The Mysore Post

Thursday December 27, 2007

ಒಬ್ಬ ಐರಿಷ್ ಹುಡುಗನ ಅಲೆದಾಟ

white-blossom-tree.jpg

ಕತೆಯ ಆಶೆಯನ್ನು ಬಿಟ್ಟು ಮತ್ತೆ ಸುಮ್ಮನೇ ತಿರುಗಾಟ ಶುರು ಮಾಡಿದ್ದೆ. ಏನು ಬರೆಯಲು ಹೊರಟರೂ ಮತ್ತೆ ಅದೇ ಬಾಲ್ಯಾಕಾಲದ ಹಾವಳಿ ಜಾಸ್ತಿಯಾಗಿ. ಹಳೆಯದ್ದನ್ನೆಲ್ಲ ಮೂಟೆಕಟ್ಟಿ ಅಟ್ಟದಲ್ಲಿಟ್ಟು ಇಲ್ಲಿಗೆ ಬಂದರೂ ಬಾಲ್ಯದ ಕಾಟ ಕಡಿಮೆಯಾಗಲಿಲ್ಲವಲ್ಲಾ ಎಂದು ನಿಟ್ಟುಸಿರು ಬಿಡುತ್ತಿದ್ದೆ. ಊರಲ್ಲಿರುವ ಮಡದಿ ಕಾಗದ ಬರೆದು `ನೀನು ಗೊತ್ತೇ ಇಲ್ಲದ ಅಪರಿಚಿತ ಅಂತ ಅನ್ನಿಸುತ್ತಿದೆ. ನೀನು ಬೇರೆ ಯಾರೋ ಗಂಡಸು ಅಂತ ಅನ್ನಿಸಿ ಹೆದರಿಕೆಯಾಗುತ್ತಿದೆ. ನಿಜಕ್ಕೂ ನೀನು ಯಾರೂ ? ನನಗೆ ಯಾಕೋ ನೀನು ಎಲ್ಲೋ ಇರುವ ಬೇರೆ ಯಾರೋ ಮನುಷ್ಯ ಅಂತ ಅಳುಬರುತ್ತಿದೆ’ ಅಂತೆಲ್ಲಾ ಬರೆದಿದ್ದಳು. ಅವಳಿಗೆ ಸಮಾಧಾನ ಮಾಡಲು ಹೋಗದೆ ನಾನೂ ದುಷ್ಟನಂತೆ ಉತ್ತರ ಬರೆದಿದ್ದೆ. ಆಮೇಲೆ ನನ್ನೊಳಗೇ ಸಂಕಟಪಟ್ಟಿದ್ದೆ. ಹೆಂಡತಿಯೊಬ್ಬಳ ಹೆದರಿಕೆಗಳು, ಗಂಡನಾದವನ ದಿಕ್ಕು ದೆಸೆಯಿಲ್ಲದ ತಿರುಗಾಟ… ಇದರ ನಡುವೆಯೇ ಕಳೆದು ಹೋಗುತ್ತಿರುವ ಕಾಲ. ನಾವು ಇದನ್ನೆಲ್ಲ ಮರೆತು ಮಕ್ಕಳ ಹಾಗೆ ಮತ್ತೆ ಕೂಡಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದೆ.

ಷಿಲ್ಲಾಂಗಿನಲ್ಲಿ ಈಗ ಚಳಿಯ, ಬೆಳದಿಂಗಳಿನ ಸಮಯ. ಎಲ್ಲರೂ ಬೆಚ್ಚಿನ ಬಟ್ಟೆಗಳನ್ನು ಹಾಕಿಕೊಂಡು ಬೇರೆಯದೇ ತರಹ ಕಾಣಿಸುತ್ತಿದ್ದಾರೆ. ಚಿರಾಪುಂಜಿಯ ಕಿತ್ತಳೆಯ ಹಣ್ಣು ಮಾರುಕಟ್ಟೆಗೆ ಬಂದಿದೆ. ಎಲ್ಲರೂ ಮನೆಗಳನ್ನು ತೊಳೆದು ಸಿಂಗರಿಸಲು ತೊಡಗಿದ್ದಾರೆ. ಎಲ್ಲರೂ ಕ್ರಿಸ್‌ಮಸ್ ಹಬ್ಬಕ್ಕಾಗಿ ಕಾಯುತ್ತಿದ್ದಾರೆ

