The Mysore Post

Thursday August 30, 2007

ಮಂಗಗಳಾದ ಮೂವರು ಹುಡುಗರು [ಒಂದು ಹಳೆಯ ಕಥೆ]

Filed under: ಕತೆ-ಗಿತೆ — Rasheed @ 7:48 pm

iblis1.jpg 

‘ಆತನನ್ನು ಇವರೆಲ್ಲಾದರೂ ಕೊಂದುಬಿಟ್ಟರೆ ಮಾರನೇ ದಿನವೇ ನಾನು ನಮ್ಮ ಧರ್ಮ ಬಿಟ್ಟುಬಿಡುವೆ’.

ನಾನು ನನ್ನ ಉಮ್ಮನ ಮುಂದೆ ಜಗಳಕ್ಕೆ ಹೋಗುವವನಂತೆ ಹಠ ಹಿಡಿಯುತ್ತಾ ಕೂತುಬಿಟ್ಟೆ. ಆಕೆ ಒಲೆಯ ಮುಂದೆ ಅನ್ನಕ್ಕೆ ನೀರಿಟ್ಟು ಸುಮ್ಮನೇ ನಿಂತಿದ್ದಳು. ಬೆಳಗ್ಗೆಯೇ ಪೇಪರ್ ಓದಿದ್ದ ನನ್ನ ಬಾಪಾ ಸಲ್ಮನ್ ರಷ್ದಿ ಎಂಬುವನು ಸೈತಾನನ ಅಡಿಯಾಳಿನಂತೆ ದೇವರನ್ನು ಮಹಮದ್ ನೆಬಿ ಪ್ರವಾದಿಯನ್ನೂ ಹಾಗೂ ಇಷ್ಟೂ ಸಾಲದೆಂಬಂತೆ ಇಡೀ ಇಸ್ಲಾಂ ಧರ್ಮವನ್ನೂ ತಮಾಷೆ ಮಾಡಿ ಕಥೆಯೋ ಮಣ್ಣಾಂಗಟ್ಟಿ ಏನನ್ನೋ ಬರೆದಿರುವುದು ಹಾಗೂ ಇರಾನ್ ಎಂಬ ದೇಶದ ಆಯತುಲ್ಲಾ ಖೋಮೇನಿ ಎಂಬುವವನು ಈ ತರಲೆ ಬರಹಗಾರನ ತಲೆ ತಂದೊಪ್ಪಿಸಿದವರಿಗೆ ಲಕ್ಷಾಂತರ ರೂ. ಬಹುಮಾನ ಕೊಡುವೆನೆಂದು ಹೇಳಿರುವುದನ್ನೂ ಒಳ್ಳೆ ಕಥೆ ಹೇಳಿದಂತೆ ಈಕೆಯ ಬಳಿ ಹೇಳಿ ಹೊರಟುಹೋಗಿದ್ದರು.

ಇರಾನೋ, ಇರಾಕೋ, ರಷ್ದಿಯೋ, ಕಥೆಯೋ, ಮಸಾಲೆಯೋ ಏನೂ ಅರ್ಥಮಾಡಿಕೊಳ್ಳಲಿಕ್ಕೆ ಹೋಗದಿದ್ದ ನನ್ನ ಉಮ್ಮ ಈಗ ನಾನೂ ತಲೆಕೆಟ್ಟವನಂತೆ ಮಟಮಟ ಮಧ್ಯಾಹ್ನ ಜಗಳಕ್ಕೆ ನಿಂತಿರುವುದನ್ನು ನೋಡಿಯೂ ಸುಮ್ಮನೇ ಇರುವುದು ನನಗೆ ಆಗಲಿಲ್ಲ.

‘ಅವನ್ನು ಅವರು ಎಲ್ಲಾದರೂ ಕೊಂದರೆ ನಾನು ನಿಜಕ್ಕೂ ಜಾತಿ ಬಿಟ್ಟು ಹೋಗುವೆ’ ನಾನು ಈ ‘ನಿಜಕ್ಕೂ’ ಅನ್ನುವುದನ್ನು ಎರಡು ಮೂರು ಬಾರಿ ಒತ್ತಿ ಒತ್ತಿ ಹೇಳಿ ಆಕೆಯ ಮುಖ ನೋಡಿದೆ.

ನಾನು ‘ನಿಜಕ್ಕೂ’ ಎನ್ನುವುದನ್ನು ಗಟ್ಟಿಯಾಗಿ ಹೇಳಿದ್ದು ಆಕೆಗೆ ಸರಿ ಕಾಣಲಿಲ್ಲವೆಂದು ಕಂಡಿತು.

‘ನಿಜಕ್ಕೂ, ಸುಳ್ಳಿಗೂ ಅಂತ ಬೇರೆ ಬೇರೆ ಇದೆಯಾ? ನಿಜಕ್ಕೂ ಅಂತಲೇ ತಿಳಕೋ. ಅಲ್ಲಿ ಇವರು ಯಾರೋ ಯಾವನೋ ಒಬ್ಬನನ್ನು ಕೊಂದರೆ ನೀನು ಇಲ್ಲಿ ಯಾಕೆ ಉರಿಬರುತ್ತಾ ಇದೀಯಾ? ಅಷ್ಟಕ್ಕೂ ನೀನು ಯಾರು ಜಾತಿ ಬಿಡಲಿಕ್ಕೆ’.
ನನ್ನ ಉಮ್ಮನಿಗೂ ಕೆಲಸದ ನಡುವೆ ಜಗಳ ಮಾಡಲಿಕ್ಕೆ ಖುಷಿಯಾಗುತ್ತಿರುವಂತೆ ಕಂಡಿತು. (more…)

Monday August 27, 2007

ಕಾಲಪ್ರವಾಹ ಮತ್ತು ಕಡಲಹಂದಿ

 

kadalahandhi.jpg

ಏನು ಬರೆಯಲಿ? ಈ ವಾರವೆಲ್ಲಾ ಬೇರೆ ಏನೂ ಮಾಡಲು ಹೋಗದೆ ಬರೆಯ ಆಫೀಸಿನ ಕೆಲಸಗಳನ್ನು ಮಾಡಿಕೊಂಡು ಸುಮ್ಮನೆ ಕುಳಿತಿದ್ದೆ. ಈಶಾನ್ಯ-ಭಾರತ ಪ್ರವಾಹದಲ್ಲಿ ಮುಳುಗಿ ಹೋಗಿ ರೈಲುಗಳೂ ಓಡಾಡದೆ ಊರಿಂದ ಪತ್ರಗಳೂ ಬರಲಿಲ್ಲ. ನಾಲ್ಕೈದಾರು ವಾರಗಳಿಂದ ‘ಪತ್ರಿಕೆ’ಯೂ ಬಂದಿಲ್ಲ. ಊರಿನಿಂದ ಉಮ್ಮ ಫೋನ್ ಮಾಡಿ ಅವಳ ತಲೆನೋವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ ಅಂತ ಹೇಳಿದಳು. ತಂಗಿಫೋನ್ ಮಾಡಿ ಅಷ್ಟುದೂರ ಊರಿನಲ್ಲಿ ಹಾಗೆಲ್ಲಾ ನಿರ್ಗತಿಕನಂತೆ ಅಲೆದಾಡಬೇಡ. ನಮಗೆ ಇಲ್ಲಿ ಹೆದರಿಕೆ ಆಗುತ್ತಿದೆ ಅನ್ನುತ್ತಿದ್ದಳು.

