The Mysore Post

Thursday March 29, 2007

ನನ್ನ ಒಳ್ಳೆಯತನ ಮತ್ತು ನಿನ್ನ ಚಂದ

Filed under: ಮೋಹಿತನ ಕವಿತೆಗಳು — Rasheed @ 7:02 pm

  

ನನ್ನ ಒಳ್ಳೆಯತನ ಮತ್ತು ನಿನ್ನ ಚಂದ

ನಿನ್ನ ಸಂಗೀತ ನನ್ನ ಕವಿತೆ

ಇದೆಲ್ಲ ಎಷ್ಟೊಂದು ಸುಳ್ಳು!

ನನ್ನ ನಾಸಿಕ ನಿನ್ನ ಕಾಲ ಬೆರಳನ್ನು ಘ್ರಾಣಿಸುತ್ತಿರುವುದು

ಎಷ್ಟು ಹೊತ್ತಿಂದ ಎಂಬುದನ್ನೂ ಮರೆತಿರುವುದು!

 

Tuesday March 27, 2007

ಪ್ರೊಪೆಸರ್ ಕರೀಮುದ್ದೀನ್ ಸಾಹೇಬರು

Filed under: ಮೈಸೂರಿನಿಂದ ಅಂಕಣ — Rasheed @ 9:37 am

kareemuddeen-1.JPG

‘ಹಿಂದೂಸ್ತಾನದ ರಾಜಮಹಾರಾಜರುಗಳು ಅದು ಹೇಗೆ ಅಷ್ಟು ಸುಲಭದಲ್ಲಿ ಬ್ರಿಟಿಷ್ ದೊರೆಗಳ ಕೈಯಲ್ಲಿ ಸೋತುಹೋದರು ಗೊತ್ತಾ?..’

ಪ್ರೊಪೆಸರ್ ಕರಿಮುದ್ದೀನ್ ಸಾಹೇಬರು ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಟಿಪ್ಪುಸುಲ್ತಾನ್ ಹೈದರಾಲಿಗಳ ಸಮಾದಿಯ ಮುಂದಿರುವ ಸುಂದರ ಉದ್ಯಾನವನದಲ್ಲಿ ನಡೆಯುತ್ತ ನಡುವೆ ಹಿಂತಿರುಗಿ ನನ್ನತ್ತ ನೋಡಿ ಪುಟ್ಟ ಬಾಲಕನಂತೆ ನಕ್ಕರು.
ನಾನು ಗೊತ್ತಿಲ್ಲವೆಂಬಂತೆ ಅವರತ್ತ ನೋಡಿದೆ.

‘ಎಲ್ಲಾ ಈ ಆನೆಗಳ ದೆಸೆಯಿಂದ. ಈ ರಾಜಮಹಾರಾಜರುಗಳಿಗೆ ಯಾವಾಗಲೂ ಆನೆಗಳ ಮೇಲೆಯೇ ಸವಾರಿ ಹೋಗಬೇಕು. ಆನೆಗಳ ಬಿಟ್ಟು ಕೆಳಗಿಳಿಯಬಾರದು. ಅರಮನೆಗೆ ಹೋಗುವಾಗಲೂ ಆನೆ. ಮಸೀದಿಗೆ ಹೋಗುವಾಗಲೂ ಆನೆ. ಕೋಟೆಯನ್ನು ಪ್ರವೇಶಿಸುವಾಗಲೂ ಆನೆ. ಇವರು ಆನೆಯ ಮೇಲೆ ರಾಜಗಾಂಭೀರ್ಯದಲ್ಲಿ ನಿಧಾನವಾಗಿ ಚಲಿಸುವಾಗ ಬ್ರಿಟಿಷರು ಕುದುರೆಗಳ ಮೇಲೆ ವೇಗವಾಗಿ ಬಂದು ಸಾಮ್ರಾಜ್ಯಗಳನ್ನು ವಶಪಡಿಸಿಕೊಂಡರು. ಹೋಗಲಿ ಈ ರಾಜರುಗಳು ಕೋಟೆಗಳ ಬಾಗಿಲುಗಳನ್ನಾದರೂ ಸಣ್ಣದಾಗಿ ನಿರ್ಮಿಸಬಾರದಾ? ಆನೆಗಳು ಹೋಗಿಬರಲು ಅವುಗಳನ್ನೂ ಅಗಲವಾಗಿ ಮಾಡಿದರು. ಬ್ರಿಟಿಷ್ರಿಗೆ ಇನ್ನೇನು ಬೇಕು – ಎಲ್ಲವನ್ನು ವೇಗವಾಗಿ ನುಂಗಿ ನೀರು ಕುಡಿದರು’ (more…)

