ಓ ಎಳೆಯ ಜೀವಗಳೆ .. ..

ಹಲವು ವರ್ಷಗಳ ಹಿಂದೆ ಮಂಗಳೂರಿನ ಬಳಿ ಐದು ಮಂದಿ ಬಾಲಕಿಯರು ಕೊಳದಲ್ಲಿದೋಣಿ ಮಗುಚಿ ನೀರಲ್ಲಿ ಮುಳುಗಿ ತೀರಿಹೋದರು. ನಾನು ಅವರಲ್ಲಿ ಇಬ್ಬರ ಮೃತದೇಹವನ್ನು ಆಸ್ಪತ್ರೆಯ ಶವ ಕೊಠಡಿಯಲ್ಲಿ ನೋಡಿ ಬಂದಿದ್ದೆ.thegoldendeath_sm.jpg ಮೂಲೆಯಲ್ಲಿ ಇನ್ನೊಬ್ಬ ಗಂಡಸಿನ ಮೃತ ದೇಹವೂ ಇತ್ತು. ಆತ ಮಧ್ಯಾಹ್ನ ಹನ್ನೆರಡು ಗಂಟೆಗೆ ಮನೆಯಲ್ಲಿ ಬಾಗಿಲು ಮುಂದೆ ಮಾಡಿಕೊಂಡು ಉಣ್ಣುತ್ತಾ ಇದ್ದನಂತೆ. ಮುಳುಗಿ ಹೋಗುತ್ತಿರುವ ಬಾಲಕಿಯರು ಕೂಗಿಕೊಳ್ಳುವುದು ಕೇಳಿಸಿಕೊಂಡವನಂತೆ ಉಣ್ಣುತ್ತಿದ್ದಲ್ಲಿಂದ ಹಾರಿ ಎದ್ದು ಕೆರೆಯ ಕಡೆಗೆ ಓಡಿ ನೀರಿಗೆ ಹಾರಿ ತೀರಿಕೊಂಡುಬಿಟ್ಟ. ಅವನಿಗೆ ತುಂಬಾ ಚೆನ್ನಾಗಿ ಈಜಲು ಬರುತ್ತಿತ್ತಂತೆ. ಸಣ್ಣದಿರುವಾಗ ಸೀಬೆಮರದ ಗೆಲ್ಲಿನಿಂದ ಕೆಳಗಿನ ಬಾವಿಗೆ ಹಾರಿ ಮುಳುಗಿ ಮುಷ್ಟಿಯಲ್ಲಿ ಬಾವಿಯ ತಳದ ಮರಳು ಹಿಡಿದುಕೊಂಡು ಮೇಲೆ ಬರುತ್ತಿದ್ದನಂತೆ.

 ಆತನ ಬಾಲ್ಯ ಕಾಲದ ಗೆಳೆಯ ಶವಾಗಾರದೊಳಗೆ ಗೆಳೆಯನ ಮೃತದೇಹದ ಮುಂದೆ ಕಥೆ ಹೇಳುತ್ತಾ ಅಳುತ್ತಿದ್ದ. ತೀರಿ ಹೋದವನ ಹೆಂಡತಿ ಅಳಲು ಬಾರದೆ ಪೆಚ್ಚುಪೆಚ್ಚಾಗಿ ಏನೋ ಹೇಳುತ್ತಿದ್ದಳು.

`ಅವರಿಗೆ ಈಜು ಬರುತ್ತಿತ್ತು ಎಂದು ನಾನು ಹೇಳಲು ಬರುವುದಿಲ್ಲ.. .. ಆದರೆ ಅವರು ಕಡಲಿಗೆ ಹೋಗುತ್ತಿದ್ದರು.. .. ಆದರೆ ನಾನು ಅವರ ಜೊತೆಗೆ ಕಡಲಿಗೆ ಹೋಗಿರಲಿಲ್ಲ.. ..’ ಅನ್ನುತ್ತಿದ್ದಳು. ಕೊನೆಗೆ ಏನೋ ನೆನಪಾದವಳಂತೆ ಅಳಲು ತೊಡಗಿದಳು.

