ಹಲವು ವರ್ಷಗಳ ಹಿಂದೆ ಮಂಗಳೂರಿನ ಬಳಿ ಐದು ಮಂದಿ ಬಾಲಕಿಯರು ಕೊಳದಲ್ಲಿದೋಣಿ ಮಗುಚಿ ನೀರಲ್ಲಿ ಮುಳುಗಿ ತೀರಿಹೋದರು. ನಾನು ಅವರಲ್ಲಿ ಇಬ್ಬರ ಮೃತದೇಹವನ್ನು ಆಸ್ಪತ್ರೆಯ ಶವ ಕೊಠಡಿಯಲ್ಲಿ ನೋಡಿ ಬಂದಿದ್ದೆ.
ಮೂಲೆಯಲ್ಲಿ ಇನ್ನೊಬ್ಬ ಗಂಡಸಿನ ಮೃತ ದೇಹವೂ ಇತ್ತು. ಆತ ಮಧ್ಯಾಹ್ನ ಹನ್ನೆರಡು ಗಂಟೆಗೆ ಮನೆಯಲ್ಲಿ ಬಾಗಿಲು ಮುಂದೆ ಮಾಡಿಕೊಂಡು ಉಣ್ಣುತ್ತಾ ಇದ್ದನಂತೆ. ಮುಳುಗಿ ಹೋಗುತ್ತಿರುವ ಬಾಲಕಿಯರು ಕೂಗಿಕೊಳ್ಳುವುದು ಕೇಳಿಸಿಕೊಂಡವನಂತೆ ಉಣ್ಣುತ್ತಿದ್ದಲ್ಲಿಂದ ಹಾರಿ ಎದ್ದು ಕೆರೆಯ ಕಡೆಗೆ ಓಡಿ ನೀರಿಗೆ ಹಾರಿ ತೀರಿಕೊಂಡುಬಿಟ್ಟ. ಅವನಿಗೆ ತುಂಬಾ ಚೆನ್ನಾಗಿ ಈಜಲು ಬರುತ್ತಿತ್ತಂತೆ. ಸಣ್ಣದಿರುವಾಗ ಸೀಬೆಮರದ ಗೆಲ್ಲಿನಿಂದ ಕೆಳಗಿನ ಬಾವಿಗೆ ಹಾರಿ ಮುಳುಗಿ ಮುಷ್ಟಿಯಲ್ಲಿ ಬಾವಿಯ ತಳದ ಮರಳು ಹಿಡಿದುಕೊಂಡು ಮೇಲೆ ಬರುತ್ತಿದ್ದನಂತೆ.
ಆತನ ಬಾಲ್ಯ ಕಾಲದ ಗೆಳೆಯ ಶವಾಗಾರದೊಳಗೆ ಗೆಳೆಯನ ಮೃತದೇಹದ ಮುಂದೆ ಕಥೆ ಹೇಳುತ್ತಾ ಅಳುತ್ತಿದ್ದ. ತೀರಿ ಹೋದವನ ಹೆಂಡತಿ ಅಳಲು ಬಾರದೆ ಪೆಚ್ಚುಪೆಚ್ಚಾಗಿ ಏನೋ ಹೇಳುತ್ತಿದ್ದಳು.
`ಅವರಿಗೆ ಈಜು ಬರುತ್ತಿತ್ತು ಎಂದು ನಾನು ಹೇಳಲು ಬರುವುದಿಲ್ಲ.. .. ಆದರೆ ಅವರು ಕಡಲಿಗೆ ಹೋಗುತ್ತಿದ್ದರು.. .. ಆದರೆ ನಾನು ಅವರ ಜೊತೆಗೆ ಕಡಲಿಗೆ ಹೋಗಿರಲಿಲ್ಲ.. ..’ ಅನ್ನುತ್ತಿದ್ದಳು. ಕೊನೆಗೆ ಏನೋ ನೆನಪಾದವಳಂತೆ ಅಳಲು ತೊಡಗಿದಳು. (more…)
ನಿಂತೇ ಹೋಗಿದ್ದ ಮುಂಗಾರು ಮಳೆ ಇದೀಗ ನೋಡಿದರೆ ಬೆಳಿಗ್ಗೆಯೇ ಬೆಳಕನ್ನು ನುಂಗಿಕೊಂಡು ಮೋಡವಾಗಿ, ಕಾವಳವಾಗಿ ಆಕಾಶದಲ್ಲಿ ಹಾಗೇ ನಿಂತುಕೊಂಡಿದೆ. ನಿಂತ ಗಾಳಿ, ನಿಂತ ಆಕಾಶ ಎಂತಹ ಅಸ್ವಸ್ಥ ಮನಸ್ಸಿಗೂ ಸಕಾರಣ ಹೇಳಬಲ್ಲ ಹಾಗಿರುವ ಮಂಗಳೂರಿನ ಈವತ್ತಿನ ಬೆಳಗು, ನಗು ಬರುತ್ತದೆ. ಈ ಹವಾಮಾನ, ಈ ವಾತಾವರಣ, ಈ ನಿಂತ ನೀರಿನಂತಿರುವ ಬೆಳಗು ಇವೆಲ್ಲವೂ ನಮಗೆ ಏನನ್ನೋ ಹೇಳಲೆಂದೇ ಹೀಗೆ ನಿಂತುಕೊಂಡಿದೆ ಎಂದು ಭ್ರಮಿಸುವ ನಮ್ಮ ತಿಕ್ಕಲುತನಗಳು!