ಈ ನಡುವೆ ಓವನ್ ಓ’ ಸಲ್ಲಿವನ್ ಎಂಬ ಅಯರ್ಲೆಂಡ್‌ನ ಗೆಳೆಯ ಕಾಗದ ಬರೆದಿದ್ದಾನೆ. ಸೈಕಲ್ಲು ಹತ್ತಿ ವಿಶ್ವವನ್ನೆಲ್ಲ ಸುತ್ತುತ್ತಿರುವ ಈತ ಈಗ ಯೂರೋಪಿನ ಗಡಿಯಲ್ಲಿರುವ ಟರ್ಕಿ ಗೆ ತಲುಪಿ ಅಲ್ಲಿಂದ ಕಾಗದ ಕಳಿಸಿದ್ದಾನೆ. ಕ್ರಿಸ್‌ಮಸ್ ಹಬ್ಬಕ್ಕೆ ಸರಿಯಾಗಿ ಆತ ಅಟ್ಲಾಂಟಿಕ್ ಕಡಲ ತೀರದಲ್ಲಿರುವ ತನ್ನ ಹಳ್ಳಿಯಲ್ಲಿ ತಂದೆ ತಾಯಿಯ ಜೊತೆ ಕಾಲ ಕಳೆಯುತ್ತಾನೆ. ಈಗ ನಾನು ಯೂರೋಪಿನ ಹೊಸ್ತಿಲಲ್ಲಿ ನಿಂತಿದ್ದೇನೆ ಎಂದು ಆತ ಬರೆದಿದ್ದಾನೆ. ಇಂಗ್ಲಿಷಿನಲ್ಲಿ ಈತನ ಹೆಸರು ಓವೆನ್ ಆಂತ. ಐರಿಷ್ ಭಾಷೆಯಲ್ಲಿ ಅದನ್ನು ಓಐನ್ ಅಂತ ಬರೆಯುತ್ತಾರಂತೆ.

