The Mysore Post

Monday April 30, 2007

ರಾಮಚಂದ್ರ ಭಟ್ಟರೂ,ಕುಂಞಪ್ಪ ಬ್ಯಾರಿಗಳೂ

Filed under: ಮಾತಿಗೂ ಆಚೆ — Rasheed @ 11:48 pm

puttur1.jpg

ಇದು ಹುಡುಗ ಹುಡುಗಿಯರ ಹದಿಹರೆಯದ ಹುಚ್ಚಿನ ಮೋಹಕ ಪ್ರೇಮವಲ್ಲ, ಹೆಣ್ಣು- ಗಂಡಿನ ಉರಿಯುವ ಪ್ರೇಮದ, ಕಾಮದ ನಾಲಗೆಯ ಚಾಚುವಿಕೆಯಲ್ಲ, ಗಂಡಸು ಮತ್ತು ಗಂಡಸಿನ ನಡುವಿನ ಅಥವಾ ಹೆಂಗಸು ಮತ್ತು ಹೆಂಗಸಿನ ನಡುವಿನ ಹೇಳಲೂ ಆಗದ ನುಂಗಲೂ ಆಗದ ಆಕರ್ಷಣೆಯಲ್ಲ.

ಇದು ಇಬ್ಬರು ಮುದುಕರ ಪ್ರೇಮದ ಕಥೆ. ಇಲ್ಲಿ ನಾಯಕರಿಲ್ಲ, ನಾಯಕಿಯರಿಲ್ಲ, ಖಳರಿಲ್ಲ, ವಿರಹವಿಲ್ಲ, ಅಸೂಯೆಯಿಲ್ಲ. ಎಲ್ಲವನ್ನೂ ವಿವರಿಸಿ ಹೇಳುವ ಕಾರ್ಯ ಮತ್ತು ಕಾರಣಗಳೆಂಬ ಸಂಬಂಧಗಳ ಹಂಗೂ ಈ ಮುದುಕರಿಗೆ ಇಲ್ಲ. ಯಾಕೆ ಈ ಪ್ರೇಮ ಎಂದು ಕೇಳಿದರೆ ಇದಕ್ಕೇ ಎಂದು ಖಂಡ ತುಂಡವಾಗಿ ಉತ್ತರಿಸಲೂ ಇವರಿಬ್ಬರಿಗೂ ಇಷ್ಟವಿಲ್ಲ. ಯಾಕೆಂದರೆ ಇವರಿಬ್ಬರಿಗೂ ಇದಕ್ಕೆ ಇದೇ ಉತ್ತರವೆಂಬುದು ಗೊತ್ತಿಲ್ಲ. ಇನ್ನೂ ಒತ್ತಾಯ ಮಾಡಿದರೆ ಒಬ್ಬರು ನಾಚಿಕೊಳ್ಳುತ್ತಾರೆ. ಇನ್ನೊಬ್ಬರು ಆಕಾಶದ ಕಡೆಗೆ ಕೈ ತೋರಿಸುತ್ತಾರೆ. (more…)

Sunday April 29, 2007

ದಾರಿ ಯಾವುದಯ್ಯಾ ವೈಕುಂಠಕೆ……….

Filed under: ಅಲೆಮಾರಿಯ ದಿನಚರಿ — Rasheed @ 9:31 am

 

vaikunta.jpg

‘ದಾರಿ ಯಾವುದಯ್ಯ ವೈಕುಂಠಕೆ’ಎಂದು ಗೊಣಗುತ್ತಿದ್ದೇನೆ.ಗೆಳೆಯ ದೂರದಿಂದ ದೂರವಾಣಿಯಲ್ಲಿ `ಕುರಾನ್ ಓದುತ್ತಿದ್ದೇನೆ..ಕೆಲವು ಕಡೆ ಎಷ್ಟು ಚೆನ್ನಾಗಿದೆ.ಇನ್ನು ಕೆಲವು ಕಡೆ ಗೊತ್ತಾಗುತ್ತಿಲ್ಲ. ನಿನಗೇನಾದರೂ ಅರಿವಾಗಿದೆಯೇ?’ಎಂದು ಕೇಳುತ್ತಿದ್ದಾನೆ. ನಾನು ಸುಮ್ಮನೇ ತಲೆಯಾಡಿಸುತ್ತೇನೆ.’ದೇವರುಗಳ ವಾಣಿ ಮಾರಾಯ.ನರಮನುಷ್ಯರ ಅರಿವಿಗೆ ಅಷ್ಟು ಸುಲಭದಲ್ಲಿ ಒದಗುವುದಿಲ್ ಲ.ಹಾಗೆ ಒದಗಿದ್ದಿದ್ದರೆ ಯಾಕೆ ನಾನು ಮತ್ತು ನೀನು ಯಾಕೆ ಈ ನಿತ್ಯ ನರಕದ ಬೆಂಕಿಯಲ್ಲಿ ಹೀಗೆ ಹಿತವಾಗಿ ಚಳಿ ಕಾಯಿಸಿಕೊಳ್ಳುತ್ತಿದ್ದೆವು’ ಎಂದು ಕಿಚಾಯಿಸಬೇಕೆನ್ನಿಸುತ್ತದೆ.ಆದರೆ ಆತ ಹೀಗೆ ಗಂಭೀರವಾಗಿ ಧರ್ಮಪಾರಾಯಣದಲ್ಲಿ ತೊಡಗಿರುವಾಗ ಹೇಗೆ ಲಂಪಟತನ ಮೆರೆಯಲಿ ಎಂದು ಸುಮ್ಮನಾಗುತ್ತೇನೆ. (more…)

Saturday April 28, 2007

ಟಿ.ಎಸ್.ಎಲಿಯಟ್ಟನ ಪ್ರೂಫ್ರಾಕ್ ಕವಿತೆಯ ಕೆಲವು ಸಾಲುಗಳು

Filed under: ಅನುವಾದಗಳು — Rasheed @ 7:12 am

prufrok.jpg 

ಬಾ ಮತ್ತೆ ಹೋಗೋಣು ,ನಾ ಮತ್ತೆ ನೀನು,
ಸಂಜೆ ಆಕಾಶಕ್ಕೆದುರು ರಾಚಿ
ಆಸ್ಪತ್ರೆ ಮೇಜಿಗಾನಿಸಿ ಮಲಗಿಸಿದ ರೋಗಿ;
ಬಾ ಹೋಗೋಣು, ಅರೆಬರೆಖಾಲಿ ಹಾದಿಗಳಲ್ಲಿ,
ಗೊಣಗುವ ತಾಣಗಳಲ್ಲಿ,
ನೆಮ್ಮದಿಗೆಟ್ಟ ಒಂದುರಾತ್ರಿಯ ಅಗ್ಗ ಹೋಟೆಲ್ಲುಗಳಲ್ಲಿ
ಮೀನಬಡಿಸುವ ದೂಳು ತುಂಬಿದ  ರೆಸ್ಟಾರೆಂಟುಗಳಲ್ಲಿ:
ಬೀದಿಗಳಲ್ಲಿ ,ನೆಮ್ಮದಿಗೊಡದ ವಾದಗಳಲ್ಲಿ,ಹಿಂದೇ ಬರುವ
ಕುಹಕ ಹಾದಿಗಳಲ್ಲಿ.
ನಿಲ್ಲಿಸಲು ನಿನ್ನನ್ನೊಂದು ಗಹನ ಪ್ರಶ್ನೆಯ ಎದುರು..
ಓ,ಕೇಳದಿರು`ಅದೇನು?ಎಂದು.
ಹೋಗೋಣ, ಹೋಗುವುದ ಮಾಡೋಣ.