 ನನಗೆ ಯಾಕೋ ನಾನು ಮಂಗಳೂರಿನ ಬೀದಿಗಳಲ್ಲಿ ಉರಿಬಿಸಿಲಿನಲ್ಲಿ ಹುಚ್ಚನಂತೆ ಅಲೆದಾಡುತ್ತಿದ್ದುದು ನೆನಪಾಗುತ್ತಿತ್ತು. ನಾನು ಮಂಗಳೂರಿನಲ್ಲೂ ತುಂಬಾ ಅಲೆದಾಡುತ್ತಿದ್ದೆ. (more…)

Wednesday August 22, 2007

ನಕ್ಸಲ್ ಬಾರಿ ಮತ್ತು ದೂಲಾಬಾರಿ

 nepal2.jpg

ಏನೂ ಕೆಲಸವಿಲ್ಲದೆ ಸುಮ್ಮನೆ ಕುಳಿತಿರುವೆ. ಹಗಲೆಲ್ಲ ನಿದ್ದೆ ಹೊಡೆದೆ. ಈ ಬರೆಯವುದು ಮತ್ತು ಎಲ್ಲವನ್ನು ವಿವರಿಸುತ್ತಾ ಇರುವುದು ಎಂತಹ ಬೇಜಾರಿನ ಸಂಗತಿ ಅಂತ ಅನ್ನಿಸಿ ಸುಮ್ಮನೇ ಮತ್ತೆ ನಿದ್ದೆ ಹೋಗುತ್ತಿದ್ದೆ. ಹೋಗಲಿ ಬಿಡಿ. ಸುಮ್ಮನೆ ಬರೆ ನನ್ನ ಕುರಿತೇ ಕೊರೆಯದೆ ಬೇರೆ ಏನಾದರೂ ಹೇಳುವೆ.

 ಈ Rainer Maria Rilke ಎಂಬ ಜರ್ಮನಿಯ ಮಹಾಕವಿ Rodin ಎಂಬ ಫ್ರೆಂಚ್ ಮಹಾಶಿಲ್ಪಿಯ ಕಾರ್ಯದರ್ಶಿಯಾಗಿದ್ದ. ಒಂದು ದಿನ ಏನೋ ಸಂಕಟದಲ್ಲಿ ಏನೋ ಯೋಚಿಸುತ್ತಾ ನದಿಯೊಂದರ ದಂಡೆಯ ಮೇಲೆ ಶತಪಥ ಹಾಕುತ್ತಿದ್ದ. ಇದ್ದಕ್ಕಿದ್ದಂತೆ ಅದೇನು ಆಯಿತೊ ಹದುಳದಲ್ಲಿ ಹುಣ್ಣಿಮೆ ಮುಡಿದಂತೆ ಆತನ ತಳೆಯೊಳಗೆ ಕಾವ್ಯ ಗರಿಗೆದರಿತು. ಒಂದೇ ಏಟಿಗೆ ನುರಾರು ಸಾಲುಗಳ ಹಲವಾರು Elegy ಗಳನ್ನು ಬರೆದ. ಜರ್ಮನ್ ಕಾವ್ಯದ ಇತಿಹಾಸದಲ್ಲಿ ಇಲ್ಲಿಯವರೆಗೆ ಅಂತಹ ಕಾವ್ಯಸ್ಫೋಟ ಇನ್ನೊಮ್ಮೆ ಆಗಿಲ್ಲವಂತೆ. ಕ್ಷಮಿಸಿ, ನಾನು ಯಾಕೋ ಮಹಾಕವಿಗಳನ್ನು ತಮಾಷೆ ಮಾಡುತ್ತಿರುವೆ ಅನ್ನಿಸುತ್ತಿದೆ.

ಕಳೆದ ವಾರ ನಾನು ಬಸ್ಸಿನಲ್ಲಿ ಕುಳಿತು ನೇಪಾಳಕ್ಕೆ ಹೋಗಿ ಬಂದ ದಾರಿಯ ಕುರಿತು ಬರೆಯುವೆ. (more…)

Sunday August 19, 2007

ಫ್ರೆಡರಿಕೋ ಗಾರ್ಸಿಯಾ ಲೋರ್ಕಾನ ಒಂದು ಕವಿತೆ

Filed under: ಅನುವಾದಗಳು — Rasheed @ 10:23 pm

lorca-2-sized.jpg

 ಒಂದು ಅಳಲು

 

ಬಿಡದಿರು ನನ್ನ ಕಳೆದು ಕೊಳ್ಳಲು ಯಾವತ್ತೂ ನಿನ್ನ
ಕಡೆದ ಕಲ್ಲಿನಂತಹ ನಿನ್ನ ಕಣ್ಣ ಅಚ್ಚರಿಯನ್ನ
ಇರುಳು ಕೆನ್ನೆಗೆ ಒತ್ತುವ ಒಂದು ಹೂವಂತಹ
ನಿನ್ನ ಉಸಿರ ಸುಯಿಲನ್ನ.

ಹೆದರಿಕೆ ಇರಲುಇಲ್ಲಿ ಈ ತೀರದಲ್ಲಿ.
ಕವಲೇ ಇರದ ಕಾಂಡದಂತೆ.ಅದಕ್ಕಿಂತಲೂ ಬೇಸರ
ಹೂವೇ ಇರದಿರುವುದು,ತಿರುಳು,ಆವೆಭೂಮಿ
ನನ್ನ ನರಳುವಿಕೆಯ ಎರೆ ಹರಿದಾಡಲು

ನೀ ನನ್ನ ಅವಿತಿರುವ ನಿಧಿ, ನನ್ನ ಶಿಲುಬೆ
ಹೆಪ್ಪುಗಟ್ಟಿದ ತಳಮಳ
ನಾನು ಸಾಕುನಾಯಿ .ನೀನು ಮಾತ್ರ ಧಣಿ

ಬಿಡದಿರು ಪಡೆದ ಈ ಎಲ್ಲವ ಕಳಕೊಳ್ಳಲು
ನದಿಯ ನಿನ್ನ ಕವಲುಗಳನ್ನು ಕಳೆದ ನನ್ನ
ಶರತ್ತಿನ ಎಲೆಗಳಿಂದ ಪೋಣಿಸಿಕೋ.

