೧.
ನಿನ್ನ ತೆರೆದ ತೋಳನ್ನ ಕಂಡು
ಈವರೆಗೆ ಒಂದು ನೀಳ ನಿದ್ದೆ.
ಇದೀಗ ಎದ್ದಾಗ ಒಂದು ಕಂದು ಮಲೆ,
ಹಸಿವು -ಮತ್ತು ಅಸಹನೀಯ ಈ ಮಳೆ.
೨.
ಯಾರು ನೀನು?
ನಿನ್ನೆ ತಾನೆ ಕಂಡವಳು.
ಕಾಗುಣಿತ ಸರಿಮಾಡೆಂದರೆ
ನಾನು ಸರಿಯಿದ್ದೇನೆಯೇ
ಪರಿಶೀಲಿಸು ಅಂದವಳು!
೩
ನೀನು ಹೋಗುತ್ತೀಯ
ಮತ್ತೆ ಅವನಲ್ಲಿಗೆ.
ನಾನೂ ಅವಳ ಬಳಿಗೆ.
ಇಲ್ಲೇ ಉಳಿಯಿತು ಈ ನೆತ್ತರು-
ನಿನ್ನ ಬಳೆಯ ಚೂರು.
೪.
ಹೀಗಲ್ಲ ,ಹೀಗಲ್ಲವೆಂದು
ಮತ್ತೆ ಅಪ್ಪಿಕೊಂಡೆ.
ಕತ್ತಲಾಯಿತು ಹೋಗು ಅಂದೆ.
ಒಂದು ತುಣುಕು ಮೋಡ
ಉಳಿಯಿತು ಹಾಗೇ-
ಆಕಾಶದಲ್ಲಿ ಏನೂ ಆಗದಂತೆ.
೫.
ಹಾಗೆ ನೋಡಿದರೆ
ಏನೂ ಅಲ್ಲ ನಾವು ನಡೆಸಿದ್ದು
.
ಆ ಭಯಂಕರ ಬಿಸಿಲು,
ಮತ್ತೆ ಹೊಡೆದ ಸಿಡಿಲು,
ಮತ್ತು ಆ ಬಿಳಿಯ ಬೆಕ್ಕು ರಸ್ತೆಯಲ್ಲಿ
ಅವಾಕ್ಕಾಗಿ ಆಗ ತಾನೇ ಮರಣ ಹೊಂದಿ
ನೋಡುತ್ತಿದ್ದುದು.
೬
ನೀರು ತುಂಬಿಕೊಳ್ಳುತ್ತದೆ.
ಮರಗಳು ಮುಳುಗಿ ಹಳಸಲು ತೊಡಗುತ್ತವೆ.
ನಿನ್ನ ಕಂಕುಳಿನಲ್ಲಿ ಯಾರೋ
ಗಂದಸಿನ ಪರಿಮಳ.’ ಅದು
ಕಸ್ತೂರೀ ಮೃಗ’ ಎಂದು ಗಹಗಹಿಸುತ್ತೀಯ.
ಕೆಟ್ಟ ಹುಡುಗಿ!
೭
ಹೋಗು. ತಟ್ಟೆಯಲ್ಲಿ ಅನ್ನವಿಡು.
ನಿನ್ನೆಯ ಸಾಂಬಾರು.
ನೆರಿಗೆ ಸರಿಪಡಿಸಿಕೋ.
ನಿನ್ನ ಮುಂಗುರುಳಲ್ಲಿ
ನನ್ನ ಬೆರಳು.
ನಿನ್ನ ಎದೆಯಲ್ಲೇ ಉಳಿದ
ನನ್ನ ಒಂದು ಬಿಳಿಯ ಕೂದಲು.
೮.
ಅಸಂಖ್ಯಾತ ನಕ್ಷತ್ರಗಳು
ಬರಿಯ ಸಬೂಬುಗಳು.
ಸುಳ್ಳು ಈ ಆಕಾಶ.
ದೇಹ ದೊಡ್ಡ ನೆಪ.
ಏನು ಅನ್ನುವುದು ನಿನ್ನ ಕಂಡೊಡನೆ
ತುಂಬಿಕೊಳ್ಳುವ ನನ್ನ ಕಣ್ಣಾಲಿಗಳನ್ನು?
೯
.
ಸುಳ್ಳು ನುಡಿಯುತ್ತೇನೆ ನಿನ್ನೊಡನೆ.
ನಿಜ ಹೇಳಲಾಗದು ನಿನಗೆ ನನ್ನೊಡನೆಯೂ.