Sunday March 25, 2007

ಮಾರ್ಕ್ವೆಜ್ ಬದುಕಿ ಉಳಿಯಲಿ ದೇವರೇ…

Filed under: ಪ್ರಬಂಧ — Rasheed @ 4:10 pm

having a drink

ಗಲೂ ಬರೆಯಲಿಕ್ಕಾಗಿಯೇ ಬದುಕಿರುವ ಈ ಶತಮಾನದ ಅದ್ಭುತ ಕಥೆಗಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್.ಇನ್ನೂ ಉಳಿದಿರುವ ಕಥೆಗಳನ್ನು ಹೇಳಿ ಮುಗಿಸಲಿಕ್ಕಾಗಿಯೇ ಬದುಕಿ ಉಳಿದಿದ್ದಾನೆ. ಆತನ ಆತ್ಮ ಚರಿತ್ರೆಯ ಉಳಿದಿರುವ ಎರಡು ಸಂಪುಟಗಳನ್ನು ಬರೆದ ನಂತರವೂ ಆತ ಬದುಕಿರಲಿ ಎಂದು ನಾನೂ ಪ್ರಾರ್ಥಿಸುತ್ತಿದ್ದೇನೆ. (more…)

Monday March 19, 2007

ಕೊಡಗಿನ ಅರಸರ ಹಿಟ್ಟಿನ ಅರಮನೆ

Filed under: ಮೈಸೂರಿನಿಂದ ಅಂಕಣ — Rasheed @ 2:04 pm

ಕೊಡಗಿನ ಅರಸರ ದಾಖಲೆಗಳು

“ನಾವು ರಾಜಮನೆತನದವರು ಎಂದು ಗೊತ್ತಾಗುವ ಮೊದಲು ಹಿಟ್ಟು ಬೀಸುತ್ತಾ ಹಿಟ್ಟು ಮಾರುತ್ತಾ ಒಟ್ಟಿನಲ್ಲಿ ಅಜ್ಞಾತವಾಸದಲ್ಲಿದ್ದ ಪಾಂಡವರ ಹಾಗೆ ಕಾಲತಳ್ಳುತ್ತಿದ್ದೆವು” ಎಂದು ಕೊಡಗು ಸಿಂಹಾಸನಾಧೀಶ್ವರ ಹಾಲೇರಿ ದೊಡ್ಡವೀರರಾಜ ಒಡೆಯರ್ ರವರ ಮಗಳು ದೇವಮ್ಮಾಜಿ ಹಾಗೂ ಅಳಿಯ ಪಟೇಲಮಲ್ಲಪ್ಪನವರ ಮರಿಮಗನಾದ ಹಾಲೇರಿ ಸಿ. ನಾಗರಾಜು ಒಡೆಯರ್ ಅವರು ಮೈಸೂರಿನ ಶಿವರಾಂ ಪೇಟೆಯಲ್ಲಿರುವ ತಮ್ಮ ಸದಾನಂದ ಹಿಟ್ಟಿನ ಅಂಗಡಿಯ ಒಳಕೋಣೆಯೊಂದರಲ್ಲಿ ಕುಳಿತು ವಿವರಿಸುತ್ತಿದ್ದರು. (more…)

