The Mysore Post

Saturday September 29, 2007

ಪುಟ್ಟ ಮೂರು ರೂಮಿ ಕವಿತೆಗಳು

Filed under: ಅನುವಾದಗಳು, ಹಾಡು-ಪಾಡು — Rasheed @ 11:54 pm

 

[ಮೌಲಾನಾ ಜಲಾಲುದ್ದೀನ್ ರೂಮಿ ಬದುಕಿದ್ದರೆ ಅವರಿಗೆ ನಾಳೆ ಭಾನುವಾರಕ್ಕೆ ಎಂಟುನೂರು ವರ್ಷಗಳಾಗುತ್ತಿತ್ತು.ರೂಮಿಯ ಕುರಿತು, ಅವರ ಹುಟ್ಟೂರಿನ ಕುರಿತು, ಈಗ ಆ ಊರು ಹೇಗಿದೆ ಎಂಬುದರ ಕುರಿತು ನೀವು ಬಿ.ಬಿ.ಸಿ ಯ ಈ ತಾಣವನ್ನು ನೋಡಬಹುದು .]

(more…)

Wednesday September 26, 2007

ಕತೆ ಮತ್ತು ಮಹಾತ್ವಾಕಾಂಕ್ಷೆ

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 11:47 pm

ಅಲ್ಲಿ ನಿಮ್ಮನ್ನೆಲ್ಲ ನೋಡಿ ತಿರುಗಿ ಬಂದು ಇಲ್ಲಿ ಷಿಲ್ಲಾಂಗ್ ಎಂಬ ನನ್ನ ಕನಸಿನ ಲೋಕದಲ್ಲಿ ಒಬ್ಬನೇ ಕುಳಿತು ಕೊಂಡಿದ್ದೇನೆ. ಹೂಬಿಟ್ಟಿದ್ದ ಮರಗಳಲ್ಲೆಲ್ಲಾ ಈಗ ಹಣ್ಣುಗಳು ತುಂಬಿಕೊಂಡಿವೆ. ಕಿತ್ತಳೆ ಮಾರುತ್ತಿದ್ದ ಹುಡುಗಿಯರೆಲ್ಲಾ ಈಗ ಎಂತ ಎಂತಹದೋ ಹಣ್ಣುಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಕುಳಿತಿದ್ದಾರೆ. ಮಳೆಬಿಟ್ಟು ಮತ್ತೆ ಮಳೆ ಸುರಿಯುತ್ತಿದೆ. ಇಂದು ಸಂಜೆ ಮಳೆಯ ನಡುವೆ ದಾರಿ ಮಾಡಿಕೊಂಡು ಎಲ್ಲ ಕಡೆ ಸುತ್ತಾಡಿ ಹಲವು ಬಗೆಯ ಹಣ್ಣುಗಳನ್ನು ಕೊಂಡು ಒಂದೊಂದನ್ನೇ ತಿನ್ನುತ್ತಾ ಕುಳಿತೆ. ಒಂದು ಹಣ್ಣಿನ ಹೆಸರು ಮಾತ್ರ ಗೊತ್ತಾಯಿತು. ಅದು ‘ಪ್ಲಂ’ ಹಣ್ಣು.plum.jpg ಬಾಕಿಯೆಲ್ಲಾ ಹೆಸರೇ ಗೊತ್ತಿಲ್ಲದ ಹಣ್ಣುಗಳು ನನ್ನ ಬಾಯಿಯಲ್ಲಿ. ನಗುಬಂತು. ಮತ್ತು ನೀವು ಬರೆದ ಪತ್ರಗಳ ಸಾಲುಗಳು ನೆನಪಾಯಿತು. “ನೀನು ಬರೆಯುವಾಗ ಹುಷಾರಿಗಿರಬೇಕು, ತುಂಬಾ ಜನ ನಿನ್ನ ಪತ್ರಗಳನ್ನು ಓದುತ್ತಾರೆ” ಅಂತ ಬರೆದಿದ್ದೀರಿ.

