The Mysore Post

Wednesday October 24, 2007

ನೂರಾ ಐದು ವರ್ಷಗಳನ್ನು ಕಂಡು ತೀರಿಹೋದರು ರಾಮಣ್ಣ

Filed under: ಮೈಸೂರಿನಿಂದ ಅಂಕಣ — Rasheed @ 6:55 pm

 

ramanna1.jpg

ಕುವೆಂಪು ಅವರಿಗೂ ಸೀನಿಯರ್ ಆಗಿದ್ದ ಹಾಸನ ಅಠಾಣಾ ರಾಮಣ್ಣನವರು ೧೦೫ ವರ್ಷ ಬದುಕಿ ನಿನ್ನೆ ರಾತ್ರಿ ಮೈಸೂರಿನಲ್ಲಿ ತೀರಿಹೋದರು.

ramanna-4.jpg

 ಅವರ ಕುರಿತು ಈ ಹಿಂದೆ ಬರೆದ ಬರಹಕ್ಕಾಗಿ ಇಲ್ಲಿ ಓದಿ

Monday May 28, 2007

ಯೋಗಾಚಾರ್ಯ ನಾಗರಾಜ ಸೂರ್ಯನಾರಾಯಣ ಪಾಂಡೆ

Filed under: ಮೈಸೂರಿನಿಂದ ಅಂಕಣ — Rasheed @ 10:43 pm

 nagaraja-pandey.jpg

ನಿನ್ನೆ ಸಂಜೆ ಮೈಸೂರಿನಲ್ಲಿ ಇನ್ನೇನು ಮಳೆ ಸುರಿಯುವ ಹಾಗೆ ಇತ್ತು. ಆದರೆ ಹಾಗೇನೂ ಆಗಲಿಲ್ಲ.  ನಾನು ಸುಮಾರು ಎರಡು ಗಂಟೆಗಳ ಹೊತ್ತು ಯೋಗಾಚಾರ್ಯ ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಬಳಿ ಕಥೆ ಕೇಳುತ್ತಾ ಕುಳಿತಿದ್ದೆ.  ಒಂದಂತೂ ನಿಜ.  ಇನ್ನು ನೂರಾರು ವರ್ಷಗಳಷ್ಟು ಕಾಲ ಬರೆಯುವಷ್ಟು ವಿಷಯಗಳು ಅವರ ಬಳಿ ಇರುವುದು ಗೊತ್ತಾಯಿತು. ನನಗೆ ಮೈಸೂರಿನಲ್ಲಿ ಮಾತನಾಡಲು, ನನ್ನನ್ನು ಹರಸಲು ಇನ್ನೊಬ್ಬರು ಮಹಾ ಗುರುಗಳು ದೊರಕಿದರು ಎಂಬ ಆನಂದದಿಂದ ಅವರ ಬಳಿಯಿಂದ ಹೊರಟು ಬಂದು ಇದನ್ನು ಬರೆಯುತ್ತಿರುವೆ

 ನಾಗರಾಜ ಸೂರ್ಜನಾರಾಯಣ ಪಾಂಡೆಯವರು ನನಗೆ ಮೊದಲು ಪರಿಚಯವಾಗಿದ್ದು ಸುಮಾರು ಆರು ತಿಂಗಳುಗಳ ಹಿಂದೆ ಆಕಸ್ಮಿಕವಾಗಿ. ಹಳೆಯಕಾಲದ ಕೀ ಕೊಡುವ ಕೈಗಡಿಯಾರಗಳನ್ನು ಸರಿಪಡಿಸುವ ತಜ್ಞರು ಯಾರಾದರೂ ಇದ್ದಾರೆಯೇ ಎಂದು ಮೈಸೂರಿನ ಮಕ್ಕಾಜಿ ಚೌಕದ ಬಳಿಯಿರುವ ಒಲಂಪಿಯಾ ಥಿಯೇಟರಿನ ಅಕ್ಕ ಪಕ್ಕ ಹುಡುಕುತ್ತಿದ್ದೆ ಆಗ ಯಾರೋ ಪಾಂಡಯವರ ಹೆಸರು ಹೇಳಿದರು.  ಹೋಗಿ ನೋಡಿದರೆ ಆ ಹಳೆಯ ಗಡಿಯಾರದ ಅಂಗಡಿಯಲ್ಲಿ ಪಾಂಡೆಯವರ ಪುತ್ರ ಇದ್ದರು.  ಪಾಂಡೆಯವರು ಈಗ ಗಡಿಯಾರಗಳ ಗೊಡವೆಗೆ ಹೋಗುವುದಿಲ್ಲವೆಂದೂ ಈಗ ಅವರು ಪತಂಜಲೀ ಯೋಗವನ್ನು ಅರ್ಹರಿಗೆ ಹೇಳಿಕೊಡುತ್ತಿದ್ದಾರೆಂದೂ ಗೊತ್ತಾಯಿತು.  ದೂರವಾಣಿಯಲ್ಲಿ ಪಾಂಡೆಯವರನ್ನು ಮಾತನಾಡಿಸಿ ‘ಏನು ಪಾಂಡೆಯವರೇ ಗಡಿಯಾರದ ಸಹವಾಸ ತೊರೆದು ಯೋಗಾಚಾರ್ಯರಾಗಿದ್ದೀರಲ್ಲಾ..?’ ಎಂದು ಕೇಳಿದೆ ‘ಈಗ ಯೋಗದ ಮೂಲಕ ಕಾಲವನ್ನು ಅಳೆಯುತ್ತಿದ್ದೇನೆ’ ಎಂದು ತೀರಾ ಅಪರೂಪದ, ಆಳದ ಧ್ವನಿಯಲ್ಲಿ ಹೇಳಿದರು. ಅವರ ಧ್ವನಿ ಕೇಳಿದರೇ ಪುಳಕಿತವಾಗುವ ಹಾಗೆ ಇತ್ತು.  ಆಮೇಲೆ ಅವರ ಜೊತೆ ರಾಜಯೋಗದ ಕುರಿತು, ಪತಂಜಲಿಯ ಕುರಿತು ಕೇಳಿದೆ. ಅವರ ಜೊತೆ ಮಾತನಾಡುತ್ತಾ ಈ ಮನುಷ್ಯ ಬಹಳ ದೊಡ್ಡವರು ಅನಿಸಿತು. ಹುಡುಗನಾಗಿರುವಾಗ ಬಹಳ ಕಷ್ಟಪಟ್ಟಿದ್ದಾರೆ ಅನಿಸಿತು. (more…)

Monday May 21, 2007

ಪ್ರೊಫೆಸರ್ ವಿಕ್ರಂ ಹೇಳಿದ ‘ಚತುರಂಗ ಭವನ’ದ ಕಥೆ

Filed under: ಮೈಸೂರಿನಿಂದ ಅಂಕಣ — Rasheed @ 11:21 pm

chadurangaa.jpgನನ್ನ ಪ್ರೀತಿಯ ಬರಹಗಾರ ದಿವಂಗತ ಚದುರಂಗ ಅವರ ನಿಜವಾದ ಹೆಸರು ಎಂ. ಸುಬ್ರಹ್ಮಣ್ಯ ರಾಜೇ ಅರಸ್ ಎಂಬುದು ಬಹಳ ಕಾಲದವರೆಗೆ ನನಗೆ ತಿಳಿದಿರಲಿಲ್ಲ. ಎಂ. ಅಂದರೆ ಮುದ್ದುರಾಜ ಅರಸ್. ಮುದ್ದುರಾಜ ಅರಸರು ಚದುರಂಗರ ತಂದೆ. ಅವರು ತಲಕಾಡಿನ ರಾಜವಂಶಕ್ಕೆ ಸೇರಿದವರು. ತಲಕಾಡು ಮರಳಿನಿಂದ ಮುಚ್ಚಿದಾಗ ಇವರ ಹಿರಿಯರು ಅಲ್ಲಿಂದ ಸಮೀಪದ ಪಾಳ್ಯಕ್ಕೆ ಹೋಗಿ ನೆಲೆಸಿ ಪಾಳ್ಯದ ಚತುರಂಗ ಅರಸು ಮನೆತನದವರು ಅಂತ ಹೆಸರಾದವರು. ಈ ಮನೆತನದ ಅರಸರು ಚದುರಂಗ ಕ್ರೀಡೆಯಲ್ಲಿ ಪ್ರವೀಣರಾಗಿದ್ದರಿಂದ ಇವರಿಗೆ ಆ ಹೆಸರು ವಂಶಪಾರಂಪರ್ಯವಾಗಿ ಬಂದಿತ್ತು.
ನಾನು ಬಹಳ ಕಾಲದವರೆಗೆ ಚದುರಂಗ ಎನ್ನುವುದು ಒಂದು ಕಾವ್ಯನಾಮ ಎಂದೇ ತಿಳಿದಿದ್ದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಯುವಕನಾಗಿದ್ದ ನನ್ನನ್ನು ಬೆಂಗಳೂರಿನ ಚಾಮರಾಜಪೇಟೆಯ ಹಳೆಯ ಕಾಲದ ಪಬ್ ಒಂದರಲ್ಲಿ ಪ್ರೀತಿಯಿಂದ ಕೂರಿಸಿಕೊಂಡು ಚದುರಂಗರು ಕಥೆ ಬರೆಯುವುದು ಹೇಗೆ ಎಂದು ಸೊಗಸಾಗಿ ಪಾಠ ಹೇಳಿಕೊಟ್ಟಿದ್ದರು. ಅರೆಬಿಯನ್ ರಾತ್ರಿಗಳ ಶಹಜéಾದೆಯ ಕಥೆ ಹೇಳಿ `ಕಥೆಯೆಂದರೆ ಹೀಗಿರಬೇಕಯ್ಯ’ ಎಂದು ಬೆನ್ನು ತಟ್ಟಿದ್ದರು. ಜುಲೈಕಾ ಮತ್ತು ಯೂಸುಫ್ ಎಂಬ ಅಮರ ಪ್ರೇಮಿಗಳ ಕಥೆ ಹೇಳಿದ್ದರು. ನಾನು ನನ್ನ ಮೊದಲ ಕಥೆ ಬರೆದಾಗ ಅದರಲ್ಲಿ ಈ ಕತೆಯನ್ನೂ ಒಂದು ಚೂರು ಸೇರಿಸಿ ಖುಷಿ ಪಟ್ಟಿದ್ದೆ. ಅದನ್ನು ಓದಲು ಚದುರಂಗರಿಗೆ ಕೊಡಲು ಮರೆತುಬಿಟ್ಟಿದ್ದೆ. (more…)