ಮಂಗಳೂರಿನ ಮಳೆಗೆ ಬೇಜಾರು ಬಂದು ಹೋಗಿ, ರಜೆ ಹಾಕಿ ಬಸ್ಸಿನಲ್ಲಿ ಕುಳಿತು, ಮಳೆಯ ಮಂಗಳೂರನ್ನು ದಾಟಿ, ಮಳೆ ಬೀಳುತ್ತಲೇ ಇರುವ ಕೊಡಗನ್ನು ದಾಟಿ, ಮಳೆಯ ಮೋಡ ಗುಮ್ಮನ ಹಾಗೆ ಸುಮ್ಮನೇ ನಿಂತಿರುವ ಮೈಸೂರಿನಲ್ಲಿ ಬೆಚ್ಚಗೆ ಹೊದ್ದುಕೊಂಡು ಕೈಗೆ ಸಿಕ್ಕಿದ ಪೇಪರುಗಳನ್ನೆಲ್ಲ ನಿರುಕಿಸುತ್ತ ಕೂತಿದ್ದೆ.
[೧೯೯೫ ರಲ್ಲಿ ಬರೆದದ್ದು]
ಈ ವಾರದಲ್ಲಿ ಪುಟ್ಟ ಹುಡಗರಿಬ್ಬರ ಭಾವಚಿತ್ರಗಳಿರುವ ಜಾಹೀರಾತುಗಳೆರಡು ಪತ್ರಿಕೆಯೊಂದರ ಮೂಲೆಯಲ್ಲಿ ಬಂತು. ಹುಟ್ಟುಹಬ್ಬ, ವಿವಾಹ, ವಿವಾಹ ವಾರ್ಷಿಕ, ವಿಧೇಶ ಪ್ರವಾಸ ಇತ್ಯಾದಿಗಳಿಗೆ ಸಂತೋಷ ಸೂಚಿಸಿ ಬರುವ ಜಾಹೀರಾತುಗಳನ್ನೂ, ಮರಣ ವಾರ್ಷಿಕ ಇತ್ಯಾದಿಗಳಿಗೆ ಕಂಬನಿಯಿಡುವ ಶ್ರದ್ಧಾಂಜಲಿಗಳನ್ನೂ ನೋಡಿ ಈ ಚಿತ್ರಗಳ ಜೊತೆ ಸಂತೋಷವನ್ನೋ, ಬೇಸರವನ್ನೋ ಹಂಚಿಕೊಳ್ಳುವ ನನಗೆ ಈ ಹುಡುಗರ ಚಿತ್ರವನ್ನೂ, ಅದರ ಕೆಳಗೆ ಬರೆದಿರುವ ಅಕ್ಷರಗಳನ್ನೂ ಓದಿ ಸಂತೋಷ ಪಡಬೇಕೋ, ಬೇಜಾರುಮಾಡಿಕೊಳ್ಳಬೇಕೋ ಗೊತ್ತಾಗಲಿಲ್ಲ. ಈ ಹುಡುಗರಿಬ್ಬರೂ ಎರಡು ಪುಟ್ಟ ಶಾಲೆಗಳ, ಪುಟ್ಟ ಚುನಾವಣೆಯಲ್ಲಿ ಗೆದ್ದು ಬಂದ ಶಾಲಾ ನಾಯಕರುಗಳಾಗಿದ್ದರು. ಹುಟ್ಟಿ ಹತ್ತೋ ಹದಿನಾರೋ ವರ್ಷಗಳಾಗಿರುವ ಈ ಹುಡುಗರು ಶಾಲಾ ನಾಯಕರುಗಳಾಗಿರುವುದು ಖುಷಿಯ ವಿಷಯವಾದರೂ ಇವರ ಚಿತ್ರಗಳು ಸಾಧಾರಣವಾಗಿ ನಾಯಕ ಮಣಿಗಳೂ. ತೀರಿ ಹೋದವರೂ ಆಗಿರುವವರ ಚಿತ್ರಗಳ ಜೊತೆ ಕಂಗೊಳಿಸುತ್ತಿರುವುದು ಕೊಂಚ ಹೆದರಿಕೆಯ ಅದಕ್ಕಿಂತಲೂ ತೀರಾ ಮುಜುಗರದ ಸಂಗತಿಯಾಗಿ ಕಂಡಿತು.
