The Mysore Post

Monday October 29, 2007

ಶನ್ಯಾಶಿ ಸಿಕ್ಕಿದಳು

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:32 pm

 

ಕೆಲವು ವರುಷಗಳ ಹಿಂದೆ world cup football ನಡೆಯುತ್ತಿದ್ದಾಗ ಒಬ್ಬನಿಗೇ ಬೇಸರವಾಗಿ ಎಂದಿನ ಹಾಗೆ ಮಂಗಳೂರಿನ ಬೀದಿಗಳಲ್ಲಿ ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದೆ. ಹಾಗೇ ನೋಡಿದರೆ ನೆಹರೂ ಮೈದಾನದಲ್ಲಿ football ಆಡುತ್ತಿದ್ದರು. ಜನ ಸೇರಿದ್ದರುshanyasi2.jpg. ಮೈದಾನದ ಕೊನೆಯಲ್ಲಿ ರಾಜಸ್ತಾನದ ದೊಂಬರಾಟದ ಕುಟುಂಬವೊಂದು ಡೇರೆ ಬಿಚ್ಚಿ ನೆಲದಲ್ಲಿ ಹರವಿಕೊಂಡು  ಆಕಾಶವನ್ನು  ನೋಡುತ್ತಾ ಕೂತಿತ್ತು. ಹೆಂಗಸೊಬ್ಬಳು ಬಾಯಿ ಬಡಿಯುತ್ತಾ  ಅಳುತ್ತಿದ್ದಳು .ಏಕೆಂದರೆ ಆಕೆಯ ಆರು ವರ್ಷದ ಮಗಳು ಕಾಣೆಯಾಗಿದ್ದಳು. ಕಾಣೆಯಾದ ಆ ಬಾಲಕಿಯ ಹೆಸರು ಶನ್ಯಾಶಿ. ಇದ್ದಕ್ಕಿದ್ದಂತೆಯೇ ಆಕೆ ಜನಜಂಗುಳಿಯಲ್ಲಿ ಕಾಣೆಯಾಗಿದ್ದಳು. ಆಕೆಯಿಲ್ಲದೆಯೇ ತಿರುಗಿ ಹೋಗುವುದು ಹೇಗೆಂದು ಆ ದೊಂಬರಾಟದ ಕುಟುಂಬಗವೇ ಅಲವತ್ತುಕೊಂಡು ಕೂತಿತ್ತು.

ಮಂಗಳೂರಿನ ನನ್ನ ಗೆಳೆಯರು, ನಾನು ಮತ್ತು ನನ್ನ ಹೆಂಡತಿ ಸುಮಾರು ಇಪ್ಪತ್ತು ದಿನಗಳ ಕಾಲ ಕಾಣೆಯಾದ ಈ ಹುಡುಗಿಯ ಜಾಡನ್ನು ನೋಡುತ್ತಾ ಒಂದು ಪ್ರಪಂಚವನ್ನೇ ಕಂಡೆವು. ಮಗುವನ್ನು ಬೀದಿಸೂಳೆಯರು ಕದ್ದು ಮಾರಿದ್ದಾರೆಂದು ಅವರ ಹಿಂದೆ, ಭಿಕ್ಷುಕರು ಸಾಕುತ್ತಿದ್ದಾರೆಂದು ಅವರ ಹಿಂದೆ, ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರುವ ಮಲಯಾಳೀ ಕುಂಟನೊಬ್ಬನ ಹಿಂದೆ,ಪೊಲೀಸರ ಹಿಂದೆ, ಪತ್ರಕರ್ತರ ಹಿಂದೆ ಹೀಗೇ ತಿರುಗಾಡಿದೆವು.shanyasi.jpg

ಇಪ್ಪತ್ತು ದಿನಗಳು ಕಳೆದು ಬೀದಿ ಗುಡಿಸುವ ದಲಿತ ಹೆಂಗಸೊಬ್ಬಳ ಮನೆಯಲ್ಲಿ ಶನ್ಯಾಶಿ ದೊರಕಿದಳು. ಮಗು ದೊರಕಿದ ರಾತ್ರಿ ಬೆಳದಿಂಗಳಲ್ಲಿ ಆ ದೊಂಬರಾಟದ ತಂಡ ನಮ್ಮ ಸುತ್ತು ಸೇರಿಕೊಂಡು ಹಾಡಿಕೊಂಡು ಕುಣಿದುಕೊಂಡು ನಮಗೆಲ್ಲ ನಾವು ಇರುವುದು ಯಾವ ಕಾಲವೋ ಎಂದು ಅನಿಸಲಿಕ್ಕೆ ಹತ್ತಿತ್ತು.