Monday May 14, 2007

ಬೈಕು ಪಾಲಿಸುವ ಮರಳು ಗೋಪಾಲ

Filed under: ಮೈಸೂರಿನಿಂದ ಅಂಕಣ — Rasheed @ 10:47 pm

             gopalafirst.jpg

ಬೈಕಿನ ರಿಮ್ಮು ಒರೆಸುವ ಮರಳು ಗೋಪಾಲನ ಕುರಿತು ಗದ್ಯದಲ್ಲಿ ಬರೆಯುವುದೋ ಪದ್ಯದಲ್ಲಿ ಬರೆಯುವದೋ ಎಂದು ನನಗೆ ಇನ್ನೂ ಗೊತ್ತಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಈ ತರಹದ ಸಂದಿಗ್ಧತೆ ಎಂದೂ ಎದುರಾಗಿಯೂ ಇರಲಿಲ್ಲ. ನನ್ನ ಬೈಕಿನ ಬೇರೆ ಎಲ್ಲಾ ಭಾಗಗಳೂ ಕೊಳೆಯಿಂದ ತುಂಬಿದ್ದರೂ ಚಕ್ರಗಳ ನಡುವಿನ ಲೋಹದ ರಿಮ್ಮುಗಳು ಯಾವಾಗಲೂ ಪಳಪಳನೆ ಹೊಳೆಯುತ್ತಿರುವ ಹಿಂದಿನ ಗುಟ್ಟು ಈವತ್ತಿನವರೆಗೆ ನನ್ನ ಹೆಂಡತಿಗೂ ಗೊತ್ತಿರಲಿಲ್ಲ. ಈವತ್ತು ಬರೆಯುವ ಮೊದಲು ಈ ಕುರಿತು ನನ್ನೊಳಗೂ ಇರುವ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಆಕೆಗೆ ಮರಳು ಗೋಪಾಲನ ಕತೆ ಹೇಳಿ ಮುಗಿಸಿ ಆತನ ಚಿತ್ರಗಳನ್ನು ತೋರಿಸಿ ಬರೆಯಲು ಕುಳಿತಿರುವೆ.

ದಿನವೂ ನನ್ನ ಬೈಕಿನ ರಿಮ್ಮನ್ನು ಮಾತ್ರ ಒರೆಸಿ ಪಳಪಳ ಮಾಡಿ ಒಂದು ರೂಪಾಯಿ ನಾಣ್ಯವನ್ನು ಇಸಕೊಂಡು ತನ್ನ ನಾಯಿ ಕರಿಯನ ಜೊತೆ ಮರೆಯಾಗುವ ಈ ಗೋಪಾಲ ಉಳಿದ ಸಮಯದಲ್ಲಿ ಎಲ್ಲಿರುತ್ತಾನೆ ಹೇಗಿರುತ್ತಾನೆ ಎಂಬುದು ಇದುವರೆಗೆ ನನಗೂ ಗೊತ್ತಿರಲಿಲ್ಲ. ನಿನ್ನೆ ಮಧ್ಯಾಹ್ನದ ನಂತರ ಈತನನ್ನು ಹುಡುಕುತ್ತಾ ಒಂಟಿಕೊಪ್ಪಲಿನ ಓಣಿ ಓಣಿಗಳಲ್ಲಿ  ಆತನನ್ನೂ ಆತ ಸಾಕಿರುವ ಇತರ ನಾಲ್ಕು ನಾಯಿಗಳನ್ನು ನೋಡಿ ಆತನೊಡನೆ ಮಾತನಾಡಿ ಏನೂ ಗೊತ್ತಾಗದೆ ಬಂದು ಕೂತಿರುವೆ.

gopala-2.jpg

ಮೈಸೂರಿನ ಯಾದವಗಿರಿಯಲ್ಲಿರುವ ತ.ರಾ.ಸು. ವೃತ್ತದ ಒಂದು ಮೂಲೆಯಲ್ಲಿರುವ ಗೂಡಂಗಡಿಯ ಮುಂದೆ ಟೀ ಕುಡಿಯಲು, ಸಿಗರೇಟು ಸೇದಲು, ಲಾಟರಿ ಟಿಕೇಟುಗಳನ್ನು ಕೊಳ್ಳಲು ಹತ್ತಾರು ಜನ ಬರುತ್ತಾ ಹೋಗುತ್ತಾ ಇರುತ್ತಾರೆ. ಕೆಲವರು ದಿನವಿಡೀ ಅಲ್ಲಿ ಮರದ ಕೆಳಗೆ ಸುಮ್ಮನೆ ಕುಳಿತಿರುತ್ತಾರೆ. ಬೆಳಗಿನ ಸುಮಾರು ಎಂಟು ಗಂಟೆಯಿಂದ ಹತ್ತುಗಂಟೆಯವರೆಗೆ ಈ ಗೋಪಾಲ ಕೈಯಲ್ಲಿ ಒಂದು ಮಾಸಿದ ಬಟ್ಟೆ ಹಿಡಿದುಕೊಂಡು ಬಾಯಲ್ಲಿ ಯಾರೋ ಎಳೆದು ಬಿಸಾಕಿದ ಸಿಗರೇಟು ತುಂಡನ್ನು ಕಚ್ಚಿಕೊಂಡು ಯಾರದಾದರೂ ಬೈಕಿನ ರಿಮ್ಮನ್ನು ಒರೆಸುತ್ತಾ ಕುಳಿತಿರುತ್ತಾನೆ. ಆತನ ಕರಿಯ ಎಂಬ ಹೆಸರಿನ ನಾಯಿ ಆತನ ಪಕ್ಕದಲ್ಲಿ ಧ್ಯಾನ ಮಾಡುವಂತೆ ಮಲಗಿರುತ್ತದೆ. ರಿಮ್ಮ ಒರೆಸುವ ಗೋಪಾಲ ಕೆಲವೊಮ್ಮೆ ವಿನಾಕಾರಣ ಕಿರುಚುತ್ತಾನೆ. ನಾಟಕದ ಹಾಡುಗಳನ್ನು ಹಾಡುತ್ತಿರುತ್ತಾನೆ. ತನ್ನಷ್ಟಕ್ಕೆ ಯಾರಾದರೂ ಜೊತೆ ವಾಗ್ವಾದದಲ್ಲಿ ತೊಡಗಿರುತ್ತಾನೆ. ಆತನ ಮುಖ ಸದಾ ವ್ಯಗ್ರವಾಗಿರುತ್ತದೆ. ಏನಾದರೂ ಮಾತನಾಡಿಸಿದರೆ ಎದ್ದು ಪರಚುವಂತೆ ಕಾಣುತ್ತಾನೆ. ಹಾಗಾಗಿ ಈತನ ಸಹವಾಸವೂ ಬೇಡ, ಈತನ ಕಥೆಯೂ ಬೇಡ ಎಂದು ಯಾವಾಗಲೂ ಈತ ಒರೆಸಿ ಮುಗಿಸಿದೊಡನೆ ಒಂದು ರುಪಾಯಿ ನಾಣ್ಯವನ್ನು ಕೈಗಿತ್ತು ಬೈಕು ಸ್ಟಾರ್ಟ್ ಮಾಡುತ್ತಿದ್ದೆ. ನಿನ್ನೆಯೂ ಹಾಗೆಯೇ ಮಾಡಲು ಹೊರಟಿದ್ದೆ. (more…)

