ಒಂದು ಸ್ಟಾಕ್ ಹೋಂ ನೆನಪು
ಈ ಹೊತ್ತು ಒಬ್ಬಳು ಸುಂದರಿಯ ಕುರಿತು ಯೋಚಿಸುತ್ತಾ ಕುಳಿತಿರುವೆ. ನಾಳೆ ಅವಳ ಹುಟ್ಟು ಹಬ್ಬ. ಹಾಗಾಗಿ ಸಲೀಸಾಗಿ ನಿಮಗೆ ಬರೆಯಲೂ ಆಗುತ್ತಿಲ್ಲ. ಒಂದು ಕವಿತೆ ಬರೆಯಲಾ ಅನಿಸುತ್ತಿದೆ. ಹೋಗಲಿ ಬಿಡಿ ಅದೂ ಬೇಡ. ಸುಮ್ಮನೇ ಬರೆಯುತ್ತಾ ಸಲೀಸಾಗುತ್ತಾ ಹೋಗುತ್ತೇನೆ.
ಆಕೆಯನ್ನು ನಾನೂ ಕಂಡದ್ದು ಎರಡೇ ಸಲ. ಅದೂ ಸ್ವೀಡನ್ ನ ಸ್ಟಾಕ್ ಹೋಂ ಎಂಬ ಮಹಾನಗರದಲ್ಲಿ . ಎರಡೂ ಬಾರಿಯೂ ಅವಳು ಎಡಕಣ್ಣಿನ ಕೆಳಗೆ ಬೆಳ್ಳಿಯ ಬಣ್ಣದಿಂದ ನಕ್ಷತ್ರಗಳನ್ನು ಬರೆದುಕೊಂಡಿದ್ದಳು. ಅವಳ ಮೂಗಲ್ಲಿ ನತ್ತು ಇದ್ದಿರಬಹುದ ಎಂದು ಈಗ ನನಗೆ ಅನ್ನಿಸುತ್ತಿದೆ. ಒಂದು ಸಲ ಆಕೆ ನನ್ನನ್ನು ‘ಲೋಟಸ್’ ಎಂಬ ಪಬ್ ನಲ್ಲಿ ಕೂರಿಸಿ ಮಾತನಾಡಿದಳು. ಇನ್ನೊಂದು ಸಲ ಸ್ಟಾಕ್ ಹೋಮ್ ನ ಅರಮನೆಯ ಪಕ್ಕದ ಬೀದಿಯೊಂದರಲ್ಲಿ ನಡೆಸಿಕೊಂಡು ಹೋಗಿ ಆಮೇಲೆ ರೈಲು ಹತ್ತಿಸಿ ಮರೆಯಾದಳು.ಆಕೆ ಆ ನಗರದಲ್ಲಿ ಒಂಟಿ ಹುಡುಗಿ. ಆಕೆಯ ತಂದೆ ಪೋಲೆಂಡ್ ನಿಂದ ವಸಲೆ ಬಂದ ಯಹೂದಿ. ತಾಯಿ ಸ್ಕಾಂಡಿನೇವಿಯನ್ ಸುಂದರಿ. ತಂದೆಯ ಕಡೆಯವರೆಲ್ಲಾ ಹಿಟ್ಲರನ ಮಾರಾಣಹೋಮದ ಬೆಂಕಿಯಲ್ಲಿ ಬೆಂದು ಹೋದವರು.ಈ ಅಂದದ ಸುಂದರಿ ಹುಡುಗಿ ನನ್ನ ಜೊತೆನ ಮಾತನಾಡುವಾಗ ಕಂಪಿಸುತ್ತಾ ಅವಳ ಕೈಯಲ್ಲಿದ್ದ ಕಾಫಿಯ ಬಟ್ಟಲು ಅಲುಗಿ ಮೈಯೆಲ್ಲಾ ಚೆಲ್ಲಿ ಆಮೇಲೆ ಸ್ಸಾರಿ ಅಂತ ನಕ್ಕಿದ್ದಳು. ನಾನು ಆಕೆಯ ಕೈಯಲ್ಲಿ ಕನ್ನಡದ ನನ್ನ ಕತೆಯ ಪುಸ್ತಕವೊಂದನ್ನು ಕೊಟ್ಟು ‘ಪ್ರೀತಿಯಿಂದ’ ಅಂತ ಸಹಿ ಮಾಡಿ ಕಂಪಿಸುತ್ತಾ ಆ ಮಹಾ ಆಕಾಶದ ಕೆಳಗೆ ಒಬ್ಬನೇ ಕಣ್ಣು ತುಂಬಿಕೊಂಡು ಬಂದಿದ್ದೆ.ಯಾಕೋಈಗ ಅವಳ ನೆನಪಾಗುತ್ತಿದೆ. ಸುಮ್ಮನೇ ಕುಳಿತು ರಿಲ್ಕ್ ಕವಿಯನ್ನು ಅನುವಾದಿಸುತ್ತಿರುವೆ. “ಅವಳನ್ನು ಕೂರಿಸಲು ಜಾಗವೆಲ್ಲಿದೆ ನಿನ್ನಲ್ಲಿ? ಈ ಎಲ್ಲ ಭಾರಭಾರದ ಯೋಚನೆಗಳು ನಿನ್ನೊಳಗೆ ಹೋಗಿ ಬಂದು ಕೆಲವೊಮ್ಮೆ ಇರುಳೆಲ್ಲಾ ಅಲ್ಲೇ ಉಳಿದು”.