. ಇಲ್ಲಿ ನನಗೆ ಯಾರೂ ಇಲ್ಲ. ಇರುವುದು ನಿಮಗೆ ಪತ್ರ ಬರೆಯುವ ಖುಷಿ. ಇನ್ನೊಂದು ಎಲ್ಲಿ ಬೇಕೆಂದರಲ್ಲಿ ಎಗ್ಗಿಲ್ಲದೆ ಓಡಾಡುವ ಆನಂದ. ಇರುವ ಒಬ್ಬಳು ಹೆಂಡತಿಯನ್ನೂ ಯಾಕೋ ಕನ್ನಡ ನಾಡಿನಲ್ಲೇ ಬಿಟ್ಟು ಬಂದಿರುವೆ. ಬಂದು ಇಲ್ಲಿ ನೋಡಿದರೆ ಮೊದಲು ಚೆನ್ನಾಗಿ ಮಾತನಾಡುತ್ತಿದ್ದ ನಗುತ್ತಿದ್ದ ಹುಡುಗಿಯರೂ ಬಿಗುಮಾನದಿಂದ ಓಡಾಡುತ್ತಿದ್ದಾರೆ. ಯಾಕೋ ಒಂಟಿ ಗಂಡಸಿನ ಕುರಿತು ಈ ಊರಿನವರಿಗೆ ಸಲ್ಲದ ಅನುಮಾನ ಇರುವಂತಿದೆ. (more…)

Saturday September 22, 2007

ಒಂದು ಸ್ಟಾಕ್ ಹೋಂ ನೆನಪು

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 12:10 am

 

ಈ ಹೊತ್ತು ಒಬ್ಬಳು ಸುಂದರಿಯ ಕುರಿತು ಯೋಚಿಸುತ್ತಾ ಕುಳಿತಿರುವೆ. ನಾಳೆ ಅವಳ ಹುಟ್ಟು ಹಬ್ಬ. ಹಾಗಾಗಿ ಸಲೀಸಾಗಿ ನಿಮಗೆ ಬರೆಯಲೂ ಆಗುತ್ತಿಲ್ಲ. ಒಂದು ಕವಿತೆ ಬರೆಯಲಾ ಅನಿಸುತ್ತಿದೆ. ಹೋಗಲಿ ಬಿಡಿ ಅದೂ ಬೇಡ. ಸುಮ್ಮನೇ ಬರೆಯುತ್ತಾ ಸಲೀಸಾಗುತ್ತಾ ಹೋಗುತ್ತೇನೆ.