ಎಲ್ಲರ ಮೇಲೆ ಇಡೀ ಪ್ರಪಂಚದ ಕುರಿತೇ ರೇಜಿಗೆಯಾಗುವಷ್ಟು ಹಸಿವು. ಇಡೀ ಮನಸ್ಸನ್ನೇ ಇಡಿ ಇಡಿಯಾಗಿ ತಿಂದು ಬಿಡುವ ಈ ಹಸಿವು! ಮನುಷ್ಯರ ಕೆಟ್ಟ ಹಠ! ಕದ್ದು ಹೋಗಲು ನೋಡುತ್ತಿರುವ ಈ ಚಂದದ ಬೆಳಕು! ಯಾರೂ ಯಾರ ಜೊತೆಗೂ ಸರಿಯಾಗಿ ಮಾತನಾಡುತ್ತಿಲ್ಲ. ಎಲ್ಲರೂ ಎಲ್ಲರ ಜೊತೆ ಹಠಹಿಡುದು ಕುಂತಿರುವುದು ಕಂಡು, ತಿಂದು ಬಿಡುವಷ್ಟು ಹಠ ಬಂದು ಒಬ್ಬನೇ ತಟ್ಟೆಯಲ್ಲಿರುವುದ ಕಬಳಿಸುತ್ತ ಕೂತಿದ್ದೆ. ಎಲ್ಲರೂ ನೋಡುತ್ತಿದ್ದರು. ಖಾಲಿಯಾಗುತ್ತಿರುವ ತಟ್ಟೆಯ ಮೇಲೆ ರಾತ್ರಿಯ ಕತ್ತಲೆ ಬಂದು ಕೂತುಕೊಳ್ಳಲು ನೋಡುತ್ತಿತ್ತು. ಈ ಕೆಟ್ಟ ಪ್ರಪಂಚ. ಈ ಸಂಸಾರ ಇವೆಲ್ಲವನ್ನೂ ನೀಗಿಕೊಳ್ಳುತ್ತಿರುವನಂತೆ ಒಬ್ಬನೇ ಕೂತು ತಿನ್ನುತ್ತಿರುವ ನಾನು ತಿನ್ನುತ್ತ ತಿನ್ನುತ್ತಾ ಜಠರ ತುಂಬುತ್ತಿದ್ದಂತೆ ಮನಸ್ಸು ಹಾಯಾಗುತ್ತಿರುವಂತೆ ಅನಿಸುತ್ತಿತ್ತು. ನಗು ಬಂತು. ಎಲ್ಲರೂ ಸಿಟ್ಟುಮಾಡಿಕೊಂಡು ದಿನಗಟ್ಟಲೆ ಊಟಮಾಡದೆ ಮೊಂಡು ಹಿಡಿದರೆ ನಾನಾದರೊ ಇಲ್ಲಿ ಅನ್ನದ ಗುಡ್ಡೆಯನ್ನು ಕರಗಿಸಿಕೊಂಡು ತೇಗುತ್ತ ಕೊನೆ ಕೊನೆಯ ಅನ್ನದ ಅಗುಳುಗಳನ್ನು ಹೆಕ್ಕಿ ತಿನ್ನುತ್ತ ಪ್ರಸನ್ನನಾಗಿಬಿಡುತ್ತಿದ್ದೇನೆ. .
ಅವಳ ವಿಚಿತ್ರ ಕನ್ನಡದಲ್ಲಿ ನಮ್ಮ ಹೆಸರುಗಳು ಗಂಟಲು ಅದುಮಿಸಿಕೊಂಡು, ಮೂಗು ಮುಚ್ಚಿಸಿಕೊಂಡು, ರೊಟ್ಟಿಗೆ ಅಕ್ಕಿಯ ಹಿಟ್ಟು ನಾದುವಂತೆ ನಾದಿಸಿಕೊಂಡು ಅಂದು ಕಾಕನ ತಿಂಡಿಯ ಪರಿಮಳ ತುಂಬಿದ ಹೋಟೇಲಿನೊಳಗೆ ಸಂಜೆಯ ಬಿಸಿಲು ಕೋಲಿನ ಹಾಗೆ ಬಂದು ಕೇಳುತ್ತಿತ್ತು. ಅಂದುಕಾಕ ಗಲ್ಲದ ಮೇಲೆ ಗಡ್ಡ ಕೆರೆಯುತ್ತಾ ಕೂತು ಒಂದು ಬೀಡಿ ಹಚ್ಚಿ ಗಂಟಲಿನ ಒಂದು ನಾಳದಿಂದ ಹೊಗೆ ತೆಗೆದುಕೊಂಡು ಇನ್ನೊಂದು ನಾಳದ ಮೂಲಕ ಹೊಗೆ ಮೇಲಕ್ಕೆ ತಂದು ಮೂಗಿನ ಒಂದೇ ಹೊಳ್ಳೆಯ ಮೂಲಕ ಹೊರಗೆ ಬಿಡಲು ನೋಡುತ್ತಿದ್ದರು.




