The Mysore Post

Tuesday July 31, 2007

ಮೈಸೂರಿನ ಮುದುಕನ ಬೆರಳ ಪರಿಮಳ

Filed under: ಅಲೆಮಾರಿಯ ದಿನಚರಿ — Rasheed @ 3:56 pm

sabir_small.jpg

 ಎಷ್ಟೇ ಕೀಟಲೆ ಮಾಡಬಾರದೆಂದಿಟ್ಟುಕೊಂಡರೂ ಹಾಗೆ ಮಾಡಲಾಗದಿರುವುದೇ ಇಲ್ಲ  ಎಲ್ಲ ಕೀಟಲೆ ಮುಗಿಸಿ ಇನ್ನು ಗಂಭೀರವಾಗಿರಬೇಕೆಂದುಕೊಂಡರೆ ಆತ ಫೋನ್ ಮಾಡಿ ‘ಎಲ್ಲಿದ್ದೀಯಾ?’ ಎಂದು ಕೇಳುತ್ತಾನೆ.

 ’ಇಲ್ಲೇ ಕಣೋ ಮುಂಬೈನಲ್ಲಿ’ ಎಂದು   ಸುಳ್ಳು ಹೇಳಿ ಆತನಿಗೆ ಫೋನ್ ನಲ್ಲಿ ಮೈಸೂರು ನಗರದ ನಾನಾ ಸದ್ದುಗಳನ್ನು ಕೇಳಿಸುತ್ತೇನೆ.ಆತ ಇದು ಮುಂಬೈ ಎಂದೇ ತಿಳಿದು ಸಖ ತ್ ಸಂಕಟ ಪಟ್ಟುಕೊಳ್ಳುತ್ತಾನೆ. ‘ನೀನು ಬಿಡು ಮಾರಾಯ ಸಖತ್ ಸುತ್ತುತ್ತೀಯಾ .ನಾನಾದರೋ ನೋಡು ಪಾಠ ಮುಗಿಸಿ ಪರೀಕ್ಷೆ ಮುಗಿಸಿ ಈಗ ಮೌಲ್ಯಮಾಪನ ಮುಗಿಸಿ ಟ್ಯಾಬುಲೇಷನ್ ನಡೆಸುತ್ತಾ ಇರುವೆ . ಇನ್ನು ಬರುವ ವಾರ ಗೃಹ ಪ್ರವೇಶ. ಮನೆಗೆ ಬಾಗಿಲೇ ಆಗಿಲ್ಲ . ಮರ ತರಲಿಕ್ಕೆ ತೀರ್ಥಹಳ್ಳಿಗೆ ಹೋಗಬೇಕು.ತುಂಬಾ ಹಳ್ಳಿ ಮಾದರಿಯಲ್ಲಿ ಕಟ್ಟಿಸ್ತಾ ಇದೀನಿ ಕಣೋ.ನೀನು ಬರಬೇಕು’ ಅನ್ನುತ್ತಾನೆ.

 ’ಇಲ್ಲ ಮಾರಾಯ ಇಲ್ಲಿ ಮುಂಬೈನಲ್ಲಿ ಇನ್ನು ಏಳು ದಿನ ಸುತ್ತಲಿಕ್ಕಿದೆ.ಆಮೇಲೆ ಹಡಗಿನಲ್ಲಿ ಕುಳಿತು ಗೋವಾಕ್ಕೆ ಬಂದು ನಂತರ ಕೊಂಕಣ ರೈಲಿನಲ್ಲಿ ಮಂಗಳೂರು. ಅಲ್ಲಿ ಫ್ರೆಂಡ್ ಮನೆಯಲ್ಲಿದ್ದು ಆನಂತರ ಮೈಸೂರು’ಎಂದು ಆತನನ್ನು ಇನ್ನಷ್ಟು ಮೈ ಉರಿಸಿ ಮೈಸೂರಿನ ಬೀದಿಗಳನ್ನು ಹೊಕ್ಕು ಬಿಡುತ್ತೇನೆ. ನಿಜಕ್ಕೂ ನಾನೆಲ್ಲಿದ್ದೇನೆ ಎಂದು ನನಗೇ ಗೊತ್ತಾಗುವುದಿಲ್ಲ.

 ಮೊನ್ನೆ ಒಂದು ಇರುಳು ಹೆಂಡತಿ ಮಕ್ಕಳನ್ನು ಮದುವೆ ಮನೆಗೆ ಬಿಟ್ಟು ಮದುವೆ ಮುಗಿಯುವವರೆಗೆ ಏನು ಮಾಡುವುದು ಎಂದು ಗೊತ್ತಾಗದೆ ಮೈಸೂರಿನ ಗಾಂಧಿ ಚೌಕದ ನನ್ನ ನೆಚ್ಚಿನ ಮೂಲೆಯಲ್ಲಿ ನಿಂತಿದ್ದೆ. (more…)

Monday July 30, 2007

ಲಂಕೇಶ್ ಪತ್ರಿಕೆಗೆ ಹದಿನೈದು ತುಂಬಿದಾಗ

Filed under: ಮಾತಿಗೂ ಆಚೆ — Rasheed @ 3:38 pm

 lankesh.jpg[೧೯೯೫ ರಲ್ಲಿ ಬರೆದದ್ದು]

ಆಗ ನಾವು ಹುಡುಗರು.

ಹೈಸ್ಕೂಲಿನ ನಡುವಿನ ಕಾಲ.

ಸಿಕ್ಕ ಸಿಕ್ಕ ಚಂದಮಾಮ. ಬಾಲಮಿತ್ರಗಳನ್ನೂ ಕಾಡಿ,ಬೇಡಿ. ಕಡತಂದು,ಓದಿ ಮುಗಿಸಿ, ಫ್ಯಾಂಟಮ್, ಶೂಜಾ, ಮಜನೂ, ಶೂರಿಗಳು ಇನ್ನೊಂದು ಕಂತಿನಲ್ಲಿ ಏನು ಸಾಹಸ ಮಾಡುವರು ಎಂದು ಊಹಿಸಿ ಕಾದು ಕುಳಿತು ಮೊಣಕಾಲುಗಳ ನಡುವೆ ಅವರ ಚಿತ್ರಗಳನ್ನಿಟ್ಟುಕೊಂಡು ಕುಕ್ಕರಗಾಲ್ಲಲ್ಲೇ ನೋಡಿ ಮುಗಿಸಿ ಇನ್ನೇನು ಇನ್ನೇನು ಎಂದು ತಲ್ಲಣಗೊಳ್ಳುತ್ತಿದ್ದ ದಿನಗಳು.p_lankesh2.jpg

 ಎಲ್ಲವೂ ಬೇಕಾಗಿತ್ತು. ಏನೂ ಬೇಡವಾಗುತ್ತಿತ್ತು. ಜೊತೆಯಲ್ಲಿ ಓದುತ್ತಿದ್ದ ಹುಡುಗಿಯರೂ ಬೆಳೆದು ಅವರ ಆಕಾರಗಳು ಬದಲುಗೊಂಡು ನಾವು ಬೆಳೆಯುತ್ತ ಉಟ್ಟ ಅಂಗಿಚಡ್ಡಿ ಬಿಗಿಯುತ್ತ ಇನ್ನೂ ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗಲು ನಾಚುಗೆಯಾಗಿ ಪ್ಯಾಂಟಿಗೋ, ಪಂಚೆಗೋ ಮೊರೆ ಹೋಗುತ್ತಿದ್ದ ದಿನಗಳು.

ಆಗ ಪೇಟೆ ಪಟ್ಟಣಗಳಿಂದ ಕಾಲೇಜಿನ್ನೋ, ಕೆಲಸವನ್ನೋ ಮುಗಿಸಿಕೊಂಡು ಊರಿಗೆ ಸಂಜೆ ಬರುತ್ತಿದ್ದ ನಮ್ಮ ಹಿರಿಯ ಯುವಕ ಗೆಳೆಯರ ಕೈಯಲ್ಲಿ ನಾಲ್ಕು ಪುಟಗಳ ಕಪ್ಪು ಬಿಳಿ ಅಕ್ಷರಗಳ ಪತ್ರಿಕೆಯೊಂದು ಕಂಗೊಳಿಸುತ್ತಿತ್ತು. ಅವರು ಅದನ್ನು ಹೆಮ್ಮೆಯಿಂದಲೂ ಮುಜುಗರದಿಂದಲೂ ಓದುತ್ತಾ ಕೆಲವು ಪುಟಗಳತ್ತ ಮರೆಯಾಗಿ ಕಣ್ಣಾಡಿಸುತ್ತಾ ನಮ್ಮಲ್ಲಿ ಕುತೂಹಲ ಹುಟ್ಟಿಸಿಬಿಟ್ಟಿದ್ದರು. ಲಂಕೇಶ್ ಪತ್ರಿಕೆ ಆರಂಭಿಸಿದ್ದರು. ನಮ್ಮ ಊರಿನ ಕಡೆಗೆ ಲಂಕೇಶ್ ಅನ್ನುವುದು ಕೊಂಚ ವಿಚಿತ್ರ. ತಮಿಳಿನ ಹಾಗೆ ಕಾಣಿಸುವ ಹೆಸರು. ಆದರೂ ಇರುವವರ ಕೈಯಿಂದ ಲಂಕೇಶ್ ಪತ್ರಿಕೆಯನ್ನು ಕಸಿದು ಓದುತ್ತ ಹೋದಂತೆ ನಮ್ಮ ಅದುವರೆಗೆ ಕಲಿತ ಭಾಷೆಗೆ ,ನಮ್ಮ ಅದುವರೆಗಿನ ಯೋಚನೆಗಳಿಗೆ, ನಮ್ಮ ತುಂಟು ತುಂಟು ಬುದ್ಧಿಗಳಿಗೆ, ಎಲ್ಲದಕ್ಕೂ ರೇಗಿ ಮನೆಯಿಂದಲೂ ಶಾಲೆಯಿಂದಲೂ ಉಗಿಸಿಕೊಳ್ಳುತ್ತಿದ್ದ ನಮ್ಮ ರೇಜಿಗೆಳಿಗೆ ಅರ್ಥವಿರುವಂತೆ ಕಾಣಿಸುತ್ತಿತ್ತು. (more…)

Thursday July 26, 2007

ಒಂದು ರೇಡಿಯೋ ಕವಿತೆ

Filed under: ಹಾಡು-ಪಾಡು — Rasheed @ 11:34 pm

ಆಗ ರೇಡಿಯೋ ಇರಲಿಲ್ಲ . ಅದರ ದೊಡ್ಡ ಬೀಟೆಯ ಮರದ ಪೆಟ್ಟಿಗೆ ಮಾತ್ರ ಉಳಿದಿತ್ತು.

