The Mysore Post

Saturday June 30, 2007

ಒಂದನೆಯ ತರಗತಿಯಿಂದ ಇಂಗ್ಲಿಷ್: ಒಂದು ಗಂಭೀರ ಚಿಂತನೆ!

Filed under: ಅಲೆಮಾರಿಯ ದಿನಚರಿ — Rasheed @ 2:02 am

     
 
 ’ನೀನು ಬರೆಯುವುದರಲ್ಲಿ ನನಗೆ ಯಾವ ಪ್ರಯೋಜನವೂ ಕಾಣಿಸುವುದಿಲ್ಲ.ನೀನು ಬರೆಯುವುದು,ಅಲೆಯುವುದು,ಅದರಿಂದ ಸಿಗುವ ಸುಳ್ಳು ಖ್ಯಾತಿ,ಅದರಿಂದ ಉಂಟಾಗುವ ಕಳ್ಳ ಪ್ರಣಯ, ನಿನ್ನ ಈ ಹುಚ್ಚಿನಿಂದಾಗಿ ಆರ್ಥಿಕವಾಗಿಯಾಗಲೀ ಸಾಮಾಜಿಕವಾಗಿಯಾಗಲೀ ನಯಾಪೈಸೆ ಲಾಭವಿಲ್ಲ.bahumed.gifನೀನು ಮುಚ್ಚಿಕೊಂಡು ಸುಮ್ಮನೆ ಕೂತುಕೋ. ಬೀಡಿಸಿಗರೇಟಿಗೆ ಟೀಗೆ ನಾನು ಕೊಡುತ್ತೇನೆ. ಮನೆಗೂ ಸಮಾಜಕ್ಕೂ ಎಲ್ಲರಿಗೂ ಒಳಿತಾಗುತ್ತದೆ’ಎಂದೆಲ್ಲ ಅವಳು ಸಂಕಟದಲ್ಲಿ  ಉಲಿಯುತ್ತಿದ್ದಳು. 

 ನನಗೂ ಅವಳು ಅನ್ನುತ್ತಿರುವುದು ನೂರಕ್ಕೆ ನೂರರಷ್ಟು ಸರಿ ಅನ್ನಿಸುತ್ತಿತ್ತು.

 ಅವಳು ಕೊಟ್ಟ ದುಡ್ಡಲ್ಲಿ ಒಂದು ಗಾಳ ಮತ್ತು ಒಂದು ಕಟ್ಟು ಬೀಡಿ ಕೊಂಡುಕೊಂಡು ಒಂದು ಎರೆಹುಳ ಹಿಡಿದು ಗಾಳಕ್ಕೆ ಸಿಕ್ಕಿಸಿ ಉಟ್ಟ ಪಂಚೆಯನ್ನ ಒದ್ದೆಯಾಗದ ಹಾಗೆ ಪೇಟದಂತೆ ತಲೆಗೆ ಸುತ್ತಿಕೊಂಡು ಕೊಡಗಿನ ನನ್ನ ಬಾಲ್ಯದ ನದೀ ತೀರದಲ್ಲಿ ಮೀನು ಹಿಡಿಯಲು ಕೂತುಬಿಡಬೇಕೆಂದು ಅನ್ನಿಸುತ್ತಿತ್ತು.ಜೊತೆಗೆ ಇವಳೂ ಮೀನು ಹಿಡಿಯಲು ಕೂತು ಬಿಟ್ಟರೆ ನಾನು ಮೀನು ಹಿಡಿಯುವುದನ್ನು ಬಿಟ್ಟು ಇವಳನ್ನೇ ನೋಡುತ್ತಾ ಕೂತು ಬಿಡಬಹುದು ಅಂತಲೂ ಎನ್ನಿಸುತ್ತಿತ್ತು. ಆದರೆ ಇದನ್ನು ಹೇಳುವುದು ಈ ಸಂಕಟದ ಸಮಯದಲ್ಲಿ ಸಮಂಜಸವಲ್ಲ ಎಂದು ಕೊಂಡು ಸುಮ್ಮನೆ ಉಗಿಸಿಕೊಂಡು ಕೂತಿದ್ದೆ.
 ಅವಳು ಸಂಕಟವನ್ನು ಪ್ರೀತಿಯನ್ನಾಗಿ ಪರಿವರ್ತಿಸಲು ಹೆಣಗುತ್ತಿದ್ದಳು.  (more…)

Friday June 29, 2007

ಮತ ಧರ್ಮಗಳೂ ಮತ್ತು ನರ ಮನುಷ್ಯರೂ

Filed under: ಅಲೆಮಾರಿಯ ದಿನಚರಿ — Rasheed @ 12:23 am

ಉರಿಯುತ್ತಿರುವ ಗುಲ್ಬರ್ಗಾ ಶಹರಿನಲ್ಲಿ ತಣ್ಣಗಿರುವ ಕೆಲವು ನಿಗೂಢ ತಾಣಗಳಿವೆ.wings.jpg ಎಷ್ಟೇ ಉರಿಯಿದ್ದರೂ ಒಳಹೊಕ್ಕೊಡನೆ ಅವ್ಯಕ್ತ ಗಾಳಿಯಾಡಿ, ಎಷ್ಟೋ ಶತಮಾನಗಳಷ್ಟು ಹಳೆಯ ಗುಂಗು ಮೂಡಿಸಿ, ಹಳೆಯ ಪಾರಿವಾಳಗಳು ರೆಕ್ಕೆ ಬಡಿದು ಹಾರಾಡಿ , ಧೂಪ- ಸಾಂಬ್ರಾಣಿ- ಹೊಗೆ- ಸಮಾದಿ- ನಾವು ಇರುವ ಜಾಗ ಯಾವುದು ನಾವು ಎಲ್ಲಿಂದ ಬಂದವರು ಎಂಬುದನ್ನೆಲ್ಲ ಮರೆಯಿಸಿಬಿಡುತ್ತವೆ.

 ನೀವು ಯಾರಾದರೂ  ಶುಕ್ರವಾರದ ಹಿಂದಿನ ರಾತ್ರಿ ಅಥವಾ ಅಮವಾಸ್ಯೆಯ ಹಿಂದಿನ ಸಂಜೆ ಕತ್ತಲಾಗುತ್ತಿದ್ದಂತೆ ಗುಲ್ಬರ್ಗಾ ಶಹರಿನ  ಮದ್ಯದಲ್ಲಿರುವ ಹಝರತ್ ಖ್ವಾಜ ಬಂದೇ ನವಾಜರ ದರ್ಗಾದ ಒಳ ಹೊಕ್ಕು ಈ ಸೂಪಿ ಸಂತನ ಗೋರಿಯನ್ನು ದಾಟಿ ಇನ್ನೂ ಹತ್ತು ಹಲವು ಗೋರಿಗಳನ್ನೂ ಸ್ಮಾರಕಗಳನ್ನೂ ದಾಟಿ ಮೆಟ್ಟಲು ಇಳಿದು ವಿಶಾಲವಾದ ೬೦೦ ವರ್ಷಗಳಷ್ಟು ಹಳೆಯ ಪ್ರಾಂಗಣದೊಳಕ್ಕೆ ಕಾಲಿಟ್ಟರೆ ಒಂದೇ ಕಾಲಕ್ಕೆ   ಹತ್ತಿಪ್ಪತ್ತು ಮಹಿಳೆಯರು ಹತ್ತಾರು ಗಂಡಸರು ಆಕಾಶ ಬಿರಿಯುವಂತೆ ಹುಯ್ಯಲಿಡುವುದು ಕೇಳಿಸುತ್ತದೆ. (more…)

Thursday June 28, 2007

ಕಲಬುರ್ಗಿಯ ಬಂದೇ ನವಾಝ್ ದರ್ಗಾದಲ್ಲಿ ಮಂಡಿಯೂರಿ ಕುಳಿತು ಒಂದು ಕವಿತೆ

Filed under: ಹಾಡು-ಪಾಡು — Rasheed @ 10:44 pm

ಹೇ ಬಂದೇ ನವಾಜ್

sufi_dancing1.jpg

ಈ ವಿಷವನ್ನು ಪೇಯದಂತೆ ಕುಡಿಯಲು ಬಿಡು,

ಒಂದು ತೊಟ್ಟೂ ನೆಲದಲ್ಲಿ ಹಿಂಗದಂತೆ.

ಈಗಿಂದೀಗಲೇ ಬಿಕ್ಷೆಯ ಬಟ್ಟಲನ್ನು ಹಿಡಿದು ನಡೆವ ಧೈರ್ಯ ಕೊಡು.ಈ ಗಿಡುಗನ ಉಡುಪನ್ನು ಕಳಚಿ ಬಿಡುವೆನು

ಪಾರಿವಾಳದ ದಿರಿಸನ್ನು ತೊಡಿಸು ನನಗೆ ಹೇ ಬಂದೇನವಾಜ್.

