
ಈ ಮಳೆ ಚಳಿಗಾಳಿಯ ನಡುವೆ ತೀರಿಹೋದ ಒಂದು ಗಂಡಸು-ಒಂದು ಹೆಂಗಸು, ಅಥವಾ ಒಬ್ಬಳು ಮುದುಕಿ-ಒಬ್ಬ ಮುದುಕ ಅಥವಾ ಇಬ್ಬರನ್ನೂ ಸೇರಿಸಿದರೆ- ತೀರಿ ಹೋದ ಎರಡು ಜೀವಗಳು.
ನಾವು ಹೇಗೆ ಕರೆದರೂ ಸಿಟ್ಟುಮಾಡಿಕೊಳ್ಳದೆ, ಗೊಣಗದೆ ಇವರಿಬ್ಬರೂ ತಮ್ಮ ಪ್ರತ್ಯೇಕ ಗೋರಿಗಳಲ್ಲಿ ಮಣ್ಣಲ್ಲಿ ಮಣ್ಣಾಗಿ ಮಲಗಿದ್ದಾರೆ. ಹಾಗೆ ನೋಡಿದರೆ ಈ ಇಬ್ಬರು ಒಬ್ಬರನೊಬ್ಬರು ನೋಡಿಯೇ ಇಲ್ಲ. ಒಬ್ಬರು ಬದುಕಿದ್ದದು ಇನ್ನೊಬ್ಬರಿಗೆ ತಿಳಿದೂ ಇಲ್ಲ. ಇವರ ಧರ್ಮಗಳು, ಇವರ ಧರ್ಮಗ್ರಂಥಗಳು, ಇವರಿಬ್ಬರ ದೇವರುಗಳು, ಇವರು ನಂಬಿಕೊಂಡ ಸ್ವರ್ಗ ನರಕಗಳು ಬೇರೆ ಬೇರೆಯೇ ಆಗಿವೆ. ತನ್ನ ಧರ್ಮವನ್ನು ಬಿಟ್ಟು, ತನ್ನ ಧರ್ಮ ಗ್ರಂಥವನ್ನು ಬಿಟ್ಟು, ತನ್ನ ದೇವರನ್ನು ಬಿಟ್ಟು- ಈ ಇಷ್ಟು ದೊಡ್ಡ ಪ್ರಪಂಚದಲ್ಲಿ ಬೇರೆ ಧರ್ಮ. ಬೇರೆ ದೇವರು, ಬೇರೆ ಧರ್ಮಗ್ರಂಥಗಳು ಇವೆ ಎಂಬುದು ಈ ಇಬ್ಬರಿಗೂ ಮಣ್ಣಾಗಿ ಹೋದ ಮೇಲೂ ಗೊತ್ತಾಗಲಿಲ್ಲ. ಈ ಇಬ್ಬರೂ ಅಷ್ಟೊಂದು ಅಪರಿಚಿತರೂ ಮುಗ್ಧರೂ ಆಗಿದ್ದರು. ಜೊತೆಗೆ ಈ ಮುಂಗಾರಿನ ಮೊದಲ ಚಳಿಗಾಳಿ ಮಳೆಗೆ ತೀರಿ ಕೊಂಡರು. ಈ ಇವರಿಬ್ಬರನ್ನು ಒಂದು ಕಡೆಗೆ ತರುವುದು ಈ ಮಳೆ, ಅವರು ಮಲಗಿರುವ ಈ ಭೂಮಿ ಮತ್ತು ಈ ಅಂಕಣದ ಸಾಲುಗಳು ಮಾತ್ರ.