ಒಳಗೆ ಅಪ್ಪನ ಬೀಡಿ ಪೊಟ್ಟಣ, ಅರಬಿ ಪುಸ್ತಕ, ಕೆಮ್ಮಿನ ಔಷದಿ,

ಮೊಲದ ಬೇಟೆಗೆ ತಂದು ಇಟ್ಟಿದ್ದ ನಾಡಕೋವಿಯ ತೋಟೆ,

ಅವರ ಕನ್ನಡಕ,ಅಂಗಡಿಯ ಸಾಲದ ಪುಸ್ತಕ, ನಮಗೆ ಕದ್ದು ಮುಚ್ಚಿ

ಮುದ್ದು ಮಾಡಲು ತಂದಿಟ್ಟಿದ್ದ ಮಿಠಾಯಿ  ಮತ್ತು ಅವರ ಮೂಗು ಒರೆಸಿಟ್ಟ ಕರ್ಚೀಪು.

ನಮ್ಮಷ್ಟಕ್ಕೆ ನಮಗೆ ಯಾವುದೂ ಎಟುಕುತ್ತಿರಲಿಲ್ಲ. . . . .

ಮತ್ತು ರೇಡಿಯೋ ಅಂದರೆ ಏನು ಅಂತ ಗೊತ್ತಿರಲಿಲ್ಲ.

ಈಗ ರೇಡಿಯೋ ಕೈಗೆಟುಕುತ್ತಿದೆ. ಅಪ್ಪ ನೋಡಲು ಸಿಗುತ್ತಿಲ್ಲ (more…)

ಷಿಲ್ಲಾಂಗ್ ನಿಂದ ಒಂದು pleasing ಪತ್ರ

ಒಂದು ಸುಂದರವಾದ ಉದ್ದವಾದ  ಹಗಲನ್ನು ಸುತ್ತಿ ಮುಗಿಸಿ ಬಂದು ನಿಮಗೆ ಬರೆಯಲು ಕುಳಿತಿದ್ದೇನೆ. ಯಾವ ಹಂಗೂ ಇಲ್ಲದ ಯಾವ ಗ್ರಂಥ, ವಿಚಾರ, ವಿಮರ್ಶೆ, ಚಿಂತನೆ ಏನೂ ಇಲ್ಲದ ಹಗಲು. ಸುಮ್ಮನೆ ಆಕಾಶವನ್ನೇ ನೋಡುತ್ತಿದ್ದೆ. ನಾನು ಎಂದೂ ನೋಡಿರದ ಕಡುನೀಲಿ ಆಕಾಶ. ದೂರದಿಂದ ದಾರಿ ಕೇಳಿಕೊಂಡು ತುಂಬಾ ದೂರದ ನೆಂಟರಂತೆ ಸಂಬಂಧ ಹುಡುಕಿಕೊಂಡು ಬರುತ್ತಿರುವ ಮೋಡಗಳು ಅಲ್ಲೇ ಸಂಕೋಚದಿಂದ ನಿಂತಿವೆ. ಅದರ ಹಿಂದಿರುವ ಮೋಡಗಳ ಗುಂಪು ತಡೆಹಿಡಿಯಲಾಗದೆ ಅಲ್ಲೇ ನಿಂತುಕೊಂಡಲ್ಲೇ ಮಳೆ ಸುರಿಸುತ್ತಿವೆ. ದೂರದಲ್ಲೆಲ್ಲೋ ಸುರಿಯುತ್ತಿರುವ ಮಳೆಯ ಗಾಳಿ ತಣ್ಣಗೆ ಈ ಪಟ್ಟಣವನ್ನು ಹಾದು ಹೋಗುತ್ತಿದೆ.khasi30_m.jpg ನಾನು ಸಣ್ಣಗೆ ಬೆವರಿಕೊಂಡು ಒಂದು ಸಣ್ಣ ಹೋಟೇಲೊಳಕ್ಕೆ ಹೊಕ್ಕು ಕುಳಿತೆ. ಈ ಊರಲ್ಲಿ ಈ ತರಹದ ಸಣ್ಣ ಹೋಟೆಲುಗಳೆಂದರೆ ಪುಟ್ಟಪುಟ್ಟ ತರುಣಿಯರು ನಡೆಸುವ ಹೋಟೆಲ್ಲು. ಹಾಲಿಲ್ಲದ ಕಪ್ಪು ಚಹಾಕ್ಕೆ ‘ಸಾಸೋ’ ಎನ್ನುತ್ತಾರೆ ಮತ್ತೆ ‘ಪತಾರೋ’ ಎಂಬ ಅಕ್ಕಿಯಿಂದ ಅರೆದು ಮಾಡಿದ ಓಡು ದೋಸೆಯಂತಹ ತಿಂಡಿ. ಅದರ ಜೊತೆ ಆಡಿನ ಕರುಳಿನ ಪಲ್ಯ. ಯಾವುದಕ್ಕೂ ಉಪ್ಪು, ಹುಳಿ, ಖಾರ, ಏನೂ ಇಲ್ಲ. ಬೇಕಾದರೆ ಉಪ್ಪನ್ನು ನೆಕ್ಕಿ ಹಸಿ ಮೆಣಸನ್ನು ಅದರ ಜೊತೆ ಕಚ್ಚಿ ತಿನ್ನಬಹುದು. ನಾನು ಒಂದೊಂದೇ ತಿನಿಸಿನ ಹೆಸರು ಕೇಳಿಕೊಂಡು ತಿನ್ನುತ್ತ ಹೋಟೆಲ್ಲಿಗೆ ಹೋಗಿ ಬರುವವರನ್ನು ನೋಡುತ್ತಾ ಕುಳಿತಿದ್ದೆ. ಈ ತರಹ ನನ್ನಂತಹ ಹೊರಗಿನವನು ಇಂತಹ ಹೋಟೆಲ್ಲುಗಳಲ್ಲಿ ಒಬ್ಬನೇ ಕುಳಿತುಕೊಳ್ಳುವುದು ಕೊಂಚ ಅಪಾಯದ ಕೆಲಸ. ಆದರೂ ಕುಳಿತಿದ್ದೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ನಾನು ಎಲ್ಲರನ್ನೂ ನೋಡುತ್ತಿದ್ದೆ. ಹೋಟೆಲ್ಲಿನ ಒಬ್ಬಳು ತರುಣಿ ಆಗ್ಗಿಂದಾಗ್ಗೆ ಸಿಕ್ಕಾಪಟ್ಟೆ ಮೈಯನ್ನೆಲ್ಲಾ ಸಿಕ್ಕಿದಲ್ಲೆಲ್ಲಾ ಕೆರೆದು ಕೊಳ್ಳುತ್ತಿದ್ದಳು. ನಾನು ತುಂಬಾ ಹೊತ್ತು ನೋಡುತ್ತಿದ್ದವನು ಆಮೇಲೆ ತಡೆಯಲಾರದೆ ಏನಾಯಿತು ಅಂತ ಕೇಳಿದೆ. ಆಕೆ ಪಕ್ಕನೆ ನಾಚಿಕೊಂಡವಳು. ಆಮೇಲೆ ಹಾ ಹೋ ಹೀ ಹೀ ಅಂತೆಲ್ಲಾ ಹೇಳತೊಡಗಿದವಳು. ಕೊನೆಗೂ ಕಾರಣ ಹೇಳಲಾಗದೆ ತನ್ನ ಗೆಳತಿಯರ ಕಿವಿಗೆ ನನ್ನ ಪ್ರಶ್ನೆಯನ್ನು ದಾಟಿಸಿಬಿಟ್ಟಳೂ. ಕೊನೆಗೆ ಎಲ್ಲರೂ ಗೊಳ್ಳೆಂದು ನಗಲು ಶುರುಮಾಡಿದರು. (more…)

Tuesday July 24, 2007

ಶಾಲೆಯೆಂಬ ಲೋಕದ ಎಳೆಯರಾದ ನಾಯಕರು

Filed under: ಮಾತಿಗೂ ಆಚೆ — Rasheed @ 10:56 pm

 

dsc_0046-2.jpgಈ ವಾರದಲ್ಲಿ ಪುಟ್ಟ ಹುಡಗರಿಬ್ಬರ ಭಾವಚಿತ್ರಗಳಿರುವ ಜಾಹೀರಾತುಗಳೆರಡು ಪತ್ರಿಕೆಯೊಂದರ ಮೂಲೆಯಲ್ಲಿ ಬಂತು. ಹುಟ್ಟುಹಬ್ಬ, ವಿವಾಹ, ವಿವಾಹ ವಾರ್ಷಿಕ, ವಿಧೇಶ ಪ್ರವಾಸ ಇತ್ಯಾದಿಗಳಿಗೆ ಸಂತೋಷ ಸೂಚಿಸಿ ಬರುವ ಜಾಹೀರಾತುಗಳನ್ನೂ, ಮರಣ ವಾರ್ಷಿಕ ಇತ್ಯಾದಿಗಳಿಗೆ ಕಂಬನಿಯಿಡುವ ಶ್ರದ್ಧಾಂಜಲಿಗಳನ್ನೂ ನೋಡಿ ಈ ಚಿತ್ರಗಳ ಜೊತೆ ಸಂತೋಷವನ್ನೋ, ಬೇಸರವನ್ನೋ ಹಂಚಿಕೊಳ್ಳುವ ನನಗೆ ಈ ಹುಡುಗರ ಚಿತ್ರವನ್ನೂ, ಅದರ ಕೆಳಗೆ ಬರೆದಿರುವ ಅಕ್ಷರಗಳನ್ನೂ ಓದಿ ಸಂತೋಷ ಪಡಬೇಕೋ, ಬೇಜಾರುಮಾಡಿಕೊಳ್ಳಬೇಕೋ ಗೊತ್ತಾಗಲಿಲ್ಲ. ಈ ಹುಡುಗರಿಬ್ಬರೂ ಎರಡು ಪುಟ್ಟ ಶಾಲೆಗಳ, ಪುಟ್ಟ ಚುನಾವಣೆಯಲ್ಲಿ ಗೆದ್ದು ಬಂದ ಶಾಲಾ ನಾಯಕರುಗಳಾಗಿದ್ದರು. ಹುಟ್ಟಿ ಹತ್ತೋ ಹದಿನಾರೋ ವರ್ಷಗಳಾಗಿರುವ ಈ ಹುಡುಗರು ಶಾಲಾ ನಾಯಕರುಗಳಾಗಿರುವುದು ಖುಷಿಯ ವಿಷಯವಾದರೂ ಇವರ ಚಿತ್ರಗಳು ಸಾಧಾರಣವಾಗಿ ನಾಯಕ ಮಣಿಗಳೂ. ತೀರಿ ಹೋದವರೂ ಆಗಿರುವವರ ಚಿತ್ರಗಳ ಜೊತೆ ಕಂಗೊಳಿಸುತ್ತಿರುವುದು ಕೊಂಚ ಹೆದರಿಕೆಯ ಅದಕ್ಕಿಂತಲೂ ತೀರಾ ಮುಜುಗರದ ಸಂಗತಿಯಾಗಿ ಕಂಡಿತು.