ರೂಮಿನಲಿ ಹೆಂಗಸರು ಬಂದು ಹೋಗುವರು
ಉಲಿಯುತ್ತ ಮೈಕೆಲೇಂಜೆಲೋ ಎಂದು

ಹಳದಿ ಕಾವಳ ಕಿಟಕಿಗಾಜಿಗೆ ತನ್ನ ಬೆನ್ನ ಉಜ್ಜಿ
ಹಳದಿ ಹೊಗೆ ಕಿಟಕಿಗಾಜಿಗೆ ತನ್ನ ಮೂತಿಯ ಒರಸಿ
ಸಂಜೆಗಾಲದ ಮೂಲೆಮೂಲೆಗೆ ನಾಲಗೆ ನಕ್ಕಿ,
ನಿಂತರಾಡಿಯನೀರಿಗೆತಾನೂ ತುಸು ತಡೆದು ನಿಂತು
ಚಿಮಣಿಮಸಿಇಜ್ಜಲು ತನ್ನ ಬೆನ್ನಿಗೆಬೀಳಲು ಬಿಟ್ಟು
ಓಡಿಂದಜಾರಿ,ತಟ್ಟನೇಜಿಗಿದು,
 ಮತ್ತೆ ಇದು ಇನ್ನೂ ಶ್ರಾವಣದ ಸಂಜೆ ಎಂದು ಅರಿತು
ಬಂತು ಮನೆಗೆ ಒಂದು ಸುತ್ತು ಮತ್ತೆ ನಿದ್ದೆ ಹೋಯಿತು.

ನಿಜ ಇನ್ನೂ ಇದೆ ಸಮಯ
ಬೀದಿ ಸುತ್ತುವ ಹಳದಿ ಹೊಗೆಗೆ
ಬೆನ್ನು ಉಜ್ಜುತ್ತ ಕಿಟಕಿ ಗಾಜಿಗೆ;
ಇನ್ನೂ ಇದೆ ಸಮಯ ಇದೆ ಸಮಯ ಇನ್ನೂ
ಕಾಣಲಿಕ್ಕಿರುವ ಮುಖಗಳಿಗೆ ಮುಖವ ಸಜ್ಜುಗೊಳಿಸಲಿಕ್ಕೆ;
ಇದೆ ಸಮಯ ಕೊಲ್ಲಲಿಕ್ಕೆ ಸೃಷ್ಟಿಸಿಕೊಳ್ಳಲಿಕ್ಕೆ ,
   ಸಮಯವಿದೆ ಎಲ್ಲ ಕೆಲಸಗಳಿಗೆ ದಿನದ ಕೈಗಳಿಗೆ ದುತ್ತೆಂದು
ನಿನ್ನ ತಟ್ಟೆಯೊಳಕ್ಕೊಂದು ಪ್ರಶ್ನೆಯೊಂದನ್ನು ಎತ್ತಿ ಇಡಲಿಕ್ಕೆ
ಸಮಯವಿದೆ ನಿನಗೆ ಸಮಯವಿದೆ ನನಗೆ
ಸಮಯವಿದೆ ನೂರೊಂದು ಅನಿಶ್ಚಿತತೆಗಳಿಗೆ
ನೂರೊಂದು ನೋಟಗಳಿಗೆ ಮರುನೋಟಗಳಿಗೆ,
ಚಾ ಮತ್ತು ಬಿಸ್ಕತ್ತು ಸೇವನೆಗೆ ಮೊದಲು

 ರೂಮಿನಲಿ ಮಹಿಳೆಯರು ಬಂದು ಹೋಗುವರು
ಉಲಿಯುತ್ತ ಮೈಕೆಲೇಂಜೆಲೋ ಎಂದು

………

t_s_eliot_135.jpg

ಮೂಲ  ಪೂರ್ತಿ ಇಂಗ್ಲಿಷ್ ಕವಿತೆಗಾಗಿ ಇಲ್ಲಿ ಕ್ಲಿಕ್ ಮಾಡಿ: http://www.wsu.edu:8080/~wldciv/world_civ_reader/world_civ_reader_2/eliot.html

ಎಲಿಯಟ್ ಧ್ವನಿಯಲ್ಲೇ ಈ ಕವಿತೆಯನ್ನು ಕೇಳಬೇಕಾದರೆ ಇಲ್ಲಿ ಕ್ಲಿಕ್ ಮಾಡಿ:

http://www.salon.com/audio/2000/10/05/eliot/

Friday April 27, 2007

‘ಬೀಜ’-ಒಂದು ಹಳೆಯ ಸಣ್ಣ ಕಥೆ

Filed under: ಕತೆ-ಗಿತೆ — Rasheed @ 8:28 am

ಬೀಜ

ಬಂಗಲೆಯೋ ಗೂಡಂಗಡಿಯೋ  ಎಂದು ಗೊತ್ತಾಗದಂತೆ ಮಂದಣ್ಣ ತನ್ನ ತೋಟದ ಮನೆಯನ್ನು ಅರ್ಧಕ್ಕೆ ಕಟ್ಟಿನಿಲ್ಲಿಸಿ ಈಗ ಅದರಲ್ಲೇ ವ್ಯಾಪಾರ ಶುರು ಮಾಡಿದ್ದ.ಕಾಫಿ ಬೆಲೆ ಹೀಗೇ ಆದರೆ ಇನ್ನು ಮುಂದೆ ಮಾಪಿಳ್ಳೆಯಂತೆ ಸೈಕಲ್ಲಿನ ಹಿಂದೆ ಮೀನು ಬುಟ್ಟಿ ಇಟ್ಟುಕೊಂಡು ಆ ವ್ಯಾಪಾರಕ್ಕೂ ಹೊರಡಬೇಕಾಗುತ್ತದೆ ಎಂದು ತನ್ನ ಉದ್ದ ಕಾಗದದ ಕೊನೆಯಲ್ಲಿ ಶರಾ ಬರೆದಿದ್ದ.ಜಾಗತೀಕರಣಕ್ಕೂ ಮುಕ್ತ ಮಾರುಕಟ್ಟೆಗೂ  ಕೊಡಗಿನಲ್ಲಿ ಕಾಫಿ ಬೆಲೆ ಕುಸಿದು ಬೆಳೆಗಾರ ಕಂಗಾಲಾಗಿರುವುದಕ್ಕೂ ಹತ್ತಿರದ ಕೇರಳದಿಂದ ಮಲಯಾಳಿಗಳು ಕೊಡಗಿನ ಭತ್ತದ ಗದ್ದೆಗೆ ನುಗ್ಗಿ ಶುಂಠಿ ಬೆಳೆದು ಕೊಬ್ಬಿಹೋಗಿರುವುದಕ್ಕೂ ಹೇಗೆ ನಿಕಟ ಸಂಬಂಧ ಇದೆ ಎನ್ನುವುದನ್ನು ಮಾರ್ಕ್ಸ್‌ವಾದದ ಹಿನ್ನೆಲೆಯಿಟ್ಟುಕೊಂಡು ಸವಿವರವಾಗಿ ಬರೆದಿದ್ದ.

ಅವನ ನಾಲ್ಕೈದು ಪುಟಗಳ ಪತ್ರದ ಒಂದು ಮೂಲೆಯಲ್ಲಿ ಒಂದಿಷ್ಟು ಜಾಗಮಾಡಿಕೊಂಡು ಅವನ ಸಂಗಾತಿಯೂ ಧರ್ಮಪತ್ನಿಯೂ ಆದ ದಾಕ್ಷಾಯಿಣಿ ನನಗೆ ಕೆಂಪು ಸಲಾಂ ತಿಳಿಸಿದ್ದಳು.ಜೊತೆಗೆ ಸಾಧ್ಯವಾಷ್ಟು ಬೇಗ ನಾನು ಅವರಿಬ್ಬರನ್ನು ಬಂದು ಕಾಣಬೇಕೆಂದೂ ಕೊಡಗಿನ ಈ ಕಾಡಿನೊಳಗಡೆ ತನಗೆ ದಿಕ್ಕು ತೋಚದಾಗಿದೆಯೆಂದೂ ಕೊಡಗಿನ ಕಾಡುಕುರುಬರನ್ನೂ, ಜೇನುಕುರುಬರನ್ನೂ, ಯರವರನ್ನೂ ಸಂಘಟಿಸಬೇಕೆಂದು ಹೊರಟಿದ್ದ ತಾವಿಬ್ಬರು ಈಗ ಅನಿವಾರ್ಯವಾಗಿ ಮಲಯಾಳಿಗಳ ಜೊತೆಗೂ ಮಾಪಿಳ್ಳೆಗಳ ಜೊತೆಗೂ ಕಾದಾಟ ಮಾಡಬೇಕಾಗಿದೆಯೆಂದೂ ಜೊತೆಗೆ ಇತ್ತೀಚೆಗೆ ಸಾವಯವ ಅಜ್ಜ ಎಂಬ ಸಹಜ ಕೃಷಿ ಮಾಡುವ ಮುದುಕನೊಬ್ಬ ಘಟ್ಟದ ಕೆಳಗಿನಿಂದ ಬಂದು ತಮ್ಮೊಡನೆ ಸೇರಿಕೊಂಡಿರುವುದಾಗಿಯೂ ವೈಜ್ನಾನಿಕವಾಗಿ ಆಲೋಚಿಸುವ ತನಗೆ ಈ ಸಾವಯವ ಅಜ್ಜನ ವರ್ತನೆ ವಿZತ್ರವಾಗಿ ತೋರುತ್ತಿರುವುದಾಗಿಯೂ ಈ ಅeನ ಜೊತೆ ಸೇರಿಕೊಂಡು ಮಂದuನೂ ವಿಚಿತ್ರವಾಗಿ ಆಡಲು ತೊಡಗಿರುವನೆಂದೂ ನಾನು ಒಮ್ಮೆಹೋಗಿ ಅವರನ್ನೆಲ್ಲ ನೋಡಬೇಕೆಂತಲೂ ಬರೆದಿದ್ದಳು