* * *
ನನಗೆ ಬಾಲ್ಯದಲ್ಲಿ ಹಾಲನ್ನೂ, ಹಾಡುಗಳನ್ನೂ, ಕಥೆಗಳನ್ನೂ, ಕನಸುಗಳಿಗೆ ಅರ್ಥವನ್ನೂ ಎರೆದುಕೊಟ್ಟ ಮರೀಂಞ ಎಂಬ ಇ ತೀವ್ರ ಪ್ರೀತಿಯ, ತೀವ್ರ ಲಾಲಸೆಯ ಮುದುಕು ಹೆಂಗಸು ತೀರಿಹೋದರು ಎಂದು ಗೊತ್ತಾಗಿದ್ದು ಅವರು ತೀರಿಹೋಗಿ ಅವರ ಮೂರನೆಯ ದಿನದ ಪ್ರಾರ್ಥನೆ ಕಳೆದು ಯಾರೋ ಬರೆದ ಕಾಗದ ಎಷ್ಟೋ ದಿನಗಳು ಕಳೆದು ತಲುಪಿದ ಮೇಲೆಯೇ. ಅದರ ನಡುವೆ ಬಂದು ಹೋದವರು ಕೂಡ ಮರೀಂಞ ತೀರಿದ್ದನ್ನು ಹೇಳಲು ಮರೆತುಬಿಟ್ಟಿದ್ದರು. ಆಮೇಲೆ ಪಕ್ಕನೆ ನೆನಪಿಸಿಕೊಂಡರು.
ಮೊದಲು ಅಳು ಬರಲಿಲ್ಲ. ಮಂದಹಾಸದಂತಹ ವಿಷಾದವೊಂದು ಹಾಗೇ ತೇಲಿಬಂದು ಗಂಟಲು ಕಟ್ಟಿತು. ಮರೀಂಞಳಿಗೆ ಕಾಲ ಕಳೆದು ಹೋಗುತ್ತಿರುವುದು ಗೊತ್ತಾಗುತ್ತಿರಲಿಲ್ಲ. ಮಕ್ಕಳು ಬೆಳೆದು ದೊಡ್ಡವರಾಗುವುದನ್ನು ಕಾಣಲು ಮಕ್ಕಳೂ ಇರಲಿಲ್ಲ. ತೀರಿ ಹೋಗುವುದೇನು ತೀರಿಹೋದವರನ್ನು ಕಳೆದುಕೊಳ್ಳುವುದೇನು ಎಂದು ಗೊತ್ತಾಗಲು ಕಟ್ಟಿಕೊಂಡ ಗಂಡಸೂ ಇರಲಿಲ್ಲ. ಮದುವೆ ಅಗಿತ್ತೋ ಇಲ್ಲವೋ ಎಂಬುದನ್ನು ಸಣ್ಣ ಹುಡುಗರಂತಿದ್ದ ನಮ್ಮ ಯಾರ ಬಳಿ ಹೇಳಿಯೂ ಇರಲಿಲ್ಲ. ನಿಜ ಹೇಳಬೇಕೆಂದರೆ ನಮ್ಮ ಮರೀಂಞಳಿಗೆ ಮದುವೆ ಆಗಿತ್ತೋ ಇಲ್ಲವೋ ಮಕ್ಕಳು ಇದ್ದರೋ ಇಲ್ಲವೋ ಎನ್ನುವುದು ಈ ಹೊತ್ತಿಗೂ ನನಗು ಗೊತ್ತಿಲ್ಲ. ಆದರೆ ಮರೀಂಞಳಿಗೆ ಮದುವೆ ಎಂಬುದರ ಸುಖ ಗೊತ್ತಿತ್ತು. ಮಕ್ಕಳನ್ನು ಹೆರುವ ಬೇನೆ ಗೊತ್ತಿತ್ತು. ಹಾಗೆಯೇ ಮಗುವನ್ನು ಸ್ನಾನ ಮಾಡಿಸುವ, ಎಣ್ಣೆ ತಟ್ಟುವ, ತೊಟ್ಟಿಲಲ್ಲಿ ಮಲಗಿಸುವ, ಬೈತಲೆ ಬಾಚಿ ಕೆನ್ನೆಗೆ ಕರಿಯ ಮಸಿ ಬೊಟ್ಟು ತಾಗಿಸಿ ಅಂಗಳಕ್ಕೆ ಆಡಲು ಕಳಿಸುವ ಕಲೆ ಗೊತ್ತಿತ್ತು.. ಅದಕ್ಕಿಂತಲೂ ದೊಡ್ಡದು ಅಂದರೆ ನಮ್ಮ ಮರೀಞಂ ಒಲೆಯ ಮುಂದೆ ಕುಳಿತುಕೊಂಡು