 

Friday August 17, 2007

ಸುಂದರಿಯೂ ಕುರೂಪಿಯೂ

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:02 pm

 shillong.jpgಕನ್ನಡದ ಒಂದೊಂದೇ ಅಕ್ಷರಗಳನ್ನು ಪ್ರೀತಿಯಿಂದ ಮೈಸವರುತ್ತಾ, ಜೋಡಿಸುತ್ತಾ, ಚಂದ ನೋಡುತ್ತಾ ಬಹಳ ದಿನಗಳ ಬಳಿಕ ನಿಮಗೆ ಬರೆಯುತ್ತಿರುವೆ. ಯಾಕೋ ಅಹ್ಲಾದವೆನಿಸುತ್ತದೆ. ಹದುಳದಲ್ಲಿ ಹುಣ್ಣಿಮೆ ಮೂಡಿದಂತೆ. ಬೇಂದ್ರೆಯವರಿಗೆ ಮಲ್ಲಿಕಾರ್ಜುನ ಮನ್ಸೂರರ ಹಾಡು ಕೇಳಿ `ಬಿಸಿಲ ಹಣ್ಣನುಂಡು ಚಂದ್ರನ ಜೇನು ಮದ್ದಂತೆ ‘ಅನಿಸಿತ್ತಂತೆ. ನಾನು ಈ ದಿನ ಸಂಜೆ ನಾಲ್ಕು ಗಂಟೆಗೇ ಚಂದ್ರನ ಬೆಳಿನಲ್ಲಿ ನನ್ನ ನೆರಳನ್ನು ಕಂಡು ಚಕಿತಗೊಂಡೆ.ಇಲ್ಲಿ ಈಗಲೇ ಚಳಿಗಾಲ ಮೊದಲಾಗಿ ಮಧ್ಯಾಹ್ನದ ಚಂದ್ರನಂತಹ ಬಿಸಿಲಲ್ಲಿ ಬೆಚ್ಚಗೆ sweater ಹಾಕಿಕೊಂಡು ಓಡಾಡುತ್ತಿರುವೆ. ಈಗಂತೂ ಈ ಚಳಿ ಬಿಸಿಲಲ್ಲಿ ಈ ಊರು ಎಷ್ಟು ಚಂದ ಎಷ್ಟು ಚಂದ ಎಂದು ಕಣ್ಣಲ್ಲೇ ಎಲ್ಲವನ್ನೂ ತಿಂದುಕೊಂಡು ನಡೆದಾಡುತ್ತಿರುವೆ. (more…)

Friday August 10, 2007

ಹಾಲು ಕುಡಿದ ಹುಡುಗಾ- ಒಂದು ಕತೆ

Filed under: ಕತೆ-ಗಿತೆ — Rasheed @ 11:03 pm

 [ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬರೆದ ಈ ನಾಚುಗೆಯ ಕತೆಯನ್ನು ಈಗಲೂ ಅಷ್ಟೇ ನಾಚುಗೆಯಿಂದ ಈ ಬ್ಲಾಗಿನಲ್ಲಿ ಅಡಗಿಸಿಡುತ್ತಿರುವೆ. ಈ ಕತೆಗೆ ಹೊಸತಾಗಿ ಚಿತ್ರಗಳನ್ನು ಬರೆದ ಚರಿತಾ ರಿಗೆ ಈ ಕಥೆಗಾರ ಚಿರಋಣಿ ]

 

 

hkh-1241.jpg

     ಆ ಮೂರು ಜನ ಹೆಂಗಸರು ನದಿಬಟ್ಟೆಯ ಗಂಟು ಹೊತ್ತು ಒಂದು ಮೆಟ್ಟಲು, ಎರಡು ಮೆಟ್ಟಲು, ಮೂರು ಮೆಟ್ಟಲು ಜರಿದ ಬರೆ ಇಳಿದು ಸೊಂಟಕ್ಕೆ ಸೊಂಟಕುಕ್ಕಿ ನನ್ನ ಕರೆದರು.

‘ಹಾ ಹುಡುಗ, ಏ ಹುಡುಗ, ಏ ಹಾಳು ಗಂಡಾದವನೇ, ಬಾ ಬಾಲ್ಯಕಾರ ಹುಡುಗನೇ ಬಾ, ನಮ್ಮ ಹುಡುಗಿಯ ಬಾಳು ಮೂರಾಬಟ್ಟೆ ಮಾಡಿದವನೇ ಬಾ’ ಎಂದು ಗಂಟು ಬಿಚ್ಚಿ ಕಲ್ಲು ಪಾರೆಯ ಮೇಲೆ ಬಟ್ಟಕ್ಕೆ ಕೂತರು. ‘ಬಾ, ಬಟ್ಟೆಯೇ ಬಾ, ಇದು ಆ ಹುಡುಗಿಯ ಮುಂಡು ಬಟ್ಟೆ, ಇದು ಅವಳು ಶೀಗೆ ನೆನೆಸಿಟ್ಟ ಮುಡಿಲೇಸು, ಇದು ಅವಳ ರವಿಕೆಯ ಬಟ್ಟೆ, ಬಾ ಹುಡುಗನೇ, ಬಂದು ಮುಟ್ಟಿ ಇಲ್ಲ ಎಂದು ಹೋಗು ಬಾ ನೋಡುವಾ. ಬಾ ಹಾಳಾದವನೇ. ಹುಡುಗ, ಈ ನಡು ಮಧ್ಯಾಹ್ನ ಶುಕ್ರವಾರ ಗಂಡಸರೆಲ್ಲ ಪಡೆದವನಿಗೆ ಬಾಗುವ ಹೊತ್ತು ಹಾಳಾದವನೇ ನದಿಗಿಳಿದಿದ್ದೀಯಾ ಬಾ, ನಡಿ ನಮ್ಮ ಹುಡುಗಿಯ ಕಟ್ಟು ಬಾ ಹಾಳಾದವನೇ’ ಅಂತ ನದಿಯ ನೀರಿಗೆ ಆ ಹುಡುಗಿಯ ಅರ್ಧ ಸೀರೆಯ ತೇಲಿಸಿ ತೊರಿಸಿದರು.