ಈ ಹುಡುಕಾಟದ ಸಮಯದಲ್ಲಿ ನಮಗೆ ಅಬ್ದುಲ್ ರಜಾಕ್ ಎಂಬ ಭಿಕ್ಷುಕನೂ, ಮಾದೇವಿ ಎಂಬ ಆತನ ಹೆಂಡತಿ ಭಿಕ್ಷುಕಿಯೂ ಪರಿಚಯವಾಗಿದ್ದರು. ಅಬ್ದುಲ್ ರಜಾಕ್ ಎಂಬುವನು ಹರಪನಹಳ್ಳಿಯಲ್ಲಿ ಬಿರಿಯಾನಿ ಹೋಟೆಲಲ್ಲಿ ಕೆಲಸಕ್ಕಿದ್ದನಂತೆ. ಮಾದೇವಿ ಬೆಸ್ತರ ಹೆಂಗಸು. ಇಬ್ಬರೂ ನಡು ವಯಸ್ಸಲ್ಲಿ ಜೊತೆಗೆ ಜೀವಿಸಲು ತೊಡಗಿದರು. ಅಷ್ಟರಲ್ಲಿ ಈ ರಜಾಕ್‌ಗೆ ಒಲೆಯ ಬೆಂಕಿ ಅಲರ್ಜಿಯಾಗಿ ಬಿರಿಯಾನಿ ಕೆಲಸ ಮಾಡಲಾಗದೆ ಅವರಿಬ್ಬರು ಊರೂರು ಭಿಕ್ಷೆ ಬೇಡುತ್ತಾ ತಿರುಗುತ್ತಿದ್ದರು. ಮಂಗಳೂರಿಗೆ ಬಂದವರು ಮಳೆಯಲ್ಲಿ ಸಿಕ್ಕಿಹಾಕಿಕೊಂಡು, ನಂತರ ದೊಂಬರಾಟದವರ ಹುಡುಗಿಯನ್ನು ಹುಡುಕುವ ಕೆಲಸದಲ್ಲಿ ನಮ್ಮ ಜೊತೆ ಸೇರಿಕೊಂಡು ನಮಗೂ ಗೆಳೆಯರಾಗಿಬಿಟ್ಟಿದ್ದರು.

ಆ ಮಗು ಸಿಕ್ಕಿದ ಮೇಲೆ ಅವರೂ ಕಾಣೆಯಾಗಿಬಿಟ್ಟರು. ನಾನೀಗ ಮಂಗಳೂರಲ್ಲಿ ಒಂದೊಂದು ಸಲ ಈ ಅಬ್ದುಲ್ ರಜಾಕ್ ಎಂಬ ಭಿಕ್ಷುಕನನ್ನೂ ಅವನ ಹೆಂಡತಿ ಮಾದೇವಿಯನ್ನೂ ಹುಡುಕುತ್ತಿರುತ್ತೇನೆ.

ಆ ದೊಂಬರಾಟದ ಕುಟುಂಬದ ಹಿರಿಯ ರಾಮೇಶ್ವರ್ ಎಂಬಾತ ಕಳೆದ ವಾರ ರಾಜಸ್ತಾನದ ಆಲ್ವಾರ್‌ನಿಂದ ಫೋನಲ್ಲಿ ಮಾತನಾಡಿದ. ಕಳೆದು ಹೋದ ಬಾಲಕಿ ಸಿಕ್ಕಿದ ಕತೆ ಅವನ ಊರಲ್ಲೆಲ್ಲಾ ದೊಡ್ಡ ಸಂಗತಿಯಾಗಿದೆಯೆಂದೂ ನಾವೆಲ್ಲ ಅವನ ಊರಿಗೆ ಹೋಗಬೇಕೆಂದೂ ಹೋದರೆ ಆತ ಕಿಶನ್‌ಗಡ್ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆಂದೂ ಹೇಳುತ್ತಿದ್ದ.

