ಅರವತ್ತು ವರ್ಷಗಳಿಗೂ ಹೆಚ್ಚುಕಾಲ ಅರಮನೆಯಲ್ಲಿ ಅಕ್ಕಸಾಲಿಗಳಾಗಿದ್ದ ಶಿರ್ವ ಮಂಚಕಲ್ಲಿನ ಶಾಮಾಚಾರಿಗಳು ನನ್ನ ಕನ್ನಡಕವನ್ನು ಕೇಳಿ ಪಡೆದು ತಮ್ಮ ನಿತ್ರಾಣವಾಗಿದ್ದ ಕಣ್ಣುಗಳಿಗೆ ಏರಿಸಿಕೊಂಡು ತಮ್ಮ ಬಲಗೈಯ ಹಸ್ತರೇಖೆ ಗಳನ್ನು ನೋಡಿ ಹಸ್ತರೇಖೆಗಳು ಕಾಣಿಸದೆ ಕಂಗಾಲಾಗಿ ನನ್ನ ಕನ್ನಡಕವನ್ನು ಮರಳಿ ನನಗೇ ಹಿಂದಿರುಗಿಸಿ ನಿಟ್ಟುಸಿರುಬಿಟ್ಟರು.
ನನ್ನ ಕನ್ನಡಕ ಬಿಸಿಲಿನ ಝಳಕ್ಕೆ ಹಾಕುವ ಕಪ್ಪು ಕನ್ನಡಕವೆಂದೂ ಅದರಲ್ಲಿ ಕಾಣದ ಏನೂ ಕಾಣುವುದಿಲ್ಲವೆಂದೂ ಅವರಿಗೆ ಹಸ್ತರೇಖೆಗಳನ್ನು ನೋಡಲು ಒಂದು ಭೂತ ಕನ್ನಡಕವನ್ನು ತಂದುಕೊಡುವೆನೆಂದೂ ಆದರೆ ಅದಕ್ಕೂ ಮೊದಲು ಅವರು ತಮ್ಮ ಅರವತ್ತು ವರ್ಷಗಳ ಕಾಲದ ಅರಮನೆಯ ಅಕ್ಕಸಾಲಿಗನ ಬದುಕನ್ನು ಕತೆ ಹೇಳುವಂತೆ ನನಗೆ ಹೇಳಬೇಕೆಂದೂ ನಾನು ಅವರಲ್ಲಿ ತುಳು ಭಾಷೆಯಲ್ಲಿ ಕೇಳಿಕೊಂಡೆ.
ಅದಕ್ಕೆ ಅವರು ನಗಾಡಿದರು. ಆಮೇಲೆ ಕನ್ನಡ ಭಾಷೆಯಲ್ಲಿ `ಸತ್ತವನ ತಿಕ ಅತ್ತ ತಿರುಗಿದ್ದರೇನು ಇತ್ತ ತಿರುಗಿದರೇನು? ಅದು ಎತ್ತ ಕಡೆ ತಿರುಗಿದರೂ ಸತ್ತವನಿಗೆ ಆಗಬೇಕಾದದ್ದೇನು? ಅಕ್ಕಸಾಲಿಗನೂ ಇಲ್ಲ. ಅರಮನೆಯೂ ಇಲ್ಲ. ಬದುಕಿನ ಕಥೆಯೂ ಇಲ್ಲ. ಮಹಾಭಾರತ ರಾಮಾಯಣವೂ ಇಲ್ಲ. ನೀನು ಅರಮನೆಗೆ ಬಂದ ಕೆಲಸವನ್ನು ಮುಗಿಸಿ ನಿನ್ನ ಪಾಡಿಗೆ ಸುಮ್ಮನೆ ಹೋಗು. ನನ್ನ ಜೊತೆ ಮಾತನಾಡಬೇಡ. ನನ್ನ ವಿಷಯ ಯಾರಿಗೂ ಹೇಳುವುದೂ ಬೇಡ. ಮಾನವ ಜನ್ಮವನ್ನು ಎತ್ತಿರುವ ಮೂಕಪ್ರಾಣಿಯಾದ ನನ್ನ ಪ್ರಾಚೀನ ಕರ್ಮವನ್ನು ನಾಗ ಕುಂಡಲನೇ ಪರಿಹರಿಸಬೇಕಲ್ಲದೆ ಇನ್ನು ಯಾರಿಗೂ ಏನೂ ಆಗುವುದಿಲ್ಲ. ನೀನು ಹೋಗಬಹುದು ಎಂದು ಕೈ ಮುಗಿದು ನನ್ನನ್ನು ಒತ್ತಾಯಪೂರ್ವಕವಾಗಿ ಹೊರಟು ಹೋಗುವಂತೆ ಕೇಳಿಕೊಂಡರು. (more…)