ನಿನ್ನ ಪಹಾಡಿನ ಹರಳು, ನಿನ್ನ ವನದ ಸಂಪಿಗೆಯ ಕರಿಯ ಬೀಜ,

ನಿನ್ನ ಫಕೀರರ ಹಾಡು,ಚಿಲುಮೆಯ ಹೊಗೆ,ಕೈಯ ಕೋಳ, ಕಾಲ ಕಡಗ,

ನಿನ್ನ ಹತ್ತೂ ಬೆರಳಿನ ಮಾಯದುಂಗುರ –

ನನ್ನ ಇಲ್ಲದಂತಾಗಿಸು ಹೇ ಬಂದೇ ನವಾಜ್.

pabad001sm.jpg

 ನಿನ್ನ ಗೋರಿಗಳ ನಡುವೆ ಹಾಲು ಊಡುತ್ತ,ಕಾಲು ಆಡಿಸುತ್ತ ಮಲಗಿರುವ ಮಗುವಿನ ನಗು.

ಹಾಲ ಊಡಿಸುತ್ತಿರುವ ಮುಸುಕಿನೊಳಗಿನ ಕಣ್ಣುಗಳ ಕಳ್ಳ ಆಟ.

ನಿನ್ನ ಗೋಡೆಗಳಿಗೆ ತಲೆ ಘಟ್ಟಿಸಿಕೊಳ್ಳುತ್ತಿರುವ ತಲೆಕೆಟ್ಟ ಹೆಣ್ಣುಮಗಳ ಚೀತ್ಕಾರ.

ಈ ಸ್ಮಶಾನದ ಆನಂದವನ್ನು ಅನುಭವಿಸಲು ಬಿಡು, ಹೇ ಬಂದೇ ನವಾಜ್.

ಈಗಿಂದೀಗಲೇ ಬಿಕ್ಷಾಪಾತ್ರವನ್ನು ಹಿಡಿದು ನಡೆವ ಧೈರ್ಯ ಕೊಡು. 

ಕನಸಲ್ಲಿ ನಿನ್ನ ಖರಪುಟಗಳ ಸದ್ದು,ಆಕಾಶದಲ್ಲಿ ಹಾಹಾಕಾರ,

ಒಡೆದಕಾಲುಗಳ ಸವರುತಿರುವ ಎಳ್ಳು ಹೂವುಗಳ ಪರಾಗ,ನಸುನಗು,ಕದ್ದು ಕೂಡಿರುವ ಜವ್ವನಿಗರ

ಪಿಸುಮಾತು,ಎಲ್ಲಿಂದಲೋ ಎದ್ದು ನಿಂತಿರುವ ಅರೆ ಕಳಾಹೀನ ಚಂದ್ರ,

ಈಗ ತಾನೇ ಮೈಕೊಟ್ಟು ಬಂದಿರುವ ವಕ್ರಮೂಗಿನ ಬಿಕ್ಷುಕಿಯಮಿಂಚುತಿರುವ ಮೂಗ ನತ್ತು-

 ನಾ ಪರಾದೀನ.ನಿನ್ನ ಪಾದಗಳಲಿ ಹಣೆಯಿಟ್ಟು ಚುಂಬಿಸುತಿರುವೆ ನನ್ನನೇ ನಾನು.

ಈ ಆನಂದವನು ನನ್ನೊಳಗೂ ಹರಿದು,ಹೊರಗೂ ಇಳಿದು,315949_t.jpg

ಈ ಅರೆ ಚಂದ್ರ ಇರುಳು ಈ ನಕ್ಷತ್ರ ರಾತ್ರಿ,ಈ ಮಿಂಚಿಲ್ಲದ ಸದ್ದಿಲ್ಲದ ಆಗಸದಲ್ಲಿ ತೋರಿಸು ನಿನ್ನ ಇರವು 

ನಿನ್ನ ಗಾಳಿ ನಿನ್ನ ಬೆಳಕು,ನಿನ್ನ ಊರಿದ ಪಾದದ ಕೆಳಗೆ ಅಗಾಧಮುಳ್ಳಿನ ಪಾದುಕೆ ಈ ಭೂಮಿ.

ನಿನ್ನ ಶಹರಿನ ಬೀದಿಗಳಲ್ಲಿ ಅನವರತ ಅಲೆಯುವ ಪ್ರೇತಾತ್ಮರು ನಿನ್ನ ಸಖಿಯರು

ಬೊಗಸೆಯಲ್ಲಿ ಹರಿವ ಬೆಂಕಿ, ಚೆಲುವ ಚೆಲ್ಲುತ್ತ ಹಸಿಯ ಮಾಂಸ ನೆತ್ತರು ಹೊತ್ತು ನಡೆಯುತ್ತಿರುವಈ ಚೆಲುವೆಯರು.ಆಹಾ ಇವರ ಕಣ್ಣುಗಳು.ಇವರ ಗಾಢ ಬೆವರು.

ನಿನ್ನ ಮಣ್ಣ ಹಿಡಿ ದೂಳ ಕದಲಿಸದೆಚಲಿಸುತ್ತಿರುವ ಇವರ ಪಾದ ಪಕ್ಷಿಗಳು.

ಕಣ್ಣಿಂದ ಕಾಣಿಸುತ್ತಿರುವ ಎಲ್ಲವ ಇಲ್ಲದಂತಾಗಿಸು ಹೇ ಗೇಸುದರಾಜ್ 

ನಾ  ಇಲ್ಲಿಂದ ಹೋಗುತಿರುವೆನು,

ಇಲ್ಲದ ಆ ಇನ್ನೊಂದು ಶಹರಿನ ದಾರಿ ತೋರಿಸು,

ಹೇ ಬಂದೇ ನವಾಜ್.

 

Wednesday June 27, 2007

ಮೋಹಿತನ ಒಂದು ಸಂಕೋಚದ ಕವಿತೆ

Filed under: ಹಾಡು-ಪಾಡು — Rasheed @ 12:17 pm

ಕ್ಷಮಿಸು,1105070152796_240_29728.jpg

 ಕ್ಷಮಿಸು, ನಿನ್ನನ್ನು ಹಾಗೆ ಬಗ್ಗಿಸಬೇಕಾಗಿರಲಿಲ್ಲ

ಮತ್ತು ಹಾಗೆ ಮಖಾಡೆ ಮಲಗಿಸಿದ್ದೂ ತಪ್ಪಾಯ್ತು.

ನಿನ್ನ ಎದೆ,ಹೊಕ್ಕಳು,ನಿನ್ನ ಕಿಬ್ಬೊಟ್ಟೆ, ತೊಡೆ…

ನಿನ್ನ ಎಲ್ಲವನ್ನೂ ತಿಂದು ತೇಗಿದ್ದಾಯ್ತು. ಪರಮಾತ್ಮ!

ಇನ್ನು ಏನಂತಲೂ ಪರದಾಡಿ ಮುಗಿಯಿತು.

ಈಗಲಾದರೂ ಕಣ್ಣು ತೆರೆ, ಹೇಳು,

ಉಡುಪು ತೊಟ್ಟುಕೋ.

ಮಡಿಲಲ್ಲಿ ಕೂರು.ತುಟಿ ಒರೆಸಿ ಮಾತನಾಡು.

ಮುಗಿಯಿತೇ ಅಂತಾದರೂ ಕೇಳು.

ಸುಮ್ಮಗೆ ನಗದಿರು.

ಪುಷ್ಕಿನ್ ಮಹಾಕವಿಯ ಒಂದು ಪುಟ್ಟ ಕವಿತೆ

Filed under: ಅನುವಾದಗಳು — Rasheed @ 9:03 am

ಒಮ್ಮೆ ನಿನ್ನ ಮೋಹಿಸಿದ್ದೆ..

pushkin.jpg
ಒಮ್ಮೆ ನಿನ್ನ ಮೋಹಿಸಿದ್ದೆ,ಇನ್ನು ಸುಮ್ಮನಿರದು ನನ್ನೆದೆ

ಅನಿಸುವುದು ಈ ಮೋಹ, ಇನ್ನೂ ಸುಳಿಯುತ್ತಿರುವುದು,

ಆದರೆ ಕಾಡದಿರಲಿ ಇದು ಇನ್ನು ನಿನ್ನ ಸುಮ್ಮನೆ.

ಗೆಳತಿ, ಒಂದಿನಿತೂ ನೋಯಿಸದಿರಲು ನೋಡುವೆ.

ಮೋಹಿಸಿದ್ದೆ ಆಸೆ ಪಡದೆ, ಎಷ್ಟೊಂದು ಕದ್ದು ಮುಚ್ಚಿ

ಎಂತ ಹೊಟ್ಟೆಯುರಿ,ಎಂತ ನಿರ್ಲಜ್ಜ!, ಏನೆಲ್ಲ ಉಂಡೆ.