ನಾನು ಸುಮ್ಮನೇ ಕಾಲದಲ್ಲಿ ಕಳೆದುಹೋಗಿದ್ದೆ.

Wednesday October 24, 2007

ನೂರಾ ಐದು ವರ್ಷಗಳನ್ನು ಕಂಡು ತೀರಿಹೋದರು ರಾಮಣ್ಣ

Filed under: ಮೈಸೂರಿನಿಂದ ಅಂಕಣ — Rasheed @ 6:55 pm

 

ramanna1.jpg

ಕುವೆಂಪು ಅವರಿಗೂ ಸೀನಿಯರ್ ಆಗಿದ್ದ ಹಾಸನ ಅಠಾಣಾ ರಾಮಣ್ಣನವರು ೧೦೫ ವರ್ಷ ಬದುಕಿ ನಿನ್ನೆ ರಾತ್ರಿ ಮೈಸೂರಿನಲ್ಲಿ ತೀರಿಹೋದರು.

ramanna-4.jpg

 ಅವರ ಕುರಿತು ಈ ಹಿಂದೆ ಬರೆದ ಬರಹಕ್ಕಾಗಿ ಇಲ್ಲಿ ಓದಿ

Monday October 22, 2007

ಮಾಜಿ ಮುಖ್ಯಮಂತ್ರಿಯ ಕಾದಂಬರಿಯೂ, ಬುರುಖಾ ಹಾಕಿದ ಹೆಂಗಸೂ

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:17 pm

ಮಂಗಳೂರಲ್ಲಿ ಹಳೆಯ ಮುಖ್ಯಮಂತ್ರಿಯೊಬ್ಬರ ಇನ್ನೊಂದು ಕಾದಂಬರಿಯ ಬಿಡುಗಡೆಯಿತ್ತು. ಕಾದಂಬರಿ ಬರೆದು ಮುಗಿಸಿದ ಮಾಜಿ ಮುಖ್ಯಮಂತ್ರಿ ಖುಷಿಯಿಂದ ಕಂಗೊಳಿಸುತ್ತಿದ್ದರು. ಕನ್ನಡ ಸಾಹಿತ್ಯಕ್ಕೆ ನಿಮ್ಮ ಮುಂದಿನ ಕೊಡುಗೆ ಏನು ಎಂದು ಕೇಳಿದರೆ ಒಂದು ಮಹಾಕಾವ್ಯಕ್ಕೆ ಸ್ಕೆಚ್ ಹಾಕಿಕೊಂಡಿರುವೆ ಎಂದು ಹೇಳಿದರು. ‘ಮಹಾಕಾವ್ಯ ಅಂದರೆ ಹದಿನೆಂಟು ಬಗೆಯ ವರ್ಣನೆಗಳು ಇರುತ್ತದಂತಲ್ಲಾ ಅದೆಲ್ಲವೂ ಇರುತ್ತದಾ?’ ಎಂದು ಕೇಳಿದೆ. ‘ಎಲ್ಲವೂ ಸಿದ್ಧವಾಗಿದೆ’ ಎಂದು ಹೇಳಿದರು. ‘ಇದಕ್ಕೆಲ್ಲ ಸಂಸ್ಕೃತ, ಪಾಲಿ ಇತ್ಯಾದಿ ಓದಿಕೊಂಡಿರಬೇಕಲ್ಲ’ ಎಂದು ಕೇಳಿದೆ. ‘ಎಲ್ಲವೂ ಆಗಿದೆ’ ಎಂದು ಹೇಳಿದರು. ‘ಹಾಗಾದರೆ ನಾವೆಲ್ಲ ಕನ್ನಡಕ್ಕೆ ಬರಲಿರುವ ಇನ್ನೊಂದು ಮಹಾಕಾವ್ಯಕ್ಕಾಗಿ ಕಾದುಕೊಂಡಿರುತ್ತೇವೆ’ ಎಂದೆ. ಅವರು ನಗುಮುಖದಿಂದ ಕೈಕುಲುಕಿ ಎದ್ದು ತಮ್ಮ ಹತ್ತಾರು ಹಿಂಬಾಲಕರೊಡನೆ ಹೊರಟುಹೋದರು.ayesha1.jpg