ಲಂಕೇಶ್, ಸ್ವೀಡನ್ ಹೇಗಿತ್ತು ಅಂತ ನಿವು ಕೇಳಿದ್ದೀರಿ. ತೀರಾ ಒಂಟಿಯಾಗಿತ್ತು ಅಂತ ನಾನು ಹೇಳಿದ್ದೆ. ನಾವು ಅಲ್ಲಿ ಹೋದಾಗ autumn ಋತು. ಅದು ಚಿತ್ರಕಾರರಿಗೆ ಹೇಳಿ ಮಾಡಿಸಿದ ಕಾಲ. ಆಕಾಶದ ಬಣ್ಣ, ಎಲೆಗಳ ಬಣ್ಣ, ಹುಲ್ಲು ಗಾವಲಿನ ಬಣ್ಣ ಎಲ್ಲವೂ ಹಳದಿ ಕೆಂಪು ಕಪ್ಪಿನ ನಡುವೆ ನಿಂತುಕೊಂಡು ನಾವು ದೊಡ್ಡದಾದ canvas ನ ನಡುವೆ ನಡೆದಾಡುತ್ತಿರುವಂತೆ ಅನ್ನಿಸುತ್ತಿತ್ತು. ಶಬ್ದಗಳಿಲ್ಲ. ವಾಸನೆಯಿಲ್ಲ. ಮನುಷ್ಯರೂ ತುಂಬಾ ಇಲ್ಲ. ಎಷ್ಟೋ ಮೈಲಿ ಹೋದರೂ ಕೆಲವೊಮ್ಮೆ ಮನುಷ್ಯರೇ ಕಾಣಿಸುವುದಿಲ್ಲ. ನಾನು ನನ್ನ ಪರಿಚಿತ ವಾಸನೆಗಳನ್ನು ಕಾಣದೆ ಮಂಕಾಗಿ ಹೋಗಿದ್ದೆ. ಜೊತೆಗಿದ್ದ ಭಾರತದ ಒಂದೆರಡು ಲೇಖಕ ಲೇಖಕಿಯರು ಕಾಲು ನೆಲದಲ್ಲಿ ನಿಲ್ಲದೆ ವಿಚಿತ್ರವಾಗಿ ನಗುವುದು ಅಳುವುದು ಮಾಡುತ್ತಿದ್ದರು. ನಾನು ಎಲ್ಲರಿಗಿಂತ ಸಣ್ಣವನಿದ್ದೆ. ನಮ್ಮ ಜೊತೆ ಕೂರುವವರು, ಕುಡಿಯುವವರು ತಿನ್ನುವವರು, ನೋಬೆಲ್ ಬಹುಮಾನವನ್ನು ತೀರ್ಮಾನಿಸುವವರೂ, ಎಲ್ಲೋ ಇದ್ದ ಅಜ್ಞಾತ ಲೇಖಕರನ್ನು ಬೆಳಕಿಗೆ ತಂದು ಲೋಕಕ್ಕೆ ತೋರಿಸುವವರು ಆಗಿದ್ದರು. ನನಗೆ ಹೆದರಿಕೆಯಾಗಿ ‘ಪ್ರಜಾಪ್ರಭುತ್ವದಿಂದ ತಪ್ಪಿಸಿಕೊಳ್ಳಲು ಹಕ್ಕಿಯಾಗು, ಗ್ರಂಥಾಲಯಗಳಿಂದ ಹೊರಗಿರುಲು ಕೊಡೆಯಾಗಿ ಹುಟ್ಟು’ ಅಂತೆಲ್ಲಾ ನೋಟ್ ಪುಸ್ತಕಗಳಲ್ಲಿ ಗೀಚುತ್ತಿದ್ದೆ. ಅಂತಹ ಹೊತ್ತಲ್ಲಿ ನನಗೆ ಸ್ವೀಡನ್ ನ ಈ ಹುಡುಗಿ ಮಾತನಾಡಲು ಸಿಕ್ಕಿದ್ದಳು. ಅವಳನ್ನು ಕಂಡಮೇಲೆ ನನಗೆ ಆ ಊರು ನನ್ನದೂ ಕೂಡ ಅಂತ ಅನ್ನಿಸಿಬಿಟ್ಟಿತ್ತು.ಬೇರೆ ಏನು ಬರೆಯಲಿ? ಈಗಾಗಲೇ ತುಂಬಾ ಬರೆದೆ. ಇಲ್ಲಿ ಷಿಲ್ಲಾಂಗಿನಲ್ಲಿ ಇಡೀದಿನ ಮಳೆ ಸುರಿಯುತ್ತಿದೆ. ಬಂಗಾಲ ಕೊಲ್ಲಿಯಿಂದ ಬೀಸಿದ ಸುಂಟರಗಾಳಿ ಇಲ್ಲಿ ಆಕಾಶದ ತುಂಬ ಮೋಡಗಳಿಂದ ತುಂಬಿದೆ. ಈವತ್ತು ಸಂಜೆ ಪುತಿನ ಅವರ ಮಗಳು ಶಾಂತಾ ಅವರ ಮನೆಗೆ ಹೋಗಿದ್ದೆವು. ನಮಗೆ ತುಂಬಾ ಪ್ರೀತಿಬೇಕು ಅನಿಸಿದಾಗ ಅವರ ಮನೆಗೆ ಹೇಳದೇ ಕೇಳದೇ ಹೋಗಿ ಬಿಡುತ್ತೇವೆ.