ಸುಮ್ಮನೆ ತುಂಬಿಕೊಳ್ಳುವ ಈ ಆನಂದ,
ಈ ತುಂಟ ಹಠ,ನಿನ್ನ ಉಂಗುಷ್ಟವನ್ನು
ಮುತ್ತಿಡುವ ಕಾಮ,
ಉಧರ ವೈರಾಗ್ಯ!
೧೦
ಯಾಕೋ ಅತಿಯಾಯಿತು ಈ ಹತ್ತು
ಕವಿತೆಗಳೂ.
ಇರುತ್ತಿರಲಿಲ್ಲ
ಇದು ಯಾವುದೂ.
ನೀನೂ ಹಠ ಮಾಡಿದೆ,
ಸುಮ್ಮನೇ ಕಾರಣ ಕೇಳಿದೆ,
ನಾ ಸುಮ್ಮಗಿದ್ದರೂ ಬಿಡದೆ.
7 Comments
ಮೋಹಿತನ ಇನ್ನಷ್ಟು ಕವಿತೆಗಳು ಹಿಂದಿನ ಮೋಹಿತನ ಕವಿತೆಗಳಿಗಿಂತ ಚೆನ್ನಾಗಿವೆ.ನಿಜಕ್ಕೂ
ಪ್ರಿಯ ರಶೀದ್,
ಒಂದು ತುಣುಕು ಮೋಡ
ಉಳಿಯಿತು ಹಾಗೇ
ಆಕಾಶದಲ್ಲಿ ಏನೂ ಆಗದಂತೆ…
…ನಿನ್ನ ಮುಂಗುರುಳಲ್ಲಿ ನನ್ನ ಬೆರಳು…
…ಏನು ಅನ್ನುವುದು ನಿನ್ನ ಕಂಡೊಡನೆ ತುಂಬಿಕೊಳ್ಳುವ ನನ್ನ ಕಣ್ಣಾಲಿಗಳನ್ನು…
….ನಿಜ ಹೇಳಲಾಗದು ನನ್ನೊಡನೆಯೂ…
..ಯಾಕೋ ಅತಿಯಾಯಿತು….
ಕಾಡುವ ಸಾಲುಗಳು.. ಯಾಕೋ ಅತಿಯಾಯಿತು. ಓದಲಾಗುತ್ತಿಲ್ಲ. ಓದದೆ ಇರಲೂ ಆಗುತ್ತಿಲ್ಲ..ಆರ್ದ್ರ ಭಾವನೆಗಳನ್ನು ಹೀಗೆ ಮೊಗ್ಗು ಮೊಗ್ಗಾಗಿ ಅರಳಿಸುವ ಸೃಷ್ಟಿಕಲೆಯನ್ನು ಯಾರ ಹತ್ತಿರ ಕಲಿತಿರಿ ನೀವು?
ಓದುತ್ತ ಓದುತ್ತ ಹೃದಯ ಮತ್ತು ವಿವೇಕ ಒಟ್ಟಿಗೇ ಪಲ್ಟಿ ಹೊಡೆಯುತ್ತವೆ.ಸರಿ ಕೂರಿಸಿ ಕೂರಿಸಿ ಹೈರಾಣಾಗಿದ್ದೇನೆ ನಾನು. ಓದುಗರಲ್ಲಿ ಪ್ರೀತಿಯಿರಲಿ.
yaaro haTa maaDodrinda ishtellaa kaaNalu,bhaavisalu sigodaadre maaDli biDi..!
touchy images too..
Chennagive. Ashte. Chennagive.
saar tumbaaa chenaagive
… kelavu “hOlikegaLu” yaako artha aaglilla… avu nigooDha.. nigooDhavaagiyE irali biDi
ಎಲ್ಲಾ ಪದ್ಯಗಳೂ ಇಷ್ಟವಾದವು. ಕೆಲವು ಇಷ್ಟವಾದರೂ ಮನಸಿಗೆ ಕಷ್ಟವಾದವು… ನಿಮ್ಮ ಸಾಲುಗಳನ್ನು ಓದುತ್ತಿದ್ದರೆ ಬರೆಯುವ ಆಸೆಯಾಗುತ್ತೆ…
-ಅಪಾರ
ಗಾಢ ನೋವು, ಹಿಡಿ ವಿಷಾದ, ಚಿಟಿಕೆ ನಗು ಎಲ್ಲ ಬೆರೆಸಿದ ಈ ಕವಿತೆಗಳು ನವಿರು, ಭೀಕರ ಎರಡೂ ಹೌದು.. – ಶಮ,ನಂದಿಬೆಟ್ಟ