ಆಕೆಯನ್ನು ನಾನೂ ಕಂಡದ್ದು ಎರಡೇ ಸಲ. ಅದೂ ಸ್ವೀಡನ್ ನ ಸ್ಟಾಕ್ ಹೋಂ ಎಂಬ ಮಹಾನಗರದಲ್ಲಿ . ಎರಡೂ ಬಾರಿಯೂ ಅವಳು ಎಡಕಣ್ಣಿನ ಕೆಳಗೆ ಬೆಳ್ಳಿಯ ಬಣ್ಣದಿಂದ ನಕ್ಷತ್ರಗಳನ್ನು ಬರೆದುಕೊಂಡಿದ್ದಳು. ಅವಳ ಮೂಗಲ್ಲಿ ನತ್ತು ಇದ್ದಿರಬಹುದ ಎಂದು ಈಗ ನನಗೆ ಅನ್ನಿಸುತ್ತಿದೆ. ಒಂದು ಸಲ ಆಕೆ ನನ್ನನ್ನು ‘ಲೋಟಸ್’ ಎಂಬ ಪಬ್ ನಲ್ಲಿ ಕೂರಿಸಿ ಮಾತನಾಡಿದಳು. ಇನ್ನೊಂದು ಸಲ ಸ್ಟಾಕ್ ಹೋಮ್ ನ ಅರಮನೆಯ ಪಕ್ಕದ ಬೀದಿಯೊಂದರಲ್ಲಿ ನಡೆಸಿಕೊಂಡು ಹೋಗಿ ಆಮೇಲೆ ರೈಲು ಹತ್ತಿಸಿ ಮರೆಯಾದಳು.ಆಕೆ ಆ ನಗರದಲ್ಲಿ ಒಂಟಿ ಹುಡುಗಿ. ಆಕೆಯ ತಂದೆ ಪೋಲೆಂಡ್ ನಿಂದ ವಸಲೆ ಬಂದ ಯಹೂದಿ. ತಾಯಿ ಸ್ಕಾಂಡಿನೇವಿಯನ್ ಸುಂದರಿ. ತಂದೆಯ ಕಡೆಯವರೆಲ್ಲಾ ಹಿಟ್ಲರನ ಮಾರಾಣಹೋಮದ ಬೆಂಕಿಯಲ್ಲಿ ಬೆಂದು ಹೋದವರು.ಈ ಅಂದದ ಸುಂದರಿ ಹುಡುಗಿ ನನ್ನ ಜೊತೆನ ಮಾತನಾಡುವಾಗ ಕಂಪಿಸುತ್ತಾ ಅವಳ ಕೈಯಲ್ಲಿದ್ದ ಕಾಫಿಯ ಬಟ್ಟಲು ಅಲುಗಿ ಮೈಯೆಲ್ಲಾ ಚೆಲ್ಲಿ ಆಮೇಲೆ ಸ್ಸಾರಿ  ಅಂತ ನಕ್ಕಿದ್ದಳು. ನಾನು ಆಕೆಯ ಕೈಯಲ್ಲಿ ಕನ್ನಡದ ನನ್ನ ಕತೆಯ ಪುಸ್ತಕವೊಂದನ್ನು ಕೊಟ್ಟು ‘ಪ್ರೀತಿಯಿಂದ’ ಅಂತ ಸಹಿ ಮಾಡಿ ಕಂಪಿಸುತ್ತಾ ಆ ಮಹಾ ಆಕಾಶದ ಕೆಳಗೆ ಒಬ್ಬನೇ ಕಣ್ಣು ತುಂಬಿಕೊಂಡು ಬಂದಿದ್ದೆ.ಯಾಕೋಈಗ ಅವಳ ನೆನಪಾಗುತ್ತಿದೆ. ಸುಮ್ಮನೇ ಕುಳಿತು ರಿಲ್ಕ್ ಕವಿಯನ್ನು ಅನುವಾದಿಸುತ್ತಿರುವೆ.  (more…)

Monday September 17, 2007

ಬಾಲ್ಯ ಕಾಲದ ಒಂದು ಕವಿತೆ

Filed under: ಹಾಡು-ಪಾಡು — Rasheed @ 9:47 pm

ಮತ್ತೇ ಬರುವೆನು ಹೆಣ್ಣೇ..

ಮತ್ತೆ ಬರುವೆನು ಹೆಣ್ಣೆ ಮರಳಿ ನಿನ್ನಲ್ಲಿಗೆನಿನ್ನ ಬೆಳ್ಳಿ ಉಡಿಪಟ್ಟ ಎದೆ ತುಂಬಿತುಳುಕುವ ಕುಪ್ಪಾಯ, ಮುಂಡು ತುಣಿಯೊಳಗುಕ್ಕುವ ಕಾವ್ಯಕ್ಕೆ ರೇಕು ತುಂಬಿಸಲಿಕ್ಕೆ. (more…)

Monday September 10, 2007

ದೇವದೂತರ ಆಡುಭಾಷೆ!