Tuesday April 24, 2007

ಮೊದಲು ಮಲ್ಲಮ್ಮ, ನಡುವಲ್ಲಿ ಸರಸ್ವತಿ ಮತ್ತು ಇದೀಗ ಜುಲೈಕಾ

Filed under: ಮೈಸೂರಿನಿಂದ ಅಂಕಣ — Rasheed @ 12:37 pm

zulika4.jpg

ನೋಡಲು ಚೂಟಿಯಾಗಿದ್ದ ಆದರೆ ಓದಲು ಅಷ್ಟೇನೂ ಚುರುಕಾಗಿರದ ನಮ್ಮ ಸಂಬಂಧಿಕರ ಹುಡುಗಿಯೊಬ್ಬಳನ್ನು ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದೆ. ಎರಡು ವರ್ಷಗಳ ಹಿಂದೆ ಒಂದು ದಿನ ಸಂಜೆ ಎಲ್ಲಿಯೋ ತಿರುಗಾಡಲು ಹೋಗಿದ್ದ ನಾನು ತಿರುಗಿ ಬಂದಾಗ ಕತ್ತಲಾಗುತ್ತಿತ್ತು. ಆ ಹುಡುಗಿಗೆ ಗಂಡು ಹುಡುಕಿಕೊಂಡು ಬಂದ ಮಹಿಳೆಯರೊಬ್ಬರು ನನಗಾಗಿ ಕಾಯುತ್ತಾ ಕುಳಿತಿದ್ದರು. ಗಂಡು ಹುಡುಕುವುದು, ಮದುವೆ ಮಾಡಿಸುವುದು ಇತ್ಯಾದಿಗಳಲ್ಲಿ ಅಷ್ಟೇನೂ ಆಸಕ್ತಿ ಇರದ ನಾನು ಒಂದು ತರಹದ ನಿರಾಸಕ್ತಿಯಿಂದಲೇ ಆಕೆಯನ್ನು ಏನು ಮಾತಾಡಿಸುವುದು ಎಂದು ಯೋಚಿಸುತ್ತಿದ್ದೆ. ಮದುವೆಯ ವಯಸ್ಸೇನೂ ಆಗಿರದಿದ್ದ ಸಂಬಂಧಿಕರ ಹುಡುಗಿ ಬಿಸಿಲು ಚಾವಣಿಯಲ್ಲಿ ಮಕ್ಕಳೊಡನೆ ಜೂಟಾಟ ಆಡುತ್ತಾ ಕುಳಿತಿದ್ದಳು.

ಒಳಬಂದವನನ್ನು ಕಂಡು ಆ ಮಹಿಳೆ ಎದ್ದು ನಿಂತು ತನ್ನ ಹೆಸರು ಜುಲೈಕಾ ಎಂದೂ ತನ್ನ ಮಗ ಪಶ್ಚಿಮಾ ಆಫ್ರಿಕಾದ ಯಾವುದೋ ದೇಶವೊಂದರಲ್ಲಿ ಕಂಪ್ಯೂಟರ್ ಶಿಕ್ಷಕನಾಗಿರುವನೆಂದೂ, ಅವನು ಒಂದುವರ್ಷದಲ್ಲಿ ಮೈಸೂರಿಗೆ ಬರುತ್ತಿರುವನೆಂದೂ, ನಮ್ಮ ಹುಡುಗಿಯ ಭಾವಚಿತ್ರವೊಂದು ಇದ್ದರೆ ಆತನಿಗೆ ಕಳುಹಿಸಿಕೊಡಬೇಕಿತ್ತೆಂದೂ, ಅದಕ್ಕಾಗಿ ಬಂದಿರುವುದಾಗಿಯೂ ಹೇಳಿದ್ದರು. ಆಕೆಯ ಮುಖ ಚಹರೆ, ನಡೆನುಡಿ, ಹಾವ ಭಾವ ಮತ್ತು ಆಕೆ ಆಡುತ್ತಿದ್ದ ಕನ್ನಡ ನುಡಿಯ ಶೈಲಿ ಇವುಗಳಿಗೂ ಮತ್ತು ಆಕೆಯ ಜುಲೈಕಾ ಎಂಬ ಹೆಸರಿಗೂ ಯವುದೇ ತರಹದ ತಾಳಮೇಳಗಳು ಗೋಚರಿಸುತ್ತಿರಲಿಲ್ಲ.

ನೋಡಿದರೆ ಅವರು ಯಾವುದೋ ಹಳೆಯ ಕಾಲದ ಅಭಿನೇತ್ರಿಯಂತೆ ಕಾಣಿಸುತ್ತಿದ್ದರು. ಆಮೇಲೆ ಆಕೆ ತೀರಿಹೋಗಿರುವ ತನ್ನ ಪತಿಯ ಹೆಸರನ್ನು ಹೇಳಿದರು. ಆ ಹೆಸರು ಕೇಳಿದ ಮೇಲೆ ನನಗೆ ಅದು ಖಾತರಿಯಾಯಿತು. ‘ನಿಮ್ಮ ಹಳೆಯ ಹೆಸರು ಸರಸ್ವತಿ ಎಂದಿರಬೇಕಲ್ಲವೇ?’ ಅಂದೆ. ‘ಹೌದು’ ಎಂದು ಆಕೆ ನಾಚಿಕೊಂಡರು. ‘ನಿಮ್ಮ ಮಕ್ಕಳ ತಂದೆ ಬಿ. ಶೇಖ್ ಚಾಂದ್ ತೀರಿ ಹೋಗಿದ್ದಾರೆ ಅಲ್ಲವೇ’ ಅಂದೆ. ‘ಹೌದು’ ಎಂದರು ‘ಹಾಗಾದರೆ ಕೂತುಕೊಳ್ಳಿ ಒಂದು ನಿಮಿಷ’ ಎಂದು ಒಳಕ್ಕೆ ಹೋಗಿ ಮುಖ ತೊಳೆದುಕೊಂಡು ಬಂದು ಅವರ ಜೊತೆ ಬಹಳ ಹೊತ್ತು ಮಾತನಾಡಿದೆ.

ನಿನ್ನೆ ಸಂಜೆ ಆಫೀಸಿನಲ್ಲಿ ಕುಳಿತಿರುವಾಗ ಸರಸ್ವತಿ ಅಲಿಯಾಸ್ ಜುಲೈಕಾ ಅವರ ಮಗ ಆಫ್ರಿಕಾದಿಂದ ಬಂದವನು ನನ್ನನ್ನು ಕಾಣಲು ಬಂದಿದ್ದ. ಆತನಿಗೆ ಕಂಪ್ಯೂಟರ್ ಅನಿಮೇಷನ್ಗಾಗಿ ಒಳ್ಳೆಯ ಇಂಗ್ಲಿಷ್ ದ್ವನಿಯುಳ್ಳ ಯಾರಾದರೂ ಬೇಕಾಗಿತ್ತು. ನನಗೆ ಯಾರಾದರೂ ಗೊತ್ತಿರಬಹುದು ಎಂದು ಬಂದಿದ್ದ. ನನಗೆ ಈತ ಜುಲೈಕಾ ಅವರ ಪುತ್ರ ಎಂದು ಗೊತ್ತಾಯಿತು. ನನಗೆ ಸಂಬಂಧಿಕನಾಗಬೇಕಿದ್ದವನು. ‘ತಾಯಿ ಜುಲೈಕಾ ಹೇಗಿದ್ದಾರೆ?’ಎಂದು ಕೇಳಿದೆ. ‘ಆರಾಮವಾಗಿದ್ದಾರೆ’ ಎಂದು ಹೇಳಿದ.

ಆತನನ್ನು ಸುಮ್ಮನೇ ಮಾತನಾಡಿಸಿ ಕಳಿಸಿದವನು ನಿನ್ನೆ ರಾತ್ರಿ ಜುಲೈಕಾರವರನ್ನು ಕಾಣಲು ಹೋದೆ. ಹೋದವನು ಅವರ ಕಥೆಯನ್ನು ಇನ್ನೊಮ್ಮೆ ಕೇಳಿ ಬಂದೆ. ಅವರು ಹೇಳಿದ್ದನ್ನು ಹಾಗೆಯೇ ನಿಮ್ಮ ಮುಂದಿಡುತ್ತಿದ್ದೇನೆ. (more…)