Wednesday March 14, 2007

ಅಂತ್ಯಸಂಸ್ಕಾರ ಮತ್ತು ಭೂಮಿ ವ್ಯವಹಾರ

Filed under: ಪ್ರಬಂಧ — Rasheed @ 2:11 pm

ನ್ನ ಪ್ರೀತಿಯ ಆಮಿತಾತ ಎಂಬ ಅಜ್ಜಿ ತೀರಿಹೋದರು ಎಂದು ನಿರ್ವಿಕಾರವಾಗಿ ಆಕೆಗೆ ಹೇಳಿ ಆಕೆಂದ ಅನುಕಂಪಭರಿತ ಸಾಂತ್ವನದ ಮಾತುಗಳನ್ನು ನಿರೀಕ್ಷಿಸುತ್ತಿದ್ದೆ. ಆದರೆ ಆಕೆಯೂ ಅಷ್ಟೇ ನಿರ್ವಿಕಾರವಾಗಿ ‘you lost your character’ ಅಂದಳು. ನನ್ನನ್ನು ಬಹಳ ಬಲ್ಲವಳಾಗಿದ್ದರಿಂದ ಸುಮ್ಮಗಾದೆ. ನಿನ್ನ ಪಾತ್ರಗಳು ನಿನಗೆ ಆನೆ ಇದ್ದಂತೆ. ಬದುಕಿರುವಾಗಲೂ ತೀರಿಹೋದಮೇಲೂ ನಿನಗೆ ಅವುಗಳು ಅಷ್ಟೇ ಬೆಲೆ ಬಾಳುತ್ತದೆ ಎನ್ನುವುದು ಅವಳ ಮಾತಿನ ಮರ್ಮವಾಗಿತ್ತು.

ಅವಳ ಮಾತುಗಳು ಯಾವಾಗಲೂ ಹೀಗೆಯೇ.ಮರ್ಮಕ್ಕೆ ತಾಗುವ ಹಾಗೇ ಮಾತನಾಡುತ್ತಾಳೆ.ಅವಳ ಮಾತು ನೂರಕ್ಕೆ ನೂರು ಸತ್ಯದ ಹಾಗೆ ಇರುತ್ತದೆ.ನಾನು ಬರೆದದ್ದನ್ನ ಕೆಲವೊಮ್ಮೆ ಓದಿ bull shit ಅನ್ನುತ್ತಾಳೆ. ಅಂದರೆ ಸಗಣಿ ಅಂತ ಅರ್ಥ. (more…)