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 11:09 pm

ಮೇಘಾಲಯ ಎಂಬ ಈ ಪುಟ್ಟ ರಾಜ್ಯದ ರಾಜಕೀಯ ಇಡೀ-ವಾರ ನನ್ನ ತಲೆಯನ್ನು ತಿಂದು ಹಾಕಿಬಿಟ್ಟಿತು. ಮೂವರು ಮಂತ್ರಿಗಳು ಹೇಳದೆ ಕೇಳದೆ ಮುಖ್ಯಮಂತ್ರಿಯನ್ನು ಬಿಟ್ಟು ಎದುರುಪಾರ್ಟಿಯನ್ನು ಸೇರಿಕೊಂಡು ಬಿಟ್ಟಿದ್ದಾರೆ. ಎಪ್ಪತ್ತೇಳು ವರ್ಷದ ಮುಖ್ಯಮಂತ್ರಿ ಬಿದ್ದು ಹೋಗುವ ಸ್ಥಿತಿಯಲ್ಲಿದ್ದಾರೆ. ನಾನು ‘ಏನು ಕತೆ ನಿಮ್ಮ ಪರಿಸ್ಥಿತಿ ವೀಕ್ ಆಗಿ ಬಿಟ್ಟಿದೆಯಲ್ಲ’ ಅಂತ ಕೆಣಕಿದೆ. ಅವರು ತಟ್ಟನೆ ಶರಟಿನ ತೋಳು ಮಡಚಿ ತೋಳು ಬಲ ತೋರಿಸುತ್ತಾ ‘ಏನು ವೀಕ್ ಆಗಿದ್ದೇನಾ ನೋಡು’ ಅಂತ ನನ್ನ ಹೊಟ್ಟೆಗೆ ಪಂಚ್ ಮಾಡಲು ಬಂದರು. ನಾನು ನಗುತ್ತಾ ಬದಿಗೆ ಸೇರಿದೆ.meghalaya-map.gifಇಲ್ಲಿನ ಜನ ಹೀಗೆಯೇ. ಎಂತಹ ಅತಂತ್ರ ಸ್ಥಿತಿಯಲ್ಲೂ, ಎಂತಹ ಮುಖ್ಯ ಮಂತ್ರಿಯಾದರೂ ನಗು ಮತ್ತು ಚೇಷ್ಟೆ ಬಿಡುವುದಿಲ್ಲ.  ಇವರೆಲ್ಲರ ಹಿಂದೆ ತಿರುಗಾಡಿ ನನಗಂತೂ ತಲೆಕೆಟ್ಟು ಹೋಗಿತ್ತು. ಬಾಯಿತೆಗೆದರೆ ಮಂತ್ರಿಗಳ ಹೆಸರು. ತಲೆಯೊಳಗೆ ಎಂ.ಎಲ್.ಎಗಳು ಯಾವ ಸಹವಾಸವೂ ಬೇಡ ಅಂತ ಈವತ್ತು ಮಧ್ಯಾಹ್ನ ಬಾಗಿಲು ಹಾಕಿಕೊಂಡು ಕಿಟಕಿ ತೆಗೆದು ಬಿಸಿಲನ್ನು ಒಳಗೆ ಬಿಟ್ಟುಕೊಂಡು ಸುಮ್ಮನೆ ಕುಳಿತಿದ್ದೆ. ಎಂತಹ ಒಳ್ಳೆಯ ಬಿಸಿಲು! ಮಟಮಟಮಧ್ಯಾಹ್ನದಲ್ಲೂ ಮೈಮೇಲೆ ಹರಡಿಕೊಂಡು ಕೂರಬಹುದು. ಹಾಗೇ ತುಂಬಾ ಹೊತ್ತು ಕೂತಿದ್ದೆ. ಆಮೇಲೆ ಮಳೆ ಬರಲು ತೊಡಗಿತು.ಹೋಗಲಿ ಬಿಡಿ ಪ್ರತಿವಾರ ಮೋಡ  ಬಿಸಿಲು ಮಳೆ ಹೂವು ಅಂತ ಬರೆದು ನಾನೂ ನಿಮ್ಮ ತಲೆ ಹಾಳು ಮಾಡುತ್ತಿದ್ದೇನೆ. ಶಿವಮೊಗ್ಗದ ನಿಮ್ಮ ಊರಿನ ಹತ್ತಿರ ಹನುಮಂತಪ್ಪ ಅಂತ ನನ್ನ ಸಖನೊಬ್ಬನಿದ್ದಾನೆ. ಈ ಸಲ ಭತ್ತ ಮಾರಿ ಆ ಹಣದಲ್ಲಿ ವಿಮಾನ ಹತ್ತಿ ನಿನ್ನ ಹತ್ತಿರ ಬರುತ್ತೇನೆ ಅಂದವನು ಪತ್ತೆಯೇ ಇಲ್ಲ. ನನಗೆ ಯಾಕೋ ಅವನ ಭತ್ತ ಏನಾಯಿತು ಅಂತ ಚಿಂತೆ ಶುರುವಾಗಿದೆ.ಆಮೇಲೆ ಇನ್ನೊಂದು ವಿಷಯ. ನೀವು ನನ್ನನ್ನು ಕಳೆದವಾರ ‘ಸಾಬಿ’ ಅಂತ ಬರೆದಿದ್ದೀರಂತೆ. (more…)