Monday April 16, 2007

ಗಾಣಿಗರ ಸಿದ್ಧಮ್ಮನ ಇನ್ಪೋಸಿಸ್ ಕನಸು

Filed under: ಮೈಸೂರಿನಿಂದ ಅಂಕಣ — Rasheed @ 5:43 pm

 

ajji2.jpg

ಧ್ಯಾಹ್ನದ ಹೊತ್ತು ನಿದ್ದೆ ಮಾಡುವ ನನ್ನ ಮಗನನ್ನು ನೋಡಿಕೊಳ್ಳಲು ಸಿದ್ಧಮ್ಮ ಎಂಬ ಗಾಣಿಗರ ಅಜ್ಜಿ ಬರುತ್ತಾಳೆ. ಈ ಅಜ್ಜಿಯ ಬೆನ್ನು ಸ್ವಲ್ಪ ಬಾಗಿದೆ. ಸೊಂಟ ಯಾವಾಗಲೂ ಹಿಡಿದುಕೊಂಡಿರುತ್ತದೆ. ಕೀಟಲೆಯಲ್ಲಿ ನನಗಿಂತಲೂ ಒಂದು ಕೈ ಮೇಲೆಯೇ ಇರುವ ನನ್ನ ಮಗ ಒಂದು ಕಣ್ಣು ತೆರೆದುಕೊಂಡು ಇನ್ನೊಂದು ಕಣ್ಣನ್ನು ಮುಚ್ಚಿ ಕಣ್ಣೆದುರು ಕಾಣಿಸುವ ಎಲ್ಲ ಚರಾಚರ ವಸ್ತುಗಳ ಸ್ಪೆಲ್ಲಿಂಗನ್ನು ಹೇಳಿಕೊಂಡು ಕ್ಯಾಟ್ ಅನ್ನುವ ಹೆಸರಲ್ಲಿ ‘ಸಿ’ ಯಾಕೆ ಬೇಕು? ‘ಯು’ ಯಿಂದ ಶುರುವಾಗುವುದಾದರೆ ಕೊಡೆಯನ್ನು ಯುಂಬ್ರೆಲಾ ಎಂದು ಕರೆಯಬೇಕಲ್ಲವೇ ಎಂದೆಲ್ಲಾ ಗೊಂದಲ ಮಾಡಿಕೊಂಡು ನಿದ್ದೆ ಬಾರದೆ ಒದ್ದಾಡುತ್ತಿರುತ್ತಾನೆ. ಅವನನ್ನು ಹೆದರಿಸಿ ಬೆದರಿಸಿ ರಮಿಸಿ ನಿದ್ದೆ ಹೋಗಿಸಿ ಸಿದ್ದಮ್ಮ ತಾನೂ ಸುಸ್ತಾಗಿ ತೂಕಡಿಸುತ್ತಾ ಕುಳಿತಿರುತ್ತಾಳೆ. (more…)

Monday April 9, 2007

ತೇಜಸ್ವಿ ನನ್ನ ಮೊಬೈಲ್ ನಂಬರ್ ಮರೆಯದಿರಲಿ ದೇವರೇ….

Filed under: ಮೈಸೂರಿನಿಂದ ಅಂಕಣ — Rasheed @ 1:05 pm

tejaswi.jpg

[ವ್ಯಂಗ್ಯಚಿತ್ರ ಕೃಪೆ:ಗುಜ್ಜಾರಪ್ಪ]

 

ಗೊಂದಲಗೇರಿಯ ಕ್ಯಾಂಟೀನ್ ಹೋಟ್ಲಿನಿಂದ ಪಾರ್ಸಲ್ ತಂದ ಬಿರಿಯಾನಿ ತಿಂದು ಮುಗಿಸಿ ಕೈತೊಳೆದು ಮುಖ ನೋಡಿ ಕನ್ನಡಿಯಲ್ಲಿ ಯಾವುದೋ ಅಜ್ಞಾತ ಹಲ್ಲಿಯನ್ನು ಕಂಡ ತೇಜಸ್ವಿ ಅದರ ಜಾಡನ್ನು ಹಿಡಿದು ಈ ದೇಹವನ್ನು ಇಲ್ಲೇ ಬಿಟ್ಟು ಹೊರಟು ಹೋಗಿದ್ದಾರೆ. ಬಹುಶಃ ಮರಳಿಬರುವುದಿಲ್ಲ. ಅವರ ಮಾಯಾಲೋಕದ ಮುಂದಿನ ಅಷ್ಟೂ ಭಾಗಗಳು ಬಹುಶಃ ಅಲ್ಲೇ ಪ್ರಕಟಗೊಂಡು ಮರು ಮುದ್ರಣಗೊಂಡು ಅಲ್ಲೇ ಶಾಲೆಗೆ ಹೋಗುವ ಹುಡುಗರಿಗೆ ಪಾಠ ಪುಸ್ತಕಗಳಾಗಿ ಅಲ್ಲಿನ ವಿಮರ್ಶಕರ ಕಠಿಣ ಹಲ್ಲುಗಳ ನಡುವೆ ಮೀನಿನ ಮುಳ್ಳುಗಳ ಹಾಗೆ ಸಿಲುಕಿಕೊಂಡು ಅದನ್ನು ಅವರು ತೆಗೆಯಲೂ ಆಗದೆ ಜಗಿಯಲೂ ಆಗದೆ ಯಾವ ಪರಿಭಾಷೆಗಳಿಂದ ಅದನ್ನು ನಿರ್ವಹಿಸುವುದು ಎಂಬ ಅರಿವಾಗದೆ ಅವರೆಲ್ಲರೂ ಅಲ್ಲಿ ಒಂದು ದೊಡ್ಡ ಹಾಹಾಕಾರದಲ್ಲಿ ಸಿಲುಕಿಕೊಂಡು ಬಿಡಲಿದ್ದಾರೆ. (more…)

Monday April 2, 2007

ಮನಸ್ಸಿನಲ್ಲೇ ಮಹಾದೇವ

Filed under: ಮೈಸೂರಿನಿಂದ ಅಂಕಣ — Rasheed @ 6:16 pm

 

mahadeva.jpg

[photo:Nethraraju]

ನ್ನಡನಾಡಿನ ಎಲ್ಲೋ ಒಂದುಕಡೆ ಒಂದು ಕಲ್ಲಿನ ದೇವಾಯವಿದೆಯಂತೆ. ಆ ದೇವಾಲಯದ ಯಾವ ಕಲ್ಲನ್ನು ಮೊಟಕಿದರೂ ಅದರಿಂದ ಸಂಗೀತ ಹೊರಹೊಮ್ಮವುದಂತೆ. ಅದೇ ರೀತಿ ಮೈಸೂರಿನ ಹಳೆಯ ಕಾಲದ ಯಾರನ್ನು ಮಾತನಾಡಿಸಿದರೂ ಅವರಿಂದ ಮಹಾರಾಜರ ಕಥೆಗಳೇ ಹೊರ ಬರುವುದಂತೆ. ಇನ್ನೂ ಸ್ವಲ್ಪ ಕಡಿಮೆ ಹಳಬರನ್ನು ಮಾತನಾಡಿಸಿದರೆ ಅವರಿಂದ ಕುವೆಂಪು ಅವರ ಹೆಸರೇ ಬರುವುದಂತೆ.

`ಇವರಿಬ್ಬರ ಗುಂಗಿನಿಂದ ಹೊರಬಂದು ಬರೆಯುವುದೆಂದರೆ ಮೈಸೂರಿನಲ್ಲಿ ಹರಸಾಹಸದ ಕೆಲಸವೇ ಸರಿ. ಹಾಗಾಗಿ ನೀನು ಯಾಕೆ ಸ್ವಲ್ಪ ನಮ್ಮ ದೇವನೂರು ಮಹಾದೇವರನ್ನು ಮಾತನಾಡಿಸಿ ಬರೆಯಬಾರದು ಎಂದು ಗೆಳೆಯರೊಬ್ಬರು ಕೊಂಚ ಕಳಕಳಿಯಿಂದಲೇ ನನಗೊಂದು ಉಚಿತ ಐಡಿಯಾ ಕೊಟ್ಟಿದ್ದರು. (more…)

Tuesday March 27, 2007

ಪ್ರೊಪೆಸರ್ ಕರೀಮುದ್ದೀನ್ ಸಾಹೇಬರು

Filed under: ಮೈಸೂರಿನಿಂದ ಅಂಕಣ — Rasheed @ 9:37 am

kareemuddeen-1.JPG

‘ಹಿಂದೂಸ್ತಾನದ ರಾಜಮಹಾರಾಜರುಗಳು ಅದು ಹೇಗೆ ಅಷ್ಟು ಸುಲಭದಲ್ಲಿ ಬ್ರಿಟಿಷ್ ದೊರೆಗಳ ಕೈಯಲ್ಲಿ ಸೋತುಹೋದರು ಗೊತ್ತಾ?..’

ಪ್ರೊಪೆಸರ್ ಕರಿಮುದ್ದೀನ್ ಸಾಹೇಬರು ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಟಿಪ್ಪುಸುಲ್ತಾನ್ ಹೈದರಾಲಿಗಳ ಸಮಾದಿಯ ಮುಂದಿರುವ ಸುಂದರ ಉದ್ಯಾನವನದಲ್ಲಿ ನಡೆಯುತ್ತ ನಡುವೆ ಹಿಂತಿರುಗಿ ನನ್ನತ್ತ ನೋಡಿ ಪುಟ್ಟ ಬಾಲಕನಂತೆ ನಕ್ಕರು.
ನಾನು ಗೊತ್ತಿಲ್ಲವೆಂಬಂತೆ ಅವರತ್ತ ನೋಡಿದೆ.