ಈತನನ್ನು ನಾನು ನೋಡಿದ್ದು ಒಂದು ತಮಾಷೆಯ ಸಂದರ್ಭ. ಒಂದು ವರ್ಷದ ಹಿಂದೆ ಶಿಲ್ಲಾಂಗಿನ ಅಸ್ಸಾಮಿ ಹೆಂಗಸೊಬ್ಬಳ ಮುರುಕು ಹೋಟೆಲಲ್ಲಿ ಕುಳಿತುಕೊಂಡು ಈತ ಹಾಲಿಲ್ಲದ ಟೀ ಕುಡಿದುಕೊಂಡು ಸಿಗರೇಟು ಸೇದಿಕೊಂಡು ಹೊರಗೆ ನೋಡುತ್ತಿದ್ದ. ಆಗ ಬೆಳ್ಳಗಿನ ಹೂ ಬಿಡುವ ಪ್ಲಂ ಮರಗಳು ಎಲ್ಲ ಕಡೆ ಅರಳಿಕೊಂಡು ನಿಂತಿದ್ದವು. ನಾನೂ ಟೀ ಕುಡಿದುಕೊಂಡು ಈತನನ್ನೇ ಗಮನಿಸುತ್ತಿದ್ದೆ. ಬೆಳ್ಳಗ್ಗೆ ಎತ್ತರಕ್ಕೆ ಲಕ್ಷಣವಾಗಿ ಇದ್ದ. ಜೊತೆಗೆ ವಿಲಕ್ಷಣವಾಗಿ ಮೂಗಿಗೊಂದು ನತ್ತು ಸಿಕ್ಕಿಸಿಕೊಂಡಿದ್ದ. ನನಗೆ ಅದನ್ನು ನೋಡಿ ನಗುಬರುತ್ತಿತ್ತು. ಅಸ್ಸಾಮಿ ಹೆಂಗಸು ಹೋಟೆಲ್ಲಿನ ಗೋಡೆಯಲ್ಲಿ ಜಡೆಸ್ವಾಮಿಯೊಬ್ಬನ ಫೋಟೋ ತೂಗುಹಾಕಿ ಅದಕ್ಕೆ ಊದು ಬತ್ತಿ ಹಚ್ಚಿ ಇಟ್ಟಿದ್ದಳು. ಈತ ಎದ್ದು ನನ್ನ ಬಳಿ ಬಂದು ಆ ಫೋಟೋ ತೋರಿಸಿ ಇದು ಯಾವ ದೇವರು ಅಂತ  ಕೇಳಿದ. ನನಗೂ ಗೊತ್ತಿರಲಿಲ್ಲ. `ಕ್ಷಮಿಸುಗೊತ್ತಿಲ್ಲ’ ಅಂತ ಹೇಳಿದೆ. ಆಮೇಲೆ ನಾವು ಗೆಳೆಯರಾದೆವು. ನಮ್ಮ ಮನೆಗೆ ಬಂದು ಊಟ ಮಾಡಿ ಕುಡಿದು ಊರಿನಿಂದ ಬಂದ ನೆಂಟನಂತೆ ಕ್ಷೇಮ ಸಮಾಚಾರ ಮಾತಾಡಿಕೊಂಡು ಹತ್ತಿರವಾದೆವು. ಹೋಗಲಿ ಬಿಡು ಮೂಗಿಗೆ ನತ್ತು ಯಾಕೆ ಹಾಕಿಕೊಂಡಿದ್ದೀಯಾ ಅಂತ ಕೇಳಿದೆ. ಎಲ್ಲರೂ ಕುತೂಹಲ ಪಡಲಿ, ಮಕ್ಕಳು ನಗಾಡಲಿ ಅಂತ ಹಾಕಿರುವೆ’ ಅಂತ ಹೇಳಿದ.

ಈತ ಹುಟ್ಟಿದ್ದು ಐರ್ಲೆಂಡಿನಲ್ಲಿ ನಲ್ಲಿ. ಕೆಲಸ ಮಾಡುವುದು ಆಸ್ಟ್ರೇಲಿಯಾದಲ್ಲಿ. ಒಂದು ವರ್ಷ ಕೆಲಸ ಮಾಡಿ ಖರ್ಚು ಮಾಡದೆ ಹಣ ಉಳಿಸಿ ಇನ್ನೊಂದು ವರ್ಷ ರಜೆ ಹಾಕಿ ಲೋಕ ಸುತ್ತುತ್ತಾನೆ. ಆಸ್ಟ್ರೇಲಿಯಾದಿಂದ ಹಾಂಕಾಂಗ್‌ಗೆ ಹೋಗಿ, ಅಲ್ಲಿಂದ ಬಿಹಾರ ಸುತ್ತಿ, ಕಲಕತ್ತಾಗೆ ಬಂದು ಅಲ್ಲಿಂದ ಬಾಂಗ್ಲಾದೇಶದೊಳಕ್ಕೆ ನುಸುಳಿ ತ್ರಿಪುರಾದ ಗಡಿಯಲ್ಲಿ ಪುನಃ ಭಾರತದೊಳಕ್ಕೆ ಬಂದು ಬಸ್ಸು ಹತ್ತಿ ಶಿಲ್ಲಾಂಗಿಗೆ ಬಂದಿದ್ದ. ಈ ಊರಲ್ಲಿ ಐರಿಷ್ ಪಾದ್ರಿಗಳ ತುಂಬಾ ಗೋರಿಗಳಿವೆ ನೋಡಿಕೊಂಡು ಹೋಗೋಣ ಅಂತ ಬಂದೆ ಅಂತ ಹೇಳಿದ್ದ. ನಮ್ಮ ಜೊತೆ ಎರಡು ದಿನ ಪ್ರೀತಿಯಿಂದ ಇದ್ದು ಆಮೇಲೆ ಪುನಃ ನೇಪಾಳಕ್ಕೆ ಹೊರಟು ಹೋದ. ನೇಪಾಳದಿಂದ ಕಾಗದ ಬರೆದಿದ್ದ. ಅಲ್ಲಿ ಒಂದು ಹಳೆಯ ಸೈಕಲ್ಲು ಕೊಂಡು ಅದನ್ನು ಹತ್ತಿ ಭಾರತ ದಾಟಿ ಪಾಕಿಸ್ತಾನ, ಕಾಬೂಲ್, ಇರಾನ್‌ಗಳನ್ನು ಹಾದು ಈಗ ಟರ್ಕಿಯ ಬಳಿಯಿಂದ ಇನ್ನೊಂದು ಕಾಗದ ಬರೆದಿದ್ದಾನೆ.