Thursday September 6, 2007

ಹಾಫಿಝನ ಒಂದು ಕವಿತೆ

Filed under: ಅನುವಾದಗಳು — Rasheed @ 10:52 pm

ಅಷ್ಟೊಂದು ಅರಿತೆhafiz_p.jpg

ಅರಿತೆ
ಅಷ್ಟೊಂದು
ಪಡೆದವನಿಂದ
ಇನ್ನು ನನ್ನ ನಾ
ಅರಿಯೆ
ಕ್ರೈಸ್ತ, ಹಿಂದು,ಮುಸಲ್ಮಾನ
ಬೌದ್ಧ, ಯಹೂದ್ಯ ಏನೆಂದೂ.

ಸತ್ಯ ಅಷ್ಟೊಂದು
ಹಂಚಿಕೊಡಿತು ಒಳಗೆ
ಇನ್ನು ಕರೆಯಲಾರೆ ಎನ್ನ
ಗಂಡೆಂದು,ಹೆಣ್ಣೆಂದು,ಜಿನ್ನೆಂದು
ಅಥವಾ ಬರಿಯ
ಆತ್ಮವೆಂದೂ.
 
ಪ್ರೇಮವೆಂಬುದು ಅಷ್ಟೊಂದು
 ಹಚ್ಚಿಕೊಂಡಿದೆ ಹಫೀಝನನ್ನು
ಅದು ಬೂದಿಯಾಗಿದೆ ನಾನು
ನಿರ್ಬಂಧಿ
ಸಕಲ ತತ್ವಗಳಿಂದ,ಪ್ರತಿಮೆಗಳಿಂದ
ಇದುವರೆಗೆ ಅರಿತದ್ದರಿಂದ.            
         
                                   