ಸೀರೆ ತೇಲುತ್ತಾ ನನ್ನ ಬಳಿಗೆ ಬಂದಿತು. ನೀರಲ್ಲಿ ಅವಳ ಸೀರಯ ಒಂದು ಸೆರಗು ತೇಲಿ, ಅದರಲ್ಲಿ ಅವಳ ಸೀರೆಯ ಎಣ್ಣೆಯ ಗಮನ ಮೂಗಿಗೆ ತೇಲಿ ನನಗೆ ನೀರಲ್ಲಿ ಅವಳ ನೆನಪು ಬಂದಿತು. ಪುಸಕ್ಕನೇ ನದಿಗೆ ಮುಳುಗಿ ಆ ಹೆಂಗಸರಿಗೆ ಕೈ ತೋರಿಸಿ ಗೇಲಿ ಮಾಡಿ, ಒಂದಾಳಕ್ಕೆ ಮುಳುಗಿ ಆ ಹೆಂಗಸು ದೊಡ್ಡವಳು ಆ ಹುಡುಗಿಯ ತಾಯಿಯೇ , ಎರಡಾಳಕ್ಕೆ ಮುಳುಗಿ ನಡುವಿನವಳು ಅವಳ ಅಕ್ಕನೇ, ಮೂರಾಳಕ್ಕೆ ಮುಳುಗಿ ಕೊನೆಯವಳು ನೆರೆಮನೆಯವಳೇ.. ಎಂದು ಹಾಗೇ ನೀರಲ್ಲಿ ಕಣ್ಣುಬಿಟ್ಟು ಹಾಗೇ ತಳದ ಮರಳ ಸವರಿ ಮರಳಿಗೆ ಮೂಗು ತಾಗಿಸಿ ತಿರುಗಿ ಅಂಗಾತನಾಗಿ ಕಣ್ಣ ಮೇಲೆತ್ತಿದರೆ ನದಿಯಲ್ಲೆಲ್ಲಾ ಅವಳ ಸೀರೆಯ ಸೆರಗು ಆಕಾಶದಂತೆ ಹರಡಿತು. ಸೀರೆಯ ಹೂವು ಹೂವಿನಂತೆ, ನಡುವಿನಲ್ಲಿ ಸೂರ್ಯ ಮಿನುಗಿಸಿ ನಗುವ ನಕ್ಕಂತೆ, ಹಾಗೇ ನೀರಲ್ಲಿ ಉಳಿದು ಉಸಿರು ಇನ್ನೂ ಹಿಡಿದು ತೇಲುತ್ತಾ ಮೇಲಕ್ಕೆ ರಬ್ಬರಿನ ಚೆಂಡಿನಂತೆ ಚಿಮ್ಮಿ ತಲೆಯೆತ್ತಿದರೆ ಸೀರೆಯ ಸೆರಗು ಮೈಯನ್ನು ನೀರಿನಂತೆ ಸುತ್ತಿಕೊಂಡಿತು. ಕಣ್ಣ ಮಂಜ ಮಂಜಲ್ಲಿ ಹೆಂಗಸರು ಮೊದಲು ಹಾಗೇ ನೋಡಿ ಆಮೇಲೆ ಕುಹಕಕ್ಕೆ ನಕ್ಕು ಆಮೇಲೆ ಮೂವರು ಪೋಲಿ ಪೋಲಿಯರಂತೆ ನಾಚಿಕೊಂಡು ‘ಹಾ! ಮುಳುಗುತ್ತೀಯಾ ನೀರಿನೊಳಗೆ ಹಾಗೆ! ಪೋಲಿಯಾದವನೇ ಬಾ ಇಲ್ಲಿಗೆ. ನಿನ್ನ ಹಿಡಿದು ಕಟ್ಟಿ ಹಾಕಿ ಹಿಡಿದು ಮೊಣಕಾಲಿಗೆ ಸಿಕ್ಕಿಸಿಕೊಂಡು ಮೀಯಿಸಿ ಬಿಡುತ್ತೇವೆ ಬಾ ಮಗನೇ…. ನಮ್ಮ ಹುಡುಗಿಗೆ ಏನು ಮಾಡಿದೆಯೋ ಅದ ಮಾಡುವಿಯಂತೆ ಬಾ’ ಎಂದು ನಾಚಿಕೊಂಡರು.

ಅವರು ನಾಚಿಕೊಂಡು ಕಲ್ಲು ಪಾರೆಯ ಮೇಲೆ ಆ ಮೂವರು ಕುಕ್ಕರ ಕಾಲಲ್ಲಿ ನನ್ನ ಕಾಯುತ್ತ ಆಅವರ ಮೂವರ ದೇಹವೂ ನನ್ನ ಹಿಡಿದಿಡಲು ಕಾದಂತೆ ಕಂಡಿತು. ಇವರು ಇನ್ನೇನು ನೀರಿಗೆ ಇಳಿದು ನನ್ನ ಅಮುಕಿ ಕೊಲ್ಲುವರೋ ಎಂದು ಹೆದರಿದರೆ, ಆ ಹೆಂಗಸರು ತಮ್ಮ ಸೀರೆಯ ಮಂಡಿಗೆ ಸರಿಸಿ, ಆಮೇಲೆ ಮೊಣಕಾಲಿಗೆ ಸರಿಸಿ, ತಲೆಯಿಂದ ತಟ್ಟದ ಬಟ್ಟೆಯ ತೆಗೆದು ಪಾರೆಯ ಮೇಲಿಟ್ಟು ಮೆಲ್ಲಗೇ ಮೊಣಕಾಲವರೆಗೆ ಕಾಲನ್ನು ನೀರಿಗೆ ಬಿಟ್ಟು ಆಡಿಸುತ್ತಾ, ‘ಬಾ ಮಗನೇ, ಬಾ ಮೀಯಿಸುತ್ತೇವೆ. ನಮ್ಮ ಹುಡುಗಿಗೆ ಏನು ಮಾಡಿ ಬಂದಿದ್ದೀಯಾ ಮಿಡುಕನೇ’ ಅಂತ ಕರೆದರು.

‘ಏ, ಹೆಂಗಸರೇ, ನಾನು ನೀರ ಮೇಲೇರಿ ಬರಲಾರೆ. ಉಟ್ಟಬಟ್ಟೆಯಲ್ಲಿಲ್ಲ ನಾನು. ಬಿಡುತ್ತೀರ ನನ್ನ ಈ ನೀರಿಗೆ. ಹೆಂಗಸರೇ, ನಾನು ನಿಮ್ಮ ಹುಡುಗಿಗೇನೂ ಮಾಡಿಲ್ಲ. ನಾನು ಹುಡುಗ, ಏನೂ ಗೊತ್ತಿಲ್ಲ. ನಾನು ಏನೂ ಮಾಡಿಲ್ಲ.’ ಆಳು ಬಂದಂತೆ ಅತ್ತೆ. ಹೆಂಗಸರು ಬಿಡಲಿಲ್ಲ. ಮೊದಲಿನವಳು ಚಪ್ಪಾಳೆ ಹೊಡೆದು ನಡುವಿನವಳಿಗೆ ‘ಏ ಇವಳೇ, ಆ ಹುಡುಗಿಯ ರವಿಕೆಯ ತೆಗಿ, ತೋರಿಸಿ ಇವನಿಗೆ, ಅಂದರೆ ನಡುವಿನವಳು ಗಂಟಿನಿಂದ ಹುಡುಗಿಯ ರವಿಕೆಯ ತೆಗೆದು ಗಾಳಿಗೆ ಕೊಡವಿ, ನೀರಿಗೆ ಬಿಟ್ಟಳು. ಅದು ಹರಿಯುತ್ತಾ ನನ್ನ ಬಳಿಗೆ ಬಂದು ನಿಂತಂತೆ ನಾನು ಅವುಚಿ ಹಿಡಿದು ಹಾಗೆಯೇ ನಾಚಿಕೊಂಡು ಹಿಡಿದು ನೀರಿಗೆ ಮುಳುಗಿ ಆಳಕ್ಕೆ ಹೋದೆ. ಆಳದಲ್ಲಿ ನನ್ನ ಕೈಯಲ್ಲಿ ಆ ಹುಡುಗಿಯ ರವಿಕೆ, ಕತ್ತಿನ ಸುತ್ತ ಅವಳ ಕಸೂತಿ ನೀರಲ್ಲಿ ಮಿಂಚಿ ಹಾಗೇ ಅದನ್ನು ನೀರ ಒಳಕ್ಕೆ ಕೊಂಡೊಯ್ದ ಹಾಗೇ ಆಳದಲ್ಲಿ ಕಲ್ಲೊಂದರ ಮಾಟೆಯೊಂದರಲ್ಲಿ ಅವಿತಿಟ್ಟು ಹಾಗೇ ತೇಲುತ್ತಾ ಮೇಲಕ್ಕೆ ಬಂದು ‘ಏನೂ ಇಲ್ಲವಲ್ಲಾ ಹೆಂಗಸರೇ’ ಅಂತ ನಕ್ಕೆ.hkh-2.jpg