ಇನ್ನು ಏಪ್ರಿಲ್ ತಿಂಗಳ ತುಂಬಾ ಇಲ್ಲಿಯ ಆಕಾಶ ಕಾಮನ ಬಿಲ್ಲಿನಿಂದ ಕೂಡಿರುತ್ತದೆ ಅಂತ ಅವರು ಹೇಳುತ್ತಿದ್ದರು. ಮುಂದಿನ ತಿಂಗಳು ಬಿಸಿಲು ಮತ್ತು ಮಳೆಗೆ ಮದುವೆಯಂತೆ. ಅವರು ಪುಟ್ಟ ಹುಡುಗಿಯಂತೆ ಹೇಳುತ್ತಿದ್ದರು. ನಿಲ್ಲಿಸುವೆ.ಅಲ್ಲಿ ಎಲ್ಲರಿಗೆ ತುಂಬಾ ಪ್ರೀತಿ ಮತ್ತು ನೆನಪು.
Filed under: ಷಿಲ್ಲಾಂಗಿನಿಂದ ಲಂಕೇಶ
“ಇನ್ನು ಏಪ್ರಿಲ್ ತಿಂಗಳ ತುಂಬಾ ಇಲ್ಲಿಯ ಆಕಾಶ ಕಾಮನ ಬಿಲ್ಲಿನಿಂದ ಕೂಡಿರುತ್ತದೆ ಅಂತ ಅವರು ಹೇಳುತ್ತಿದ್ದರು. ಮುಂದಿನ ತಿಂಗಳು ಬಿಸಿಲು ಮತ್ತು ಮಳೆಗೆ ಮದುವೆಯಂತೆ. ಅವರು ಪುಟ್ಟ ಹುಡುಗಿಯಂತೆ ಹೇಳುತ್ತಿದ್ದರು. ನಿಲ್ಲಿಸುವೆ.ಅಲ್ಲಿ ಎಲ್ಲರಿಗೆ ತುಂಬಾ ಪ್ರೀತಿ ಮತ್ತು ನೆನಪು.”
ಯಾಕೋ ಷಿಲ್ಲಾಂಗಿಗೆ ಹೋಗಬೇಕು, ಇವನ್ನೆಲ್ಲ ನೋಡಬೇಕು ಅನ್ನಿಸತೊಡಗಿದೆ… ಓದಿಯೇ ಹೋಗಿಬಂದಂತಾಯಿತು ಎಂದೆಲ್ಲ ಸುಳ್ಳು ಹೇಳಲಾರೆ…
Dear Rasheed: I am reading this en route to Stockholm, in the lounge at Charles de Gaulle. I’m so glad I read this piece of beauty. I’ll be there only a night and a day, and I’ll visit only factories, but after reading this, I’m taking eyes and ears that’ll see and hear differently. Thanks!
tiliyaada sarala baraha.
‘. . granthaalayada horagiralu kodeyaagi huttu..’- yentha kalpane!!!
ಮಳೆಗಾಲದ ಸೆಖೆಯ ಹಾಗಿದೆ ನಿಮ್ಮ ಲೇಖನ.
ಸ್ವೀಡನ್ನಿನ ಸುಂದರಿಗೊಂದು ರೂಪ ಕಟ್ಟಲು ಪರದಾಡುತ್ತಿದ್ದೇನೆ. ಆದರೆ ಎಡಕಣ್ಣಿನ ಕೆಳಗೆ ಬೆಳ್ಳಿ ನಕ್ಷತ್ರ ಊಹೆಗೆ ನಿಲುಕುತ್ತಲೇ ಇಲ್ಲ!
ಇರಲಿ. ಪ್ರಜಾಪ್ರಭುತ್ವದಿಂದ ತಪ್ಪಿಸಿಕೊಳ್ಳಲು ಹಕ್ಕಿಯಾಗುವುದೇನೂ ಕೆಟ್ಟ ಐಡಿಯಾ ಅಲ್ಲ. ಗ್ರಂಥಾಲಯದ ಹೊರಗಿರಲು ಕೊಡೆಯೇ ಆಗಿಹುಟ್ಟಬೇಕನ್ನೋದು ಮಾತ್ರ ಮಜವಾಗಿದೆ!
ಇದು ಕಲ್ಪನೆಯ ಕಥೆಯಾಗಿರದಿರಲಿ ಅಂತ ಹಾರೈಸ್ತೇನೆ!!