The Mysore Post

Wednesday November 28, 2007

ಹೋಗದಿರಿ ಹೀಗೆ ಮೆಲ್ಲಗೆ ಆ ಸುಖದ ಇರುಳಿನೊಳಗೆ

Filed under: ಅನುವಾದಗಳು — Rasheed @ 7:31 pm

ನನ್ನ ತೀರಾ ಹತ್ತಿರದ ಗೆಳೆಯನ ತಂದೆ ಇಂದು ಮುಂಜಾನೆ ತೀರಿ ಹೋದರು.ಒಂದು ವಾರದ ಹಿಂದೆ ನನ್ನ ಮಾವ ತೀರಿ ಹೋದರು.ಇಬ್ಬರಿಗೂ ವಯಸ್ಸಾಗಿತ್ತು. ಮತ್ತು ಇಬ್ಬರೂ ಅವರವರ ರೀತಿಯಲ್ಲಿ ಬೆರಗು ಹುಟ್ಟಿಸುವಷ್ಟು ಸಮರ್ಥರಾಗಿದ್ದರುಎರಡು ಮೂರು ದಿನಗಳ ಹಿಂದೆ ನನ್ನ ಗೆಳೆಯ Dylan Thomas ಬರೆದ ಈ ಕವಿತೆಯನ್ನು ನೆನಪಿಸಿಕೊಂಡು ಮಾತನಾಡುತ್ತಿದ್ದ. ಅದನ್ನು ಈಗ ಕೂತು ಕನ್ನಡಕ್ಕೆ ಅನುವಾದಿಸಿರುವೆ.  ಹೋಗದಿರಿ ಹೀಗೆ ಮೆಲ್ಲಗೆ ಆ ಸುಖದ ಇರುಳಿನೊಳಗೆ

(more…)

Monday November 26, 2007

ಕಡಲು, ಕನ್ನಡ ಮತ್ತು ಮುಳುಗುತ್ತಿರುವ ಹಡಗು

Filed under: ಅಲೆಮಾರಿಯ ದಿನಚರಿ — Rasheed @ 7:29 pm

ಹಲವು ವರುಷಗಳ ಮೊದಲು ಒಂದು ಸಂಕ್ರಾಂತಿಯ ಮಾರನೇ ದಿನ ವಿಮರ್ಶಕ ಪ್ರೊಫೆಸರ್ ಕಿ.ರಂ.ನಾಗರಾಜರನ್ನ ಬೈಕಿನಲ್ಲಿ ಕೂರಿಸಿಕೋಂಡು ಮಂಗಳೂರಿನ ಬೆನ್ನ ಹಿಂದೆ ಇರುವ ಒಂದು ಅಪರೂಪದ ಜಾಗಕ್ಕೆ ಕರೆದುಕೊಂಡು ಹೋಗಿದ್ದೆ. ಈ ಜಾಗ ತುಂಬಾ ಅಪರೂಪ.ಯಾಕೆಂದರೆ ಈ ಜಾಗ ಕೆಲವೇ ಕೆಲವರಿಗೆ ಗೊತ್ತಿದೆ ಮತ್ತು ಇಲ್ಲಿ ಎರಡು ದೊಡ್ಡ ನದಿಗಳು ಕಡಲನ್ನು ಸೇರುತ್ತದೆ.ಇಲ್ಲಿ ನಿಂತರೆ ಯಾವುದು ಯಾವ ನದಿ ಮತ್ತು ಯಾವುದು ಕಡಲು ಎಂದು ಗೊತ್ತಾಗುವುದಿಲ್ಲ. ಮುಳುಗುತ್ತಿರುವ ಸೂರ್ಯ ಇದೇ ಹೊತ್ತಲ್ಲಿ ಎಲ್ಲಿ ಉದಯಿಸುತ್ತಿರುವ ಎಂದು ಗೊತ್ತಾಗುತ್ತಿದೆ ಎಂದು ಅನಿಸುತ್ತದೆ. ಯಾವುದೋ ಒಂದು ದೇಶ, ಯಾವುದೋ ಒಂದು ಕಾಲ ಕಣ್ಣ ಮುಂದೆ ಕಾಣುತ್ತದೆ. ಕಣ್ಣು ಮುಚ್ಚಿದರೆ ಮುಚ್ಚಿದ ಕಣ್ಣೊಳಗೆ ಹಸಿರು ತೇಪೆಗಳು ಸರಿದಾಡುತ್ತವೆ. ಮೀನುಗಾರರ ದೋಣಿಗಳು ಮತ್ತು ಕಡಲ ಹಕ್ಕಿಗಳು ಅಲೆದಾಡುತ್ತಿರುವ ಆತ್ಮಗಳಂತೆ ಓಡಾಡುತ್ತಿರುತ್ತವೆ.kiram.jpg