`ಯಾಕೆ ಮಾರಾಯ ಇಷ್ಟೊಂದು ಸುತ್ತುತ್ತೀಯಾ?’ ಅಂತ ಕೇಳಿದ್ದೆ. ಸುಮ್ಮನೇ ಕಣ್ಣು ಮಿಟುಕಿಸಿದ್ದ. ನೋಡಿದರೆ ಆತನಿಗೆ ನನಗಿಂತ ಸಣ್ಣ ವಯಸ್ಸು. ಮದುವೆಯಾದ ಮೇಲೆ ಸುತ್ತುವುದನ್ನ ನಿಲ್ಲಿಸುತ್ತೇನೆ ಅಂತ ನನ್ನ ಮಡದಿಯನ್ನು ನೋಡಿ ಚೇಷ್ಟೆ ಮಾಡಿದ್ದ. ನಿಮ್ಮ ದೇಶದ ಕವಿ ಏಟ್ಸ್ ಗೊತ್ತಾ ಅಂತ ಕೇಳಿದ್ದೆ. ಗೊತ್ತು ಓದಿಲ್ಲ ಅಂತ ಹೇಳಿದ್ದ. ನನಗೆ ಕವನ ಬರೆಯುವುದು ಹೇಗೆ ಅಂತ ಹೇಳಿಕೊಡು ಅಂತ ಕೇಳಿದ್ದೆ. ತಮಾಷೆ ಮಾಡಬೇಡ ಅಂತ ಹೇಳಿದ್ದೆ. ನಾನು ನನ್ನ ಹೆಂಡತಿ ಇಬ್ಬರೂ ಸೇರಿ ನಾವು ಪ್ರೇಮಿಸಿದ್ದು ಮದುವೆಯಾಗಿದ್ದು ಎಲ್ಲವನ್ನೂ ಆತನಿಗೆ ಕತೆ ಹೇಳುವ ಹಾಗೆ ಹೇಳಿದ್ದೆವು. `ನನಗೆ ಆತ ತುಂಬಾ ಇಷ್ಟ ಆದ. ಸ್ಮಾರ್ಟ್ ಇದ್ದಾನೆ’ಅಂತ ಆಕೆ ನನ್ನ ಕಿವಿಯಲ್ಲಿ ಹೇಳಿದ್ದರು. ಅದನ್ನು ನಾನು ಅವನಿಗೆ ಹೇಳಿ ಅವನು ಕೆಂಪಗಾಗಿ ಬಿಟ್ಟಿದ್ದ.