‘ಎಲ್ಲಾ ಈ ಆನೆಗಳ ದೆಸೆಯಿಂದ. ಈ ರಾಜಮಹಾರಾಜರುಗಳಿಗೆ ಯಾವಾಗಲೂ ಆನೆಗಳ ಮೇಲೆಯೇ ಸವಾರಿ ಹೋಗಬೇಕು. ಆನೆಗಳ ಬಿಟ್ಟು ಕೆಳಗಿಳಿಯಬಾರದು. ಅರಮನೆಗೆ ಹೋಗುವಾಗಲೂ ಆನೆ. ಮಸೀದಿಗೆ ಹೋಗುವಾಗಲೂ ಆನೆ. ಕೋಟೆಯನ್ನು ಪ್ರವೇಶಿಸುವಾಗಲೂ ಆನೆ. ಇವರು ಆನೆಯ ಮೇಲೆ ರಾಜಗಾಂಭೀರ್ಯದಲ್ಲಿ ನಿಧಾನವಾಗಿ ಚಲಿಸುವಾಗ ಬ್ರಿಟಿಷರು ಕುದುರೆಗಳ ಮೇಲೆ ವೇಗವಾಗಿ ಬಂದು ಸಾಮ್ರಾಜ್ಯಗಳನ್ನು ವಶಪಡಿಸಿಕೊಂಡರು. ಹೋಗಲಿ ಈ ರಾಜರುಗಳು ಕೋಟೆಗಳ ಬಾಗಿಲುಗಳನ್ನಾದರೂ ಸಣ್ಣದಾಗಿ ನಿರ್ಮಿಸಬಾರದಾ? ಆನೆಗಳು ಹೋಗಿಬರಲು ಅವುಗಳನ್ನೂ ಅಗಲವಾಗಿ ಮಾಡಿದರು. ಬ್ರಿಟಿಷ್ರಿಗೆ ಇನ್ನೇನು ಬೇಕು – ಎಲ್ಲವನ್ನು ವೇಗವಾಗಿ ನುಂಗಿ ನೀರು ಕುಡಿದರು’ (more…)

Monday March 19, 2007

ಕೊಡಗಿನ ಅರಸರ ಹಿಟ್ಟಿನ ಅರಮನೆ

Filed under: ಮೈಸೂರಿನಿಂದ ಅಂಕಣ — Rasheed @ 2:04 pm

ಕೊಡಗಿನ ಅರಸರ ದಾಖಲೆಗಳು

“ನಾವು ರಾಜಮನೆತನದವರು ಎಂದು ಗೊತ್ತಾಗುವ ಮೊದಲು ಹಿಟ್ಟು ಬೀಸುತ್ತಾ ಹಿಟ್ಟು ಮಾರುತ್ತಾ ಒಟ್ಟಿನಲ್ಲಿ ಅಜ್ಞಾತವಾಸದಲ್ಲಿದ್ದ ಪಾಂಡವರ ಹಾಗೆ ಕಾಲತಳ್ಳುತ್ತಿದ್ದೆವು” ಎಂದು ಕೊಡಗು ಸಿಂಹಾಸನಾಧೀಶ್ವರ ಹಾಲೇರಿ ದೊಡ್ಡವೀರರಾಜ ಒಡೆಯರ್ ರವರ ಮಗಳು ದೇವಮ್ಮಾಜಿ ಹಾಗೂ ಅಳಿಯ ಪಟೇಲಮಲ್ಲಪ್ಪನವರ ಮರಿಮಗನಾದ ಹಾಲೇರಿ ಸಿ. ನಾಗರಾಜು ಒಡೆಯರ್ ಅವರು ಮೈಸೂರಿನ ಶಿವರಾಂ ಪೇಟೆಯಲ್ಲಿರುವ ತಮ್ಮ ಸದಾನಂದ ಹಿಟ್ಟಿನ ಅಂಗಡಿಯ ಒಳಕೋಣೆಯೊಂದರಲ್ಲಿ ಕುಳಿತು ವಿವರಿಸುತ್ತಿದ್ದರು. (more…)

Tuesday March 13, 2007

ವೈ. ಜಯಮ್ಮ ಮತ್ತು ಕಡಲ ಚಿಪ್ಪುಗಳು

Filed under: ಮೈಸೂರಿನಿಂದ ಅಂಕಣ — Rasheed @ 1:40 pm

ವೈ ಜಯಮ್ಮ

ಮೈಸೂರಿನ ಕೃಷ್ಣರಾಜ ಆಸ್ಪತ್ರೆಯಿಂದ ಇರ್ವಿನ್‌ ರಸ್ತೆ ನೆಹರೂ ವೃತ್ತ ವನ್ನು ಸೇರುವ ಮೊದಲು ಎಡಬದಿಯಲ್ಲಿ ರಸ್ತೆಗೆ ತಾಗಿಕೊಂಡಂತಿರುವ ಹಳೆಯ ಶೈಲಿಯ ಈ ಕಟ್ಟಡ ಎಂತಹ ದಾರಿಹೋಕನನ್ನು ಒಮ್ಮೆ ತಿರುಗಿ ನೋಡುವಂತೆ ಮಾಡುತ್ತದೆ. ನೂರಾರು ವರ್ಷಗಳ ಹಿಂದೆ ಕಟ್ಟಿದಾಗ ಹೇಗೆ ಇತ್ತೋ ಇನ್ನೂ ಹಾಗೇ ಇರುವ ಈ ಕಟ್ಟಡದ ಮೇಲುಪ್ಪರಿಗೆಯಲ್ಲಿ ವಿಜಯ ಶಂಖಶುಕ್ತಿ ಕಲಾಕೇಂದ್ರ ಎನ್ನುವ ಹಳೆಯ ನಾಮಫಲಕವೊಂದು ಬಹಳ ವರ್ಷಗಳಿಂದ ತೂಗಾಡುತ್ತಿದೆ.ಕೊಂಚ ಅಸಹಜವಾಗಿ ಇದೆಯಲ್ಲ ಎಂದುಕೊಂಡು ಯಾವಾಗಲೂ ವಾರೆಯಾಗಿ ತೆರೆದುಕೊಂಡಿರುವ ಈ ಕಟ್ಟಡದ ಕೆಳ ಅಂತಸ್ತಿನ ಮರದ ಬಾಗಿಲನ್ನು ದೂಡಿಕೊಂಡು ಒಳಹೊಕ್ಕರೆ ಮೊದಲಿಗೆ ಒಳಗೆಲ್ಲ ಬಲು ಕತ್ತಲೆ ಅನಿಸುತ್ತದೆ. ಕಣ್ಣುಗಳನ್ನು ಆ ಕತ್ತಲೆಗೆ ಒಗ್ಗಿಸಿಕೊಂಡು ಕೊಂಚ ಹೊತ್ತು ನಿಂತುಕೊಂಡರೆ ನಿಧಾನವಾಗಿ ಬೆಳಕು ತುಂಬಿಕೊಳ್ಳಲು ತೊಡಗುತ್ತದೆ. ಆ ಬೆಳಕಿನಲ್ಲಿ ಹಾಗೇ ನಿಂತುಕೊಂಡರೆ ರಸ್ತೆಯ ಧೂಳು, ವಾಹನಗಳ ಸದ್ದು, ನಿಧಾನಕ್ಕೆ ಅಡಗಿಕೊಂಡು ವಿಜಯ ಶಂಖಶುಕ್ತಿ ಕಲಾಕೇಂದ್ರದ ಒಡತಿ ವೈ. ಜಯಮ್ಮ (ಎಂ.ಎ., ಬಿ.ಎಡ್‌.) ಅವರು ಕಡಲಚಿಪ್ಪುಗಳಿಂದ ರೂಪಿಸಿರುವ ನೂರಾರು ಕಲಾಕೃತಿಗಳು ನಿಮ್ಮನ್ನು ಕಣ್ಣುಬಿಟ್ಟುಕೊಂಡು ನೋಡಲು ಶುರು ಮಾಡುತ್ತವೆ. ನಾನಾ ಪುರಾಣ ಪ್ರಸಂಗಗಳನ್ನು ಅಭಿನಯಿಸಿ ತೋರುವ ಈ ಕಲಾಕೃತಿಗಳು ಗಾಜು ಜೋಡಿಸಿದ ಬೀಟೆಮರಗಳ ನುಣ್ಣನೆಯ ಪೆಟ್ಟಿಗೆ ಯೊಳಗೆ ಕೂಡುಹಾಕಲ್ಪಟ್ಟಿವೆ. (more…)