ನನಗೇ ಗೊತ್ತಿಲ್ಲದ ಹಾಗೆ ನಾನು ಈ ಶವಾಗಾರದೊಳಗೆ ಬಂದುಬಿಟ್ಟಿದ್ದೆ. ತೀರಿಹೋದ ಆ ಕೋಮಲ ಬಾಲಕಿಯರ ದೇಹಗಳು, ಆ ಆತನ ಕಠೋರವಾದ  ಆದರೆ ವಿನಾಕಾರಣ ತೀರಿಹೋದ ಆ ದೇಹ,ಅವನ ಗದ್ಗತಿತನಾಗುತ್ತಿರುವ ಬಾಲ್ಯಕಾಲದ ಗೆಳೆಯ ಮತ್ತೆ ಇದೆಲ್ಲವನ್ನೂ ಕಂಡು ಏನೂ ಆಗದಿರುವನಂತೆ ಪ್ರಶ್ನೆಗಳನ್ನು ಕೇಳುತ್ತಿರುವ ನಾನು ! ಯಾಕೋ ನನ್ನನ್ನೇ ಗೋಡೆಗೆ ಡಿಕ್ಕಿ ಹೊಡೆದುಕೊಂಡು ಸತ್ತುಬಿಡಬೇಕು ಅನ್ನಿಸಿತ್ತು.

ಈ ಬಾಲಕಿಯರು ಮುಳುಗಿದ ಕೊಳದ ಹೆಸರು `ಪಿಲಿಕುಳ’ ಅಂದರೆ ಹುಲಿ ನೀರು ಕುಡಿಯುತ್ತಿದ್ದ ಜಾಗ. ಈ ಜಾಗವನ್ನು ಈಗ ಈ ನಗರದ ನಾಗರಿಕರಿಗೆ ದೋಣಿ ವಿಹಾರಕ್ಕಾಗಿ ಚಂದ ಮಾಡಲಾಗಿತ್ತು. ಹದಿಹರೆಯದ ಶಾಲಾ ಬಾಲಕಿಯರು ದೋಣಿಯಲ್ಲಿ ಕುಳಿತು ದೋಣಿ ಕೊಳದ ನಡುವಿಗೆ ಬಂದಾಗ ನಡುವಲ್ಲಿ ಚಿಮ್ಮುತ್ತಿದ್ದ ಕಾರಂಜಿಯ ನೀರು ಮೈಗೆ ಸಿಡಿದು ಅವರು ಆನಂದದಿಂದ ಕೂಗಾಡಿ ತೂರಾಡಿ ದೋಣಿ ಮುಗುಚಿ ಹೋಗಿತ್ತು. ಮುಳುಗಿ ಹೋದವಳು ಮೊದಲಿಗೆ ಒಬ್ಬಳು ಎಂದು ನಂತರ ಇಬ್ಬರು ಎಂದು ಕೊನೆಗೆ ಸೂರ್ಯಕಂತುವ ಹೊತ್ತಿಗೆ ಐವರು ಎಂದು ಗೊತ್ತಾಗಿದೆ. ಮುಳುಗಿ ಹೋದ ಈ ಐವರು ಬಾಲಕಿಯರು ಮತ್ತು ವಿನಾಕಾರಣ ಊಟ ಮಾಡುವಲ್ಲಿಂದ ಎದ್ದು ನೀರಿಗೆ ಹಾರಿದ ಆ ಮೀನುಗಾರ ಆ ಬೆಳದಿಂಗಳಿನ ರಾತ್ರಿ ಮೃತದೇಹಗಳಾಗಿ ಒಂದೇ ಕಡೆ ಮಲಗಿಕೊಂಡಿದ್ದರು.