ಈಗ ನಾನು ಬಂದು ನೋಡಿದರೆ ಗೇಟಿಗೆ ಎಂದು ಕಟ್ಟಿದ್ದ ರಾಕ್ಷಸ ಗಾತ್ರದ  ಸಿಮೆಂಟ್ ಕಂಬಗಳ ನಡುವೆ ಗೇಟೇ ಇಲ್ಲದೆ ನಾಲ್ಕೈದು ಬಿದಿರು ಗಳಗಳನ್ನು ಉದ್ದಕ್ಕೆ ಎಳೆದು ಗೇಟಿನಂತೆ ಮಾಡಿಕೊಂಡು, ಗೇಟಿನ ಪಕ್ಕದಲ್ಲಿ ಮುಳ್ಳು ತಂತಿಗಳನ್ನು ಕಿತ್ತು ಗೂಡಂಗಡಿಗೆ ಬಂದು ಹೋಗುವವರಿಗೆ ದಾರಿ ಮಾಡಿಕೊಟ್ಟು,ಮನೆಯ ದೊಡ್ಡ ಬಾಗಿಲುಗಳಿಗೆ ದಾಕ್ಷಾಯಿಣಿಯ ಹಳೆಯ ಸೀರೆಯೊಂದನ್ನು ಪರದೆಯಂತೆ ಕಟ್ಟಿ, ಮನೆಯ ಎದುರಿನ ಆಪೀಸು ಕೋಣೆಯನ್ನು ಗೂಡಂಗಡಿಯಂತೆ ಮಾಡಿಕೊಂಡು ಮಂದಣ್ಣ ಮಲಯಾಳಿ ಪಂಚೆಯೊಂದನ್ನು ಮೊಣಕಾಲವರೆಗೆ ಎತ್ತಿಕಟ್ಟಿಕೊಂಡು ತನ್ನ  ಎಂದಿನ ಪರಿಹಾಸ್ಯದ ನಗುವನ್ನು ಮುಖದ ತುಂಬ ಸೂಸಿಕೊಂಡು ಇನ್ನೇನು ಶಿಕ್ಷೆಗೊಳಗಾಗಬೇಕಾದ ಬಾಲಕನ ಹಾಗೆ ದಾಕ್ಷಾಯಿಣಿಯ ಮುಖವನ್ನೊಮ್ಮೆ ನೋಡಿ ನನ್ನ ಸ್ವಾಗತಿಸಲು ಬಂದ. (more…)

Tuesday April 24, 2007

ಮೊದಲು ಮಲ್ಲಮ್ಮ, ನಡುವಲ್ಲಿ ಸರಸ್ವತಿ ಮತ್ತು ಇದೀಗ ಜುಲೈಕಾ

Filed under: ಮೈಸೂರಿನಿಂದ ಅಂಕಣ — Rasheed @ 12:37 pm

zulika4.jpg

ನೋಡಲು ಚೂಟಿಯಾಗಿದ್ದ ಆದರೆ ಓದಲು ಅಷ್ಟೇನೂ ಚುರುಕಾಗಿರದ ನಮ್ಮ ಸಂಬಂಧಿಕರ ಹುಡುಗಿಯೊಬ್ಬಳನ್ನು ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದೆ. ಎರಡು ವರ್ಷಗಳ ಹಿಂದೆ ಒಂದು ದಿನ ಸಂಜೆ ಎಲ್ಲಿಯೋ ತಿರುಗಾಡಲು ಹೋಗಿದ್ದ ನಾನು ತಿರುಗಿ ಬಂದಾಗ ಕತ್ತಲಾಗುತ್ತಿತ್ತು. ಆ ಹುಡುಗಿಗೆ ಗಂಡು ಹುಡುಕಿಕೊಂಡು ಬಂದ ಮಹಿಳೆಯರೊಬ್ಬರು ನನಗಾಗಿ ಕಾಯುತ್ತಾ ಕುಳಿತಿದ್ದರು. ಗಂಡು ಹುಡುಕುವುದು, ಮದುವೆ ಮಾಡಿಸುವುದು ಇತ್ಯಾದಿಗಳಲ್ಲಿ ಅಷ್ಟೇನೂ ಆಸಕ್ತಿ ಇರದ ನಾನು ಒಂದು ತರಹದ ನಿರಾಸಕ್ತಿಯಿಂದಲೇ ಆಕೆಯನ್ನು ಏನು ಮಾತಾಡಿಸುವುದು ಎಂದು ಯೋಚಿಸುತ್ತಿದ್ದೆ. ಮದುವೆಯ ವಯಸ್ಸೇನೂ ಆಗಿರದಿದ್ದ ಸಂಬಂಧಿಕರ ಹುಡುಗಿ ಬಿಸಿಲು ಚಾವಣಿಯಲ್ಲಿ ಮಕ್ಕಳೊಡನೆ ಜೂಟಾಟ ಆಡುತ್ತಾ ಕುಳಿತಿದ್ದಳು.

ಒಳಬಂದವನನ್ನು ಕಂಡು ಆ ಮಹಿಳೆ ಎದ್ದು ನಿಂತು ತನ್ನ ಹೆಸರು ಜುಲೈಕಾ ಎಂದೂ ತನ್ನ ಮಗ ಪಶ್ಚಿಮಾ ಆಫ್ರಿಕಾದ ಯಾವುದೋ ದೇಶವೊಂದರಲ್ಲಿ ಕಂಪ್ಯೂಟರ್ ಶಿಕ್ಷಕನಾಗಿರುವನೆಂದೂ, ಅವನು ಒಂದುವರ್ಷದಲ್ಲಿ ಮೈಸೂರಿಗೆ ಬರುತ್ತಿರುವನೆಂದೂ, ನಮ್ಮ ಹುಡುಗಿಯ ಭಾವಚಿತ್ರವೊಂದು ಇದ್ದರೆ ಆತನಿಗೆ ಕಳುಹಿಸಿಕೊಡಬೇಕಿತ್ತೆಂದೂ, ಅದಕ್ಕಾಗಿ ಬಂದಿರುವುದಾಗಿಯೂ ಹೇಳಿದ್ದರು. ಆಕೆಯ ಮುಖ ಚಹರೆ, ನಡೆನುಡಿ, ಹಾವ ಭಾವ ಮತ್ತು ಆಕೆ ಆಡುತ್ತಿದ್ದ ಕನ್ನಡ ನುಡಿಯ ಶೈಲಿ ಇವುಗಳಿಗೂ ಮತ್ತು ಆಕೆಯ ಜುಲೈಕಾ ಎಂಬ ಹೆಸರಿಗೂ ಯವುದೇ ತರಹದ ತಾಳಮೇಳಗಳು ಗೋಚರಿಸುತ್ತಿರಲಿಲ್ಲ.