ಪ್ರಪಂಚ ಬದಲಾಗುತ್ತಿರುವುದು ನಿಜವಾದರೂ, ಈ ನಿಮಿಷದ ಸಂಗತಿಗಳು ಇನ್ನೊಂದು ನಿಮಿಷಕ್ಕೆ ಅಸಂಗತವಾಗುವಷ್ಟು  ಪ್ರಪಂಚ ಬೆಳೆಯುತ್ತಿರುವುದು ಸತ್ಯವಾದರೂ, ನಿನ್ನೆ ಮೊನ್ನೆಯಷ್ಟೇ ಶಾಲೆಯ ಸಾಲು ಬೆಂಚುಗಳಲ್ಲಿ ಕೂತು ನಮ್ಮ ಟೀಚರುಗಳನ್ನೂ, ಅವರು ಹೇಳುತ್ತಿರುವ ಸಂಗತಿಗಳನ್ನೂ ದೊಡ್ಡ ಕಣ್ಣು ದೊಡ್ಡ ಕಿವಿಗಳಿಂದ ಕೇಳುತ್ತಿದ್ದಂತೆ ಈಗಲೂ ಅನಿಸುತ್ತಿರುವ ನನಗೆ ಈ ಹುಡುಗರು ಶಾಲ ನಾಯಕರುಗಳಾದುದನ್ನು ಡಂಗುರ ಬಾರಿಸಿ ಸಾರುತ್ತಿರುವ ಈ ಚಿತ್ರಗಳು ಕೊಂಚ ಅಸಹಜವಾಗಿಯೂ, ಅತಿರೇಕವಾಗಿಯೂ ಕಂಡು ದುಃಖವೆನಿಸಿತು. ಶಾಲೆಯೆಂಬ ಪುಟ್ಟ ಜಗತ್ತಿನೊಳಗೆ ನಾಯಕರಾಗಿಯೂ, ಮಂತ್ರಿಗಳಾಗಿಯೂ ಖುಷಿ ಮುಜುಗರದಿಂದ ಓಡಾಡುವ ಈ ಹುಡುಗರ ಚಿತ್ರಗಳು ಅಧಿಕಾರ, ಪ್ರಚಾರ, ಆಮಿಷಗಳಿಂದ ಕೂಡಿದ ದೊಡ್ಡವರ ಪ್ರಪಂಚದಲ್ಲಿ ಹೀಗೆ ಅನಾಯಾಸವಾಗಿ ಅಚ್ಚಾಗಿರುವುದು ಕಂಡು ನಗುವೂ ಬಂತು. (more…)

Monday July 23, 2007

ಹೂವಿನ ಹೆಸರಿನ ಹುಡುಗಿ [ಷಿಲ್ಲಾಂಗ್ ಪತ್ರ ೪]

ಮನಸಲ್ಲಿ ಆಗುತ್ತಿರುವುದನ್ನೆಲ್ಲಾ ನಿಮಗೆ ಹೇಗೆ ಬರೆದು ತಿಳಿಸಲಿ? ನನ್ನ ಬಾಲ್ಯಕಾಲದ ಬೆಳದಿಂಗಳಿನಂತಹ ಬಿಸಿಲು ಇಲ್ಲಿ ಈಗ ಮರುಕಳಿಸುತ್ತಿದ್ದೆ. ಬಿಸಲಿಗೆ ಮತ್ತು ಬೀಸುವ ಗಾಳಿಗೆ ಇಷ್ಟು ಸುಖವಿದೆ ಎಂದು ಈಗ ಮತ್ತೆ ಗೊತ್ತಾಗುತ್ತಿದೆ270px-shillong_golf_course2.jpgಮಕ್ಕಳು ಬೆಳಗ್ಗಿನಿಂದ ಸೂರ್ಯಕಂತುವವರೆಗೆ ಬಯಲಲ್ಲಿ ಯಾವ ಆಯಾಸವೂ ಇಲ್ಲದೆ ಇಲ್ಲಿ ಆಡುತ್ತಿರುತ್ತಾರೆ. ಬೀಸುವಗಾಳಿಗೆ ಮೈ ಒಡ್ಡಿ ನಡೆಯುವ ಮುಗುದೆಯರು. ನಾವು ಎಂತಹ ಚಂದದ ಭೂಮಿಯಲ್ಲಿ ಬದುಕಿದ್ದೇವೆ ಎಂದು ಗೊತ್ತಾಗಿ ಮನಸ್ಸು ತುಂಬಿಕೊಳ್ಳುತ್ತಿದ್ದೆ. ಸುಮ್ಮನೇ ಒಬ್ಬನೇ ಇಲ್ಲಿಯ ವಾರ್ಡ್ ಲೇಕ್ ನಲ್ಲಿ ನಡು ಮಧ್ಯಾಹ್ನ ನಡೆಯುತ್ತಿದ್ದೆ. ಸೂರ್ಯನ ಬೆಳಕು ಎಲೆಗಳ ಮೇಲೆ ಕೆರೆಯ ನೀರಿನ ಮೇಲೆ ತನ್ನ ಎಲ್ಲಾ ಪ್ರೀತಿಯನ್ನು ಸುರಿಯುತ್ತಿತ್ತು. ಯಾವ ಕೇಡೂ ಇಲ್ಲದ ಸ್ವಚ್ಛಗಾಳಿ ಪುಪ್ಪುಸದೊಳಕ್ಕೆ ತುಂಬಿಕೊಳ್ಳುತ್ತಿತ್ತು. ಆಮೇಲೆ ಮನೆಗೆ ಬಂದು ಏನೋ ಓದುತ್ತಾ ಕುಳಿತ್ತಿದ್ದೆ. ಸರೀ ಮೂರೂವರೆಯ ಹೊತ್ತಿಗೆ ಭೂಮಿ ಒಮ್ಮೆಗೆ ಸಣ್ಣಗೆ ಅಲುಗಿತು. ಯಾರೋ ಹಿಂದಿನಿಂದ ಮೆಲ್ಲಗೆ ಮೊಣಕೈಯಿಂದ ಅಲುಗಿಸಿದಂತೆ ಸಣ್ಣಗೆ ಭೂಕಂಪವಾಯಿತು. ಗಾಳಿ ಹಾಗೇ ಬೀಸುತ್ತಿತ್ತು. ಮಕ್ಕಳು ಆಡುತ್ತಿದ್ದರು. ಯಾಕೋ ದುಗುಡ ತುಂಬಿಕೊಂಡು ಬಿಟ್ಟಿತು.

ಯಾಕೆ ಗೊತ್ತಿಲ್ಲ. ನನ್ನನ್ನು ಎಲ್ಲದರಿಂದ ಎಲ್ಲರಿಂದ ಕಳಚಿಬಿಡುವ ಈ ದುಗುಡಕ್ಕೆ ಯಾವ ಮದ್ದಿದೆ ಹೇಳುತ್ತೀರಾ? (more…)

Friday July 20, 2007

[ಒಂದು ಹಳೆಯ ಕವಿತೆ]

Filed under: ಹಾಡು-ಪಾಡು — Rasheed @ 3:01 pm

ಹುದುಗಿಸಿಡು ಇದನು ಇಲ್ಲೆ ಎಲ್ಲಾದರೂ....

 

hudugisidu.jpg

ಹುದುಗಿಸಿಡು ಇದನು ಇಲ್ಲೆ ಎಲ್ಲಾದರೂ ಎಲೆಯ ಮರೆಯಲ್ಲಿಡು
ಅದನು ನನಗೇ ತಿರುಗಿಸಿಕೊಡು.
 
 ನಿದ್ದೆಯಿಂದೆದ್ದು ಆಕಳಿಸುತ ನಿಂತ ಕಾಮದೇವತೆ
 ಮಗು ನೀನು. ಎಚ್ಚರಿಸಿ ಮೆಲ್ಲಗೇ ಕಾಲು ಕೆದರಿ
 ಕಾಮಿಸಲು ಕರೆದೊಯ್ಯಬಂದೆ ನಾನು
 ಯಾಕಳುವುದು ಸಂಜೆ ನೀನು? (more...)

Thursday July 19, 2007

ಮಳೆಗೆ ತೀರಿದ ಎರಡು ಜೀವಗಳು

Filed under: ಮಾತಿಗೂ ಆಚೆ — Rasheed @ 11:48 am

 dsc00185.jpg

ಈ ಮಳೆ ಚಳಿಗಾಳಿಯ ನಡುವೆ ತೀರಿಹೋದ ಒಂದು ಗಂಡಸು-ಒಂದು ಹೆಂಗಸು, ಅಥವಾ  ಒಬ್ಬಳು ಮುದುಕಿ-ಒಬ್ಬ ಮುದುಕ ಅಥವಾ ಇಬ್ಬರನ್ನೂ ಸೇರಿಸಿದರೆ- ತೀರಿ ಹೋದ ಎರಡು ಜೀವಗಳು.