ಆ ದೋಣಿ ಮಗುಚಿದ ಕೊಳದಿಂದ ಕೊಂಚ ದೂರದಲ್ಲಿ ವಾಮಂಜೂರು ಎಂಬ ಊರಿದೆ. ಆ ಊರಿನ ಒಂದು ಭಾಗ ವರ್ಷಕ್ಕೆ ಒಂದೆರಡು ಬಾರಿ ಕೆಳಕ್ಕೆ ಕುಸಿದು ಹೋಗುತ್ತದೆ. ಮನೆಗಳು ರಸ್ತೆಗಳು ತೆಂಗಿನ ಮರಗಳು ನೋಡುನೋಡುತ್ತಿದ್ದಂತೆ ಎಲ್ಲೋ ಕೆಳಗೆ ಸುರಿದು ಹೋಗುತ್ತದೆ. ಇಂದು ಕಣ್ಣುಮುಂದೆಯೇ ಇದ್ದ ಬಾಳೆಯಗಿಡ ನಾಳೆ ಬೆಳಿಗ್ಗೆ ಪಾತಾಳದಲ್ಲಿರುತ್ತದೆ. ಇಲ್ಲೇ ಫಾತಿಮಾ ಎಂಬ ಬಡ ಹೆಂಗಸೊಬ್ಬಳ ಮನೆಯಿತ್ತು. ಒಂದು ವರ್ಷದ ಹಿಂದೆ ಆಕೆಯ ಗಂಡ ತೀರಿಕೊಂಡಿದ್ದ. ಆರು ತಿಂಗಳ ಹಿಂದೆ ಅಳಿಯ ಹೋದ. ಅನಂತರ ಇದ್ದ ಮಗ ಓಡಿಹೋದ. ಒಂದು ಬೆಳಗ್ಗೆ ಆಕೆ ಬಾಗಿಲು ತೆಗೆದು ನೋಡಿದರೆ ಮನೆಯ ಮುಂದಿನ ನೆಲ ಬಾಯಿಬಿಟ್ಟು ತೆಂಗಿನ ಮರಗಳು ಆಳಕ್ಕೆ ಹೊರಟುಹೋಗಿವೆ. ಈಗ ಈ ಫಾತಿಮಾ ಎಂಬ ಹೆಂಗಸಿನ ವಯಸ್ಸಾದ ತಾಯಿಗೆ ತಲೆಕೆಟ್ಟು ಹೋಗಿದೆ. ಯಾರಾದರೂ ಮಾತನಾಡಿದರೆ ಅಳಲು ತೊಡಗುತ್ತಾಳೆ. ಒಮ್ಮೊಮ್ಮೆ ಹೆದರಿ ಹಾಸಿಗೆ ಒದ್ದೆ ಮಾಡಿಬಿಡುತ್ತಾಳಂತೆ.

ಈಗ ಇದೆಲ್ಲಾ ಯಾಕೆ ನೆನಪಾಗುತ್ತಿದೆ ಗೊತ್ತಿಲ್ಲ? ಕೆಲವು ವರ್ಷಗಳ ಹಿಂದೆ ಇಂತಹದೇ ಒಂದು ಹಗಲು ಉಳ್ಳಾಲದ ಸೋಮೇಶ್ವರ ಕಡಲ ತೀರದಲ್ಲಿ ಬೆತ್ತಲಾದ ಯುವಕನೊಬ್ಬನ ದೇಹ ತೇಲಿಬರುತ್ತಿತ್ತು. ಯಾರದೋ ತೀರಿ ಹೋದವರ ದೇಹ ಎಂದು ಹೋಗಿ ನೋಡಿದರೆ ಆ ದೇಹ ಉಸಿರಾಡುತ್ತಿತ್ತು. ಆಮೇಲೆ ಆಸ್ಪತ್ರೆಗೆ ಕೊಂಡುಹೋದರೆ ಆತನ ತಲೆಗೆ ಪೆಟ್ಟಾಗಿರುವುದು ಗೊತ್ತಾಗಿ ಬ್ಯಾಂಡೇಜು ಹಾಕಿಸಿ ಮಾತನಾಡಿಸಲು ಹೋದರೆ ಆತನಿಗೆ ತಲೆ ಕೆಟ್ಟಿರುವುದು ಗೊತ್ತಾಗಿ ಕಂಕನಾಡಿಯ ಹುಚ್ಚಾಸ್ಪತ್ರೆಗೆ ಸೇರಿಸಿದ್ದರು.

ನಾನು ಆತನನ್ನು ನೋಡಲು ಹುಚ್ಚಾಸ್ಪತ್ರೆಗೆ ಹೋದರೆ ಆತ ನನ್ನನ್ನು ತಬ್ಬಿಕೊಳ್ಳಲು ಬಂದ. ಆತ ಒಬ್ಬಳು ಹುಡುಗಿಯ ಹೆಸರು, ಒಬ್ಬ ಸೂಫಿ ಸಂತನ ಹೆಸರು. ಮತ್ತೊಬ್ಬ ಖ್ಯಾತ ಕಳ್ಳಸಾಗಣೆದಾರನ ಹೆಸರು ಹೇಳುತ್ತಿದ್ದ. ಹೇಗಾದರೂ ನನ್ನನ್ನು ಇಲ್ಲಿಂದ ಬಿಡಿಸು. ಆ ಮೇಲೆ ಅವರನ್ನು ನೋಡಿಕೊಳ್ಳುತ್ತೇನೆ ಎಂದು ನಡುವಲ್ಲಿ ಆಗಾಗ ಅರಬಿ ಭಾಷೆಯ ಶ್ಲೋಕಗಳನ್ನು ಹೇಳುತ್ತಿದ್ದ. ಕೊನೆಗೆ ಅವನನ್ನು ಯಾರು ಬಿಡಿಸಿಕೊಂಡು ಹೋದರು, ಅವನ ಕತೆಯೇನು ಎಂದು ಯೋಚಿಸಲು ನಾನು ಹೋಗಲೇ ಇಲ್ಲ.