ನೋಡಿದರೆ ಅವರು ಯಾವುದೋ ಹಳೆಯ ಕಾಲದ ಅಭಿನೇತ್ರಿಯಂತೆ ಕಾಣಿಸುತ್ತಿದ್ದರು. ಆಮೇಲೆ ಆಕೆ ತೀರಿಹೋಗಿರುವ ತನ್ನ ಪತಿಯ ಹೆಸರನ್ನು ಹೇಳಿದರು. ಆ ಹೆಸರು ಕೇಳಿದ ಮೇಲೆ ನನಗೆ ಅದು ಖಾತರಿಯಾಯಿತು. ‘ನಿಮ್ಮ ಹಳೆಯ ಹೆಸರು ಸರಸ್ವತಿ ಎಂದಿರಬೇಕಲ್ಲವೇ?’ ಅಂದೆ. ‘ಹೌದು’ ಎಂದು ಆಕೆ ನಾಚಿಕೊಂಡರು. ‘ನಿಮ್ಮ ಮಕ್ಕಳ ತಂದೆ ಬಿ. ಶೇಖ್ ಚಾಂದ್ ತೀರಿ ಹೋಗಿದ್ದಾರೆ ಅಲ್ಲವೇ’ ಅಂದೆ. ‘ಹೌದು’ ಎಂದರು ‘ಹಾಗಾದರೆ ಕೂತುಕೊಳ್ಳಿ ಒಂದು ನಿಮಿಷ’ ಎಂದು ಒಳಕ್ಕೆ ಹೋಗಿ ಮುಖ ತೊಳೆದುಕೊಂಡು ಬಂದು ಅವರ ಜೊತೆ ಬಹಳ ಹೊತ್ತು ಮಾತನಾಡಿದೆ.

ನಿನ್ನೆ ಸಂಜೆ ಆಫೀಸಿನಲ್ಲಿ ಕುಳಿತಿರುವಾಗ ಸರಸ್ವತಿ ಅಲಿಯಾಸ್ ಜುಲೈಕಾ ಅವರ ಮಗ ಆಫ್ರಿಕಾದಿಂದ ಬಂದವನು ನನ್ನನ್ನು ಕಾಣಲು ಬಂದಿದ್ದ. ಆತನಿಗೆ ಕಂಪ್ಯೂಟರ್ ಅನಿಮೇಷನ್ಗಾಗಿ ಒಳ್ಳೆಯ ಇಂಗ್ಲಿಷ್ ದ್ವನಿಯುಳ್ಳ ಯಾರಾದರೂ ಬೇಕಾಗಿತ್ತು. ನನಗೆ ಯಾರಾದರೂ ಗೊತ್ತಿರಬಹುದು ಎಂದು ಬಂದಿದ್ದ. ನನಗೆ ಈತ ಜುಲೈಕಾ ಅವರ ಪುತ್ರ ಎಂದು ಗೊತ್ತಾಯಿತು. ನನಗೆ ಸಂಬಂಧಿಕನಾಗಬೇಕಿದ್ದವನು. ‘ತಾಯಿ ಜುಲೈಕಾ ಹೇಗಿದ್ದಾರೆ?’ಎಂದು ಕೇಳಿದೆ. ‘ಆರಾಮವಾಗಿದ್ದಾರೆ’ ಎಂದು ಹೇಳಿದ.

ಆತನನ್ನು ಸುಮ್ಮನೇ ಮಾತನಾಡಿಸಿ ಕಳಿಸಿದವನು ನಿನ್ನೆ ರಾತ್ರಿ ಜುಲೈಕಾರವರನ್ನು ಕಾಣಲು ಹೋದೆ. ಹೋದವನು ಅವರ ಕಥೆಯನ್ನು ಇನ್ನೊಮ್ಮೆ ಕೇಳಿ ಬಂದೆ. ಅವರು ಹೇಳಿದ್ದನ್ನು ಹಾಗೆಯೇ ನಿಮ್ಮ ಮುಂದಿಡುತ್ತಿದ್ದೇನೆ. (more…)

Sunday April 22, 2007

ನಯೀಭ್ ಮೆಹಫೂಝನ ಆತ್ಮ ಕಥೆಯ ಕೆಲವು ಕಬಾಬ್ ತುಂಡುಗಳು

Filed under: ಅನುವಾದಗಳು — Rasheed @ 3:49 pm

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ತೀರಿಕೊಂಡ ಈಜಿಪ್ಟ್ ಧೇಶದ ಅರಬಿ ಭಾಷೆಯ ಮಹಾನ್ ಬರಹಗಾರನ ಆತ್ಮ ಕಥೆಯ ಕೆಲವು ತುಂಡುಗಳು ನಿಮಗಾಗಿ

naguib_mahfouz_1.jpg

 

-1-
ಒಂದು ಪ್ರಾರ್ಥನೆ

ಕ್ರಾಂತಿಯಾಗಲೆಂದು ಪ್ರಾರ್ಥಿಸುತ್ತಿದ್ದಾಗ ನನಗಿನ್ನೂ ಏಳು ವರ್ಷವೂ ಆಗಿರಲಿಲ್ಲ.

ಆವತ್ತು ಬೆಳಗ್ಗೆ ಕೆಲಸದ ಹುಡುಗಿಯ ಕೈ ಹಿಡಕೊಂಡು ಶಾಲೆಗೆ ಕಾಲೆಳೆಯುತ್ತಾ ನಡೆಯುತ್ತಿದ್ದೆ. ಜೈಲಿಗೆ ಎಳೆದುಕೊಂಡು ಹೋಗುವ ಹಾಗೆ ಅನಿಸುತ್ತಿತ್ತು.ಕೈಯಲ್ಲೊಂದು ಕಾಪಿ ಪುಸ್ತಕ,ಕಣ್ಣುಗಳಲ್ಲಿ ಜಿಗುಪ್ಸೆ,ಎದೆಯೊಳಗೆ ಏನೋ ಅರಾಜಕತೆಯ ಆಸೆ. ತಣ್ಣನೆಯ ಕುಳಿರು ಚಡ್ಡಿಯ ಕೆಳಗೆ ಬತ್ತಲೆಕಾಲುಗಳನ್ನು ತಿವಿಯುತ್ತಿತ್ತು. ನೋಡಿದರೆ ಶಾಲೆಯ ಬಾಗಿಲು ಹಾಕಿತ್ತು. ಶಾಲೆಯ ಕಾವಲುಗಾರ ಗಟ್ಟಿ ದನಿಯಲ್ಲಿ ಹೇಳುತ್ತಿದ್ದ. “ಮುಷ್ಕರದಿಂದಾಗಿ ಈವತ್ತೂ ಶಾಲೆಯಿಲ್ಲ”
ಖುಷಿಯ ಅಲೆಯೊಂದು ನನ್ನೊಳಗೆ ಹರಿದು ಆನಂದ ತೀರದಲ್ಲಿ ತೇಲಾಡಿಸಿತು.
ಕ್ರಾಂತಿ ಚಿರಾಯುವಾಗಿರಲೆಂದು ಹೃದಯಾಂತರಾಳದಿಂದ ಪಡೆದವನಲ್ಲಿ ಪ್ರಾರ್ಥಿಸಿದೆ.

naguib3.jpg

-2- (more…)