‘ಏ ಹುಡುಗಾ ಇಷ್ಟು ನೀರು ಕುಡಿದುಂಡು ಉಂಟಾದ ಈ ಹೆಂಗಸರ ಜೊತೆಗೆ ನೀರಾಟ ಆಡುತ್ತೀಯಾ? ಆ ಹುಡುಗಿಯ ರವಿಕೆ ಅವಿತಿಟ್ಟೆಯಾ? ಬಾ ನೀರಿಂದ ಮೇಲಕ್ಕೆ’ ನಡುವಿನವಳು ಮಿಡುಕಿದಳು. ನಾನು ಹೆದರಿ ನಕ್ಕೆ. ‘ಮಾಡೋದು ಮಾಡಿ ನಗುತ್ತೀಯಾ? ನಕ್ಕೋತಿ ಹುಡುಗ! ಬಿಡಿರೇ ಇವನ ನಾನು ನೋಡುತ್ತೇನೆ?’ ಅಂದವಳೇ ಕೊನೆಯವಳು ಅರೆವಯಸ್ಸಿನವಳು ನೀರಿಗೆ ಹಾರಿ ನನ್ನ ಅಟ್ಟಿಸಿಕೊಂಡು ಈಸ ತೊಡಗಿದಳು.

ನಾನು ಹೆದರಿ ಅವಳ ಈಸಾಟಕ್ಕೆ ಹೆದರಿ ನದಿಯ ನಾಲ್ಕು ಕಡೆಗೂ ಈಜಿ ಹರಿದಾಡಲು ನೋಡಿದೆ. ಅವಳು ಬಿಡದೆ, ಉಸಿರು ಬಿಡುತ್ತಾ ಉಟ್ಟ ಬಟ್ಟೆಯಲ್ಲೇ ಈಸುತ್ತಾ, ಬಾಯಿಂದ ಕುಡಿದ ನೀರನ್ನು ಚಿಮ್ಮಿಸಿ ಬಿಡುತ್ತಾ ಕೋಪದಲ್ಲಿ ಅವಳ ಮುಖವು ನೀರಲ್ಲಿ ಕೆಂಪಾಗಿ, ಸೂರ್ಯನಿಗೆ ಅವಳ ಕೆನ್ನೆ ಹೊಳೆದು ಅವಳು ನಾಲ್ಕು ಮೂಲೆಗೂ ಅಟ್ಟಿಸುತ್ತಾ ಮೀನಂತೆ ಬಿಡದೆ ನನ್ನ ಅಟ್ಟಿಸಿಕೊಂಡು ನಾನು ಯಾಕೋ ಹೆದರಿ ನದಿಯ ನಡುವಿನ ಇನ್ನೊಂದು ಬಂಡೆಯೇರಿ ಸುಸ್ತಾಗಿ ಕುಳಿತೆ. ಅವಳೂ ಸುಸ್ತಾಗಿ ನಾ ಏರಿದ ಬಂಡೆಯನೇರಲಾಗದೇ ‘ಏ ಬನ್ನಿರೇ’ ಅಂತ ಅವರ ಕರೆದಳು. (more…)

Thursday August 9, 2007

ಇಂದೆನಗೆ ಆಹಾರ ಸಿಕ್ಕಿತು!

Filed under: ಮಾತಿಗೂ ಆಚೆ — Rasheed @ 8:33 pm

ಎಷ್ಟು ಬರೆಯಬೇಕೆಂದು ಕುಳಿತರೂ ಏನೂ ಬರೆಯಲಾಗುತ್ತಲೇ ಇಲ್ಲ. ಇಷ್ಟು ಹೊತ್ತಾದರೂ ಬೆಳಗು ಇನ್ನೂ ದಿಕ್ಕೆಟ್ಟು ಮಲಗಿರುವಂತೆ ಕಾಣಿಸುತ್ತಿದೆ. ಯಾವಾಗಲೂ ಎದ್ದೊಡನೆ ಕಾಣಿಸುತ್ತಿದ್ದ ಅರಬೀ ಕಡಲಿನ ಒಂದು ಚೂರು ನೀಲಿ ಇನ್ನೂ ಮಂಜಿನಲ್ಲೇ ಮಲಗಿಕೊಂಡಿದೆ. ನದಿ ದಾಟುತ್ತಿರುವ ಕಾಡಾನೆಯಂತೆ ಉದ್ದದ ಹಡಗೊಂದು ನದೀ ಮುಖವಾಗಿ ಬಂದರಿನ ಕಡೆಗೆ ನಿಧಾನಕ್ಕೆ ನಿಂತುಕೊಂಡೇ ಇರುವಂತೆ ಚಲಿಸುತ್ತಿದೆ.sea.jpg ನಿಂತೇ ಹೋಗಿದ್ದ ಮುಂಗಾರು ಮಳೆ  ಇದೀಗ ನೋಡಿದರೆ ಬೆಳಿಗ್ಗೆಯೇ ಬೆಳಕನ್ನು ನುಂಗಿಕೊಂಡು ಮೋಡವಾಗಿ, ಕಾವಳವಾಗಿ ಆಕಾಶದಲ್ಲಿ ಹಾಗೇ ನಿಂತುಕೊಂಡಿದೆ. ನಿಂತ ಗಾಳಿ, ನಿಂತ ಆಕಾಶ ಎಂತಹ ಅಸ್ವಸ್ಥ ಮನಸ್ಸಿಗೂ ಸಕಾರಣ ಹೇಳಬಲ್ಲ ಹಾಗಿರುವ ಮಂಗಳೂರಿನ  ಈವತ್ತಿನ ಬೆಳಗು, ನಗು ಬರುತ್ತದೆ. ಈ ಹವಾಮಾನ, ಈ ವಾತಾವರಣ, ಈ ನಿಂತ ನೀರಿನಂತಿರುವ ಬೆಳಗು ಇವೆಲ್ಲವೂ ನಮಗೆ ಏನನ್ನೋ ಹೇಳಲೆಂದೇ ಹೀಗೆ ನಿಂತುಕೊಂಡಿದೆ ಎಂದು ಭ್ರಮಿಸುವ ನಮ್ಮ ತಿಕ್ಕಲುತನಗಳು!