ಅಕ್ಕಿಯ ಹಿಟ್ಟನ್ನು ನಾದುತ್ತ, ಉಂಡೆ ಮಾಡುತ್ತ, ತಿರುಗು ಮಣೆಯಲ್ಲಿ ಒತ್ತಿ ಇಟ್ಟು ಬೆರಳುಗಳಿಂದ ಅದನ್ನು ತಟ್ಟುತ್ತ ಉರುಟು ಉರುಟು, ಮೃದಮೃದು ರೊಟ್ಟಿಗಳನ್ನು ಮಣ್ಣಿನ ಹೆಂಚಿನ ಮೇಲೆ ಸುಟ್ಟು ಕೆಂಡದ ಮೇಲೆ ಇಟ್ಟು ಹೊಕ್ಕುಳ ಬರಿಸಿ ಸುತ್ತು ಸಾಲಾಗಿ ಕುಳಿತಿದ್ದ ನಮಗೆಲ್ಲರಿಗೂ ಸರದಿಯಂತೆ ನೀಡುತ್ತಿದ್ದಳು. ನಾವೆಲ್ಲಾದರೂ ಸರದಿ ತಪ್ಪಿಸಿ ಕೇಳಿದರೆ ಕಾಲ ಬಳಿಯಲ್ಲಿದ್ದ ಇಕ್ಕುಳವನ್ನು ಕೈಗೆ ಎತ್ತಿಕೊಂಡು ನಮ್ಮ ಮೂಗು ಚಿವುಟಿ ಬಿಡುವೆನೆಂದ3ಉ ಹೆದರಿಸುತ್ತಿದ್ದಳು. ನಾವು ಯಾವತ್ತೂ ಮರೀಂಞ ರೊಟ್ಟಿ ಸುಡುವಾಗ ಸರದಿ ತಪ್ಪಿಸಿಯೇ ಇಲ್ಲ. ಮರೀಂಞ ಎಂಬ ಈ ಹೆಂಗಸಿನ ಇಕ್ಕುಳ ಈವತ್ತಿಗೂ ನನಗೆ ಯಾವ ಧರ್ಮ ಗ್ರಂಥಗಳ ಕಟ್ಟಳೆಗಳಿಗಿಂತಲೂ ಆತ್ಮೀಯವೂ, ಹೆದರಿಕೆ ಉಂಟುಮಾಡುವಂತಹದೂ ಆಗಿದೆ.
ಮರೀಂಞ ನನ್ನಂತಹ ಹತ್ತಾರು ಹಸುಳೆಳಗ ಹೊಕ್ಕಳು ಬಳ್ಳಿ ಕತ್ತರಿಸಿ, ತಾಯಿಯ ಕರಳುಗಳಿಂದ ಬೇರೆ ಮಾಡಿ ಕಾಲುಗಳ ನಡುವೆ ಮಲಗಿಸಿ ಎಣ್ಣೆ ನೀವಿದ್ದಳು. ನನ್ನಂತಹ ಹತ್ತಾರು ವಕ್ರವಕ್ರವಾಗಿದ್ದ ತಲೆಬುರುಡೆಗಳಿಗೆ ಎಣ್ಣೆ ನೀವಿ, ತಡವಿ ಉರುಟು ಮಾಡಿ, ಎಲೆಗಳಿಂದ ಸುತ್ತಿ ಇಟ್ಟು, ನಮ್ಮ ತಲೆಗಳು ನೇರವಾಗಿ ಇರುವಂತೆ ಮಾಡಿದ್ದಳು. ಹಾಗೆ ಹತ್ತಾರು ಮನೆಗಳಲ್ಲಿ ರೊಟ್ಟಿ ಸುಡುತ್ತ, ಮಕ್ಕಳನ್ನು ಶಾಲೆಗೆ ಕಳಿಸುತ್ತಾ, ರಾತ್ರಿ ಮಲಗುವಾಗ ಎಂತಹ ಮಕ್ಕಳ ಕಿವಿಗಳಲ್ಲೂ ಕಥೆಗಳನ್ನೂ ಹಾಡುಗಳನ್ನೂ ಹೇಳುತ್ತಿದ್ದಳು. ರಾತ್ರಿ ನಾವು ಕಂಡ ಕನಸುಗಳ ಅರ್ಥ ಏನೆಂದು ಕೇಳಲು ನಾವು ಮರೀಂಞನ ಹುಡುಕುತ್ತಾ ಮನೆಯೆಲ್ಲ ಓಡಾಡಿದರೆ ನಮ್ಮ ಮರೀಂಞ ಬಚ್ಚಲು ಒಲೆಯ ಮುಂದು ಬೀಡಿ ಸೇದುತ್ತಾ ಪುಸಪುಸ ಹೊಗೆ ಬಿಡುತ್ತಾ ಕೂತಿರುತ್ತಿದ್ದಳು.