ನಾವು ಹೇಗೆ ಕರೆದರೂ ಸಿಟ್ಟುಮಾಡಿಕೊಳ್ಳದೆ, ಗೊಣಗದೆ ಇವರಿಬ್ಬರೂ ತಮ್ಮ ಪ್ರತ್ಯೇಕ ಗೋರಿಗಳಲ್ಲಿ ಮಣ್ಣಲ್ಲಿ ಮಣ್ಣಾಗಿ ಮಲಗಿದ್ದಾರೆ. ಹಾಗೆ ನೋಡಿದರೆ ಈ ಇಬ್ಬರು ಒಬ್ಬರನೊಬ್ಬರು ನೋಡಿಯೇ ಇಲ್ಲ. ಒಬ್ಬರು ಬದುಕಿದ್ದದು ಇನ್ನೊಬ್ಬರಿಗೆ ತಿಳಿದೂ ಇಲ್ಲ. ಇವರ ಧರ್ಮಗಳು, ಇವರ ಧರ್ಮಗ್ರಂಥಗಳು, ಇವರಿಬ್ಬರ ದೇವರುಗಳು, ಇವರು ನಂಬಿಕೊಂಡ ಸ್ವರ್ಗ ನರಕಗಳು ಬೇರೆ ಬೇರೆಯೇ ಆಗಿವೆ. ತನ್ನ ಧರ್ಮವನ್ನು ಬಿಟ್ಟು, ತನ್ನ ಧರ್ಮ ಗ್ರಂಥವನ್ನು ಬಿಟ್ಟು, ತನ್ನ ದೇವರನ್ನು ಬಿಟ್ಟು- ಈ ಇಷ್ಟು ದೊಡ್ಡ ಪ್ರಪಂಚದಲ್ಲಿ ಬೇರೆ ಧರ್ಮ. ಬೇರೆ ದೇವರು, ಬೇರೆ ಧರ್ಮಗ್ರಂಥಗಳು ಇವೆ ಎಂಬುದು ಈ ಇಬ್ಬರಿಗೂ ಮಣ್ಣಾಗಿ ಹೋದ ಮೇಲೂ ಗೊತ್ತಾಗಲಿಲ್ಲ. ಈ ಇಬ್ಬರೂ ಅಷ್ಟೊಂದು ಅಪರಿಚಿತರೂ ಮುಗ್ಧರೂ ಆಗಿದ್ದರು. ಜೊತೆಗೆ ಈ ಮುಂಗಾರಿನ ಮೊದಲ ಚಳಿಗಾಳಿ ಮಳೆಗೆ ತೀರಿ ಕೊಂಡರು. ಈ ಇವರಿಬ್ಬರನ್ನು ಒಂದು ಕಡೆಗೆ ತರುವುದು ಈ ಮಳೆ, ಅವರು ಮಲಗಿರುವ ಈ ಭೂಮಿ ಮತ್ತು ಈ ಅಂಕಣದ ಸಾಲುಗಳು ಮಾತ್ರ. (more…)

Monday July 16, 2007

ಷಿಲ್ಲಾಂಗ್ ಪತ್ರ-೩

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 10:20 pm

ಮಗುವೊಂದರ ಜೊತೆ

ಪ್ರೀತಿಯ ಲಂಕೇಶ್‌ರಿಗ,dsc_0089.jpg

ಮರಳಿ ಶಿಲ್ಲಾಂಗ್ ತಲುಪುವ ತನಕ ನಿಮಗೆ ಬರೆಯಲೇಬಾರದು ಅಂದುಕೊಂಡಿದ್ದೆ. ಆದರೆ ಯಾಕೋ ಈಗ ಈ ರಾತ್ರಿಯಲ್ಲಿ ಆಗುಂಬೆ ಘಾಟಿಯ ಕೆಳಗಿನ ಸೀತಾನದಿಯ ತಟದ ಈ ಜಾಗದಲ್ಲಿ ಕುಳಿತು ನಿಮಗೆ ಬರೆಯಬೇಕು ಅನ್ನಿಸುತ್ತದೆ. ಕೊಡಗು, ಬೆಂಗಳೂರು, ಮೈಸೂರು ಕೇರಳದ ವಯನಾಡು ಮಂಗಳೂರು ಎಲ್ಲ ಕಡೆ ಬಿಸಿಲಲ್ಲಿ ನಾಯಿ ಅಲೆದಂತೆ ಅಲೆದು ಈಗ ಮೂರು ನಾಲ್ಕುದಿನದಿಂದ ಎಲ್ಲೂ ಹೋಗದೆ ಏನೂ ಮಾಡದೆ ಇಲ್ಲಿ ಸುಮ್ಮನೆ ಕುಳಿತಿದ್ದೇನೆ. ಈ ಸೀತಾನದಿ ತಣ್ಣಗೆ, ಕಾಡೊಳಗೆ ಸದ್ದಿಲ್ಲದೆ ಮಡುಗಟ್ಟಿಕೊಂಡು ಕಪ್ಪಗೆ ಹರಿಯುತ್ತಿದೆ. ಸಂಜೆಯ ಹೊತ್ತು ಎಲ್ಲಿಗೋ ಹೋಗಿ ಸೇರುತ್ತಿರುವ ಬೆಳ್ಳಕ್ಕಿಗಳ ಹಿಂಡನ್ನು ಕತ್ತಿನ ತನಕ ನೀರಲ್ಲಿ ಮುಳುಗಿಕೊಂಡು ನಿಟ್ಟಿಸಿ ನೋಡುತ್ತಿರುವೆ. ನಿನ್ನೆ ಸಂಜೆ ಹೀಗೆ ಮುಳುಗಿಕೊಂಡಿರುವಾಗ ನವಿಲೊಂದು ನದಿಯನ್ನು ಹಾರಿಕೊಂಡು ದಾಟಿ ಕಾಡಿನೊಳಗೆ ಮಾಯವಾಯಿತು. ಆನಂತರ ತುಂಬಾ ಹೊತ್ತು ನವಿಲುಗಳು ಕೇಕೆ ಹಾಕುವ ಸದ್ದು ಕಾಡೊಳಗಿಂದ ಕೇಳಿಸುತ್ತಲೇ ಇತ್ತು. ಕಾಡೊಳಗೆ ಹೊಕ್ಕು ನವಿಲುಗಳು ಕುಣಿಯುವುದ ನೋಡಬೇಕು ಅನ್ನಿಸಲೇ ಇಲ್ಲ. 

                 ಯಾಕೋ ನನ್ನೊಳಗೇ ನಾನು ಹೀಗೆ ಬಲವಂತವಾಗಿ ಗಡಿಗಳನ್ನು ಹಾಕಿಕೊಂಡು ಸುಮ್ಮನೆ ಅದುಮಿಕೊಂಡು ಕುಳಿತಿರುವೆ. ಮನುಷ್ಯರು ಕಡಿಮೆ ಇರುವ, ಬರಿಯ ನದಿಯೊಂದು ಹರಿಯುವ ನೆಪದಿಂದ ಉಂಟಾಗಿರುವ ಈ ಜಾಗದಲ್ಲಿ ಮಗುವೊಂದರ ಜೊತೆ ಆಟವಾಡುತ್ತಾ ಕುಳಿತಿರುವೆ. ಈವತ್ತು ಸಂಜೆ ಮಗುವೂ ನಮ್ಮ ಜೊತೆ ನದಿಯಲ್ಲಿ ಆಟವಾಡಲು ಬಂದಿತ್ತು. (more…)

ಒಂದು ಹಳೆಯ ಪತ್ರ

Filed under: ಅಲೆಮಾರಿಯ ದಿನಚರಿ — Rasheed @ 6:53 am

 

ಪ್ರಿಯ ಸಖ,
ಈ ಕಾಲಂ-ಗೀಲಂ ಎಲ್ಲ ಬಿಟ್ಟು ಸುಮ್ಮನೆ ಒಂದು ಪತ್ರ ಬರೆಯುತ್ತಾ ನಡುನಡುವೆ ನಿಂಬೂ ಟೀ ಹೀರುತ್ತಾ ಆಷಾಡದ ಈ ಜಡಿಮಳೆಯಲ್ಲೂ ಬೆವರುತ್ತಾ ಈ ನಡುವೆ ನಡೆದ ಸುಖ-ಸಂತೋಷಗಳನ್ನು ನೆನೆಸಿಕೊಳ್ಳುವುದು ಎಷ್ಟೊಂದು ಆಹ್ಲಾದದ ಕೆಲಸ ಗೊತ್ತಾ!kaadu-maavina-marada-getu.jpgಯಾಕೋ  ಈಗ ಯಾರಾದರು ಏನಾದರು ಬರೆಯಲು ಹೇಳಿದರೆ ಕೊಲ್ಲಲು ಕರೆದುಕೊಂಡುಹೋಗುವ ಹಾಗೆ ಅನಿಸುತ್ತದೆ.

ಸಣ್ಣದಿರುವಾಗ ಕೊಡಗಿನ ಆ ಚಳಿಯಲ್ಲಿ ಬೆಳಗ್ಗೆ ಎದ್ದು ಅರಬೀ ಮದರ್ರಸಕ್ಕೆ ಕುರಾನ್ ಕಲಿಯಲು ಹೋಗಬೇಕಿತ್ತು.ಆಗಲೂ ಹೀಗೇ ಅನಿಸುತ್ತಿತ್ತು.ಆಗಲಾದರೆ ಕೈ ಹಿಡಿದು ಕರೆದೊಯ್ಯುತ್ತಿದ್ದ ಅಕ್ಕನಿಗೆ ಏನೋ ಸುಳ್ಳು ಹೇಳಿ ತಪ್ಪಿಸಿಕೊಳ್ಳಬಹುದಿತ್ತು.ಈಗ ನಿಜ ಹೇಳಿದರೂ ಅದನ್ನು ನೀನು ಕಟ್ಟು ಕಥೆಯೆಂದು ಬಗೆದು ಬಿಡುತ್ತೀಯಾ .ಅದಕ್ಕೇ ಸುಮ್ಮನೆ ಒಂದು ಪತ್ರ ಬರೆಯುತ್ತಿದ್ದೇನೆ.  ನಾನು ಕಳೆದ ಹತ್ತು ಹದಿನೈದು ದಿನ ನನ್ನ ಪುಟ್ಟ ಮಗಳ ಜೊತೆ ಕೊಡಗಿನ ನಾಗರಹೊಳೆ ಕಾಡಿನ ಬದಿಯಲ್ಲಿ ಕಾಪಿ ತೋಟದ ನಡುವಲ್ಲಿ ಬೆಳಗೆ ಬಿಸಿಲು ಕಾಯುತ್ತಾ, ಹಗಲೆಲ್ಲ ಅವಳನ್ನು ಹೆಗಲಲ್ಲಿ ತಟ್ಟಿ ಮಲಗಿಸುತ್ತಾ,ಅವಳು ನಿದ್ದೆ ಹೋಗುವುದನ್ನು ಕಾಯುತ್ತಾ, ಅವಳು ನಿದ್ದೆಯಲ್ಲಿಏನೋ ಸುಖವನ್ನು ಉಂಡಂತೆ ನಗುವನ್ನು ಮೆಲುಕುಹಾಕುವುದನ್ನು ಕಂಡು ಕರುಬುತ್ತಾ ಕಳೆದೆ!

ಹೀಗೆ ನಮ್ಮ ಮಾಮೂಲು ಕಾಮ ಕ್ರೋಧ ಮಧ ಮತ್ಸರಗಳನ್ನು ಮರೆತು ಮಗುವೊಂದರ ಸುಖದಲ್ಲಿ ಪಾಲುಗೊಳ್ಳಬಹುದು ಎಂಬ ಕಲ್ಪನೆಯೇ ನನಗಿರಲಿಲ್ಲ.ಈಗಲೂ ಆ ಸುಖದ ಮಂಪರು ನನ್ನನ್ನು ಬಿಡುತ್ತಿಲ್ಲ. ಅದು ಯಾಕೋ ನನ್ನನ್ನು ಆಲಸಿಯನ್ನಾಗಿಸಿಬಿಟ್ಟಿದೆ.ನಿನಗೆ, ನಾವೆಲ್ಲಾ ಓದಿದ lotus eaters ಪದ್ಯ ನೆನಪಾಗುತ್ತಿದೆಯಾ?…….. (more…)

Saturday July 14, 2007

ರಿಲ್ಕ್ ಕವಿಯ ಇನ್ನೊಂದು ಸುನೀತ

Filed under: ಅನುವಾದಗಳು — Rasheed @ 10:32 pm

ಬೆಳೆಯುವವಳು

rilkesketch.jpg 

ಎಲ್ಲವೂ ನಿಂತವು ಅವಳ ಎದುರಲ್ಲಿ ಲೋಕದಂತೆ.