ನಾವೆಲ್ಲಾ ಹೀಗೆಲ್ಲಾ ಸುತ್ತುವುದು ಯಾವಾಗ ? ನನ್ನ ಗೆಳೆಯನೊಬ್ಬ ಮೊನ್ನೆ ಬಾಬಾ ಬುಡನ್‌ಗಿರಿಗೆ ಹೋಗಬೇಕಿದ್ದವನು ಅಯ್ಯೋ ಅಲ್ಲಿ ಚಳಿ ಅಂತ ಹೋಗದೆ ಮಂಗಳೂರಿನಲ್ಲಿ ಮನೆಯಲ್ಲೇ ಉಳಿದುಬಿಟ್ಟಿದ್ದ.
ಯಾಕೋ ಈ ಸಲ ತುಂಬಾ ಜಾಸ್ತಿಯೇ ಬರೆದೆ. ನಿಲ್ಲಿಸುವೆ.

Thursday December 20, 2007

ಈವತ್ತು ಊರಲ್ಲಿ ದೊಡ್ಡ ಪೆರುನಾಳ್

Filed under: ಹಾಡು-ಪಾಡು — Rasheed @ 10:17 pm

ಈವತ್ತು ಊರಲ್ಲಿ ದೊಡ್ಡ ಪೆರುನಾಳ್ ಅಂದರೆ ಬಕ್ರೀದ್. ಅಮ್ಮ ಕರೆದಿದ್ದಾರೆ. ಎಂದಿನಂತೆ ಹೋಗಲಾಗದೆ ಕೂತಿದ್ದೇನೆ.ನನಗೆ ಯಾವಾಗಲೂ ಹೀಗೆಯೇ .ಅಲ್ಲಿ ಹೋಗಲಾರೆ.ಇಲ್ಲಿ ಇರಲಾರೆ. ಕವಿತೆ ಬೇಕಾದರೆ ಬರೆಯಬಲ್ಲೆ! ಸುಮಾರು ೨೨ ವರ್ಷಗಳ ಹಿಂದೆ  ಹಬ್ಬಕ್ಕೆ ಹೋಗದೆ ಕಳ್ಳ ಕೆಲಸಗಳ ನಡುವೆ ಬರೆದ ಕವಿತೆಯನ್ನು ಇಲ್ಲಿ ಪೋಸ್ಟ್ ಮಾಡುತ್ತಿರುವೆ.

ಹಜ್‌ಹಬ್ಬದ ನೆನಪು…. 

ಸಣ್ಣಗೊಮ್ಮೆ ಹಿಡಿದ ಜಡಿ ಜರ್ರೋಮಳೆ
ಬಾಳೆಯೆಲೆ ಮೇಲೆ ಹಜ್ಜಿಯಬ್ಬದ ಹನಿ
ಬತ್ತಲು ಬಚ್ಚಲ ಮಾಡಿನಿಂದಿಳಿದ ಮೋಡ ಬಿಸಿಲುಕೋಲು

ಹಬೆದುಂಬಿ ಮೈಮಿರುಗಿ ಹಜ್ಜಿಯಬ್ಬದ
ನೀರು ಸೋಕುವಲ್ಲೆಲ್ಲ ಉಮ್ಮಗುನುಗುನಿಸಿ
ಪೆರುನಾಳಿನ ಹಾಡು.