ಇಲ್ಲಿ ಕೂತುಕೊಂಡು ಕನ್ನಡದ ಖ್ಯಾತ ವಿಮರ್ಶಕರಾದ ಪ್ರೊಫೆಸರ್ ಕಿ.ರಂ.ನಾಗರಾಜ್  ಪುಟ್ಟ ಬಾಲಕನಂತೆ ಮಳೆಗಾಲದಲ್ಲಿ ಈ ಕಡಲು ಹೇಗಿರುತ್ತದೆ ಎಂದು ಕೇಳುತ್ತಿದ್ದರು. ನಾನು ಮಹಾ ಮಳೆಗಾಲದಲ್ಲಿ ಕಡಲನ್ನು ನೋಡಿದವನಂತೆ ಭೂಮಿ ಆಕಾಶ ಕಡಲು ಎಲ್ಲಾ ಒಂದೇ ಆಗಿಬಿಟ್ಟಿರುತ್ತದೆ. ಎಲ್ಲವೂ ಮಂಜು ಮುಸುಕಿದಂತೆ… ಎಂದು ಹೇಳುತ್ತಿದ್ದೆ.

ಆ ಮೇಲೆ ಈ ಜಾಗಕ್ಕೆ ಬೆಳದಿಂಗಳ ರಾತ್ರಿಯಲ್ಲಿ ಬರಬೇಕು  ಎಂದು ವಿಷಯ ಬದಲಿಸಿದೆ.

ತಿರುಗಿ ಬರುವಾಗ ಅವರಿಗೆ ಒಂದು ಮುಳುಗಿದ ಹಡಗನ್ನು ತೋರಿಸಿದೆ ಮತ್ತು ಮಹಮ್ಮದ್ ಆಲಿ ಎಂಬ ಸಾಹಸಿ ಈಜುಗಾರನ ಕತೆ ಹೇಳಿದೆ. ಈ ಮುಳುಗಿದ ಹಡಗು ಅಲ್ಲಿ ಮುಳುಗಿ ಆಗಲೇ ಆರೇಳು ವರ್ಷಗಳಾಗಿತ್ತು. ಇಲ್ಲಿ ಮುಳುಗುವ ಮೊದಲು ಇದು ಹಾಂಕಾಗಿನ ಒಬ್ಬ ಚೀನೀ ವರ್ತಕನಿಗೆ ಸೇರಿತ್ತು. ಅದು ಎಲ್ಲೋ ಸಾಗರದ ನಡುವಲ್ಲಿ ಇನ್ನೊಂದು ಹಡಗಿಗೆ ಡಿಕ್ಕಿ ಹೊಡೆದು ಹಾಳಾಗಿ ಅದನ್ನು ಒಡೆದು ತೂಕಕ್ಕೆ ಕಬ್ಬಿಣವನ್ನಾಗಿ ಮಾರಲು ಈ ಕಡಲ ತಡಿಗೆ ತಂದಿದ್ದರು. ದಡದ ಹತ್ತಿರ ಬಂದಂತೆ ಅದು ಕಡಲ ಕೊರೆತಕ್ಕೆ ಸಿಲುಕಿ ಮರಳಿನೊಳಗೆ ಹೂತು ಹೋಗಲು ತೊಡಗಿ ನಾನು ಅದನ್ನು ಕಿ.ರಂ ಗೆ ತೋರಿಸುವಾಗ ಅದರ ಚಾವಣಿ ಮಾತ್ರ ಕಾಣುತ್ತಿತ್ತು. (more…)

Sunday November 18, 2007

ಓ ಎಳೆಯ ಜೀವಗಳೆ .. ..