ನಿಂತವು ಎಲ್ಲವೂ ಅವಳ ಎದುರಲ್ಲಿ ಎಲ್ಲ ಕರುಣೆ ಭಯಗಳ ಜೊತೆ

ಮರಗಳು ನಿಂತುಕೊಳುವಂತೆ. ನೇರ ಬೆಳೆದೂ ರೂಪವಿಲ್ಲದೆಯೂ

ಪೂರಾ ರೂಪದಂತೆ,ಧೈವದಂತೆ,ಲೋಕಕ್ಕೇ ಆಣತಿಯಂತೆ.

ಅವಳು ತಾಳಿಕೊಂಡಳು ಎಲ್ಲವ ಒಳಗೊಳಗೆ.

ಹಕ್ಕಿಯಂತೆ, ಹಾರುವಂತೆ ದೂರ

ಅರಿಯಲಾರದ ಎಲ್ಲವ ,ಇನ್ನೂ ಅರಿಯಬೇಕಾದವ,

ತಣ್ಣಗೆ ತುಂಬು ನೀರಕೊಡವ ಹೊತ್ತ ಹೆಂಗಸಂತೆ.

ಆಟದ ನಡುವೆ ಬದಲುಗೊಳ್ಳುತ್ತ, ಮುಂದಿನದಕೆಲ್ಲ

ಅಣಿಯಾಗುತ್ತಾ.

ಬೆಳ್ಳಗಿನ ಮೊದಲ ತೆರೆ ಬಿತ್ತು ಮೆಲ್ಲಗೆ ತೇಲುತ್ತ

ಅವಳ ತೆರೆದ ಮುಖಕ್ಕೆ,ಏನೂ ಕಾಣಿಸದಂತೆ

ಮತ್ತೆಂದೂ ಎತ್ತಿಕೊಳದಂತೆ , ಅವಳು ಕೇಳಿದ್ದಕ್ಕೆಲ್ಲಾ

ಒಂದೇ ಉತ್ತರದಂತೆ

‘ಮಗುವಾಗಿದ್ದವಳೇ ಎಲ್ಲ ನಿನ್ನಲ್ಲೇ …ನಿನ್ನಲ್ಲೇ’

ಷಿಲ್ಲಾಂಗ್ ಪತ್ರ-೨: ತುರಾ ಎಂಬ ಊರು

Filed under: ಷಿಲ್ಲಾಂಗಿನಿಂದ ಲಂಕೇಶ — Rasheed @ 12:28 am

 meghalaya-map.gif

ಪ್ರೀತಿಯ ಲಂಕೇಶರಿಗೆ,

ಇಲ್ಲಿ ಈಗ ಹೊರಗೆ ಪೂರ್ತಿ ಚಂದಿರನ ಬೆಳಕು. ಮನಸಲ್ಲಿ ಏನೂ ಇಟ್ಟುಕೊಳ್ಳದೆ ನಿಮಗೆ ಬರೆಯುತ್ತಿರುವೆ. ಈ ಚಂದಿರನ ಬೆಳಕಲ್ಲಿ ಮಂಗಳೂರಿನ ಕಡಲು ಹೇಗೆ ಇರಬಹುದು, ಕೊಡಗಿನ ಕೋಟೆ ಬೆಟ್ಟ ಹೇಗೆ ಹೊಳೆಯುತ್ತಿರಬಹುದು, ಹಗಲೆಲ್ಲಾ ರಾಜಕಾರಣದ ಕುರಿತು ಬರೆದು ಇರುಳಲ್ಲಿ ನೀವು ಏನು ಯೋಚಿಸುತ್ತಿರಬಹುದು ಎಂದೆಲ್ಲಾ ಯೋಚಿಸುತ್ತಾ ಕುಳಿತಿರುವೆ.

 ಮೊನ್ನೆ ಇಲ್ಲಿಯ ಚುನಾವಣೆಯ ಕುರಿತು ಸಮೀಕ್ಷೆ ಬರೆಯಲು ತುರಾ ಎಂಬ ಊರಿಗೆ ಹೋಗಿ ಬಂದೆ. (more…)

Thursday July 12, 2007

ವಿಶ್ವನಾಥನ ಚಪ್ಪಲಿಯನ್ನು ಬಡವರು ಕದಿಯದೇ ಇದ್ದಿದ್ದರೆ

Filed under: ಅಲೆಮಾರಿಯ ದಿನಚರಿ — Rasheed @ 11:25 pm

 ಇಪ್ಪತ್ತು ವರ್ಷಗಳಹಿಂದೆ ಒಂದುದಿನ ವಿಶ್ವನಾಥನ ಚಪ್ಪಲಿಯನ್ನು ಬಡವರು ಕದಿಯದೇ ಇದ್ದಿದ್ದರೆ ಬಹುಶಃ ಆತ ಈ ದಿನಗಳಲ್ಲಿ ಒಂದು ದಿನ ಪೋಲೀಸರ ಗುಂಡಿಗೆ ಬಲಿಯಾಗುತ್ತಿದ್ದ ಅನಿಸುತ್ತಿದೆ.767897.jpg ಆತನ ಅಕ್ಕ ಹಸಿಹಸಿ ರೊಮಾಂಟಿಕ್ ಕವಿತೆ ಗಳನ್ನೂ ಕಡುಬಡವರ ಕುರಿತು ಲೇಖನಗಳನ್ನೂ ಬರೆಯುತ್ತಿದ್ದವಳು ಹೆಸರು ಮೀನಾಕ್ಷಿ ಅಂತ ಇಟ್ಟುಕೊಳ್ಳಿ ಆಂದ್ರದ ಪೋಲೀಸರ ಗುಂಡಿಗೆ ಈಗಾಗಲೇ ಆಹುತಿಯಾಗಿ ವರ್ಷಗಳೇ ಕಳೆದಿವೆ. ಮೀನಾಕ್ಷಿಯನ್ನು ಮದುವೆಯಾಗಿದ್ದ  ಕಾಮ್ರೇಡ್ ಕೂಡಾ ಇತ್ತೀಚೆಗಷ್ಟೇ ಪೋಲೀಸರ ಗುಂಡಿಗೆ ಬಲಿಯಾದ.

ಆದರೆ ಅದೃಷ್ಟವಶಾತ್ ಇಪ್ಪತ್ತು ವರ್ಷಗಳ ಹಿಂದೆ ಒಂದು ದಿನ ಒಂದು ಹಾಡಿಯಲ್ಲಿ ಬಡವರು ವಿಶ್ವನಾಥನ ಹೊಸಾ ಚಪ್ಪಲಿಯನ್ನು ಕದ್ದದ್ದರಿಂದ ಆತ ಪೋಲೀಸರ ಗುಂಡಿನಿಂದ ಬಚಾವಾದ.ಅದಕ್ಕಾಗಿ ಆ ಹಾಡಿಯ ಬಡಗಿರಿಜನರಿಗೆ ನಾನು ಈ ಮೂಲಕ ಕೃತಜ್ನತೆಗಳನ್ನು ಸಲ್ಲಿಸುತ್ತಿದ್ದೇನೆ.

 ವಿಶ್ವನಾಥ ಮೈಸೂರಿನ ಸರಸ್ವತಿಪುರಂ ನಂತಹ ಮದ್ಯಮ ವರ್ಗದ ಬಹುತೇಕ ಒಳ್ಳೆಯ ಆಸೆಗಳನ್ನೇ ಇಟ್ಟುಕೊಂಡಿರುವ ಜನರಿಂದ ತುಂಬಿಕೊಂಡಿರುವ ಬಡಾವಣೆಯಂತಹ ಬಡಾವಣೆಯ ಹುಡುಗ.ಆತನ ಅಪ್ಪ ಮೈಸೂರಿನ ಸರಕಾರೀ ಮುದ್ರಣಾಲಯದಲ್ಲಿ ಅಚ್ಚು ಜೋಡಿಸುತ್ತಾ ಇದ್ದ ಮಾಮೂಲೀ  ಮನುಷ್ಯನಂತಿದ್ದ ಅಪ್ಪ. ಅಮ್ಮ ವಿಶಾಲಾಕ್ಷಮ್ಮ ಎಂಬ ಹಾಗೇ ಕೇಳಿಸುತ್ತಿದ್ದ ಹೆಸರಿನ ಹೆಂಗಸು. ಮನೆ ತುಂಬಾ ದೇವರ ಪಟಗಳನ್ನು ಇಟ್ಟುಕೊಂಡಿದ್ದರು.ಅವರು ಬಹುಷಃ ತಿರುಪತಿ ಒಕ್ಕಲು ಅಂತ ಕೇಳಿದ ನೆನಪು. ಆದರೆ ಅವರು ನೋಡಲು ತುಂಬಾ  ಮುಂದುವರಿದ ಜಾತಿಗೆ ಸೇರಿದವರು ಇದ್ದ ಹಾಗೆ ಇದ್ದರು.

 ಹಾಗೆ ನೋಡಿದರೆ ವಿಶ್ವನಾಥನಿಗೆ ಸರಸ್ವತಿಪುರಂ ಪಕ್ಕದಲ್ಲೇ ಇದ್ದ  ಕುಕ್ಕರಹಳ್ಳಿಯ ಹುಡುಗರ ಜೊತೆಗೂ ಸರಸ್ವತಿ ಪುರಂ ಒಂದನೇ ಮೈನ್ ನಲ್ಲಿದ್ದ ಮುಸ್ಲಿಂ ಹಾಸ್ಟೆಲಲ್ಲಿ ತಿಂದುಂಡು ಚೆನ್ನಾಗಿ ಬೆಳೆಯುತ್ತಿದ್ದ ನನ್ನ ಜೊತೆಗೂ ಅವಿನಾಭಾವ ಸಂಬಂಧ  ಕೂಡಿ ಬಂದಿದ್ದು ಕ್ರಾಂತಿಯ ಪಾಠ ಹೇಳಿಕೊಡುತ್ತಿದ್ದ ಕಾಮ್ರೆಡ್ ನಿಂದಾಗಿ. 