Tuesday March 13, 2007

ವೈ. ಜಯಮ್ಮ ಮತ್ತು ಕಡಲ ಚಿಪ್ಪುಗಳು

Filed under: ಮೈಸೂರಿನಿಂದ ಅಂಕಣ — Rasheed @ 1:40 pm

ವೈ ಜಯಮ್ಮ

ಮೈಸೂರಿನ ಕೃಷ್ಣರಾಜ ಆಸ್ಪತ್ರೆಯಿಂದ ಇರ್ವಿನ್‌ ರಸ್ತೆ ನೆಹರೂ ವೃತ್ತ ವನ್ನು ಸೇರುವ ಮೊದಲು ಎಡಬದಿಯಲ್ಲಿ ರಸ್ತೆಗೆ ತಾಗಿಕೊಂಡಂತಿರುವ ಹಳೆಯ ಶೈಲಿಯ ಈ ಕಟ್ಟಡ ಎಂತಹ ದಾರಿಹೋಕನನ್ನು ಒಮ್ಮೆ ತಿರುಗಿ ನೋಡುವಂತೆ ಮಾಡುತ್ತದೆ. ನೂರಾರು ವರ್ಷಗಳ ಹಿಂದೆ ಕಟ್ಟಿದಾಗ ಹೇಗೆ ಇತ್ತೋ ಇನ್ನೂ ಹಾಗೇ ಇರುವ ಈ ಕಟ್ಟಡದ ಮೇಲುಪ್ಪರಿಗೆಯಲ್ಲಿ ವಿಜಯ ಶಂಖಶುಕ್ತಿ ಕಲಾಕೇಂದ್ರ ಎನ್ನುವ ಹಳೆಯ ನಾಮಫಲಕವೊಂದು ಬಹಳ ವರ್ಷಗಳಿಂದ ತೂಗಾಡುತ್ತಿದೆ.ಕೊಂಚ ಅಸಹಜವಾಗಿ ಇದೆಯಲ್ಲ ಎಂದುಕೊಂಡು ಯಾವಾಗಲೂ ವಾರೆಯಾಗಿ ತೆರೆದುಕೊಂಡಿರುವ ಈ ಕಟ್ಟಡದ ಕೆಳ ಅಂತಸ್ತಿನ ಮರದ ಬಾಗಿಲನ್ನು ದೂಡಿಕೊಂಡು ಒಳಹೊಕ್ಕರೆ ಮೊದಲಿಗೆ ಒಳಗೆಲ್ಲ ಬಲು ಕತ್ತಲೆ ಅನಿಸುತ್ತದೆ. ಕಣ್ಣುಗಳನ್ನು ಆ ಕತ್ತಲೆಗೆ ಒಗ್ಗಿಸಿಕೊಂಡು ಕೊಂಚ ಹೊತ್ತು ನಿಂತುಕೊಂಡರೆ ನಿಧಾನವಾಗಿ ಬೆಳಕು ತುಂಬಿಕೊಳ್ಳಲು ತೊಡಗುತ್ತದೆ. ಆ ಬೆಳಕಿನಲ್ಲಿ ಹಾಗೇ ನಿಂತುಕೊಂಡರೆ ರಸ್ತೆಯ ಧೂಳು, ವಾಹನಗಳ ಸದ್ದು, ನಿಧಾನಕ್ಕೆ ಅಡಗಿಕೊಂಡು ವಿಜಯ ಶಂಖಶುಕ್ತಿ ಕಲಾಕೇಂದ್ರದ ಒಡತಿ ವೈ. ಜಯಮ್ಮ (ಎಂ.ಎ., ಬಿ.ಎಡ್‌.) ಅವರು ಕಡಲಚಿಪ್ಪುಗಳಿಂದ ರೂಪಿಸಿರುವ ನೂರಾರು ಕಲಾಕೃತಿಗಳು ನಿಮ್ಮನ್ನು ಕಣ್ಣುಬಿಟ್ಟುಕೊಂಡು ನೋಡಲು ಶುರು ಮಾಡುತ್ತವೆ. ನಾನಾ ಪುರಾಣ ಪ್ರಸಂಗಗಳನ್ನು ಅಭಿನಯಿಸಿ ತೋರುವ ಈ ಕಲಾಕೃತಿಗಳು ಗಾಜು ಜೋಡಿಸಿದ ಬೀಟೆಮರಗಳ ನುಣ್ಣನೆಯ ಪೆಟ್ಟಿಗೆ ಯೊಳಗೆ ಕೂಡುಹಾಕಲ್ಪಟ್ಟಿವೆ. (more…)

Monday March 12, 2007

ಹೆಂಡದಂಗಡಿಯಿಂದ

Filed under: ಅನುವಾದಗಳು, ರೂಮಿ — Rasheed @ 4:23 pm

rumi1.jpg

ಹಗಲೆಲ್ಲ ಯೋಚಿಸುವೆ.ಇರುಳು ಅದನೇ ಹೇಳುವೆ.
ಎಲ್ಲಿಂದ ಬಂದೆ ನಾನೇನು ಮಾಡುತಿರುವೆ ಒಂದೂ ಅರಿಯೆ.
ನನ್ನ ರೂಹು ಬೇರೆ ಎಲ್ಲಿನದೋ, ಅದು ಗೊತ್ತು ನಿಜ
ಮತ್ತೆ ಅಲ್ಲಿಗೇ ಹೋಗಿ ಸೇರುವೆನು.
ಈ ಕುಡುಕುತನ ಬೇರೊಂದು ಹೆಂಡದಂಗಡಿಯಿಂದ ತೊಡಗಿದ್ದು
ಹಿಂತಿರುಗಿ ತಲುಪಿದಾಗ ಅಲ್ಲಿ
ಸುಮ್ಮಗಾಗುವೆನು ಪೂರಾ..
ಅದುವರೆಗೆ ಈ ಗೆಲ್ಲ ಮೇಲೆ ಹಕ್ಕಿ ನಾನು ಬೇರೊಂದು ಭೂಖಂಡದಿಂದ. (more…)