ಬಲುದೊಡ್ಡ ಇಂಜಿನಿಯರ್ ಆಗಿ ನಿವೃತ್ತಿ ಹೊಂದಿ ಈಗ ಮೈಸೂರಿನಲ್ಲಿ ಜೀವಿಸುತ್ತಿದ್ದಾರೆ. ಗುಜರಾತು, ನವದೆಹಲಿ, ಷಿಲ್ಲಾಂಗು, ಕೊಹಿಮಾ, ಲಕ್ನೋ, ತಾಂಜಾನಿಯಾ, ವಿಶ್ವಸಂಸ್ಥೆ ಹೀಗೆ ಬಹಳ ಕಡೆಗಳಲ್ಲಿ ಹೆದ್ದಾರಿ ಇಂಜಿನಿಯರ್ ಆಗಿ ಶ್ರದ್ಧೆ ಪ್ರಾಮಾಣಿಕತೆಗಳಿಂದ ಕೆಲಸ ಮಾಡಿ ಈ ಇಳಿವಯಸ್ಸಿನಲ್ಲೂ ಮೈಸೂರಿನಲ್ಲಿ ಪಾದರಸದಂತೆ ಓಡಾಡುತ್ತಾ, ಯೋಚನೆ ಮಾಡುತ್ತಾ, ಪತ್ರಿಕೆಗಳಿಗೆ ಬರೆಯುತ್ತಾ ಬಲು ಚಟುವಟಿಕೆಯಿಂದ ಇರುತ್ತಾರೆ. ಇದ್ದದ್ದನ್ನು ನೇರವಾಗಿ ಹೇಳುತ್ತಾರೆ. ಅವರು ಯಾವ ಮುಲಾಜಿಗೂ ಒಳಗಾಗುವುದಿಲ್ಲ ಎಂಬುದನ್ನು ಅವರ ತೀಕ್ಷ್ಣ ಕಣ್ಣುಗಳು ಸಾರಿ ಹೇಳುತ್ತವೆ.
‘ಗಡಿಯಾರಗಳು ಮುರಿದು ಹೋದಷ್ಟು ಮನುಷ್ಯದೊಡ್ಡ ಕಾಲಜ್ಞಾನಿಯಾಗುತ್ತಾನೆ, ಆಸ್ಟತ್ರೆಗಳಲ್ಲಿ ಮನುಷ್ಯ ಹೆಚ್ಚು ತೀರಿಹೋದಷ್ಟೂ ಮಾನವ ಶರೀರ ಶಾಸ್ತ್ರ ಬೆಳೆಯುತ್ತಾ ಹೋಗುತ್ತದಲ್ಲಾ ಹಾಗೆ’ ಎಂದು ನನಗೆ ನನ್ನ ಅಜ್ಜ ಕುಳಿತಲೈ ಸುಬ್ರಹ್ಮಣ್ಯ ಅಯ್ಯರ್ ಲಕ್ಷಣ ಅಯ್ಯರ್ ಬುದ್ದಿವಾದ ಹೇಳಿ ಗಡಿಯಾರ ರಿಪೇರಿ ಮಾಡು ಕೂರಿಸುತ್ತಿದ್ದರು ಎಂದು ಮೈಸೂರಿನ ಪೌಂಟೈನ್ ಸರ್ಕಲ್ ಹತ್ತಿರವಿರುವ ಶಿವಾಜಿ ರಸ್ತೆಯ ಹೊರಾಲಜಿಸ್ಟ್ ಎಂ. ಎಸ್. ಚಂದ್ರಶೇಖರ್ ಅಯ್ಯರ್ ಆ ಕತ್ತಲಲ್ಲಿ ಕ್ಯಾಂಡರ್ ಹಚ್ಚಿ ನನಗೆ ವಿವರಿಸಿ ಹೇಳುತ್ತಿದ್ದರು. 