Wednesday September 5, 2007

ಟರ್ಕಿ ಕೋಳಿಗಳ ನೆನಪು

male-turkey.jpgಯಾಕೋ ಸಣ್ಣಗೆ ನಗುಬರುತ್ತಿದೆ. ನಾನು ಪ್ರತಿವಾರವೂ ಕುಡುಮಿಯ ಹಾಗೆ ಹಠ ಹಿಡಿದು ನಿಮಗೆ ಪತ್ರಬರೆಯುವುದು.  ಕೆಲವರು  ಗೆಳೆಯರು ಇನ್ನು ಈತ ಕತೆಯೂ ಬರೆಯಲಾರ ಕವಿತೆಯೂ ಬರೆಯಲಾರ ಬರೀ ಪತ್ರ ಬರೆದು ಹಾಳಾಗಿ ಹೋಗುತ್ತಿರುವ, ಎಂದು ವಿನಾಕಾರಣ ಹಲುಬುವುದು,- ಎಲ್ಲವನ್ನೂ ಯೋಚಿಸಿ ಯೋಚಿಸಿ ಈವತ್ತು ಚಪಾತಿ ಲಟ್ಟಿಸಿತ್ತಾ ಕೂತಿದ್ದೆ. ಆಗಲೂ ನಗುಬರುತ್ತಿತ್ತು. ಚಪಾತಿ ನಾನು ಮಾಡಿದರೂ ಗುಂಡಗೆ ಆಗುತ್ತದೆ. ನಾನು ಮಾಡಿದ ದೋಸೆಯಲ್ಲೂ ತೂತುಗಳಿರುತ್ತದೆ ಎಂದೆಲ್ಲಾ ಗುನುಗುತ್ತಿದ್ದೆ.ಊರಿಗೆ ಹೋಗಿದ್ದಾಗ ನನ್ನ ಉಮ್ಮನಿಗೆ ಇಲ್ಲಿ ಷಿಲ್ಲಾಂಗಿನಲ್ಲಿ  ಒಳ್ಳೆ ಒಳ್ಳೆಯ ಬಾತುಕೋಳಿಗಳಿವೆ ಅಂತ ಹೇಳಿಬಿಟ್ಟಿದ್ದೆ. ಆಕೆ ಬೇರೆ ಏನೂ ಕೇಳದವಳು `ಅಯ್ಯೋ ನೀನು ಬರುವಾಗ ಬಾತುಕೋಳಿಯ ಮೊಟ್ಟೆಗಳನ್ನು ತರಬೇಕಾಗಿತ್ತು. ಇಲ್ಲಿ ಕಾವು ಕೊಟ್ಟು ಮರಿ ಮಾಡುತ್ತಿದ್ದೆ’ ಅಂತ ಹಂಬಲಿಸಿದ್ದಳು.ತುಂಬಾ ವರ್ಷಗಳ ಹಿಂದೆ ನನ್ನ ಬಾಪಾ ಎಲ್ಲಿಂದಲೋ ಟರ್ಕಿ ಕೋಳಿಯ ಮೊಟ್ಟೆಗಳನ್ನು ಹೀಗೇ ತಂದುಕೊಟ್ಟಿದ್ದರು. ಉಮ್ಮ ಅವುಗಳನ್ನು ಕಾವಿಗೆ ಬಂದ ಊರು ಕೋಳಿಯ ಹೊಟ್ಟೆಯ ಕೆಳಗೆ ಇಟ್ಟು ಕೊನೆಗೆ ಒಂದೇ ಒಂದು ಮರಿ ಹೊರಗೆ ಬಂದಿತ್ತು. ನೋಡಿದರೆ ಅದೊಂದು ಗಂಡು ಟರ್ಕಿ ಕೋಳಿಮರಿ. ಬಹುಶಃ ನೀವು ಟರ್ಕಿಕೋಳಿ ನೋಡಿರಲಿಕ್ಕಿಲ್ಲ.ತುಂಬಾ ಎತ್ತರಕ್ಕೆ ಬೆಳೆಯುತ್ತದೆ. ಆ ಗಂಡು ಟರ್ಕಿಕೋಳಿಯಂತೂ ತುಂಬಾ ಬೆಳೆದು ಅದರ ಕೊರಳೆಲ್ಲಾ ಕೆಂಪುಕೆಂಪಗೆ ಮಾಂಸದ ಗಂಟುಗಳಿಂದ ತುಂಬಿಕೊಂಡು ಅದಕ್ಕೆ ಸಿಟ್ಟು ಬಂದಾಗ ಇನ್ನಷ್ಟು ಕೆಂಪಾಗಿ, ಹೋಗುವವರನ್ನು ಬರುವವರನ್ನು ಅಟ್ಟಿಸಿಕೊಂಡು ಓಡಾಡುತ್ತಿತ್ತು. ಹೆಣ್ಣು ಮಕ್ಕಳನ್ನಂತೂ ಅದಕ್ಕೆ ಕಂಡರಾಗುತ್ತಿರಲಿಲ್ಲ. ನನ್ನ ಸಣ್ಣ ಸಣ್ಣ ತಂಗಿಯಂದಿರನ್ನು ಅಟ್ಟಿಸಿ ಅವರು ಬಿದ್ದು ಗಾಯ ಮಾಡಿಕೊಂಡು, ನನ್ನ ಉಮ್ಮನಿಗೆ ತಲೆಕೆಟ್ಟು ಹೋಗಿ ಆಮೇಲೆ ಬಾಪಾ ಎಲ್ಲಿಂದಲೋ ಒಂದು ಹೆಣ್ಣು ಟರ್ಕಿಕೋಳಿಯನ್ನು ತಂದು ಬಿಟ್ಟಿದ್ದರು. ಆಮೇಲೆ ಅವುಗಳು ತುಂಬಾ ಕಾಲ ಅನ್ಯೋನ್ಯವಾಗಿದ್ದವು.ಆಮೇಲೆ ಏನಾಯಿತು ಎಂಬುದು ನೆನಪಾಗುತ್ತಿಲ್ಲ.  (more…)