 ನೆಲಕ್ಕೆ ಸವರಿಕೊಂಡೇ ಹಾರಾಡುತ್ತಿರುವ ಹೆಲಿಕಾಪ್ಟರ್ ಚೆಟ್ಟೆಗಳು, ಮಾಡಿನ ಮೇಲೆ, ತೆಂಗಿನ ಗರಿಗಳ ಮೇಲೆ ಸಾಲಾಗಿ ಕುಳಿತುಕೊಂಡು ಈ ಹಾರುತ್ತಿರುವ ದೇವ ದೂತರಂತಹ ಚಿಟ್ಟೆಗಳನ್ನು ಅಟ್ಟಿಸಿಕೊಂಡು ತಿಂದುಹಾಕಲು ಹೊಂಚುಹಾಕುತ್ತಿರುವ ಕಾಗೆಗಳು, ಈ ದಿನದ ಬೆಳಗಿನ ಆಲಸ್ಯ ಅವುಗಳನ್ನೂ ಬಿಟ್ಟಿರುವಂತೆ ಅನಿಸುತ್ತಿಲ್ಲ. ಬೇಟೆಯನ್ನೂ  ಮರೆತು ಸುಮ್ಮನೆ ಕತ್ತು ಗರಿಗಳನ್ನು ಕೆರೆದುಕೊಂಡು, ಕೊಕ್ಕಿನಿಂದ ತಮ್ಮ ಮೈಯನ್ನೇ ವೈಯಾರದಿಂದ ಸವರುತ್ತಿರುವ ಈ ಕಾಗೆಗಳು, ಹಾರುತ್ತಲೇ ಇರುವ ಈ ಚಿಟ್ಟೆಗಳು ಮತ್ತು ಎಂದಿನ ಹಾಗೇ ರಸ್ತೆಗಳಲ್ಲಿ ಚಲಿಸಲು ತೊಡಗಿರುವ ಮನುಷ್ಯ ಮಾತ್ರರಾದ ನಾವು.

(more…)

Tuesday August 7, 2007

ರೂಮಿಯ ಸಹವಾಸ

Filed under: ಅಲೆಮಾರಿಯ ದಿನಚರಿ — Rasheed @ 11:57 pm

  ಒಬ್ಬ ಸಾಧಾರಣ ಮತ ಪಂಡಿತ. ಇನ್ನೊಬ್ಬ ಅಲೆಮಾರೀ ದರ್ವೇಶಿ. ಒಬ್ಬ ದರ್ಮಗ್ರಂಥಗಳನ್ನು ಅರೆದು ಕುಡಿದವನು.ಇನ್ನೊಬ್ಬ ಕಾಡು ಮೇಡು ಗುಹೆ ಹೆಂಡದ ಪಡಶಾಲೆ ಇಲ್ಲೆಲ್ಲ ಅಲೆದಾಡಿ ಪಡೆದವನನ್ನು ಹುಡುಕುವ ದಾರಿಯಲ್ಲಿ ನನಗೆ ಸಾಂಗತ್ಯ ನೀಡುವವನೊಬ್ಬ ಬೇಕೆಂದು ಕಂಡಕಂಡಲ್ಲಿ ಅರಲುವವನು.sufi.jpg

 `ಸಂಗಾತಿ ದೊರಕಿದರೆ ಏನು ನೀಡುತ್ತೀ?’
 `ನನ್ನ ಶಿರವನ್ನು’
 `ಹಾಗಾದರೆ ನಿನಗೆ ಸಾಂಗತ್ಯ ಬೇಕಾಗಿರುವುದು ಜಲಾಲುದ್ದೀನ್ ರೂಮಿಯದ್ದು’ 

ಹೀಗೆ ಅಫಘಾನಿಸ್ತಾನದ ತಬ್ರೀಜ ಎಂಬಲ್ಲಿನ ಶಂಷ್ ಎಂಬ ಸಂತ ಜಲಾಲುದ್ದೀನ್ ರೂಮಿ ಎಂಬವನನ್ನು ಆತ್ಮಸಾಂಗತ್ಯಕ್ಕಾಗಿ ಸುಮಾರು ಏಳುನೂರ ಐವತ್ತು ವರ್ಷಗಳ ಹಿಂದೆ ಒಂದು ಸಂಜೆ ಭೇಟಿಯಾದ ಅಂತ ಕತೆ ಹೇಳುತ್ತದೆ.

ಆಮೇಲೆ ಅವರಿಬ್ಬರು ಇಹಲೋಕದ ಪರಿವೆಯಿಲ್ಲದೆ ಪರಮಾತ್ಮನ ಕುರಿತು ಮಾತಿನಲ್ಲಿ ಮುಳುಗಿದ್ದು,ಲೋಕ ಏನನ್ನುತ್ತದೆ ಎಂಬ ಗೋಚರವಿಲ್ಲದೆಯೆ ಆತ್ಮಸಾಂಗತ್ಯದಲ್ಲಿಲೀನವಾಗಿದ್ದು,ಇವರಿಬ್ಬರ ಗೆಳೆತನ ಸಹಿಸಲಾಗದೆ ಊರವರು ಆಡಿಕೊಳ್ಳತೊಡಗಿದ್ದು, ಕೊನೆಗೆ ಶಂಷ್ ಗೆಳೆಯನ ಒಳಿತಿಗೆ ಬೇಕಾಗಿ ಅವನನ್ನು ತ್ಯಜಿಸಿ ದೂರವಾಗಿದ್ದು, ಗೆಳೆಯನ ಅಗಲಿಕೆ ಸಹಿಸಲಾಗದೆ ರೂಮಿ ಕವಿತೆಗಳನ್ನು ಬರೆಯಲು ಶುರು ಮಾಡಿದ್ದು,ಗೆಳೆಯನ ಅಗಲಿಕೆಯ ಕುರಿತ ಈ ಕವಿತೆಗಳೇ ಪರಮಾತ್ಮನ ಹುಡುಕುವ ಪರಮಶ್ರೇಷ್ಟ ಸೂಫಿ ಕಾವ್ಯವಾಗಿದ್ದು -ಇದೆಲ್ಲ ರೂಮಿಯ ಕುರಿತ ಕತೆಗಳನ್ನು ಕೇಳಿದರೆ ತಿಳಿಯುತ್ತದೆ. (more…)

Sunday August 5, 2007

ಷಿಲ್ಲಾಂಗಿನ ನಡೆಯುವ ಸುಖ

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:11 pm

 