ಈ ಇರುಳು ನಾನು ನಿಜಕ್ಕೂ ಪ್ರಾರ್ಥಿಸಬೇಕು ಎಂದು ಕೂತಿರುವೆ. ತೀರಿಹೋದ ಆ ಬಾಲಕಿಯರ ಆತ್ಮಗಳು ತೇಲಿ ಬರಬಾರದೇ ಅನಿಸುತ್ತದೆ. ಅವರಿಗಾಗಿ ರಿಲ್ಕ್‌ನ ಈ ಕವಿತೆಯನ್ನು ಕಳಿಸುತ್ತಿರುವೆ.

ಓ ಎಳೆಯ ಜೀವಗಳೆ ಸುಳಿದಾಡಿ ಈಗ ಮತ್ತೆ

ಹರಿದು ಹೋಗುವ ಈ ತಣ್ಣನೆ ಉಸಿರೊಳಗೆ

ನಿಮ್ಮ ಮಿದು ಕೆನ್ನೆಯಲ್ಲಿ ಅದು ಕಂಪಿಸಲಿ ಮತ್ತೆ ಬೇರಾಗಲಿ

ನಿಮ್ಮ ಹಿಂದಿಂದ ಕಂಪಿಸುವುದದು ಮತ್ತೆ
 
ಓ ಪುಣ್ಯವಂತರೆ ಇಡಿಯಾಗಿ ಇರುವವರೆ

ಹೃದಯಗಳು ತೊಡಗಿರುವಂತೆ ಕಂಡವರೆ

ಬಿಲ್ಲಿಗೆ ಬಾಣವಾದವರೆ, ಬಾಣಕ್ಕೆ ಗುರಿಯಾದವರೆ

ಹೊಳವೆ ಕಣ್ಣಹನಿ ನಗುವ ತುಟಿಯವರೆ
 
ಹೆದರದಿರಿ ನರಳಲು- ಹಿಂದಿರುಗಿಸಿ

ಆ ಭಾರವನು ಭೂಮಿಯ ಭಾರಕೆ

ಭಾರ ಪರ್ವತಗಳು, ಕಡಲುಗಳು ಭಾರ

ಸಣ್ಣ ಮರಗಳು ನೀವು ನಟ್ಟಿದ್ದು ಸಣ್ಣದಿರುವಾಗ

ಈಗ ಆಗಿದೆ ಆಗಿಂದ ಮತ್ತೂ ಭಾರ.

ಇಲ್ಲ ಈಗ ಹೊತ್ತು ಒಯ್ಯುವಂತೆ.
ಆದರೆ ಗಾಳಿಗಳು…. ಆಕಾಶಗಳು.. ..
.. .. .. .. .. .. .. .. .. ..

2 Comments

  1. Posted ಸೋಮವಾರ November 19, 2007 at 8:29 am | Permalink

    ಪ್ರೀತಿಯ ರಶೀದ್,

    ನಿಮ್ಮ ಪ್ರಾರ್ಥನೆಯಲ್ಲಿ ನನ್ನ ಸ್ವರ ಕೂಡಾ ಇದೆ. ಬಿಲ್ಲಿಗೆ ಬಾಣವಾಗಿ, ಬಾಣಕ್ಕೆ ಗುರಿಯಾಗಿ..

    ತುಂಬ ದಿನಗಳ ನಂತರದ ಆತ್ಮೀಯ ಬರವಣಿಗೆ. ಮನಸ್ಸು ಇಬ್ಬನಿಯಲ್ಲಿ ಮಿಂದ ಚುಮುಚುಮು ಬೆಳಗಾಗಿದೆ.

    ಪ್ರೀತಿಯಿಂದ
    ಸಿಂಧು

  2. Posted Friday November 23, 2007 at 6:57 pm | Permalink

    ಬರಹ ತಲ್ಲಣಗೊಳಿಸಿತು.


Post a Comment

Your email is never published nor shared. Required fields are marked *
*
*