು ಗಂಟೆಗೇ ಚಂದ್ರನ ಬೆಳಿನಲ್ಲಿ ನನ್ನ ನೆರಳನ್ನು ಕಂಡು ಚಕಿತಗೊಂಡೆ.ಇಲ್ಲಿ ಈಗಲೇ ಚಳಿಗಾಲ ಮೊದಲಾಗಿ ಮಧ್ಯಾಹ್ನದ ಚಂದ್ರನಂತಹ ಬಿಸಿಲಲ್ಲಿ ಬೆಚ್ಚಗೆ sweater ಹಾಕಿಕೊಂಡು ಓಡಾಡುತ್ತಿರುವೆ. ಈಗಂತೂ ಈ ಚಳಿ ಬಿಸಿಲಲ್ಲಿ ಈ ಊರು ಎಷ್ಟು ಚಂದ ಎಷ್ಟು ಚಂದ ಎಂದು ಕಣ್ಣಲ್ಲೇ ಎಲ್ಲವನ್ನೂ ತಿಂದುಕೊಂಡು ನಡೆದಾಡುತ್ತಿರುವೆ.
ಈವಾರ ನಿಮಗೆ ಏನು ಕತೆ ಹೇಳಲಿ? ಯಾವತ್ತೂ ಇಲ್ಲದ ಹಾಗೆ ಈ ಸಂಜೆ ಮನೆಗೆ ಬಂದವನೇ ಸಂಕಟದಲ್ಲಿ ನಿದ್ದೆ ಹೋದೆ. ನಡುನಡುವೆ ಕಣ್ಣು ಬಿಟ್ಟರೆ ಕಿಟಕಿಯ ಹೊರಗೆ ಸಂಜೆ ಕೆಂಪು ಬೆಳಕಲ್ಲಿ ಮಕ್ಕಳು ಆಟ ಆಡುತ್ತಿದ್ದರು. ಹೆಂಗಸರು ಎಲೆ ಅಡಿಕೆ ಜಗಿಯುತ್ತಾ ಬಯಲಲ್ಲಿ ಕಾಲು ನೀಡಿಕೊಂಡು ಮಾತನಾಡುತ್ತಿದ್ದರು. ನಾನು ಹಠ ಹಿಡಿದು ನಿದ್ದೆ ಹೋಗಲು ನೋಡುತ್ತಿದ್ದೆ. ಯಾಕೋ ಕೈಕಾಲುಗಳಲ್ಲೆಲ್ಲಾ ಸಂಕಟ. ಬೆಂಗಳೂರಿನ, ಗಾಂಧಿ ಬಜಾರಿನ ಸಂಜೆ, ಮಾವಿನ ಹಣ್ಣು, ಕೊತ್ತಂಬರಿ ಸೊಪ್ಪು, ಮಲ್ಲಿಗೆ ಹೂವಿನ ಪರಿಮಳ ಏನೇನೆಲ್ಲಾ ಕನಸು ಬೀಳುತ್ತಿತ್ತು. ಸುಮ್ಮನೇ ಎದ್ದು ಕೂತೆ. ಮನೆ ಎಷ್ಟು ದೂರ ಅನಿಸುತ್ತಿತ್ತು. ಎಷ್ಟು ದೂರ ಅಂದರೂ ಯಾರಿಗೂ ಗೊತ್ತಾಗುವುದಿಲ್ಲ. ಅಸ್ಸಾಮಿನಲ್ಲಿ ರೈಲು ಹಳಿಗಳನ್ನು ನದಿಯ ಮೇಲಿನ ಸೇತುವೆಗಳನ್ನು ಬಾಂಬ್ ಹಾಕಿ ಚುರುಚೂರು ಮಾಡಿದ್ದಾರೆ. ನನ್ನ ಪಕ್ಕದ ಮನೆಯ ಬಂಗಾಲಿ ಯುವಕನೊಬ್ಬನ ತಂದೆ ನಿನ್ನೆ ರಾತ್ರಿ ಕಲ್ಕತ್ತಾದ ಹತ್ತಿರ ಹಳ್ಳಿಯೊಂದರಲ್ಲಿ ತೀರಿಹೋದರು. ಆತನಿಗೆ ತಂದೆಯನ್ನು ನೋಡಬೇಕೆಂದರೂ ಹೋಗಲಾಗಲಿಲ್ಲ. ಸುಮ್ಮನೆ ಕಣ್ಣೀರು ತುಂಬಿಕೊಂಡು ಕೂತಿದ್ದ. ಆತನ ಹಂಡತಿ ಅಳುತ್ತಿದ್ದಳು.