 ಒಂಟಿಕೊಪ್ಪಲಲ್ಲಿದ್ದ ನಿವೃತ್ತ ಸೇನಾದಿಕಾರಿಯೊಬ್ಬರ ಮಗನಾಗಿದ್ದ ಕಾಮ್ರೇಡ್ ಸಿಕ್ಕಾಪಟ್ಟೆ ಒಳ್ಳೆ ಮನುಷ್ಯ.ಆದರೆ ಸಶಸ್ತ್ರ  ಕ್ರಾಂತಿಯ ವಿಷಯದಲ್ಲಿ ಅಷ್ಟೇ ಕಟ್ಟುನಿಟ್ಟಿನ ಮನುಷ್ಯ.ಬಡವರ ಕಷ್ಟದ ಬಗ್ಗೆ ಆತನಿಗೆ ಸಣ್ಣದಿರುವಾಗಲೇ ಎಷ್ಟು ಕಾಳಜಿ ಇತ್ತು ಅಂದರೆ ಮನೆಕೆಲಸದವಳು ಒಗೆದು ಒಗೆದು ಸೊರಗಬಾರದು ಎಂದು ಎರಡೇ ಜೊತೆ ಬಟ್ಟೆ ಇಟ್ಟುಕೊಂಡು ತಾನೇ ಅಪ್ಪನ ಕಣ್ಣು ತಪ್ಪಿಸಿ ಒಗೆಯುತ್ತಿದ್ದ.ಅಮ್ಮನಿಗೆ ಕಷ್ಟವಾಗದಿರಲಿ ಎಂದು ಅಮ್ಮ ದೋಸೆಗೆ ಅರೆಯುತ್ತಿದ್ದರೆ ತಾನು ತರಕಾರಿ ಹಚ್ಚಿಕೊಡುತ್ತಿದ್ದ.ಇದನ್ನೆಲ್ಲ ನನಗೆ ಹೇಳಿದ್ದು ಕಾಮ್ರೇಡ್ ಗುಂಡಿಗೆ ಬಲಿಯಾಗಿ ೨೪ ಗಂಟೆ ಕಳೆದ ಮೇಲೆ ಹಳೆಯದನ್ನೆಲ್ಲ ನೆನಪು ಮಾಡಿಕೊಳ್ಳುತ್ತಿದ್ದ ಆತನ ಅಮ್ಮ.

 ಅದೆಲ್ಲ ಇರಲಿ ನಾನು ಈಗ ವಿಶ್ವನಾಥನ ವಿಷಯ ಹೇಳುತ್ತೇನೆ. (more…)

Tuesday July 10, 2007

ಮೂಸಾ ಮೊಯಿಲಿಯಾರರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟ ಜಂತುವೂ

Filed under: ಕತೆ-ಗಿತೆ — Rasheed @ 9:39 pm

[೨೪ ವರ್ಷಗಳ ಹಿಂದಿನ ನನ್ನ ಮೊದಲ ಕಥೆ-ಬರೆದದ್ದು ಯೋಚಿಸಿದರೆ ಜುಂ ಎನ್ನುತ್ತೆ]

 

drwng-a-31.jpg

                                                                         [ಚಿತ್ರಗಳು-ಚರಿತಾ]

ರುಣಾನಿಧಿಯೂ, ಕಾರುಣ್ಯಮಯನೂ ಆದ ಅಲ್ಲಾಹುವು ಮೊತ್ತ ಮೊದಲು ಆದಂಪಾಪಾ ಮತ್ತು ಅವ್ವಾಬೀಬಿ ಎಂಬ ಗಂಡು ಹೆಣ್ಣುಗಳನ್ನು ಸೃಷ್ಟಿಸಿದನು. ಆಮೇಲೆ ಅವರಿಗಾಗಿ ಭೂಮಿಯ ಮೇಲಿನ ಸಕಲ ಚರಾಚರ, ಜೀವಜಂತುಗಳನ್ನೂ, ಪಶುಪಕ್ಷಿಗಳನ್ನೂ, ಗಿಡಮರಗಳನ್ನೂ ಉಂಟು ಮಾಡಿದನು. ಆದರೆ ಹಾರುವ ಈ ಕೆಂಪು ಹೆಲಿಪೆಟ್ಟರನ್ನು ಆತನೇ ಉಂಟು ಮಾಡಿದನೇ…. ಆತ ಎಲ್ಲವನ್ನು ಕಾಣುವವನೂ, ಕೇಳುವವನೂ ಆಗಿದ್ದಾನೆ…. ಹಾಗಾದರೆ ಆ ಸರ್ವಶಕ್ತಿನಿಗೆ ಮೈನಾಡಿನ ರಬ್ಬರ್ ತೋಟದ ಮೇಲೆ ಭರ್ರ್ ಎಂದು ಹಾರಾಡುತ್ತಾ, ತಟಕ್ಕನೇ ತಿರುಗುತ್ತಾ, ಸೂರ್ಯನ ಬೆಳಕಿನಲ್ಲಿ ಮಳೆಬಿಲ್ಲಿನಂತಹ ನೀಲಿ ನೀರನ್ನು ಮರಗಳ ಮೇಲೆ ಬಿಡುತ್ತಿರುವ ಈ ವಿಚಿತ್ರ ಜಂತುವಿನ ವಿಷಯ ಗೊತ್ತೇ ಎಂದು ಆಮಿನಾಬೀಬಿಗೆ ಸಂಶಯ ಉಂಟಾಯಿತು.
ತನ್ನ ಬಾಪಾನಿಗೆ ಶುಕ್ರವಾರದ ಜುಮ್ಮಾನಮಾಜಿಗೆ ಹಾಕಲು ಬೇಕೇ ಬೇಕಾದ ಅವರ ಉದ್ದನೆಯ ನಿಲುವಂಗಿ, ಬಿಳಿಯ ಡಬಲ್ ವೇಸ್ಟಿ ಪಂಚೆ, ಅವರ ರುಮಾಲು, ಒಳಗೆ ಹಾಕುವ ಬಿಳಿಬಿಳಿಯ ಪಟ್ಟೆಯ ಅಂಡರ್ವೇರ್ ಇತ್ಯಾದಿಗಳನ್ನು ಕುಕ್ಕೆಯಲ್ಲಿ ತುಂಬಿಕೊಂಡು ಬಂದು ಮೈನಾಡಿನಲ್ಲಿ ಹರಿಯುವ ಹೊಳೆಯ ಒಂದು ಮೂಲೆಯ ಕಲ್ಲಿನಲ್ಲಿ ಹಾಕಿ ಸೋಪು ಉಜ್ಜುತ್ತಾ ತಟ್ಟನೇ ತನ್ನ ತಲೆಯ ಮೇಲಿಂದಲೇ ಹಾರಿದ ಆ ಕೆಂಪು ಹೆಲಿಪೆಟ್ಟರನ್ನು ಕಂಡು ಬಿಟ್ಟ ಕಣ್ಣು ಬಿಟ್ಟುಕೊಂಡೇ ಯೋಚಿಸತೊಡಗಿದವಳಿಗೆ ತನ್ನ ಬಾಪಾನ ಬಿಳಿ ಬಿಳಿ ವಸ್ತ್ರಗಳ ಮೇಲೆ ಯಾಕೋ ಕೋಪ ಬರತೊಡಗಿ ಬಾಪಾನ ಬಿಳಿಯ ನಿಲುವಂಗಿಯನ್ನು ಕಲ್ಲಿನ ಮೇಲೆ ಕುಕ್ಕಿಬಿಟ್ಟಳು.
‘ಬಾಪಾ, ಬಾಪಾ, ನಾನೂ ಆ ಹೆಲಿಪೆಟ್ಟರನ್ನು ನೋಡಲು ಹೋಗಬಹುದಾ…..’ ಎಂದು ತುಂಬಾ ಚೆನ್ನಾಗಿ ಹೊಕ್ಕುಳ ಬಂದ ರೊಟ್ಟಿಯೊಂದನ್ನು ಬಾಪಾನ ತಟ್ಟೆಗಿಡುತ್ತಾ ಕೇಳಿದಳಿಗೆ ಬಾಪಾ ಅಂದದ್ದೇನು?…. ಆಮಿನಾಳ ಕಣ್ಣುಗಳಲ್ಲಿ ನೀರು ತುಂಬತೊಡಗಿತು. (more…)

ಷಿಲ್ಲಾಂಗ್ ಪತ್ರ-೧

[೧೯೯೮-೯೯ ರಲ್ಲಿ ಮೇಘಾಲಯದ ರಾಜಧಾನಿ ಷಿಲ್ಲಾಂಗಿನಿಂದ ನಾನು ಪಿ.ಲಂಕೇಶರಿಗೆ ಬರೆದ ಪತ್ರಗಳನ್ನು ಈಗ ಒಂದೊಂದಾಗಿ ಪೋಸ್ಟ್ ಮಾಡುತ್ತಿರುವೆ . ಓದಿ ಖುಷಿ ಪಡಿ ಎನ್ನದೆ ಇನ್ನೇನು ಹೇಳಲಿ.]

shillong.jpg

ಪ್ರೀತಿಯ ಲಂಕೇಶರಿಗೆ,

ಇಲ್ಲಿ ಈಗ ಫೆಬ್ರವರಿಯ ಗಾಳಿ ಬೀಸಲು ಶುರುವಾಗಿದೆ. ರಾತ್ರಿಯೆಲ್ಲಾ ಪೈನ್ ಮರಗಳ ಎಡೆಯಿಂದ ಬೀಸುವಗಾಳಿ. ಬೆಳಗ್ಗೆ ಏಳುವ ಮೊದಲೇ ಅಷ್ಟು ಎತ್ತರಕ್ಕೆ ಬಂದಿರುವ ಸೂರ್ಯ. ಮುಂಜಾನೆ ಆರು ಆರೂವರೆಯ ಹೊತ್ತಿಗೆ ಇಡೀ ಊರು ಮಂದಹಾಸದಂತಹ ಬಿಸಿಲಿನಲ್ಲಿ ಲಕಲಕ ಹೊಳೆಯುತ್ತಿರುತ್ತದೆ. ಮಧ್ಯಾಹ್ನದ ಹೊತ್ತು ಮಾರುಕಟ್ಟೆಯಲ್ಲಿ ಬಿದಿರುಬುಟ್ಟಿಯ ತುಂಬಾ ಕಿತ್ತಳೆ ಹಣ್ಣುಗಳನ್ನು ಇಟ್ಟುಕೊಂಡು ಮಾರಲು ಕುಳುತಿರುವ ಹೆಣ್ಣುಮಕ್ಕಳನ್ನು ನೀವು ನೋಡಬೇಕು. ಸೂರ್ಯನ ಹೊಳಪು, ಕಿತ್ತಳೆಯ ಬಣ್ಣ ಮತ್ತು ಅವರ ಕೆನ್ನೆಯ ಗುಲಾಬಿರಂಗು, ಊರಲ್ಲಿ ಯಾರಾದರೂ ಗುಲಾಭಿಯಂತಹ ಕೆನ್ನೆ ಅಂದರೆ ನಗುಬರುತ್ತಿತ್ತು. ಇಲ್ಲಿ ಗುಲಾಬಿ ಕೆನ್ನೆಗಳನ್ನು ಕಂಡು ದುಗುಡವಾಗುತ್ತದೆ.