Friday March 9, 2007

ಪ್ರಿಯ ಲಂಕೇಶರ ಹುಟ್ಟು ಹಬ್ಬಕ್ಕೆ ಒಂದು ಕವಿತೆ

Filed under: ಹಾಡು-ಪಾಡು — Rasheed @ 3:02 pm

lankesh1.jpg

ನಾವು ಎಲ್ಲರೂ
ನೀವು ಇದ್ದಿದ್ದರೆ
ಈ ಎಲ್ಲದರ ಕುರಿತು
ಏನು ತೀರ್ಮಾನ ತೆಗೆದುಕೊಳ್ಳುತ್ತಿದ್ದಿರಿ ಎಂದು
ಯೋಚಿಸುತ್ತಾ ಕುಳಿತಿರುವೆವು.
ಹೀಗೆ ನೀವು ಸಾರ್ವಜನಿಕ ತೀರ್ಮಾನಗಳನ್ನು
ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ಬಹುಶಃ
ನಮಗೆ ಗೊತ್ತಿಲ್ಲ ಎನ್ನುವುದೂ ಒಂದು
ಚರ್ಚೆಯ ವಿಷಯವಾಗಿರುವುದು. (more…)

Monday March 5, 2007

ನೋಡು ಬಾ ಚಂದಿರ…

Filed under: ಮೈಸೂರಿನಿಂದ ಅಂಕಣ — Rasheed @ 12:52 pm

durani-sisters-2.jpg

ಇಂತಹದೇ ಒಂದುಸಂಜೆ ಸರಿಸುಮಾರು ನಾಲ್ಕು ವರ್ಷಗಳ ಹಿಂದೆ ಇವರನ್ನು ಕಾಣಲೆಂದು ನಾನು ಹೋಗಿದ್ದಾಗ ಹುಟ್ಟಿನಿಂದಲೇ ಅಂಧರಾಗಿರುವ ಈ ನಾಲಕ್ಕು ಮಂದಿ ಪಠಾಣ್‌ ಸಹೋದರಿಯರು ಇನ್ನು ಮುಂದೆ ಹಾಡು ಹೇಳುವು ದಿಲ್ಲ ಎಂದು ತೀರ್ಮಾನಿಸಿಕೊಂಡು ವ್ಯಗ್ರರಾಗಿ ಕೂತಿದ್ದರು. ಎಲ್ಲವನ್ನೂ ಕಾಣುವವರೂ ಅರಿಯುವವರೂ ಆದ ಬೆಳ್ಳಗಿನ ನಾಲ್ಕು ಆತ್ಮಗಳಂತೆ ಆ ಮನೆಯೊಳಗಿನ ನಸುಗತ್ತಲಲ್ಲಿ ಸುಳಿದಾಡುತ್ತಿದ್ದ ಆ ಅಕ್ಕತಂಗಿಯರು ತಮ್ಮ ಏಕೈಕ ತಮ್ಮನ ಎರಡನೆಯ ಮಗುವನ್ನು ತೋಳಿನಿಂದ ತೋಳಿಗೆ ಬದಲಾಯಿ ಸುತ್ತಾ ಲಾಲಿಸುತ್ತಾ ಇನ್ನು ಮುಂದೆ ಯಾರು ಏನು ಹೇಳಿದರೂ ತಾವು ಮಾತ್ರ ಹಾಡುವುದಿಲ್ಲ, ಕನ್ನಡದ ಭಾವಗೀತೆಗಳನ್ನೂ ಹಾಡುವುದಿಲ್ಲ, ಉರ್ದುವಿನ ಗಜಲ್‌ಗಳನ್ನೂ ಹಾಡುವುದಿಲ್ಲ ಅದರ ಬದಲಾಗಿ ಧರ್ಮಬೀರುವೂ ಹಠಮಾರಿಯೂ ಆಗಿರುವ ತಮ್ಮ ತಮ್ಮನ ಮಾತಿನಂತೆ ಕುರಾನು ಓದುತ್ತಾ, ನಮಾಜು ಮಾಡುತ್ತಾ ಮನೆಯಲ್ಲಿ ಸುಮ್ಮನೆ ಇನ್ನು ಮುಂದೆ ಬದುಕು ಸಾಗಿಸುವುದಾಗಿ ನಗುತ್ತಾ ಹೇಳಿದ್ದರು. (more…)

Blog at WordPress.com.