ಇಷ್ಟು ಆಳದ ,ನಿಜದ ,ಇಷ್ಟು ಕೋಮಲ ಮೋಹ

ಸಿಗಲಿ ಇನ್ನೊಮ್ಮೆ ನಿನಗೆ.

 ಆ ಪಡೆದವನು ಕೊಡುವುದಾದರೆ…..
 

Monday June 25, 2007

ಜಾಗತೀಕರಣ, ಗೊರ್ಬಚೇವ್, ಪೆರಿಸ್ಟ್ರೋಯಿಕಾ ಮತ್ತು ಗ್ಲಾಸ್ನಾಸ್ಟ್

Filed under: ಅಲೆಮಾರಿಯ ದಿನಚರಿ — Rasheed @ 11:02 pm

 

ಕಾವಿಗೆ ಕುಂತ ಆಲಸಿ ಹೇಂಟೆಯಂತೆ, ಎಲ್ಲರನ್ನು ಎದುರು ಹಾಕಿಕೊಂಡಿರುವ ಪ್ರೇಮಿಯಂತೆ ಏನೂ ಬರೆಯಲಾಗದೆ ಕಂಪ್ಯೂಟರ್ ಪರದೆಯನ್ನೇ ಆಕಾಶವನ್ನಾಗಿ ಮಾಡಿಕೊಂಡು ದಿಟ್ಟಿಸುತ್ತಿರುವೆ.chat1.jpgಈ ನಡು ಮದ್ಯಾಹ್ನದ ಆಕಾಶಕ್ಕಿಂತ ಬಿಲ್ ಗೇಟ್ಸ್ ಕರುಣಿಸಿರುವ ಈ ನೀಲ ವಿಂಡೋಸ್ ಪರದೆ ಎಷ್ಟೋ ಹಿತವಾಗಿ ಕಾಣಿಸುತ್ತಿದೆ. ಜಾಗತೀಕರಣ ಮತ್ತು ಸಂಸ್ಕೃತಿ, ಜಾಗತೀಕರಣ ಮತ್ತು ಧರ್ಮ,ಜಾಗತೀಕರಣ ಮತ್ತುಕನ್ನಡ ಸಾಹಿತ್ಯ- ವಿತ್ತ ವರ್ಷ ಮುಗಿಯುವ ಮೊದಲೇ ಮುಗಿಸಬೇಕಾಗಿರುವ ವಿಚಾರ ಸಂಕಿರಣಗಳು ಅಚ್ಚರಿಯಾಗುವಂತೆ        ಪ್ರತಿನಿಧಿಗಳಿಂದ ತುಂಬಿಕೊಂಡಿದೆ.ಬಹಳಷ್ಟು ಮಂದಿ ಭಯಬೀತರಾಗಿ ಯಾವ ರೂಪದಲ್ಲಾದರೂ ಎರಗಬಹುದಾದ ಜಾಗತಿಕ ಭೂತದಿಂದ ತಮ್ಮ ಪಿಳ್ಳೆಮರಿಗಳನ್ನು ಹೇಗ ರಕ್ಷಿಸಬಹುದೆಂದು ಮಾರ್ಗೋಪಾಯಗಳನ್ನು ಹುಡುಕುತ್ತಿದ್ದರೆ ನಾನಾದರೋ ಜಾಗತೀಕರಣದ ಏಜೆಂಟನಂತೆ ಈ ನೀಲಪರದೆಯ ಮುಂದೆ ಕುಳಿತು ಏನು ಬರೆಯಲಿ ಎಂದು ಮೂಗ ಹೊಳ್ಳೆಯೊಳಗಿಂದ ಘನವಾದದ್ದೇನನ್ನೋ ಹೆಕ್ಕುತ್ತಿದ್ದೇನೆ.

 ಇನ್ನೇನು ಮಾಡಲಿ ಎಂದು ಜಾಗತೀಕರಣದ ಏಜೆಂಟರ ಇನ್ನೊಂದು ಮುಖ್ಯವ್ಯಸನವಾದ ವೆಬ್ ಚಾಟಿಂಗ್ ಶುರುಮಾಡುತ್ತೇನೆ. ವೆಬ್ ಕೋಣೆಯ ಒಳ ಹೊಕ್ಕೊಡನೆ ಯಕ್ಷಯಕ್ಷಿಯರಂತೆ ನೂರಾರು ಗೆಳೆಯ ಗೆಳತಿಯರು,  ಮುದುಕರು ,ಸಲಿಂಗಕಾಮಿಗಳು, ಬರಹಗಾರರು, ಕಲಾವಿದರು ಬರಿಮೈಯನ್ನ ತೋರಿಸಿ ಖುಷಿಪಡುವವರು, ಸ್ವರತಿ ಪ್ರಿಯರು ,ಉದ್ಯೋಗ ಹುಡುಕುತ್ತಿರುವವರು -ಎಲ್ಲರೂ ಮುತ್ತಿಕೊಳ್ಳುತ್ತಾರೆ.ಎಲ್ಲರನ್ನೂ ಮಾತನಾಡಿಸುತ್ತ,ವಿಚಾರಿಸುತ್ತ ಆ ಹಗಲನ್ನೆಲ್ಲ ಕಳೆಯುತ್ತೇನೆ.ಜಾಗತೀಕರಣದ ಅಮಲು ಇಳಿಯುತ್ತಿದ್ದಂತೆ ಮಕ್ಕಳು ಏನು ಆಟವಾಡಿಸದೆ ಏನು ಮಾಡುತ್ತಿದ್ದೀಯಾ ಎಂದು ಸಿಟ್ಟಾಗುತ್ತಾರೆ.ಕಥೆ ಬರೆಯುತ್ತಿದ್ದೇನೆ ಎಂದು ಹೇಳುತ್ತೇನೆ.ನಮಗೆ ಕಥೆ ಹೇಳು ಅನ್ನುತ್ತಾರೆ.ಇಲ್ಲ ಮಕ್ಕಳೇ ಇದು ದೊಡ್ಡವರ ಕಥೆ.ನಿಮ್ಮ ಕಥೆ ರಾತ್ರಿ ಮಲಗುವಾಗ ಹೇಳುತ್ತೇನೆ ಎಂದು ಸುಳ್ಳು ಹೇಳುತ್ತೇನೆ.ರಾತ್ರಿ ಸಿಕ್ಕಾಪಟ್ಟೆ ಬೋರಾಗಿ ನಿದ್ದೆ ಬರುವಂತಹ ನೀಳ್ಗತೆಯೊಂದನ್ನ ಹೇಳಿ ಅವರನ್ನ ಮಲಗಿಸಿ ಮತ್ತೆ ಜಾಗತಿಕ ಭೂತದ ಜೊತೆ  ಕೇಳಿಯಲ್ಲಿ ತೊಡಗುತ್ತೇನೆ. (more…)