 ನಿಮಗೆ ಇದೆಲ್ಲಾ ಓದಿ ನಗುಬರಬಹುದು. (more…)

ಪಕ್ಷಿರಾಜಪುರದ ಪಿ.ಎಸ್.ವಸಂತನ ಕಥೆ

Filed under: ಮುಖಚಿತ್ರ — Rasheed @ 12:02 am

 pakshirajapura-gurupura-tibetan-014-1.jpg

ಹುಣಸೂರಿನ ಬಳಿಯ  ಪಕ್ಷಿರಾಜಪುರದ ೨೦ ಹಕ್ಕಿಪಿಕ್ಕಿ ಮಂದಿಯನ್ನು ನೇಪಾಳದ ಪೋಲೀಸರು ವನ್ಯಜೀವಿ ರಕ್ಷಣಾ ಕಾಯಿದೆಯಡಿ ಬಂದಿಸಿದ್ದಾರೆ. ಇವರಲ್ಲಿ ಒಬ್ಬರು ಈಗ ನಿಮ್ಮ ಜೊತೆ ಯು ಟ್ಯೂಬ್ ನಲ್ಲಿ ಮಾತನಾಡಲಿರುವ ಪಿ.ಎಸ್. ವಸಂತ ಎಂಬ ಅದ್ಭುತ ಮಾತುಗಾರನ ನಾಲ್ಕನೆಯ ಹೆಂಡತಿ ಸೋನಾ.

ಹಾಗೆ ನೋಡಿದರೆ ಮರೆತ ಎಲೆಅಡಿಕೆ ತರಲು ಈ ವಸಂತ ರೈಲು ಇಳಿದು  ಹೋಗಿರದಿದ್ದರೆ ಈತನೂ ನೇಪಾಳದ ಪೋಲೀಸರ ಪಾಲಾಗುತ್ತಿದ್ದ.

ಈಗ ಈ ವಸಂತನಿಗೆ ಒಂದು ಕಡೆ ಖುಷಿ. ಇನ್ನೊಂದು ಕಡೆ ವಿರಹ.

 ಈ ಮಿಶ್ರ ಭಾವನೆಯನ್ನು ಈತನ ಮಾತುಗಳಲ್ಲೇ ಕೇಳಿ: (more…)

Monday July 9, 2007

ಮಡಿಕೇರಿ , ದೇವರಕೊಲ್ಲಿ ,ಆಗುಂಬೆ ಇತ್ಯಾದಿ….

Filed under: ಈ ತಾಣ ಎಲ್ಲಿ ಬಲ್ಲಿರೇನ — Rasheed @ 4:24 pm

ತಲೆಯೊಳಗೆ ಏನೋ ಒಂದು ದುಂಬಿ ಹೊಕ್ಕವನ ಹಾಗೆ, ಒಬ್ಬನೇ , ಅನ್ಯಮನಸ್ಕನಾಗಿ ಕಳೆದ ಎರಡುದಿನಗಳಲ್ಲಿ ಮೈಸೂರಿನಿಂದ ಹೊರಟು ಪುನಃ ಇಲ್ಲಿಗೇ ಹೊರಟು ಬಂದೆ. ಬರಿಯ ಸುರಿವ ಮಳೆ ಮತ್ತು ಕಾರಿರುಳು.ಮಡಿಕೇರಿ-ಸಂಪಾಜೆ-ಹೆಬ್ರಿ-ಆಗುಂಬೆ-ತೀರ್ಥಹಳ್ಳಿ-ಶಿವಮೊಗ್ಗೆ-ಅರಸೀಕೆರೆ-ಮೈಸೂರು.ಇಲ್ಲಿ ಬಂದು ಇಷ್ಟು ಹೊತ್ತಾದರೂ ಹೋಗದ ಈ ಅನ್ಯಮನಸ್ಕತೆ! ಹೋಗಲಿ ಬಿಡಿ-ಈ ಚಿತ್ರಗಳನ್ನು ನೋಡಿ!

dsc_0001.jpgdsc_0038.jpg

 [ಬೆಳ್ಳಂಬೆಳಗೆ ರಾಜಾಸೀಟು]                                                   [ಕಾಟಕೇರಿಯಲ್ಲಿ...]

dsc_0044.jpg

[ಮದೆನಾಡಿನ ಬಳಿ]

dsc_0050.jpg

 [ದೇವರ ಕೊಲ್ಲಿ]                                                           dsc_0097.jpg

[ಸೋಮೇಶ್ವರ]

ಉಳಿದಂತೆ ಬರಿಯ ಮಳೆ ಮತ್ತು ಕಾರಿರುಳು.

—————————————-

                           

ರಾಬಿಯಾಳಿಗೆ ಮದುವೆಯಾದ ಪ್ರಸಂಗ

Filed under: ಅಲೆಮಾರಿಯ ದಿನಚರಿ — Rasheed @ 10:41 am

dsc04458.jpg

`ಈ ಹಿಂದೆ ಕುಂಞಮ್ಮದನ ಮದುವೆಯ ಅಲ್ಲೋಲ ಕಲ್ಲೋಲದ ಕುರಿತು ಏನನ್ನೂ ಹೇಳದೆ  ನೀನು ಬಚಾವಾದೆ.ಈ ವಾರವೂ ನೀನು ಅದನ್ನು ಬರೆಯದೆ ಬೇರೆ ಏನಾದರೂ ಲಡಾಸು ಬರೆಯಲು ಹೋದರೆ ನಿನ್ನ ತಲೆಯ ಜೊತೆ ನನ್ನ ತಲೆಯೂ ಸಹಸ್ರ ಹೋಳಾಗುವುದು.ಆ ಕತೆ ಹೇಳಿ ಮುಗಿಸು ಮಾರಾಯ. ನಿನ್ನ ಜೊತೆ ನಾನೂ ಬದುಕಿಕೊಳ್ಳುತ್ತೇನೆ’ ಎಂದು ಆತ ಅಕ್ಕರೆಯಿಂದ ಕೇಳಿಕೊಳ್ಳುತ್ತಿದ್ದ.ನಾನು ಮನಸಿನ ಒಳಗೊಳಗೆ ಮುಸಿಮುಸಿ ನಗು ಬಂದರೂ ತೋರಿಸಿಕೊಳ್ಳದೆ ಸುಮ್ಮಗೆ ಕೇಳಿಸಿಕೊಳ್ಳುತ್ತಿದ್ದೆ.

 ’ಆ ಕೋಲಾಹಲದ ಮದುವೆಯ ಕುರಿತು ಈಗ ಏನು ಬರೆಯುವುದು?ಅದು ಸಂಭವಿಸಿ ಹತ್ತುಮೂವತ್ತು ವರ್ಷಗಳು ಕಳೆದಿದೆ.ಆಗ ನಾನಿನ್ನೂ ಹತ್ತು ವರ್ಷದ ಬಾಲಕ.ಕುಂಞಮ್ಮದನ ಮದುವೆಯ ನಿಶ್ಚಿತಾರ್ಥಕ್ಕೂ ಆಮೇಲೆ ನಡೆದ ವಿವಾಹ ಸಮಾರಂಭಕ್ಕೂ ನಾನು ಸಾಕ್ಷಿಯಾಗಿದ್ದೆ.ಮದುವೆಯ ರಾತ್ರಿ ನಡೆದ ಹೊಡೆದಾಟದ ನಂತರ ದೋಣಿ ಹತ್ತಿ ಪರಾರಿಯಾದವರಲ್ಲಿ ನಾನೂ ಒಬ್ಬನಾಗಿದ್ದೆ.ಈಗ ಅದೆಲ್ಲಾ ಯಾವುದೋ ಗ್ರೀಕ್ ಮಹಾಕಾವ್ಯವೊಂದರ ಒಂದು ಪುಟ್ಟ ಘಟನೆಯಂತೆ ಭಾಸವಾಗುತ್ತಿದೆ.ಈಗ ಅದನ್ನೆಲ್ಲಾ ನೆನಪು ಮಾಡಿಕೊಳ್ಳುವುದಕ್ಕಿಂತ ಬೇರೆ ಏನಾದರೂ ಚಂಗೂಲಿ ಕೆಲಸ ವಹಿಸಿಕೊಂಡು ಅದನ್ನು ಪೂರೈಸುವುದು ಸುಲಭ.ಅದು ಬಿಟ್ಟು ಅರ್ದಕ್ಕೆ ನಿಲ್ಲಿಸಿದ ಕತೆಯನ್ನು ಪೂರ್ತಿಗೊಳಿಸು ಅಂದರೆ ಅದು ಮಹಾ ತಾಪತ್ರಯವಾಗುತ್ತದೆ ದಯವಿಟ್ಟು ಮನ್ನಿಸು ಮಹಾಪ್ರಭುವೆ’ಎಂದು ಆತನಲ್ಲಿ ಬೇಡಿಕೊಂಡೆ.

 ನಾನು ಈತರಹ ಬೇಡಿಕೊಂಡರೆ ಅದರ ಅರ್ಥ ಕಥೆ ಹೇಳಲು ನನಗೇ ಆಸೆ ಇದೆ ಅಂತ.ಅದು ಆತನಿಗೂ ಗೊತ್ತು. ‘ಸುಮ್ಮನೆ ಬರೆದು ಮುಗಿಸು ಚೆನ್ನಾಗಿರುತ್ತದೆ’ಎಂದು ಚುಟುಕಾಗಿ  ಸೂಚಿಸಿದ.ಹಾಗಾಗಿ ಸುಮ್ಮನೇ ಆ ಕಥೆಯನ್ನು ಹೇಳಿ ಮುಗಿಸುತ್ತೇನೆ. (more…)

Friday July 6, 2007

ಬಂದೇನವಾಜರ ಧರ್ಗಾದಿಂದ ಎರಡನೇ ಕವಿತೆ

Filed under: ಹಾಡು-ಪಾಡು — Rasheed @ 11:01 am

 ಹೆಂಗಸರ ಹುಚ್ಚು , ಭಗವಂತ ಮತ್ತು ನಾನು

dance.jpg

 

ಈ ಹೆಂಗಸರ ಮಧ ಇಂದು ಅತಿರೇಕಕ್ಕೆ ಹೋಗಿದೆ,

ಇವರ ಆರ್ತ ಕೂಗು ಭಕ್ತಿಯಂತೆ ಕೇಳಿಸುತ್ತಿದೆ.