ನಾನು ಸಣ್ಣಗೆ ಬೆವರಿಕೊಂಡು ಒಂದು ಸಣ್ಣ ಹೋಟೇಲೊಳಕ್ಕೆ ಹೊಕ್ಕು ಕುಳಿತೆ. ಈ ಊರಲ್ಲಿ ಈ ತರಹದ ಸಣ್ಣ ಹೋಟೆಲುಗಳೆಂದರೆ ಪುಟ್ಟಪುಟ್ಟ ತರುಣಿಯರು ನಡೆಸುವ ಹೋಟೆಲ್ಲು. ಹಾಲಿಲ್ಲದ ಕಪ್ಪು ಚಹಾಕ್ಕೆ ‘ಸಾಸೋ’ ಎನ್ನುತ್ತಾರೆ ಮತ್ತೆ ‘ಪತಾರೋ’ ಎಂಬ ಅಕ್ಕಿಯಿಂದ ಅರೆದು ಮಾಡಿದ ಓಡು ದೋಸೆಯಂತಹ ತಿಂಡಿ. ಅದರ ಜೊತೆ ಆಡಿನ ಕರುಳಿನ ಪಲ್ಯ. ಯಾವುದಕ್ಕೂ ಉಪ್ಪು, ಹುಳಿ, ಖಾರ, ಏನೂ ಇಲ್ಲ. ಬೇಕಾದರೆ ಉಪ್ಪನ್ನು ನೆಕ್ಕಿ ಹಸಿ ಮೆಣಸನ್ನು ಅದರ ಜೊತೆ ಕಚ್ಚಿ ತಿನ್ನಬಹುದು. ನಾನು ಒಂದೊಂದೇ ತಿನಿಸಿನ ಹೆಸರು ಕೇಳಿಕೊಂಡು ತಿನ್ನುತ್ತ ಹೋಟೆಲ್ಲಿಗೆ ಹೋಗಿ ಬರುವವರನ್ನು ನೋಡುತ್ತಾ ಕುಳಿತಿದ್ದೆ. ಈ ತರಹ ನನ್ನಂತಹ ಹೊರಗಿನವನು ಇಂತಹ ಹೋಟೆಲ್ಲುಗಳಲ್ಲಿ ಒಬ್ಬನೇ ಕುಳಿತುಕೊಳ್ಳುವುದು ಕೊಂಚ ಅಪಾಯದ ಕೆಲಸ. ಆದರೂ ಕುಳಿತಿದ್ದೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ನಾನು ಎಲ್ಲರನ್ನೂ ನೋಡುತ್ತಿದ್ದೆ. ಹೋಟೆಲ್ಲಿನ ಒಬ್ಬಳು ತರುಣಿ ಆಗ್ಗಿಂದಾಗ್ಗೆ ಸಿಕ್ಕಾಪಟ್ಟೆ ಮೈಯನ್ನೆಲ್ಲಾ ಸಿಕ್ಕಿದಲ್ಲೆಲ್ಲಾ ಕೆರೆದು ಕೊಳ್ಳುತ್ತಿದ್ದಳು. ನಾನು ತುಂಬಾ ಹೊತ್ತು ನೋಡುತ್ತಿದ್ದವನು ಆಮೇಲೆ ತಡೆಯಲಾರದೆ ಏನಾಯಿತು ಅಂತ ಕೇಳಿದೆ. ಆಕೆ ಪಕ್ಕನೆ ನಾಚಿಕೊಂಡವಳು. ಆಮೇಲೆ ಹಾ ಹೋ ಹೀ ಹೀ ಅಂತೆಲ್ಲಾ ಹೇಳತೊಡಗಿದವಳು. ಕೊನೆಗೂ ಕಾರಣ ಹೇಳಲಾಗದೆ ತನ್ನ ಗೆಳತಿಯರ ಕಿವಿಗೆ ನನ್ನ ಪ್ರಶ್ನೆಯನ್ನು ದಾಟಿಸಿಬಿಟ್ಟಳೂ. ಕೊನೆಗೆ ಎಲ್ಲರೂ ಗೊಳ್ಳೆಂದು ನಗಲು ಶುರುಮಾಡಿದರು.