shillong1.gifಈವಾರ ನಿಮಗೆ ಏನು ಕತೆ ಹೇಳಲಿ? ಯಾವತ್ತೂ ಇಲ್ಲದ ಹಾಗೆ ಈ ಸಂಜೆ ಮನೆಗೆ ಬಂದವನೇ ಸಂಕಟದಲ್ಲಿ ನಿದ್ದೆ ಹೋದೆ. ನಡುನಡುವೆ  ಕಣ್ಣು ಬಿಟ್ಟರೆ ಕಿಟಕಿಯ ಹೊರಗೆ ಸಂಜೆ ಕೆಂಪು ಬೆಳಕಲ್ಲಿ ಮಕ್ಕಳು ಆಟ ಆಡುತ್ತಿದ್ದರು. ಹೆಂಗಸರು ಎಲೆ ಅಡಿಕೆ ಜಗಿಯುತ್ತಾ ಬಯಲಲ್ಲಿ ಕಾಲು ನೀಡಿಕೊಂಡು ಮಾತನಾಡುತ್ತಿದ್ದರು. ನಾನು ಹಠ ಹಿಡಿದು ನಿದ್ದೆ ಹೋಗಲು ನೋಡುತ್ತಿದ್ದೆ. ಯಾಕೋ ಕೈಕಾಲುಗಳಲ್ಲೆಲ್ಲಾ ಸಂಕಟ. ಬೆಂಗಳೂರಿನ, ಗಾಂಧಿ ಬಜಾರಿನ ಸಂಜೆ, ಮಾವಿನ ಹಣ್ಣು, ಕೊತ್ತಂಬರಿ ಸೊಪ್ಪು, ಮಲ್ಲಿಗೆ ಹೂವಿನ ಪರಿಮಳ ಏನೇನೆಲ್ಲಾ ಕನಸು ಬೀಳುತ್ತಿತ್ತು. ಸುಮ್ಮನೇ ಎದ್ದು ಕೂತೆ. ಮನೆ ಎಷ್ಟು ದೂರ ಅನಿಸುತ್ತಿತ್ತು. ಎಷ್ಟು ದೂರ ಅಂದರೂ ಯಾರಿಗೂ ಗೊತ್ತಾಗುವುದಿಲ್ಲ. ಅಸ್ಸಾಮಿನಲ್ಲಿ ರೈಲು ಹಳಿಗಳನ್ನು ನದಿಯ ಮೇಲಿನ ಸೇತುವೆಗಳನ್ನು ಬಾಂಬ್ ಹಾಕಿ ಚುರುಚೂರು ಮಾಡಿದ್ದಾರೆ. ನನ್ನ ಪಕ್ಕದ ಮನೆಯ ಬಂಗಾಲಿ ಯುವಕನೊಬ್ಬನ ತಂದೆ ನಿನ್ನೆ ರಾತ್ರಿ ಕಲ್ಕತ್ತಾದ ಹತ್ತಿರ ಹಳ್ಳಿಯೊಂದರಲ್ಲಿ ತೀರಿಹೋದರು. ಆತನಿಗೆ ತಂದೆಯನ್ನು ನೋಡಬೇಕೆಂದರೂ ಹೋಗಲಾಗಲಿಲ್ಲ. ಸುಮ್ಮನೆ ಕಣ್ಣೀರು ತುಂಬಿಕೊಂಡು ಕೂತಿದ್ದ. ಆತನ ಹಂಡತಿ ಅಳುತ್ತಿದ್ದಳು.

(more…)

Friday August 3, 2007

ಹತ್ತು ವರುಷದ ಹಿಂದೆ ಮನೆಯೊಳಗೆ ಬಂದ ಪ್ರೀತಿಯ ಬಸ್ಸು

Filed under: ಮಾತಿಗೂ ಆಚೆ — Rasheed @ 11:53 pm

suntikoppa-morning.jpgಮಂಗಳೂರಿನ ಮಳೆಗೆ ಬೇಜಾರು ಬಂದು ಹೋಗಿ, ರಜೆ ಹಾಕಿ ಬಸ್ಸಿನಲ್ಲಿ ಕುಳಿತು, ಮಳೆಯ ಮಂಗಳೂರನ್ನು ದಾಟಿ, ಮಳೆ ಬೀಳುತ್ತಲೇ ಇರುವ ಕೊಡಗನ್ನು ದಾಟಿ, ಮಳೆಯ ಮೋಡ ಗುಮ್ಮನ ಹಾಗೆ ಸುಮ್ಮನೇ ನಿಂತಿರುವ ಮೈಸೂರಿನಲ್ಲಿ ಬೆಚ್ಚಗೆ ಹೊದ್ದುಕೊಂಡು ಕೈಗೆ ಸಿಕ್ಕಿದ ಪೇಪರುಗಳನ್ನೆಲ್ಲ ನಿರುಕಿಸುತ್ತ ಕೂತಿದ್ದೆ.

ಹುಬ್ಬು ಗಂಟು ಮಾಡಿಕೊಂಡು ಕಣ್ಣುಗಳನ್ನು ಕಿರಿದುಗೊಳಿಸಿ ನೆತ್ತಿಯನ್ನೆಲ್ಲ ನೆರಿಗೆ ಮಾಡಿಕೊಂಡು ಪೇಪರುಗಳನ್ನು ತಿನ್ನುವ ಹಾಗೆ ಓದುವುದು ನನಗೆ ಸಣ್ಣದಿರುವಾಗಿನಿಂದಲೇ ಬೆಳೆದು ಬಂದಿರುವ ಕೆಟ್ಟಚಾಳಿ. ಈ ಕೆಟ್ಟಚಾಳಿಯಿಂದಲೇ ನಾನು ಹಾಳಾಗಿರುವುನೆಂದೂ, ತಲೆ ಬೇನೆ ಬಂದು ನರಳುವುದೆಂದೂ, ತಲೆಯೊಳಗೆ ನಾನಾ ಸಂಗತಿಗಳನ್ನು ತುಂಬಿಕೊಂಡು ಅವುಗಳನ್ನೆಲ್ಲಾ ಬರೆದು ನಾನು ಬರೆದವುಗಳೆಲ್ಲ ಒಮ್ಮೊಮ್ಮೆ ಅಚ್ಚಾಗಿ ಬಂದು ಅವುಗಳನ್ನು ಓದಿದವರ ತಲೆಯೂ ಹಾಳಾಗುತ್ತಿರುವುದೆಂದೂ ತುಂಬ ವರ್ಷಗಳಿಂದ ನನ್ನ ತಾಯಿ ಅನ್ನುತ್ತಿದ್ದರು.

(more…)

Wednesday August 1, 2007

ಉಮಿಯಾಮ್ ಎಂಬ ನಿಂತ ನದಿ

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:48 pm

ನಿಮ್ಮ ಪತ್ರವಂತೂ ಬರಲೇ ಇಲ್ಲ. ಆದರೂ ನಿಮಗೆ ಬರೆಯುತ್ತಿರುವೆ ಯಾಕೆ ಗೊತ್ತಿಲ್ಲ. ಹೇಗಿತ್ತು ನಿಮ್ಮ ಹುಟ್ಟು ಹಬ್ಬ? ಇಲ್ಲಿ ಈಗ ಹೂ ಅರಳುವ ಕಾಲ ಶುರವಾಗಿದೆ. ಬೋಳುಮರಗಳ ತುಂಬ ಹೂ. ಬೇಲಿಯಲ್ಲಿ ಹೂ, ಹುಲ್ಲಿನ ದಳಗಳಲ್ಲಿ ಹೂ. ಇನ್ನು ಮುಂದೆ ಸೆಪ್ಟೆಂಬರ್‌ವರೆಗೆ ಒಂದಿಲ್ಲೊಂದು ಹೂಗಳು ಅರಳುತ್ತಲೇ ಇರುತ್ತದೆ. ಈವತ್ತು ಸಂಜೆ ಇಡೀ ದಿನ ಮೋಡಕವಿದು ಕೊಂಚ ಹೊತ್ತು ಸೂರ್ಯನ ಬೆಳಕಿತ್ತು. ನಸು ಬೆಳಕಲ್ಲಿ ಬೀಸುವ ಗಾಳಿಗೆ ಪ್ಲಂ ಮರಗಳ ತುದಿಯಲ್ಲಿ ಚೆರ್ರಿಗಿಡಗಳ ತುದಿಯಲ್ಲಿ ಬೆಳ್ಳಗೆ ಕೆಂಪಗೆ ಚಿಟ್ಟೆಗಳಂತೆ ಹಾರುವ ಹೂವಿನ ದಳಗಳು. ಹೂವೋ ಚಿಟ್ಟೆಗಳೋ ಗೊತ್ತಾಗದೆ ನೋಡುತ್ತಲೇ ಇದ್ದೆ. ಕಳೆದವಾರ ನಾವೂ ಇಲ್ಲಿ ಒಂದು ಹುಟ್ಟು ಹಬ್ಬ ಆಚರಿಸಿದೆವು. ಯಾರದ್ದು ಎಂದು ಹೇಳುವುದಿಲ್ಲ.umiam.jpg