ಮರೀಂಞ ತೀರಿಹೋಗಿದ್ದು ಹಜ್ ಹಬ್ಬದ ದಿನ. ಅಂದರೆ ದೊಡ್ಡ ಹಬ್ಬದ ದಿನ. ತೀರಿ ಹೋಗುವ ಕಾಲಕ್ಕೆ ಮರೀಂಞನ ಮನೆಗೆ ಶ್ರೀಮಂತಿಕೆ ಬಂದಿತ್ತು. ತಮ್ಮನ ಮಗ ದುಬಾಯಿಗೆ ಹೋಗಿ ಸಂಸಾರ ಶ್ರೀಮಂತವಾಗಿತ್ತು. ಆದರೆ ಮರಿಂಞಳಿಗೆ ಶ್ರೀಮಂತಿಕೆ ಗೊತ್ತಾಗುತ್ತಿರಲಿಲ್ಲ. ಅಷ್ಟು ಹೊತ್ತಿಗೆ ಮರೀಂಞಳಿಗೆ ಕಣ್ಣಲ್ಲಿ ಪೊರೆ ಬಂದು ಕಣ್ಣು ಕಾಣಿಸುತ್ತಿರುಲಿಲ್ಲ. ತನ್ನ ಮುಂದೆ ಇರುವುದು ಬೇರೆ ಏನೋ ಎಂದು ಅನಿಸುತ್ತಿತ್ತು. ಬರೀ ಆಕೃತಿಗಳು ಕಾಣಿಸುತ್ತಿದ್ದವು ಮುಖ ಗೊತ್ತಾಗುತ್ತಿರಲಿಲ್ಲ.
ಹಜ್ ಹಬ್ಬದ ದಿನ ಗಂಡಸರೆಲ್ಲ ಬೆಳ್ಳಗಿನ ಉಡುಪು ಧರಿಸಿ ಪ್ರಾರ್ಥಿಸಲು ಹೋಗುವುದರಲ್ಲಿದ್ದಾಗ ಮರೀಂಞ ಹಬ್ಬದ ಬೆಳಗಿನ ತಿಂಡಿಯನ್ನು ಬಾಯಿಗೆ ಇಟ್ಟಿದ್ದವರು ಬಿಕ್ಕಳಿಕೆ ಬಂದು ಎಲ್ಲರಿಗೂ ಏನಾಗುತ್ತಿದೆ ಎಂದು ಗೊತ್ತೂ ಆಗದೆ ತೀರಿಕೊಂಡರು. ಹೊರಗೆ ಮಳೆ ಬಿಸಲು ಆಟವಾಡುತ್ತಿದ್ದವು.
* * ******
ಮರೀಂಞ ತೀರಿಹೋದ ಊರು ಕಳೆದು, ಜಿಲ್ಲೆ ಕಳೆದು, ರಾಜ್ಯ ಕಳೆದು, ಕೇರಳ ರಾಜ್ಯದ ಗಡಿ ಆರಂಭವಾಗಿ, ತೆಂಗು ಕರಿಮೆಣಸು ರಬ್ಬರಿನ ತೋಟಗಳು ಕಾಣತೊಡಗಿದರೆ ಅಲ್ಲಿ ಬೆಟ್ಟಕ್ಕೆ ಬೆಟ್ಟವನ್ನು ಎತ್ತಿ ಕಟ್ಟಿಸಿ ನಿಲ್ಲಿಸಿದಂತೆ ಕಾಣುವ ಕಾಡಿನ ಸೆರಗು ಇದೆ. ಈ ಊರಿನ ಹೆಸರು ಕಾಡನ್ ಮಲೆ. ಇಲ್ಲಿ ಸದಾ ಕಾಡಾನೆಗಳು ಭೇಟಿ ಕೊಟ್ಟು ಹೋಗುವ ಸ್ಥಳದಲ್ಲಿ ಒಂದು ಚರ್ಚ್ ಇದೆ. ಕಾಡು ಆನೆಗಳು ಬಂದು