ಮಲಗಿರುವ ಮಕ್ಕಳು ಕನಸಿಂದ ದಿಗ್ಗನೆ ಎದ್ದು ,ಬೆಳಕಲ್ಲಿ ಕಣ್ಣು ಕಾಣಿಸದೆ

ಕಕ್ಕಾವಿಕ್ಕಿಯಾಗಿ, ಹಾಗೇ ನೆಲದ ತಂಪಿಗೆ ಕೆನ್ನೆ ಒತ್ತಿ, ಭೂಮಿಯೊಳಗಣ ಸದ್ದ ಆಲಿಸುವ

ಆಟ ಆಡುತ್ತಿದ್ದಾರೆ. ಈ ಹೆಂಗಸರ  ಸಂಕಟ ಆಧ್ಯಾತ್ಮವಾಗಿಹೋಗಿದೆ.

ಈ ಹಾಸ್ಯಾಸ್ಪದ ಭಗವಂತ ಏನೂ ಕಾಣಿಸದ ಕುರುಡ.ಸಂಗೀತವೂ ಗೊತ್ತಿಲ್ಲದ

 ಚಪ್ಪಟೆಕಿವಿಯ ಸರ್ವಾ ಂತರ್ಯಾಮಿ.ಪೆದ್ದುಪೆದ್ದಾಗಿ ಆಕಾಶದ ಅಗಲಕ್ಕೆ ಕುಂಡೆಯಾನಿಸಿ ಕೂತ

ಭಗವಂತ.ಮುಳ್ಳು ಕಂಟಿಯ ತುದಿಗೆ ಬೆಳಕ ತುರಿಸುತ್ತ ಕುಳಿತ ಮಿಂಚುಹುಳ ಈ ಭಗವಂತ.

ಎಲ್ಲವನು ಅರಿತ ಅಲ್ಲಾಡುವ ಶಿಖೆಯ ಆನಂದ ಕಂದ ತುಂದಿಲ ಕಂದ.ಆಕಾಶದಲ್ಲೂ ತುಂಬಿ

ಆತ್ಮದೊಳಗೂ ಹರಿದು ಹೇಗೆ ಹರಸುವುದು ಎಂದು ಹಲುಬುತ್ತಿದ್ದಾನೆ.

ಈ ಹೆಂಗಸರು ಈಗ ಭಂಗಿ ಬದಲಿಸುತ್ತಿದ್ದಾರೆ. ಹುಚ್ಚು ಕೆದರಿದ್ದವರು, ಭಕ್ತಿ ತುಂಬಿದ್ದವರು

ಒಂದರೆಗಳಿಗೆ ತಡೆದು ನೀರು ಕುಡಿದು ,ಹಾಲೂಡಿಸಿ,ಕೈಕಾಲುಬೆರಳುಗಳ ನೆಟಿಗೆ ಮುರಿದು,

 ಕೆದರಿದ್ದ ಮುಡಿಯ ಮತ್ತೆ ವೈಯಾರದಲಿ ಬಿಗಿದು,ಮತ್ತೆ ಕದಡಿ

 ಇನ್ನೊಂದು ಆರ್ತ ಆಲಾಪಕ್ಕೆ ಸಿದ್ದರಾಗುತ್ತಿದ್ದಾರೆ.

ಎಲ್ಲವೂ ನಿಜ,ಹಸಿ.ಎಲ್ಲವೂ ದೂರ ಭಗವಂತನಂತೆ ಮತ್ತು ಅವನ ಸೈನಿಕ ಸಂತರಂತೆ

ಇರುವ ಭಕ್ತಿಯ ಮಾರ್ಗ-ಹುಚ್ಚು ಹಳವಂಡ-ಇದು ಮಾತ್ರ ಈ ಅಮವಾಸೆಯ ಕತ್ತಲಲ್ಲಿ ನಿಜ

ಉಳಿದದ್ದು ಸುಳ್ಳು,ವ್ಯಭಿಚಾರ ಮತ್ತು ಕೈಗೆ ಎಟುಕುವಂತದ್ದು.

ನಾನು ದಣಿದು ನೋಡುತ್ತಿದ್ದೇನೆ……

ಈ ಹೆಂಗಸರೂ ಇಲ್ಲದ,ಭಗವಂತನೂ ಅಲ್ಲದ5837_derv.jpg

ಮಕ್ಕಳೂ ಕೈಗೆ ಸಿಗದ ಈ ಟೊಳ್ಳು ಬಿಸಿಲಿನಲ್ಲಿ

ಮಿದುಳೊಳಗೆ ಬೆಳದಿಂಗಳು ಮತ್ತು ಹುಚ್ಚು ನಗು

ಸುಮ್ಮನೇ ನೋಡುತ್ತಿದ್ದೇನೆ

ಚೀತ್ಕರಿಸುತ್ತಿರುವ ಹೆಂಗಸರ ಹಾಹಾಕಾರದ ನಡುವೆ ಹೊಮ್ಮುತ್ತಿರುವ

 ಹಭೆಯ ನಡುವೆ ಎದ್ದು ನಿಂತಿರುವ ಭಗವಂತ.

ನಾನು ನೋಡುತ್ತಿದ್ದೇನೆ. ಆತ ಎಲ್ಲವ ಕಾಣುತ್ತಿದ್ದಾನೆ.

———

Thursday July 5, 2007

ಕವಿತೆ,ಸಮಾಜ ಮತ್ತು ಕ್ರಾಂತಿ ಇತ್ಯಾದಿ

Filed under: ಅಲೆಮಾರಿಯ ದಿನಚರಿ — Rasheed @ 11:35 pm

poetry11.jpg
  ’ಸಾರ್,ಕವಿಗಳಿಗೆ ಸಾಮಾಜಿಕ ಬದ್ಧತೆ ಇರಬೇಕೂ ಅಂತೀರಾ?’

ಆಗ ತಾನೇ ಮೀಸೆ ಮೂಡಲು ತೊಡಗಿದ್ದ ಆ ಹುಡುಗ ಮುಖವನ್ನು ಚೂಪು ಮಾಡಿಕೊಂಡು ನನ್ನನ್ನು ಗುರಿಯಾಗಿಟ್ಟುಕೊಂಡು ಪ್ರಶ್ನೆಯೊಂದನ್ನು ಒಗೆದ.

ನಾನಾಗಿದ್ದಿದ್ದರೆ, ‘ಸಾರ್ ಕವಿತೆಯನ್ನು ಬಿಳಿ ಹಾಳೆಯ ಒಂದೇ ಮಗ್ಗುಲಲ್ಲಿ ಬರೆಯಬೇಕಾ?ಅಥವಾ ಎರಡೂ ಕಡೆ ಬರೆದರೆ ಆಗುತ್ತದಾ?’ ಎಂದು ಕೇಳುವಂತಹ ವಯಸ್ಸು. ‘ಇದೆಲ್ಲಾ ಹೋಗಲಿ ಮಾರಾಯಾ..ನಿನ್ನ ಊರು ಯಾವುದು ? ಏನು ಮಾಡುತ್ತಿದ್ದೀಯಾ? ಹಾಸ್ಟೆಲಲ್ಲಿ ಊಟ ಸರಿಯಾಗುತ್ತದಾ? ಎಂದು ಕೇಳಿದೆ.

‘ಅಲ್ಲ  ಸಾರ್ ಸಮಾಜದಲ್ಲಿ ಕವಿಗಳ ಪಾತ್ರ ಏನು ಸಾರ್?’ಆತ ಪುನಃ ಶುರು ಮಾಡಿದ.

  ‘ಅಲ್ಲ ಮಾರಾಯ ಕವಿಗಳಿಗೂ ಸಮಾಜಕ್ಕೂ ಅಂತಹ ಒಳ್ಳೆಯ ಸಂಬಂಧವೇನೂ ಇಲ್ಲ.ಹಾಗೆ ನೋಡಿದರೆ ಕವಿತೆ ಬರೆಯುವುದು ಒಂದು ರೀತಿಯಲ್ಲಿ ಸಮಾಜಬಾಹಿರ ಕೃತ್ಯ.ನಾನು ಮೊದಲ ಕವಿತೆ ಬರೆದದ್ದು ಒಂದು ಸಣ್ಣ ಚೀಟಿಯಲ್ಲಿ.ಆ ಚೀಟಿಯನ್ನು ಆ ಕಡೆಯ ಬೆಂಚಿನಲ್ಲಿ ಕುಳಿತಿದ್ದ ಹುಡುಗಿಗೆ ದಾಟಿಸಲು ಹೆಣಗಾಡುತ್ತಿದ್ದೆ.ಅದು ನಮ್ಮ ಸಮಾಜ ಶಾಸ್ತ್ರದ ಮೇಷ್ಟರ ಕೈಗೆ ಸಿಕ್ಕಿ ಅವರು ಸಮಾಜ ಪಾಠ ಮಾಡುವುದನ್ನು ನಿಲ್ಲಿಸಿ ನೀತಿ ಪಾಠ ಮಾಡಲು ಶುರುಮಾಡಿದರು.ಅದರಿಂದಾಗಿ ನನ್ನನ್ನು ಆ ವರ್ಷದ ಶಾಲಾ ಚುನಾವಣೆಗೆ ನಿಲ್ಲದಂತೆ ನಿಷೇಧ ಹೇರಲಾಯಿತು.ಇನ್ನೊಂದು ಕವಿತೆ ಆ ಹುಡುಗಿಯ ಅಪ್ಪನ ಕೈಗೆ ಸಿಕ್ಕಿಹಾಕಿಕೊಂಡು ಅವರು ಕೋವಿ ಹಿಡಿದುಕೊಂಡು ಊರೆಲ್ಲಾ ನನಗಾಗಿ ಹುಡುಕಾಡಿದ್ದರು.ನಾನು ನಮ್ಮ ಪ್ರಿನ್ಸಿಪಾಲರಿಗೆ ಕ್ಷಮಾಪಣಾ ಪತ್ರವನ್ನು ಬರೆದು ಕೊಡಬೇಕಾಯಿತು.ಹಾಗಾಗಿ ಸಮಾಜದ ಕುರಿತು ನನಗೆ ಕೊಂಚ ಹೆದರಿಕೆ ಬಿಟ್ಟರೆ ಬೇರೆ ಬದ್ಧತೆಯೇನೂ ಇಲ್ಲ’ಅಂದೆ. (more…)

Next Page »

Blog at WordPress.com.