 ಬೆನ್ನೊರಸಿ ಉಡಿದಾರಕ್ಕೆ
ಮುಂಡುಡಿಸಿ, ಕಿವಿ ಎಳೆದು ಬೈತಲೆಯಲ್ಲಿ
ಬೆರಳಿರಿಸಿ ಪಾವಲಿ ಉಡಿತುಂಬಿ,
ಅತ್ತರು ಪೂಸಿ ಕಿವಿಯಲ್ಲಿ ಊದಿ, ದಾರಂದದ
ಮುಂದೆ ತಂಗಿ ‘ಅಲೀಮಾ’ ಚಾಚಿ ಕೈಚಾಚಿ
ಕೈಯೆಲ್ಲ ಮದರಂಗಿ ಕೆಂಪು ಹಕ್ಕಿ, ಕಿವಿಯೆಲ್ಲ ಬೆಳ್ಳಿ
ಎಸಳೆಲ್ಲ ಝಮಕಿ,ಅಂಗಳದ ಹಸಿಮಣ್ಣ ಮೇಲೆ ಧುಮುಕಿ.
ಬಿಳಿ ಮಲ್ಲಿಗೆಯ ಮಾಲೆ ಮುಡಿಯ ಮೇಲೆ.
ಹುಡುಗ ಕಾಡೊಳಗೆ ಅಲ್ಲಾಕರೆದಂತೆ ಪಳ್ಳಿಗೆ
ಬಾಪಾನ ಹಿಂದೆ, ‘ಅಲ್ಲಾಹು ಅಕ್‌ಬರ್’abraham_isaac.jpg

ಕಾಡೊಳಗೆ ಕರೆದಂತೆ, ಹನಿಯೊಳಗೆ ಕರೆದಂತೆ
ಕಾಡಿನೊಳಗಡೆ ಕರೆದಂತೆ ಮಗನ ಅಲ್ಲಾನ ಕಡೆಗೆ
ಅಲ್ಲಿ ಮರಳು ಗಾಡಿನ ‘ಕಹಬಾ’ದ
ಅತ್ತಕಡೆ ಇಬ್ರಾಹಿಂ ನೆಬಿ ಮಗ ಇಸ್‌ಮಾಯೀಲನ
ಕೊರಳ ಅಲ್ಲಾಹನಿಗೆ ಕೋಯ್ದು ಕೊಡುವಂತೆ,
ದಿಕರಿಡುತ್ತವೆ ಕಿವಿಯ ಒಳಗೆ ಕಾಡನಡುವೆ.

ಉಮ್ಮನ ಪಾವಲಿ ಮುಂಡುಡಿಯಲ್ಲಿ ಕಣ್ಣ ತಬ್ಬುತ್ತದೆ.
ಕರಿದ ನೇಂದ್ರ ಕಾಯಿ ನಾಲಗೆಯಪ್ಪುತ್ತದೆ
ಸುಯ್ಯೋಹನಿಯಲ್ಲಿ ಕಿವಿದುಂಬುತ್ತದೆ, ಮರದ ಹನಿಕಣ್ಣು
ತಂಗಿಯ ಕಿವಿಯ ಬೆಳ್ಳಿ ತೊಟ್ಟಿಕ್ಕುತ್ತದೆ. ಬಾಪಾನ ಹಿಂದೆ
ಅಲ್ಲಾನ ಕಡೆಗೆ.

ಇರುವುದೊಂದೇ ಬಾಪಾ, ಹಿಂಬಾಲಿಸಲಿಕ್ಕಿರುವುದೊಂದೇ ಬಾಪಾ
ಈ ಇಷ್ಟು ಮಳೆಯ ಕಾಡಿನಲ್ಲಿ ಹನಿವ ಹನಿಯೆಲ್ಲ
ಬಾಪಾ ಕರೆದಂತೆ, ನೆಲವೆಲ್ಲ ಪಸೆಯಿಡಿದು ಜಾರುಜಾರಿಗೆ
ದೂರ ಸರಿದಂತೆ ಬಾಪಾ ಕಾಲುರೋಡಿನೊಳಗೆ
ಅಲ್ಲಾನ ಕಡೆಗೆ.

ಹರಿದ ತೊರೆ ಅಡಿಕೆ ಪಾಲದ ಮೇಲೆ ಬಾಪಾ
ನಡೆದಂತೆ ನಡುಗುತ್ತಾ ಹುಡುಗ,
ನಡುಗುತ್ತ ಅಡಿಗಡಿಗೆ ಅಲ್ಲಾನ ಕರೆಯುತ್ತ ಹುಡುಗ.