ಹಸಿಮಣ್ಣು ಕಂಡು ಗೊರಿಗಳ ಅಗೆಯುವುದೂ ಇದೆ. ಅಲ್ಲಿ ಯಾವಾಗಲೂ ಮಂಜೋ, ಮಳೆಯೋ ಬೆಳ್ಳಗೆ ಇದ್ದೇ ಇರುತ್ತದೆ. ಅಲ್ಲಿ ಗೋರಿಯೊಂದರಲ್ಲಿ ನಮ್ಮ ಕೊಚ್ಚು ಚೇಟ ಮಲಗಿದ್ದಾರೆ. `ಚೇಟ’ ಎಂದರೆ ಮಲೆಯಾಳಂನಲ್ಲಿ ಅಣ್ಣ ಅಂಥ ಅರ್ಥ. ಕೊಚ್ಚು ಅಂದರೆ ಮಗು. ಕೊಚ್ಚು ಚೇಟ ತೀರಿ ಹೋಗುವಾಗ ಇವರಿಗೆ ನೂರು ವರ್ಷಗಳಾಗಿರಬಹುದು ಎಂದು ಆ ಕಾಡುಮಲೆ ಎಂಬ ಊರಿನ ಮುದುಕ ಮುದುಕಿಯರು ಹೇಳುತ್ತಾರೆ.
ಕೊಚ್ಚು ಚೇಟನನ್ನು ನಾನು ಹತ್ತು ಬಾರಿ ನೋಡಿರಬಹುದು. ಹತ್ತುಬಾರಿಯೂ ಮಲೆ ಇಳಿದು ಮಲೆ ಹತ್ತಿ ಒಂದು ಮಲೆಯ ತುದಿಗಿಂತ ಕೊಂಚ ಕೆಳಗಿರುವ ಕೊಚ್ಚು ಚೇಟನ ಪುಟ್ಟ ಮನೆ ತಲುಪುವಾಗ ಮನೆಯ ಅಂಗಳದಲ್ಲಿ ನಾನಾ ಬಗೆಯ ಹೂವುಗಳೂ ಹಣ್ಣುಗಳೂ ಬೆಳೆದು ನಿಂತಿರುತ್ತಿದ್ದವು. ಚೇಟನ ಬದುಕಿರುವ ಕೊಂಚ ಸಣ್ಣ ಪ್ರಾಯದ ಆದರೆ ಎಪ್ಪತ್ತುದಾಟಿರುವ ಹೆಂಡತಿ ಬಾಯಿತುಂಬಾ ನಗುತ್ತಿದ್ದ ನಿಂತಿರುತ್ತಿದ್ದರು. ಕೊಚ್ಚು ಚೇಟ ಮಾತ್ರ ಕಾಣಿಸುತ್ತಿರಲಿಲ್ಲ. ಆದರೆ ಕರೆಯುವುದಕ್ಕೆ ಮೊದಲೇ ಕೊಚ್ಚು ಚೇಟ ವಾಲುತ್ತಾ, ತೆವಳುತ್ತಾ ಬಂದು ಬಿಡುತ್ತಿದ್ದರು. ಅವರ ಬದಿಯಲ್ಲಿ ಯಾವಾಗಲೂ ಗೇರುಹಣ್ಣಿನ ಭಟ್ಟಿ ಇಳಿಸಿದ ಸರಾಯಿಯ ಒಂದು ಕ್ಯಾನ್ ಹಾಗೂ ಒಂದು ಲೋಟ ಇರುತ್ತಿತ್ತು. ಕೊಚ್ಚು ಚೇಟ ತಾನು ಗೇರಿನ ಸರಾಯಿ ಕುಡಿದೇ ಇನ್ನೂ ತೀರಿ ಹೋಗದೆ ಹಾಗೆ ಬದುಕಿರುವೆ ಎಂದು ಮಗುವಿನ ಹಾಗೆ ಕೆಂಪಗೆ ನಗುತ್ತಾ ಹೇಳುತ್ತಿದ್ದರು.