Saturday April 21, 2007

ಬರ್ಕೆ ಹಲಸಿನ ಹಣ್ಣು ಮತ್ತು ಬರ್ಮುಡಾ ಚಡ್ಡಿ

Filed under: ಅಲೆಮಾರಿಯ ದಿನಚರಿ — Rasheed @ 10:30 am

thota.jpg

        ಬರ್ಕೆ ಹಲಸಿನ ಹಣ್ಣು ಬೀಳುತ್ತದೆ ಎಂದು ಅಂದುಕೊಂದು ನಾವು ಹಲಸಿನ ಮರದ ಕೆಳಗೆ ನಿಂತುಕೊಂಡಿದ್ದರೆ ಹಣ್ಣು ಕೊಯ್ಯಲು ಹತ್ತಿದ್ದ ಕುಂಞಮ್ಮದ್ ತಾನೇ ದೊಪ್ಪೆಂದು ಬಿದ್ದುಬಿಟ್ಟಿದ್ದ.ಆಸೆ ಕಣ್ಣು ಬಿಟ್ಟುಕೊಂಡು ಮಳೆಗಾಳಿಯ ನಡುವೆ ಸೊಳ್ಳೆ ಕಚ್ಚಿಸಿಕೊಂಡು ಪಿಚಿಪಿಚಿ ಕೆಸರಿನಲ್ಲಿ ಕಾಲು ಊರಲಾರದೆ ಒಂಟಿಕಾಲಿನಲ್ಲಿ ನಿಂತುಕೊಂಡಿದ್ದ ಪುಡಿಮಕ್ಕಳಾದ ನಾವು ಉಡದಂತೆ ಮರ ಏರಿದ್ದ ಕುಂಞಮ್ಮದ್ ಇನ್ನೇನು ಹಣ್ಣು ಬೀಳಿಸುತ್ತಾನೆ ಎಂದುಕೊಂಡಿದ್ದರೆ ಆತನೇ ಹಲಸಿನ ಹಣ್ಣಂತೆ ಉರುಳಿ ಕೆಸರಲ್ಲಿ ಮುಖ ಮುಚ್ಚಿ ಬಿದ್ದು ತೀರಿಕೊಂಡವನಂತೆ ನಿಶ್ಚಲನಾಗಿದ್ದ. ಆಮೇಲೆ ನಿದಾನಕ್ಕೆ ಎದ್ದು ಕುಂಟುತ್ತಾ ನಡೆದು ಏನೋ ಆಣತಿ ಸಿಕ್ಕಿದವನಂತೆ ಮುಖಮಾಡಿಕೊಂಡು ನಮ್ಮೆಲ್ಲರನ್ನು ಮರದಡಿಯಲ್ಲೇ ಮಳೆಯಲ್ಲಿಯೇ ಬಿಟ್ಟು ಬರೆ ಹತ್ತಿ ಹೋದವನು ಮತ್ತೆ ಕಾಣಿಸಿಕೊಳ್ಳಲೇ ಇಲ್ಲ.ಆತ ಬೊಂಬಾಯಿಗೆ ಓಡಿಹೋಗಿಬಿಟ್ಟಿದ್ದ.
ಆತ ಮತ್ತೆ ಕಾಣಿಸಿಕೊಂಡಿದ್ದು ಎಷ್ಟೋ ವರ್ಷಗಳ ನಂತರ ಮದುಮಗನಾಗಿ.

(more…)

Thursday April 19, 2007

ಟಾಲ್ ಸ್ಟಾಯ್ ಮಹರ್ಷಿಯ ಒಂದು ಪುಟ್ಟ ಕಾದಂಬರಿ

Filed under: ಅಲೆಮಾರಿಯ ದಿನಚರಿ — Rasheed @ 3:45 am

 

 tolstoy.jpg

                           ‘ಹೇಗಾದರೂ ಮಾಡಿ ಒಂದು ಕಾದಂಬರಿ ಬರೆದುಬಿಡು.ಆಮೇಲೆ ನಿನ್ನ ಹಿಡಿಯುವವರೇ ಇರುವುದಿಲ್ಲ’ ಎಂದು ಗೆಳೆಯರು ಪುಸಲಾಯಿಸುತ್ತಿದ್ದರು.ಇವರು ಪುಸಲಾಯಿಸುತ್ತಿರುವುದರ ಹಿಂದೆ ಏನೋ ಮಸಲತ್ತಿರಬೇಕು.ಇಲ್ಲ,ನನಗಾಗುವುದಿಲ್ಲ ಎಂದು ನಾನು ತಲೆಕೆದರಿಕೊಂಡು ಊರಿಡೀ ಅಳುತ್ತಾ ಓಡಾಡುವುದನ್ನು ಕಂಡು ಖುಷಿಪಡಲು ಇವರು ಮಸಲತ್ತು ನಡೆಸುತ್ತಿರಬೇಕು ಎಂದು ನಾನವರ ಮಾತುಗಳನ್ನು ಕೇಳಿಸಿಯೂ ಕೇಳಿಸಿಕೊಳ್ಳದವನ ಹಾಗೆ ಸುಮ್ಮನೇ ಓಡಾಡುತ್ತಿದ್ದೆ.ಒಂದು ವೇಳೆ ಇವರು ಇನ್ನೂ ಹಠ ಹಿಡಿದರೆ ಹೇಗೆ ತಪ್ಪಿಸಿಕೊಳ್ಳುವುದು? ತಪ್ಪಿಸಿಕೊಳ್ಳಲಾಗದೆ ಬರೆಯಲೇ ಬೇಕಾಗಿ ಬಂದ ಪಕ್ಷದಲ್ಲಿ ಏನು ಬರೆಯುವುದು?
 ಕಾದಂಬರಿ ಬರೆಯುವುದು ಅಂದರೆ ಏನು ಸುಲಭವೇ ಅದಕ್ಕೆ ಜೀವನದರ್ಶನ ಬೇಕು, ದೇಶಕಾಲಗಳ ಅಮೂಲಾಗ್ರ ಅರಿವಿರಬೇಕು,ಜನಜೀವನದ ನಾಡಿಮಿಡಿತ,ಮನುಷ್ಯ ಸ್ವಭಾವದ ಏರಿಳಿತ ಎಲ್ಲ ತಿಳಿದಿರಬೇಕು. ಪ್ರಹಸನವೊಂದರ ಕೇವಲ ಪಾತ್ರವಾಗಲು ಲಾಯಕ್ಕಾಗಿರುವ ನನ್ನಂತವನು ಕಾದಂಬರಿ ಏನು ಕಡಿಯುವುದು.ಅದನ್ನು ಬರೆಯುವುದಕ್ಕಿಂತ ಏನಾದರು ಓದುವುದು ಒಳ್ಳೆಯದು.ಓದುವುದಕ್ಕಿಂತ ಓಡಾಡುವುದು ಒಳ್ಳೆಯದು ಅಂದುಕೊಂಡು ಓಡಾಡಿಕೊಂಡಿದ್ದೆ.
 ಇವನು ಹೀಗೆ ಓಡಾಡಿಕೊಂಡಿದ್ದರೆ ತಪ್ಪಿಸಿಕೊಳ್ಳುತ್ತಾನೆ ಎಂದು ಅರಿತುಕೊಂಡ ಹಿರಿಯರೊಬ್ಬರು ನೀನು ಕಾದಂಬರಿ ಬರೆದರೆ ಒಂದು ಪದಕ್ಕೆ ಒಂದು ರೂಪಾಯಿ ಕೊಡುವೆ.ಅದರಲ್ಲೂ ನೀನು ಮೈಸೂರಿನ ಹುಲಿ ಟಿಪ್ಪೂ ಸುಲ್ತಾನನ ಬಗ್ಗೆ ಕಾದಂಬರಿ ಬರೆದರೆ ಪದಕ್ಕೆ ಒಂದೂವರೆ ಕೊಡುವೆ ಎಂದು ಪಂಥ ನೀಡಿ ಹೋಗಿದ್ದರು.ನಾನು ಈ ಅಪಾರ ಧನವನ್ನು ಹೇಗೆ ನಿರ್ವಹಿಸುವುದು ಎಂದು ತಲೆಕೆಡಿಸಿಕೊಂಡು ಏನೂ ಗೊತ್ತಾಗದೆ ಮರವೊಂದರ ಕೆಳಗೆ ಟಾಲ್ ಸ್ಟಾಯ್ ಮಹರ್ಷಿಯ ಪುಟ್ಟ ಕಾದಂಬರಿಯೊಂದನ್ನ ಹಿಡಿದು ಕೂತಿದ್ದೆ. (more…)

Tuesday April 17, 2007

ನಡೆಯಲು ಕಲಿಸಿದ ಪಾತಿಂಞ ಮತ್ತು ಆಧುನಿಕೋತ್ತರ ಬಿಕ್ಕಟ್ಟು!

Filed under: ಹೂವಿನಕೊಲ್ಲಿ — Rasheed @ 7:19 pm

pathinja.jpg

ನನಗೆ ನಡೆಯಲು ಕಲಿಸಿದ ಮೇಲಿನ ಹಾಡಿಯ ಪಾತಿಂಞ ಮೊನ್ನೆ ಹೂವಿನಕೊಲ್ಲಿಗೆ ಹೋದಾಗ ಸಿಕ್ಕಿ ತುಂಬ ಖುಷಿ ಪಟ್ಟರು. ಕಾಲು ಪಾಲು ಕಾದಂಬರಿ ಬರೆದು ಸಾಗುತ್ತಿರುವ ನನಗೆ ಅವರ ಆಶೀರ್ವಾದ ಇನ್ನೂ ಸಿಕ್ಕಿಲ್ಲ.ಏಕೆಂದರೆ ಬರೆಯುತ್ತೇನೆ ಎಂದು ಅವರಲ್ಲಿ ಹೇಳಲು ನನಗೆ ದೈರ್ಯವಿಲ್ಲ.ಹೇಳಿದರೆ ಅದು ಪಾತಿಂಞಳಿಗೆ ಅರಿವಾಗುವುದೂ ಇಲ್ಲ.

