೧.
ನಿನ್ನ ತೆರೆದ ತೋಳನ್ನ ಕಂಡು
ಈವರೆಗೆ ಒಂದು ನೀಳ ನಿದ್ದೆ.
ಇದೀಗ ಎದ್ದಾಗ ಒಂದು ಕಂದು ಮಲೆ,
ಹಸಿವು -ಮತ್ತು ಅಸಹನೀಯ ಈ ಮಳೆ.
೨.
ಯಾರು ನೀನು?
ನಿನ್ನೆ ತಾನೆ ಕಂಡವಳು.
ಕಾಗುಣಿತ ಸರಿಮಾಡೆಂದರೆ
ನಾನು ಸರಿಯಿದ್ದೇನೆಯೇ
ಪರಿಶೀಲಿಸು ಅಂದವಳು!
೩
ನೀನು ಹೋಗುತ್ತೀಯ
ಮತ್ತೆ ಅವನಲ್ಲಿಗೆ.
ನಾನೂ ಅವಳ ಬಳಿಗೆ.
ಇಲ್ಲೇ ಉಳಿಯಿತು ಈ ನೆತ್ತರು-
ನಿನ್ನ ಬಳೆಯ ಚೂರು.
೪.
ಹೀಗಲ್ಲ ,ಹೀಗಲ್ಲವೆಂದು
ಮತ್ತೆ ಅಪ್ಪಿಕೊಂಡೆ.
ಕತ್ತಲಾಯಿತು ಹೋಗು ಅಂದೆ.
ಒಂದು ತುಣುಕು ಮೋಡ
ಉಳಿಯಿತು ಹಾಗೇ-
ಆಕಾಶದಲ್ಲಿ ಏನೂ ಆಗದಂತೆ.
೫.
ಹಾಗೆ ನೋಡಿದರೆ
ಏನೂ ಅಲ್ಲ ನಾವು ನಡೆಸಿದ್ದು
.
ಆ ಭಯಂಕರ ಬಿಸಿಲು,
ಮತ್ತೆ ಹೊಡೆದ ಸಿಡಿಲು,
ಮತ್ತು ಆ ಬಿಳಿಯ ಬೆಕ್ಕು ರಸ್ತೆಯಲ್ಲಿ
ಅವಾಕ್ಕಾಗಿ ಆಗ ತಾನೇ ಮರಣ ಹೊಂದಿ
ನೋಡುತ್ತಿದ್ದುದು.
೬
ನೀರು ತುಂಬಿಕೊಳ್ಳುತ್ತದೆ.
ಮರಗಳು ಮುಳುಗಿ ಹಳಸಲು ತೊಡಗುತ್ತವೆ.
ನಿನ್ನ ಕಂಕುಳಿನಲ್ಲಿ ಯಾರೋ
ಗಂದಸಿನ ಪರಿಮಳ.’ ಅದು
ಕಸ್ತೂರೀ ಮೃಗ’ ಎಂದು ಗಹಗಹಿಸುತ್ತೀಯ.
ಕೆಟ್ಟ ಹುಡುಗಿ!
೭
ಹೋಗು. ತಟ್ಟೆಯಲ್ಲಿ ಅನ್ನವಿಡು.
ನಿನ್ನೆಯ ಸಾಂಬಾರು.
ನೆರಿಗೆ ಸರಿಪಡಿಸಿಕೋ.
ನಿನ್ನ ಮುಂಗುರುಳಲ್ಲಿ
ನನ್ನ ಬೆರಳು.
ನಿನ್ನ ಎದೆಯಲ್ಲೇ ಉಳಿದ
ನನ್ನ ಒಂದು ಬಿಳಿಯ ಕೂದಲು.
೮.
ಅಸಂಖ್ಯಾತ ನಕ್ಷತ್ರಗಳು
ಬರಿಯ ಸಬೂಬುಗಳು.
ಸುಳ್ಳು ಈ ಆಕಾಶ.
ದೇಹ ದೊಡ್ಡ ನೆಪ.
ಏನು ಅನ್ನುವುದು ನಿನ್ನ ಕಂಡೊಡನೆ
ತುಂಬಿಕೊಳ್ಳುವ ನನ್ನ ಕಣ್ಣಾಲಿಗಳನ್ನು?
೯
.
ಸುಳ್ಳು ನುಡಿಯುತ್ತೇನೆ ನಿನ್ನೊಡನೆ.
ನಿಜ ಹೇಳಲಾಗದು ನಿನಗೆ ನನ್ನೊಡನೆಯೂ.
ಸುಮ್ಮನೆ ತುಂಬಿಕೊಳ್ಳುವ ಈ ಆನಂದ,
ಈ ತುಂಟ ಹಠ,ನಿನ್ನ ಉಂಗುಷ್ಟವನ್ನು
ಮುತ್ತಿಡುವ ಕಾಮ,
ಉಧರ ವೈರಾಗ್ಯ!
೧೦
ಯಾಕೋ ಅತಿಯಾಯಿತು ಈ ಹತ್ತು
ಕವಿತೆಗಳೂ.
ಇರುತ್ತಿರಲಿಲ್ಲ
ಇದು ಯಾವುದೂ.
ನೀನೂ ಹಠ ಮಾಡಿದೆ,
ಸುಮ್ಮನೇ ಕಾರಣ ಕೇಳಿದೆ,
ನಾ ಸುಮ್ಮಗಿದ್ದರೂ ಬಿಡದೆ.