Monday March 5, 2007

ನೋಡು ಬಾ ಚಂದಿರ…

Filed under: ಮೈಸೂರಿನಿಂದ ಅಂಕಣ — Rasheed @ 12:52 pm

durani-sisters-2.jpg

ಇಂತಹದೇ ಒಂದುಸಂಜೆ ಸರಿಸುಮಾರು ನಾಲ್ಕು ವರ್ಷಗಳ ಹಿಂದೆ ಇವರನ್ನು ಕಾಣಲೆಂದು ನಾನು ಹೋಗಿದ್ದಾಗ ಹುಟ್ಟಿನಿಂದಲೇ ಅಂಧರಾಗಿರುವ ಈ ನಾಲಕ್ಕು ಮಂದಿ ಪಠಾಣ್‌ ಸಹೋದರಿಯರು ಇನ್ನು ಮುಂದೆ ಹಾಡು ಹೇಳುವು ದಿಲ್ಲ ಎಂದು ತೀರ್ಮಾನಿಸಿಕೊಂಡು ವ್ಯಗ್ರರಾಗಿ ಕೂತಿದ್ದರು. ಎಲ್ಲವನ್ನೂ ಕಾಣುವವರೂ ಅರಿಯುವವರೂ ಆದ ಬೆಳ್ಳಗಿನ ನಾಲ್ಕು ಆತ್ಮಗಳಂತೆ ಆ ಮನೆಯೊಳಗಿನ ನಸುಗತ್ತಲಲ್ಲಿ ಸುಳಿದಾಡುತ್ತಿದ್ದ ಆ ಅಕ್ಕತಂಗಿಯರು ತಮ್ಮ ಏಕೈಕ ತಮ್ಮನ ಎರಡನೆಯ ಮಗುವನ್ನು ತೋಳಿನಿಂದ ತೋಳಿಗೆ ಬದಲಾಯಿ ಸುತ್ತಾ ಲಾಲಿಸುತ್ತಾ ಇನ್ನು ಮುಂದೆ ಯಾರು ಏನು ಹೇಳಿದರೂ ತಾವು ಮಾತ್ರ ಹಾಡುವುದಿಲ್ಲ, ಕನ್ನಡದ ಭಾವಗೀತೆಗಳನ್ನೂ ಹಾಡುವುದಿಲ್ಲ, ಉರ್ದುವಿನ ಗಜಲ್‌ಗಳನ್ನೂ ಹಾಡುವುದಿಲ್ಲ ಅದರ ಬದಲಾಗಿ ಧರ್ಮಬೀರುವೂ ಹಠಮಾರಿಯೂ ಆಗಿರುವ ತಮ್ಮ ತಮ್ಮನ ಮಾತಿನಂತೆ ಕುರಾನು ಓದುತ್ತಾ, ನಮಾಜು ಮಾಡುತ್ತಾ ಮನೆಯಲ್ಲಿ ಸುಮ್ಮನೆ ಇನ್ನು ಮುಂದೆ ಬದುಕು ಸಾಗಿಸುವುದಾಗಿ ನಗುತ್ತಾ ಹೇಳಿದ್ದರು. (more…)

Monday February 26, 2007

ಅರಮನೆ, ಅಕ್ಕಸಾಲಿ ಮತ್ತು ಗುಡಿಸಲುಗಳು

Filed under: ಮೈಸೂರಿನಿಂದ ಅಂಕಣ — Rasheed @ 11:41 am

ಶಾಮಾಚಾರಿರವತ್ತು ವರ್ಷಗಳಿಗೂ ಹೆಚ್ಚುಕಾಲ ಅರಮನೆಯಲ್ಲಿ ಅಕ್ಕಸಾಲಿಗಳಾಗಿದ್ದ ಶಿರ್ವ ಮಂಚಕಲ್ಲಿನ ಶಾಮಾಚಾರಿಗಳು ನನ್ನ ಕನ್ನಡಕವನ್ನು ಕೇಳಿ ಪಡೆದು ತಮ್ಮ ನಿತ್ರಾಣವಾಗಿದ್ದ ಕಣ್ಣುಗಳಿಗೆ ಏರಿಸಿಕೊಂಡು ತಮ್ಮ ಬಲಗೈಯ ಹಸ್ತರೇಖೆ ಗಳನ್ನು ನೋಡಿ ಹಸ್ತರೇಖೆಗಳು ಕಾಣಿಸದೆ ಕಂಗಾಲಾಗಿ ನನ್ನ ಕನ್ನಡಕವನ್ನು ಮರಳಿ ನನಗೇ ಹಿಂದಿರುಗಿಸಿ ನಿಟ್ಟುಸಿರುಬಿಟ್ಟರು.
ನನ್ನ ಕನ್ನಡಕ ಬಿಸಿಲಿನ ಝಳಕ್ಕೆ ಹಾಕುವ ಕಪ್ಪು ಕನ್ನಡಕವೆಂದೂ ಅದರಲ್ಲಿ ಕಾಣದ ಏನೂ ಕಾಣುವುದಿಲ್ಲವೆಂದೂ ಅವರಿಗೆ ಹಸ್ತರೇಖೆಗಳನ್ನು ನೋಡಲು ಒಂದು ಭೂತ ಕನ್ನಡಕವನ್ನು ತಂದುಕೊಡುವೆನೆಂದೂ ಆದರೆ ಅದಕ್ಕೂ ಮೊದಲು ಅವರು ತಮ್ಮ ಅರವತ್ತು ವರ್ಷಗಳ ಕಾಲದ ಅರಮನೆಯ ಅಕ್ಕಸಾಲಿಗನ ಬದುಕನ್ನು ಕತೆ ಹೇಳುವಂತೆ ನನಗೆ ಹೇಳಬೇಕೆಂದೂ ನಾನು ಅವರಲ್ಲಿ ತುಳು ಭಾಷೆಯಲ್ಲಿ ಕೇಳಿಕೊಂಡೆ.

ಅದಕ್ಕೆ ಅವರು ನಗಾಡಿದರು. ಆಮೇಲೆ ಕನ್ನಡ ಭಾಷೆಯಲ್ಲಿ `ಸತ್ತವನ ತಿಕ ಅತ್ತ ತಿರುಗಿದ್ದರೇನು ಇತ್ತ ತಿರುಗಿದರೇನು? ಅದು ಎತ್ತ ಕಡೆ ತಿರುಗಿದರೂ ಸತ್ತವನಿಗೆ ಆಗಬೇಕಾದದ್ದೇನು? ಅಕ್ಕಸಾಲಿಗನೂ ಇಲ್ಲ. ಅರಮನೆಯೂ ಇಲ್ಲ. ಬದುಕಿನ ಕಥೆಯೂ ಇಲ್ಲ. ಮಹಾಭಾರತ ರಾಮಾಯಣವೂ ಇಲ್ಲ. ನೀನು ಅರಮನೆಗೆ ಬಂದ ಕೆಲಸವನ್ನು ಮುಗಿಸಿ ನಿನ್ನ ಪಾಡಿಗೆ ಸುಮ್ಮನೆ ಹೋಗು. ನನ್ನ ಜೊತೆ ಮಾತನಾಡಬೇಡ. ನನ್ನ ವಿಷಯ ಯಾರಿಗೂ ಹೇಳುವುದೂ ಬೇಡ. ಮಾನವ ಜನ್ಮವನ್ನು ಎತ್ತಿರುವ ಮೂಕಪ್ರಾಣಿಯಾದ ನನ್ನ ಪ್ರಾಚೀನ ಕರ್ಮವನ್ನು ನಾಗ ಕುಂಡಲನೇ ಪರಿಹರಿಸಬೇಕಲ್ಲದೆ ಇನ್ನು ಯಾರಿಗೂ ಏನೂ ಆಗುವುದಿಲ್ಲ. ನೀನು ಹೋಗಬಹುದು ಎಂದು ಕೈ ಮುಗಿದು ನನ್ನನ್ನು ಒತ್ತಾಯಪೂರ್ವಕವಾಗಿ ಹೊರಟು ಹೋಗುವಂತೆ ಕೇಳಿಕೊಂಡರು. (more…)

Tuesday February 20, 2007

ಮಗ ಬಾಪೂ ಸತ್ಯನಾರಾಯಣ ಮತ್ತು ತೀರ್ಥರೂಪ ಅಠಾಣ ರಾಮಣ್ಣ

Filed under: ಮೈಸೂರಿನಿಂದ ಅಂಕಣ — Rasheed @ 11:56 am

ಹಾ.ರಾ. ಬಾಪು ಸತ್ಯನಾರಾಯಣರಿಗೆ ಈಗ ಹತ್ತಿರ ಹತ್ತಿರ ಎಪ್ಪತ್ತೈದು ವರ್ಷ. ಅವರು ಭಾರತದ ಹೆದ್ದಾರಿಗಳಅಠಾಣಾ ರಾಮಣ್ಣ ಮತ್ತು ಬಾಪೂ ಸತ್ಯನಾರಾಯಣ ಬಲುದೊಡ್ಡ ಇಂಜಿನಿಯರ್‌ ಆಗಿ ನಿವೃತ್ತಿ ಹೊಂದಿ ಈಗ ಮೈಸೂರಿನಲ್ಲಿ ಜೀವಿಸುತ್ತಿದ್ದಾರೆ. ಗುಜರಾತು, ನವದೆಹಲಿ, ಷಿಲ್ಲಾಂಗು, ಕೊಹಿಮಾ, ಲಕ್ನೋ, ತಾಂಜಾನಿಯಾ, ವಿಶ್ವಸಂಸ್ಥೆ ಹೀಗೆ ಬಹಳ ಕಡೆಗಳಲ್ಲಿ ಹೆದ್ದಾರಿ ಇಂಜಿನಿಯರ್‌ ಆಗಿ ಶ್ರದ್ಧೆ ಪ್ರಾಮಾಣಿಕತೆಗಳಿಂದ ಕೆಲಸ ಮಾಡಿ ಈ ಇಳಿವಯಸ್ಸಿನಲ್ಲೂ ಮೈಸೂರಿನಲ್ಲಿ ಪಾದರಸದಂತೆ ಓಡಾಡುತ್ತಾ, ಯೋಚನೆ ಮಾಡುತ್ತಾ, ಪತ್ರಿಕೆಗಳಿಗೆ ಬರೆಯುತ್ತಾ ಬಲು ಚಟುವಟಿಕೆಯಿಂದ ಇರುತ್ತಾರೆ. ಇದ್ದದ್ದನ್ನು ನೇರವಾಗಿ ಹೇಳುತ್ತಾರೆ. ಅವರು ಯಾವ ಮುಲಾಜಿಗೂ ಒಳಗಾಗುವುದಿಲ್ಲ ಎಂಬುದನ್ನು ಅವರ ತೀಕ್ಷ್ಣ ಕಣ್ಣುಗಳು ಸಾರಿ ಹೇಳುತ್ತವೆ.