ಎಂತಹ ಆಧುನಿಕೋತ್ತರ ಬಿಕ್ಕಟ್ಟು ಇದು ಪಾತಿಂಞ! ನೀವು ನನಗೆ  ನಡೆಯಲು ಕಲಿಸದಿದ್ದರೆ ಹೀಗೆಲ್ಲಾ ಆಗುತ್ತಿತ್ತಾ???

Monday April 16, 2007

ಗಾಣಿಗರ ಸಿದ್ಧಮ್ಮನ ಇನ್ಪೋಸಿಸ್ ಕನಸು

Filed under: ಮೈಸೂರಿನಿಂದ ಅಂಕಣ — Rasheed @ 5:43 pm

 

ajji2.jpg

ಧ್ಯಾಹ್ನದ ಹೊತ್ತು ನಿದ್ದೆ ಮಾಡುವ ನನ್ನ ಮಗನನ್ನು ನೋಡಿಕೊಳ್ಳಲು ಸಿದ್ಧಮ್ಮ ಎಂಬ ಗಾಣಿಗರ ಅಜ್ಜಿ ಬರುತ್ತಾಳೆ. ಈ ಅಜ್ಜಿಯ ಬೆನ್ನು ಸ್ವಲ್ಪ ಬಾಗಿದೆ. ಸೊಂಟ ಯಾವಾಗಲೂ ಹಿಡಿದುಕೊಂಡಿರುತ್ತದೆ. ಕೀಟಲೆಯಲ್ಲಿ ನನಗಿಂತಲೂ ಒಂದು ಕೈ ಮೇಲೆಯೇ ಇರುವ ನನ್ನ ಮಗ ಒಂದು ಕಣ್ಣು ತೆರೆದುಕೊಂಡು ಇನ್ನೊಂದು ಕಣ್ಣನ್ನು ಮುಚ್ಚಿ ಕಣ್ಣೆದುರು ಕಾಣಿಸುವ ಎಲ್ಲ ಚರಾಚರ ವಸ್ತುಗಳ ಸ್ಪೆಲ್ಲಿಂಗನ್ನು ಹೇಳಿಕೊಂಡು ಕ್ಯಾಟ್ ಅನ್ನುವ ಹೆಸರಲ್ಲಿ ‘ಸಿ’ ಯಾಕೆ ಬೇಕು? ‘ಯು’ ಯಿಂದ ಶುರುವಾಗುವುದಾದರೆ ಕೊಡೆಯನ್ನು ಯುಂಬ್ರೆಲಾ ಎಂದು ಕರೆಯಬೇಕಲ್ಲವೇ ಎಂದೆಲ್ಲಾ ಗೊಂದಲ ಮಾಡಿಕೊಂಡು ನಿದ್ದೆ ಬಾರದೆ ಒದ್ದಾಡುತ್ತಿರುತ್ತಾನೆ. ಅವನನ್ನು ಹೆದರಿಸಿ ಬೆದರಿಸಿ ರಮಿಸಿ ನಿದ್ದೆ ಹೋಗಿಸಿ ಸಿದ್ದಮ್ಮ ತಾನೂ ಸುಸ್ತಾಗಿ ತೂಕಡಿಸುತ್ತಾ ಕುಳಿತಿರುತ್ತಾಳೆ. (more…)

Wednesday April 11, 2007

ರಾಮಾಪುರದಲ್ಲೊಂದು ಜನ್ಮರಹಸ್ಯ

Filed under: ಅಲೆಮಾರಿಯ ದಿನಚರಿ — Rasheed @ 10:41 am

                                                                  -೧-

 ನಾವು ರಾಮಾಪುರ ತಲುಪಿದಾಗ ರಾತ್ರಿಯಾಗಿತ್ತು. ಕತ್ತಲಲ್ಲಿ ಈ ದರಿದ್ರ ಧರೆಗೆ ಇಳಿದ ಕ್ಷುದ್ರ ದೇವತೆಯರಂತೆ ನಾವು ಮಹದೇಶ್ವರ ಟ್ರಾವೆಲ್ಸ್ ಬಸ್ಸಿನಿಂದ ಜಿಗಿದು ರಾಮಾಪುರ ಬಸ್ ಸ್ಟಾಪ್ ನಲ್ಲಿ ಇಳಿದಾಗ ಇದು ಯಾವ ಊರು? ಇಲ್ಲಿಯ ಜನರು ಹೇಗೆ? ಬಡವರಲ್ಲಿ ಬಡವರು ಎಷ್ಟು? ಕೊಬ್ಬಿರುವ ಭೂಮಾಲಕರು ಹೇಗೆ? ಅಲ್ಲಿನ ರಾಜಕಾರಣಿಗಳು ಯಾರು? ಅಧಿಕಾರಷಾಹಿ ಯಾರ ಬಾಲ? ಪೋಲೀಸು  ವ್ಯವಸ್ಥೆ ಯಾರ ಪರ- ಒಂದೂ ಗೊತ್ತಾಗದಂತೆ ಕಡ್ಲೆಪುರಿ ಮಾರುವ ಹೆಂಗಸಿನ ಸೀಮೆಣ್ಣೆ ಬುಡ್ಡಿಯ ಕರ್ರಗಿನ ಹೊಗೆಯಿಂದ ಆವೃತವಾದ ಮಂದ ಬೆಳಕು ಆ ಊರಿನ ಏಕೈಕ ಆಶಾಕಿರಣದಂತೆ ಅಲ್ಲಾಡುತ್ತಿತ್ತು.ದಾರಿ ದುರ್ಗಮವಾಗಿದ್ದರೂ ಭವಿಷ್ಯ ಉಜ್ಜ್ವಲವಾಗಿದೆ ಎಂಬ ಮಾವೋತ್ಸೆ ತುಂಗನ ಮಾತನ್ನು ನಂಬಿಕೊಂಡು  ತಿನ್ನಲು ಏನಾದರೂ ಸಿಗಬಹುದೋ ಎಂಬ ಆಸೆಯಿಂದ ನಾನು ಆ ಕತ್ತಲಲ್ಲೂ  ಏನನ್ನೋ ಹುಡುಕುವ ದಾರ್ಶನಿಕನಂತೆ ಆ ಊರನ್ನು ತಿನ್ನುವವನಂತೆ ನೋಡುತ್ತಿದ್ದೆ. (more…)

ಡಾ.ಯು.ಆರ್.ಎ. ಮತ್ತು ಮೈಸೂರಿನ ಬಾಲಕ

Filed under: Uncategorized — Rasheed @ 9:45 am

ura.jpg

ನಮ್ಮ ಪ್ರೀತಿಯ ಬರಹಗಾರನ ಜೊತೆ ಮೈಸೂರಿನ ಈ ಬಾಲಕ ಏನು ಹೇಳುತ್ತಿರಬಹುದು?ಏನು ಕೇಳುತ್ತಿರಬಹುದು.

ನಿಮಗೇನನಿಸುತ್ತದೆ?

ಪ್ರತಿಕ್ರಿಯಿಸಿ!

Monday April 9, 2007

ತೇಜಸ್ವಿ ನನ್ನ ಮೊಬೈಲ್ ನಂಬರ್ ಮರೆಯದಿರಲಿ ದೇವರೇ….