ಕಣ್ಣ ಅಗಲಕ್ಕೆಲ್ಲ ಅಲ್ಲಾ, ನದಿ ಹರಿದಂತೆ ಕೆಳಗೆ
ಅಲ್ಲಾ, ಆಕಾಶವೆಲ್ಲ ಕರಿದುಂಬಿ ಹರಿದಂತೆ
ಅಲ್ಲಾ, ಮರದಮರದ ತೊಗಟಿ ಕರಿಗಟ್ಟಿ ಬೇರು
ಪೊದೆಯೆಲ್ಲ ನೀರು ಮುಂಡು ತೊಯ್ಸಿಸಿಕೊಂಡು
ನಡೆವ ಹುಡುಗನೆದೆಯಲ್ಲೆಲ್ಲ ಅಲ್ಲಾನ ಕಡೆಗೆ ನಡೆವ ಬಾಪಾ.

ಹರಿವ ತೊರೆದಾಟಿ ಮುಳಿ ಹುಲ್ಲ ನೆಲದಲ್ಲಿ
ಕಾಲೊಸರುವಲ್ಲೆಲ್ಲಾ ಅಕ್ಕಿ ಹಿಟ್ಟಿನ ಮೇಲೆ
ನಾದಿದಂತೆ ಅಲ್ಲಾನ ಹೆಜ್ಜೆ.

 ಪಳ್ಳಿಯ ಪಡಿಯೇರಿದ
ಮೇಲೆ ಬಾಪಾ ಅಲ್ಲಾನ ಮುಂದೆ ‘ಅಲ್ಲಾಹು ಅಕ್‌ಬರ್’
ಹುಡುಗ ನುಡಿ ತುಂಬಿ ಹರಿವ ಪಾವಲಿಯಲ್ಲೆಲ್ಲ
ಉಮ್ಮ ಅಳುವಂತೆ ಪಳಿಯಿಂದೆಲ್ಲಿಂದಲೋ ಅಲ್ಲಾ
ಕರೆದಂತೆ ‘ಕಹಬಾ’ದ ಕಡೆಗೆ, ಕಾಡಿನಲ್ಲೆಲ್ಲೋ
ಬಾಪಾ ಪುಟ್ಟ ಹುಡುಗನ ಬಿಟ್ಟು ನಡೆದಂತೆ ಎಲ್ಲೋ
‘ಅಲ್ಲಾಹು ಅಕ್‌ಬರ್’.

Saturday December 15, 2007

ಚೆರ್ರಿ ಹೂವು ಮತ್ತು ಚೈನಾದ ಕತೆಗಾರ್ತಿ

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 11:04 pm

 sc00077b1e-1.jpgಕತೆಯೊಂದನ್ನು ಬರೆಯಲು ಹೋರಾಡುತ್ತಾ ಇದೀಗ ಅದರಿಂದ ತಪ್ಪಿಸಿಕೊಳ್ಳಲು ಈ ಕಾಗದವನ್ನು ಬರೆಯುತ್ತಿರುವೆ. ಕತೆಯನ್ನು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ ಆನಂದಿಸುತ್ತಾ ಮನಸ್ಸಿನಲ್ಲಿಯೇ ಮುಗಿಸಿ ಕೂರುವುದು ಎಂತಹ ಸುಲಭದ ವಿಷಯ. ಆದರೆ ಅದನ್ನೇ ಕಾಗದದಲ್ಲಿ ತರುವುದು,ಪಾತ್ರಗಳನ್ನು ಜೋಡಿಸುವುದು, ಅವುಗಳ ಬಾಯಿಂದ ಮಾತುಗಳನ್ನು ಹೇಳಿಸುವುದು ಎಂತಹ ರೇಜಿಗೆಯ ಕೆಲಸ. ಈ ಮಹಾ ಮಹಾ ಕತೆಗಾರರೆಲ್ಲಾ ಎಂತಹ ಹಠಮಾರಿ ಮಹಾತ್ವಾಕಾಂಕ್ಷೀ ಮನುಷ್ಯರು ಅಂತ ಯೋಚಿಸಿ ಆಶ್ಚರ್ಯವಾಗುತ್ತಿದೆ.