ಲಾರೆನ್ಸ್ ಮೆನೆಜಸ್, ಗ್ರೇಸಿ ಮತ್ತು ಹಸಿವು

Filed under: ಮಾತಿಗೂ ಆಚೆ — Rasheed @ 12:43 am

ಮಧ್ಯಾಹ್ನ ಹಠಹಿಡಿದು ಊಟ ಮಾಡದೆ ನಿದ್ದೆ ಹೋಗಿ ಎದ್ದರೆ ಕತ್ತಲಾಗುತ್ತಿತ್ತು. ಮನೆಯೊಳಗೆ ಸಂಜೆಯ ಕೊಂಚ ಬೆಳಕು ಇನ್ನೂ ಉಳಿದು ಅದೂ ಹೊರಟು ಹೋಗಲು ಹವಣಿಸುತ್ತಿತ್ತು. ಈ ಸಂಜೆಯ ಬೆಳಕು ಪ್ರೀತಿಯಂತೆ. ಆದರೆ ಅದೂ ನನ್ನನ್ನು ಬಿಟ್ಟು ಹೋಗಲು ರೆಡಿಯಾಗಿರುವುದನ್ನು ಕಂಡು ಸಂಕಟವಾಗುತ್ತಿತ್ತು. pctheater_35.jpgಎಲ್ಲರ ಮೇಲೆ ಇಡೀ ಪ್ರಪಂಚದ ಕುರಿತೇ ರೇಜಿಗೆಯಾಗುವಷ್ಟು ಹಸಿವು. ಇಡೀ ಮನಸ್ಸನ್ನೇ ಇಡಿ ಇಡಿಯಾಗಿ ತಿಂದು ಬಿಡುವ ಈ ಹಸಿವು! ಮನುಷ್ಯರ ಕೆಟ್ಟ ಹಠ! ಕದ್ದು ಹೋಗಲು ನೋಡುತ್ತಿರುವ ಈ ಚಂದದ ಬೆಳಕು! ಯಾರೂ ಯಾರ ಜೊತೆಗೂ ಸರಿಯಾಗಿ ಮಾತನಾಡುತ್ತಿಲ್ಲ. ಎಲ್ಲರೂ ಎಲ್ಲರ ಜೊತೆ ಹಠಹಿಡುದು ಕುಂತಿರುವುದು ಕಂಡು, ತಿಂದು ಬಿಡುವಷ್ಟು ಹಠ ಬಂದು ಒಬ್ಬನೇ ತಟ್ಟೆಯಲ್ಲಿರುವುದ ಕಬಳಿಸುತ್ತ ಕೂತಿದ್ದೆ. ಎಲ್ಲರೂ ನೋಡುತ್ತಿದ್ದರು. ಖಾಲಿಯಾಗುತ್ತಿರುವ ತಟ್ಟೆಯ ಮೇಲೆ ರಾತ್ರಿಯ ಕತ್ತಲೆ ಬಂದು ಕೂತುಕೊಳ್ಳಲು ನೋಡುತ್ತಿತ್ತು. ಈ ಕೆಟ್ಟ ಪ್ರಪಂಚ. ಈ ಸಂಸಾರ ಇವೆಲ್ಲವನ್ನೂ ನೀಗಿಕೊಳ್ಳುತ್ತಿರುವನಂತೆ ಒಬ್ಬನೇ ಕೂತು ತಿನ್ನುತ್ತಿರುವ ನಾನು ತಿನ್ನುತ್ತ ತಿನ್ನುತ್ತಾ ಜಠರ ತುಂಬುತ್ತಿದ್ದಂತೆ ಮನಸ್ಸು ಹಾಯಾಗುತ್ತಿರುವಂತೆ ಅನಿಸುತ್ತಿತ್ತು. ನಗು ಬಂತು. ಎಲ್ಲರೂ ಸಿಟ್ಟುಮಾಡಿಕೊಂಡು ದಿನಗಟ್ಟಲೆ ಊಟಮಾಡದೆ ಮೊಂಡು ಹಿಡಿದರೆ ನಾನಾದರೊ ಇಲ್ಲಿ ಅನ್ನದ ಗುಡ್ಡೆಯನ್ನು ಕರಗಿಸಿಕೊಂಡು ತೇಗುತ್ತ ಕೊನೆ ಕೊನೆಯ ಅನ್ನದ ಅಗುಳುಗಳನ್ನು ಹೆಕ್ಕಿ ತಿನ್ನುತ್ತ ಪ್ರಸನ್ನನಾಗಿಬಿಡುತ್ತಿದ್ದೇನೆ. .  (more…)

Saturday June 23, 2007

ಈವತ್ತು ಕಂಡ ಅನಂತಮೂರ್ತಿ

Filed under: Friends — Rasheed @ 11:43 pm

 

ಈವತ್ತು ಬೆಂಗಳೂರಲ್ಲಿ ಶಶಿಕಿರಣ್ ಅವರ ಜೊತೆಗಿದ್ದೆ . ಅನಂತ ಮೂರ್ತಿಯವರಲ್ಲಿ ‘ಬರಲಾ?’ ಎಂದು ಕೇಳಿದೆ

`ಬಾ ಮಗುವೇ’ ಅನ್ನುವಂತೆ ಕರೆದು ನಮ್ಮ ಜೊತೆಬಹಳ ಹೊತ್ತು ಮಾತನಾಡಿದರುdsc_0008.jpg

`ಟೀ ಮಾಡಿಕೊಡಲೇ’ ಎಂದು ಕೇಳಿದರು.

ಅಷ್ಟು ಪ್ರೀತಿ, ಅಷ್ಟು ಮಮತೆಯ ಈ ಹಿರಿಯ ಜೀವವನ್ನು ನಾವು ಇನ್ನೂ ತುಂಬಾ ಪ್ರೀತಿಸಬೇಕಿತ್ತು ಅಂದು ಕೊಂಡು ಕಣ್ಣು ತುಂಬಿ ಬಂತು.

Thursday June 21, 2007

ಮಾಸ್ಕೋದಿಂದ ಪ್ರೀತಿ ಪೂರ್ವಕ-ಒಂದು ಬಹಳ ಹಳೆಯ ನೆನಪು

Filed under: ಮಾತಿಗೂ ಆಚೆ — Rasheed @ 11:18 pm

ಸಂಪಾಜೆಯ ಬಳಿಯ ಕೊಯನಾಡಿನ  ಅಂದುಕಾಕನ ಮಸಿ ಹಿಡಿದ ಹೋಟೆಲಿನ ಅಡ್ಡಾದಿಡ್ಡಿ ಬೆಂಚುಗಳಲ್ಲಿ ಕೂತ ನಾವು ತಿಂಡಿ ಕಪಾಟಿನ ಮೇಲಿಟ್ಟಿದ್ದ ಹೊಗೆ ಬಣ್ಣದ ರೇಡಿಯೋ ಒಂದರಿಂದ ವಿಚಿತ್ರ ಸ್ವರದ ರಷ್ಯನ್ ಹೆಂಗಸಿನ ಗಂಟಲಿನಿಂದ ನಮ್ಮ ಹೆಸರುಗಳನ್ನು ಕೇಳಿಸಿಕೊಳ್ಳುತ್ತಿದ್ದೆವು. radio11.jpgಅವಳ ವಿಚಿತ್ರ ಕನ್ನಡದಲ್ಲಿ ನಮ್ಮ ಹೆಸರುಗಳು ಗಂಟಲು ಅದುಮಿಸಿಕೊಂಡು, ಮೂಗು ಮುಚ್ಚಿಸಿಕೊಂಡು, ರೊಟ್ಟಿಗೆ ಅಕ್ಕಿಯ ಹಿಟ್ಟು ನಾದುವಂತೆ ನಾದಿಸಿಕೊಂಡು ಅಂದು ಕಾಕನ ತಿಂಡಿಯ ಪರಿಮಳ ತುಂಬಿದ ಹೋಟೇಲಿನೊಳಗೆ ಸಂಜೆಯ ಬಿಸಿಲು ಕೋಲಿನ ಹಾಗೆ ಬಂದು ಕೇಳುತ್ತಿತ್ತು. ಅಂದುಕಾಕ ಗಲ್ಲದ ಮೇಲೆ ಗಡ್ಡ ಕೆರೆಯುತ್ತಾ ಕೂತು ಒಂದು ಬೀಡಿ ಹಚ್ಚಿ ಗಂಟಲಿನ ಒಂದು ನಾಳದಿಂದ ಹೊಗೆ ತೆಗೆದುಕೊಂಡು ಇನ್ನೊಂದು ನಾಳದ ಮೂಲಕ ಹೊಗೆ ಮೇಲಕ್ಕೆ ತಂದು ಮೂಗಿನ ಒಂದೇ ಹೊಳ್ಳೆಯ ಮೂಲಕ ಹೊರಗೆ ಬಿಡಲು ನೋಡುತ್ತಿದ್ದರು.

ನಮಗೆ ನಗು ಬರುತ್ತಿತ್ತು. ಆಕಾಶದಲ್ಲಿ ರಷ್ಯಾದಿಂದ ರೇಡಿಯೋ ಮಾಸ್ಕೋ ಮೂಲಕ ಕೇಳಿ ಬರುತ್ತಿರುವ ಈ ಪುಡಿ ಹುಡುಗರ ಹೆಸರುಗಳನ್ನು ಕೇಳಿ ಸಹಿಸಲಾಗದೆ ಅಂದು ಕಾಕ ಬೀಡಿಯ ಹೊಗೆಯ ಜೊತೆ ಪ್ರಾಣಾಯಮ ನಡೆಸಲು ಹೋಗಿ ಆಗದೆ ಗಡ್ಡ ಕೆರೆದುಕೊಂಡು ನಮ್ಮನ್ನೇ ನೋಡುತ್ತಿದ್ದರು. ರೇಡಿಯೋ ಮಾಸ್ಕೋದಲ್ಲಿ ನಮ್ಮ ಹೆಸರು ಹೇಳಿ ಮುಗಿಸಿದ ಆ ರಷ್ಯನ್ ಹೆಂಗಸು ಇನ್ನು ಯಾವುದೇ ಊರಿನ ಇನ್ನು ಯಾರದೋ ಹೆಸರುಗಳನ್ನು ಹೇಳಲು ತೊಡಗುತ್ತಿದ್ದಳು. ನಾವು ಅರ್ಥಗರ್ಬಿತವಾಗಿ ಒಬ್ಬರನೊಬ್ಬರು ನೋಡಿ ನಕ್ಕು ಹೊರಗೆ ಬರುತ್ತಿದ್ದೆವು. ಅಂದು ಕಾಕ ಎದ್ದು ರೇಡಿಯೋವನ್ನು ಸಿಲೋನಿಗೆ ತಿರುಗಿಸಿ ತಮಿಳು ಹಾಡು ಹಾಕುತ್ತಿದ್ದರು. ಹೋಟೆಲಿನೊಳಗೆ ಪೊರಾಟ, ಚಾಪೀಸಿನ ಪರಿಮಳ ಹೊಗೆಯ ಜೊತೆ ಹೋರಾಡಲು ಶುರು ಮಾಡುತ್ತಿತ್ತು. (more…)