ಇವರು ಹೇಳಿದ ಸಮಯಕ್ಕೆ ಒಂದು ನಿಮಿಷವೂ ತಡವಾಗಬಾರದು ಒಂದು ಕ್ಷಣವೂ ಮೊದಲಾಗಬಾರದು ಎಂದು ನನಗೆ ನಾನೇ ಹೇಳಿಕೊಂಡು ನಿನ್ನೆ ಸಮಯಕ್ಕೆ ಸರಿಯಾಗಿ ಹೋಗಿ ಅವರ ಮನೆಯ ಕದವ ತಟ್ಟಲು ಹೋದರೆ ಬಾಗಿಲು ತೆರೆದುಕೊಂಡೇ ಇತ್ತು. ಅವರು ನನ್ನ ಕಾಯುತ್ತಿದ್ದಂತೆ ಇತ್ತು. ನಾನು ತಡ ಮಾಡಿಲ್ಲದಿರುವುದರಿಂದ ತಡ ಮಾಡಿದ್ದಕ್ಕೆ ಕ್ಷಮೆ ಕೋರುವ ಹಾಗೂ ಇರಲಿಲ್ಲ. ಕುಳಿತುಕೊಳ್ಳಲು ಹೇಳಿದರು. ಕುಳಿತುಕೊಳ್ಳಲು ಜಾಗವನ್ನು ಹುಡುಕುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಸೋಫಾದಲ್ಲಿ ಕುಳಿತಿರುವ ಬಾಪು ಸತ್ಯನಾರಾಯಣ ಅವರ ನೂರ ಐದು ವರ್ಷ ವಯಸ್ಸಿನ ತೀರ್ಥರೂಪರಾದ ಅಠಾಣಾ ರಾಮಣ್ಣನವರು ಕಾಣಿಸಿದರು. (more…)

Tuesday February 13, 2007

ಮೈಸೂರು ಸುಬ್ರಹ್ಮಣ್ಯ ಚಂದ್ರಶೇಖರ್ ಅಯ್ಯರ್ ಮತ್ತು ಹೋರಾಶಾಸ್ತ್ರ

Filed under: ಮೈಸೂರಿನಿಂದ ಅಂಕಣ — Rasheed @ 11:47 am

ಚಂದ್ರಶೇಖರ ಅಯ್ಯರ್‘ಗಡಿಯಾರಗಳು ಮುರಿದು ಹೋದಷ್ಟು ಮನುಷ್ಯದೊಡ್ಡ ಕಾಲಜ್ಞಾನಿಯಾಗುತ್ತಾನೆ, ಆಸ್ಟತ್ರೆಗಳಲ್ಲಿ ಮನುಷ್ಯ ಹೆಚ್ಚು ತೀರಿಹೋದಷ್ಟೂ ಮಾನವ ಶರೀರ ಶಾಸ್ತ್ರ ಬೆಳೆಯುತ್ತಾ ಹೋಗುತ್ತದಲ್ಲಾ ಹಾಗೆ’ ಎಂದು ನನಗೆ ನನ್ನ ಅಜ್ಜ ಕುಳಿತಲೈ ಸುಬ್ರಹ್ಮಣ್ಯ ಅಯ್ಯರ್ ಲಕ್ಷಣ ಅಯ್ಯರ್ ಬುದ್ದಿವಾದ ಹೇಳಿ ಗಡಿಯಾರ ರಿಪೇರಿ ಮಾಡು ಕೂರಿಸುತ್ತಿದ್ದರು ಎಂದು ಮೈಸೂರಿನ ಪೌಂಟೈನ್ ಸರ್ಕಲ್ ಹತ್ತಿರವಿರುವ ಶಿವಾಜಿ ರಸ್ತೆಯ ಹೊರಾಲಜಿಸ್ಟ್ ಎಂ. ಎಸ್. ಚಂದ್ರಶೇಖರ್ ಅಯ್ಯರ್ ಆ ಕತ್ತಲಲ್ಲಿ ಕ್ಯಾಂಡರ್ ಹಚ್ಚಿ ನನಗೆ ವಿವರಿಸಿ ಹೇಳುತ್ತಿದ್ದರು. (more…)

Tuesday February 6, 2007

ಸಿಂಹಾಸನವೂ ಹಣೆಯ ಬರೆಹವೂ

Filed under: ಮೈಸೂರಿನಿಂದ ಅಂಕಣ — Rasheed @ 11:26 am

buttikorava-4a.jpgನಿನ್ನೆಯ ಇರುಳು ಭರತನ ಹುಣ್ಣಿಮೆ. ಮಾಂತ್ರಿಕ ಕವಿ ಬೇಂದ್ರೆ ಹುಟ್ಟಿದ ದಿನ ಕಳೆದು ಮೂರನೆಯ ರಾತ್ರಿ. ಹದುಳದಲ್ಲಿ ಮೂಡಿದ ಹುಣ್ಣಿಮೆ ಮುಖಕ್ಕೆ ರಾಚುತ್ತಿತ್ತು.

`ಬರೀ ಕಷ್ಟ ಹೇಳಬೇಡಿ ಕಥೆ ಹೇಳಿ, ಸುಖ ಹೇಳಿ, ತಮಾಷೆ ಹೇಳಿ. ನಾನೂ ನಿಮ್ಮ ಹಾಗೆ ಸಾರಾಯಿ ಕುಡಿದಿರುವೆನೆಂದು ಅಂದುಕೊಂಡು ಮಾತನಾಡಿ. ಈ ಲೋಕ ಹುಟ್ಟುವ ಮೊದಲೇ ಹುಟ್ಟಿದಂತಿರುವ ನಿಮ್ಮ ಬುಟ್ಟಿಕೊರಚ ಕುಲ ಹೇಗೆ ಉಂಟಾಯಿತು ಎಂದು ತಿಳಿಸಿ’ ಎಂದು ನಾನು ಅವರ ಬಳಿ ಗೋಗರೆಯುತ್ತಿದ್ದೆ. ಅವರು ಹೇಳ ದಿದ್ದರೂ, ಅಳದಿದ್ದರೂ ಅವರ ಸಂಕಟ ಆ ಬೆಳದಿಂಗಳಿನಂತೆ ನಿಚ್ಚಳ ವಾಗಿತ್ತು. ಮೈಸೂರಿನ ಸಂಸ್ಕೃತಿ, ಸಂಗೀತ, ಸುಖ, ಸಮೃದ್ಧಿ, ಇತಿಹಾ ಎಲ್ಲವನ್ನೂ ಒಟ್ಟಿಗೆ ಸೇರಿಸಿ ತೂಕಕ್ಕೆ ಹಾಕಿದರೂ ಅದು ಏನೇನೂ ಅಲ್ಲ ವೆಂಬಂತೆ ಆ ಬುಟ್ಟಿಕೊರಚರ ಹಸಿವು, ಬೇಸರ, ಏಕಾಂಗಿತನ, ಅಸಹಾಯ ಕತೆ ಕೆನ್ನೆಗೆ ಹೊಡೆದಷ್ಟು ಸ್ಪಷ್ಟವಾಗಿ ಭಾಸವಾಗುತ್ತಿತ್ತು. (more…)

Tuesday January 30, 2007

ಪಂಡಿತಪ್ಪಸ್ವಾಮಿಗೆ ಕಾಯುತ್ತಾ ಬೋಟಿ ಬಜಾರಿನಲ್ಲಿ…

Filed under: ಮೈಸೂರಿನಿಂದ ಅಂಕಣ — Rasheed @ 12:11 pm

pandithswamy.jpg

ಯಾಕೋ ಸಣ್ಣಗೆ ಚಳಿಯಾಗುತ್ತಿತ್ತು. ಹಲ್ಲುಪುಡಿ ಮಾರುವ ಪಂಡಿತಪ್ಪ ಸ್ವಾಮಿಯನ್ನು ಹುಡುಕುತ್ತಾ ಹೊರಟವನು ಬೋಟೀ ಬಜಾರಿನಲ್ಲಿ ಕುರಿ, ಕೋಳಿ, ಮೀನು, ಸಾರಾಯಿ, ಮೂಸಂಬಿ, ರಸಬಾಳೆ, ಮರಗೆಣಸು, ಮಲ್ಲಿಗೆ, ಸೇವಂತಿಗೆ ಮಾರುವ ಈ ಗಲೀಜು ರಸ್ತೆಯಲ್ಲಿ ಬೈಕು ನಿಲ್ಲಿಸಿ ಆಕಾಶ ನೋಡುತ್ತ ಕುಳಿತಿದ್ದೆ. ನೋಡಲು ಬಲು ಖುಷಿಯಾಗುತ್ತಿದ್ದ ಬೊಜ್ಜು ಬಾಯಿಯ ಶ್ಯಾಮವರ್ಣದ ಮುದುಕಿ ಎಂದಿನಂತೆ ತನ್ನ ಆಕರ್ಷಕ ನಗು ನಗುತ್ತಾ ನಡುನಡುವಿನಲ್ಲಿ ದೀನಳಾಗಿ ನೋಡುತ್ತಾ ಭಿಕ್ಷೆ ಎತ್ತುತ್ತಿದ್ದಳು.