ಕೊಚ್ಚು ಚೇಟನಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಕಳ್ಳಭಟ್ಟಿ ಕಾಯಿಸದ್ದಕ್ಕೆ ಪೋಲಿಸರು ಕೊಂಡುಹೋಗಿ ಸಖತ್ತಾಗಿ ಹೊಡೆದು ಕಣ್ಣು ಕಾಣಿಸದ ಹಾಗೆ ಮಾಡಿದ್ದರು. ಕೊಚ್ಚು ಚೇಟನ ಬಳಿ ಒಂದು ಕೋಲು ಇತ್ತು. ಆ ಕೋಲಿನ ಜೊತೆ ಎಂತಹ ಮಲೆಯನ್ನೂ ಹತ್ತಿ ಎಂತ ಬರೆಯನ್ನೂ ಇಳಿದು ಕೊಚ್ಚು ಚೇಟ ಗೇರು ಹಣ್ಣು ಇಲ್ಲದ ಸಮಯದಲ್ಲಿ ನಾಡಬೆಲ್ಲ ಹುಡುಕಿ ತಂದು ಸರಾಯಿ ಕಾಯಿಸಿ ಕುಡಿಯುತ್ತಿದ್ದರು.
ಕೊಚ್ಚು ಚೇಟ ಕುಡಿಯುತ್ತಿದ್ದರೂ, ಕುಡಿದು ಸುಮ್ಮನೆ ಇರುತ್ತಿದ್ದರು. ಇಲ್ಲದಿದ್ದರೆ ಗೊಣಗುತ್ತಿದ್ದರು. ಅವರು ಗೊಣಗುವುದು ಕೆಲವೊಮ್ಮೆ ಮಲಯ ಮೇಲಿನ ಕಾಡು ಜನರ ಮಂತ್ರದಂತೆ ಕೇಳಿಸುತ್ತಿತ್ತು. ಅವರ ಮಂತ್ರ ಹೆಂಡತಿಗೆ ಮಾತ್ರ ಅರ್ಥವಾಗಿ ಆಕೆಯೂ ಬೈಯುತ್ತಾ, ನಾಚಿಕೊಳ್ಳುತ್ತಾ, ಲಗುಬಗೆಯಿಂದ ಓಡಾಡುತ್ತಾ ಉಪ್ಪಿನಕಾಯಿಯನ್ನೊ, ಒಣಗಿಸಿಟ್ಟ ಮಾಂಸವನ್ನೂ ಕಾಯಿಸಿಯೋ ಏನೂ ಇಲ್ಲದಿದ್ದರೆ ಒಂದು ತುಂಡು ಸುಟ್ಟ ಮೀನಿನ ಬಾಲವನ್ನೋ ತಂದು ಮುಂದೆ ಇಡುತ್ತಿದ್ದಳು. ಕೊಚ್ಚು ಚೇಟ ಕುಡಿಯುತ್ತಿದ್ದರು.
ಕೊಚ್ಚು ಚೇಟನ ಮೊದಲ ಹೆಂಡತಿ ತೀರಿಹೋಗಿತ್ತು. ಅದರಲ್ಲಿ ಎಷ್ಟು ಮಕ್ಕಳಿದೆಯೋ ಯಾರಿಗೂ ಗೊತ್ತಿಲ್ಲ. ಎರಡನೇ ಹೆಂಡತಿಯ ಮೂರು ಮಕ್ಕಳಲ್ಲಿ ಒಬ್ಬನಿಗೆ ಬಾಯಿಬಾರದೆ, ಇನ್ನೊಬ್ಬನಿಗೆ ಕಿವಿ ಕೇಳದೆ, ಮತ್ತೊಬ್ಬನಿಗೆ ಏನೂ ತಿಳಿಯದೆ ಮೂವರು ಮಿಕ ಮಿಕ ನೋಡುತ್ತಲೇ ಬೆಳೆದಿದ್ದವು. ನಾಲ್ಕನೆಯ ಮಗ ಜಾಣನಾಗಿ ಓದುತ್ತಿದ್ದವನನ್ನು ಶಾಲೆಗೆ ಕಳಿಸದೆ ಬೆಲ್ಲ ಕಾಯಿಸಲು ಹೇಳಿ ಅವನೂ ಮಂಕಾಗಿದ್ದನು.