Wednesday June 20, 2007

ರಾಮದಾಸ್ ಬಗ್ಗೆ ಅನಂತ ಮೂರ್ತಿ ಇನ್ನಷ್ಟು—–

Filed under: Uncategorized — Rasheed @ 11:44 pm

ಮೌಲಾನಾ ರೂಮಿಯ ಇನ್ನೊಂದು ಕವಿತೆ

Filed under: ರೂಮಿ — Rasheed @ 9:08 pm

ಪ್ರಿಯೆ ಹಾಗಿರು ನನಗೆ

 

rumiart2.jpg

ಪ್ರೀತಿಯ ಒಡನೆ ಆಡುವ ಉರಿ250px-shams_ud-din_tabriz_1502-1504_bnf_paris.jpg
ಪ್ರಿಯೆ ಹಾಗಿರು ನನಗೆ
ಬೆಂಕಿಯ ಒಳಗೂ ಉರಿಯುವ ಬಿಸಿ
ಪ್ರಿಯೆ ಹಾಗಿರು ನನಗೆ
ಉರಿದು ತೀರುವ ಬಯಕೆಯ ಬತ್ತಿ
ಕಣ್ಣ ಮೇಣದ ಹನಿಯ ಅಳು
ಕರಗಿ ಹರಿವ ಕುಡಿ
ಪ್ರಿಯೆ ಹಾಗಿರು ನನಗೆ
ಈಗ ಪ್ರೀತಿಯ ಹಾದಿ ನಾವು ಸೇರಿ
ಇನ್ನು ಕತ್ತಲು ಬರದು ನಿದ್ದೆ ನಮಗೆ
ಈ ಹೆಂಡ ಪಡ ಶಾಲೆ ದುಡಿಯ ದೋಲು
ಪ್ರಿಯೆ ಹಾಗಿರು ನನಗೆ
ಇರುಳು ಕತ್ತಲು ಪ್ರೇಮಿಗಳು ಕಣ್ಣು ಮುಚ್ಚರು
ಈ ನಿದ್ದೆ ಯೋಚನೆ ಕಂಗೆಡಿಸದಿರಲಿ ಅವರನ್ನು
ಅವರು ಬಯಸುವುದು ಬರೆಯ ನಮ್ಮಜೊತೆ
ಪ್ರಿಯೆ ನೀನೂ ಹಾಗಿರು ನನಗೆ
ಕೂಡುವುದು ಕುದಿವ ನದಿ ಕಡಲತ್ತ ಹರಿಯುವುದು
ಈ ಇರುಳು ಚಂದ್ರ ನಕ್ಷತ್ರಗಳ ಮುತ್ತಿಡುವನು
ಅವನು ಅವಳೇ ಆಗಿಹೋಗುವನು
ಪ್ರಿಯೆ ಹಾಗಿರು ನನಗೆ
ಎಲ್ಲಾ ಅವನೊಬ್ಬನೇ ಪಡೆದವನು
ಈ ಕವಿಗೂ ಕರುಣೆ ತೋರಿದವನು
ಮುಟ್ಟುವ, ಕಣ್ಣಿಗೆ ಕಟ್ಟುವ ಎಲ್ಲವೂ ಒಲವ ಬೆಂಕಿಯಾಗುವುದು
ಪ್ರಿಯೆ ನೀನೂ ಹಾಗಿರು ನನಗೆ

_______________________________________ 

ಸೂಫಿ ಸಂಗೀತ ಆಂಗ್ಲ ಅನುವಾದದಲ್ಲಿ ನನ್ನ ಪ್ರೀತಿಯ ರೂಮಿ ಸಾಹೇಬರು:[see you tube video] (more…)

Tuesday June 19, 2007

ಪ್ರೊಫೆಸರ್. ಕೆ .ರಾಮದಾಸ್ ಇಂದು ಬೆಳಿಗ್ಗೆ ತೇಜಸ್ವಿಯವರ ಬಳಿ ಹೋದರು

Filed under: Friends — Rasheed @ 6:59 am

picture-114.jpg

ನಮ್ಮ ಪ್ರೀತಿಯ ಮೇಷ್ಟ್ರು, ಚಿಂತಕ, ಹೋರಾಟಗಾರ, ತುಂಟ ಮನಸಿನ ಓಡಾಟಗಾರ ಕೆ.ರಾಮದಾಸ್ ಇದೀಗ ಕೊಂಚ ಹೊತ್ತಿನ ಮೊದಲು ಮೈಸೂರಿನ ಕುವೆಂಪು ನಗರದ ತಮ್ಮ `ಚಾರ್ವಾಕ’ ಎಂಬ ಮನೆಯಲ್ಲಿ ತೀರಿ ಹೋದರು.ಅವರಿಗೆ ೬೬ ವರ್ಷವಾಗಿತ್ತು. ಮಹಾರಾಜಾ ಕಾಲೇಜಿನಲ್ಲಿ ನನಗೆ ಅರಿವನ್ನು ಕಲಿಸಿದ ಗುರು, ಲಂಕೇಶ್, ತೇಜಸ್ವಿಯವರ ಪ್ರಾಣಮಿತ್ರ, ಕೆ. ರಾಮದಾಸ್ -ಇದೀಗ ಅವರನ್ನು ಸೇರಿಕೊಂಡಿದ್ದಾರೆ .ಯಾಕೋ ಏನೂ ಬರೆಯಲಾಗದ ಹಾಗೆ ಕಣ್ಣು ತುಂಬಿಕೊಳ್ಳುತ್ತಿದೆ.

ರಾಮದಾಸ್ ಅವರ ಆಲ್ಬಂನಿಂದ ಕೆಲವು ಚಿತ್ರಗಳು:

dsc04576.jpg

[ಪ್ರೀತಿಯ ತಾಯಿ ಮಂಜಮ್ಮ]

dsc04589.jpg

[ಮದುವೆಯ ದಿನ ಮಡದಿ ನಿರ್ಮಲಾ]

dsc04587.jpg

[ಮದುವೆಯಾದ ಮೇಲೆ ಕರೆಯೋಲೆ]

dsc04583.jpg

[ಲಂಕೇಶ್ ಮತ್ತು ತೇಜಸ್ವಿ ಜೊತೆ]

park-174.jpg

[ಗೆಳೆಯನ ಜೊತೆ ಚರ್ಚೆ]

dsc04584.jpg

[ಲಂಕೇಶ್ ತೀರಿ ಹೋಗುವ ಮೊದಲು]

 

[

Monday June 18, 2007

ಮೋಹಿತನ ಇನ್ನೂ ಹತ್ತು ಕವಿತೆಗಳು

Filed under: ಮೋಹಿತನ ಕವಿತೆಗಳು — Rasheed @ 1:06 am

169.jpg 

 ೧.

ನಿನ್ನ ತೆರೆದ ತೋಳನ್ನ ಕಂಡು
ಈವರೆಗೆ ಒಂದು ನೀಳ ನಿದ್ದೆ.
ಇದೀಗ ಎದ್ದಾಗ ಒಂದು ಕಂದು ಮಲೆ,
ಹಸಿವು -ಮತ್ತು ಅಸಹನೀಯ ಈ  ಮಳೆ.


೨.


ಯಾರು ನೀನು?
ನಿನ್ನೆ ತಾನೆ ಕಂಡವಳು.
ಕಾಗುಣಿತ ಸರಿಮಾಡೆಂದರೆ
ನಾನು ಸರಿಯಿದ್ದೇನೆಯೇ
ಪರಿಶೀಲಿಸು ಅಂದವಳು!

ನೀನು ಹೋಗುತ್ತೀಯ
ಮತ್ತೆ ಅವನಲ್ಲಿಗೆ.
ನಾನೂ ಅವಳ ಬಳಿಗೆ.
ಇಲ್ಲೇ ಉಳಿಯಿತು ಈ ನೆತ್ತರು-
ನಿನ್ನ ಬಳೆಯ ಚೂರು.


೪.