ನಾನು, ನನ್ನ ಹೆಂಡತಿ  ಮೋಳಿ, ಮತ್ತೊಬ್ಬಳು ಜಾಣೆಯಾದ ಬೆಂಗಾಲಿ ಹುಡುಗಿ ಮತ್ತು ನಡು ವಯಸ್ಸಿನ ರಸಿಕನಾದ ಕಾವ್ಯ ಮತ್ತು ಸಂಗೀತವನ್ನು ಪ್ರೇಮಿಸುವ ಸರ್ದಾರ್ಜಿ. ನಾವು ನಾಲ್ಕೂ ಜನ ಸರ್ದಾರ್ಜಿಯ ಪುಟ್ಟಕಾರಿನಲ್ಲಿ ಬೆಟ್ಟ ಸಾಲುಗಳನ್ನು ಇಳಿಯುತ್ತಾ ನಡುಮಧ್ಯಾಹ್ನದ ಹೊತ್ತು ಉಮಿಯಾಮ್ ಎಂಬ ನದಿಯ ತೀರದಲ್ಲಿ ಅಲೆಗಳನ್ನು ನೋಡುತ್ತಾ ಕುಳಿತಿದ್ದೆವು. ಸರ್ದಾರ್ಜಿ ಜಸ್‌ಬೀರ್ mouth organ ನಲ್ಲಿ ಸಂಜೆಯ ರಾಗವೊಂದನ್ನು ನುಡಿಸುತ್ತಿದ್ದ. ಬೆಂಗಾಲಿ ಹುಡುಗಿ ನದಿಯೊಳಗೆ ಬಿದ್ದು ಹೋಗುವೆ ಎಂದು ನಮ್ಮನ್ನು ಹೆದರಿಸುತ್ತಿದ್ದಳು. ಮೋಳಿ ನದಿಯ ತೀರಕ್ಕೆ ಬರುವ ಹಕ್ಕಿಗಳನ್ನೂ ಕಾಗೆಗಳನ್ನೂ ಮಾತನಾಡಿಸುತ್ತಾ ಕುಳಿತಿದ್ದಳು. ನದಿಯ ನೀರಿಗೆ ಅಣೆಕಟ್ಟು ಕಟ್ಟಿ ನದಿ ದೊಡ್ಡ ದೊಡ್ಡ ಗುಡ್ಡಗಳನ್ನು ಮುಳುಗಿಸಿ ಸರೋವರದಂತೆ ನಿಂತಿತ್ತು.  ಹಳೆಯ ರಸ್ತೆಗಳು, ಹಳ್ಳಿಗಳು, ಕಾಡು ಎಲ್ಲವೂ ನೀರಲ್ಲಿ ಮುಳುಗಿತ್ತು. ನನಗಂತೂ ಸಿಕ್ಕಾಪಟ್ಟೆ ಹಸಿವಾಗುತ್ತಿತ್ತು. ಈ ಷಿಲ್ಲಾಂಗ್ ಒಂದು ಕಾಲದಲ್ಲಿ ರಸಿಕರ, ಸಂಗೀತ ಪ್ರೇಮಿಗಳ ಊರಾಗಿತ್ತು. ರವೀಂದ್ರನಾಥ ಠಾಗೂರ್ ಎರಡು ಕಾದಂಬರಿಗಳನ್ನು ಈ ಊರಲ್ಲಿ ಕುಳಿತು ಬರೆದಿದ್ದರು. ಈಗ ಎಲ್ಲವೂ ಮುಳುಗಿ ಹೋದ ಹಡಗಿನಂತೆ ಆಗಿದೆ ಎಂದು ವಾಪಸ್ಸು ಬರುವಾಗ ಜಸ್‌ಬೀರ್ ಅನ್ನುತ್ತಿದ್ದರು. ಈ ಜಸ್‌ಬೀರ್ ತುಂಬ ತಮಾಷೆಯ ಪ್ರೀತಿಯ ಮನುಷ್ಯ ಒಮ್ಮೆ ಶಿಲ್ಲಾಂಗ್‌ನಿಂದ ತನ್ನ ಊರಾದ ಪಂಜಾಬಿಗೆ ಒಂದು ಮದುವೆಗೆ ಹೋಗಿದ್ದರಂತೆ. ಮದುವೆಯಲ್ಲಾ ಮುಗಿದ ಮೇಲೆ ಶಿಲ್ಲಾಂಗ್ ನ ಶೈಲಿಯಂತೆ ಮುದ್ದಾದ ಪಂಜಾಬಿ ಹೆಂಗಸೊಬ್ಬಳನ್ನು ನೃತ್ಯ ಮಾಡಲು ಕರೆದರಂತೆ. ಆ ಹೆಂಗಸು ರೇಗಿ ‘ನಿನ್ನ ಅಮ್ಮನ ಕೈ ಹಿಡಿದು dance ಮಾಡು’ ಎಂದು ಬೈದಳಂತೆ. ಆ ಅವಮಾನ ಜಸ್‌ಬೀರ್‌ಗೆ ಇನ್ನೂ ಹೋಗಿಲ್ಲ. ಅದಕ್ಕೇ ಆತನಿಗೆ ಬಯಲು ಭೂಮಿಯ plain ಹೆಂಗಸು ಇಷ್ಟವಾಗುವುದೇ ಇಲ್ಲ. ಗುಡ್ಡಗಾಡಿನ, ನಿಸ್ಸಂಕೋಚದ, ಕಪಟವಿಲ್ಲದ ಮನುಷ್ಯರೇ ಚಂದ ಅಂತ ಅನ್ನುತ್ತಲೇ ಇರುತ್ತಾರೆ. ಈಗ ಇಲ್ಲಿ ಕಿಟಕಿಯಿಂದ ಅರ್ಧಚಂದ್ರ ಮತ್ತು ಅಸಂಖ್ಯಾತ ನಕ್ಷತ್ರಗಳು ಕಾಣಿಸುತ್ತಿವೆ.ಈಗ ನನ್ನ ಬಳಿ ಭೂತಾನದಿಂದ ಬಂದ ಕೇಸರ್ ಕಸ್ತೂರಿ ಎಂಬ ಪೇಯವಿದೆ. cheers! ಇನ್ನೂ ಗಟ್ಟಿ ಮುಟ್ಟಾಗಿ ಇರಿ.

Blog at WordPress.com.