ಚೇಟನನ್ನು ಈಗಿನ ಹೆಂಡತಿ ಗೊಣಗಿದರೂ ಪೂಜಿಸುತ್ತಿದ್ದಳು. ನಾಚಿಕೊಳ್ಳುತ್ತಿದ್ದಳು. ಮಕ್ಕಳು ದ್ವೇಶಿಸುತ್ತಿದ್ದರು ಮತ್ತು ಹೆದರುತ್ತಿದ್ದರು. ಕೊಚ್ಚು ಚೇಟ ಪ್ರಾಥರ್ಿಸುತ್ತಿರಲಿಲ್ಲ. ಆದರೂ ಆಕಾಶದ ಕಡೆಗೆ ಕುರುಡಕಣ್ಣಿನಿಂದ ನೋಡಿ ಹಾಗೆಯೇ ಬಾಯಲ್ಲಿದ್ದ ಎಲೆ ಅಡಿಕೆಯನ್ನು ಜಗಲಿಯ ಹೊರಕ್ಕೆ ಉಗಿಯುತ್ತಿದ್ದರು. ಊರಲ್ಲಿ ಕೊಚ್ಚು ಚೇಟನನ್ನು ದುಷ್ಟ ಎಂದು ಕರೆದವರಿಲ್ಲ.
ಕೊಚ್ಚು ಚೇಟ ಮಳೆಯಲ್ಲಿ ತೀರಿ ಹೋಗುವ ಮೊದಲು ಜೋರಾಗಿ ಗಾಳಿ ಬೀಸಿ, ನಾಲ್ಕೈದು ಬಾಳೆಯ ಗಿಡಗಳೂ ಪಪ್ಪಾಯಿ ಮರಗಳೂ ನಡು ಕಡಿದು ಬಿದ್ದಿದ್ದವು. ಸಿಡಿಲಿಗೆ ಮನೆಯ ಮುಂದಿನ ಎರಡು ತೆಂಗಿನ ತುದಿ ಕರಕಲಾಗಿತ್ತು. ತೀರಿ ಹೋಗುವ ಮೊದಲು ಕೊಚ್ಚು ಚೇಟನಿಗೆ ಇವೆಲ್ಲಾ ಏನಾಗಿ ಕಂಡಿರಬಹುದು? ಯಾರಿಗೆ ಗೊತ್ತು?
* * *
ಮಳೆಯಲ್ಲಿ ತೀರಿದ ಈ ಜೀವಗಳ ಮೇಲೆ ಮತ್ತೆ ಆಕಾಶ ಮಳೆ ಸುರಿಸುತ್ತಲೇ ಇದೆ. ಈ ಎರಡು ಜೀವಗಳು ಭೂಮಿಯ ಪ್ರಳಯವನ್ನೂ, ಅಂತಿಮ ದಿನವನ್ನೂ ನ್ಯಾಯ ತೀಮರ್ಾನವನ್ನೂ, ಅರಿತುಕೊಂಡೇ ಮಣ್ಣಾಗಿದ್ದಾರೆ. ಅಲ್ಲಿಯವರೆಗೆ ಮಣ್ಣಿನಡಿಯಲ್ಲಿ ಅವರವರ ಪಾಪ ಪುಣ್ಯಗಳಿಗೆ ಪಡೆಯುವುದ ಪಡೆಯುತ್ತಾ ಇರುತ್ತಾರೆ ಎಂದು ಇವರಿಬ್ಬರನ್ನೂ ಬೇರೆ ಬೇರೆ ಪೂಜೆ ಮಂದಿರಗಳ ಬಳಿ ಬೇರೆ ಬೇರೆ ರುದ್ರಭೂಮಿಗಳಲ್ಲಿ ಮಣ್ಣು ಮಾಡಿ ಹಿಡಿ ಮಣ್ಣು ಸುರಿದು ಬಂದವರು ನಂಬಿದ್ದಾರೆ.
ಮತ್ತೆ ಮತ್ತೆ ಒಯ್ಯುವ ಮುಂಗಾರ ಮಳೆಯಲ್ಲಿ ನೆನಪ ವಾಸನೆ ಹಿಡಿದು ನಡೆಯತ್ತಿರುವವರಲ್ಲಿ ಇವರು ಬದುಕಿದ್ದಾರೆ. ಹಾಗಾಗಿ ಅಳು ಬರುವುದಿಲ್ಲ. ಮಂದಹಾಸದಂತಹ ವಿಷಾದವೊಂದು ತೇಲುತ್ತಿದೆ.