Filed under: ಮಾತಿಗೂ ಆಚೆ — Rasheed @ 10:42 pm

ಹಲವು ವರ್ಷಗಳ ಹಿಂದೆ ಮಂಗಳೂರಿನ ಬಳಿ ಐದು ಮಂದಿ ಬಾಲಕಿಯರು ಕೊಳದಲ್ಲಿದೋಣಿ ಮಗುಚಿ ನೀರಲ್ಲಿ ಮುಳುಗಿ ತೀರಿಹೋದರು. ನಾನು ಅವರಲ್ಲಿ ಇಬ್ಬರ ಮೃತದೇಹವನ್ನು ಆಸ್ಪತ್ರೆಯ ಶವ ಕೊಠಡಿಯಲ್ಲಿ ನೋಡಿ ಬಂದಿದ್ದೆ.thegoldendeath_sm.jpg ಮೂಲೆಯಲ್ಲಿ ಇನ್ನೊಬ್ಬ ಗಂಡಸಿನ ಮೃತ ದೇಹವೂ ಇತ್ತು. ಆತ ಮಧ್ಯಾಹ್ನ ಹನ್ನೆರಡು ಗಂಟೆಗೆ ಮನೆಯಲ್ಲಿ ಬಾಗಿಲು ಮುಂದೆ ಮಾಡಿಕೊಂಡು ಉಣ್ಣುತ್ತಾ ಇದ್ದನಂತೆ. ಮುಳುಗಿ ಹೋಗುತ್ತಿರುವ ಬಾಲಕಿಯರು ಕೂಗಿಕೊಳ್ಳುವುದು ಕೇಳಿಸಿಕೊಂಡವನಂತೆ ಉಣ್ಣುತ್ತಿದ್ದಲ್ಲಿಂದ ಹಾರಿ ಎದ್ದು ಕೆರೆಯ ಕಡೆಗೆ ಓಡಿ ನೀರಿಗೆ ಹಾರಿ ತೀರಿಕೊಂಡುಬಿಟ್ಟ. ಅವನಿಗೆ ತುಂಬಾ ಚೆನ್ನಾಗಿ ಈಜಲು ಬರುತ್ತಿತ್ತಂತೆ. ಸಣ್ಣದಿರುವಾಗ ಸೀಬೆಮರದ ಗೆಲ್ಲಿನಿಂದ ಕೆಳಗಿನ ಬಾವಿಗೆ ಹಾರಿ ಮುಳುಗಿ ಮುಷ್ಟಿಯಲ್ಲಿ ಬಾವಿಯ ತಳದ ಮರಳು ಹಿಡಿದುಕೊಂಡು ಮೇಲೆ ಬರುತ್ತಿದ್ದನಂತೆ.

 ಆತನ ಬಾಲ್ಯ ಕಾಲದ ಗೆಳೆಯ ಶವಾಗಾರದೊಳಗೆ ಗೆಳೆಯನ ಮೃತದೇಹದ ಮುಂದೆ ಕಥೆ ಹೇಳುತ್ತಾ ಅಳುತ್ತಿದ್ದ. ತೀರಿ ಹೋದವನ ಹೆಂಡತಿ ಅಳಲು ಬಾರದೆ ಪೆಚ್ಚುಪೆಚ್ಚಾಗಿ ಏನೋ ಹೇಳುತ್ತಿದ್ದಳು.

`ಅವರಿಗೆ ಈಜು ಬರುತ್ತಿತ್ತು ಎಂದು ನಾನು ಹೇಳಲು ಬರುವುದಿಲ್ಲ.. .. ಆದರೆ ಅವರು ಕಡಲಿಗೆ ಹೋಗುತ್ತಿದ್ದರು.. .. ಆದರೆ ನಾನು ಅವರ ಜೊತೆಗೆ ಕಡಲಿಗೆ ಹೋಗಿರಲಿಲ್ಲ.. ..’ ಅನ್ನುತ್ತಿದ್ದಳು. ಕೊನೆಗೆ ಏನೋ ನೆನಪಾದವಳಂತೆ ಅಳಲು ತೊಡಗಿದಳು. (more…)

Monday November 5, 2007

‘ಪಾತು’ – ಒಂದು ಸಣ್ಣ ಕತೆ

Filed under: ಕತೆ-ಗಿತೆ — Rasheed @ 10:24 pm

paatu-10.jpg

[ಚಿತ್ರ:ಚರಿತಾ]