ನಿನ್ನೆ ಮೊನ್ನೆಯೆಲ್ಲಾ ಇಲ್ಲಿ  ಷಿಲ್ಲಾಂಗಿನಲ್ಲಿ ವಿಪರೀತ ಮಳೆ ಸುರಿಯುತ್ತಿತ್ತು. ಅದಕ್ಕೂ ಮೊದಲು ಈ ಊರ ತುಂಬಾ ಕಾಡು ಚೆರ್ರಿ ಮರಗಳು ನಸುಗೆಂಪು ಹೂ ತುಂಬಿಕೊಂಡು ನಿಂತಿದ್ದವು. ಈ ಊರಿನ ತುಂಬಾ ಬರೇ ಈ ಮರಗಳು ಅನ್ನುವ ಹಾಗೆ. ಅಕಾಲ ಮಳೆ ಸುರಿಯಲು ತೊಡಗಿ ಈ ಮರಗಳೆಲ್ಲಾ ಎರಡು ದಿನ ಲಜ್ಜೆಯಿಂದ ಭಾರವಾಗಿ ನೋವು ತುಂಬಿಕೊಂಡು ನಿಂತಿದ್ದವು. ಇಂದು ಬೆಳಿಗ್ಗೆ ಮಳೆ ನಿಂತು ನೋಡಿದರೆ ಎಲ್ಲಾ ಮರಗಳು ನಸುನಗುತ್ತಿದ್ದವು. ಎಲ್ಲೋ ಅಡಗಿದ್ದ ಬಣ್ಣಬಣ್ಣದ ಪಾತರಗಿತ್ತಿಗಳು ಮತ್ತೆ ಉಲ್ಲಾಸದಿಂದ ಹಾರಲು ಶುರುಮಾಡಿದ್ದವು. ಇನ್ನು ಕೆಲವು ದಿನಗಳಲಿ ಪ್ಲಂ ಮರಗಳು ಆಮೇಲೆ ಪೀಚ್  ಮರಗಳು ಹೀಗೆ ಹೂ ಬಿಡಲು ತೊಡಗುತ್ತದೆ. ಇನ್ನೆಷ್ಟು ಚಿಟ್ಟೆಗಳು ಎಂದು ಆಶೆಯಿಂದ ಕಾಯುತ್ತಿದ್ದೇನೆ.

ಆದರೆ ವರ್ಷಗಳಿಂದ ನಾನು ಒಂದು ಕತೆಯನ್ನೂ ಬರೆದಿಲ್ಲ ಎಂದು ಯೋಚಿಸಿಕೊಂಡು ಮುದುಡಿಹೋಗಿದ್ದೇನೆ. 

(more…)

Sunday December 9, 2007

ರೂಮಿ ಕವಿಯ ಹನ್ನೆರಡು ಪುಟ್ಟ ಕವಿತೆಗಳು

 

 

rumi6.jpg

-೧-

ನೀರೊಳಗೆ ತಿರುಗುತ್ತಿದೆ ನೀರ ಗಾಲಿ,

ತಾರೆ ತಿರುಗುತ್ತಿದೆ ಚಂದ್ರನೊಡನೆ.

ಚಕಿತ ನಾವು ಈ ಇರುಳಲ್ಲಿ,ಅದು ಹೇಗೆ

 ಇಷ್ಟೊಂದು ಬೆಳಕು ಇಲ್ಲಿ !

(more…)

Blog at WordPress.com.