Saturday September 1, 2007

ಪುಷ್ಕಿನ್ ನ ಇನ್ನೊಂದು ಕವಿತೆ

Filed under: ಹಾಡು-ಪಾಡು — Rasheed @ 11:52 pm

ನನ್ನ ತೋಳುಗಳಲ್ಲಿ

hatbeaut02.jpg

 

ನನ್ನ ತೆರೆದ ತೋಳುಗಳಲ್ಲಿ ನಿನ್ನ ಎಳೆ ಚೆಲುವು

ಸೆರೆಯಾಗಿದೆ ಓ ದೇವತೆಯೇ…

 

ನನ್ನ ತುಟಿಯ ನಡುವಿಂದ ಮುತ್ತುಗಳ ನಡುನಡುವೆ

ಪ್ರೀತಿಮಾತುಗಳು ಸೆಲೆಯೊಡೆಯುತ್ತಿವೆ.

ನನ್ನ ಬಿಗಿ ಅಪ್ಪುಗೆಯಿಂದ  ಮಾತಿಲ್ಲದೆಯೆ

ನಿನ್ನ ತೆಳ್ಳಗಿನ ದೇಹ ಸರಿಯುತ್ತಿದೆ ದೂರ

ಸಂಶಯದೊಂದು ಸಣ್ಣ ನಡುವಿನ ಹುಡುಗೀ..

ನೀ ಕೊಂಕು ಮಾತಾಡುತಿರುವೆ.

ಮೋಸದ ನೋವಿನ ಸಾಲುಮಾತುಗಳು ನೆನಪಾಗುತಿದೆ

ನಿನಗೆ. ಸುಮ್ಮನೆ ಕೇಳಿಸಿಕೊಳ್ಳುತಿರುವೆ

ಏನೂ ಕೇಳಿಸದೆಯೇ..

ಶಪಿಸುತ್ತಿರುವೆ ನನ್ನ ಹುಮ್ಮಸ್ಸಿಗೆ ನಾನೇ

ನನ್ನ ನಯದ ಲಲ್ಲೆಯಾಟಗಳಿಗೆ,

ಯೌವನಕ್ಕೆ, ನಿತ್ಯ ಬೇಟಗಳಿಗೆ,

ಹೂತೋಟದ ಸದ್ದಿಲ್ಲದ ಆಟಗಳಿಗೆ

ಪ್ರೇಮದ ಹೆಸರಿಲ್ಲದ ಪಿಸುಮಾತಿನ ಹೇಳಿಕೆಗಳಿಗೆ.pushkin.jpg

ಶಪಿಸುತ್ತಿರುವೆ ಕವಿತೆಗಳ ಮಾಂತ್ರಿಕ ಮೋಡಿಗಳಿಗೆ,

ಅರಿಯದ ಸಣ್ಣ ಹುಡುಗಿಯರ ಸ್ಪರ್ಶಗಳಿಗೆ,

ಅವರ ಕಣ್ಣೀರಿಗೆ, ಕಾಲ ಮೀರಿದ  ವಿಷಾದಗಳಿಗೆ.

Blog at WordPress.com.