ಯಾರು ಯಾರೆಂದು ಗೊತ್ತಾಗದಂತೆ ಸುರಿಯುತ್ತಿರುವ ಬೆಳ್ಳನೆಯ ಮಳೆಯಲ್ಲಿ ಪಾತು ತಲೆಯ ಮೇಲೊಂದು ಗೊರಬೆ ಹಾಕಿಕೊಂಡು ನಡೆದು ಹೋಗುತ್ತಿದ್ದಳು. ಗೊರಬೆಯ ಒಳಗೆ ಅವಳ ಮುಖ ಬೆವರಿಕೊಂಡು, ಅವಳ ಕೆನ್ನೆ, ಮೂಗು, ತುಟಿಯ ಮೇಲೆಲ್ಲಾ ಮಳೆಯ ಹನಿಗಳು ಸಿಡಿದು ಅವಳು ಮಳೆಗೆ ಮುಖ ಓರೆ ಮಾಡಿಕೊಂಡು ಕೆಸರಲ್ಲಿ ಹೆಜ್ಜೆ ಹಾಕುತ್ತಿದ್ದಳು. ಅವಳ ನಡುವಲ್ಲಿ ಸೀರೆಯ ಮೇಲೆ ಬಿಗಿದು ಕಟ್ಟಿರುವ ಗೋಣಿಯ ಚೀಲ, ಅವಳ ಕೈಯ್ಯಲ್ಲಿನ ಕಚ್ಚರೆ ತೆಗೆಯುವ ದಬ್ಬೆ ಕತ್ತಿ, ಅವಳ ಕುಳ್ಳನೆ ಕಾಲಿನ ದಪ್ಪಮೀನಖಂಡಗಳು, ಅತ್ತು ಮುಗಿಸಿದಂತೆ ಕೆಂಪಗೆ ಇರುವ ಅವಳ ಮೂಗು, ಕಾದಾಡಿ ಬಂದಂತೆ ಇರುವ ಅವಳ ಕಣ್ಣುಗಳು – ಪಾತು ಇಷ್ಟು ವರ್ಷವಾದರೂ ಅದೇ ಹಳೆಯ ಮದುಮಗಳಂತೆ ಸೊಂಟ     ಬಳುಕಿಸಿಕೊಂಡು, ಗೋಣಿ ಸುತ್ತಿದ್ದ ಅವಳ ಕುಂಡೆ ಅಲ್ಲಾಡುತ್ತಾ ಅವಳು ಕೊಂಚ ಬೆನ್ನು ಬಾಗಿಸಿಕೊಂಡು ಏನೂ ಆಗಿಯೇ ಇಲ್ಲವೆಂಬಂತೆ ಬರೆಇಳಿದು ತಿರುವಲ್ಲಿ ಮರೆಯಾಗಿ ಹೋಗುತ್ತಿದ್ದಳು.ಹಾಗೆಯೇ ಹನಿಯುತ್ತಿರುವ ಮಳೆ, ಹಾಗೇ ಇರುವ ಈ ಮಣ್ಣಿನ ಬರೆ. ಹಾಗೇ ತುಂಬಿಕೊಂಡಿರುವ ಭತ್ತದ ಗದ್ದೆ. ಅದೇ ಇಳಿದುಹೋಗುವ ರಸ್ತೆಯ ತಿರುವು. ರಸ್ತೆಯ ಆಚೆ ಕತ್ತಲು ತುಂಬಿಕೊಂಡಿರುವ ಕಾಫಿಯ ತೋಟ. ತೋಟದ ಆಚೆ ತೀರಿಹೊದವರು ಮಲಗಿರುವ ಮೈದಾನಿಯ ಕಾಡು. ಕಾಡೊಳಗೆ ಕಾಣಿಸುವ ಗೋರಿಯ ಕಲ್ಲುಗಳು. ಕಾಡಿನ ನಡುವೆ ಬಿದ್ದುಹೋಗಿರುವಂತೆ ಕಾಣಿಸುವ ಅರಬಿ ಕಲಿಸುವ ಮದರಸದ ಹಂಚಿನ ಮಾಡು. ಮದರಸದ ಮೇಲೆ ನಿಂತುಕೊಂಡಿರುವ ದೂಪದ ಮರ…