ಹೀಗಲ್ಲ ,ಹೀಗಲ್ಲವೆಂದು
ಮತ್ತೆ ಅಪ್ಪಿಕೊಂಡೆ.
ಕತ್ತಲಾಯಿತು ಹೋಗು ಅಂದೆ.
ಒಂದು ತುಣುಕು ಮೋಡ
ಉಳಿಯಿತು ಹಾಗೇ-
ಆಕಾಶದಲ್ಲಿ ಏನೂ ಆಗದಂತೆ.

೫.

ಹಾಗೆ ನೋಡಿದರೆ
ಏನೂ ಅಲ್ಲ ನಾವು ನಡೆಸಿದ್ದುindian-couple-1.jpg.
ಆ ಭಯಂಕರ ಬಿಸಿಲು,
ಮತ್ತೆ ಹೊಡೆದ ಸಿಡಿಲು,
ಮತ್ತು ಆ  ಬಿಳಿಯ ಬೆಕ್ಕು ರಸ್ತೆಯಲ್ಲಿ
ಅವಾಕ್ಕಾಗಿ  ಆಗ ತಾನೇ ಮರಣ ಹೊಂದಿ
ನೋಡುತ್ತಿದ್ದುದು.

ನೀರು ತುಂಬಿಕೊಳ್ಳುತ್ತದೆ.
ಮರಗಳು ಮುಳುಗಿ ಹಳಸಲು ತೊಡಗುತ್ತವೆ.
ನಿನ್ನ ಕಂಕುಳಿನಲ್ಲಿ ಯಾರೋ
ಗಂದಸಿನ ಪರಿಮಳ.’ ಅದು
ಕಸ್ತೂರೀ ಮೃಗ’ ಎಂದು ಗಹಗಹಿಸುತ್ತೀಯ.
ಕೆಟ್ಟ ಹುಡುಗಿ!

ಹೋಗು. ತಟ್ಟೆಯಲ್ಲಿ ಅನ್ನವಿಡು.
ನಿನ್ನೆಯ ಸಾಂಬಾರು.
ನೆರಿಗೆ ಸರಿಪಡಿಸಿಕೋ.
ನಿನ್ನ ಮುಂಗುರುಳಲ್ಲಿ
ನನ್ನ ಬೆರಳು.
ನಿನ್ನ  ಎದೆಯಲ್ಲೇ ಉಳಿದ
ನನ್ನ ಒಂದು ಬಿಳಿಯ ಕೂದಲು.


೮.


ಅಸಂಖ್ಯಾತ ನಕ್ಷತ್ರಗಳು
ಬರಿಯ ಸಬೂಬುಗಳು.
ಸುಳ್ಳು ಈ ಆಕಾಶ.
ದೇಹ ದೊಡ್ಡ ನೆಪ.
ಏನು ಅನ್ನುವುದು ನಿನ್ನ ಕಂಡೊಡನೆ
ತುಂಬಿಕೊಳ್ಳುವ ನನ್ನ ಕಣ್ಣಾಲಿಗಳನ್ನು?

sc008.jpg.

ಸುಳ್ಳು ನುಡಿಯುತ್ತೇನೆ ನಿನ್ನೊಡನೆ.
 ನಿಜ ಹೇಳಲಾಗದು  ನಿನಗೆ ನನ್ನೊಡನೆಯೂ.
ಸುಮ್ಮನೆ ತುಂಬಿಕೊಳ್ಳುವ ಈ ಆನಂದ,
ಈ ತುಂಟ ಹಠ,ನಿನ್ನ ಉಂಗುಷ್ಟವನ್ನು
ಮುತ್ತಿಡುವ ಕಾಮ,
ಉಧರ ವೈರಾಗ್ಯ!

೧೦

ಯಾಕೋ ಅತಿಯಾಯಿತು ಈ ಹತ್ತು
ಕವಿತೆಗಳೂ.
ಇರುತ್ತಿರಲಿಲ್ಲ
ಇದು ಯಾವುದೂ.
ನೀನೂ ಹಠ ಮಾಡಿದೆ,
ಸುಮ್ಮನೇ ಕಾರಣ ಕೇಳಿದೆ,
ನಾ ಸುಮ್ಮಗಿದ್ದರೂ ಬಿಡದೆ.
 

Saturday June 16, 2007

ಚಾಮಮ್ಮ ಮತ್ತು ಲಕ್ಷ್ಮಮ್ಮ ಪಾಡಿದ ಇನ್ನೊಂದು ಹಾಡು

Filed under: ಮುಖಚಿತ್ರ — Rasheed @ 10:57 pm
  • ಗೆಳೆಯರೊಬ್ಬರ ಕೋರಿಕೆಯ ಮೇರೆಗೆ ಹಿರೇನಂದಿಯ ಚಾಮಮ್ಮ ಮತ್ತು ಲಕ್ಷ್ಮಮ್ಮ ಪಾಡಿದ ಇನ್ನೊಂದು ಹಾಡು:-

  • click for you tube video (more…)

ಒಂದು ಶುಕ್ರವಾರದ ಬೆಳಗು

Filed under: ಪ್ರಬಂಧ — Rasheed @ 12:58 am

ಶುಕ್ರವಾರದ ಬೆಳಗು ಹೂವಂತೆ ಹಗುರಾಗಿದೆ.ರಾತ್ರಿ ಹಾಜರಾಗಿ ಅತ್ತು  ಹಂಗಿಸಿ ಕಿರಿಕಿರಿ ಮಾಡಿ ನಾನು ಬದುಕಿರುವುದೇ ತಪ್ಪು ಎನ್ನುವಂತೆ ಶಪಿಸಿ ನಟಿಕೆ ಮುರಿದು ಕೊನೆಗೆ ಹೋಗುವಾಗ ಕರುಣೆಯಿಂದ ಒಮ್ಮೆ ನೋಡಿ
ನಕ್ಕು ಹೋದ ಪ್ರತಿಮೆಗಳಂತಹ ಕಥಾ ಪಾತ್ರಗಳು ಈ ಬೆಳ್ಳನೆಯ ಬೆಳಗಿನಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲು ನಾಚಿಕೊಂಡು ಸುಮ್ಮಗಿವೆ.ನಾನಾದರೋ ಹಿಂದೆ ಎಂದೂ ಇಲ್ಲದ ಹಾಗೆ ಇಂದು ಆಹ್ಲಾದಕರವಾಗಿರಬೇಕು ಎಂದುಕೊಂಡು ಕನಸು ಕಾಣುತ್ತಿದ್ದೇನೆ.ನಖಗಳನ್ನು ಕಡಿಯುತ್ತಿದ್ದೇನೆ.waiting.jpg ಅವಳು ಹಾಸಿಗೆಯಲ್ಲಿ ಮಲಗಿಕೊಂಡು ಅಲ್ಲೇ ಹೊರಳಾಡುತ್ತಾ,ಚಲಿಸುವ ಕಣ್ಣುಗಳಿಂದಲೇ ಸಮಸ್ತ ಮನೆಯನ್ನೂ, ಮಕ್ಕಳನ್ನೂ, ಆಗಾಗ ಕೊಕ್ಕರಿಸುತ್ತ ಒಳಬಂದು ಹಿಕ್ಕೆ ಹಾಕಿ ಹೋಗುವ ಕೋಳಿ ಸಂಸಾರವನ್ನೂ ಕಂಟ್ರೋಲ್ ಮಾಡುತ್ತಾ,ಟೀವಿ ನೋಡುತ್ತಾ,ರೇಡಿಯೋ ಕೇಳುತ್ತಾ,ಕನ್ನಡ ಮಲಯಾಳಂ ಪತ್ರಿಕೆಗಳನ್ನು ಓದುತ್ತಾ ಮುಂದಿನ ಪೂಜ್ಯ ಪೋಪ್ ಯಾರಾಗಬಹುದೆಂದು ಊಹಿಸಿಕೊಂಡು ಈಗಿನ ಪೂಜ್ಯ ಪೋಪ್ ನಿಜವಾಗಿಯೂ ತೀರಿ ಹೋಗುವರಾ ಎಂದು ಹೆದರಿಕೊಂಡು ಒಂದು ಕಾಲನ್ನು ಮೆಲ್ಲಗೆ ಎತ್ತಿ ಎತ್ತಲಾಗದ ಇನ್ನೊಂದು ಕಾಲಿನ ಮೇಲೆ ಮೆತ್ತಗೆ ಇಡುತ್ತಾಳೆ.

 ಈ ಬಲಗಾಲಿಗೆ ಇನ್ನೆಂದೂ ಜೀವ ಬರಲಿಕ್ಕಿಲ್ಲ ಅನ್ನಿಸುತ್ತದೆ. (more…)

Friday June 15, 2007

ಚಾಮಮ್ಮನ ಪಾಡು, ಲಕ್ಷ್ಮಮ್ಮನ ಹಾಡು

Filed under: ಮುಖಚಿತ್ರ — Rasheed @ 8:34 pm

 

ಚಾಮಮ್ಮ  ಮತ್ತು ಲಕ್ಷ್ಮಮ್ಮ ವಾರಗಿತ್ತಿಯರು. ಸಖತ್ ಹಾಡುಗಾತಿಯರು.ಈವತ್ತು ಮನೆಗ ಬಂದಿದ್ದರು.

chamamma-1.jpglaxmamma-1.jpg

ಹೆಗ್ಗಡದೇವನಕೋಟೆ ದಿಕ್ಕಿನಲ್ಲಿರುವ ಹಿರೇನಂದಿಎಂಬ ಹಳ್ಳಿಯವರು.