ಕಳೆದ ವಾರ ಇಂತಹದೇ ಒಂದು ಸಂಜೆ ಸೊಗಸುಗಾರನಂತೆ ಕಾಣುತ್ತಿದ್ದ ಸಾಮಾಜಿಕ ಕಾಳಜಿ ಯನ್ನೂ ಹೊಂದಿದ್ದ ಯುವಕನೊಬ್ಬ ಹಸಿದಿದ್ದ ಈ ಮುದುಕಿಗೆ ಭಿಕ್ಷೆಯ ಬದಲು ದೊಡ್ಡದಾದ ಕೇಕ್‌ ತುಂಡೊಂದನ್ನು ತಿನ್ನಲು ಕೊಟ್ಟು `ಭಿಕ್ಷೆ ಬೇಡ ಬಾರದು ಅಜ್ಜೀ ಎಲ್ಲಾದರೂ ಅನಾಥಾಶ್ರಮ ಸೇರು’ ಅಂತ ಬುದ್ಧಿ ಹೇಳುತ್ತಿದ್ದ. `ಅಯ್ಯೋ ಅದೊಂದನ್ನು ಮಾತ್ರ ಹೇಳಬೇಡ ಕಂದಾ’ ಎಂದು ಅಜ್ಜೀ ಅವನಿಗೆ ಬುದ್ಧಿ ಹೇಳುತ್ತಿದ್ದಳು. ಅವಳ ಪ್ರಕಾರ ಅನಾಥಾಶ್ರಮದಲ್ಲಿ ಸತ್ತು ಹೋದರೆ ಮೃತ ದೇಹವನ್ನು ಆಸ್ಪತ್ರೆಗೆ ಎಸೆದು ಹೋಗುತ್ತಾರಂತೆ. ಆದರೆ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಾ ಸತ್ತು ಹೋದರೆ ನಾಲ್ಕು ಮಂದಿ ಒಳ್ಳೆಯವರು ಚಂದಾ ಎತ್ತಿ ಚಟ್ಟಿ ಕಟ್ಟಿ ಸ್ಮಶಾನಕ್ಕೆ ಒಯ್ದು ಸದ್ಗತಿ ಒದಗಿಸುತ್ತಾರಂತೆ. ಅವಳ ವಾದ ಸರಣಿ ಅರ್ಥವಾಗದ ಆ ಯುವಕ ಸುಮ್ಮನಾಗಿ ಸಿಗರೇಟು ಹಚ್ಚಿಕೊಳ್ಳಲು ಹೋಗಿದ್ದ. (more…)

Monday January 22, 2007

ಗುಮ್ ನಾಮ್ ಬಾದಶಾನ ಗುಡ್ಡದಲ್ಲಿ

Filed under: ಮೈಸೂರಿನಿಂದ ಅಂಕಣ — Rasheed @ 1:05 pm

ನಿಮ್ಮ ಸೂಫಿ ಸಂತನ ಹೆಸರೇಕೆ ಗುಮ್‌ನಾಮ್‌ ಬಾದಶಾ ಎಂದಿದೆ ಎಂಬ ಸರಳ ಪ್ರಶ್ನೆಗೆ ಅಷ್ಟೇ ಸರಳವಾಗಿ ನಿನ್ನ ಹೆಸರೇನು?- ಎಂದು ಸೂಫಿ ಮಹಮ್ಮದ್‌ ರೂಹುಲ್ಲಾ ಶಾ ಖಾದ್ರಿ ನನ್ನನ್ನು ಕೇಳಿದರು.

ನಾನು ನನ್ನ ಹೆಸರು ಹೇಳಿದೆ.

ನಿನ್ನ ವಯಸ್ಸು ಎಷ್ಟು?

ಅದನ್ನೂ ಹೇಳಿದೆ.

ಅದಕ್ಕೂ ಮೊದಲು ನಿನ್ನ ಹೆಸರೇನಾಗಿತ್ತು?

ನಾನು ಸುಮ್ಮನೆ ಅವರ ಮುಖ ನೋಡಿದೆ.

ನೀನು ಇನ್ನು ಎಷ್ಟು ವರ್ಷ ಬದುಕಬಹುದು?

ಹೆಚ್ಚು ಕಡಿಮೆ ಅದನ್ನೂ ಹೇಳಿದೆ.

ಆನಂತರ ನಿನ್ನ ಹೆಸರೇನಿರಬಹುದು? (more…)

ಒಂಟಿ ಸಲಗ ಮತ್ತು ಒಬ್ಬರು ಸ್ತ್ರೀ

Filed under: ಮೈಸೂರಿನಿಂದ ಅಂಕಣ — Rasheed @ 11:45 am

ಆ ಒಂಟಿ ಸಲಗ ನನ್ನನ್ನು ಹೂವಿನಂತೆ ಆಕಾಶದಲ್ಲಿ ಹತ್ತು ಅಡಿ ಎತ್ತರಕ್ಕೆ ಎಸೆಯಿತು. ಚೆಂಡಿನಂತೆ ಕಾಡಿನೊಳಕ್ಕೆ ಅಷ್ಟು ದೂರ ಕಾಲಿನಿಂದ ದೂಡಿತು, ಸೊಂಡಿಲಿನಿಂದ ಎತ್ತಿ ದಂತಗಳ ಮೇಲೆ ಕೂರಿಸಿತು, ನೆಲದಲ್ಲಿ ಮಲಗಿಸಿ ದೂರದಿಂದ ನೋಡಿತು… ಒಟ್ಟಿನಲ್ಲಿ ಈಗ ಯೋಚಿಸಿದರೆ ಆ ಒಂಟಿಸಲಗ ನನ್ನನ್ನು ಓರ್ವ ಪ್ರೇಮಿಯಂತೆ ಒಂದೂವರೆ ತಾಸುಗಳ ಹೊತ್ತು ಕಾಡಿಸಿತ್ತು’.

ನಡುವಯಸ್ಸಿನ ಆ ಮಹಿಳೆ ಸುಮಾರು ಹದಿನೈದು ವರ್ಷಗಳ ಆನಂತರ ಆ ಘಟನೆಯನ್ನು ನೆನಪಿಸಿಕೊಂಡು ನಿರ್ವಿಕಾರವಾಗಿ ವಿವರಿಸುತ್ತಿದ್ದರು. ನಾನು ಬಾಯಿಬಾರದವನಂತೆ ಹೂಂಗುಟ್ಟುತ್ತಿದ್ದೆ. ಅವರು ನಡೆದ ಕಥೆಯೆಲ್ಲವನ್ನೂ ಒಂದೇ ಉಸಿರಿನಲ್ಲಿ ಹೇಳಿ ಮುಗಿಸುವ ಉತ್ಸಾಹದಲ್ಲಿದ್ದಂತೆ ಕಂಡಿತು. ಅವರ ಉತ್ಸಾಹಕ್ಕೆ ಒಂದಿಷ್ಟು ಕಡಿವಾಣ ಹಾಕುವುದು ಬಾನುಲಿ ತಂತ್ರದ ದೃಷ್ಟಿ ಯಿಂದ ಉತ್ತಮ ಎಂದು ಅನಿಸಿ `ನಾಗರಹೊಳೆ ಕಾಡಿ ನಲ್ಲಿ ಹೀಗೆ ನಿಮ್ಮ ಮೇಲೆ ಒಂಟಿ ಗಂಡಾನೆಯ ಅಂಗ ಚೇಷ್ಟೆ ನಡೆಯುತ್ತಿರುವಾಗ ನಿಮ್ಮ ಪತಿ ಏನು ಮಾಡುತ್ತಿ ದ್ದರು?’ ಎಂದು ಕೇಳಿದೆ. (more…)

Blog at WordPress.com.