ನಗು ಬಂತು. ಸಣ್ಣದಿರುವಾಗ ಪಾತುವಿನ ಕೊಡೆಯೊಳಗೆ ಸೇರಿಕೊಂಡು ಅರಬಿ ಮದರಸಕ್ಕೆ ಕಾಡು ದಾರಿಯಲ್ಲಿ ನಡೆದು ಹೋಗುವಾಗ ತೋರುಬೆರಳಿಂದ ಗೋರಿಯ ಕಲ್ಲುಗಳನ್ನು ತೋರಿಸಿದಾಗ ಪಾತು ನನ್ನ ತೋರು ಬೆರಳನ್ನು ಕಚ್ಚಿ ರಕ್ತ ಚೀಪಿದ್ದಳು. ತೀರಿಹೋದ ತನ್ನ ತಂದೆ ತಾಯಿ ಮಣ್ಣಲ್ಲಿ ಮಣ್ಣಾಗಿ ಮಲಗಿರುವ ಮೈದಾನಿ ಕಾಡನ್ನು ತೋರುಬೆರಳಿನಿಂದ ತೋರಿಸಬಾರದು ಎಂದು ಬೆನ್ನಿಗೆ ಗುದ್ದಿದ್ದಳುಈಗ ನೋಡಿದರೆ ಏನೂ ಅಲ್ಲದವಳ ಹಾಗೆ ಕೈಯಲ್ಲಿ ಕಾಡು ಕಡಿಯುವ ದಬ್ಬೆ ಕತ್ತಿ ಹಿಡಿದುಕೊಂಡು ಮೈದಾನಿ ಕಾಡಿನ ಕಡೆ ನಡೆದುಹೋಗುತ್ತಿದ್ದಳು.

 

ಪಾತು ಕಾಫಿ ತೋಟದ ಕಾವಲುಗಾರ ಕೊಂಬಿನ ಮೀಸೆ ಪೋಕರ್‌ಕಾಕನ ಮೊದಲನೇ ಹೆಂಡತಿಯ ಮಗಳು. ಪೋಕರ್‌ಕಾಕ ಬಂದರು ಎಂದರೆ ನಾವು ಹುಡುಗರು ಕಾಫಿಯ ತೋಟದ ಗಿಡಗಳ ಕೆಳಗೆ ಚೆಲ್ಲಾಪಿಲ್ಲಿಯಾಗುತ್ತಿದ್ದೆವು. ಪೋಕರ್‌ಕಾಕ ಮುಖದ ತುಂಬ ಆನೆಯ ಕೊಂಬಿನಂತೆ ಮೀಸೆ ಬೆಳೆಸಿಕೊಂಡು, ಕಣ್ಣುಗಳನ್ನು ಹಾರಿಸಿಕೊಂಡು, ತೋಟದ ಗಿಳಿಗಳನ್ನೂಇಣಚಿಗಳನ್ನೂ ಜೋರು ಮಾಡುತ್ತಾ, ಕಾಫಿ ತೋಟದ ಕಾಲುದಾರಿಗಳಲ್ಲಿ ಗಂಬೂಟಿನ ಹೆಜ್ಜೆ ಸದ್ದು ಮಾಡಿಕೊಂಡು ಕಿತ್ತಳೆ ಕದಿಯಲು ಬರುವ ಹುಡುಗರನ್ನು ಓಡಿಸುತ್ತಾ ನಡೆದಾಡುತ್ತಿದ್ದರು. ತೋಟದೊಳಗೆ ಮಂಗಗಳ ವಾಸನೆ ಬಂದರೆ ಸಾಕು ಮಂಗಗಳನ್ನು ಬೈಯುತ್ತಾ, ಮನುಷ್ಯರ ವಾಸನೆ ಬಂದರೆ ಹುಡುಗರನ್ನು ಬೈಯುತ್ತಾ ಪೋಕರ್‌ಕಾಕ ನಡೆದಾಡುತ್ತಿದ್ದರೆ, ಪಾತು ಹುಡುಗರ ಜೊತೆ ಸೇರಿಕೊಂಡು ತಂದೆ ಪೋಕರ್‌ಕಾಕನ ಗಂಬೂಟಿನ ಗುರುತುಗಳನ್ನು ನೆಲದಲ್ಲಿ ಪತ್ತೆ ಹಿಡಿಯುತ್ತಾ ಗಾಳಿಯಲ್ಲಿ ತಂದೆಯ ಮೈಯ ವಾಸನೆಯನ್ನು ಕಂಡು ಹಿಡಿಯುತ್ತಾ ತಂದೆ ಆ ಕಡೆ ನಡೆಯಲು ಈ ಕಡೆ ನುಸುಳುತ್ತಾ, ತಂದೆ ಈ ಕಡೆ ಬರಲು ಆ ಕಡೆ ಅಡಗುತ್ತಾ ಕಾಡುಕೋಳಿಯಂತೆ ಕಾಫಿ ತೋಟದೊಳಗೆ ನಡೆದಾಡುತ್ತಿದ್ದಳು.

(more…)

Blog at WordPress.com.