ಕಷ್ಟ-ಸುಖ ಎಲ್ಲವನ್ನು ಕಲ್ಲು ನೀರು ಕರಗುವಂತೆ ಹಾಡು ಮಾಡಿ ಹಾಡುತ್ತಾರೆ.

ಮೊದಲಿಗೆ ಚಾಮಮ್ಮನ ಪಾಡು-[you tube video] (more…)

Thursday June 14, 2007

ಮಣ್ಣಾಂಗಟ್ಟಿ – ಒಂದು ಸಣ್ಣ ಕಥೆ

Filed under: ಕತೆ-ಗಿತೆ — Rasheed @ 12:11 am

chitra-6_a.jpg 

[ಚಿತ್ರಗಳು:ಚರಿತಾ]

ತಾಯಿ ನೆಬೀಸಾ ಮತ್ತು ಮಗಳು ಕೈರು ಬೇರೇನೂ ಕೆಲಸವಿಲ್ಲದೆ ಎರಡು ದಿನಗಳಿಂದ ಉಟ್ಟಿದ್ದ ಅದೇ ಬಟ್ಟೆಯಲ್ಲಿ ನದಿಯಕಲ್ಲಲ್ಲಿ ಕೂತುಕೊಂಡು ನೀರಲ್ಲಿ ಕಾಲಾಡಿಸುತ್ತ ಸುಮ್ಮನೆ ನಗುತ್ತ ನೋಡುತ್ತಿದರು.ಈ ತಾಯಿಯೂ ಮಗಳೂ ಇಂತಹ ಅನಾಹುತದ ನಡುವೆಯೂ ಹೀಗೆ ಹಸನ್ಮುಖರಾಗಿ ಎಂದಿನಂತೆ ಒಬ್ಬರೊಬ್ಬರ ಮುಖನೋಡಿಕೊಂಡು ನೀರ ಸದ್ದು ಮಾಡಿಕೊಂಡು ಮೌನವಾಗಿ ಕುಳಿತಿರುವುದನ್ನು ಕಂಡು ಕರಳು ಕಿವಿಚುತ್ತಿತ್ತು.

 ನೆಬೀಸಾಳ ಅಣ್ಣ ಇಸುಬು ತನ್ನ ಸುಟ್ಟ ತಟ್ಟಿ ಹೋಟೆಲ್ಲಿನ ಮುಂದೆ ಕರಕಲಾದ ಬೆಂಚು ಮೇಜು ಅಲುಮಿನಿಯಂ ಪಾತ್ರೆಗಳನ್ನು ಹರಡಿಕೊಂಡು ಅವುಗಳ ನಡುವೆ ತನ್ನ ಎಂದಿನ ಭಂಗಿಯಲ್ಲಿ ಕಾಲಿನ ಉಗುರುಗಳನ್ನು ಕೀಳುತ್ತಾ ನೆಲಕ್ಕೆ ಉಗಿಯುತ್ತಾ ಕುಳಿತಿದ್ದ.chitra-5_a1.jpg ಸಿಕ್ಕಿದಕ್ಕೆಲ್ಲ ಸುಮ್ಮನೆ `ಮಣ್ಣಾಂಗಟ್ಟಿ’ ಎಂದು ಬೈದು ನೆಲಕ್ಕೆ ಕ್ಯಾಕರಿಸಿಉಗಿಯುವ ಇಸುಬುವಿನ ಹೋಟೆಲ್ಲು ಮೈಯೆಲ್ಲ ಸುಟ್ಟುಕೊಂಡು ಸರ್ವನಾಶವಾಗಿ ಹೋಗಿ ನೋಡುವವರಿಗೆ ತಮಾಶೆಯಾಗಿ ಕಾಣಿಸುತ್ತಿತ್ತು.

 ಅತ್ತಕಡೆ ಕೂಜಿಮಲೆ,ಇತ್ತಕಡೆ ಏಲಕ್ಕಿಮಲೆ,ಮುಂದುಗಡೆ ಎತ್ತರಕ್ಕೆ ಈರುಳ್ಳಿಮಲೆ, ಎಡಕ್ಕೆ ರಸ್ತೆಯನ್ನೇ ಸವರಿಕೊಂಡು ಸದಾಕಾಲವೂ ಮೈಕುಲುಕಿಕೊಂಡು ಹರಿಯುವ ಬೆಣ್ಣೆ ಹಳ್ಳದ ನೀರು…. ಈ ಎಲ್ಲ ದೈವಲೀಲೆಯ ನಡುವೆ ಕಪ್ಪು ಕುರುವಿನಂತೆ ಕರಕಲಾಗಿ ಎದ್ದು ನಿಂತಿರುವ ಇಸುಬುವಿನ ತಟ್ಟಿಹೋಟೆಲ್ಲು….. ವಿಕಾರವೂ, ಅನಗತ್ಯ ತಮಾಶೆಯೂ, ಕೊಂಚ ಹೆಚ್ಚೇ ಸೌಂಧರ್ಯವೂ ತುಂಬಿಕೊಂಡಿರುವ ಈ ಜಗತ್ತು….. 

 ದೇವರ ಕೊಲ್ಲಿ ಎಂಬ ಈ ಸುಂದರವೂ ನಿಗೂಢವೂ ನಿತ್ಯ ದುಃಖ್ಖಿಸುತ್ತಿರುವ ಸುಂದರಿಯಂತೆಯೂ ಇರುವ  ತಿರುವಿನಲ್ಲಿ ಬೈಕು ನಿಲ್ಲಿಸಿಕೊಂಡು ಈ ಇಸುಬುವಿಗೆ ಇಂತಹ ಆಪತ್ತಿನ ಕಾಲದಲ್ಲಿ ಏನು ದೈರ್ಯ ತುಂಬುವುದು ಹೇಗೆ ದೈರ್ಯ ತುಂಬುವುದು ಎಂದು ಎಂದಿನಂತೆ ಹಣೆ ನಿರಿಗೆ ಮಾಡಿಕೊಂಡು ಯೋಚಿಸುತ್ತಿದ್ದೆ.  (more…)

Wednesday June 13, 2007

ಜಮೀನು ಮಾರಿದ ನಿಂಗೇಗೌಡರ ಕಥೆ

Filed under: ಮುಖಚಿತ್ರ — Rasheed @ 2:36 pm

ಕುಪ್ಪೆ ಗ್ರಾಮದ ನಿಂಗೇಗೌಡರು ಜಮೀನು ಮಾರಿದ್ದಾರೆ. ಆಮೇಲೆ ಏನು ಮಾಡುತ್ತಾರೆ?ಅವರನ್ನೇ ಕೇಳಿ

(more…)

Tuesday June 12, 2007

ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಕೆಲವು ಕವಿತೆಗಳು

Filed under: Uncategorized — Rasheed @ 11:40 pm

 

pande2.jpg

 ಬಹುಜನರ ಕೋರಿಕೆಯ ಮೇರೆಗೆ ಶ್ರೀ ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಕೈಬರಹದ ಕವಿತೆಗಳ ಪುಸ್ತಕದಿಂದ ಕೆಲವು ಕವಿತೆಗಳನ್ನು ಇಲ್ಲಿ ನೀಡುತ್ತಿರುವೆ. ನಿಮಗೆ ಇಷ್ಟವಾದರೆ ಅವರ ಸುಂದರ ಕೈಬರಹದಲ್ಲಿರುವ ಇನ್ನೂ ಕೆಲವು ಕವಿತೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬಲ್ಲೆ[ಪಾಂಡೆಯವರು ಇದಕ್ಕೆ ಅನುಮತಿ ನೀಡಿದ್ದಾರೆ] 

 ೧.

ನನ್ನನ್ನು ಪೂರ್ತಿಯಾಗಿ ಎಚ್ಚರಿಸಲಾಗದ

ಬೆಳಕಿನ ಚಂಚಲ ಕ್ಷಣಗಳಂತೂು

ಕಳೆದು ಹೋದವು.

ಈಗ ನನ್ನ ಪಾಲಿಗೆ ಬಂದಿರುವ

ಕತ್ತಲೆಯೂ ಸಹ ನ್ಯಾಯವಾಗಿಲ್ಲ.