ಆಮೇಲೆ ನಾನು ತಲೆಗೆ ಏಟುಬಿದ್ದವನಂತೆ ಮಂಗಳೂರಿನ ಬೀದಿಗಳಲ್ಲಿ ಬೈಕು ಓಡಿಸುತ್ತಿದ್ದೆ. ಕೊಂಚ ಹೊತ್ತಲ್ಲಿ ಏನೇನೋ ನೋಡಿದೆ.

ಆದಿನ ರಂಜಾನ್ ಹಬ್ಬವಾಗಿತ್ತು. ಊರಿಗೆ  ಹೋಗಿ ತಾಯಿಯನ್ನು ನೋಡಿರಲಿಲ್ಲ. ಗುರುಪುರ ನದಿಯ ತೀರಕ್ಕೆ ಹೋಗಿ ದೋಣಿಯಲ್ಲಿ ನದಿ ದಾಟುತ್ತಿರುವ ಗಂಡಸರನ್ನು ಹೆಂಗಸರನ್ನು ನೋಡುತ್ತ ಕುಳಿತೆ. ಹೆಂಗಸರು ಬುರುಕ ಹಾಕಿಕೊಂಡು, ಗಂಡಸರು ಮಕ್ಕಳು ಅತ್ತರು ಪೂಸಿಕೊಂಡು ಹೊಸಬಟ್ಟೆ ಹಾಕಿಕೊಂಡು ದೋಣಿಯಲ್ಲಿ ಕುಳಿತು ಹೋಗಿ ಬರುತ್ತಿದ್ದರು.

 ಸಂಕಟಪಡಬಾರದು ಎಂದು ಎಲ್ಲರನ್ನೂ ನಗುಮುಖ ಮಾಡಿಕೊಂಡು ನೋಡಿಕೊಂಡು ಕುಳಿತೆ. ಇವನು ಯಾರೋ ಹೆಂಗಸರನ್ನು ನೋಡುವವನು ಎಂದು ಗಂಡಸರು ದುರುಗುಟ್ಟಿಕೊಂಡು ನೋಡುತ್ತಿದ್ದರು. ಅಲ್ಲಿ ನಿಲ್ಲಲಾಗದ ಮತ್ತೆ ತಿರುಗಾಡಲು ತೊಡಗಿದೆ. (more…)

Monday October 15, 2007

ಇನ್ನೊಂದು ಬಹಳ ಹಳೆಯ ಕವಿತೆ

Filed under: ಹಾಡು-ಪಾಡು — Rasheed @ 10:28 pm

ಅವಳು

avalu.jpg

ಚಂದವಿದ್ದಳು ಗೆಳೆಯ ಅವಳು

ಒಳ್ಳೆ ಮಜಬೂತು ಕುದುರೆ.

ಹಾರಂಗಿ ಅಣೆಕಟ್ಟು ಕಟ್ಟಿಟ್ಟ ನೀರು

ಬಿಟ್ಟಾಗ ನಗುವ ನಕ್ಷತ್ರ ಮೀನು.

ಅವಳು ಕೂದಲು ಬಿಚ್ಚಿಟ್ಟು ತುಟಿಯಲ್ಲಿ

ಕಚ್ಚಿ ಹೇರುಪಿನ್ನು, ನಗುವ ಹಾಗೆ

ಗಲ್ಲದಲ್ಲೊಂದು ಗುಳಿಯಿತ್ತು ಗೆಳೆಯ,

ತುಂಬು ಕೊರಳಿನ ತುಂಬ ಕಾಡು ಹಾಡು.

