
ಯಾಕೋ ಸಣ್ಣಗೆ ಚಳಿಯಾಗುತ್ತಿತ್ತು. ಹಲ್ಲುಪುಡಿ ಮಾರುವ ಪಂಡಿತಪ್ಪ ಸ್ವಾಮಿಯನ್ನು ಹುಡುಕುತ್ತಾ ಹೊರಟವನು ಬೋಟೀ ಬಜಾರಿನಲ್ಲಿ ಕುರಿ, ಕೋಳಿ, ಮೀನು, ಸಾರಾಯಿ, ಮೂಸಂಬಿ, ರಸಬಾಳೆ, ಮರಗೆಣಸು, ಮಲ್ಲಿಗೆ, ಸೇವಂತಿಗೆ ಮಾರುವ ಈ ಗಲೀಜು ರಸ್ತೆಯಲ್ಲಿ ಬೈಕು ನಿಲ್ಲಿಸಿ ಆಕಾಶ ನೋಡುತ್ತ ಕುಳಿತಿದ್ದೆ. ನೋಡಲು ಬಲು ಖುಷಿಯಾಗುತ್ತಿದ್ದ ಬೊಜ್ಜು ಬಾಯಿಯ ಶ್ಯಾಮವರ್ಣದ ಮುದುಕಿ ಎಂದಿನಂತೆ ತನ್ನ ಆಕರ್ಷಕ ನಗು ನಗುತ್ತಾ ನಡುನಡುವಿನಲ್ಲಿ ದೀನಳಾಗಿ ನೋಡುತ್ತಾ ಭಿಕ್ಷೆ ಎತ್ತುತ್ತಿದ್ದಳು.
ಕಳೆದ ವಾರ ಇಂತಹದೇ ಒಂದು ಸಂಜೆ ಸೊಗಸುಗಾರನಂತೆ ಕಾಣುತ್ತಿದ್ದ ಸಾಮಾಜಿಕ ಕಾಳಜಿ ಯನ್ನೂ ಹೊಂದಿದ್ದ ಯುವಕನೊಬ್ಬ ಹಸಿದಿದ್ದ ಈ ಮುದುಕಿಗೆ ಭಿಕ್ಷೆಯ ಬದಲು ದೊಡ್ಡದಾದ ಕೇಕ್ ತುಂಡೊಂದನ್ನು ತಿನ್ನಲು ಕೊಟ್ಟು `ಭಿಕ್ಷೆ ಬೇಡ ಬಾರದು ಅಜ್ಜೀ ಎಲ್ಲಾದರೂ ಅನಾಥಾಶ್ರಮ ಸೇರು’ ಅಂತ ಬುದ್ಧಿ ಹೇಳುತ್ತಿದ್ದ. `ಅಯ್ಯೋ ಅದೊಂದನ್ನು ಮಾತ್ರ ಹೇಳಬೇಡ ಕಂದಾ’ ಎಂದು ಅಜ್ಜೀ ಅವನಿಗೆ ಬುದ್ಧಿ ಹೇಳುತ್ತಿದ್ದಳು. ಅವಳ ಪ್ರಕಾರ ಅನಾಥಾಶ್ರಮದಲ್ಲಿ ಸತ್ತು ಹೋದರೆ ಮೃತ ದೇಹವನ್ನು ಆಸ್ಪತ್ರೆಗೆ ಎಸೆದು ಹೋಗುತ್ತಾರಂತೆ. ಆದರೆ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಾ ಸತ್ತು ಹೋದರೆ ನಾಲ್ಕು ಮಂದಿ ಒಳ್ಳೆಯವರು ಚಂದಾ ಎತ್ತಿ ಚಟ್ಟಿ ಕಟ್ಟಿ ಸ್ಮಶಾನಕ್ಕೆ ಒಯ್ದು ಸದ್ಗತಿ ಒದಗಿಸುತ್ತಾರಂತೆ. ಅವಳ ವಾದ ಸರಣಿ ಅರ್ಥವಾಗದ ಆ ಯುವಕ ಸುಮ್ಮನಾಗಿ ಸಿಗರೇಟು ಹಚ್ಚಿಕೊಳ್ಳಲು ಹೋಗಿದ್ದ. (more…)