ಮಕ್ಕಳು ಬೆಳಗ್ಗಿನಿಂದ ಸೂರ್ಯಕಂತುವವರೆಗೆ ಬಯಲಲ್ಲಿ ಯಾವ ಆಯಾಸವೂ ಇಲ್ಲದೆ ಇಲ್ಲಿ ಆಡುತ್ತಿರುತ್ತಾರೆ. ಬೀಸುವಗಾಳಿಗೆ ಮೈ ಒಡ್ಡಿ ನಡೆಯುವ ಮುಗುದೆಯರು. ನಾವು ಎಂತಹ ಚಂದದ ಭೂಮಿಯಲ್ಲಿ ಬದುಕಿದ್ದೇವೆ ಎಂದು ಗೊತ್ತಾಗಿ ಮನಸ್ಸು ತುಂಬಿಕೊಳ್ಳುತ್ತಿದ್ದೆ. ಸುಮ್ಮನೇ ಒಬ್ಬನೇ ಇಲ್ಲಿಯ ವಾರ್ಡ್ ಲೇಕ್ ನಲ್ಲಿ ನಡು ಮಧ್ಯಾಹ್ನ ನಡೆಯುತ್ತಿದ್ದೆ. ಸೂರ್ಯನ ಬೆಳಕು ಎಲೆಗಳ ಮೇಲೆ ಕೆರೆಯ ನೀರಿನ ಮೇಲೆ ತನ್ನ ಎಲ್ಲಾ ಪ್ರೀತಿಯನ್ನು ಸುರಿಯುತ್ತಿತ್ತು. ಯಾವ ಕೇಡೂ ಇಲ್ಲದ ಸ್ವಚ್ಛಗಾಳಿ ಪುಪ್ಪುಸದೊಳಕ್ಕೆ ತುಂಬಿಕೊಳ್ಳುತ್ತಿತ್ತು. ಆಮೇಲೆ ಮನೆಗೆ ಬಂದು ಏನೋ ಓದುತ್ತಾ ಕುಳಿತ್ತಿದ್ದೆ. ಸರೀ ಮೂರೂವರೆಯ ಹೊತ್ತಿಗೆ ಭೂಮಿ ಒಮ್ಮೆಗೆ ಸಣ್ಣಗೆ ಅಲುಗಿತು. ಯಾರೋ ಹಿಂದಿನಿಂದ ಮೆಲ್ಲಗೆ ಮೊಣಕೈಯಿಂದ ಅಲುಗಿಸಿದಂತೆ ಸಣ್ಣಗೆ ಭೂಕಂಪವಾಯಿತು. ಗಾಳಿ ಹಾಗೇ ಬೀಸುತ್ತಿತ್ತು. ಮಕ್ಕಳು ಆಡುತ್ತಿದ್ದರು. ಯಾಕೋ ದುಗುಡ ತುಂಬಿಕೊಂಡು ಬಿಟ್ಟಿತು.