ಅವಳ ತಟ್ಟನೆಯ ತಿರುವು ತಿರುವುತ್ತ

ಹರಿವ ಕಪ್ಪು ಟಾರಿನ ದಾರಿ ತಗ್ಗು ಕೆಳಗೆ

ಅಲ್ಲಿ ಏಲಕ್ಕಿ ಮಲೆ ಕೆಂಪು ಕಾಫಿಯ ತೋಟ

ಹಸಿರು ಗಾಳಿಗೆ ಉಲಿವ ಬೇಲಿಯೊಳಗೆ

ಚೀಲ ಬುತ್ತಿಯ ತೋಳೆ ಬರಿ ಕಿತ್ತಳೆ.

Friday October 5, 2007

ಸಿಂಗರ್ ಮತ್ತು ಫಾಹಿಯಾನ್ ಯಾನೆ ಗಂಡಸರ ಕಷ್ಟಗಳು!

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:45 pm

 

faxian.jpg

ಇವತ್ತು ಇಲ್ಲೇ ತುರಾದ ಹತ್ತಿರದ ಒಂದು ಹಳ್ಳಿಗೆ ಹೋಗಿದ್ದೆ. ಯಾರೋ ಒಬ್ಬರು ‘ಬನ್ನೀ, ವಿಶ್ವ ಸ್ತನ್ಯಪಾನ ವಾರಾಚರಣೆ ಆಚರಿಸುತ್ತಿದ್ದೀವಿ’ ಅಂತ ಕರೆದಿದ್ದರು. ದಾರಿಯೇನೋ ತುಂಬಾ ಚೆನ್ನಾಗಿತ್ತು. ಮಳೆ ನಿಂತು ಬಿಸಿಲು ಚಾಚಿಕೊಂಡು ನೆಲದಿಂದ ಮೇಲಕ್ಕೆ ಮೋಡಗಳು ಎದ್ದು ನಿಂತು ಹಸಿರು ಬೆಟ್ಟಗಳು ಮೇಲೆ ಹರಡಿಕೊಂಡು ಎಲ್ಲಾ ಕನಸಿನ ಹಾಗೆ ಕಾಣುತ್ತಿತ್ತು. ಹಳ್ಳಿಗೆ ಹೋಗಿ ನೋಡಿದರೆ ಒಂದು ಸಣ್ಣ ಕೋಣೆಯ ಒಳಗೆ ಹತ್ತಾರು ಗ್ರಾಮಗಳ ತಾಯಂದಿರನ್ನು ಕೂರಿಸಿಕೊಂಡು ಒಬ್ಬ ಅಧಿಕಾರಿ ಇಂಗ್ಲೀಷಿನಲ್ಲಿ ಭಾಷಣ ಹೊಡೆಯುತ್ತಿದ್ದ. ಮಗುವಿಗೆ ಎದೆ ಹಾಲು ಉಣ್ಣಿಸುವುದು ಎಷ್ಟು  ಆರೋಗ್ಯಕಾರಿಮತ್ತು ಎಷ್ಟು ಮಿತವ್ಯಯಕಾರಿಅಂತ ವಿವರಿಸುತ್ತಿದ್ದ. ಅರ್ಥವಾಗದಿದ್ದರೂ ತಾಯಂದಿರು ತಲೆಯಾಡಿಸುತ್ತಿದ್ದರು.

ನನಗೆ ಯಾಕೋ ತಲೆನೋವು ಶುರುವಾಗಿತ್ತು. ಆ ತಲೆನೋವು ಇನ್ನೂ ಹೋಗಿಲ್ಲ. ಇಲ್ಲಿ ತಾಯಂದಿರು ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಅಂದರೆ ಗಂಡಂದಿರನ್ನು ಕೇರೇ ಮಾಡುವುದಿಲ್ಲ. ಹಗಲಿಡೀ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಇರುಳಿಡೀ ಎದೆಗೆ ಒತ್ತಿಕೊಂಡು ನಮ್ಮನ್ನು ಹೇಳುವವರು ಕೇಳುವವರು ಯಾರು ಇಲ್ಲ ಎಂದು ಗಂಡಸೊಬ್ಬ ಮೊನ್ನೆ ಗೋಳು ಹೇಳಿಕೊಳ್ಳುತ್ತಿದ್ದ. (more…)

Blog at WordPress.com.