Filed under: ಮೈಸೂರಿನಿಂದ ಅಂಕಣ — Rasheed @ 1:05 pm

tejaswi.jpg

[ವ್ಯಂಗ್ಯಚಿತ್ರ ಕೃಪೆ:ಗುಜ್ಜಾರಪ್ಪ]

 

ಗೊಂದಲಗೇರಿಯ ಕ್ಯಾಂಟೀನ್ ಹೋಟ್ಲಿನಿಂದ ಪಾರ್ಸಲ್ ತಂದ ಬಿರಿಯಾನಿ ತಿಂದು ಮುಗಿಸಿ ಕೈತೊಳೆದು ಮುಖ ನೋಡಿ ಕನ್ನಡಿಯಲ್ಲಿ ಯಾವುದೋ ಅಜ್ಞಾತ ಹಲ್ಲಿಯನ್ನು ಕಂಡ ತೇಜಸ್ವಿ ಅದರ ಜಾಡನ್ನು ಹಿಡಿದು ಈ ದೇಹವನ್ನು ಇಲ್ಲೇ ಬಿಟ್ಟು ಹೊರಟು ಹೋಗಿದ್ದಾರೆ. ಬಹುಶಃ ಮರಳಿಬರುವುದಿಲ್ಲ. ಅವರ ಮಾಯಾಲೋಕದ ಮುಂದಿನ ಅಷ್ಟೂ ಭಾಗಗಳು ಬಹುಶಃ ಅಲ್ಲೇ ಪ್ರಕಟಗೊಂಡು ಮರು ಮುದ್ರಣಗೊಂಡು ಅಲ್ಲೇ ಶಾಲೆಗೆ ಹೋಗುವ ಹುಡುಗರಿಗೆ ಪಾಠ ಪುಸ್ತಕಗಳಾಗಿ ಅಲ್ಲಿನ ವಿಮರ್ಶಕರ ಕಠಿಣ ಹಲ್ಲುಗಳ ನಡುವೆ ಮೀನಿನ ಮುಳ್ಳುಗಳ ಹಾಗೆ ಸಿಲುಕಿಕೊಂಡು ಅದನ್ನು ಅವರು ತೆಗೆಯಲೂ ಆಗದೆ ಜಗಿಯಲೂ ಆಗದೆ ಯಾವ ಪರಿಭಾಷೆಗಳಿಂದ ಅದನ್ನು ನಿರ್ವಹಿಸುವುದು ಎಂಬ ಅರಿವಾಗದೆ ಅವರೆಲ್ಲರೂ ಅಲ್ಲಿ ಒಂದು ದೊಡ್ಡ ಹಾಹಾಕಾರದಲ್ಲಿ ಸಿಲುಕಿಕೊಂಡು ಬಿಡಲಿದ್ದಾರೆ. (more…)

Sunday April 8, 2007

ರೈನರ್ ಮರಿಯಾ ರಿಲ್ಕ್ ನ ಇನ್ನೊಂದು ಕವಿತೆ..

Filed under: ಅನುವಾದಗಳು — Rasheed @ 6:40 pm

 ಒಂಟಿ

kukkanakere2.jpg

ಎಲ್ಲವೂ ದೂರ
ಎಲ್ಲೋ ಹೋದಂತಿದೆ.
ಮೇಲೆ ಹೊಳೆಯುವ ತಾರೆ
ಕೋಟಿ ವರ್ಷಗಳಿಂದ
ತೀರಿಹೋದಂತಿದೆ.
ಈಗ ಹಾದು ಹೋದ ಬಂಡಿಯಲ್ಲಿ
ಕಣ್ಣೀರು ಕಂಡಂತೆ ಏನೋಕೆಟ್ಟದ್ದು
ಅಂದಂತೆ ಅನಿಸುತ್ತಿದೆ.
ಬೀದಿಯ ಆಚೆ ಬದಿ ಆಮನೆಯಲ್ಲಿ
ಗಡಿಯಾರ ಹೊಡೆಯುವುದು ನಿಂತು…
ಅದು ಚಲಿಸಿದ್ದು ಯಾವತ್ತು..?
ಅನಿಸುತ್ತಿದೆ ಎದೆಯೊಳಗಿಂದ ಎದ್ದು ಹೊರಟು ನಿಂತು
ಆ ದೊಡ್ಡ ಆಗಸದ ಅಡಿಯಲ್ಲಿ ನಡೆಯಲು,
ಅನಿಸುತ್ತಿದೆ ಪ್ರಾರ್ಥಿಸಲು.
ನಿಜವಾಗಲೂ ಗತಿಸಿಹೋದ ಎಲ್ಲ ತಾರೆಗಳ ನಡುವೆ
ಬಹಳ ಹಿಂದಿನದೊಂದು
ಇನ್ನೂ ಉಳಿದಿದೆ ಅನಿಸುತ್ತಿದೆ.
ಅದು ಯಾವುದದು
ನನಗೆ ಗೊತ್ತಿರುವಂತೆ
ಯಾವುದದು- ತನ್ನ ಕಿರಣದ ಕೊನೆಯಲ್ಲಿ
ಆಕಾಶದಲ್ಲಿ
ಒಂದು ಬಿಳಿಯ ಪಟ್ಟಣದಂತೆ
ನಿಂತಿರುವುದು.. .. ..

Saturday April 7, 2007

ಲಂಕೇಶರ ಮೇಲಿನ ವಿಳಾಸಕ್ಕೆ ಬರೆದ ಒಂದು ಹಳೆಯ ಪತ್ರ

Filed under: ತೇಜಸ್ವಿ — Rasheed @ 8:27 am

[ತೇಜಸ್ವಿಯವರಿಲ್ಲದ ಸಂದರ್ಭದಲ್ಲಿ]

swarga.jpg

ಪ್ರಿಯ ಲಂಕೇಶರಿಗೆ ,

ಮೇಲೆ ಆ ನರಕದ೦ತಹ ಸ್ವರ್ಗದಲ್ಲಿ ನೀವು ಹೇಗೆ ಚಡಪಡಿಸುತ್ತಿರಬಹುದು ಎ೦ದು ಕತ್ತಲಲ್ಲಿ ಒಮ್ಮೆ ಗಹಗಹಿಸಿ ನಕ್ಕೆ . ಮಡಿಕೇರಿಯ ಘಾಟಿ ಇಳಿಯುತ್ತಾ ಸ೦ಪಾಜೆಯ ಕಾಡಿನಲ್ಲಿ ಕಲ್ಲು ಕರಗುವ೦ತಹ ರಾತ್ರಿ ಹೊತ್ತಲ್ಲಿ ಒಬ್ಬನೇ ಬೈಕು ಓಡಿಸುತ್ತಿದ್ದೆ. ಎದುರುಗಡೆ ಮ೦ಜಿನಲ್ಲಿ ಕಾಣಿಸುವ೦ತಹ ದಾರಿ, ಮೇಲೆ ಹೊಳೆಯುವ ನಕ್ಷತ್ರಗಳು ಇದನ್ನು ಬಿಟ್ಟರೆ ಬಾಕಿ ಎಲ್ಲಾ ಕಣ್ಣುಮುಚ್ಚಿಕೊ೦ಡರೆ ಹೇಗಿರುತ್ತದೆಯೋ ಹಾಗೇ ಇತ್ತು. ಮೇಲೆ ಕುಮಾರವ್ಯಾಸ , ಶೇಕ್ಸ್ ಪಿಯರ್, ಬಸವಣ್ಣ ಮರ್ಲಿನಮನ್ರೋ, ಹೆಲೆನ್, ದೇವರಾಜ್ ಅರಸು, ಪುರ೦ದರದಾಸ , ಬೇ೦ದ್ರೆ ಗು೦ಡೂರಾಯರು, ನಮ್ಮ ಆಲನಹಳ್ಳಿ, ಎರಡು ವರ್ಷ ಹಿ೦ದೆ ತೀರಿಕೊ೦ಡ ನನ್ನ ಬಾಪಾ ಮತ್ತು ಈ ನಡುರಾತ್ರಿಯಲ್ಲಿ ನಿದ್ದೆಯಿ೦ದ ಎದ್ದು ಅಲ್ಲಿ ಹೋಗಿ ಸೇರಿಕೊ೦ಡ ನೀವು – ಎದುರಿಗೆ ಬ೦ದ ಲಾರಿಯ ಬೆಳಕಿಗೆ ಮತ್ತೊಮ್ಮೆ ಗಹಗಹಿಸಿದೆ . ಯಾಕೋ ಅಳು ಬರುತ್ತಿತ್ತು. ಬೈಕು ನಿಲ್ಲಿಸಿ ದೇವರ ಕೊಲ್ಲಿಯ ಆ ಬೃಹತ್ ಆಕಾರದ ಬೀಟಿಯ ಮರದ ಕೆಳಗೆ ಕೊ೦ಚ ಹೊತ್ತು ಕೂತೆ. (more…)

Friday April 6, 2007

ಯಾಕಳುವೆ ಮಗು ತೇಜಸ್ವಿ…

Filed under: ತೇಜಸ್ವಿ — Rasheed @ 11:37 am

kukkanakere4.jpg

ತೇಜಸ್ವಿಯವರಿಲ್ಲದ ಮೊದಲ ದಿನ ಈವತ್ತು..