ಇಲ್ಲಿಯೂ ಕೆಲವು

ಉಪಯೋಗಕ್ಕೆ ಬಾರದ

ನಕ್ಷತ್ರಗಳು

ನನ್ನ ನಿದ್ರೆಗೆಡಿಸುತ್ತಿದೆ.

೨.

ಹದಿ ಹರೆಯದವರು

ಬೆದೆಗೆ ಪ್ರೇಮವೆಂದು

ಪರಿಗಣಿಸುವ

ಆತಂಕವಿರುವುದರಿಂದ

ಮುದುಕರು; ಹಾದರವನ್ನು

ಕರಾರುವಕ್ಕಾಗಿ

ಮಾಡಿ ತೋರಿಸುತ್ತಾರೆ.

೩. (more…)

Monday June 11, 2007

ಮುಸಂಬಿ ಸುಲಿಯುವ ಸದ್ದು ಅಥವಾ ಆಹಾರ ಮತ್ತು ದೇವರು

Filed under: ಅಲೆಮಾರಿಯ ದಿನಚರಿ — Rasheed @ 10:29 pm

 

 ಸಂಜೆ ಉರಿ ಬಿಸಿಲ ಲ್ಲಿ ನಿದ್ದೆ ಅರ್ದಕ್ಕೆ ಬಿಟ್ಟು ಮಕ್ಕಳಿಗೆ ಮುಸಂಬಿ ಸುಲಿಯತ್ತ ಕೂತಿದ್ದೆ 

 ಬೆವರು,ಸಂಕಟ,ಕನಸು,ಎಚ್ಚರ,ನಿದ್ದೆ.  ಉಸ್ತಾದ್  ಅಮೀರ್ ಖಾನ್ ಎಂದಿನಂತೆ ‘ಪಿಯಾ ಪರದೇಶಿ ಪರಮಸುಖ ಚತುರ’ಎಂದು ಮತ್ತೆ ಮತ್ತೆ ಹಾಡುವಂತೆ ಹಾಡನ್ನ ಲೂಪ್ ಮಾಡಿಕೊಂಡಿದ್ದೆ. ನಾವು ಪರದೇಶಿಗಳಾದ ಗೆಳೆಯರು ಸುಖ ಸಂಕಟದ ಹೊತ್ತಲ್ಲಿಮತ್ತೆ ಮತ್ತೆ ಕೇಳುವ ಹಾಡು ಅದು. ಶಾಶ್ತ್ರೀಯವಾಗಿ ಕೇಳುವುದಾದರೆ ಬೆಳಗಿನ ಕೊನೆಯ ಜಾವದಲ್ಲಿ ಕೇಳಬೇಕಾದ ಹಾಡದು. ಪರದೇಶಿಗಳಾದ ಪರಮಸುಖಚತುರರು ಯಾವ ಜಾವದಲ್ಲಾದರೂ ಕೇಳಬಹುದು ಅನ್ನುವಂತೆ ಉಸ್ತಾದ್ ಅಮೀರ್ ಖಾನ್ ಹಾಡುತ್ತಿದ್ದರು. ಮಕ್ಕಳು ಆಸೆಯಿಂದ ಸುಲಿಯುತ್ತಿರುವ ಮುಸಂಬಿಯನ್ನು ನೋಡುತ್ತಿದ್ದರು. ಆ ಉರಿಬಿಸಿಲಿನ ಸುಖಸಂಕಟದ ಹಾಡಿನ ನಡುವೆಯೂ ಮುಸಂಬಿ ಸುಲಿಯವ ಸದ್ದು ಕೇಳಿಸುತ್ತಿತ್ತು.ಒಂದು ಅನಿರ್ವಚನೀಯ ಸದ್ದು. ಇದುವರೆಗೆ ಯಾರೂ ಎಲ್ಲೂ ಕೇಳಿರದ ಶೋಷಣೆಯೊಂದರ ಸದ್ದು. ಯಾವುದನ್ನು ತಿನ್ನಬಹುದು ಯಾವುದನ್ನು ತಿನ್ನಬಾರದು ಎಂದು ಮಕ್ಕಳಿಗೆ ಮದ್ಯಾಹ್ನ ಕಥೆ ಹೇಳಿ ಮಲಗಿಸಲು ನೋಡಿದ್ದೆವು.ಕಟ್ಟಾ ಮುಸಲ್ಮಾನಳಾದ ನನ್ನ ಅಕ್ಕ ಮುಸಲ್ಮಾನರ ಪ್ರಕಾರ ಯಾವುದೆಲ್ಲಾ ಅನುಮತಿಸಲ್ಪಟ್ಟ ಆಹಾರ ಯಾವುದೆಲ್ಲಾ ನಿಷೇಧಿಸಲ್ಪಟ್ಟ ಆಹಾರ ಎಂದು ಹೇಳಿದ್ದರೆ, ಅಧರ್ಮೀಯರಾದ ನಾನು ಮತ್ತು ನನ್ನ ಹೆಂಡತಿ  ಯಾವ ಮಾಂಸಕ್ಕೆ ಏನು ರುಚಿಯಿರುತ್ತದೆ-ಯಾವ ಮೀನಿಗೆ ಎಂತಹ ಮುಳ್ಳಿರುತ್ತದೆ ಯಾವ ತರಕಾರಿಯಲ್ಲಿ ಯಾವ ಹಣ್ಣಿನಲ್ಲಿ ಎಂತೆಂತಹ ಗುಣಗಳಿರುತ್ತವೆ ಎಂದು ಪೆದ್ದು ಪೆದ್ದಾಗಿ ವಿವರಿಸಿ ಸೋತು ಹೋಗಿದ್ದೆವು.ಏನೇ ಆದರೂ ನವಿಲನ್ನೂ ಜಿಂಕೆಯನ್ನೂ ಮೊಲವನ್ನೂ ಅಳಿಲನ್ನೂ ತಿನ್ನಬಾರದೆಂದೂ,ಯಾವುದೇ ಕಾರಣಕ್ಕೂ ಹುಲಿಯನ್ನೂ ಸಿಂಹವನ್ನೂ ನರಿಯನ್ನೂ ರಾಕ್ಷಸರನ್ನೂ ತಿನ್ನದೇ ಇರಬಾರದೆಂದೂ  ಮಕ್ಕಳು ನಮಗೇ ಬುದ್ಧಿಮಾತು ಹೇಳಿ ಮಲಗಿದ್ದರು.ಎದ್ದು ಮುಸಂಬಿ ಸುಲಿಯಲು ಕೂತರೆ ಅದೂ ಸದ್ದುಮಾಡಲು ತೊಡಗಿ ಇದನ್ನು ಹೇಗೆ ತಿನ್ನಿಸುವುದು ಎಂದು  ಸಂಕಟ ಶುರುವಾಯಿತು.

ಈ ಮಕ್ಕಳನ್ನು ಒಮ್ಮೆ ಮೈಸೂರಿನ ಖ್ಯಾತ ಕುರಿಮಾಂಸದ ಅಂಗಡಿಯೊಂದಕ್ಕೆ ಕರೆದುಕೊಂಡು ಹೋಗಿ ಅವರಿಂದ ಸಿಕ್ಕಾಪಟ್ಟೆ ಬಯ್ಯಿಸಿಕೊಂಡಿದ್ದೆ. ಇಡೀ ನಗರದಲ್ಲೇ ಯಾವುದೇ ಮೋಸವಿಲ್ಲದ ಅತ್ಯಂತ ತಾಜಾ ಮಾಂಸ ಸಿಗುವ ಕುರಿಮಾಂಸದಂಗಡಿ ಎಂದು ಹೆಸರುವಾಸಿಯಾಗಿರುವ ಈ ಅಂಗಡಿಯಲ್ಲಿ ಚರ್ಮಸುಲಿದು ತಲೆಯಿಲ್ಲದೆ ತೂಗುತ್ತಿದ್ದ ಕುರಿಯೊಂದರ ಮೀನಖಂಡದ ಸ್ನಾಯು ಸತ್ತು ಅಷ್ಟು ಹೊತ್ತಾ ಗಿದ್ದರೂ ಇನ್ನೂ ಮಿಡಿಯುತ್ತಿತ್ತು.ಅಂಗಡಿಯ ಮಾಲಕ  ಹೆಮ್ಮೆಯಿಂದ ಅದೇ ಖಂಡದಿಂದ ಒಂದು ಕೆ.ಜಿ.ಕತ್ತರಿಸಿ ‘ಯಾವಾಗ್ಲೂ ಇಲ್ಲೇ ಬನ್ನಿ ಸಾರ್’ಎಂದು ಕೈಗಿಟ್ಟು ಮಕ್ಕಳ ಕೆನ್ನೆ ಮುಟ್ಟಿ  ನಕ್ಕಿದ್ದ. (more…)

Next Page »

Blog at WordPress.com.