‘ಯಾಕಳುವೆ ಮಗು ತೇಜಸ್ವಿ..’ಎಂದು ಕುವೆಂಪು ಬರೆದಿದ್ದರು

‘ನೀನು ಎರಡು ವರ್ಷದ ಮಗು ನಾನು ಎರಡು ವರ್ಷದ ತಂದೆ’ ಎಂದಿದ್ದರು.

ತೇಜಸ್ವಿಯವರಿಲ್ಲದ ಮೊದಲ ದಿನ ಈವತ್ತು

ಏನು ಬರೆಯುವುದು ಏನು ಚಿತ್ರ ತೆಗೆಯುವುದು ಏನು ಚಿಂತಿಸುವುದು

ಎಲ್ಲವೂ ಮಣ್ಣಲ್ಲಿ ಮಣ್ಣಾಗಿ ಬಿಡುವುದು.

ಕುರಿತು ಬರೆದ ಮರ , ಕುರಿತು ಬರೆದ ಮಲೆ- ಸರೋವರ,

ಮಾತು ಕೇಳಿ ನಕ್ಕು ಹೋದ ಜನ. ಬೈಸಿಕೊಂಡು ಕುಗ್ಗಿ ಹೋದ ಸಜ್ಜನ,

ಕಾಜಾಣ, ಕವಿಶೈಲ,- ಯಾವುದೂ ಉಳಿಯಬಿಡುವುದಿಲ್ಲ.

ತೇಜಸ್ವಿ, ನೀವಿಲ್ಲದ ಮೊದಲ ದಿನ – ಕೈ ಆಡುತ್ತಿಲ್ಲ.ಬಾಯಿ ಬರುತ್ತಿಲ್ಲ

 

Thursday April 5, 2007

ಪೂರ್ಣ ಚಂದ್ರ ತೇಜಸ್ವಿ ತೀರಿಕೊಂಡರು

Filed under: Uncategorized — Rasheed @ 9:34 am

purnachandratejaswi1.jpg

 

 

 

ಮೊನ್ನೆ ತಾನೇ ತೇಜಸ್ವಿಯವರ ಪತ್ನಿ ಆರ್. ರಾಜೇಶ್ವರಿ ಮೈಸೂರು ಆಕಾಶವಾಣಿಯಲ್ಲಿ ಮಾತನಾಡಿದ್ದರು. ತೇಜಸ್ವಿ ಎಷ್ಟು ಸುಂದರವಾಗಿ ಮಟನ್ ಪಲಾವ್ ಮಾಡುತ್ತಾರೆ ಎಂದು ಗಂಡನ ಎದುರೇ ಕೊಂಡಾಡಿದ್ದರು. ತೇಜಸ್ವಿ ಹಿನ್ನೆಲೆಯಲ್ಲಿ ನಾಚಿಕೊಂಡು ಕೇಳಿಸಿಕೊಳ್ಳುತ್ತಿದ್ದರು. ಈವತ್ತು ಅವರು ಇಲ್ಲ. ಕಾಲ ನಿಜಕ್ಕೂ ತುಂಬಾ ಕೆಟ್ಟ ಕಟುಕ.

ನಮ್ಮ ಪ್ರೀತಿಯ ಲೇಖಕನನ್ನು ಕಿತ್ತುಕೊಂಡ ಆತನಿಗೆ ಧಿಕ್ಕಾರ.

[ಚಿತ್ರ ಕೃಪೆ: ಕರ್ನಾಟಕ ಫೋಟೋ ನ್ಯೂಸ್]

 

 

 

Wednesday April 4, 2007

ನಿನ್ನ ಕೆನ್ನೆಗಳನ್ನು…

Filed under: ಅನುವಾದಗಳು, ರೂಮಿ — Rasheed @ 2:53 pm

ಮೌಲಾನಾ ಜಲಾಲುದ್ದೀನ್ ರೂಮಿಯವರ ಇನ್ನೊಂದು ಕವಿತೆ

rumi.jpg
ನಿನ್ನ ಮೃದು ಕೆನ್ನೆಯನ್ನ ಒಂದರೆಗಳಿಗೆ
ಈ ಕುಡುಕನ ಕೆನ್ನೆಗೆ ಒತ್ತು
ನನ್ನೊಳಗಿನದೇ ನನ್ನ ಕಾದಾಟ ಕಾಠಿಣ್ಯ ಮರೆತು ಬಿಡಲು.
ಈ ಬೆಳ್ಳಿನಾಣ್ಯಗಳನ್ನ ಚಾಚಿ ಹಿಡಿದಿರುವೆ
ಹೊನ್ನ ಬೆಳಕಿನ ಮಧುವ ಸುರಿದು ಬಿಡು ಅದಕೆ.
ಸ್ವರ್ಗದ ಏಳೂ ಬಾಗಿಲುಗಳ ತೆರೆದಿರುವೆ ನೀನು.
ಕೈಯನ್ನ ನನ್ನ ಬಿಗಿದ ಎದೆಯ ಮೇಲೆ ತಾ.
ಕೊಡುವುದೇನಿದ್ದರೂ ನಿನಗೆ ನಾನು ಈ ಭ್ರಮೆ.ಅದೇ ನಾನು!
ಒಂದು ಹೆಸರನ್ನಾದರೂ ಇಡು, ಅದಾದರೂ ಆಗಲಿ ನಿಜ.
ನೀ ಮಾತ್ರ ಸರಿ ಜೋಡಿಸಬಲ್ಲೆ ನೀನೇ ಮುರಿದದ್ದ
ನನ್ನ ಕುಸಿದಿರುವ ಮಿದುಳ.
ನಾನು ಬೇಡುತ್ತಿರುವುದು ಮಿಠಾಯಿಯನ್ನಲ್ಲ
ನಿನ್ನ ಕೊನೆಯಿರದ ಒಲವನ್ನ
ಎಷ್ಟೊಂದು ಸಲ ಅರುಹುತ್ತಿರುವೆ
ನಿಲ್ಲಿಸು ಭೇಟೆಯಾಡುವುದ, ಕಾಲಿಡು ಈ ಬಲೆಯೊಳಗೆ.

Monday April 2, 2007

ಮನಸ್ಸಿನಲ್ಲೇ ಮಹಾದೇವ

Filed under: ಮೈಸೂರಿನಿಂದ ಅಂಕಣ — Rasheed @ 6:16 pm

 

mahadeva.jpg

[photo:Nethraraju]

ನ್ನಡನಾಡಿನ ಎಲ್ಲೋ ಒಂದುಕಡೆ ಒಂದು ಕಲ್ಲಿನ ದೇವಾಯವಿದೆಯಂತೆ. ಆ ದೇವಾಲಯದ ಯಾವ ಕಲ್ಲನ್ನು ಮೊಟಕಿದರೂ ಅದರಿಂದ ಸಂಗೀತ ಹೊರಹೊಮ್ಮವುದಂತೆ. ಅದೇ ರೀತಿ ಮೈಸೂರಿನ ಹಳೆಯ ಕಾಲದ ಯಾರನ್ನು ಮಾತನಾಡಿಸಿದರೂ ಅವರಿಂದ ಮಹಾರಾಜರ ಕಥೆಗಳೇ ಹೊರ ಬರುವುದಂತೆ. ಇನ್ನೂ ಸ್ವಲ್ಪ ಕಡಿಮೆ ಹಳಬರನ್ನು ಮಾತನಾಡಿಸಿದರೆ ಅವರಿಂದ ಕುವೆಂಪು ಅವರ ಹೆಸರೇ ಬರುವುದಂತೆ.

`ಇವರಿಬ್ಬರ ಗುಂಗಿನಿಂದ ಹೊರಬಂದು ಬರೆಯುವುದೆಂದರೆ ಮೈಸೂರಿನಲ್ಲಿ ಹರಸಾಹಸದ ಕೆಲಸವೇ ಸರಿ. ಹಾಗಾಗಿ ನೀನು ಯಾಕೆ ಸ್ವಲ್ಪ ನಮ್ಮ ದೇವನೂರು ಮಹಾದೇವರನ್ನು ಮಾತನಾಡಿಸಿ ಬರೆಯಬಾರದು ಎಂದು ಗೆಳೆಯರೊಬ್ಬರು ಕೊಂಚ ಕಳಕಳಿಯಿಂದಲೇ ನನಗೊಂದು ಉಚಿತ ಐಡಿಯಾ ಕೊಟ್ಟಿದ್ದರು. (more…)

Blog at WordPress.com.